Monday, December 29, 2008

ನಿಮ್ಮದು ಸ್ನೇಹವೋ? ಸಂಭಂದವೊ?

ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಆತ್ಮೀಯತೆಯ ಬಳ್ಳಿಯೊಂದು ಟಿಸಿಲೊಡೆದು ಇಬ್ಬರ ನಡುವೆ ಹಬ್ಬಲು ಪ್ರಾರಂಭಿಸುತ್ತದೆ.
ಆರಂಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಸ್ನೇಹ ಕ್ರಮೇಣ ಮನದ ಭಾವನೆಗಳನ್ನು ಕೇಳುವ ಸಂಗಾತಿಯೊಬ್ಬನಿಗಾಗಿ ಅಥವಾ ಒಲುಮೆಯನ್ನು ಹಂಚಿಕೊಳ್ಳುವ ಆಪ್ತ ಮನಸ್ಸಿಗಾಗಿ ಚಡಪಡಿಸತೊಡಗಿತ್ತದೆ. ಅದೆಲ್ಲಿಂದಲೋ ಭಾವನೆಗಳು ಉಕ್ಕಿ ಉಕ್ಕಿ ಬರಲು ಪ್ರಾರಂಭಿಸಿ ಅವನ್ನೆಲ್ಲಾ ಹೇಳಿಕೊಳ್ಳುತ್ತಾ ತನ್ನೊಡಲ ಸಂತಸ ದುಗುಡ-ದುಮ್ಮಾನಗಳನ್ನು ಬರಿದು ಮಾಡಿಕೊಳ್ಳುತ್ತಾನೆ. ಎದುರಿನ ವ್ಯಕ್ತಿಗೂ ಸ್ಪಂದಿಸುವ ಮನಸ್ಥಿತಿ ಇದ್ದರೆ ಸ್ನೇಹದ ಬಳ್ಳಿಗೆ ಆಗ ವಸಂತಕಾಲ.
ನಾವು ಸಾಕಷ್ಟು ಕಾಲ ಇನ್ನೊಬ್ಬ ವ್ಯಕ್ತಿಯೆಡೆಗೆ ಆಕರ್ಷಿತರಾಗುತ್ತೇವೆ. ಪರಸ್ಪರರು ಭಾವನೆಗಳನ್ನು ಹಂಚಿಕೊಳ್ಳುವುದು. ಒಟ್ಟಿಗೆ ಅಡ್ಡಾಡುವುದು, ಕೆಲ ಸಮಯ ಕಾಣದಿದ್ದರೆ ಜೀವ ಚಡಪಡಿಕೆಯಿಂದ ತಲ್ಲಣಿಸಿ ಹೋಗುವುದು. ಇಬ್ಬರ ಉಡುಗೊರೆ ವಿನಿಮಯ ಇವೆಲ್ಲಾ ನಡೆಯುತ್ತ ಸ್ನೇಹದ ಬಳ್ಳಿಯಲ್ಲಿ ಆತ್ಮೀಯತೆ, ಪ್ರೀತಿಯ ಕಾಯಿ ಬಿಟ್ಟು ತನ್ನಷ್ಟಕ್ಕೆ ಬಲಿಯತೊಡಗುತ್ತದೆ.
ಸ್ನೇಹವೆನ್ನುವುದು ಸಮಾನ ಮನಸ್ಕರ ನಡುವೆ ಕುಡಿಯೊಡೆಯುವ ಸಂದರ್ಭದಲ್ಲಿಯೇ ಅಲ್ಲಿ ಲಿಂಗಭೇದ ಮೆಲ್ಲನೆ ತಲೆ ಹಾಕುತ್ತದೆ. ಈ ಸ್ನೇಹ ವಿಶ್ವಾಸಗಳು ಗಂಡು ಹೆಣ್ಣಿನ ನಡುವೆ ಮುಂದುವರಿಯುತ್ತಿದ್ದಂತೆ ಅದೆಲ್ಲಿಂದಲೋ ಸ್ನೇಹದ ನಡುವೆ ಧುತ್ತನೆ ಆಗಮನವಾಗಿ ಬಿಡುವ ಒಂದು "ಭಾವನೆ"ಯಿದೆಯಲ್ಲ ಅದು ಸ್ನೇಹವನ್ನು ಉಳಿಸಲೂ ಬಹುದು ಇಲ್ಲವೆ ಇಬ್ಬರ ನಡುವೆ ದುರಭಿಪ್ರಾಯಗಳು ಬಂದಂತಾಗಿ ಸ್ನೇಹದ ಬಳ್ಳಿ ಸೊರಗಲೂ ಬಹುದು. ಕೆಲವು ಸಂದರ್ಭಗಳಲ್ಲಿ ಗಂಡು ಹೆಣ್ಣಿನ ಆತ್ಮೀಯತೆ ನಡುವೆ ಕಾಣಿಸಿಕೊಳ್ಳುವ ಈ ಒಂದು ಮನಸ್ಥಿತಿಗೆ ಗೆಳೆತನ ಸಿಲುಕಿಕೊಂಡಾಗ ಆ ಸ್ನೇಹ ಮುರಿದು ಬಿಡುವುದುಂಟು.
ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸುಮತಿಯ ಪ್ರಕಾರ, "ಗಂಡು ಹೆಣ್ಣಿನ ನಡುವೆ ಬರೀ ಸ್ನೇಹ ನಿರಂತರವಾಗಿರಲು ಸಾಧ್ಯವೇ ಇಲ್ಲ. ಅಲ್ಲಿ ಕಾಲಕ್ರಮದಲ್ಲಿ 'ಸಂಬಂಧ' ಮೈದಳೆಯಲೇ ಬೇಕು." ಇದು ಸುಮತಿಯೊಬ್ಬಳ ಅನಿಸಿಕೆಯಲ್ಲ. ಹಲವರ ಅಭಿಪ್ರಾಯವೂ ಇದೇ ಆಗಿದೆ. ಯಾಕೆಂದರೆ ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ ನಿನ್ನೆ ಮೊನ್ನೆಯದಲ್ಲ. ಈ ಭೂಮಿಯ ಮೇಲೆ ಜೀವ ಸಂಕುಲ ಆರಂಭವಾದಂದಿನಿಂದಲೇ ಅದರ ವಾಸನೆಯಿದೆ.
ಒಂದು ಒಳ್ಳೆಯ ಪರಿಚಯದಿಂದ ಚಿಗುರುವ ಸ್ನೇಹ, ಪ್ರೇಮ ತದನಂತರದಲ್ಲಿ ದೈಹಿಕ ಸಂಪರ್ಕವನ್ನು ಬಯಸುವ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚು. "ಅದರಲ್ಲಿ ಮುಜುಗರ ಪಡುವಂಥದ್ದೇನಿಲ್ಲ" ಎನ್ನುವುದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ದಿನೇಶ್ ಅಭಿಪ್ರಾಯ. ಸ್ನೇಹದ ನಡುವೆ ಪ್ರೀತಿಯು ಮೊಳಕೆಯೊಡೆದು ಅದು ಪ್ರೀತಿಯಾಗಿ-ಕಾಮವಾಗಿ ಪರಿವರ್ತನೆಯಾಗುವುದು ಸೃಷ್ಟಿಯ ಸಹಜ ಕ್ರಿಯೆ ಎನ್ನುತ್ತಾರೆ ಅವರು.
"ಪ್ರೀತಿಯ ನಡುವೆ ಸ್ನೇಹವಿರಲೇ ಬೇಕು, ಆದರೆ ಸ್ನೇಹದ ನಡುವೆ ಪ್ರೀತಿ ಇದ್ದೇ ಇರುತ್ತದೆನ್ನುವ ಸಂಭವ ತೀರಾ ಕಡಿಮೆ" ಎಂಬುದು ಹಲವರ ಅನಿಸಿಕೆ. ಸಹಜವಾಗಿ ಸಹೋದ್ಯೋಗಿಗಳ ನಡುವೆ ಪರಿಚಯ, ಸ್ನೇಹ ಉಂಟಾಗುತ್ತದೆ. ಸ್ನೇಹ ಸಲುಗೆಯತ್ತ ವಾಲುತ್ತದೆ. ಇಬ್ಬರ ಮನಸ್ಥಿತಿ ಒಂದೆ ಹದ ದಲ್ಲಿದ್ದರೆ (ಅಥವಾ ಆ ಹಂತಕ್ಕೆ ಬರುತ್ತದೆ) ಅಲ್ಲಿ ಪ್ರೀತಿ ಬರಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.
ಮನಃಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅನಘಾ ಹೇಳುವ ಪ್ರಕಾರ, "ನನಗೆ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದಕ್ಕಿಂತ ಪುರುಷರೊಂದಿಗೆ ಗೆಳೆತನ ಮಾಡುವುದು ಅತ್ಯಂತ ಸಹಜವಾಗಿ ಖುಷಿ ಅನ್ನಿಸುತ್ತದೆ. ಯಾಕೆಂದರೆ ಪುರುಷ ಹೆಚ್ಚು ವಾದ ಮಾಡದೇ ನಾವು ಹೇಗಿರುತ್ತೇವೆಯೋ ಹಾಗೇ ಒಪ್ಪಿಕೊಳ್ಳುತ್ತಾನೆ ಎನ್ನುವುದು ನನ್ನ ಅನುಭವ." ಅನ್ನುತ್ತಾರೆ.
ನಿತೀಶ್ ಹೇಳುವುದು ಹೀಗೆ: "ಪುರುಷ ಮತ್ತು ಸ್ತ್ರೀ ಕೇವಲ 'ಬೇಸಿಕ್ ಇನ್ಸ್ಟಿಂಕ್ಟ್'ಗೋಸ್ಕರವೇ ಸ್ನೇಹಿತರಾಗುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಹಾಗಂತ ನನಗೆ ಮಹಿಳೆಯರೇ ಪುರುಷ ಸ್ನೇಹಿತರಿಗಿಂತ ಹೆಚ್ಚು ಕ್ಲೋಸ್ ಆಗಿರೋದು. ಪುರುಷನೊಬ್ಬ ತನ್ನ ಸ್ನೇಹಿತನೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ತನ್ನ ಗೆಳತಿಯೊಂದಿಗೆ ಇನ್ನೂ ಚೆನ್ನಾಗಿ ಹಂಚಿಕೊಳ್ಳಬಲ್ಲ."
ದೆಹಲಿ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಪ್ರೊಪೆಸರೊಬ್ಬರ ಪ್ರಕಾರ, "ಗಂಡು ಹೆಣ್ಣಿನ ನಡುವಿನ ಸ್ನೇಹ ಸಹಜವಾದದ್ದು. ನೀವು ಒಬ್ಬರನ್ನು ಇಷ್ಟಪಡುತ್ತೀರಿ. ಅದರಿಂದಾಗಿ ಅವರೊಂದಿಗೆ ನಿಮ್ಮ ಮನದ ಭಾವನೆಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತೀರಿ. ಇದು ಕೊನೆಗೆ ಇಬರ ನಡುವೆ ಮದುವೆ ಹಂತಕ್ಕೆ ಬಂದರೆ ಸರಿ. ಆದರೆ ಪರಸ್ಪರರ ಉತ್ತಮ ಸ್ನೇಹದ ನಡುವೆ ಹುಟ್ಟಿಕೊಳ್ಳುವ 'ಪ್ರೀತಿ'-'ಸಂಬಂಧವಾಗಿ ಮಾರ್ಪಟ್ಟರೆ ಸಮಾಜದಲ್ಲಿ ಒಂದು ಸಮಸ್ಯೆಯನ್ನೆ ತಂದಿಡಬಲ್ಲುದು. ಆಗ ಇಬ್ಬರೂ ಸಾಕಷ್ಟು ದ್ವಂದ್ವದಲ್ಲಿ ಸಿಲುಕಿ ಗೊಂದಲಕ್ಕೆ ಬೀಳುತ್ತಾರೆ. ಆಗ ಸ್ನೇಹ ಮುರಿದು ಬೀಳುತ್ತದೆ. ಜೀವನದ ಉದ್ದೇಶಗಳೇ ವ್ಯರ್ಥವಾಗುತ್ತವೆ" ಎನ್ನುತ್ತಾರೆ.
ಸ್ನೇಹ ಎನ್ನುವುದು ಇಬ್ಬರ ನಡುವಿನ ಹೇಳಲಾಗದ ಒಂದು ಕೆಮಿಸ್ಟ್ರಿಯೇ ಸೈ!
ಇದು ದಿನಕಳೆದಂತೆ ಮೊದಲಿನ ಚಾರ್ಮ್ ಕಳೆದುಕೊಳ್ಳುತ್ತ ಅಥವಾ ಸ್ನೇಹ ಹಳಸಲಾಗುತ್ತ ಸಾಗುವುದೂ ಸಾಕಷ್ಟು ಸಲ. ಹಾಗೇ ಸ್ನೇಹ 'ಸಂಬಂಧ'ದ ರೂಪು ಪಡೆದು 'ಕಾಮನಬಿಲ್ಲಾಗುವ' ಸಾಧ್ಯತೆಯೂ ಇದೆ. ಇದಕ್ಕೆ ವ್ಯಕ್ತಿಗಳು ಸಾಕಷ್ಟು ಪಕ್ವ ಹಾಗೂ ಜವಾಬ್ದಾರಿಯುತವಾದರೆ, ಸ್ನೇಹವೊಂದು 'ಸಂಬಂಧ'ವಾಗ ಬೇಕೆ ಅಥವಾ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ನಡುವೆ ಒಂದು ಗೆರೆ ಎಳೆದುಕೊಳ್ಳಬೇಕೆ ಎಂಬುದನ್ನು ಅವರವರೇ ನಿರ್ಧರಿಸಬಹುದು.
ಲೇಖಕ: ರಾಮಕೃಷ್ಣ.
ಕನ್ನಡದ ಮಾಸಿಕ ಅಕ್ಟೋಬರ್ ಮಯೂರದಲ್ಲಿ ಪ್ರಕಟಗೊಂಡ ಲೇಖನವಿದು.

2 comments:

Unknown said...

ondu ganDu heNNina naDuve bari snEha irOdikke saadhyave illa. haage iddare adu kramEna preetige tiruguttade. adarallu maduve aagida ganDu innondu maduve aagi makkaLLidda heNNina snEha preetige tiruguttade. snEhadalli dinavU maataaDalEbEku ennuvudiruvudilla. aadare preetige tirugidare maatra dinavU maataDalEbEku ennisuttiruttade. snEhadalli ondu vaara athawa tingaLu kaaNadiddaru, maataDadiddaru snEha haage irabEku. ade preetige tirugidare mugiyitu. eraDu maneyu muriyadantaaguttade.

prasca said...

houdu