Tuesday, September 1, 2009

ಮಲ್ಲಳ್ಳಿ ಮತ್ತು ಮೂಕನ ಮನೆ ಪ್ರವಾಸ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.

ಚೆನ್ನಾಗಿದೆ ಸಾರ್ ಹೋಗ್ಬನ್ನಿ ಎನ್ನುವ ದಾಸೇಗೌಡ್ರು ಗೋಪಿಯ ದೂರವಾಣಿ ಸಂಖ್ಯೆಯನ್ನಿತ್ತರು. ಸಂಪರ್ಕಿಸಿದಾಗ ಗೋಪಿಯವ್ರು ಹೇಳಿದ್ದು ಬನ್ನಿ ಸಾರ್, ತುಂಬಾ ಚೆನ್ನಾಗಿದೆ ಮಳೆ ಚೆನ್ನಾಗಿ ಆಗಿರುವುದರಿಂದ ಜಲಪಾತಗಳು ಮೈದುಂಬಿವೆ ಎಂದರು. ನಮ್ಮೂರಿನಲ್ಲೆ ವಸತಿ ಗೃಹವಿದೆ ತಂಗಲು ಸಮಸ್ಯೆಯಿಲ್ಲ. ಇಲ್ಲಿಂದ ಕೇವಲ ೨೦ ಕಿ ಮೀ ದೂರದಲ್ಲಿದೆ ಮೂಕನ ಮನೆಯೆಂದಾಗ ನನಗೆ ಆಗಲೆ ಹೊರಟು ಬಿಡೋಣವೆನಿಸಿತ್ತು ಆದರೆ ಶನಿವಾರ ರಜೆಯಿರುವುದರಿಂದ ಸೂಕ್ತ ಎಂದು ನಿರ್ಧರಿಸಿದೆ.
ಸರಿ ಶುಕ್ರವಾರದವೆರೆಗೂ ಆ ಬಗ್ಗೆ ಯಾರಲ್ಲೂ ಚರ್ಚಿಸಿರಲಿಲ್ಲ ಪ್ರವಾಸ ಹೋಗಲೇ ಬೇಕೆಂಬ ಒತ್ತಡ ಒಂದೆ ಸಮ ಹೆಚ್ಚುತ್ತಿತ್ತು. ಕೆಲಸ, ಬೆಂಗಳೂರಿನ ವಾಹನ ದಟ್ಟಣೆ ಇದೇ ಆಗಿದೆ ಎನ್ನುವ ಪತ್ನಿಯ ಗೊಣಗಾಟಕ್ಕೆ ಆಗಾಗ ಮುಕ್ತಿ ಕೊಡಿಸಲು ಪ್ರವಾಸ ಎನ್ನುವ ಅದ್ಭುತ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಗಸ್ಟ್ ೧೫ ಶನಿವಾರ ಬೆಳಿಗ್ಗೆ ೬ ಗಂಟೆಗೆ ಹೊರಡೋಣ ಎಂದು ತಿಳಿಸಿ ಬೆಳಿಗ್ಗೆ ಎದ್ದಾಗ ಸಮಯ ೬.೩೦. ತಕ್ಷಣ ಗೋಪಿಯವರಿಗೆ ಕರೆ ಮಾಡಿದೆ. ಅವರ ಪತ್ನಿ ತುಂಬಾ ಮಳೆಯಿದೆ ಇಲ್ಲೆಲ್ಲ ನಿನ್ನೆ ಅಂತೂ ಸಿಕಾಪಟ್ಟೆ ಮಳೆ ಬಂತು ಎಂದು ಮಾಹಿತಿಯಿತ್ತರು. ಸರಿ ಮಳೆಯಿದ್ರೆ ಹೊಗೋದು ಬೇಡ ಎಂದವನಿಗೆ ಅಡುಗೆ ಮನೆಯಿಂದ ಮಿಸೈಲ್ಗಳು ಹಾರಿಬರುತ್ತವೆನೋ ಎಂದೆಣಿಸಿದ್ದವನಿಗೆ ಅಂತಾದ್ದೇನೂ ನಡೆಯಲಿಲ್ಲ ಎಂಬ ಸಮಾಧಾನ. ಮುಂದಿನವಾರ ಗೌರಿ ಗಣೇಶ ಹಬ್ಬ ಇನ್ನೆಲ್ಲಿ ಹೋಗಲಿಕ್ಕೆ ಆಗುತ್ತೆ ಎಂಬ ಅಸಮಾಧಾನದ ಮಾತು ಮಾತ್ರ ಬಂದಿದ್ದು.

ಆಗಸ್ಟ್ ೨೨ರ ಶನಿವಾರ ಹೊರಡೋಣ ಎಂದವನಿಗೆ ಪತ್ನಿಯಿಂದ ಬಂದ ಮರು ಪ್ರಶ್ನೆ ಈ ಸರ್ತಿನೂ ಅನಿಶ್ಚಿತತೆಯಿರಲ್ಲ ಅಲ್ವ? ಹರಿಹರಪುರ ಶ್ರೀಧರ್ ಅವರ ಮನೆಗೆ ಭೇಟಿಯಿತ್ತು ನಂತರ ಪ್ರವಾಸ ಮುಂದುವರೆಸುವ, ನಾವೂ ಬರ್ತೀವಿ ಎಂದು ವಾರ ಪೂರ್ತಿ ಆಶ್ವಾಸನೆ ಕೊಟ್ಟು ಕೊನೆ ಕ್ಷಣದಲ್ಲಿ ಕೈ ಎತ್ತಿದ ಸಂಪದಿಗಳು ರಾಕೇಶ್ ಮತ್ತು ವಿನಯ್. ನನ್ಗೆ ಯಾವುದೆ ಕೆಲಸದ ಒತ್ತಡ ಬರದಿದ್ದರೆ ಮಾತ್ರ ಬರ್ತೀನಿ ಎನ್ನುವ ಆಶ್ವಾಸನೆಯಿತ್ತಿದ್ದವರು ಅದರಂತೆ ಕೆಲ್ಸದ ಒತ್ತಡದಿಂದ ಬರಲಾಗುವುದಿಲ್ಲ ಎಂದು ತಿಳಿಸಿದವರು ಭಾಸ್ಕರ್. ಈ ಬಾರಿ ನನ್ನ ಸಹೋದ್ಯೋಗಿಗಳಿಗಾರಿಗೂ ಬೇಕೆಂದೆ ತಿಳಿಸಿರಲಿಲ್ಲ. ಮುಂದಿನ ಬಾರಿ ನಿನ್ಜೊತೆ ಪ್ರವಾಸಕ್ಕೆ ನಾವೂ ಬರ್ತೀವಿ ಎನ್ನುವ ನನ್ನ ಸಹೋದ್ಯೋಗಿ ಮಿತ್ರರು ಪ್ರವಾಸ ಹೊರಟಾಗ ಮಾತ್ರ ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಆದ್ದರಿಂದ ಅವರ್ಯಾರಿಗೂ ತಿಳಿಸುವ ಗೋಜಿಗೆ ಹೋಗಲಿಲ್ಲ.

೨೯ರ ಶನಿವಾರ ಮಗನನ್ನು ೧೧ ಗಂಟೆಗೆ ಶಾಲೆಯಿಂದ ಕರೆತಂದು ಊಟ ಮಾಡಿ ಮನೆ ಬಿಟ್ಟಾಗ ಸಮಯ ೧.೩೦. ತುಮಕೂರು ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಬದಲಿ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆಯೆಂದೆಣಿಸಿ ಹೆಸರಘಟ್ಟ ಮಾರ್ಗ ಹಿಡಿದವನಿಗೆ ಹಳೆದಾರಿಯೇ ಸೂಕ್ತವೆನಿಸಿತ್ತು. ಕರಡಿಗುಚ್ಚಮ್ಮ ದೇವಸ್ತಾನದ ಆವರಣದ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಬಹುತೇಕ ರಸ್ತೆ ಅಗಲೀಕರಣಕ್ಕಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಮಧ್ಯೆ ಹಾಸನ ತಲುಪಿದಾಗ ೪ ಗಂಟೆ. ೨-೩ ಸುತ್ತು ಹೊಡೆದ ನಂತರ ಶ್ರೀಧರ್ ಅವರು ಬಂದು ಮನೆಗೆ ಕರೆದು ಕೊಂಡು ಹೋದರು.

ನನ್ನ ಯೋಜನೆಯಂತೆ ಅಂದೆ ನಾನು ನನ್ನ ಗಮ್ಯವಾದ ಗೋಪಿಯರ ತಿಳಿಸಿದ ವಸತಿ ಗೃಹ ತಲುಪಬೇಕಿತ್ತು. ಆದರೆ ಶ್ರೀಧರ್ ಅವರ ಆತ್ಮೀಯ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೆ ಉಳಿಯ ಬೇಕಾಯಿತು. ಹಾಸನದ ವಾರಿಗೆಯ ಅಕ್ಕನ ಮನೆಗೆ ಮತ್ತು ಅಕ್ಕನ ಮಗಳ (ಭಾವ ಅನಂತ್ ಮತ್ತು ಆದಿಶೇಷ ಶ್ರೀಧರ್ ಅವರಿಗೂ ಪರಿಚಯವಿದ್ದರಿಂದ) ಮನೆಗೆ ಭೇಟಿಯಿತ್ತೆ. ಶ್ರೀಧರ್ ಅವರ ಮನೆಯ ತಿಳಿಸಾರು ಮಜ್ಜಿಗೆಹುಳಿಯ ಭರ್ಜರಿ ಭೋಜನ ಉದರ ತಣಿಸಿದರೆ, ಅವರ ನಾದಿನಿ ಹಾಡಿದ ಭಾವಗೀತೆಗಳು ಮನ ತಣಿಸಿದವು. ಅಂತಹ ಹೃದಯಸ್ಪರ್ಶಿ ಆತಿಥ್ಯಕ್ಕೆ ನಾವು ಚಿರಋಣಿ ಶ್ರೀಧರ್ ಸಾರ್.

ಬೆಳಗಿನ ಕಾರ್ಯಕ್ರಮದ ನಂತರ ಮಂಗಳ ದ್ರವ್ಯಗಳೊಡನೆ ನಮ್ಮನ್ನು ಬೀಳ್ಕೊಟ್ಟ ಶ್ರೀಧರ್ ಕುಟುಂಬಕ್ಕೆ ಮನದಲ್ಲೆ ವಂದಿಸುತ್ತಾ ಅಲ್ಲಿಂದ ಹೊರಟೆವು. ೨-೩ ಕಿ ಮೀ ನಡೆಯಬೇಕಾಗುತ್ತೆ ಎನ್ನುವ ಗೋಪಿಯವರ ಮಾತಿನಿಂದ ಶ್ರೀಧರ್ ಮತ್ತವರ ಕುಟುಂಬವನ್ನು ಪ್ರವಾಸಕ್ಕೆ ಬನ್ನಿ ಎಂದು ಆಹ್ವಾನಿಸದೆ ಅಲ್ಲಿಂದ ಹೊರಟೆ. ಕೆಟ್ಟು ನಿಂತಿರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಪ್ರಯಾಣದ ವೇಗವನ್ನು ಮಿತಿಗೊಳಿಸುತ್ತಿತ್ತು. ೮.೩೦ರ ಸಮಯಕ್ಕೆ ಹೊಟ್ಟೆ ಹಸಿತಾಯಿದೆ ಅಪ್ಪ ಎನ್ನುವ ಮಗನ ಮಾತಿಗೆ ಹೌದು ನನಗೂ ಎಂದು ಹೆಂಡತಿ ಕೋರಸ್ ಆರಂಭಿಸಿದಾಗ ಇದ್ದ ಜಾಗದಲ್ಲಿ ವಿಚಾರಣೆ ೨-೩ ಕಿ ಮೀ ಹಿಂದಿರುವ ಸುರಭಿ ನೆಕ್ಸ್ಟ್ ಮಾತ್ರವೇ ಪರಿಹಾರವೆಂದು ಸೂಚಿಸಿತು. ಮತ್ತೆ ಹಿಂತಿರುಗಿ ಬಂದು ಸುರಭಿಯಲ್ಲಿ ತಿಂಡಿ ತಿಂದು ನಮ್ಮ ಪ್ರಯಾಣ ಗೋಪಿಯವರ ಮನೆಯತ್ತ. ದಾರಿಯುದ್ದಕ್ಕೂ ಸಿಗುವ ಹಸಿರು ಹುಲ್ಲುಗಾವಲುಗಳು ಅಲ್ಲಿ ಮೇಯುತ್ತಿರುವ ಹಸುಕರುಗಳ ಕೊರಳಿನ ಘಂಟೆಯ ನಿನಾದ ದೂರದಲ್ಲಿರುವ ಬೆಟ್ಟಗುಡ್ಡಗಳ ಹಸಿರು ಹಿನ್ನೆಲೆ ಮತ್ತೆ ಮತ್ತೆ ವಾಹನ ನಿಲ್ಲಿಸಿ ಅಲ್ಲಿನ ಸೌಂದರ್ಯ ಸವಿಯೋಣವೆನಿಸುತ್ತದೆ. ಹೀಗೆ ಮುಂದುವರೆದರೆ, ಇಂದೆ ಬೆಂಗಳೂರಿಗೆ ಹಿಂತಿರುಗುವ ನಮ್ಮ ಯೋಜನೆ ವಿಫಲವಾಗುತ್ತದೆ ಎಂಬ ಭಯ ಬೇರೆ. ರಸ್ತೆ ಬದಿಯುದ್ದಕ್ಕೂ ಹರಿಯುವ ಜುಳುಜುಳು ನೀರು ಅದನ್ನಾಧರಿಸಿ ಬೆಳೆದು ನಿಂತ ಹಸಿರು ಪೈರು ಸ್ವಚ್ಛಂದವಾಗಿ ಬೀಸುವ ಶುದ್ದ ಗಾಳಿ ಹಕ್ಕಿ ಪಕ್ಷಿಗಳ ಕಲರವ ಕಣ್ಣು ಹಾಯಿಸಿದಷ್ಟು ಕಾಣುವ ಹಸಿರು ಜನಗಳೆ ಓಡಾಡದ ರಸ್ತೆಗಳು ಎಂತಹವರನ್ನು ಕವಿಯನ್ನಾಗಿಸುತ್ತವೆಯೆನೋ?

ಸಮಯದ ಪರಿವೆಯೇ ಇಲ್ಲದೆ ಆ ಹಸಿರು ಸೌಂದರ್ಯವನ್ನು ಕಣ್ಣುಗಳಿಗೆ ತುಂಬಿಕೊಳ್ಳುತ್ತಾ ವಾಹನ ಚಲಾಯಿಸುವುದು ನನಗೆ ಅತ್ಯಂತ ಸಂತಸದ ವಿಚಾರ. ಗೋಪಿಯವರ ಮನೆ ವಿಚಾರಿಸಿದಾಗ ಅವ್ರ ಮಗ ಅವ್ರು ಹಾಸನಕ್ಕೆ ಹೋಗಿದ್ದಾರೆ ನಾನೇ ಹೇಳ್ತಿನಿ ಹೇಗೆ ಹೋಗ್ಬೇಕೂಂತ ಎಂದು ತಿಳಿಸಿದರು ಅವರ ಹೋಟೆಲ್ನಲ್ಲಿ ಟೀ ಕುಡಿದು ಅವರ ಮಾರ್ಗದರ್ಶನ ಮತ್ತು ಯೋಜನೆಯಂತೆ ಮಲ್ಲಳ್ಳಿ ಜಲಪಾತದ ಕಡೆಗೆ ವಾಹನ ತಿರುಗಿಸಿದೆ. ಅಲ್ಲಲಿ ಸಿಗುವ ರಸ್ತೆಯ ಕವಲುಗಳಲ್ಲಿ ಸರಿಯಾದ ದಾರಿ ತಿಳಿದುಕೊಳ್ಳಲು ಯಾರೂ ಸಿಗುತ್ತಿರಲಿಲ್ಲ ಆದರೂ ಎಲ್ಲಿಯೂ ದಾರಿ ತಪ್ಪದೇ ನಮ್ಮ ವಾಹನ ಓಡುತ್ತಿತ್ತು. ಹಿಂದೊಮ್ಮೆ ಈ ರಸ್ತೆಯಲ್ಲಿ ಪುಷ್ಪಗಿರಿಗೆ ಬಂದಿದ್ದರಿಂದ ಸ್ವಲ್ಪ ಪರಿಚಿತವೆನಿಸುತ್ತಿದ್ದದ್ದು ಇದಕ್ಕೆ ಸಹಾಯಕವಾಗಿತ್ತು.
ಕೊನೆಗೊಮ್ಮೆ ಘಟ್ಟದ ರಸ್ತೆಯಲ್ಲಿನ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಾ ನಡೆಯಿತು ನಮ್ಮ ಪಯಣ. ಅಲ್ಲಲ್ಲಿ ಮಳೆ ನೀರು ನಿಂತು ಹಳ್ಳದಂತೆ ಕಾಣಿಸಿದ ಕಡೆ ವಾಹನದಿಂದಿಳಿದು ಕೋಲಿನಿಂದ ಅದರ ಆಳ ಪರೀಕ್ಷಿಸಿ ನಂತರ ಹೋಗುವುದು ಸುರಕ್ಷಿತವೆಂದು ತಿಳಿದು ಅದರಂತೆ ನಡೆದೆ. ಸುಮಾರು ೩ ಕಿ ಮೀ ನಂತರ ಇನ್ನು ವಾಹನ ಮುಂದೆ ಹೋಗುವುದು ಸಾಧ್ಯವಿಲ್ಲವೆಂದು ಅರಿತಾಗ ಅಲ್ಲಿಯೇ ವಾಹನ ನಿಲ್ಲಿಸಿ ನಡೆಯುತ್ತಾ ಹೊರಟೆವು. ಇಡೀ ಪ್ರದೇಶ ನಿರ್ಜನವಾಗಿತ್ತು. ಬರೀ ಕೀಟಗಳ ಝೇಂಕಾರ ಹಕ್ಕಿಗಳ ಚಿಲಿಪಿಲಿ ಮಾತ್ರವೇ ಕೇಳಿಸುತ್ತಿತ್ತು. ದಾರಿಯುದ್ದಕ್ಕೂ ಕಾಡುಹೂಗಳು ಹಸಿರು ಬಣ್ಣದ ಕಾಡಿಗೆ ಬಗೆಬಗೆಯ ಬಣ್ಣದ ಮೆರಗು ತಂದಿತ್ತಿದ್ದವು. ಹೂವಿನಲ್ಲಿರುವ ನಕ್ಷತ್ರ ಮನಸೆಳೆಯಿತು. ಜೀಪ್ ಹೋಗಬಹುದಾಗಿದ್ದ ದಾರಿಯಾದರಿಂದ ಎಲ್ಲಿಯೂ ದಾರಿತಪ್ಪುವ ಆತಂಕವಿರಲಿಲ್ಲ.

೧೫ ನಿಮಿಷದ ನಡಿಗೆ ನಮ್ಮನ್ನು ಹಸಿರಿನಿಂದ ಕೂಡಿದ ತೆರೆದ ಬಯಲಿಗೆ ಕರೆ ತಂದಿತ್ತು. ಕಲ್ಲಿನ ರಾಶಿಯ ಮೇಲೆ ಕೊಡೆ ಹಿಡಿದು ಕುಳಿತಿದ್ದ ವ್ಯಕ್ತಿಯಯೊಬ್ಬ ನಮ್ಮನ್ನು ನೋಡಿದೊಡನೆ ಎದ್ದು ಬಂದು ವಂದಿಸಿ ಪರಿಚಯ ಮಾಡಿಕೊಂಡರು. ಅಲ್ಲಿನ ಪ್ರದೇಶಗಳನ್ನೆಲ್ಲ ಸ್ಥೂಲವಾಗಿ ತಿಳಿಸಿದ ವಿಜಯ್ ಕುಮಾರ್ ನಮ್ಮೊಡನೆ ಜಲಪಾತದೆಡೆಗೆ ನಡೆದರು. ಮೊದಲ ನೋಟದಲ್ಲೆ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ ದೂರದಲ್ಲಿ ಧುಮ್ಮಿಕ್ಕುವ ಕುಮಾರಧಾರ. ಮೇಲಿನಿಂದ ಯಾರೋ ಹಾಲನ್ನು ಚೆಲ್ಲುತ್ತಿದ್ದಾರೆಂಬಂತೆ ಬೆಳ್ಳಗೆ ಬಂಡೆಗಳ ಮೇಲಿನಿಂದ ಹರಿಯುವ ಪರಿ ಸುಂದರ. ಎದುರಿಗೆ ನಿಸರ್ಗ ನಿರ್ಮಿತ ವೀಕ್ಷಣಾಗೋಪುರದಂತಿರುವ ಬಂಡೆಯ ಬದಿ ನಿಂತು ನೋಡುವುದೇ ಚೆಂದ. ಬಹುಶಃ ಸುತ್ತಲೂ ಇರುವ ಹಸಿರು ಮಧ್ಯದಲ್ಲಿ ಹಾಲ್ನೊರೆಯಂತೆ ಬೀಳುವ ಜಲಧಾರೆಗೆ ಮೆರುಗು ತಂದಿರಬೇಕು. ೬೦-೭೦ ಅಡಿಗಳಷ್ಟು ಕೆಳಗಿಳಿಯುತ್ತಾ ಹೋದಂತೆಲ್ಲ ಜಲಧಾರೆಯ ಸೌಂದರ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಜಲಧಾರೆಯವರೆಗೂ ಹಸಿರು ಹಬ್ಬಿರುವುದು ಈ ಜಲಪಾತದ ವಿಶೇಷಗಳಲ್ಲೊಂದು ಆದ್ದರಿಂದಲೇ ಹಾಲಿನ ಬಣ್ಣದ ನೀರಿಗೆ ಹಸಿರು ಬಣ್ಣದ ಹಿನ್ನೆಲೆ ಇರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಸಿದೆಯೆನಿಸುತ್ತದೆ.

ಹೆಚ್ಚೇನು ಜನ ಬರಲ್ಲ ಸಾರ್, ಎನ್ನುವ ವಿಜಯ್ ಕುಮಾರ್ ಮಾತಿನಲ್ಲಿ ಹೊಟ್ಟೆಪಾಡು ಎದ್ದು ಕಾಣುತ್ತದೆ. ಜನ್ಮತಃ ವಿಕಲಾಂಗತೆಯಿರುವ ವಿಜಯ್ ಬಗ್ಗೆ ಅನುಕಂಪ ಮೂಡುತ್ತದೆ. ಅದಕ್ಕಾಗಿ ನಾವೇನು ಆತನಿಗೆ ಹಣ ಕೊಡಬೇಕಾಗಿಲ್ಲ ಆತ ಅಲ್ಲಿನ ಪರಿಸರವನ್ನು ಶುಚಿಕೊಳಿಸಿದ್ದು ನೋಡಿ ಮನ ತುಂಬಿ ಬರುತ್ತದೆ. ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ವಸ್ತುಗಳೆಲ್ಲವನ್ನೂ ಒಂಡೆಡೆ ಗುಡ್ಡೆ ಹಾಕಿ ಅವನ್ನು ಸಾಗಿಸುವುದು ಅವರ ನಿತ್ಯ ಕಾಯಕಗಳಲ್ಲೊಂದು. ಸಾರ್, ಇಲ್ಲಿಂದ ಜಲಪಾತ ಧುಮುಕುವ ಜಾಗಕ್ಕೆ ದಾರಿಯಿದೆ ಹೋಗಿ ಸಾರ್ ಎನ್ನುವ ಮೃದುಭಾಷಿ ವಿಜಯ್ ಆತ್ಮೀಯನಂತೆ ವರ್ತಿಸುವುದು ಖುಷಿ ತರಿಸುತ್ತದೆ.

ಆತನ ಮಾತಿನಂತೆ ಕೆಳಗಿಳಿದು ಹೊರಟವರಿಗೆ ೫ ನಿಮಿಷದಲ್ಲಿ ಕುಮಾರಧಾರ ಸಿಕ್ಕಿತು. ಈಗಾಗಲೆ ಅಲ್ಲಿ ಇಬ್ಬರು ನದಿಯಲ್ಲಿ ಆಟವಾಡುತ್ತಿದ್ದರು. ಜಲಪಾತ ಉಂಟಾಗುವ ಎಷ್ಟೋ ಸ್ಥಳಗಳನ್ನು ನಾನು ನೋಡಿದ್ದೇನೆ ಆದರೆ ಈ ಸ್ಥಳದಷ್ಟು ಯಾವುದೂ ನನಗೆ ಇಷ್ಟೊಂದು ಅಪ್ಯಾಯವೆನಿಸಿರಲಿಲ್ಲ. ಧ್ಯಾನಕ್ಕೆ ಕುಳಿತವರಂತೆ ನಾವು ಮೂವರು ಆ ಸ್ಥಳದ ಸೌಂದರ್ಯವನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಎಷ್ಟು ಬಾರಿ ಬೆಳಕಿನ ಬೋನನ್ನು ಮುಟುಕಿಸಿದರೂ ತೃಪ್ತಿಯಿರಲಿಲ್ಲ. ನೀರಿಗಿಳಿದು ೩ ಮುಳುಗು ಹಾಕಿ ಅಲ್ಲಿಂದ ಹೊರಟೆವು. ಹಿಂತಿರುಗಿ ಬರುವಾಗ ದಾರಿಯಲ್ಲಿ ಸಿಕ್ಕ ನಾಗರಿಕ ಮಾನವನ ಕುರುಹಾದ ಮದ್ಯದ ಶೀಷೆಗಳು ಬಿದ್ದದ್ದು ಗಮನಕ್ಕೆ ಬಂತು. ಬಹುಷಃ ವಿಜಯ್ ಇಲ್ಲಿವರೆಗು ನಡೆದು ಬರಲಾಗಿಲ್ಲವಾದ್ದರಿಂದ ಅವು ಇಲ್ಲಿ ಉಳಿದಿರಬಹುದು ಅದನ್ನು ಹೊರತು ಪಡಿಸಿ ಉಳಿದಂತೆ ಇನ್ನು ಸ್ವಚ್ಚತೆ ಕಾಪಾಡಿಕೊಂಡಿರುವುದು, ಬಹುಶಃ ಸ್ಥಳ ಇನ್ನೂ ಹೆಚ್ಚು ಪ್ರಸಿದ್ದಿಗೆ ಬರದಿರುವುದರಿಂದ ಕಾರಣವಿರಬೇಕು.
ನನಗೆ ಇದುವರೆವಿಗೂ ಅರ್ಥವಾಗದ ಸಂಗತಿಯೆಂದರೆ ಇಂತಹ ಸ್ಥಳಗಳಲ್ಲಿ ಬಂದು ಕುಡಿಯುವ ಅಗತ್ಯವೇನು ಎಂಬುದು. ನನ್ನ ಕೆಲವು ಸ್ನೇಹಿತರ ಸಮರ್ಥಿಸಿಕೊಳ್ಳುವುದು ಪ್ರಕೃತಿಯ ಮಡಿಲಿನಲ್ಲಿ ನಶೆ ಹೆಚ್ಚು ಏರುತ್ತದೆ ಎನ್ನುವುದು. ಹೇಗೆ ಸಾಧ್ಯ ಮದ್ಯದಲ್ಲಿಲ್ಲದ ನಶೆ ಪ್ರಕೃತಿಯದೆ? ಪ್ರಕೃತಿಯೇ ನಶೆ ಏರಿಸುವಷ್ಟು ಸುಂದರವಾಗಿದ್ದರೆ ಈ ಮದ್ಯದ ಅವಶ್ಯಕ್ಯಾತೆ ಏಕೆ? ಪ್ರಕೃತಿಯ ನಶೆ ಸಾಕಲ್ಲವೆ? ಊಹೂಂ ಇನೂ ಅರ್ಥವಾಗಿಲ್ಲ. ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ.

ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆಯಲು ಆರಂಭಿಸಿದೆವು. ಪುಷ್ಪಗಿರಿ ದೇವಸ್ತಾನಕ್ಕೆ ಹೋಗಿ ಎಂದ ವಿಜಯ್ಗೆ ಈಗಾಗಲೆ ನೋಡಿದ್ದೇನೆ ಎಂದು ತಿಳಿಸಿದೆ. ಈಗ ದೇವಸ್ತಾನದವರೆಗೂ ರಸ್ತೆಯಿದೆ ತುಂಬಾ ಚೆನ್ನಾಗಿದೆ ಹೋಗ್ಬನ್ನಿ ಎಂದರು. ನಾವು ಇನ್ನೂ ಒಂದು ಜಲಪಾತ ವೀಕ್ಷಿಸ ಬೇಕಿರುವುದರಿಂದ ಆಗುವುದಿಲ್ಲವೆಂದು ತಿಳಿಸಿ ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆದು ವಾಹನ ಏರಿ ಮೂಕನ ಮನೆ ಜಲಪಾತದ ಕಡೆಗೆ ಹೊರಟೆವು. ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಕೆರೆ ಗಮನ ಸೆಳೆಯಿತು. ನೀರಿಗಿಳಿದು ಈಜುವ ಮನಸ್ಸಾದರೂ ಸಮಯದ ಅಭಾವದಿಂದ ಹಾಗೆ ಮಾಡಲಾಗಲಿಲ್ಲ. ೪ ವರ್ಷದ ಹಿಂದೆ ನೀರೆಂದರೆ ಭಯ ಬೀಳುತ್ತಿದ್ದ ಅಮಿತ್ ಈಗೆಲ್ಲ ನೀರು ಕಂಡರೆ ಸಾಕು ಅಪ್ಪಾ ಈಜೋಣ ಎನ್ನುವುದು ಮುಗುಳ್ನಗೆ ತರಿಸುತ್ತದೆ

ಅವರಿವರನ್ನು ಕೇಳಿಕೊಂಡು ನಾವು ಮೂಕನ ಮನೆ ಜಲಪಾತದ ಕಡೆ ತೆರಳುತ್ತಿದ್ದಾಗ ಅತ್ಯಂತ ಇಳಿಜಾರಿನಲ್ಲಿ ವಾಹನ ಇಳಿಸಬಾರದಿತ್ತು ಆದರೆ ಗಮನಿಸದೆ ಇಳಿಸಿದಾಗ ಅರಿವಾದದ್ದು ಆಗಿ ಹೋದ ತಪ್ಪು. ಸುಮಾರು ೧೦೦ ಮೀಟರ್ಗಳಿಗೂ ಹೆಚ್ಚು ಉದ್ದವಿರುವ ಒಂದೆ ದಿಬ್ಬವನ್ನು ಇಳಿಸಲು ಆರಂಭಿಸಿದ್ದೆ ಮಧ್ಯೆ ಕಾರು ಕೊರಕಲಿಗೆ ಇಳಿದಿತ್ತು. ಹೆಂಡತಿ ಮತ್ತು ಮಗನ ಮುಖದಲ್ಲಿ ಆತಂಕ ಮಡುಗಟ್ಟುತ್ತಿತ್ತು. ಗಾಭರಿಯಾಗಲಿಲ್ಲ ಘಟಿಸಿದ ಮೇಲೆ ಯೋಚ್ನೆ ಮಾಡಿ ಪ್ರಯೋಜನವಿಲ್ಲ. ಮುಂದೆ ಏನ್ಮಾಡ್ಬೇಕು ಎನ್ನುವುದನ್ನು ಯೋಚಿಸುತ್ತಾ ಕಾರಿನ ಜ್ಯಾಕ್ನಿಂದ ಚಕ್ರವನ್ನು ಮೇಲೆತ್ತಿ ಚಕ್ರದ ಕೆಳಗೆ ಕಲ್ಲಿಟ್ಟು ವಾಹನವನ್ನು ದಾರಿಗೆ ತಂದು ಕೆಳಗಿಳಿಸಿದೆ. ಏಕೆಂದರೆ ಮತ್ತೆ ಹಿಂತಿರುಗುವ ಹಾಗಿರಲಿಲ್ಲ. ಕೆಳಗೆ ವಾಹನ ನಿಲ್ಲಿಸಿ ಅಲ್ಲೆ ಹಿಂದಿನ ದಿನ ಕಳೆದು ಹೋಗಿದ್ದ ದನ ಹುಡುಕಿ ಕೊಂಡು ಹಿಂತಿರುಗುತ್ತಿದ್ದ ವ್ಯಕ್ತಿ ವಿಶ್ವನಾಥ್ ಜಲಪಾತದೆಡೆಗೆ ಹೋಗಲು ಸಹಾಯ ಕೇಳಿದಾಗ ಬನ್ನಿ ನಾನೇ ಕರ್ಕೊಂಡು ಹೋಗ್ತೀನಿ ಎಂದು ಸಿಕ್ಕಿದ್ದ ಎತ್ತನ್ನು ಮೇಯಲು ಬಿಟ್ಟು ನಮ್ಮೊಡನೆ ಹೆಜ್ಜೆ ಹಾಕಿದರು. ಮುಕ್ತಿಹೊಳೆಯ ದಂಡೆಯಲ್ಲೆ ಮಳೆಯಿಂದ ಒದ್ದೆಯಾಗಿ ಜಾರುತ್ತಿದ್ದ ಬಂಡೆಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಬ್ಬರಿಗೆ ಒಬ್ಬರು ಆಸರೆಯಾಗಿ ಜಲಪಾತದೆಡೆಗೆ ತೆರಳಿದೆವು. ಕಾಲಲ್ಲಿ ಜಿಗಣೆಗಳು ಹಿಡಿದರೂ ( ಅಭ್ಯಾಸವಾಗಿ ಹೋಗಿದೆ) ತಲೆ ಕೆಡಿಸಿಕೊಳ್ಳದೆ ೧೫ ಅಡಿಗಳಷ್ಟೆ ದೂರದಲ್ಲಿದ್ದ ಜಲಪಾತದ ಜಾಗಕ್ಕೆ ತಲುಪಿದೆವು. ೧೫-೨೦ ಅಡಿಯಿಂದ ಧುಮುಕುವ ಜಲಪಾತ ನದಿಪಾತ್ರದ ಉದ್ದಕ್ಕೂ ಹರಡಿದೆ. ನಿಜಕ್ಕೂ ನಾನು ಅಂತರ್ಜಾಲದಲ್ಲಿ ನೋಡಿ ಹೊರಟು ಬಂದಿದ್ದಕ್ಕೂ ಇದಕ್ಕೂ ಏನೂ ಸ್ವಾಮ್ಯವಿರಲಿಲ್ಲ. ಆದರೂ ಸಕ್ಕತ್ತಾಗಿರುವ ಜಲಪಾತ. ಬೇಸಿಗೆಯಲ್ಲಿ ಜಲಪಾತದಡಿಗೆ ಹೋಗಬಹುದು ಎಂದು ವಿಶ್ವನಾಥ್ ತಿಳಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಈ ಜಲಪಾತ ಮುಳುಗಡೆಯಾಗಲಿದೆ ಎಂಬ ವಿಷಯ ನೋವನ್ನುಂಟು ಮಾಡಿತು. ಅಭಿವೃದ್ಧಿಯೆಂಬ ಹೆಮ್ಮಾರಿಗೆ ಅದಿನ್ನೆಷ್ಟು ಪ್ರಕೃತಿ ಬಲಿಯಾಗಬೇಕಿದೆಯೋ?

ಪತ್ನಿ ಮತ್ತು ಪುತ್ರನನ್ನು ಜಲಪಾತವುಂಟಾಗುತ್ತಿದ್ದ ಸ್ಥಳದಲ್ಲೇ ಬಿಟ್ಟು, ನಾನು ಮತ್ತು ವಿಶ್ವನಾಥ್ ಇನ್ನೂ ಕೆಳಕ್ಕಿಳಿದು ಜಲಪಾತದ ಮುಂದೆ ನಿಂತೆವು. ಒಂದೆರಡು ಚಿತ್ರ ತೆಗೆಯುವಷ್ಟರಲ್ಲಿ ಕತ್ತಲಾಗುವಂತೆ ಮೋಡಗಳು ಮುಸುಕಿಕೊಳ್ಳಲಾರಂಭಿಸಿದವು. ಮಳೆ ಬರುವಷ್ಟರಲ್ಲಿ ವಾಹನ ಸೇರಿಕೊಳ್ಳುವ ಸಲುವಾಗಿ ಹಿಂತಿರಿಗುವಾಗ ೭-೮ ಜನ ಹುಡುಗರ ಗುಂಪು ಎದುರಾಯಿತು. ಉಭಯಕುಶಲೋಪರಿಯ ನಂತರ ಅವರಿಗೆ ನನ್ನ ಕಾರು ಮೇಲೆ ಹತ್ತದಿದ್ದರೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡು ಕಾರಿನತ್ತ ತೆರಳಿದೆ. ಈಗ ಇತ್ತು ಸರ್ಕಸ್. ಸುಮಾರು ೫೦ ಮೀಟರ್ ನಂತರ ಸಿಕ್ಕ ಆ ದಿಬ್ಬವನ್ನು ಹತ್ತಲಾರದೆ ನನ್ನ ವಾಹನ ಅಡ್ಡ ಸಿಕ್ಕಿ ಹಾಕಿ ಕೊಂಡಿತು. ಹಿಂಬದಿಯ ಚಕ್ರ ಕಲ್ಲುಗಳನ್ನಿಡುತ್ತಿದ್ದ ಅಮಿತ್ ಮತ್ತು ಚಿತ್ರ ಮುಖದಲ್ಲಿ ಗಾಭರಿ ಸ್ಪಷ್ಟವಾಗಿತ್ತು. ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿ ಮತ್ತೆ ಮತ್ತೆ ಪ್ರಯತ್ನಿಸಿದೆ. ಈಗಾಗಲೆ ಮಳೆ ಭೋರೆಂದು ಸುರಿಯುತ್ತಾ ನಮ್ಮ ಪ್ರಯತ್ನ ಮತ್ತಷ್ಟು ಕ್ಲಿಷ್ಟವಾಗಿಸಿತು.ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಕೊನೆಗೊಮ್ಮೆ ಆ ಹುಡುಗರನ್ನು ಕರೆ ತರಲು ಚಿತ್ರ ನಡೆದಳು. ಅವರು ಬರುವಷ್ಟರಲ್ಲಿ ಮತ್ತಷ್ಟು ಪ್ರಯತ್ನಿಸಿದ್ದರಿಂದ ಕಾರಿನ ಬ್ರೇಕುಗಳು ಮತ್ತು ಕ್ಲಚ್ ವಾಸನೆ ಬರಲು ಆರಂಭಿಸಿತು. ಆ ಸಮಯಕ್ಕೆ ನಡೆದು ಬಂದ ಹುಡುಗರು ನೀವು ಕೆಳಕ್ಕಿಳಿಯಿರಿ ಎಂದು ತಿಳಿಸಿ ಅವರಲ್ಲೊಬ್ಬ ಚಾಲಕನಾಗಿ ಮಿಕ್ಕವರು ಹಿಂದಿನಿಂದ ತಳ್ಳಿ ಮೇಲಕ್ಕೆ ತಂದಿತ್ತರು. ಅವರ ಈ ಸಹಾಯ ಅವಿಸ್ಮರಣೀಯ. ಮೇಲೆ ತಳ್ಳುವ ಭರದಲ್ಲಿ ಆ ಹುಡುಗರಲ್ಲೊಬ್ಬರ ಚಪ್ಪಲಿ ಕಿತ್ತುಹೋಯಿತು. ಪಾಪ ಆತ ಬರಿಗಾಲಿನಲ್ಲಿ ಊರು ಸೇರಬೇಕಾದದ್ದು ಅದೂ ನನ್ನಿಂದ ತುಂಬಾ ಬೇಜಾರಿನ ಸಂಗತಿ.

ಮೇಲಕ್ಕೆ ಬಂದ ಮೇಲೆ ಚಾಲಕನ ಸ್ಥಾನದಲ್ಲಿದ್ದ ಆ ವ್ಯಕ್ತಿ ಸಾರ್, ಕ್ಲಚ್ ಮತ್ತು ಬ್ರೇಕ್ ಬಿಸಿಯಾಗಿ ತುಂಬಾ ವಾಸನೆ ಬರ್ತಾ ಇದೆ ಟೈರ್ಗಳಂತೂ ೫೦೦೦ ಕಿ ಮೀ ಓಡುವಷ್ಟು ಸವೆದಿವೆ ಎಲ್ಲಾದರೂ ಒಂದರ್ಧ ಗಂಟೆ ವಾಹನದ ಬಿಸಿ ಆರುವವರೆಗೆ ನಿಂತು ಹೋಗಿ ಎಂದು ಸಲಹೆಯಿತ್ತರು ಈಗಾಗಲೆ ಸಮಯ ೪ ಗಂಟೆಯಾಗಿತ್ತು. ನಾವು ಇಂದೆ ಬೆಂಗಳೂರು ತಲುಪ ಬೇಕಿತ್ತು. ಮಳೆ ಮಾತ್ರ ಭೋರೆಂದು ಸುರಿದೇ ಸುರಿಯುತ್ತಿತ್ತು. ಅಲ್ಲೊಂದು ಕೈಮರದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ತನ್ನನ್ನು ಕರೆದೊಯ್ಯುವಂತೆ ವಿನಂತಿಸಿ ಕೊಂಡವನನ್ನು ಕೂರಿಸಿಕೊಂಡು ಹೊರಟೆ. ಆತನ ೩೦ ಎಕರೆ ಏಲಕ್ಕಿ ತೋಟ ಮುಳುಗಡೆಯಾಗುತ್ತಿದೆ ಎಂದು ದುಃಖಿಸಿದರು. ನಾವು ಆದಷ್ಟು ಬೇಗ ಬೆಂಗಳೂರು ತಲುಪ ಬೇಕಿತ್ತು ಆದರೂ ಸಹಾಯ ಮಾಡಿದ ಆ ಚಾಲಕನ ಸಲಹೆಯಂತೆ ೧೦ ನಿಮಿಷಗಳ ವಿಶ್ರಾಂತಿಯ ನಂತರ ವಾಸನೆ ಸ್ವಲ್ಪ ಕಡಿಮೆಯಾದ ಮೇಲೆ ಸುರಿಯುವ ಮಳೆಯಲ್ಲೆ ಹೊರಟೆವು ಆತನ ಊರಿನಲ್ಲಿ ಆಗಂತುಕನನ್ನಿಳಿಸಿ ಸಕಲೇಶಪುರ ಸೇರಿ ಊಟಕ್ಕೆ ಕುಳಿತಾಗ ಸಮಯ ೫ ಗಂಟೆ.

ಊಟ ಮಾಡಿ ೫.೩೦ ಕ್ಕೆ ಸಕಲೇಶಪುರದಿಂದ ಹೊರಟು ಹಿರೀಸಾವೆ ಬರುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತು. ಕತ್ತಲಾದ ನಂತರ ವಾಹನ ಚಲನೆ ಕಷ್ಠವಾಗತೊಡಗುತ್ತದೆ. ಎದುರಿಗೆ ಬರುತ್ತಿರುವ ವಾಹನಗಳ ದೀಪ ಅದೆಷ್ಟು ಪ್ರಖರವಾಗಿ ಕ್ರೂರವಾಗಿ ಕಣ್ಣು ಕುಕ್ಕುತ್ತದೆಯೆಂದರೆ, ಇಡೀ ದಿನ ಕಣ್ಣುಗಳ ಮೂಲಕ ಮನಸ್ಸಿಗೆ ತುಂಬಿಕೊಂಡ ಆ ಪ್ರಕೃತಿ ಸೌಂದರ್ಯ ಈ ದೀಪಗಳ ಪ್ರಖರತೆಯಿಂದ ಆ ಕಣ್ಣಿನ ಮೂಲಕವೆ ಪ್ರವೇಶಿಸಿ ಮೆದುಳಿನಲ್ಲಿರುವ ಆ ದೃಶ್ಯಗಳನ್ನು EPROM ಅಳಿಸಿದಂತೆ ಅಳಿಸಿಬಿಡುತ್ತದಯೇನೋ ಎನಿಸಿ ಬಿಡುತ್ತದೆ. ಬೆಳ್ಳೂರುಕ್ರಾಸ್, ಯಡಿಯೂರು ಕುಣಿಗಲ್ ಮಾರ್ಗವಾಗಿ ಬೆಂಗಳೂರು ಸೇರಿದಾಗ ರಾತ್ರಿ ೯.೩೦.

ಚಿತ್ರಗಳು

10 comments:

hariharapurasridhar said...

ಭೇಶ್,ಪ್ರಸನ್ನ,
ಪ್ರಕೃತಿಯ ಸೊಬಗನ್ನು ಸವಿಯುವುದಷ್ಟೇ ಅಲ್ಲ, ಅದನ್ನು ಯಥಾವತ್ ಉಣಬಡಿಸಿದಿರಿ.ಸಂಪದ ಪುನರಾರಂಬವಾದ ಕೂಡಲೇ ಅಲ್ಲಿಗೆ ಪೋಸ್ಟ್ ಮಾಡಿಬಿಡಿ.ನಮ್ಮ ಮನೆಯಲ್ಲಿ ಊಟ ಬಡಿಸಿದ್ದರಲ್ಲಿ ಯಾವ ದೊಡ್ಡಸ್ತಿಕೆಯೂ ಇಲ್ಲ, ಆದರೆ ಆ ಕಾಡು ಮೇಡಿನಲ್ಲಿ ನಿಮ್ಮ ಸಹಾಯಕ್ಕೆ ಬಂದರಲ್ಲಾ ಆ ಹುಡಗರು! ಆಹುಡುಗರ ಫೋಟೋ ತೆಗೆಯಲಾಗಲಿಲ್ಲವಲ್ಲಾ!! ಅಂತಾ ಈಗ ಛೇ!! ಎಂತಾ ತಪ್ಪಾಯ್ತು! ಅನ್ನಿಸ್ತಿದೆಯಾ? ನಮ್ಮ ಫೋಟೋ ದಲ್ಲಿ ನಮ್ಮ ಅನಾರೋಗ್ಯದ ಸೂಚನೆಗಳುಇದ್ದೇ ಇದೆ ಅಲ್ವಾ?

prasca said...

ಹೌದು ಸಾರ್,
ಪ್ರತಿಬಾರಿ ನಾನು ಕಾರು ಕೆಟ್ಟು ನಿಂತಾಗ ಚಿತ್ರ ತೆಗೆಯಬೇಕಿನಿಸುತ್ತದೆ ಆದರೆ ಈ ಬಾರಿ ಮಳೆ ಸುರಿಯುತ್ತಿದ್ದರಿಂದ ಚಿತ್ರ ತೆಗೆಯಲಾಗಲಿಲ್ಲ. ಹೌದು ನಿಮ್ಮ ಮಾತು ಆ ಹುಡುಗರ ಚಿತ್ರವನ್ನಾದರೂ ತೆಗೆಯಬೇಕಿತ್ತು. ನಿಮ್ಮ ಅನಾರೋಗ್ಯವೇನು ಕಾಣುತಿಲ್ಲ.

Nagendra said...

ಸಖತ್ ಅನುಭವ...

prasca said...

ಬ್ಲಾಗಿಗೆ ಭೇಟಿಯಿತ್ತಿದ್ದಕ್ಕೆ ಧನ್ಯವಾದ ನಾಗೇಂದ್ರ

ರಾಜೇಶ್ ನಾಯ್ಕ said...

ಛೆ, ನೀವು ಹೋಗುವುದು ಗೊತ್ತಿದ್ದಿದ್ರೆ ನಾನೂ ಬರ್ತಿದ್ದೆ ನಿಮ್ಮೊಂದಿಗೆ. ಮಿಸ್ಸಾಯ್ತು..

prasca said...

ರಾಜೇಶ್ ಸಾರ್, ನೀವು ಬರ್ತೇನೆ ಅಂತ ಹೇಳಿ ಈಗ್ಲೂ ಹೋಗೋಣ. ನಿಮ್ಜೊತೆ ಚಾರಣ ಮಾಡ್ಬೇಕು ಅಂತ ನಂಗೂ ಇಷ್ಟ.

Prashanth M said...

ಪ್ರಸನ್ನ, ಒಳ್ಳೆಯ ಲೇಖನ.. ನಾನು ಮತ್ತೊಮ್ಮೆ ಅಲ್ಲಿಗೆ ಹೋಗಿ ಬಂದ ಹಾಗನಿಸಿತು...

ರಾಜೇಶ್, ನಾನೂ ಬರ್ತೇನೆ ತಾಳಿ. ಒಟ್ಟಿಗೇ ಹೋಗೋಣ :)

prasca said...

ಪ್ರಶಾಂತ್, ಇಂತಹ ಎಷ್ಟೊಂದು ಸ್ಥಳಗಳಿಗೆ ನೀವಾಗ್ಲೆ ಭೇಟಿಯಿತ್ತಿದ್ದೀರಿ ಅಲ್ವ? ನಿಮ್ಮ ದಾರಿಯಲ್ಲಿ ನಾವೂ........
ರಾಜೇಶ್ ಜೊತೆಗೂಡಿ ಹೋಗ್ಬೇಕಾದ್ರೆ ನನ್ನ ಮರಿಬೇಡಿ.

ಗೌತಮ್ ಹೆಗಡೆ said...

olleya baraha sir:) tumbaa khushi kodtu.

prasca said...

ಮೆಚ್ಚಿದ್ದಕ್ಕೆ, ಭೇಟಿಯಿತ್ತಿದ್ದಕ್ಕೆ ಧನ್ಯವಾದಗಳು ಗೌತಮ್