Wednesday, January 6, 2010

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು

ವಿಷ್ಣುವರ್ಧನ್ ಎಂಬ ಹುಚ್ಚು ಹತ್ತಿಸಿಕೊಂಡು ನಾನು ಪಟ್ಟ ಕೆಲವು ಪಾಡುಗಳ ಮೆಲುಕು.

ಚಿಕ್ಕಂದಿನಿಂದಲೆ ವಿಷ್ಣು ಎಂದರೆ ಅದೇನೋ ಅಪ್ಯಾಯತೆ! ನನ್ನ ಸ್ವಭಾವವೇ ಹಾಗೆ ಯಾವಾಗ್ಲೂ ಎರಡನೆ ಸ್ಥಾನದಲ್ಲಿರುವವರು ಗೆಲ್ಬೇಕು ಅಂತ ಬಯಸುವವ ನಾನು. ಬಹುಶಃ ಕನ್ನಡ ಚಿತ್ರರಂಗದಲ್ಲಿ ಸ್ಪುರದ್ರೂಪಿ ಎಂದು ಕರೆಸಿಕೊಳ್ಳುವಂತಿದ್ದದ್ದು ವಿಷ್ಣು ಮಾತ್ರ ಎನ್ನುವ ಭಾವನೆ. ಹೈಸ್ಕೂಲ್ ಸಹಪಾಠಿ ತ್ಯಾಗರಾಜ ಆ ಹೊತ್ತಿಗಾಗ್ಲೆ ವಿಷ್ಣೂನ ಡಾಕ್ಟರ್ ವಿಷ್ಣುವರ್ಧನ್ ಅಂತ ಕರೀತಾ ಇದ್ದದ್ದು ವಿಚಿತ್ರ ಎನಿಸುತ್ತಿತ್ತು.

ಆತನ ಯಾವುದೇ ಚಿತ್ರಗಳು ಯಾವುದೇ ಪತ್ರಿಕೆಯಲ್ಲಿ ಬಂದ್ರೆ ಸಾಕು ಅದನ್ನು ಕತ್ತರಿಸ್ಕೊಂಡು ಬಂದು ಅದಕ್ಕಾಗೆ ಇರಿಸಿದ್ದ ೨೦೦ ಪುಟಗಳ ಒಂದು ಪುಸ್ತಕಕ್ಕೆ ಅಂಟಿಸುವುದು ನನ್ನ ಆ ಕಾಲದ ಹವ್ಯಾಸ. ಇದಕ್ಕಾಗಿ ಪಕ್ಕದ ಮನೆಯ ಪುಟ್ಟ ಹುಡುಗಿ ವೀಣಾಳಿಂದ ಪ್ರಶಂಸೆಯ ನುಡಿಗಳು ಕೇಳಿದಾಗಂತೂ ಏನೋ ಒಂತರಾ ಖುಷಿ. ವೀಣಾಳ ಮನೆಗೆ ಬರುತ್ತಿದ್ದ ಪ್ರಜಾಮತ ಪತ್ರಿಕೆಯಲ್ಲಿ ಬರುವ ವಿಷ್ಣುವಿನ ಚಿತ್ರಗಳನ್ನು ತಂದು ಕೊಡಲು ಪ್ರಾರಂಭಿಸಿದಾಗಲೆ ತಿಳಿದದ್ದು ಅವ್ಳೂ ಕೂಡಾ ನನ್ಜೊತೆಗೆ ವಿಷ್ಣುವಿನ ಬೀಸಣಿಗೆಯಾದದ್ದು.

ಏಯ್ ನಿನ್ ಗುರು ಪಿಚ್ಚರ್ ನಾಳೆ ಟಿವಿಲಿ ಬರುತ್ತೆ ಕಣೋ ಕರ್ಕೊಂಡ್ ಹೋಗ್ತಿನಿ ಅಂತ ಹೇಳಿದ್ದ ಗೋಪಾಲನೊಡನೆ ಗಂಧರ್ವಗಿರಿ ಚಿತ್ರವನ್ನು ಪಕ್ಕದೂರಿನ ರಾಜಣ್ಣನ ಮನೆ ಟಿವಿ ನೋಡ್ಕೊಂಡು ರಾತ್ರಿ ೭ ಗಂಟೆಗೆ ಮನೆಗೆ ಬಂದಿದ್ದು ಸದ್ಯ ಮನೆಯಲ್ಲಿ ಯಾರಿಗೂ ತಿಳಿಯಲಿಲ್ಲ.

ಆ ಕಾಲಕ್ಕೆ ವಿಷ್ಣುವಿನ ಬಿಡುಗಡೆಯಾದ ಎಲ್ಲ ಚಿತ್ರಗಳನ್ನು ನೋಡಿಯೇ ತೀರಬೇಕೆಂಬ ಹಂಬಲ ನನ್ಕೈಲಿ ಏನ್ಬೇಕಾದ್ರೂ ಮಾಡಿಸ್ತಿತ್ತು.

ಒಮ್ಮೆ ತುರುವೇಕೆರೆಯ ಕೃಷ್ಣ ಚಿತ್ರ ಮಂದಿರದಲ್ಲಿ ’ಮಹಾಪುರುಷ’ ಚಿತ್ರ ಬಂದಿತ್ತು. ಪಿಚ್ಚರ್ ನೋಡಕ್ ಹೋಗ್ತಿನಿ ಅಂದ್ರೆ ಒದೆ ಇಲ್ಲಾಂದ್ರೂ ಬಯ್ಗುಳಗಳಂತೂ ಗ್ಯಾರಂಟಿ. ಸದ್ಯ ನನ ಅದೃಷ್ಠಕ್ಕೆ ಸರಿಯಾಗಿ ಅಪ್ಪ ತುರುವೇಕೆರೆಯಿಂದ ಸೈಕಲ್ ಬಾಡಿಗೆ ತಂದಿದ್ರು ಅದನ್ನ ಹಿಂತಿರುಗಿಸಬೇಕಿತ್ತು ಇಲ್ಲಾಂದ್ರೆ ದಿನಕ್ಕೆ ೫ ರೂಪಾಯಿ ಕೊಡ್ಬೇಕಾಗುತ್ತೆ ಸೈಕಲ್ ಬಿಟ್ಟು ಬೆಳಿಗ್ಗೆ ಬಾ ಅಂದ್ರು. ಅದಕ್ಕೆ ನಾನು ಹಾಗೆ ಪಿಚ್ಚರ್ಗೆ ಹೋಗ್ತಿನಿ ಅಂದಾಗ ಪಿಚ್ಚರ್ಗೆ ಅಂತ ೨ ರೂಪಾಯಿ ಕೊಟ್ರು. ಸರಿ ಸೈಕಲ್ ಏರಿ ರಾತ್ರಿ ೭ ಗಂಟೆಗೆ ಮನೆ ಬಿಟ್ಟು ೯ ಗಂಟೆಯ ಸೆಕೆಂಡ್ ಶೋ ನೊಡ್ಕೊಂಡು ಅತ್ತೆ ಮನೇಲಿ ಮಲಗೋಣಾಂತ ಹೋಗುವ ದಾರಿಯಲ್ಲಿ ಕತ್ತಲೆ ತುಂಬಿದ ತೋಟದೊಳಗೆ ಹೋಗಲು ಧೈರ್ಯ ಸಾಲದೆ ಬಳಸು ದಾರಿಯಲ್ಲಿ ೨ ಕಿ ಮಿ ನಡೆದು ಹೋಗಿ ರಾತ್ರಿ ೧ ಗಂಟೆ ಸುಮಾರಿನಲ್ಲಿ ಅವ್ರನ್ನೆಲ್ಲ ಎಚ್ಚರಗೊಳಿಸಿ ಮತ್ತೆ ಬೆಳಗ್ಗೆ ೮ ಗಂಟೆ ಬಸ್ಸಿಗೆ ಊರಿಗೆ ಹಿಂತಿರುಗಲು ಬಂದ್ರೆ ಬಸ್ ಒಳ್ಗಡೆ ಜಾಗ ಇಲ್ದೆ ಮೇಲ್ಗಡೆ ಕೂತ್ಕೊಂಡು ಚಳಿ ನಡುಗಿಕೊಂಡು ಊರು ಸೇರಿದ್ದು ಈಗ ಮಜಾ ಅನ್ಸುತೆ.

ಬೆಂಗಳೂರಿಗೆ ಒಮ್ಮೆ ಅಪ್ಪನೊಡನೆ ಬಂದಾಗ ನನ್ ವಿಷ್ಣು ಅಭಿಮಾನ ಗೊತ್ತಿದ್ದ ಅಪ್ಪ ಆಗ್ತಾನೆ ಬಿಡುಗಡೆ ಆಗಿದ್ದ ’ಈ ಜೀವ ನಿನಗಾಗಿ’ ಚಿತ್ರದ ಪೋಸ್ಟರ್ ನರ್ತಕಿ ಚಿತ್ರ ಮಂದಿರದಲ್ಲಿತ್ತು. ಅದನ್ನು ನೋಡ್ತಿದ್ದ ನನ್ನನ್ನು ಅಪ್ಪ ಕೇಳಿದ್ರು ಹೋಗ್ಬೇಕಾ? ಅಂತ. ಹೂಂ ಅಂತ ಕತ್ತು ಬಗ್ಗಿಸ್ದವನಿಗೆ ದುಡ್ಡು ಕೊಟ್ಟು ಚಿತ್ರ ಮುಗಿದ್ಮೇಲೆ ಇಲ್ಲೆ ನಿಂತಿರು ಬಂದು ಕರ್ಕೊಂಡು ಹೋಗ್ತಿನಿ ಅಂತ ಹೇಳಿ ಮಾಯ ಆದ್ರು. ಸರಿ ಪೋಸ್ಟರ್ ಇದ್ದ ಚಿತ್ರ ಮಂದಿರಕ್ಕೆ ಹೋಗಿ ಟಿಕೆಟ್ ತಗೊಂಡು ಒಳ್ಗಡೆ ಕೂತ್ಕೊಂಡೆ ಮೂರು ಮತ್ತೊಂದ್ ಜನ ಇದ್ರು ಚಿತ್ರ ಶುರು ಆಯ್ತು. ಯಾವ್ದೋ ಕುರಿಕಾಯುವ ಸನ್ನಿವೇಶ ಅದೂ ಕನ್ನಡ ಭಾಷೆಯಲ್ಲ. ಹೌದು ಬೇಸ್ತು ಬಿದ್ದಿದ್ದೆ. ಮೊದ್ಲೆ ಹಳ್ಳಿ ಗಮಾರ ಬೆಳಗಿನ ಪ್ರದರ್ಶನಕ್ಕೆ ಇದ್ದ ಇಂಗ್ಲೀಶ್ ಚಿತ್ರವೊಂದಕ್ಕೆ ಬಂದು ಕೂತಿದ್ದೆ. ದೂರದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಹೋಗಿ ಇದು ಕನ್ನಡ ಪಿಚ್ಚರ್ ಅಲ್ವ? ಎಂದೆ ಅವ್ನು ಇಲ್ಲ ಅದು ಮಧ್ಯಾನ್ಹದ ಪ್ರದರ್ಶನ ಅಂತ ಹೇಳ್ದ. ಸ್ವಲ್ಪ ಹೊತ್ತು ಹಾಗೇ ಕೂತಿದ್ದೆ. ತಲೆ ಬುಡ ಏನೂ ತಿಳಿಲಿಲ್ಲ ಎದ್ದು ಹೊರ್ಗಡೆ ಬಂದೆ. ಆ ಹೊತ್ತಿಗೆ ಆಗ್ಲೆ ೧ ಗಂಟೆ ಸರಿದುಹೋಗಿತ್ತು ಇನ್ನೂ ೨ ಗಂಟೆ ಸಮಯ ಕಳೀಬೇಕಿತ್ತು. ಬೆಂಗಳೂರಲ್ಲಿ ಏನೂ ಗೊತ್ತಿರ್ಲಿಲ್ಲ. ಹೊರ್ಗೆ ಹೋದ್ರೆ ಕಳೆದು ಹೋಗೋದು ಖಂಡಿತ. ಸರಿ ಅಪ್ಪ ಹೇಳಿದ್ ಜಾಗದಲ್ಲೆ ನಿಂತಿದ್ದೆ ಅದೇಕೋ ಕಾಣೆ ಅಪ್ಪ ಅರ್ಧ ಗಂಟೇಲಿ ಬಂದು ಯಾಕೆ ಹೋಗಲಿಲ್ವ ಅಂದ್ರು ವಿಷಯ ಹೇಳ್ದೆ! ನಕ್ಕು ಸರಿ ಮಧ್ಯಾನ್ಹದ ಪ್ರದರ್ಶನ ನೋಡಿ ಇಲ್ಲೆ ನಿಂತಿರು ಎಂದು ಮತ್ತೆ ಮಾಯವಾದ್ರು.

ನೂಕುನುಗ್ಗಲಿನಲ್ಲಿ ಟಿಕೆಟ್ ತಗೊಂಡೆ ಮೊದಲ್ನೆಯವ್ನೆ ನಾನಾಗಿದ್ದರಿಂದ ತೊಂದ್ರೆ ಆಗಲಿಲ್ಲ.

ತಿಪಟೂರಿನ ಕಾಲೇಜಿಗೆ ಹೋಗ್ಬೇಕಾದ್ರೆ ವಿಷ್ಣುವಿನ ಸಾಕಷ್ಟು ಚಿತ್ರಗಳನ್ನು ನೋಡುವ ಅವಕಾಶ ಸಿಕ್ತು. ಬಿಡುಗಡೆಯಾದ ಸ್ವಲ್ಪ ದಿನದಲ್ಲೆ ತಿಪಟೂರಿಗೆ ಚಿತ್ರಗಳು ಬರುತ್ತಿದ್ದರಿಂದ ಸ್ವಲ್ಪ ಹೆಚ್ಚಿಗೆ ಚಿತ್ರಗಳನ್ನು ನೋಡ್ತಾ ಇದ್ವಿ. ನನ್ ಜೊತೆಗೆ ಮಂಜ ಮತ್ತೆ ಸತೀಶರಿಗೆ ಕೂಡ ವಿಷ್ಣು ಕಡೆಗೆ ಸ್ವಲ್ಪ ಒಲವಿದ್ದರಿಂದ ನಗೂ ಜೊತೆ ಸಿಕ್ತಾ ಇತ್ತು. ಹಾಂ! ಅದು ನನ್ ೨ನೇ ವರ್ಷದ ಕಾಲೇಜು ದಿನಗಳು ಅಲ್ಲಿವರ್ಗೂ ಒಂದೂ ಚಿತ್ರವನ್ನು ಮನೆಯಲ್ಲಿ ತಿಳಿಸದೆ (ಕದ್ದು ಮುಚ್ಚಿ) ನೋಡದ ಮಂಜನಿಗೂ ಅದರ ರುಚಿ ಹತ್ತಿಸಿದ್ದೆವು.

ದಿನವೂ ಬೆಳಿಗ್ಗೆ ೬ ಗಂಟೆಗೆ ನನ್ನ ಪುಟ್ಟ ಹಳ್ಳಿಯ ಮನೆಯಿಂದ ಹೊರಟ್ರೆ ೪೫ ಕಿ ಮೀ ದೂರದ ತಿಪಟೂರಿಗೆ ಬಸ್ಸಿನಲ್ಲಿ ಹೋಗಿ ಮತ್ತೆ ಹಿಂತಿರುಗುತ್ತಿದ್ದದ್ದು ರಾತ್ರಿ ೮ ಗಂಟೆಯ ಕೊನೆಯ ಬಸ್ಸಿಗೆ.

ತುರುವೇಕೆರೆ ಮತ್ತು ತಿಪಟೂರಿನ ಮಧ್ಯೆ ಇದ್ದ ನೊಣವಿನಕೆರೆಯಲ್ಲಿ ಒಮ್ಮೆ ವಿಷ್ಣು ಅಭಿನಯದ ’ಕರ್ತವ್ಯ’ ಚಿತ್ರ ಪ್ರದರ್ಶನಕ್ಕಿತ್ತು. ಸರಿ ನಂದೊಂದು ನಿರ್ಧಾರ ಇತ್ತಲ್ಲ ವಿಷ್ಣು ಅಭಿನಯದ ಎಲ್ಲಾ ಚಿತ್ರಗಳನ್ನು ನೋಡ್ಬೇಕೂಂತ. ಸರಿ ಶನಿವಾರ ಪ್ರಾಕ್ಟಿಕಲ್ಸ್ ಇರಲ್ಲ ಅವತ್ತು ಹೋಗೋಣ ಅಂತ ಯೋಜನೆ ಹಾಕೊಂಡಿದ್ದೆ. ನನ್ ದುರಾದೃಷ್ಠಕ್ಕೆ ಅವತ್ತು ಪ್ರಾಕ್ಟಿಕಲ್ಸ್. ಇವತ್ತು ಬೇಗ ಮುಗ್ಸಿ ಹೋರಟು ಬಿಡೋಣ ಅಂತ ಮುರುಘೇಶ್ ಹೇಳ್ದಾಗ ನಂಗೆ ಒಳ್ಗೆ ಅವ್ರನ್ನ ತಿಂದು ಬಿಡುವಷ್ಟು ಕೋಪ. ಅದೂ ಎಲೆಕ್ಟ್ರಾನಿಕ್ಸ್ ಲ್ಯಾಬ್ ಬೇರೆ ತಪ್ಪಿಸ್ಕೊಂಡ್ರೆ ಕಷ್ಟ. ಮೊದ್ಲೆ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿದ ನನ್ನಂತವನಿಗೆ ಇದು ಕಬ್ಬಿಣದ ಕಡಲೆಯಾಗಿತ್ತು ಇನ್ನು ಚಕ್ಕರ್ ಹೊಡೆದ್ರೆ ಕಷ್ಟ ಅಂತ ಬೇಗ ಬೇಗ ಮುಗ್ಸಿ ಹೋಗೋಣಾಂತ ಯೋಚಿಸ್ತಿದ್ದವನಿಗೆ ಸಹಪಾಠಿ ರಾಜ್ ಅಭಿಮಾನಿ ರವಿ ಯಾಕೋ ಅರ್ಜಂಟು ಎಂದ. ನೊಣವಿನಕೆರೆಲಿ ವಿಷ್ಣು ಚಿತ್ರ ಎಂದಾಗ ನಾನೂ ಬರ್ತಿನಿ ತಾಳು ಎಂದ. ಅಬ್ಬ ಜೊತೆಗೆ ಸಿಕ್ನಲ್ಲ ಎಂಬ ಸಂತೋಷ. ಅವ್ನು ಬಂದಿದ್ದು ಒಳ್ಳೆದೆ ಆಯ್ತ. ಇಲ್ಲಾಂದಿದ್ರೆ ಅಂತ ಡಬ್ಬಾ ಚಿತ್ರಕ್ಕೆ ಜೊತೆಯಿಲ್ದೆ ಇದ್ದಿದ್ರೆ ನಂಗೆ ಹುಚ್ಚು ಹಿಡಿಯುತ್ತಿದ್ದದ್ದು ಶತಃ ಸಿದ್ದ. ಚಿತ್ರ ಮುಗ್ಸಿ ಹೊರ ಬಂದಾಗ ಆಗ್ಲೆ ೭.೩೦ ಆಗಿತ್ತು. ಆಗ ಅರಿವಾಗಿತ್ತು ಆಗಿ ಹೋದ ಪ್ರಮಾದ. ತುರ್ವೇಕೆರೆಯಿಂದ ನನ್ನೂರಿಗೆ ಇದ್ದ ಕೊನೆ ಬಸ್ಸು ೭.೪೦ ಕ್ಕೆ ತುರುವೇಕೆರೆಯಿಂದ ಹೊರಟು ಹೋಗುತ್ತದೆ. ಸರಿ ತುರುವೇಕೆರೆಗೆ ಬಂದು ಬಸ್ಟಾಂಡಿನಲ್ಲಿಳಿದಾಗ ನನ್ನ ಹೈಸ್ಕೂಲ್ ಸಹಪಾಠಿ ನಂದ (ನಮ್ಮದೇ ಬೀದಿಯ ಜಯರಾಮಣ್ಣ ನ ಮಗಳು) ಅವಳ ಸಹಪಾಠಿ ಸೌಭಾಗ್ಯ ಬಸ್ಟಾಪ್ನಲ್ಲೆ ಹ್ಯಾಪ್ ಮೋರೆ ಹಾಕ್ಕೊಂಡ್ಕೂತಿದ್ರು. ೧೧ ಕಿ ಮೀ ನಟರಾಜ ಸರ್ವೀಸ್ ಶುರು ಮಾಡಿದ್ವಿ. ಬೆಳಿಗ್ಗೆ ತಿಂದ ತಿಂಡಿ ಯಾವಾಗ್ಲೋ ಖಾಲಿ ಆಗಿತ್ತು. ಹೊಟ್ಟೆ ಚುರುಗುಡ್ತಿತ್ತು. ಸಂತೆಬೀದಿಲಿ ಕಳ್ಳೆಪುರಿ(ಮಂಡಕ್ಕಿ) ಕೊಂಡು ಮೆಲ್ತಾ ಹೊರಟಾಗ ನನ್ನ ಬಾಲ್ಯದ ಸಹಪಾಠಿಗಳು ಹೇಳ್ತಿದ್ದ ದೆವ್ವದ ಕತೆಗಳು ಒಂದೊಂದೆ ನೆನಪು ಬರ್ಲಿಕ್ಕೆ ಆರಂಭಿಸಿದ್ವು. ಕೆರೆ ಪಕ್ಕದಲ್ಲಿರುವ ಸೇತುವೆ ಬಳಿ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಸತ್ತ ಐದೂ ಜನ ದೆವ್ವವಾಗಿರುವುದಾಗಿ ಹೆದರಿಸುತ್ತಿದ್ದ ಶಾಮ್ಲಿಯ ಭಯಾನಕ ಕಥೆಗಳು ಬೇಡವೆಂದರೂ ನೆನಪಿಗೆ ಬರುತ್ತಿದ್ದವು. ಮನೆ ಸೇರಿದಾಗ ರಾತ್ರಿ ೧ ಗಂಟೆ ಆಗಿತ್ತು.

’ಆಸೆಯಬಲೆ’ ಚಿತ್ರ ಬಿಡುಗಡೆ ಆದಾಗ ಪತ್ರಿಕೆಗಳಲ್ಲಿ ಆ ಶುಕ್ರವಾರದ ಚಿತ್ರಮಂಜರಿ ಕಾರ್ಯಕ್ರಮದಲ್ಲಿ ಒಂದು ಹಾಡು ಪ್ರಸಾರವಾಗುವುದಾಗಿ ಪ್ರಕಟಣೆ ಬಂದಿತ್ತು. ಅದರಲ್ಲೂ ಚಿತ್ರ ಬಿಡುಗಡೆಗೆ ಮುನ್ನ ವಿಷ್ಣು ಇದಕ್ಕಾಗಿ ವಿಶೇಷ ತರಬೇತಿ ಪಡೆದು ಬ್ರೇಕ್ ಡ್ಯಾನ್ಸ್ ಮಾಡಿದ್ದಾಗಿ ಪತ್ರಿಕೆಗಳು ವರದಿ ಮಾಡಿದ್ದವು. ಯಥಾ ಪ್ರಕಾರ ಸಂಜೆ ೮ ಗಂಟೆಗೆ ಚಿತ್ರ ಮಂಜರಿ ಕಾರ್ಯಕ್ರಮಕ್ಕೆ ನಾನು ಮಾಮೂಲಿನಂತೆ ಬಸ್ಸಿಗೆ ಬಂದು ವೀಕ್ಷಿಸುವುದಾಗಿ ಯೋಜನೆ ಹಾಕಿಕೊಂಡಿದ್ದು ಮತ್ತದೆ ಪ್ರಾಕ್ಟಿಕಲ್ಸ್ ಸಮಸ್ಯೆಯಿಂದ ಬಸ್ಸು ತಪ್ಪಿ ಹೋಗಿ ತುರುವೇಕೆರೆಗೆ ಬಂದಾಗ ರಾತ್ರಿ ೭.೫೦. ಸೋದರತ್ತೆ ಮನೆಗೆ ಓಡಿ ಹೋಗಿ ಅತ್ತೆ ಮಗನ ಸೈಕಲ್ ತಗೊಂಡು ತುಳಿಯಲು ಆರಂಭಿಸಿದೆ ೨ ಕಿ ಮೀ ಬಂದ ಕೂಡಲೆ ಮತ್ತದೆ ಬಾಲ್ಯದ ಸಹಪಾಠಿಗಳ ದೆವ್ವದ ಕತೆ ನೆನಪಾಗತೊಡಗಿತು. ಅದರಲ್ಲೂ ಪುರದ ಕ್ರಾಸ್ ಬಳಿ ಬರುತ್ತಿದ್ದಂತೆ ಸಹಪಾಠಿ ಕುಮಾರ ಹೇಳುತ್ತಿದ್ದ ಆ ಮರ ಹತ್ತಿರ ಬಂದೆ ಬಿಟ್ಟಿತು. ಈ ಮರವೇ ನಮ್ಮೂರಿನ ರಂಗೇಗೌಡನಿಗೆ ದೊಡ್ಡದಾಗಿ ಬೆಳೆದು ನಿಂತಂತೆ ಅದರ ಮೇಲೆಲ್ಲ ದೀಪಗಳು ಹೊತ್ತಿದಂತೆ ಕಂಡು ಬಂದು ೩ ದಿನ ಜ್ವರ ಹಿಡಿದು ಮಲಗಿದವನನ್ನು ದೆವ್ವ ಹಿಡಿದಿದೆ ಎಂದು ಗ್ರಾಮದೇವತೆ ದೇವಸ್ಥಾನದಲ್ಲಿ ಮಲಗಿಸಿದಾಗ ದೆವ್ವ ಬಿಟ್ಟು ಹೋಗಿದ್ದು ನೆನಪಾಗಿ ಬೆನ್ನಿನ ಹುರಿಯಲ್ಲಿ ಛಳಿ ಮೆಲ್ಲಗೆ ಪಯಣಿಸಿತು. ಇಂತಹ ಸ್ವಾರಸ್ಯಕರ ಕಥೆಗಳು ಹಲವು ಕುಮಾರನ ಬಾಯಲ್ಲಿ ಸುಳಿದಾಡುತ್ತಿದ್ದವು. ರಂಗೇಗೌಡನ ಅನುಭವಗಳನ್ನು ಆತ ಬಿಚ್ಚಿಡುತ್ತಿದ್ದ ರೀತಿ ನೆನೆಸಿ ಕೊಂಡರೆ ಈಗಲೂ ಮೈ ಜುಮ್ಮೆನಿಸುತ್ತದೆ. ಆದರೆ ವಿಷ್ಣುವಿನ ಚಿತ್ರದ ಆ ಹಾಡಿನ ಧ್ಯಾನ ನನ್ನೊಳಗೆ ಆವರಿಸಿದ್ದರಿಂದ ೧೨ ಕಿ ಮೀ ದೂರವನ್ನು ೧೫ ನಿಮಿಷದಲ್ಲಿ ಕ್ರಮಿಸಿ ಟಿವಿ ಮುಂದೆ ಕುಳಿತಾಗ ಏದುಸಿರು ಬಿಡುತ್ತಿದ್ದ ನನ್ನನ್ನು ಅಪ್ಪ ಬಾಯಿಗೆ ಬಂದಂತೆ ಬಯ್ದರೂ ನನಗೆ ಅದೇನೊ ಧನ್ಯತೆಯ ಭಾವ.

ಕೊನೆಯದಾಗಿ

ಅಷ್ಟೂ ದಿನವೂ ನನ್ನನ್ನು ಕಾಡುತ್ತಿದ್ದದ್ದು ಒಂದೇ ಪ್ರಶ್ನೆ, ವಿಷ್ಣು ಯಾಕೆ ಮತ್ತೆ ಪುಟ್ಟಣ್ಣನವರ ಚಿತ್ರಗಳಲ್ಲಿ ನಟಿಸಲಿಲ್ಲ? ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದ್ದು ನಾನು ಬೆಂಗಳೂರಿನಲ್ಲಿ ನೆಲೆ ನಿಂತಾಗ ಪರಿಚಿತನಾದ ಪುಟ್ಟಣ್ಣನವರ ಹತ್ತಿರ ಸಂಭಂಧಿ ಪ್ರಸನ್ನನಿಂದ. ಪ್ರಸನ್ನ, ನಾಗರತ್ನಮ್ಮ (ಪುಟ್ಟಣ್ಣನವರ ಪತ್ನಿ) ನವರ ಸಹೋದರನ ಮಗ.

ಒಮ್ಮೆ ನಾಯಕನಾಗಿ ಪರಿಚಯಿಸಿದ ಮೇಲೆ ಖಳನಾಗಿ ಕಾಣಿಸಿಕೊಳ್ಳಬಾರದೆಂದು ಆತನಿಗೆ ಪುಟ್ಟಣ ಹೇಳಿದರು. ಕಾರಣ ಅದು ರಾಜ್ಕುಮಾರ್ ಎದುರಿಗೆ ಎಂದಲ್ಲ ಯಾರೇ ಆದರೂ ಒಮ್ಮೆ ನಾಯಕನಾಗಿ ಬಡ್ತಿ ಪಡೆದ ಮೇಲೆ ಮತ್ತೆ ಹಿಂಬಡ್ತಿಯಾಗುವುದು ಸರಿ ಅಲ್ಲ ಎಂದರೂ ಕೇಳದೆ ಆತ ಗಂಧದ ಗುಡಿಯಲ್ಲಿ ಖಳನಾಗಿ ಅಭಿನಯಿಸಿದ್ದು ಪುಟ್ಟಣ್ಣನವರಿಗೆ ಸಹ್ಯವಾಗಲಿಲ್ಲ. ಅಂದಿನಿಂದ ಪುಟ್ಟಣ್ಣ ಆತನನ್ನು ತನ್ನ ಯಾವ ಚಿತ್ರಗಳಿಗೂ ಆಯ್ಕೆ ಮಾಡಲಿಲ್ಲ. ಈ ತೆರನಾದ ಶಿಕ್ಷೆಯನ್ನು ಬೇರೆ ಯಾರಿಗೂ ಪುಟ್ಟಣ್ಣ ವಿಧಿಸಿರಲಿಲ್ಲ. ಬಹುಶಃ ವಿಷ್ಣು ಆ ಮಾತು ಕೇಳಿದಿದ್ದರೆ ವಿಷ್ಣು ಮತ್ತೂ ಎತ್ತರಕ್ಕೆ ಏರುತ್ತಿದ್ದರೇನೊ? ಏಕೆಂದರೆ ಪುಟ್ಟಣ್ಣ ಶುಭಮಂಗಳ ಚಿತ್ರದಲ್ಲಿ ವಿಷ್ಣುವನ್ನು ಶ್ರೀನಾಥ್ ನಿರ್ವಹಿಸಿದ ಪಾತ್ರಕ್ಕೆ ಆಯ್ಕೆ ಮಾಡುವವರಿದ್ದರು. ಇದೇ ಕಾರಣಕ್ಕೆ ವಿಷ್ಣು ಆಯ್ಕೆಯಾಗಲಿಲ್ಲ ಎಂದು ಪ್ರಸನ್ನ ತಿಳಿಸಿದ. ದೂರದರ್ಶನವೊಂದ ಸಂದರ್ಶಕಿ ಒಬ್ಬಳು ವಿಷ್ಣುಗೆ ಇದೆ ಪ್ರಶ್ನೆ ಹಾಕಿದಾಗ ವಿಷ್ಣು ನನಗೆ ಸಿಕದ್ದು ಒಂದೆ ಅವಕಾಶ ಅದನ್ನೆ ಕೊನೆಯವರೆಗೆ ನೆನೆಸಿಕೊಳ್ಳುತ್ತೇನೆ ಎಂದು ಹಾರಿಕೆಯ ಉತ್ತರವಿತ್ತಿದ್ದರು.

ಮೊನ್ನೆ ಭಾರತಿ ಕೊನೆಯ ಬಾರಿ ವಿಷ್ಣುಗೆ ಮುತ್ತಿಟ್ಟಾಗ ಈ ಎಲ್ಲ ದೃಶ್ಯಗಳು ಸಿನೆಮಾದಂತೆ ನನ್ನೆದುರು ಹಾದು ಹೋದವು.

ಸಾಹಸಸಿಂಹನ ಮರೆಯದ ನೆನಪುಗಳು ಮತ್ತೆ ಮತ್ತೆ ಕಾಡುತ್ತಿವೆ.

ವಿಷ್ಣೂಜಿ ನೀವು ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿದಿರುತ್ತೀರಿ.

ನಿಶ್ಚಲ ಮನುಜಗೆ ಮರಣವು ಉಂಟೆ???