Friday, May 2, 2008


ಕುದುರೆಮುಖ ಪ್ರವಾಸ.

ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯ ಚಾರಣಿಗನ ಕನಸು ಕುದುರೆಮುಖ ಶಿಖರಗಳು. ಹಸಿರು ಹೊನ್ನು ಕಾಲುಮುರಿದುಕೊಂಡು ಬಿದ್ದಿರುವ ಪ್ರದೇಶ. ದಟ್ಟವಾದ ಮಳೆಕಾಡು, ಪ್ರಾಣಿ ಪಕ್ಷಿಗಳು ಇಲ್ಲಿನ ಸಂಪತ್ತು. ಭದ್ರ ನದಿಯ ಉಗಮ ತಾಣ. ಸರ್ವೋಚ್ಛ ನ್ಯಾಯಾಲಯ ಪ್ರಕೃತಿ ಪ್ರೇಮಿಗಳ ಅಹವಾಲನ್ನು ಮನ್ನಿಸಿ ಇಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಮುಚ್ಚಿಸಿದೆ. ಹಾಳು ಬಿದ್ದಿರುವ ಪಟ್ಟಣ ನೋವನ್ನು ತಂದರೂ, ಪರಿಸರ ಸಮತೋಲನಕ್ಕಾಗಿ ಕಾಡು, ಪ್ರಕೃತಿ, ನದಿ ಉಗಮಸ್ಥಾನಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂಬ ಭಾವ ನೆಮ್ಮದಿಯನ್ನು ತರುತ್ತದೆ.

ನಿರಂತರ ಒತ್ತಡದ ಬದುಕಿಗೆ ಒಮ್ಮೊಮ್ಮೆಯಾದರೂ ಸ್ವಲ್ಪ ನಿರಾಳತೆ, ನೆಮ್ಮದಿಯನ್ನು ತರುವ ಪ್ರವಾಸಗಳೆಂದರೆ ನನಗೆ ಅಚ್ಚುಮೆಚ್ಚು. ಬಹುಶಃ ಬೆಂಗಳೂರಿನ ಎಲ್ಲ ರೀತಿಯ ಮಾಲಿನ್ಯದಿಂದ ದೂರ ಹೋಗುವುದು ಇದಕ್ಕೆ ಕಾರಣವಿರಬಹುದು. 2007ರ ಡಿಸೆಂಬರ್ ೨೨ ರಿಂದ ಮಗನಿಗೆ ಇರುವ ರಜವನ್ನು ಉಪಯೋಗಿಸಿಕೊಂಡು ಪ್ರವಾಸ ಹೊರಡಬೇಕೆಂದು ನಿರ್ಧರಿಸಿಯಾಗಿತ್ತು. ಯಾವ ಜಾಗಕ್ಕೆ ಹೋಗಬೇಕೆನ್ನುವ ದ್ವಂದ್ವ ಇನ್ನೂ ಕಾಡುತ್ತಿತ್ತು.

ಆನೆಝರಿ, ಮುತ್ತೋಡಿ, ಹೊನ್ನೆಮರಡು ಮತ್ತು ಕುದುರೆಮುಖ ಅರಣ್ಯ ಪ್ರದೇಶಗಳು ನನಗಿದ್ದ ಆಯ್ಕೆಗಳು. ಆನೆಝರಿ ಅತಿಹೆಚ್ಚು ದೂರ(ಸುಮಾರು ೪೫೦ ಕಿ.ಮೀ) ೨ ದಿನಕ್ಕಾಗಿ ಇಷ್ಟು ದೂರ ಕಾರನ್ನು ಓಡಿಸುವುದು ಸೂಕ್ತವಲ್ಲ, ಮುತ್ತೋಡಿ ಯಥಾಪ್ರಕಾರ ವಸತಿ ಸಮಸ್ಯೆ, ಹೊನ್ನೆಮರಡು ಯಾಕೋ ಮನಸ್ಸಾಗಲಿಲ್ಲ. ಸರಿ ಉಳಿದ ಆಯ್ಕೆ ಮತ್ತು ನನ್ನ ಬಹುದಿನದ ಆಸೆಯಂತೆ ಕುದುರೆಮುಖದಲ್ಲಿ ವಸತಿಗಾಗಿ ಹುಡುಕುತ್ತಿದ್ದಾಗ ಸಿಕ್ಕದ್ದು ಭಗವತಿ. ಕಾರ್ಕಳ ಅರಣ್ಯ ಇಲಾಖೆಗೆ ಪತ್ರ ಬರೆದು ಅಲ್ಲಿನ ಅನುಮತಿ ಸಿಕ್ಕ ಮೇಲೆ ದೂರವಾಣಿ ಮುಖೇನ ಸಂಪರ್ಕಿಸಿ, ೧೨೦೦ ರೂಗಳಿಗೆ ೩ ರಾತ್ರಿಗಳಿಗೆ ೧ ಢೇರೆಯನ್ನು ಕಾದಿರಿಸಲು ಸಹಾಯ ಮಾಡಿದ ಕಾರ್ಕಳ ಅರಣ್ಯ ಇಲಾಖೆಯ ಜಯನಾರಾಯಣರ ಸಹಾಯ ಸ್ಮರಣಿಯ. ಪ್ರಯಾಣದ ಸಿದ್ದತೆಗಳು ಆರಂಭ. ಊಟ ಸಿಗದೇ ಇದ್ರೆ ಅನ್ನುವ ಭಯದಿಂದ ೩ ದಿನಕ್ಕಾಗುವಷ್ಟು ಚಪಾತಿ ಅದಕ್ಕೆ ಬೇಕಾಗುವ ವ್ಯಂಜನಗಳು ಎಲ್ಲ ಸಿದ್ದ.

ನನ್ನ ಹಿಂದಿನ ಪ್ರವಾಸ ಕಥನಗಳಲ್ಲಿ ಪ್ರವಾಸವೆಂದರೆ ಅಲರ್ಜಿ ಎನ್ನುವ ನನ್ನ ಸಹೋದ್ಯೋಗಿಗಳನ್ನು ಸ್ವಲ್ಪ ಕಟುವಾಯಿತೇನೋ ಎನ್ನುವಷ್ಟು ಟೀಕಿಸಿದ್ದರ ಪರಿಣಾಮ ಅವರಿಂದ ಬಂದ ಮಾರುತ್ತರಗಳಿಂದ ಬೇಸತ್ತು ಯಾರನ್ನು ಆಹ್ವಾನಿಸುವ ಅಥವ ತಿಳಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಆದರೂ ರಜ ಹತ್ತಿರ ಬರುತ್ತಿದ್ದಂತೆ ನನ್ನ ಚಾಳಿ ಗೊತ್ತಿದ್ದ ಕೆಲವರಿಂದ ನಾನು ಎಲ್ಲಿ ಹೋಗುತ್ತಿದ್ದೇನೆ ಎನ್ನುವ ಕುತೂಹಲ ತಣಿಸುವ ಸಲುವಾಗಿ ತನಿಖೆ. ಬಹುಶಃ ಸಹವಾಸ ದೋಷದಿಂದಲೋ ಏನೋ ಸಹೋದ್ಯೋಗಿ ಮತ್ತು ಸ್ನೇಹಿತ ಶ್ರೀಧರ ಮತ್ತು ಸಂಜೀವ ರ ಶನಿವಾರ ಮಧ್ಯಾನ್ಹ ಹೊರಡುವುದಾದರೆ ಎಂಬ ಶರತ್ತಿಗೆ ವಸತಿ ಸಿಗುವುದಿಲ್ಲವೆಂದು ತಿಳಿಸಿ. ೨೨ ರ ಬೆಳಿಗ್ಗೆ ೧೦ ಗಂಟೆಗೆ ಪತ್ನಿ, ಪುತ್ರ ಮತ್ತು ಅಕ್ಕನ ಮಗ ಅಭಿಷೇಕ್ ನೊಂದಿಗೆ ಹೊಸದಾಗಿ ಖರೀದಿಸಿದ Zen Estiloದಲ್ಲಿ ಪ್ರಯಾಣ ಶುರು.

ನರಕ ಸದೃಶ ತುಮಕೂರು ರಸ್ತೆಯಲ್ಲಿ ನೆಲಮಂಗಲವನ್ನು ಬದಿಗೆ ಬಿಟ್ಟು ಹಾಸನದ ಕಡೆಗೆ ಪಯಣ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯನ್ನು ಅಗಲಗೊಳಿಸುವುದಕ್ಕಾಗಿ ಮರಗಳ ಮಾರಣಹೋಮಕ್ಕೆ ಮೌನ ಸಾಕ್ಷಿಯಾಗುತ್ತಿದ್ದ ಸಂಚಾರ ದಟ್ಟಣೆಗೆ ಶಪಿಸುತ್ತ, ಕರಡಿಗುಚ್ಚಮ್ಮನ ದೇವಸ್ಥಾನದ ಆವರಣದಲ್ಲಿರುವ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಕುಣಿಗಲ್, ಯಡಿಯೂರು, ಹಿರಿಸಾವೆ ಮತ್ತು ಚೆನ್ನರಾಯಪಟ್ಟಣದ ಮಾರ್ಗವಾಗಿ ಹಾಸನ ತಲುಪಿದಾಗ ಸಮಯ ೧.೩೦. ವಿದ್ಯಾನಂದ ಶೆಣೈರವರ ಭಾರತ ದರ್ಶನ ಮಾಲಿಕೆಯನ್ನು ಕೇಳುತ್ತಿದ್ದರೆ ಸಮಯದ ಪರಿವೇ ಇರದೆ ಗಾಡಿ ಓಡಿಸಬಹುದೇನೋ! ಮೈಜುಮ್ಮೆನ್ನುವಂತೆ ಸಮ್ಮೋಹನ ಧ್ವನಿಯಿಂದ ಭಾರತ ದರ್ಶನ ಮಾಡಿಸುವ ಶೆಣೈ ನಮ್ಮೊಡನಿಲ್ಲ. ಅವರಿಗಿದೋ ನನ್ನ ಭಕ್ತಿ ಪೂರ್ವಕ ನಮನ.

ಚುರುಗುಡುತ್ತಿದ್ದ ಹೊಟ್ಟೆಯ ಬೆಂಕಿಯನ್ನು ಹಾಸನದ ಹೋಟೆಲ್ ಒಂದರಲ್ಲಿ ಆರಿಸಿ, ದೇಶಕ್ಕೊಬ್ಬ ಮಾಜಿ ಪ್ರಧಾನಿಗಳನ್ನು ಕೊಟ್ಟ ಕ್ಷೇತ್ರದ ರಸ್ತೆಯ ದುಸ್ಥಿತಿಗೆ ಮರುಗುತ್ತ ನಮ್ಮ ಪ್ರಯಾಣ ಬೇಲೂರಿನ ಮುಖೇನ ಚಿಕ್ಕಮಗಳೂರಿನ ಕಡೆಗೆ. ಬೇಲೂರಿನ ಚೆನ್ನಕೇಶವನ ಮಹಿಮೆಯೋ ಪ್ರವಾಸೋದ್ಯಮ ಇಲಾಖೆಯ ಕೃಪೆಯೋ ರಸ್ತೆ ಈಗ ಒಪ್ಪ ಓರಣವಾಗಿ ಸುಸ್ಥಿತಿಯಲ್ಲಿದೆ. ಬೇಲೂರಿನಿಂದ ಮುಡಿಗೆರೆ ಕೊಟ್ಟಿಗೆಹಾರದ ದಾರಿ ಕುದುರೆಮುಖಕ್ಕೆ ಹತ್ತಿರವಾದರೂ ರಸ್ತೆ ಗುಂಡಿ ಹೊಂಡಗಳಿಂದ ತುಂಬಿರುವುದರಿಂದ ಚಿಕ್ಕಮಗಳೂರು, ಬಾಳೆಹೊನ್ನೂರು ದಾರಿಯಲ್ಲಿ ಮುಂದುವರೆಯಲು ಬೇಲೂರಿನಲ್ಲಿ ಸಿಕ್ಕ ಸಲಹೆ. ದತ್ತಪೀಠದ ಅವಾಂತರದಿಂದ ಘಳಿಗೆಗೊಮ್ಮೆ ರಸ್ತೆಗೆ ತಡೆ ನಿರ್ಮಿಸಿರುವ ಜಿಲ್ಲಾಡಳಿತ ನಮ್ಮಪ್ರಯಾಣಕ್ಕೆ ಕಿರಿಕಿರಿ ಉಂಟುಮಾಡುತ್ತಿತ್ತು. ಜನಗಳಿಗೆ ನೆಮ್ಮದಿಯಾಗಿ ಬದುಕುವುದಕ್ಕೆ ಬಿಡದಿದ್ರೂ ಪರವಾಗಿಲ್ಲ ನೆಮ್ಮದಿ ಕೆಡಿಸುವುದಕ್ಕೆ ನಮ್ಮ ಅಧಿಕಾರಿಶಾಹಿ ಯಾವ ಆಡಳಿತಕ್ಕೂ ಕಡಿಮೆ ಇರಲಿಲ್ಲ ಇವರ ಆರ್ಭಟ. ಕೊನೆಗೊಮ್ಮೆ ಚಿಕ್ಕಮಗಳೂರು ದಾಟಿದಾಗ ನೆಮ್ಮದಿಯ ನಿಟ್ಟುಸಿರು. ಚಿಕ್ಕಮಗಳೂರಿನಿಂದ ಆಲ್ದೂರು, ಬಾಳೆಹೊಳೆ ಮತ್ತು ಬಾಳೆಹೊನ್ನೂರು ಮಾರ್ಗವಾಗಿ ಕಳಸಕ್ಕೆ ತಲುಪಿದಾಗ ಸಂಜೆ ೫ ಗಂಟೆ. ಸಣ್ಣ ಉಪಹಾರ ಗೃಹವೊಂದರಲ್ಲಿ ಕಾಫಿ ಕುಡಿದು ಹೊರ ಬರುವಷ್ಟರಲ್ಲಿ ಹೊರಗೆ ಕತ್ತಲಾವರಿಸಿತ್ತು.

ಕುದುರೆಮುಖದ ಅರಣ್ಯ ಇಲಾಖೆಯ ಕಛೇರಿ ಹುಡುಕಿ ನಮ್ಮ ಕಾದಿರಿಸಿದ ಸ್ಥಳದ ಬಗ್ಗೆ ಮಾಹಿತಿ ತೆಗೆದುಕೊಳ್ಳುವಾಗಲೇ ನನಗೆ ಅರಿವಾದದ್ದು ಭಗವತಿ ಇರುವುದು ಶೃಂಗೇರಿ ರಸ್ತೆಯಲ್ಲಿರುವ ಕಾಡಿನಲ್ಲಿ ಎಂದು. ಕಾರ್ಗತ್ತಲಿನಲ್ಲಿ ನಿರ್ಜನ ರಸ್ತೆಯಲ್ಲಿ ಭಗವತಿ ಹುಡುಕುವುದು ದುಸ್ತರವಾಗಬಹುದೇನೊ ಎಂದು ಅಳುಕುತ್ತಲೆ ವಾಹನ ಚಲಾಯಿಸುತ್ತಿದ್ದರೆ ೯ ಕಿ,ಮೀ ಗಳು ೯೦ ಕಿ.ಮೀ ಗಳಂತೆ ಭಾಸವಾಗುತ್ತಿತ್ತು. ಇನ್ನೇನು ಭಗವತಿ ಸಿಗುವುದಿಲ್ಲ ಹಿಂತಿರುಗುವುದು ಒಂದೆ ದಾರಿ ಎಂದು ಆಲೋಚಿಸುತ್ತಿರುವಾಗ ರಸ್ತೆಯ ಎಡಭಾಗದಲ್ಲಿ ಕಂಡದ್ದು ನಿಚ್ಚಳವಾಗಿರುವ ಭಗವತಿ ಪ್ರಕೃತಿ ಶಿಬಿರದ ನಾಮಫಲಕ. ಕಬ್ಬಿಣದ ಬಾಗಿಲು ತೆಗೆದು ಕಲ್ಲಿನ ದಾರಿಯಲ್ಲಿ ಸುಮಾರು ೧ ಕಿ.ಮೀ ಗಳಷ್ಟು ಮುಂದೆ ಹೋದರೆ ಸಿಗುವುದೇ ಶಿಬಿರ. ಕತ್ತಲಿನಲ್ಲಿ ಅಲ್ಲಿನ ಸಿಬ್ಬಂದಿ ತೋರಿಸಿದ ಢೇರೆಯೊಂದರಲ್ಲಿ ನಮ್ಮ ಹೊರೆಗಳನ್ನೆಲ್ಲ ಇಳಿಸಿ ಹೊರ ಬಂದರೆ ಪೂರ್ಣಚಂದಿರನ ಬೆಳದಿಂಗಳಿನಲ್ಲಿ ಮಂದ್ರವಾಗಿರುವ ನಿಶ್ಯಬ್ಧವಾಗಿರುವ ಸ್ಥಳ ವಾಹ್! ಯಾವುದೇ ಜಂಜಾಟವಿಲ್ಲದೆ ೨-೩ ದಿನಗಳು ಕಳೆಯಲು ಅತ್ಯುತ್ತಮ ಸ್ಥಳವೆಂದು ಒಮ್ಮೆಲೆ ಹೇಳಬಹುದು. ಸೌರಶಕ್ತಿಯಿಂದ ಬೆಳಕು ಕೊಡುವ ದೀಪಗಳು, ಪಕ್ಕದಲ್ಲೆ ಹರಿಯುವ ನೀರಿನ ಜುಳುಜುಳು ಶಬ್ಧ, ಅನಂತ ಪ್ರಕೃತಿಯ ಲಾವಣ್ಯದಂತೆ, ಬಂಗಾರ ಭೂಮಿಯ ಹೊಂಬಾಳಿನಂತೆ ಹಾಡಿನ ಸಾಲುಗಳನ್ನು ನೆನಪಿಸುತ್ತಿತ್ತು. ಬೆಳದಿಂಗಳ ರಾತ್ರಿಯಲ್ಲೆ ಇಷ್ಟೊಂದು ಸುಂದರವಾಗಿರುವ ಪ್ರದೇಶ ಇನ್ನು ಬೆಳಗಿನ ಪ್ರಥಮ ಸೂರ್ಯಕಿರಣಗಳಲ್ಲಿ ಹೇಗಿರಬಹುದು ಎಂದು ಊಹಿಸುತ್ತಾ ಊಟಕ್ಕೆ ಸಿದ್ದ. ಅರಣ್ಯ ಇಲಾಖೆಯ ಸಿಬ್ಬಂದಿ ಕೊಡಮಾಡಿದ ಬೆಳ್ಳುಳ್ಳಿಯಿಂದ ಕೂಡಿದ ಅಡುಗೆ ರುಚಿಸಲಿಲ್ಲ. ನಾಳೆ ಇನ್ನೇನು ಕಾದಿದೆಯೋ(ಅಡುಗೆ) ಎನ್ನುವ ಆತಂಕದಲ್ಲಿ ನಾವೇ ತಂದಿದ್ದ ಚಪಾತಿಗಳೆ ನಮ್ಮ ಹೊಟ್ಟೆಗೆ ಆಧಾರವಾದವು. ಅಲ್ಲಿನ ಮೇಲ್ವಿಚಾರಕ ಸುನೀಲ್ ಬಂದು ನಮ್ಮ ನಾಳಿನ ಕಾರ್ಯಕ್ರಮಗಳ ವಿಚಾರಿಸಿ ನಮಗೆ ೯ ಗಂಟೆಗೆ ಕುರಿಂಜಲ್ ಚಾರಣಕ್ಕೆ ಸಿದ್ದರಾಗಿರುವಂತೆ ತಿಳಿಸಿ ಹೋದರು. ತಮಿಳುನಾಡಿನಿಂದ ಬಂದ ೪ ಜನರ ಗುಂಪು ಬೆಂಕಿ ಹಾಕಿ ಛಳಿಯನ್ನು ಓಡಿಸುವ ಪ್ರಯತ್ನ ಮಾಡುತ್ತಿತ್ತು.

ದಟ್ಟವಾಗಿ ಸುರಿಯುತ್ತಿರುವ ಮಂಜಿನ ಹನಿ ಬೆಳಗನ್ನು ಸ್ವಾಗತಿಸಿತು. ಕ್ಯಾಮೆರ ಕಣ್ಣನ್ನು ಒರೆಸಿ ಫೋಟೊ ತೆಗೆಯುವ ಸಮಯಕ್ಕೆ ಮತ್ತೆ ಆವರಿಸಿಕೊಳ್ಳುತ್ತಿತ್ತೆಂದರೆ ಮಂಜಿನ ಹನಿ ಬೀಳುತ್ತಿದ್ದ ಪ್ರಮಾಣ ನೀವೆ ಊಹಿಸಿ. ಆವರಿಸಿರುವ ಮಂಜನ್ನು ದಿನಕರನ ಕಿರಣಗಳು ಹೊಡೆದೋಡಿಸುವ ಪ್ರಕ್ರಿಯೆ ಸ್ವರ್ಗವನ್ನು ಸೃಷ್ಟಿಸುತ್ತದೆ. ಅದನ್ನೆ ನೋಡುತ್ತಾ ಢೇರೆಯ ಬಾಗಿಲಿನಲ್ಲಿ ಕುಳಿತರೆ out of the world ಭಾವನೆ. ನಿಜಕ್ಕೂ ಈ ಶಿಬಿರ ಹೊರ ಪ್ರಪಂಚದಿಂದ ಬಲು ದೂರವಾಗೆ ಉಳಿದಿರಲಿ. ಗದಗುಟ್ಟುವ ಛಳಿಯಲ್ಲಿ ಬಿಸಿಬಿಸಿ ನೀರಿನ ಸ್ನಾನ. ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯೊಂದಿಗೆ ಬಿಸಿಬಿಸಿಯಾದ ರುಚಿರುಚಿಯಾದ ಪೂರಿಗಳು ಅದೆಷ್ಟು ಹೊಟ್ಟೆಗಿಳಿದವೋ ಗೊತ್ತಿಲ್ಲ ನಿನ್ನೆ ರಾತ್ರಿಯೇ ನನ್ನ ಪತ್ನಿಯ ಬೆಳ್ಳುಳ್ಳಿ ಬೇಡವೆಂಬ ಆಣತಿ ಅಡುಗೆ ಭಟ್ಟ ರಾಜಣ್ಣನ ಮೇಲೆ ಕೆಲ್ಸ ಮಾಡಿದಂತಿತ್ತು. ನಗು ನಗುತ್ತಾ ಕೇಳಿದ ಪ್ರಶ್ನೆಗಳಿಗೆಲ್ಲ ಸಹನೆಯಿಂದ ಉತ್ತರಿಸುವ ರಾಜಣ್ಣ ಬಹುಬೇಗ ಮನೆಯವರಂತೆ ಆತ್ಮೀಯ ಅನ್ನಿಸಿಬಿಡುತ್ತಾರೆ. ಆತನ ಕೈ ರುಚಿಯಂತೂ ಅದ್ಭುತ!.
೯ ಗಂಟೆಗೆ ಸರಿಯಾಗಿ ಮಾರ್ಗದರ್ಶಕನಾಗಿ ಚಿನ್ನಯ್ಯನ ಆಗಮನ. ಮಾರ್ಗದರ್ಶಕರಿಲ್ಲದೆ ಕುದುರೆ ಮುಖದ ಯಾವ ಪ್ರದೇಶಕ್ಕು ಚಾರಣ ಕೈಗೊಳ್ಳುವಂತಿಲ್ಲ. ಗೈಡ್, ರಾಜಣ್ಣನ ಸಹಾಯಕ ಎಲ್ಲವೂ ಅವನೆ ಒಟ್ಟು ೪-೫ ಜನ ಸಿಬ್ಬಂದಿಯಿಂದ ಇಡೀ ಶಿಬಿರ ಸ್ವಲ್ಪವೂ ಚ್ಯುತಿ ಬರದಂತೆ
ನಡೆಸಲಾಗುತ್ತಿದೆಯೆಂದರೆ ನಂಬಲಸಾಧ್ಯ! ಅಡುಗೆಮನೆಯ ಹಿಂಭಾಗದಿಂದ ನಮ್ಮ ಚಾರಣದ ಶುಭಾರಂಭ. ಸಣ್ಣ ಹೊಳೆಯಂತೆ ಹರಿಯುವ ಭದ್ರೆಯನ್ನು ದಾಟಿ ಕಾಡಿನೊಳಗೆ ಪ್ರವೇಶ. ೬ ವರ್ಷಗಳಿಂದ ಇದೇ ಕಾಯಕವಾಗಿರುವ ಚಿನ್ನಯನಿಗೆ ದಾರಿ ನಿರಾಯಾಸ. ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ ನನ್ನ ಮಗನ ಎಲ್ಲ ಕುತೂಹಲವನ್ನುತಣಿಸುತ್ತಾ ಸಾಗುವ ಅವನ ಸಹನೆಗೊಂದು ನಮಸ್ಕಾರ. ದಟ್ಟ ಕಾಡಿನೊಳಗೆ ನಮ್ಮನ್ನು ಜಾಗರೂಕತೆಯಿಂದ ಕೆಲವೊಮ್ಮೆ ಕಡಿದಾದ ಬೆಟ್ಟ ಮತ್ತು ಇಳಿಜಾರನ್ನು ದಾಟಿಸುತ್ತಾ ಆ ಕಾಡಿನ ಬಗ್ಗೆ ಅಲ್ಲಿರುವ ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಕೊಡುತ್ತ ಸುಮಾರು ೧ ಗಂಟೆಯ ನಂತರ ಸಣ್ಣದೊಂದು ಕೆರೆಯ ಬಳಿಗೆ ನಮ್ಮನ್ನು ಕರೆದು ಕೊಂಡು ಬಂದು ನಿಲ್ಲಿಸಿದ್ದ ಚಿನ್ನಯ್ಯ. ಅರಣ್ಯ ಇಲಾಖೆಯಿಂದ ನಿರ್ಮಿತ ಈ ಹೊಂಡ ವರ್ಷವಿಡಿ ಬತ್ತದೆ ಭಗವತಿ ಶಿಬಿರಕ್ಕೆ ನೀರನ್ನು ಪೂರೈಸುತ್ತದೆ. ಇಲ್ಲಿಂದ ಜಿಗಣೆಗಳ ಕಾಟ ಪ್ರಾರಂಭ. ಅದೇಕೋ ಆ ಜಿಗಣೆಗಳಿಗೆ ಅಭಿಯ ರಕ್ತ ಮಾತ್ರವೇ ರುಚಿಸುತ್ತಿದೆಯೆಂದು ಅವನನ್ನು ಕಿಚಾಯಿಸುವಷ್ಟರಲ್ಲ್ಲಿ ಎಲ್ಲರ ಕಾಲು ಬೆರಳ ಸಂದುಗಳಲ್ಲಿ ಜಿಗಣೆಗಳು ಪ್ರತ್ಯಕ್ಷ. ಅಂಟಿದ್ದ ಎಲ್ಲ ಜಿಗಣೆಗಳನ್ನು ಕಿತ್ತು ಬಿಸುಟು ನಮ್ಮ ಪ್ರಯಾಣ ಮತ್ತೆ ಶುರು. ಒಳ್ಳೆಯ ರಕ್ತವನ್ನು ಮಾತ್ರ ಜಿಗಣೆ ಕುಡಿಯುವುದು ಅದಕ್ಕಾಗೆ ನನಗೆ ಮಾತ್ರ ಜಿಗಣೆ ಹಿಡಿಯುತ್ತಿದೆ ಕೆಟ್ಟ ರಕ್ತವಿರುವ ನಿನಗೆ ಹಿಡಿಯುತ್ತಿಲ್ಲ ಎಂದು ನನಗೆ ಮಾತಿನ ತಿರುಗೇಟು ಕೊಡಲು ಪ್ರಯತ್ನಿಸುತ್ತಿದ್ದ ಅಭಿಯನ್ನು ಮತ್ತಷ್ಟು ರೇಗಿಸುತ್ತಾ ಕಾಡಿನಲ್ಲಿ ಕೇಳಿಸುತ್ತಿದ್ದ ತರಗೆಲೆಗಳ ಶಬ್ದ ಯಾವುದೋ ಪ್ರಾಣಿಯ ಹೆಜ್ಜೆಯ ಸಪ್ಪಳವಿರಬೇಕೆಂಬ ನಮ್ಮ ಕಲ್ಪನಾಲೋಕದ ಸ್ವಲ್ಪ ಸಮಯದ ನಡಿಗೆ ನಮ್ಮನ್ನು ಅರಣ್ಯ ಇಲಾಖೆಯ ಜೀಪ್ ದಾರಿ ತಂದು ನಿಲ್ಲಿಸಿತ್ತು. ಇಲ್ಲಿಂದ ಇನ್ನು ಕುರಿಂಜಲ್ ತುದಿಯವರೆಗೆ ಇದೇ ದಾರಿ. ದಾರಿಯಲ್ಲಿ ಸಿಕ್ಕ ಒಂದು ಮರದ ಬಗ್ಗೆ ಚಿನ್ನಯನಿಂದ ಮಾಹಿತಿ. ಈ ಮರದ ಯಾವುದೇ ಭಾಗ ಮನುಷ್ಯನ ದೇಹದ ಸಂಪರ್ಕವಾದರೆ ೩ ದಿನ ಜ್ವರ ಬಿಡದೇ ಕಾಡುವುದು ಎಂಬ ವಿವರಣೆ.

೧ ಗಂಟೆಯ ನಂತರ ನಮ್ಮ ಗುರಿಯಾದ ಕುರಿಂಜಲ್ ಪೀಕ್(ಬಂಡೆ) ಮತ್ತು ಅಲ್ಲಿನ ಒಂದು ಪಾಳು ಬಿದ್ದ ಹಳೆಯ telephone exchange ಗೆ ತಲುಪಿದೆವು ಇಲ್ಲಿಂದ ಮಂಗಳೂರು, ಸಮುದ್ರ ಕಾಣುತ್ತದೆ ಎಂದು ಚಿನ್ನಯ್ಯನ ಬಡಬಡಿಕೆ. ಯಾರಿಗೆ ಬೇಕು ಮಂಗಳೂರು? ನಮ್ಗೆ ಬೇಕಿದ್ದದ್ದು ಅಲ್ಲಿನ ಪ್ರಕೃತಿ ಸೌಂದರ್ಯ. ಈ ಹೊತ್ತಿಗಾಗಲೆ ಅಭಿ ಸುಸ್ತಾಗಿ ಏದುಸಿರು ಬಿಡುತ್ತಿದ್ದ ಅಲ್ಲೆ ಸಿಕ್ಕ ಬಂಡೆಯ ಬದಿಯಲ್ಲಿ ಅವನನ್ನು ಕುಳ್ಳಿರಿಸಿ ತಿನ್ನಲು ತಂದಿದ್ದ ಕೆಲವು ಕುರುಕಲು ತಿಂಡಿಗಳನ್ನು ಕೊಟ್ಟು ಕ್ಯಾಮೆರ ಕಣ್ಣನ್ನು ಕೆಲವು ಬಾರಿ ಮಿಟುಕಿಸಿ ಹಿಂತಿರುಗತೊಡಗಿದೆವು.
ಉತ್ತರ ಭಾರತೀಯರ ಗುಂಪೊಂದು ಕಿರುಚಾಟ ಅರಚಾಟಗಳೊಂದಿಗೆ ಕುರಿಂಜಲ್ ಕಡೆಗೆ ತೆರಳುತ್ತಿತ್ತು. ನಮ್ಮ ಗೈಡ್ ಚಿನ್ನಯ್ಯ ಅವರಿಗೆ ಕಾಡಿನ ಮದ್ಯೆ ಕಿರುಚದಂತೆ ಎಚ್ಚರಿಸಿದರೂ ಅವು ತಮ್ಮ ಕೆಟ್ಟ ಚಾಳಿ ಬಿಡಲಿಲ್ಲ. ಅಲ್ಲಿಗೂ ಕ್ರಿಕೆಟ್ ಬ್ಯಾಟ್ ಮತ್ತು ಚೆಂಡಿನೊಡನೆ ಬಂದಿದ್ದ ಈ ಗುಂಪನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ಬಹುಶಃ ನಾಗರೀಕ ಸಮಾಜದಲ್ಲಿ ಕಿರುಚಲು ಅವಕಾಶವಿಲ್ಲದ್ದರಿಂದಲೋ ಅಥವಾ ಇಲ್ಲಿನ ಪ್ರಕೃತಿ ಸೌಂದರ್ಯದ ಉನ್ಮಾದದಿಂದಲೋ ಆ ಗುಂಪು ಕಿರುಚಾಡಿಕೊಂಡೆ ಮುಂದುವರೆಯಿತು. ಹಿಂತಿರುಗಿ ಹೊಳೆ ದಾಟುವ ಮುನ್ನ ಕುದುರೆಮುಖ ಅದಿರು ಸಂಸ್ಥೆ ಮಂಗಳೂರಿಗೆ ಅದಿರು ಸಾಗಾಣಿಕೆಗಾಗಿ ಬಳಸುತ್ತಿದ್ದ ಕೊಳವೆ ಮಾರ್ಗ ಮತ್ತು ಅದಕ್ಕಾಗಿ ನಿರ್ಮಿಸಿದ ಸುರಂಗ ಮಾರ್ಗವನ್ನು ವೀಕ್ಷಿಸಿದೆವು. ಈಗ ಈ ಕೊಳವೆ ಮಾರ್ಗದಲ್ಲಿ ನೀರುಸಾಗಿಸಲಾಗುತ್ತಿದೆ ಎಂಬುದು ಚಿನ್ನಯ್ಯನ ಮಾಹಿತಿ.
ಶಿಬಿರಕ್ಕೆ ಹಿಂತಿರುಗಿದೊಡನೆ ದಣಿದ ಮೈಮನಗಳಿಗೆ ಮುದ ನೀಡುವ ಭದ್ರಾ ಹೊಳೆಯಲ್ಲಿ ಸ್ನಾನ. ಮಧ್ಯಾನ್ಹ ೨ ಗಂಟೆಯ ಬಿರು ಬಿಸಿಲಲ್ಲೂ ಕೊರೆಯುವ ನೀರಿನಲ್ಲಿ ಜಲ ಕ್ರೀಡೆ. ಮಂದವಾಗಿ ಹರಿಯುವ ಹೊಳೆ ನಿರ್ಮಿಸಿರುವ ಸ್ವಲ್ಪವೂ ಅಪಾಯವಿಲ್ಲದ ಸ್ಪಟಿಕದಷ್ಟು ಪಾರದರ್ಶಕ ನೀರಿನಲ್ಲಿ ಈಜುತ್ತಿದ್ದರೆ ಬಾಲ್ಯದ ನನ್ನೂರಿನ ಕೆರೆ ನೆನಪಿಗೆ ಬರುತ್ತದೆ. ಓಹ್! ಸುಮಾರು ೨೦ ವರ್ಷಗಳೇ ಕಳೆದಿವೆ ಮನದಣಿಯೆ ಈಜಿ. ಹೊಟ್ಟೆ ತಾಳಹಾಕಲಿಕ್ಕೆ ಪ್ರಾರಂಭಿಸುವ ಸಮಯಕ್ಕೆ ಸರಿಯಾಗಿ ನಮ್ಮ ರಾಜಣ್ಣನಿಂದ ಊಟಕ್ಕೆ ಬನ್ನಿ ಎನ್ನುವ ಆಹ್ವಾನ. ಪೊಗದಸ್ತಾದ ಊಟ ಮನೆ ಊಟಕ್ಕೆ ಯಾವುದರಲ್ಲೂ ಕಮ್ಮಿ ಇಲ್ಲದ ಅಡುಗೆ. ಯಾಕೊ ಈ ರಾಜಣ್ಣನ ಅಡುಗೆ ಬಲು ಇಷ್ಟ ಆಗ್ತಿದೆ.
ಒಂದು ಸುತ್ತು ಒಳ್ಳೆ ನಿದ್ದೆ ತೆಗೆದು ಕಣ್ಣು ಬಿಡುವ ಸಮಯಕ್ಕೆ ಚಹಾ ಹಿಡಿದ ರಾಜಣ್ಣ ಮತ್ತೆ ಪ್ರತ್ಯಕ್ಷ. ಸೂರ್ಯ ಮನೆ ಸೇರುವ ದೃಶ್ಯ ನೋಡೋಣವೆಂದು ಶಿಬಿರದ ಹೆಬ್ಬಾಗಿಲಿನ ಕಡೆ ನಡೆಯುತ್ತಿದ್ದ ನಮಗೆ ಚಿನ್ನಯ್ಯ ಇಲ್ಲೆಲ್ಲೂ ಸೂರ್ಯಾಸ್ತಮಾನದ ದೃಶ್ಯ ಎಲ್ಲಿಯೂ ಕಾಣಸಿಗುವುದಿಲ್ಲವೆಂದು ನಮ್ಮ ಉತ್ಸಾಹಕ್ಕೆ ತಣ್ಣೀರೆರೆಚಿದ. ೭.೩೦ ರವರೆಗೆ ಅಲ್ಲಿ ಇಲ್ಲಿ ಸುತ್ತಾಡಿ ಮತ್ತೆ ಅಡುಗೆ ಮನೆಗೆ ಹಾಜರ್! ರಾಜಣ್ಣ ಮತ್ತು ಚಿನ್ನಯ್ಯನ ತಲೆ ತಿನ್ನಲು. ಶಿಬಿರದ ಮೇಲ್ವಿಚಾರಕ ಸುನಿಲ್ ನಾಳೆ ಗಂಗಡಿಕಲ್ಲಿಗೆ ಹೋಗಲು ಬೆಳಗ್ಗೆ ೬ ಗಂಟೆಗೆ ಸಿದ್ದವಾಗಿರಲು ತಿಳಿಸಿದ ಬೆಂಗಳೂರಿನಿಂದ ಬುಲ್ಲೆಟ್ ಮೇಲೆ ಬಂದಿದ್ದ ಹವ್ಯಾಸಿ ಚಾರಣಿಗ ಪ್ರಶಾಂತ್ ಮತು ವಿಶ್ವಾಸ್ ಪರಿಚಯ ಮಾಡಿಕೊಂದು ಅವರೊಡನೆ ಸ್ವಲ್ಪ ಹರಟೆ ಹೊಡೆದು, ನಿದ್ದೆಗೆ ಶರಣು.
೬ ಗಂಟೆಗೆ ಸಿಹಿ ನಿದ್ದೆಯಲ್ಲಿದ್ದ ಚಿನ್ನಯ್ಯನನ್ನು ನಿದ್ದೆಯಿಂದ ಎಚ್ಚರಿಸಿ ರಾಜಣ್ಣ ಕೊಟ್ಟ ಚಹಾ ಕುಡಿದು ಶೃಂಗೇರಿ ರಸ್ತೆಯಲ್ಲಿ ೯ ಕಿ.ಮೀ ವಾಹನದಲ್ಲಿ ಕ್ರಮಿಸಿ ಕಡಾಂಬಿ ಫಾಲ್ಸ್ ನಂತರ ಬಲಗಡೆ ಸಿಗುವ ಜೀಪ್ ದಾರಿಗೆ ಅಡ್ಡಲಾಗಿರುವ ಗೇಟ್ ಮುಂದೆ ಕಾರು ನಿಲ್ಲಿಸಿ ನಮ್ಮ ಚಾರಣ ಪ್ರಾರಂಭ. ಗಂಗಡಿ ಕಲ್ಲಿಗೆ ಬಿಸಿಲು ಪ್ರಾರಂಭವಾಗುವ ಮುನ್ನವೆ ನಡಿಗೆ ಆರಂಭಿಸಿದರೆ ಒಳ್ಳೆಯದು ಎಂದು ಇವರ ಸಲಹೆಗೆ ಒಂದು ಧನ್ಯವಾದ. ಅರ್ಧ ಗಂಟೆಯ ಜೀಪ್ ರಸ್ತೆಯ ನಡಿಗೆಯ ನಂತರ ಅತ್ಯಂತ ಕಷ್ಟವಾದ ಕಡಿದಾದ ಬೆಟ್ಟ ಎದುರಿಗೆ ಕಾಣುತ್ತಿರುತ್ತದೆ. ಕತ್ತೆತ್ತಿ ನೋಡಿ ಅಯ್ಯೊ ಇನ್ನು ಎಷ್ಟೊಂದು ಹತ್ಬೇಕಲ್ಲ ಎಂದು ಚಿಂತಿಸುವ ಬದಲು ಕಣ್ಮನ ತಣಿಸುವ ಹಸಿರನ್ನು ನೋಡುತ್ತಾ ನಡೆಯುವುದೇ ಸೂಕ್ತ. ಅಮಿತ್ ಮತ್ತು ಅಭಿ, ಚಿನ್ನಯನೊಂದಿಗೆ ನಮ್ಮಿಬ್ಬರಿಗಿಂತ ಹೆಚ್ಚು ಮುಂದೆ ಹೋಗಿದ್ದರು. ಏದುಸಿರು ಬಿಡುತ್ತಾ ಹೆಜ್ಜೆಗೊಮ್ಮೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ ನನ್ನ ಪತ್ನಿಯನ್ನು ಕಾವಲು ಕಾಯುತ್ತಾ ನಾವು ಬೆಟ್ಟ ಹತ್ತುವ ಸಮಯಕ್ಕೆ ಆಗಲೆ ಅಮಿತ್, ಅಭಿ ಮತ್ತು ಚಿನ್ನಯ್ಯ ಗಂಗಡಿಕಲ್ಲಿನ ತುದಿಯಲ್ಲಿ ಕುಳಿತು ದೂರದ ಬೆಟ್ಟಗಳ ಮೇಲೆ ಬಿಸಿಲು ನೆರಳಿನಾಟವನ್ನು ಆಸ್ವಾದಿಸುತ್ತಿದ್ದರು. ಕುದುರೆಮುಖ ಬೆಟ್ಟಗಳ ಸಾಲಿನ ಸೌಂದರ್ಯವನ್ನು ಸವಿಯಬೇಕಾದರೆ ಇಲ್ಲಿಗೆ ಬರಲೇಬೇಕು. ಹೂಳು ತುಂಬಿದ ಲಕ್ಯ ಅಣೆಕಟ್ಟು ಅದರ ಹಿಂದೆ ನಿಂತಿರುವ ನೀರು ಬೆಟ್ಟ ಗುಡ್ಡಗಳ ಸಾಲು ಸಾಲು ನಯನ ಮನೋಹರ. ಸಾಕು ಸಾಕೆನ್ನಿಸುವಷ್ಟು ಚಿತಗಳನ್ನು ಕ್ಲಿಕ್ಕಿಸಿ. ಒಂದು ಗಂಟೆಯ ಸಮಯ ವ್ಯಯಿಸಿದ ನಂತರ ಹಿಂತಿರುಗೋಣವೆನ್ನುವ ಚಿನ್ನಯ್ಯನ ಮಾತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಕಾಲು ತೆಗೆಯೆಬೇಕಾಯಿತು. ಬೆಟ್ಟ ಹತ್ತುವುದು ಕಷ್ಟ ಇಳಿಯುವುದು ಸುಲಭ ಎನ್ನುವ ಬೆಟ್ಟ ಹತ್ತದವರ ಮಾತು ಸಮಂಜಸವಲ್ಲವೇನೊ? ಇಳಿಜಾರಿನಲ್ಲಿ ಕೆಲವು ಕಡೆ ಆಯ ತಪ್ಪಿ ಜಾರುತ್ತ ಮೊಳಕಾಲೆತ್ತರಕೆ ಬೆಳೆದು ನಿಂತಿದ್ದ ಹುಲ್ಲನ್ನೆ ಆಸರೆಯಾಗಿಸಿ ಬೀಳದೆ ಇಳಿದೆವು. ಒಂದೂವರೆ ಗಂಟೆಯ ನಿರಂತರ ನಡಿಗೆಯ ನಂತರ ನಮ್ಮ ರಥ ನಿಂತಿದ್ದ ಜಾಗಕ್ಕೆ ಬಂದು ರಥವೇರಿ ಶಿಬಿರಕ್ಕೆ ಹಿಂತಿರುಗಿದೆವು.ರಾಜಣ್ಣ ಕೊಟ್ಟ ಉಪ್ಪಿಟ್ಟನ್ನು ಕಣ್ಣು ಮುಚ್ಚಿಕೊಂಡು ನುಂಗಿ, ಮತ್ತೊಮ್ಮೆ ಭದ್ರಾನದಿಯ ಕೊರೆಯುತ್ತಿರುವ ನೀರಿನಲ್ಲಿ ಸ್ನಾನ ಮಾಡಿ ೧ ಸುತ್ತು ನಿದ್ದೆ ಹೊಡೆದು ಮಲ್ಲೇಶ್ವರಕ್ಕೆ ಹೋಗಿ ಹಾಳು ಬೀಳುತ್ತಿರುವ ಊರಿನಲ್ಲಿ ಮಧ್ಯಾನ್ಹ ಊಟಕ್ಕೆಂದು ಹಾಲು ಮೊಸರು ಕೊಂಡು ತಂದು ರಾಜಣ್ಣ ಬಡಿಸಿದ ಊಟ ಮಾಡಿ ಕಡಾಂಬಿ ಜಲಪಾತದ ಮುಂದೆ ಒಂದು ಫೋಟೊ ಕ್ಲಿಕ್ಕಿಸಿ, ಹನುಮಾನ್ ಗುಂಡಿ ಜಲಪಾತದಲ್ಲಿ ೨೦೦ ಮೆಟ್ಟಿಲಿಳಿದು (ಅಲ್ಲಿರುವ ನಾಮಫಲಕದ ಪ್ರಕಾರ) ಜಲಪಾತದ ತಪ್ಪಲಲ್ಲಿ ಒಂದರ್ಧ ಗಂಟೆ ಸಮಯ ಕಳೆದು ಶಿಬಿರಕ್ಕೆ ವಾಪಸ್. ಶಿಬಿರವನ್ನೆಲ್ಲ ೨ ಬಾರಿ ಸುತ್ತಿ ಭದ್ರೆಯಲ್ಲಿ ಮತ್ತೊಮ್ಮೆ ಈಜಿ ರಾಜಣ್ಣ ತಂದಿತ್ತ ಛಹಾ ಹೀರಿ ಸಮಯ ಕಳೆದೆವು. ರಾತ್ರಿಯಾಗುತ್ತಿದಂತೆ ಸುನೀಲನೊಡನೆ ವ್ಯವಹಾರವನ್ನೆಲ್ಲ ಮುಗಿಸಿ ರಾಜಣ್ಣ ತಂದಿತ್ತ ಊಟ ಮಾಡಿ ಮಲಗಿದೆವು. ಕುದುರೆಮುಖ ಪೀಕ್ ಗೆ ಹೋಗಬೇಕೆನ್ನುವ ನನ್ನ ಆಸೆಗೆ ಚಿನ್ನಯ್ಯ ತಡೆಹಿಡಿದ . ಅವನು ಕೊಡುವ ಕಾರಣ ಮಕ್ಕಳಿಗೆ ಕಡಿದಾದ ಬೆಟ್ಟ ಹತ್ತುವುದು ದುಸ್ತರ ಎಂಬ ಎಚ್ಚರಿಕೆ. ಮುಂದಿನ ಗುರಿ ಕುದುರೆಮುಖ ಪೀಕ್ ಅಕ್ಟೋಬರ್ ೨೦೦೮ ರಲ್ಲಿ. ;-))

ಬೆಳಿಗ್ಗೆ ೭ ಗಂಟೆಗೆಲ್ಲ ಶಿಬಿರದಿಂದ ಹೊರಟು ರಾಜಣ್ಣ, ಚಿನ್ನಯ್ಯ ಮತ್ತು ಎಲ್ಲ ಸಿಬ್ಬಂದಿಗೆ ಟಾಟ ಮಾಡಿ ಮಲ್ಲೇಶ್ವರ ಮಾರ್ಗವಾಗಿ ಕಳಸಕ್ಕೆ ಬಂದು ಅಲ್ಲಿನ ಸಣ್ಣ ಹೋಟೆಲ್ ಒಂದರಲ್ಲಿ ಗಂಟಲಿಗಿಳಿಯದ ಅವನು ಕೊಟ್ಟಿದ್ದ ತಿಂಡಿ ನುಂಗಿ ಹೊರನಾಡಿಗೆ ಬಂದು ಜನರಿಂದ ತುಂಬಿ ತುಳುಕುತ್ತಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮೈಲುದ್ದ ನಿಂತಿದ್ದ ಸರಣಿಯಲ್ಲಿ ದರ್ಶನಕ್ಕೆ ಅವಕಾಶವಿಲ್ಲವೆಂದು ತಿಳಿದು ದೂರದಿಂದಲೆ ದೇವಿಗೆ ನಮಸ್ಕರಿಸಿ ಕಳಸಕ್ಕೆ ಬಂದು ಕಳಸೇಶ್ವರನಿಗೆ ನಮಸ್ಕಾರ ಮಾಡಿ ಬಾಳೆಹೊಳೆ ಬಾಳೆಹೊನ್ನೂರು ಮತ್ತು ಆಲ್ದೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಬಂದು ಹೊಟ್ಟೆ ಹಸಿವನ್ನು ನೀಗಿಸಿಕೊಂಡು ಹಾಸನದ ಮುಖಾಂತರ ನೆಲಮಂಗಲಕ್ಕೆ ೫.೪೫ಕ್ಕೆ ಬಂದರೂ ೮ನೇ ಮೈಲಿಗಲ್ಲಿನ ಸಂಚಾರ ದಟ್ಟಣೆಯ ವರಪ್ರಸಾದದಿಂದ ಬೆಂಗಳೂರಿಗೆ ತಲುಪಿದಾಗ ಸಮಯ ರಾತ್ರಿ ೭.೪೫ಭಗವತಿ ಪ್ರದೇಶವನ್ನು ಕೆಲವೊಮ್ಮೆ ಅತಿಯೆನಿಸುವಷ್ಟು ಬಣ್ಣಿಸಿದ್ದೇನೆ ಎಂದು ನಿಮಗೆ ಅನಿಸಬಹುದು ಆದರೆ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಕುಳಿತು ಅಲ್ಲಿನ ಹಸಿರು ಸೌಂದರ್ಯರಾಶಿಯನ್ನು ನೆನಪಿಸಿಕೊಳ್ಳುತ್ತಿದ್ದರೆ ಅದು ಸ್ವರ್ಗ ಸದೃಶವೆನಿಸದಿರದು. ಅಥವ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಇರಬಹುದೇನೊ. ನೀವು ಒಮ್ಮೆ ಹೋಗಿಬನ್ನಿ ನಿಮ್ಮ ಅನುಭವ ಹೇಳಿ.
ಲೇಖನದ ಬಗ್ಗೆ ಮರೆಯದೆ ನಿಮ್ಮ ಅನಿಸಿಕೆ ತಿಳಿಸಿ.

prasannakannadiga@yahoo.co.in
prasannakannadiga@gmail.com
ಹೆಚ್ಚಿನ ಛಾಯಾಚಿತ್ರಗಳಿಗಾಗಿ http://pics-by-prasanna.fotopic.net ಭೇಟಿಕೊಡಿ
ಕುದುರೆಮುಖಕ್ಕೆ ಭೇಟಿ ಕೊಡುವ ಆಲೋಚನೆ ನಿಮಗಿದ್ದರೆ ಈ ದೂರವಾಣಿ ಸಂಖ್ಯೆಗಳು ನಿಮಗೆ ಸಹಾಯವಾಗಬಲ್ಲುದು.
ಕಾರ್ಕಳ ಉಪ ಅರಣ್ಯ ವಿಭಾಗಧಿಕಾರಿ: ೦೮೨೫೮-೨೩೧೧೮೩
ಭಗವತಿ ಶಿಬಿರದ ಮೇಲ್ವಿಚಾರಕ ಸುನಿಲ್: ೯೪೪೮೦-೦೦೦೯೬

No comments: