Wednesday, August 6, 2008

ಮಂಜು ಮುಸುಕಿದ ಹಾದಿಯಲ್ಲಿ

ಪ್ರವಾಸ ಮುಗಿದ ೩ ವರ್ಷಗಳ ನಂತರ ನೆನಪಿನಲ್ಲಳಿದುಳಿದ ಸಂಗತಿಗಳನ್ನು ಹೆಕ್ಕಿ ತೆಗೆದು ಒಂದು ಲೇಖನ ಬರೆಯುವುದು ಕ್ಲಿಷ್ಟಕರ ಕೆಲಸ. ಅದೂ ಪ್ರವಾಸ ಮುಗಿದ ನಂತರ ಎಷ್ಟೋ ಘಟನೆಗಳು ಮರೆತು ಹೋಗಿರುತ್ತವೆ. ಆಗ ಬರೆಯುವ ಮತ್ತು ಬ್ಲಾಗಿಸುವ ಹವ್ಯಾಸ ಇರಲಿಲ್ಲ ಅದಕ್ಕಾಗಿ ಬರೆದಿರಲಿಲ್ಲ. ಈಗ ಬ್ಲಾಗ್ ಗೆ ಬರೆಯುವುದೆಂದರೆ ಏನೋ ಒಂತರಾ! ಅದಲ್ಲದೆ ಯಾರೂ ನೋಡದ ಬ್ಲಾಗ್ ಗೆ ಒಂದು ಲೇಖನ ತುರುಕಬಹುದಲ್ಲ ಎನ್ನುವ ಸಣ್ಣದೊಂದು ನೆಮ್ಮದಿ. ದಟ್ಸ್ ಕನ್ನಡ.ಕಾಂ ನಲ್ಲಿ ನನ್ನ ಕೆಲವು ಪ್ರವಾಸ ಕಥನಗಳು ಪ್ರಕಟಗೊಂಡ ಮೇಲಂತೂ ಬರೆಯುವ ಹುಮ್ಮಸ್ಸು ಇಮ್ಮಡಿಸಿದೆ. ಅದಕ್ಕಾಗಿ ದಟ್ಸ್ ಕನ್ನಡ ತಂಡಕ್ಕೆ ಅಭಿನಂದನೆಗಳು. ನಾನೂ ಬರೆಯಬಹುದು ಅದನ್ನು ಓದುವವರು ಕೆಲವರಿದ್ದಾರೆ ಎಂದು ನನಗೆ ತೋರಿಸಿಕೊಟ್ಟಿದ್ದೆ ದಟ್ಸ್ ಕನ್ನಡ.ಕಾಂ.
೨೦೦೫ರ ಅಕ್ಟೋಬರ್ ತಿಂಗಳಿರಬೇಕು ದಸರೆಯ ರಜಾದಿನಗಳಲ್ಲಿ ವಾಡಿಕೆಯಂತೆ ಪ್ರವಾಸ ಹೋಗುವ ಕಾರ್ಯಕ್ರಮ. ಅದಕ್ಕಾಗಿ ಆಯ್ದು ಕೊಂಡ ಪ್ರದೇಶಗಳ ಪರಿಚಯವಿದ್ದ ನನ್ನ ಸ್ನೇಹಿತ, ಮಂಜೇಗೌಡ ತನ್ನಲ್ಲಿರುವ ಎಲ್ಲ ಮಾಹಿತಿಗಳನ್ನು ಅಚ್ಚುಕಟ್ಟಾಗಿ ನನಗೆ ವಿವರಿಸಿ ಆ ಪ್ರದೇಶಗಳಿಗೆ ತಲುಪುವುದಕ್ಕಾಗಿ ರಸ್ತೆಯ ಸ್ಥೂಲ ನಕ್ಷೆಯೊಂದನ್ನು ಸಿದ್ಧ ಮಾಡಿ ಕೊಟ್ಟದ್ದು ಹೆಚ್ಚು ಅನುಕೂಲವಾಯಿತು. ಸರಿ ಚಾರ್ಮಡಿ ಘಟ್ಟ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿ ಬರುವುದೆಂದು (ವಾಹನದಲ್ಲಿ ಮಾತ್ರ) ನಿರ್ಧರಿಸಿದೆವು. ಪ್ರತಿ ಸಲದಂತೆ ಶುಕ್ರವಾರದಂದು ನಮ್ಮ ಪ್ರಯಾಣ ನನ್ನ ಅಚ್ಚುಮೆಚ್ಚಿನ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ, ಕರಡಿಗುಚ್ಚಮ್ಮ ದೇವಸ್ಥಾನದ ಆವರಣದಲ್ಲಿನ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಹಾಸನದ ಕಡೆ ಹೊರಟೆವು. ಹಾಸನದಲ್ಲಿ ಊಟ ಮುಗಿಸಿ ಬೇಲೂರಿನ ಹತ್ತಿರ ಬಂದಾಗ ಈ ಬಾರಿ ಬೇಲೂರಿನಲ್ಲಿರುವ ನನ್ನ ಗೆಳತಿಯನ್ನು ಭೇಟಿ ಮಾಡೋಣ ಎಂದು ತಿಳಿಸಿದವನಿಗೆ ಎದುರಾದದ್ದು ಹೆಂಡತಿಯ ಕೆಂಗಣ್ಣ ನೋಟ. ಅದಕ್ಕುತ್ತರವಾಗಿ ಕಿರುನಗೆಯೊಂದನ್ನು ಬೀರಿ ವಾಹನವನ್ನು ಎಡಗಡೆಗೆ ತಿರುಗಿಸಿದೆ. ನೇರವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ನಡೆದೆವು. ಗೆಳತಿ ಮನೆ ಅಂತ ಹೇಳಿ ದೇವಸ್ಥಾನಕ್ಕೆ ಕರ್ಕೊಂಡು ಬಂದ್ರಲ್ಲ ಎನ್ನುವ ಕಳವಳ ತುಂಬಿದ ಪ್ರಶ್ನೆಗೆ ನಗೆಯ ಉತ್ತರವನ್ನಷ್ಟೆ ಕೊಟ್ಟು ಮುಂದೆ ನಡೆದೆ. ಎಲ್ಲ ಕವಿಗಳಿಂದ ಹಾಡಿ ಹೊಗಳಿಸಿಕೊಂಡಿರುವ ವಿಶ್ವವಿಖ್ಯಾತ ಬೇಲೂರಿನ ಶಿಲ್ಪಕಲೆಯನ್ನು ಬಣ್ಣಿಸಲು ಖಂಡಿತ ನಾನು ಅರ್ಹನಲ್ಲ. ಅದು ನನ್ನಿಂದ ಸಾಧ್ಯವೂ ಇಲ್ಲ. ದೇವಸ್ಥಾನದ ಒಳ ಹೊಕ್ಕು ಚೆನ್ನಕೇಶವನಿಗೊಂದು ನಮಸ್ಕಾರ ಹಾಕಿ, ದೇವಸ್ಥಾನದ ಛಾವಣಿಯಲ್ಲಿ ಕನ್ನಡಿ ಹಿಡಿದು ನಿಂತಿದ್ದ ನನ್ನ ಗೆಳತಿಯನ್ನು ;-) ನನ್ನ ಪತ್ನಿಗೆ ಪರಿಚಯಿಸಿದೆ. ನನ್ನ ಈ ಕ್ರೂರ ಹಾಸ್ಯಕ್ಕೆ ತಲೆ ಚಚ್ಚಿಕೊಂಡು ನಕ್ಕು ಸುಮ್ಮನಾದರೂ ಸಣ್ಣದೊಂದು ನಿಟ್ಟುಸಿರು ನನ್ನ ಗಮನಕ್ಕೆ ಬಾರದೆ ಹೋಗಲಿಲ್ಲ. ದೇವಸ್ಥಾನವನ್ನು ಸಂಪೂರ್ಣವಾಗಿ ವೀಕ್ಷಿಸಿ ಹೊರ ಬರುವ ಸಮಯಕ್ಕಾಗಲೆ ಸಂಜೆಯಾಗಿತ್ತು. ಈಗ ರಾತ್ರಿ ಉಳಿದುಕೊಳ್ಳುವ ಸ್ಥಳವನ್ನು ನಿರ್ಧರಿಸ ಬೇಕಿತ್ತು. ಚಿಕ್ಕಮಗಳೂರಿಗೆ ಹೋಗುವ ಮನಸ್ಸಾದರೂ ನಾವು ಕ್ರಮಿಸಬೇಕಾದ ದಾರಿಯಿಂದ (ಮುಡಿಗೆರೆ ಮತ್ತು ಚಾರ್ಮಡಿ) ಬೇರೊಂದು ದಿಕ್ಕಿನಲ್ಲಿ ದೂರ ಹೋಗಬೇಕಿತ್ತು. ಇದ್ಯಾವುದರ ಗೊಡವೆಯೆ ಬೇಡವೆಂದು ನಮ್ಮ ತಂದೆಯ ತಂಗಿ(ನನ್ನ ಅತ್ತೆ) ಮನೆಯಲ್ಲಿ ತಂಗಿದೆವು.
ಶನಿವಾರ ಬೆಳಿಗೆ ೬ ಗಂಟೆಗೆ ಹಾವಿನಂತೆ ಮಲಗಿರುವ ಮಳೆನಾಡಿನ ರಸ್ತೆಯಲ್ಲಿ ಮುಡಿಗೆರೆ ಕಡೆಗೆ ನಮ್ಮ ವಾಹನದ ಓಟ. ಮುಡಿಗೆರೆಗೆ ಹೋಗುವ ಅವಶ್ಯಕತೆಯಿಲ್ಲದಿದ್ದರೂ, ಉಪಹಾರಕ್ಕಾಗಿ ಹೋಗಲೇಬೇಕಾಯಿತು. ಉಪಹಾರ ಮುಗಿಸಿ ಕಾರಿಗೂ ಹೊಟ್ಟೆ ತುಂಬಿಸಿ ಚಾರ್ಮಡಿಯ ಕಡೆ ಪ್ರಯಾಣ ಮುಂದುವರೆಯಿತು. ಮಂಜು ಮುಸುಕಿದ್ದ ಹಾದಿಯಲ್ಲಿ ಹಿತಮಿತವಾದ ಚಳಿಯಲ್ಲಿ ವಾಹನ ಮುಂದೋಡುತ್ತಿದ್ದರೆ ದಾರಿ ಸವೆದ ಅನುಭವವೇ ಆಗುವುದಿಲ್ಲ. ಸ್ವಲ್ಪ ಸಮಯದ ನಂತರ ಘಟ್ಟ ಪ್ರದೇಶ ಒಮ್ಮೆಲೆ ತೆರೆದು ಕೊಳ್ಳಲಾರಂಭಿಸಿತು. ಸುಮಾರು ೫-೬ ಕಿ.ಮೀ ಕ್ರಮಿಸಿದ ನಂತರ ರಸ್ತೆಯ ಪಕ್ಕದಲ್ಲಿ ಸಣ್ಣ ಮೆಟ್ಟಿಲುಗಳಂತಿದ್ದ ಬಂಡೆಯ ಮೇಲಿಂದ ಹರಿಯುತ್ತಿದ್ದ ಸ್ವಲ್ಪ ದೊಡ್ಡದಾದ ಝರಿ ನನ್ನನ್ನು ವಾಹನ ನಿಲ್ಲಿಸುವಂತೆ ಪ್ರೇರೇಪಿಸಿತು. ಅದಕ್ಕಾಗಿಯೇ ಅಲ್ಲವೆ ನಾವು ಬೆಂಗಳೂರಿಗರು ವಾರಾಂತ್ಯದಲ್ಲಿ ಮನೆ ಬಿಟ್ಟು ಓಡುವುದು. ಹೆಚ್ಚೇನು ಯೋಚಿಸದೆ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ನೇರವಾಗಿ ಆ ಜಲಪಾತದ ಕಡೆಗೆ ನಡೆದೆವು. ಹೆಚ್ಚೇನು ಕಡಿದಾಗಿಲ್ಲದ ಬಂಡೆಯ ಮೇಲೆ ಹರಿಯುವ ನೀರು ಜಲಪಾತದಂತೆ ಭಾಸವಾಗುತ್ತದೆ. ಆದರೆ ನಿರಾಸೆ ಉಂಟು ಮಾಡದೆ ಮನಸ್ಸಿಗೆ ಮುದ ನೀಡುವುದು ಖಚಿತ. ಇದೇ ದಾರಿಯಲ್ಲಿ ಬಂದ ಸ್ಥಳೀಯರ ಗುಂಪು, ಇದಕ್ಕೆ ಆಲೇಖಾನ್ ಜಲಪಾತವೆಂದು ತಿಳಿಸಿತು. ಮಗನಿಗಂತೂ ಖುಷಿಯೋ ಖುಷಿ. ಸುಮಾರು ಅರ್ಧ ಗಂಟೆಯ ನಂತರ ಅಲ್ಲಿಂದ ಹೊರಟೆವು.
ಕಣಿವೆ ಇಳಿಯಲು ಆರಂಭಿಸುತ್ತಿದ್ದಂತೆ ಕಾಣಸಿಗುವ ಬಂಗಲೆಯೊಂದು ಗಮನ ಸೆಳೆಯಿತು. ಅದೇನು ಎಂದು ಒಮ್ಮೆ ನೋಡಿ ಬಿಡುವ ಎಂದು ತೆರಳಿದವರಿಗೆ ಸಿಕ್ಕದ್ದು ಒಂದು ಅತಿಥಿಗೃಹ. ರಸ್ತೆಯ ಬದಿಯಲ್ಲಿ ನಿರ್ಜನ ಕಾಡಿನ ನಡುವೆ ಏಕಾಂಗಿಯಾಗಿ ನಿಂತಿರುವ ಬಂಗಲೆ. ಮೌನ ಕಣಿವೆಯ ನಿಶ್ಯಬ್ಧತೆಯಲ್ಲಿ ಏಕಾಂಗಿತನವನ್ನು ಆಸ್ವಾದಿಸುವವರಿಗೆ ಹೇಳಿ ಮಾಡಿಸಿದಂತಹ ಜಾಗ. ಅದರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನಕ್ಕೆ ಅಲ್ಲಿದ್ದ ಜನ ಸ್ಪಂಧಿಸಲಿಲ್ಲ ಅದೇನು ದೊಡ್ಡ ವಿಷಯವಲ್ಲವೆಂಬಂತೆ ಅಲ್ಲಿಂದ ಹೊರಟು ಬಂದೆ. ಆದರೆ ಹಸಿರು ಕಣಿವೆಯ ಮಧ್ಯೆ ನಿಂತಿರುವ ಮಲಯ ಮಾರುತ ಅತಿಥಿಗೃಹದಲ್ಲಿ ಒಮ್ಮೆ ಉಳಿದು ಅಲ್ಲಿನ ಸೌಂದರ್ಯವನ್ನು ಸವಿಯಬೇಕೆನ್ನುವ ನನ್ನ ಆಸೆ ಇನ್ನೂ ಹಾಗೆಯೆ ಉಳಿದಿದೆ.
ಅಲ್ಲಿಂದ ಮುಂದೆ ಚಾರ್ಮಡಿ ಘಟ್ಟಗಳ ನಡುವೆ ಬಂದು ನಿಂತಿತು ನನ್ನ ವಾಹನ. ಅಬ್ಬ!! ಮಂಜು ಮುಸುಕಿದ ಸುಂದರ ಹಸಿರು ಕಣಿವೆಗಳು ಬೆಟ್ಟಕ್ಕೆ ಬೆಣ್ಣೆ ಬಳಿದಂತಿರುವ ಚಿತ್ರ ಬರೆದಿರುವ ಮೋಡಗಳು. ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲಿನ ಸೌಂದರ್ಯವನ್ನೆ ಆಸ್ವಾದಿಸುತ್ತಾ ಅಲ್ಲೆ ಉಳಿದುಬಿಡೋಣವೆನ್ನುತ್ತದೆ ಮನಸ್ಸು. ಆದರೆ ವಾಸ್ತವ ನಮ್ಮನ್ನು ಎಚ್ಚರಿಸಿ ಮುಂದೆ ಹೋಗಲು ಸೂಚನೆ ಕೊಡುತ್ತದೆ.
ಅಲ್ಲಲ್ಲಿ ಸಿಗುವ ನೀರಿನ ಝರಿಗಳು ರಸ್ತೆಯನ್ನು ತೇವಗೊಳಿಸಿ ಕಣಿವೆಗೆ ಇಳಿದು ಹೋಗುತ್ತವೆ. ಮಳೆಗಾಲ ಈಗಿನ್ನು ಮುಗಿದಿದ್ದರಿಂದ ಸಣ್ಣ ಝರಿಗಳಿಗೇನು ಕೊರತೆಯಿರಲಿಲ್ಲ. ಎಲ್ಲ ಝರಿಗಳ ಬಳಿ ನಿಂತು ಹೊರಡುವುದಾದರೆ ಬಹುಶಃ ನಮ್ಮ ಗುರಿಯಾದ ಧರ್ಮಸ್ಥಳವನ್ನು ತಲುಪಲು ೫-೬ ಗಂಟೆಯೇ ಬೇಕಾಗಬಹುದು. ರಸ್ತೆ ಕಿರಿದಾದರೂ ಉತ್ತಮವಾಗಿದ್ದರಿಂದ ತೊಂದರೆಯಿರಲಿಲ್ಲ. ಉತ್ತರ ಕರ್ನಾಟಕದಿಂದ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದಾರಿಯಿದಾಗಿದೆ. ದಾರಿಯುದ್ದಕ್ಕೂ ಸಿಗುವ ವಿವಿಧ ರೀತಿಯ ಸಣ್ಣ ಪ್ರಾಣಿ ಪಕ್ಷಿ ಕಾಡುಕೋಳಿಗಳನ್ನು ಅಲ್ಲಿನ ಸೌಂದರ್ಯವನ್ನು ತನ್ನ ಬೆರಗುಗಣ್ಣಿನಿಂದ ನೋಡುತ್ತಿದ್ದ ಅಮಿತ್ ಅದೃಷ್ಠವಂತನಲ್ಲವೆ?
ಕೊನೆಗೊಮ್ಮೆ ಘಟ್ಟವನ್ನು ಇಳಿದಾಗ ಎದುರಾದದ್ದು ಕೆಟ್ಟು ನಿಂತ ರಸ್ತೆ. ಅಬ್ಬ ಇದೇನು ರಸ್ತೆಯೆ? ಅಥವಾ ಇಲ್ಲೊಂದು ರಸ್ತೆಯಿತ್ತೆ? ಎನ್ನುವಷ್ಟು ಹಾಳಾಗಿ ಹೋಗಿತ್ತು. ಎದುರಿಗೆ ಬರುವ ರಾಕ್ಷಸಾಕಾರದ ಲಾರಿಗಳಿಗೆ ದಾರಿ ಬಿಡಲೂ ಆಗದ ಕೆಟ್ಟ ರಸ್ತೆಯಲ್ಲಿ ಅದು ಹೇಗೆ ವಾಹನ ಚಲಾಯಿಸಿದೆನೋ ನನಗೇ ಗೊತ್ತಿಲ್ಲ. ಅಲ್ಲಿನ ಮನಮೋಹಕ ಸುಂದರ ಪರಿಸರಕ್ಕೆ ದೃಷ್ಠಿ ಬೊಟ್ಟಿನಂತಿತ್ತು ಆ ರಸ್ತೆ. ರಸ್ತೆಯ ಪಕ್ಕದಲ್ಲಿ ಹರಿಯುತ್ತಿದ್ದ ತೊರೆಯೊಂದರಲ್ಲಿ ಲಾರಿ ಚಾಲಕರುಗಳು ತಮ್ಮ ವಾಹನವನ್ನು ತೊಳೆಯುತ್ತಾ ಪರಿಸರ ಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ಅಲ್ಲಿ ದಯಪಾಲಿಸುತ್ತಿದ್ದರು.
ಕೊಟ್ಟಿಗೆಹಾರ ಉಜಿರೆ ಮುಖೇನ ಧರ್ಮಸ್ಥಳವನ್ನು ತಲುಪಿ ಮಂಜುನಾಥನ ದರ್ಶನ ಮಾಡಿ ಗುಂಡ್ಯ ಮುಖಾಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿ ಅಲ್ಲಿ ದೇವರ ದರ್ಶನದ ನಂತರ ಶೃಂಗೇರಿ ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ ದೇವಸ್ಥಾನದ ವಸತಿಗೃಹವೊಂದನ್ನು ಪಡೆದು ನಿದ್ದೆಗೆ ಶರಣು. ರಾತ್ರಿ ದೇವಸ್ಥಾನದ ಭೋಜನಾಲಯದಲ್ಲಿ ಊಟ ಮುಗಿಸಿದೆವು. ಪಕ್ಕದಲ್ಲಿದ್ದ ಅಂಗಡಿಯಲ್ಲಿ ಕುಮಾರ ಪರ್ವತದ ಭಟ್ಟರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡೆ. ಮಳೆ ಬರುವ ಸೂಚನೆಗಳು ದಟ್ಟವಾಗತೊಡಗಿದ್ದರಿಂದ ವಸತಿಗೃಹ ಸೇರಿಕೊಂಡು ನಿದ್ದೆಗೆ ಶರಣು.
ಭಾನುವಾರ ಬೆಳಿಗ್ಗೆ ಕುಮಾರಧಾರಕ್ಕೆ ಸ್ನಾನಕ್ಕೆ ಹೋಗುವ ಮನಸ್ಸಾದರೂ ನೀರಿನ ಹರಿವು ಹೆಚ್ಚಿದ್ದರಿಂದ ಮತ್ತು ನಾವು ಬೇಗನೆ ಹೊರಡಬೇಕಿದ್ದರಿಂದ ಆ ಯೋಜನೆಯನ್ನು ಬಿಟ್ಟು ಬೆಳಿಗ್ಗೆ ೬ ಗಂಟೆಗೆ ವಸತಿಗೃಹದಿಂದ ಬೆಂಗಳೂರಿನ ಕಡೆಗೆ ಹೊರಟೆವು.
ನೇರವಾಗಿ ಗುಂಡ್ಯದ ಮುಖಾಂತರ ರಾ.ಹೆ. ೪೮ ರಲ್ಲಿ ಪಯಣಿಸದೆ ಮತ್ತೊಂದು ಹಸಿರು ತುಂಬಿದ ಚಿಕ್ಕ ರಸ್ತೆಯಲ್ಲಿ ಕ್ರಮಿಸುವುದು ನನ್ನ ಯೋಜನೆ. ಅದೆ ಬಿಸ್ಲೆ ಘಟ್ಟದ ರಸ್ತೆ ಸುಬ್ರಹ್ಮಣ್ಯದಿಂದ ಸ್ವಲ್ಪ ದೂರ ಕ್ರಮಿಸಿದ ಮೇಲೆ ಸಿಗುವ ಕೈಮರದ ಬಳಿ ಎಡಗಡೆಗೆ ತಿರುಗದೆ ಬಲಕ್ಕೆ ತಿರುಗಿದರೆ ಆ ರಸ್ತೆ ನಮ್ಮನ್ನು ಬಿಸ್ಲೆ ಘಟ್ಟದ ಮುಖೇನ ಸಕಲೇಶಲೇಶಪುರ ಕ್ಕೆ ತಲುಪಿಸುತ್ತದೆ. ಇದರ ಬಗ್ಗೆ ಮಾಹಿತಿಯಿತ್ತಿದ್ದಕ್ಕೆ ವಂದನೆಗಳು ಮಂಜೇಗೌಡ. ಕೈಮರದ ಬಳಿ ಬಂದಾಗ ನಮ್ಮ ದಾರಿ ಸರಿಯಿದೆಯೆಂದು ನಿಶ್ಚಯಿಸಿಕೊಳ್ಳಲು ಯಾರನ್ನಾದರೂ ವಿಚಾರಿಸೋಣವೆಂದು ಅರ್ಧ ಗಂಟೆ ಕಾಯ್ದರೂ ಯಾರೂ ಸಿಗುವ ಲಕ್ಷಣಗಳು ಗೋಚರಿಸಲಿಲ್ಲ. ಏನಾದರಾಗಲಿ ಎಂದು ಅಲ್ಲಿ ಬಲಕ್ಕೆ ತಿರುಗಿ ೨-೩ ಕಿ.ಮೀ ನಂತರ ಎದುರಿಗೆ ಸಿಕ್ಕ ವ್ಯಕ್ತಿಯಿಂದ ನಮ್ಮ ದಾರಿಯಿದೆಯೆಂದು ತಿಳಿದುಕೊಂಡೆವು. ಆತನ ಪ್ರಕಾರ ಈ ದಾರಿಯಲ್ಲಿ ಹೋಗುವುದು ಸೂಕ್ತವಲ್ಲ ಕಾರಣ ಹಿಂದಿನ ರಾತ್ರಿ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿರುವ ಸಂಭವ ಹೆಚ್ಚು ಮತ್ತು ನಾವು ಪಯಣಿಸುವಾಗಲೂ ಭೂಕುಸಿತ ಉಂಟಾಗುವ ಸಂಭವವಿರುವುದರಿಂದ ಮತ್ತು ಹಾಗೇನಾದರೂ ಆದರೆ ನೀವು ಮುಂದೆ ಹೋಗಲೂ ಆಗದೆ ಹಿಂದಿರುಗಲೂ ಆಗದೆ ಮಧ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂದರ್ಭ ಎದುರಾಗುತ್ತದೆಂದು ವಿವರಿಸಿ ತನ್ನ ಪಾಡಿಗೆ ತಾನು ಹೋಗಿಬಿಟ್ಟ. ಮತ್ತೊಮ್ಮೆ ನನ್ನ ಭಂಡ (ಭಯಕ್ಕಿಂತ ಭಂಡ ಧೈರ್ಯ ಮೇಲು J ಎಂದು ಎಲ್ಲೋ ಓದಿದ ನೆನಪು) ಧೈರ್ಯವನ್ನು ಮುಂದೆ ಮಾಡಿಕೊಂಡು ಅದೇ ದಾರಿಯಲ್ಲಿ ಮುಂದುವರೆದಾಗ ಪತ್ನಿ ಪುತ್ರರ ಮುಖದಲ್ಲಿ ಆತಂಕದ ಛಾಯೆ ಇಣುಕುತ್ತಿತ್ತು. ೧-೨ ಕಿ.ಮೀ ನಂತರ ಕಾಣಸಿಗಲು ಆರಂಭಿಸಿದ ಆ ಸುಂದರ ದೃಶ್ಯಗಳು ನನ್ನ ಭಂಡ ಧೈರ್ಯಕ್ಕೆ ಸಂದ ಬೆಲೆ ಎಂಬುದರಲ್ಲಿ ಅನುಮಾನವಿರಲಿಲ್ಲ. ಆ ಸುಂದರ ಪರಿಸರ ಅವರಿಬ್ಬರ ಮುಖದಲ್ಲಿದ್ದ ಆತಂಕವನ್ನು ದೂರ ಮಾಡಿತ್ತು.
ಓಹ್!! ಕಣ್ಣಿಗೆ ರಾಚುವಷ್ಟು ಹಚ್ಚ ಹಸಿರು ದಟ್ಟಕಾಡು. ಅದರ ಮಧ್ಯೆ ಹದಗೆಟ್ಟು ಹೋಗಿದ್ದ ರಸ್ತೆ ಎಲ್ಲೋ ರಭಸದಿಂದ ಬೀಳುತ್ತಿದ್ದ ನೀರಿನ ಶಬ್ಧ. ೧೦-೧೫ ಅಡಿಗಳಷ್ಟು ದೂರವೂ ಕಾಣಿಸಿದಂತೆ ಮುಸುಕಿರುವ ದಟ್ಟ ಮಂಜು. ವರ್ಣಿಸಲು ಹೊರಟರೆ ಓದುಗನಿಗೆ ಈರ್ಷ್ಯೆ ಉಂಟಾಗುವಷ್ಟು ಸುಂದರ ಪರಿಸರ. ಬಹುಶಃ ನಾನು ಇಲ್ಲಿ ಏನೇ ವರ್ಣಿಸಿದರೂ ಅಲ್ಲಿ ಭೇಟಿ ನೀಡಿದರೆ ಸಿಗುವ ಆನಂದದ ಕನಿಷ್ಠ ಹತ್ತಿರವೂ ಬರುವುದಿಲ್ಲ. ಛಾಯಾಚಿತ್ರಗಳಾಗಲಿ ಚಿತ್ರೀಕರಿಸಿದ ದೃಶ್ಯಗಳಾಗಲಿ ಅಲ್ಲಿನ ಸೌಂದರ್ಯವನ್ನು ಪ್ರತಿಶತ ೧೦ ರಷ್ಟನ್ನು ತಲುಪಿಸುವಲ್ಲಿ ಯಶಸ್ವಿಯಾಗಲಾರವು. ಅದರ ಮಧ್ಯ ಅಲ್ಲಲ್ಲಿ ೨ ಅಡಿಗಳಿಗೂ ಮೀರಿ ದೊಡ್ಡದಾದ ಹಳ್ಳ ತುಂಬಿದ ಚಿಕ್ಕ ರಸ್ತೆಯಾದರೂ ಹೆಚ್ಚು ಬಳಕೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿತ್ತು.. ಆ ದಾರಿಹೋಕ ಹೇಳಿದಂತೆ ಭೂಕುಸಿತ ಉಂಟಾದ ಲಕ್ಷಣಗಳಿದ್ದರೂ ನಮ ಪ್ರಯಾಣಕ್ಕೆ ತೊಂದರೆಯಾಗುವಂತೆ ಎಲ್ಲೂ ರಸ್ತೆ ಮುಚ್ಚಿಹೋಗಿರಲಿಲ್ಲ. ದಾರಿಯುದ್ದಕ್ಕೂ ಸಿಗುವ ಸಣ್ಣ ಝರಿಗಳಲ್ಲಿ ನಿಂತು ದೃಶ್ಯಗಳನ್ನು ಸೆರೆ ಹಿಡಿಯುತ್ತಾ ನಮ್ಮ ಪ್ರಯಾಣ ಮುಂದುವರೆದು ಸೇತುವೆಯಂದೊರ ಮೇಲೆ ಬಂದು ನಿಂತಿತು. ಹಾಲಿನ ಬೆಳ್ನೊರೆಯಂತೆ ಕಾಣುವ ಜಲಧಾರೆ. ರಭಸವಾಗಿ ಬೆಟ್ಟದಿಂದ ಇಳಿದು ಬರುತ್ತಿರುವ ದೃಶ್ಯ ನೀರಿನ ಭೋರ್ಗರೆತ ಏನೆಂದು ಹೇಳುವುದು? ಅಲ್ಲಿ ನಿಂತೆ ಅದನ್ನು ಸವಿಯಬೇಕಷ್ಟೆ. ನೀರಿಗಿಳಿಯುವ ಮನಸ್ಸಾದರೂ ಸಮಯದ ಅಭಾವದಿಂದ ಮತ್ತು ನೀರಿನ ಭೋರ್ಗರೆತ ಅದಕ್ಕೆ ಆಸ್ಪದವೀಯಲಿಲ್ಲ. ಹೆಜ್ಜೆ ಹೆಜ್ಜೆಗೂ ಸಿಗುವ ಕಣಿವೆಯ ದೃಶ್ಯ ಮತ್ತು ಕಣಿವೆಯ ತಳಭಾಗವನ್ನು ಮುಟ್ಟುವಂತಿರುವ ಮೋಡಗಳು ತುಂಬಾ ಕಾಲ ನೆನಪಿನಲ್ಲಿರುತ್ತವೆ. ಮಂಜು ಮುಸುಕಿದ ದಾರಿಯಲ್ಲಿ ವಾಹನ ಚಾಲನೆ ಮುದ ನೀಡುತ್ತದೆ. ಸ್ವಲ್ಪ ಸಮಯದ ನಂತರ ಒಲ್ಲದ ಮನಸ್ಸಿನಿಂದ ಹೊರಟು ಬಿಸ್ಲೆ ಸುಂದರ ಸ್ಥಳಕ್ಕೆ ಬಂದೆವು ಹೆಸರಿಗೆ ತಕ್ಕಂತೆ ಇತ್ತು ಆ ಸ್ಥಳ.
ಅರಣ್ಯ ಇಲಾಖೆ ನಿರ್ಮಿಸಿರುವ ವೀಕ್ಷಣಾ ಗೋಪುರಕ್ಕೆ ನಡೆದು ಹೋಗಿ ಗೋಪುರದಿಂದ ಕಾಣೂವ ಕುಮಾರ ಪರ್ವತ ಮತ್ತು ಪುಷ್ಪಗಿರಿ ಶ್ರೇಣಿಯ ಕಣಿವೆ ದೃಶ್ಯವನ್ನು ಕಣ್ಣಲ್ಲಿ ತುಂಬಿಕೊಂಡು ನಮ್ಮ ಪ್ರಯಾಣ ಮುಂದುವರೆದು ಕೂಡ್ರಸ್ತೆ ಮುಖಾಂತರ ಪುಷ್ಪಗಿರಿಯ ತಳದಲ್ಲಿ ಅಪೂರ್ಣ ಸೇತುವೆಯ ಬಳಿ ಬಂದು ನಿಂತೆವು. ಮಲ್ಲಳ್ಳ್ಳಿ ಜಲಪಾತ ಇಲ್ಲಿಂದ ಹತ್ತಿರವಿತ್ತು, ಇನ್ನು ಮುಂದೆ ಮೇಲಕ್ಕೆ ಕಾಲ್ನಡಿಗೆಯಲ್ಲಿ ೨-೩ ಕಿ.ಮೀ ಕ್ರಮಿಸಬೇಕಿತ್ತು. ಬೇಸಿಗೆಯಲ್ಲಿ ಇನ್ನೂ ೧ ಕಿ.ಮೀಗಳಷ್ಟು ವಾಹನದಲ್ಲಿ ಕ್ರಮಿಸಬಹುದು. ನೀರಿನ ಹರಿವು ಹೆಚ್ಚಿದ್ದರಿಂದ ನನಗೆ ಅದು ಸಾಧ್ಯವಾಗಲಿಲ್ಲ. ಇಲ್ಲಿ ಮೇಲಿರುವ ಶಿವ ದೇವಾಲಯಕ್ಕೆ ಬರುವವರಿದ್ದರಿಂದ ದಾರಿ ತಪ್ಪುವ ಆತಂಕವಿರಲಿಲ್ಲ. ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ನಡೆಯಲು ಆರಂಭಿಸುತ್ತಿದ್ದಂತೆ ವರುಣ ತನ್ನ ವರಸೆ ತೋರಿಸಲು ಪ್ರಾರಂಭಿಸಿದ. ಮಳೆನಾಡಿನ ಮಳೆಯ ಅನುಭವ ಈಗಾಗಲೆ ಇದ್ದುದರಿಂದ ಸ್ವಲ್ಪ ದೂರದಲ್ಲಿ ಕಾಣಿಸಿದ ಬಾಗಿಲು ಮುಚ್ಚಿದ ಮನೆಯ ಮುಂದೆ ನಿಂತು ಬಿರು ಮಳೆಯನ್ನೆ ನೋಡುತ್ತಾ ನಿಂತು ಕಾಲ ತಳ್ಳಿದೆವು. ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಭೋರೆಂದು ಸುರಿದ ಮಳೆ ನಮ್ಮ ಸಮಯವನ್ನು ನುಂಗಿ ಹಾಕಿತ್ತಲ್ಲದೆ, ರಸ್ತೆ ನಿರ್ಮಾಣಕ್ಕೆಂದು ಹರಡಿದ್ದ ಕಲ್ಲುಗಳ ಮಧ್ಯೆ ನಡೆದು ಹೋಗುವುದನ್ನು ದುಸ್ತರಗೊಳಿಸಿತ್ತು. ಅಲ್ಲಲ್ಲಿ ಜಾರುತ್ತ ಕೊನೆಗೊಮ್ಮೆ ದೇವಸ್ಥಾನವನ್ನು ತಲುಪಿದೆವು. ಪುಷ್ಪಗಿರಿಯನ್ನು ಪೂರ್ಣವಾಗಿ ಚಾರಣ ಮಾಡುವ ಉದ್ದೇಶದಿಂದ ಬಂದಿದ್ದ ಬೆಂಗಳೂರಿನ ತಂಡವೊಂದರ ಅನುಭವಗಳನ್ನು ಕೇಳುತ್ತ ಜಿಗಣೆ ಆನೆಗಳ ಕಥೆ ರಾತ್ರಿಯೆಲ್ಲ ಕತ್ತಲಲ್ಲಿ ಮೇಣದಬತ್ತಿಯೂ ಇಲ್ಲದೆ ರಾತ್ರಿ ಕಳೆದ ಅವರ ಕರುಣಾಜನಕ ಕಥೆ ಕುತೂಹಲ. ಜಿಗಣೆಗಳು ಅವರೆಲ್ಲರ ಕಾಲಿನಲ್ಲಿ ಬಿಟ್ಟಿದ್ದ ರಕ್ತದ ಕಲೆಗಳು ಅವರ ರೋಚಕ ಕಥೆಗೆ ಸಾಕ್ಷಿಗಳಾಗಿದ್ದವು. ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಅಷ್ಟರಲ್ಲಾಗಲೆ ವರುಣ ಮತ್ತೊಂದು ಸುತ್ತು ಆರ್ಭಟಿಸಿದ. ಶಿವ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಿ ಚಾರಣ ತಂಡಕ್ಕೆ ವಂದಿಸಿ ನನ್ನ ವಾಹನವಿದ್ದ ಜಾಗಕ್ಕೆ ಹಿಂದಿರುಗಿದಾಗ ನನಗೊಂದು ಆಘಾತ ಕಾದಿತ್ತು. ಪುಷ್ಪಗಿರಿ ಸೇರುವ ತವಕದಲ್ಲಿ ಅತ್ಯಂತ ಕಡಿದಾದ ರಸ್ತೆಯ ಭಾಗವನ್ನು ಇಳಿದು ಬಂದಿದ್ದೆ. ಆದರೆ ಈಗ ಅದನ್ನು ಹತ್ತಲು ಸಾಧ್ಯವಾಗಲಿಲ್ಲ. ಅಲ್ಲಿರುವ ೩-೪ ಜನ ತಮ್ಮೆಲ್ಲ ಶಕ್ತಿ ಬಿಟ್ಟು ತಳ್ಳಿದರೂ ಅರ್ಧ ದಾರಿ ಕ್ರಮಿಸಿ ನನ್ನ ವಾಹನ ನಿಂತು ಹೋಗುತ್ತಿತ್ತು. ಸಮಯ ಓಡಿ ಹೋಗುತ್ತಿತ್ತು. ಇದೆಲ್ಲದರ ನಡುವೆ ಮತ್ತೆ ಮಳೆ ಸುರಿಯಲಾರಂಭಿಸಿತು. ಈಗಾಗಲೆ ಸುರಿದ ಮಳೆಯಿಂದ ನನ್ನ ವಾಹನ ಮೇಲೇರಲಾರದೆ ನಿರ್ಮಾಣ ಹಂತದಲ್ಲಿ ಹರಡಿದ್ದ ಕಲ್ಲುದುಂಡಿಗಳನ್ನು ಹತ್ತಲಾರದೆ ವಾಹನದ ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಮಳೆಯಿಂದ ಒದ್ದೆಯಾಗಿ ಸಡಿಲಗೊಂಡಿದ್ದ ಮಣ್ಣು ಜಾರಿ ಚಕ್ರ ಸಿಕ್ಕಿಕೊಳ್ಳುತ್ತಿತ್ತು. ಎಷ್ಟೆ ಪ್ರಯತ್ನ ಪಟ್ಟರೂ ಅರ್ಧಕ್ಕೆ ಏರುತ್ತಿದ್ದ ಕಾರು ಅಲ್ಲೆ ನಿಂತು ಬಿಡುತ್ತಿತ್ತು. ಅಲ್ಲಿದ್ದ ಜನ ಹತ್ತಿರದ ಎಸ್ಟೇಟ್ ನಲ್ಲಿರುವ ಜೀಪನ್ನು ತಂದು ಎಳೆಸುವಂತೆ ಸಲಹೆಯಿತ್ತರು. ಅದಕ್ಕಾದರೂ ೫-೬ ಕಿ.ಮೀ ನಡೆದು ಹೋಗಬೇಕಿತ್ತು.
ಆ ಸಮಯಕ್ಕೆ ಚಾರಣಕ್ಕೆಂದು ಬಂದಿದ್ದ ತಂಡ ಅಲ್ಲಿದ್ದ ಹೊಳೆಯಲ್ಲಿ ನೀರಾಟವಾಡುತ್ತಿದ್ದರು. ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ ಸಹಾಯಕ್ಕಾಗಿ ವಿನಂತಿಸಿದೆ. ನನ್ನ ಕರೆಗೆ ಸ್ಪಂದಿಸಿದ ಆ ೭-೮ ಜನ ತಮ್ಮ ಸ್ನಾನಾದಿಗಳನ್ನು ಮುಗಿಸಿ ಬಂದು ೩-೪ ಪ್ರಯತ್ನಗಳ ನಂತರ ನನ್ನ ವಾಹನವನ್ನು ಮೇಲೆ ತಂದು ನಿಲ್ಲಿಸಿಸಲು ಯಶಸ್ವಿಯಾದರು. ಅವರೆಲ್ಲರ ಸಹಾಯಕ್ಕೆ ಇಲ್ಲಿ ಧನ್ಯವಾದ ತಿಳಿಸುತ್ತ ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ಅವರನ್ನೆಲ್ಲಾ (ಸುಮಾರು ೧೦ ಜನ) ತುಂಬಿಕೊಂಡು ಸಕಲೇಶಪುರದ ಕಡೆಗೆ ಹೊರಟೆ. ಈಗ ಹೊಟ್ಟೆಯ ಹಸಿವು ನನ್ನ ಗಮನಕ್ಕೆ ಬಂತು. ನಾವು ಇಂದು ಮಧ್ಯಾಹ್ನ ಊಟವೆ ಮಾಡಿಲ್ಲದ್ದು ಅರಿವಿಗೆ ಬಂತು. ನನ್ನ ಮಗನಂತು ಹಸಿವಿನಿಂದ ಬಳಲಿದ್ದ. ಚಾರಣ ತಂಡದವ್ರು ಕೊಟ್ಟ ಕುರುಕಲು ತಿಂಡಿಗಳು ಅವನಿಗೆ ಸ್ವಲ್ಪ ಸಮಾಧಾನ ತಂದಿತು. ಹಳಿಯೊಂದರ ಗೂಡಂಗಡಿಯಲ್ಲಿ ಸಿಕ್ಕ ಬಿಸ್ಖೆಟ್ ಗಳನ್ನೆ ಮುಕ್ಕಿ ಸಕಲೇಶಪುರದಲ್ಲಿ ಆ ಚಾರಣಿಗರನ್ನೆಲ ಇಳಿಸಿ ಮತ್ತೊಮ್ಮೆ ಅವರಿಗೆ ಅವರ ಸಹಾಯಕ್ಕೆ ವಂದಿಸಿ ಹೆದ್ದಾರಿಯ ಪಕ್ಕದಲ್ಲಿದ್ದ ಭೋಜನಗೃಹಕ್ಕೆ ದಾಳಿಯಿಟ್ಟಾಗ ಸಂಜೆ ೫.೦೦ ಗಂಟೆ. ಊಟ ಮುಗಿಸಿ ಹಾಸನದಲ್ಲೊಮ್ಮೆ ಚಹಾ ಸೇವಿಸಿ ಚೆನ್ನರಾಯಪಟ್ಟಣ, ಹಿರಿಸಾವೆ ಬೆಳ್ಳೂರು ಮತ್ತು ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಿದಾಗ ರಾತ್ರಿ೧೦.೩೦
ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ನೋಡುತ್ತಿದ್ದಾಗ ಅರೆರೆ ಹೌದಲ್ಲ ಖಾಲಿಯಿರುವ ನನ್ನ ಬ್ಲಾಗಿಗೆ ತುರುಕಿ ಅದರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡಬಹುದಿತ್ತಲ್ಲ ಎನ್ನುವುದು ಹೊಳೆದ ತಕ್ಷಣವೆ ಗಣಕ ಯಂತ್ರದ ಕೀಲಿಮಣೆ ಹಿಡಿದು ಕುಳಿತೆ ಅದರ ಪ್ರತಿಫಲವೇ ಈ ಲೇಖನ.
ನಿಮ್ಮ ಅನಿಸಿಕೆಗಳನ್ನು ತಿಳಿಸಿ

2 comments:

Aravind GJ said...

ಸೊಗಸಾದ ಲೇಖನ. ಪುಷ್ಪಗಿರಿಯ ಮಣ್ಣು ರಸ್ತೆಯಲ್ಲಿ ಕಾರು ಓಡಿಸುವುದು(ಅದೂ ಮಳೆಗಾಲದಲ್ಲಿ) ಬಾರಿ ಸಾಹಸವೇ ಸರಿ!! ಹೀಗೆ ಬರೆಯುತ್ತಾ ಇರಿ.

prasca said...

ನಮಸ್ಕಾರ ಅರವಿಂದ್,

ಅಯ್ಯೊ ವಾಪಸ್ ಬರುವುದಕ್ಕೆ ಆಗುತ್ತೋ ಇಲ್ವೋ ಅಂತ ಭಯನು ಇತ್ತು. ಏನೇ ಆದ್ರು ಒಂದು ಉತ್ತಮವಾದ ಅನುಭವ.
ಪ್ರಸನ್ನ