Friday, July 3, 2009

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-2

ಕಾಟ್ರಾದಿಂದ ಧರ್ಮಶಾಲಕ್ಕೆ ಇರುವ ಬಸ್ ಜಮ್ಮುವಿಗೆ ಬಂದಾಗ ಬೆಳಿಗ್ಗೆ ೮.೩೦. ನಮ್ಮೆಲ್ಲ ಹೊರೆಗಳನ್ನು ಹೊತ್ತ ಕೂಲಿಯವ ನಡೆಯುವುದು ನೋಡಿ ನನಗೆ ಗಾಭರಿಯಾಯ್ತು. ಸುಮಾರು ೧೦ ದೊಡ್ಡ ದೊಡ್ಡ ಚೀಲಗಳನ್ನು ಅನಾಯಾಸವಾಗಿ ತನ್ನಲ್ಲಿದ್ದ ಒಂದೇ ಒಂದು ಹಗ್ಗದ ಸಹಾಯದಿಂದ ಹೊತ್ತುಕೊಂಡು ನಡದೇ ಬಿಟ್ಟ. ಹೊರೆಗಳನ್ನೆಲ್ಲ ಬಸ್ಸಿನ ಮೇಲ್ಭಾಗಕ್ಕೆ ತುಂಬಿ ಬಸ್ ಹೊರಟ ಸ್ವಲ್ಪ ಸಮಯಕ್ಕೆ ಪ್ರಸಾದಿಯ ಚಮತ್ಕಾರ ಶುರುವಾಯ್ತು, ನನ್ನ ಅಂಗೈ ನೋಡುತ್ತ ಭವಿಷ್ಯ ಹೇಳುವಂತೆ ನಟಿಸುತ್ತಿದ್ದವನನ್ನನ್ನು ಹಿಂದೆ ಕುಳಿತಿದ್ದ ನಡುವಯಸ್ಸು ದಾಟಿದ ಹಳ್ಳಿಯವನೊಬ್ಬ ತನಗೂ ಹೇಳುವಂತೆ ಪೀಡಿಸಲು ಪ್ರಾರಂಭಿಸಿದ. ಹಿಂದಿ ಬರದ ಪ್ರಸಾದಿ ತನ್ನ ಹರಕು ಮುರಕು ಭಾಷೆಯಲ್ಲಿ ಹೆಳಿದ್ದಕ್ಕೆಲ್ಲ ಅವನು ತಲೆಯಾಡಿಸುತ್ತಿದ್ದದ್ದು ನಗು ತರಿಸುತ್ತಿತ್ತು. ಅವನ ಕಾಟ ಸಹಿಸಲಾರದ ಪ್ರಸಾದಿ ಕೊನೆಗೆ ನಾನು ಕನ್ನಡಕ ತಂದಿಲ್ಲವೆಂದು ಹೇಳಿ ತಪ್ಪಿಸಿಕೊಂಡ. ಗುರುದಾಸ್ಪುರ, ಪಠಾಣ್ ಕೋಟ್ ಮಾರ್ಗವಾಗಿ ಧರ್ಮಶಾಲಕ್ಕೆ ನಾವು ತಲುಪಿದಾಗ ಸೂರ್ಯ ನೆತ್ತಿಬಿಟ್ಟು ಕೆಳಗಿಳಿಯಲು ಆರಂಭಿಸಿದ್ದ. ಬಸ್ ನಿಲ್ದಾಣದಿಂದ ನೇರವಾಗಿ ಮಂಜುನಾಥರ ಮನೆಗೆ ಟ್ಯಾಕ್ಸಿಯಲ್ಲಿ ಬಂದಿಳಿದೆವು. ಶ್ರೀ ಮಂಜುನಾಥ ಮತ್ತು ಮನೆಯವರ ಆತ್ಮೀಯತೆ ಸ್ಮರಣೀಯ. ಉತ್ತರ ಭಾರತದ ತಿನಿಸುಗಳನ್ನು ತಿಂದು ಜಡ್ಡುಗಟ್ಟಿದ್ದ ನಾಲಿಗೆಗೆ ಒಳ್ಳೆಯ ಅವಲಕ್ಕಿಒಗ್ಗರಣೆ, ಉಪ್ಪಿನಕಾಯಿ ಮತ್ತು ಕಾಫಿ ಅಮೃತದಂತಿತ್ತು.

ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗಾಗಿರುವ ಬಡಾವಣೆಯಲ್ಲಿ ನಮ್ಮ ವಾಸ್ತವ್ಯ ತುಂಬಾ ಖುಷಿ ತಂತು. ಬೆಟ್ಟದ ಬುಡದಲ್ಲಿರುವ ಬಡಾವಣೆ, ಒಂದು ಸಾಲಿನ ಬೆಟ್ಟದ ನಂತರದ ಶ್ರೇಣಿಗಳಲ್ಲಿ ಮಂಜು ಆವೃತವಾಗಿರುವುದು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ. ಆದರೂ ಛಳಿ ಮಾತ್ರ ಸ್ವಲ್ಪವೂ ಇರಲಿಲ್ಲ. ರಾತ್ರಿ ಬಿಸಿಬೇಳೆಬಾತ್, ಅನ್ನ, ತಿಳಿಸಾರನ್ನು ಭರ್ಜರಿಬೇಟೆಯಾಡಿದೆವು. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಪರಮವೀರಚಕ್ರ ಪುರಸ್ಕೃತರ ಬಗ್ಗೆ ಇರುವ ಫಲಕಗಳು ನಮ್ಮ ಕಣ್ಣಂಚನ್ನು ತೇವಗೊಳಿಸದೆ ಬಿಡುವುದಿಲ್ಲ. ಇದೆ ರಕ್ಷ್ಣಣಾ ಬಡಾವಣೆಯ ಮುಂದಿರುವ ಟ್ಯಾಂಕ್ ಗಳು ೧೯೭೧ ರ ಯುದ್ದದಲ್ಲಿ ವಶಪಡಿಸಿಕೊಂಡವು ಎಂದು ಮಂಜುನಾಥ್ ತಿಳಿಸಿದರು. ರಕ್ಷಣಾವಲಯವಾದ್ದರಿಂದ ಚಿತ್ರಗಳನ್ನು ತೆಗೆದುಕೊಳ್ಳುವ ದುಃಸಾಹಸಕ್ಕೆ ಕೈಯಿಡಲಿಲ್ಲ. ಬೆಳಿಗ್ಗೆ ವಾಹನವೊಂದರಲ್ಲಿ ಮಾಡಿಕೊಂಡು ಮಂಜುನಾಥರ ಸಂಸಾರದೊಂದಿಗೆ ’ಜ್ವಾಲಾಜಿ’ಯತ್ತ ನಮ್ಮ ಪಯಣ. ಇಲ್ಲಿನ ಕಾಡುಗಳ ವಿಶೇಷತೆಯೆಂದರೆ ಕರಿಬೇವಿನ ಮರಗಳು ತುಂಬಿರುವುದು ದಾರಿಯುದ್ದಕ್ಕು ಇರುವ ಕುರುಚಲು ಕಾಡಿನಲ್ಲಿ ಕರಿಬೇವಿನ ಮರ ಹೇರಳವಾಗಿ ಬೆಳೆದಿದೆ. ಆದರೆ ಇಲ್ಲಿನ ಜನಕ್ಕೆ ಅದರ ಉಪಯೋಗ ಗೊತ್ತಿಲ್ಲ ಎಂಬುದು ಶ್ರೀಮತಿ ಮಂಜುನಾಥರ ಮಾಹಿತಿ. ಶ್ರೀಮತಿ ಗ್ತಾ ಅವರಂತು ಬೆಂಗಳೂರಿನಲ್ಲಿ ಕರಿಬೇವಿನ ಸೊಪ್ಪು ಸಿಗುವುದಿಲ್ಲವೆಂಬಂತೆ ಅದನ್ನು ಶೇಖರಿಸತೊಡಗಿದ್ದು ನನಗೆ ಅತ್ಯಂತ ಕುತೂಹಲಭರಿತ ತಮಾಷೆಯಾಗಿ ಕಾಣಿಸಿತು.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ಜ್ವಾಲಾಜಿ ದೇವಸ್ತಾನದ ಸಮೀಪಕ್ಕೆ ಬಂದು ನಿಂತಿದ್ದೆವು. ತನ್ನಿಂತಾನೆ ಉರಿಯುವ ಅಗ್ನಿ ಯೆ ಇಲ್ಲಿನ ದೇವರು ತಲೆಯ ಮೇಲೆ ಸುಡುವ ಸೂರ್ಯದೇವ. ಪಾರ್ವತಿಯೆಂದು ಆರಾಧಿಸುವ ಜನರು. ಔರಂಗಜೇಬ ಅದನ್ನು ತಟ್ಟೆಯಿಂದ ಮುಚ್ಚಿ ಆರಿಸಲು ನೋಡಿದ ಕುರುಹಾಗಿ ಬೆಂಕಿಯ ಬಿಸಿಗೆ ಕರಗಿ ತೂತಾಗಿರುವ ತಟ್ಟೆ ಈಗಲೂ ಪ್ರದರ್ಶನಕ್ಕಿದೆ. ಸುಮಾರು ೭ ಎಂಟು ಕಡೆ ಈ ತೆರನಾದ ಬೆಂಕಿ ನಿರಂತರವಾಗಿ ನಮ್ಮ ಗ್ಯಾಸ್ ಒಲೆಗಳಂತೆ ಉರಿಯುತ್ತಿರುತ್ತದೆ. ಕೆಲವು ನೀರಿನ ದಡದಲ್ಲೂ ಸಹ. ತನ್ನ ತಂದೆ ದಕ್ಷನಿಂದ ಅವಮಾನಿತಳಾಗಿ ಗತಿಸಿದ ಹೆಂಡತಿಯ ಶವವನ್ನು ಹೊತು ತಿರುಗುತ್ತಿದ್ದ ಶಿವನನ್ನು ಅದರಿಂದ ಹೊರ ತರಲು ತನ್ನ ಚಕ್ರದಿಂದ ಕಳೇಬರವನ್ನು ಚೂರಾಗಿಸಿದಾಗ ಕಳೇಬರದ ಭಾಗವೊಂದು ಇಲ್ಲಿ ಬಿದ್ದಿತ್ತೆಂದು ಇಲ್ಲಿ ಕಥೆ ಹೇಳುತ್ತಾರೆ. ಮತ್ತೊಮ್ಮೆ ಇಲ್ಲಿನ ಜನರ ಭಕ್ತಿಯ ಪರಾಕಾಷ್ಠತೆಯ ಪರಿಚಯ ಇಲ್ಲಿ ನನಗಾಯಿತು. ಸಿಖ್ಖರು ಕೂಡಾ ಇಲ್ಲಿನ ಮಾತೆಯ ದೇಗುಲಕ್ಕೆ ಭಕ್ತಿಯಿಂದ ನಡೆದುಕೊಳ್ಳುವುದು ವಿಶೇಷತೆ. ಸುಮಾರು ೨ ಗಂಟೆಗಳ ಸರತಿಸಾಲಿನಲ್ಲಿ ಉರಿಯುವ ಬಿಸಿಲಲ್ಲಿ ನಿಂತು ಎಲ್ಲ ಉರಿಯುತ್ತಿರುವ ಬೆಂಕಿಯ ದರ್ಶನಂಗೈದು ಹೊರಬಂದಾಗ ಸಮಯವಾಗಲೆ ೨ ಗಂಟೆ ದಾಟಿತ್ತು.

ಮನೆಯಿಂದಲೇ ತಯಾರಿಸಿ ತಂದಿದ್ದ ಪುಳಿಯೊಗರೆ ಮತ್ತು ಮೊಸರನ್ನವನ್ನು ತಿಂದು ಧರ್ಮಶಾಲದ ಸಮೀಪವಿರುವ ಮತ್ತೊಂದು ದೇಗುಲಕ್ಕೆ ಭೇಟಿಯಿತ್ತು ಮನೆಗೆ ತಲುಪಿದಾಗ ೭.೩೦. ಶ್ರೀ ಮಂಜುನಾಥ್ ಪರಮವೀರಚಕ್ರ ವಿಜೇತರ ಬಗ್ಗೆ ಮಾಹಿತಿ ನೀಡುತ್ತೇನೆಂದು ಭರವಸೆಯಿತ್ತರು. ಅವರಿಗೂ ಸಂಪದವನ್ನು ಪರಿಚಯಿಸಿದೆ. ಸದಸ್ಯರಾಗಿದ್ದಾರೆಯೆ? ಗೊತ್ತಿಲ್ಲ.
ನೇರವಾಗಿ ಚಿಂತಮಯಿ ದೇವಸ್ತಾನಕ್ಕೆ ಬಂದೆವು. ಸೂರ್ಯ ಈ ಹೊತ್ತಿಗಾಗಲೆ ನಾನಿನ್ನು ನಿಮ್ಮನ್ನು ಸುಡಲಾರೆ ಎಂದು ಬಸವಳಿದು ಮನೆಯತ್ತ ಓಡುತ್ತಿದ್ದ. ಚೂರಾದ ಶಿವನ ಪತ್ನಿಯ ದೇಹದ ಮತ್ತೊಂದು ಭಾಗ ಇಲ್ಲಿ ಬಿದ್ದಿತ್ತೆಂಬುದು ನಂಬಿಕೆ.

ಬೆಳಿಗ್ಗೆ ೭ ಗಂಟೆಗೆ ಮತ್ತೆ ನಮ್ಮ ಪ್ರಯಾಣ ಈ ಬಾರಿ ಅಮೃತಸರದ ಕಡೆಗೆ. ನಮ್ಮ ಪೂರ್ವನಿಗಧಿತ ಯೋಜನೆಯಂತೆ ಕುಲು-ಮನಾಲಿಗೆ ತೆರಳಬೇಕಿತ್ತು. ಆದರೆ ಗುಲ್ಮಾರ್ಗ್ ಮತ್ತು ಕಾಶ್ಮೀರಗಳನ್ನು ನೋಡಿದ ಮೇಲೆ ಅದರ ಅವಶ್ಯಕತೆಯಿಲ್ಲವೆಂದು ಶ್ರೀಕಾಂತ್ ಮತ್ತು ಪ್ರಸಾದಿಯ ಸಲಹೆಗೆ ನನಗೆ ಮನಸ್ಸಿಲ್ಲದಿದ್ದರೂ ಒಪ್ಪಲೇಬೇಕಾಯಿತು. ಸರಿ ಅದರಂತೆ ಹೊರಟಾಗ ದಾರಿಯುದ್ದಕ್ಕೂ ಕಣಿವೆಗಳು ಆಳದಲ್ಲಿ ಹರಿದು ಬರುತ್ತಿರುವ ನದಿ. ಬಿಸಿಲಿನ ಝಳ ನಮ್ಮನ್ನು ನೀರಿಗಿಳಿಯುವಂತೆ ಮಾಡಿತು. ಸಾರ್ ವಾಘಾ ಗಡಿ ತಲುಪುವುದು ಕಷ್ಟ ಆಗುತ್ತೆ ಎಂದು ಅಲವತ್ತುಕೊಂಡ ಚಾಲಕನ ಮಾತನ್ನು ಗಮನಿಸದೆ ೧ ಗಂಟೆಗಳ ಕಾಲ ನೀರಲ್ಲಿ ಕಳೆದೆವು. ಹಿಮಾಚಲ ಪ್ರದೇಶವನ್ನು ದಾಟಿ ಪಂಜಾಬ್ ಪ್ರಾಂತ್ಯವನ್ನು ಪ್ರವೇಶಿಸಿದಾಗಲೆ ಉತ್ತರಭಾರತದ ಕಡು ಕೆಟ್ಟ ಬಿಸಿಯ ಅನುಭವವಾದದ್ದು. ಬೆಂಗಳೂರಿನಿಂದ ರೈಲಿನಲ್ಲಿ ಬರಬೇಕಾದರೆ ಮಧ್ಯಪ್ರದೇಶ ದಾಟಿದ ಮೇಲೆ ಬಿಸಿಯ ಅನುಭವವಾದರೂ ೨ನೆ ದರ್ಜೆಯ ಹವಾನಿಯಂತ್ರಿತ ದಬ್ಬಿಯಲ್ಲಿದ್ದದರಿಂದ ಈ ತೆರನಾದ ಬಿಸಿಲಿನ ಝಳದ ಅನುಭವವಾಗಿರಲಿಲ್ಲ. ೧೯೭೯ರಲ್ಲಿ ನಮ್ಮ ತಂದೆಯ ರಬ್ಬರ್ ಚಪ್ಪಲಿ ಆಗ್ರಾದಲ್ಲಿನ ಬಿಸಿಲಿನ ಬಿಸಿಗೆ ಜಿನುಗುವುದನ್ನು ನಾನು ಕಂಡಿದ್ದೆ ಆದರೆ ಅದೆಲ್ಲ ೩೦ ವರ್ಷಗಳ ಹಿಂದಿನ ನೆನಪು ಮಾತ್ರ ಇತ್ತು. ನೀರು ಸಿಕ್ಕ ಕಡೆಯಲ್ಲೆಲ್ಲ ತಲೆಗೆ ಸುರಿದು ಕೊಳ್ಳುತ್ತ ಒದ್ದೆ ಬಟ್ಟೆಗಳನ್ನು ವಾಹನದ ಕಿಟಕಿಗೆ ಅಡ್ಡ ಹಿಡಿದು ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳುವ ನಮ್ಮ ಯಾವ ಪ್ರಯತ್ನಗಳು ಹೆಚ್ಚು ಫಲ ಕೊಡಲಿಲ್ಲ. ಮಧ್ಯಾಹ್ನ ಶ್ರೀಮತಿಮಂಜುನಾಥ್ ತಯಾರಿಸಿಕೊಟ್ಟಿದ್ದ ಚಪಾತಿಯನ್ನು ಜಲಂಧರ್ ಸಮೀಪದಲ್ಲಿದ್ದ ಪಂಜಾಬ್ ರಾಜ್ಯ ಡೈರಿಯ ಮುಂದೆ ಇರುವ ಉದ್ಯಾನವನದಲ್ಲಿ ತಿಂದು ಮುಗಿಸಿದೆವು. ಲಸ್ಸಿ ಕುಡಿದು ಮತ್ತೊಮ್ಮೆ ನೀರು ತುಂಬಿಕೊಂಡು ಹೊರಟೆವು.

ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕ ಕುಲ್ದೀಪ್ ಸಂಜೆ ೫ ರ ಸುಮಾರಿಗೆ ವಾಘಾ ಗಡಿಗೆ ನಮ್ಮನ್ನು ತಲುಪಿಸಿದ. ಅರ್ಧ ಮೈಲಿಯಷ್ಟು ನಡೆದು ಭಾರತ ಪಾಕೀಸ್ತಾನ ಗಡಿಯನ್ನು ತಲುಪಿದೆವು. ಸಂಜೆ ಕತಲಾಗುವುದಕ್ಕೆ ಮುನ್ನ ರಾಷ್ಟ್ರಧ್ವಜವನ್ನು ಇಳಿಸಿ ಗಡಿ ಮುಚ್ಚುವ ಪ್ರಕ್ರಿಯೆಯಲ್ಲಿ ನಡೆಯುವ ಕೆಲವು ಪೆರೇಡ್ ಗಳು ಆಕರ್ಷಣೀಯ. ಆ ಪ್ರಕ್ರಿಯೆಗೂ ಮುನ್ನ ಅಲ್ಲಿ ರಾಷ್ಟ್ರಭಕ್ತಿ ಗೀತೆಗಳನ್ನು ಮೊಳಗಿಸಿ ಬಂದಿದ್ದ ತರುಣಿಯರು, ಹೆಂಗಸರು ಮತ್ತು ಮಕ್ಕಳು ಮಾಡಿದ ನೃತ್ಯ ಸೊಗಸಾಗಿತ್ತು. ಪಂಜಾಬಿನ ತರುಣಿಯರಿಗೆ ನೃತ್ಯ ಬಹುಶಃ ಜನ್ಮದಲ್ಲೆ ಬಂದ ಕಲೆಯಿರಬೇಕು. ಬೋಲೋ ಭಾರತ್ ಮಾತಾಕಿ ಜೈ ಎಂಬ ಶಬ್ದವನ್ನು ಗಡಿಯಾಚೆಗೂ ಅನುರಣಿಸುವಂತೆ ಮಾಡಿದ ಶ್ರೀಕಾಂತ ಅಭಿನಂದನೀಯ. ರಾಷ್ಟ್ರಧ್ವಜವನ್ನು ಹಿಡಿದು ಗಡಿವರೆಗೂ ಓಡಿಹೋದ ಚಿತ್ರಾ ಮತ್ತು ಗೀತಾರ ಮುಖದಲ್ಲಿ ಅದೇನೋ ಗೆದ್ದ ಮನೋಭಾವ. ೭ ಗಂಟೆಗೆ ಸುಮಾರಿಗೆ ಅಲ್ಲಿಂದ ಹೊರಟು ೮ ಗಂಟೆ ಸುಮಾರಿಗೆ ಅಮೃತಸರಕ್ಕೆ ಹಿಂತಿರುಗಿ ಗುರುದ್ವಾರದ ಧರ್ಮಶಾಲೆಯೊಂದರಲ್ಲಿ ಹವಾನಿಯಂತ್ರಿತ ಕೊಠಡಿಯೊಂದನ್ನು ಪಡೆದು ನಮ್ಮ ಹೊರೆಗಳನ್ನೆಲ್ಲ ಕೋಣೆಗೆ ತುಂಬಿದೆವು. ಗುರುದ್ವಾರದ ಹೊರಗೆ ಹಗಲಿರುಳು ನಡೆಯುವ ಧರ್ಮದೂಟವೆಂದು ಕೊಟ್ಟ ರೊಟ್ಟಿ ತಿಂದು ಸ್ವರ್ಣಮಂದಿರಕ್ಕೆ ತೆರಳಿದೆವು. ಹೊರಗೆ ಬಿಸಿ ಹಬೆಯಿದ್ದರೂ ಮಂದಿರದ ಭಾಗದಲ್ಲಿ ಮಾತ್ರ ಹವೆ ತಂಪಾಗಿದ್ದದ್ದು ನಮ್ಮನ್ನು ಅಲ್ಲೆ ಹೆಚ್ಚು ಸಮಯ ಕಳೆಯುವಂತೆ ಮಾಡಿತು. ಇಲ್ಲಿನ ಸ್ವರ್ಣಮಂದಿರ ಸ್ವಚ್ಚತೆ ಮಾತ್ರ ಅತ್ಯಂತ ಪ್ರಶಂಸನೀಯ. ಎಲ್ಲವೂ ಸ್ವಯಂ ಸೇವಕರಿಂದ ಅಚ್ಚುಕಟ್ಟಾಗಿ ನಿರ್ವಹಿಸಲ್ಪಡುತ್ತಿರುವ ಸ್ವರ್ಣಮಂದಿರ ಮನಸೆಳೆಯುತ್ತದೆ. ಸ್ವರ್ಣ ಮಂದಿರವನ್ನು ಸಂದರ್ಶಿಸಿ ಬಂದು ಕೋಣೆಗೆ ಬಿದ್ದದ್ದಾಯ್ತು. ಬೆಳಿಗ್ಗೆ ಅಮೃತಸರದಲ್ಲಿದ್ದ ಬೇರೆ ಬೇರೆ ಮಂದಿರಗಳ ದರ್ಶನದ ನಂತರ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ಬಂದು ತಲುಪಿದೆವು. ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಜನ ಬಿದ್ದ ಬಾವಿ, ಗೋಡೆಗೆ ತಗುಲಿದ ಗುಂಡೇಟುಗಳು ಅಂದು ನಡೆದ ದುರಂತಕ್ಕೆ ಸಾಕ್ಷೀಭೂತವಾಗಿ ನಿಂತಿವೆ.

ಸೈಕಲ್ ರಿಕ್ಷಾಗಳು ಇಷ್ಟು ಕಡಿಮೆ ದರದಲ್ಲಿ ನಿಮಗೆ ಸಿಗುತ್ತವೆಂದರೆ ನಂಬಲೂ ಸಾಧ್ಯವಿಲ್ಲ. ೩-೪ ಕಿ.ಮೀ ಗಳಿಗೆ ಕೇವಲ ೪-೫ ರೂಗಳಿಗೆ ದುಂಬಾಲು ಬೀಳುತ್ತಾರೆ ಅತ್ಯಂತ ಶ್ರಮಜೀವಿ ಪಂಜಾಬಿಗಳು ಇಲ್ಲಿ ನಮಗೆ ಭಿಕ್ಷುಕರೇ ಕಾಣ ಸಿಗಲಿಲ್ಲ. ನೀರೆತ್ತುವ ಅಥವ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ನಾವು ಬಳಸುವ ಡೀಸೆಲ್ ಜನರೇಟರ್ ಗಳನ್ನೆ ಬಳಸಿ ೪ ಚಕ್ರದ ವಾಹನ ಮಾಡಿಕೊಂಡು ಓಡಿಸುವ ಇವರು ಬುದ್ದಿವಂತರೂ ಕೂಡ. ಮತ್ತೊಮ್ಮೆ ರಾತ್ರಿ ಸ್ವರ್ಣಮಂದಿರಕ್ಕೆ ಭೇಟಿ ನೀಡಿದೆವು. ಸೈಕಲ್ ರಿಕ್ಷಾಗಳಲ್ಲಿ ನಮ್ಮ ಹೊರೆಗಳನ್ನೆಲ್ಲ ತುಂಬಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದು ಅಮೃತಸರದಿಂದ ಚಂಡೀಗಡ ತಲುಪಲು ಅಂಬಾಲ ದಂಡಿನವರೆಗೆ ಕಾದಿರಿಸಿದ್ದ ರೈಲಿನಲ್ಲಿ ಪ್ರಯಾಣಿಸಿ ಬೆಳಗಿನ ಜಾವ ೪ ಗಂಟೆಗೆ ೫೦ ಕಿ.ಮೀ ದೂರವಿದ್ದ ಚಂಡೀಗಡವನ್ನು ಮತ್ತೊಂದು ರೈಲಿನಲ್ಲಿ ತಲುಪಿದಾಗ ಬೆಳಿಗೆ ೬.೦೦ ಗಂಟೆ. ಈಗಾಗಲೇ ಚಂಡೀಗಡಕ್ಕೆ ಬಂದು ಅನುಭವವಿದ್ದ ಶ್ರೀಕಾಂತ ಹೇಳಿದಂತೆ ರಾಕ್ ಗಾರ್ಡನ್ ಮತ್ತು ಒಂದು ಸರೋವರವನ್ನು ನೋಡಿದೆವು. ಸುಡು ಬಿಸಿಲು ಬೆಂದುಹೋಗುವಷ್ಟು ಪ್ರಖರವಾಗಿತ್ತು. ಯಾರ ಮುಖದಲ್ಲೂ ಕಳೆಯಿರಲಿಲ್ಲ. ಬರೀ ಉಪಯೋಗಿಸಿ ಬಿಸಾಡಿದ ವಸ್ತುಗಳಿಂದಲೆ ನಿರ್ಮಿಸಿರುವ ರಾಕ್ ಗಾರ್ಡನ್ ಆಗಲಿ ಸುಂದರ ಸರೋವರವಾಗಲಿ ನಮ್ಮ ಮನಸೆಳೆಯಲಿಲ್ಲ ಬಹುಶಃ ಬಿಸಿಲಿನಿಂದ ಬಸವಳಿದು ಹೋಗಿದ್ದೆವು. ಅದು ಫೋಟೋಗಳಲ್ಲಿ ಕೂಡ ಪ್ರತಿಫಲಿತವಾಗಿದೆ. ಮಧ್ಯಾಹ್ನ ೨ ಗಂಟೆಗಿದ್ದ ರೈಲನ್ನು ಹಿಡಿದು ೩ನೇ ದರ್ಜೆ ಎಸಿಯಲ್ಲಿ ಮಲಗಿದವರಿಗೆ ಎಚ್ಚರವಾಗಿದ್ದು ೬ಕ್ಕೆ. ಎಲ್ಲರಿಗೂ ನವ ಚೈತನ್ಯವನ್ನು ತಂದುಕೊಟ್ಟ ಈ ರೈಲಿನ ಪ್ರಯಾಣ ನೆಮ್ಮದಿ ತಂತು. ಏಕೆಂದರೆ ಚಂಡಿಗಡದ ರಣ ಬಿಸಿಲು ನಮ್ಮೆಲ್ಲರನ್ನೂ ಹೈರಾಣವಾಗಿಸಿತ್ತು. ಸಂಜೆ ೬.೩೦ರ ಸುಮಾರಿಗೆ ಹರಿದ್ವಾರಕ್ಕೆ ಬಂದಿಳಿದೆವು.

ಬೆಂಗಳೂರಿನಿಂದಲೆ ಸ್ನೇಹಿತ ರಾಜೀವ್ ಅವರ ದಾಯಾದಿ ಶ್ರವಣ್ ಅವರಿಂದ ನಮಗಾಗಿ ಕಾದಿರಿಸಿದ ವಾಹನದಲ್ಲಿ ನಮಗಾಗಿ ಮೀಸಲಾಗಿದ್ದ ಬಿ.ಹೆಚ್.ಇ.ಎಲ್ ಅತಿಥಿಗೃಹಕ್ಕೆ ತಲುಪಿ ಅವರು ಕೊಟ್ಟ ಊಟವನ್ನು ಮಾಡಿ ಇನ್ನು ಮುಂದಿನ ದಿನಕ್ಕೆ ನಮ್ಮ ಸಾರಥಿಯಾಗಿ ಬಂದಿದ್ದ ಸುಶೀಲ್ ಪಾಂಡೆಯನ್ನು ಬೆಳಿಗ್ಗೆ ಬೇಗನೆ ಬರುವಂತೆ ತಿಳಿಸಿದೆವು.

೨೪ರ ಹರೆಯದ ಯುವಕ ಪಾಂಡೆ ಒಳ್ಳೆಯ ಮಾತುಗಾರ. ಮದುವೆಗೆ ಹುಡುಗಿಯ ಹುಡುಕಾಟದಲ್ಲಿದ್ದ ಅವನನ್ನು ಛೇಡಿಸುತ್ತಾ ಸಾಗುತ್ತಿದ್ದದ್ದು ಅವನಿಗೂ ಖುಷಿಕೊಟ್ಟಿತು. ನಮ್ಮ ಇಂದಿನ ಪ್ರಯಾಣದ ಗುರಿ ಗೌರಿಕುಂಡ. ಋಷಿಕೇಶದ ನಂತರ ಬರೀ ಕಣಿವೆಗಳಲ್ಲಿ ಸಾಗುವ ರಸ್ತೆ. ಎಲ್ಲೆಲ್ಲೂ ಉರಿಬಿಸಿಲು ಪ್ರಯಾಣವನ್ನು ಪ್ರಯಾಸವನ್ನಾಗಿಸುತ್ತಿತ್ತು. ಇದರ ಮಧ್ಯೆ ಒಳ್ಳೆಯ ಹೋಟೆಲ್ಗಳು ಸಿಗದೆ ಹಣ್ಣುಗಳು ಸಿಗದೆ ಹಸಿವು ಕಾಡುತ್ತಿದ್ದರು ಬೇರೆ ವಿಧಿಯಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಯಾವುದೋ ಒಂದು ಡಾಭಾದ ಮುಂದೆ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಪಾಂಡೆ. ಮತ್ತೊಮ್ಮೆ ಅದೆ ರುಚಿಯಿಲ್ಲದ ಸಾಸಿವೆ ಎಣ್ಣೆಯ ಅಡುಗೆ ವಾಕರಿಕೆ ತರಿಸುತ್ತಿತ್ತು. ಹೇಗೋ ಸಂಭಾಳಿಸಿಕೊಂಡು ಸೇರಿದಷ್ಟು ನುಂಗುತ್ತಾ ಸಂಭಾಳಿಸಿಕೊಳ್ಳುತ್ತಿದ್ದೆವು. ದಾರಿಯು ಕಣಿವೆಯುದ್ದಕ್ಕೂ ಹೊಗೆ ತುಂಬಿದ್ದು ನನಗೆ ಆಶ್ಚರ್ಯ ತರಿಸುತ್ತಿತ್ತು ಬಹುಶಃ ಬಿಸಿಲಿನ ಝಳಕ್ಕೆ ಹಾಗೆ ಕಾಣಿಸುತ್ತಿದ್ದಿರಬೇಕು. ರಸ್ತೆಯ ಮಧ್ಯೆ ವಾಹನ ನಿಲ್ಲಿಸಿ ದೇಖೋ ಸಾಬ್ ಎ ರುದ್ರಪ್ರಯಾಗ್ ದೇವ ಪ್ರಯಾಗ್ ಹೈ ಎಂದು ಹೇಳುತ್ತಿದ್ದ ಪಾಂಡೆ. ಒಂದು ಕಣಿವೆಯಿಂದ ಹಸಿರು ಮಿಶ್ರಿತ ನೀರು ಮತ್ತೊಂದು ಕಣಿವೆಯಿಂದ ಹರಿದು ಬರುತ್ತಿದ್ದ ಮಣ್ಣುಮಿಶ್ರಿತ ನೀರು ಸೇರುವ ಸಂಗಮಗಳು ಅಲ್ಲೊಂದು ದೇವಸ್ತಾನ. ೩-೪ ಪ್ರಯಾಗಗಳ ನಂತರ ಸಂಜೆ ಚಹಾ ಸೇವನೆಯ ನಂತರ ಗುಪ್ತಕಾಶಿಯಲ್ಲಿ ವಾಹನ ನಿಲ್ಲಿಸಿದ ಪಾಂಡೆ ಇಲ್ಲಿರುವ ಕಾಶಿವಿಶ್ವೇಶ್ವರ ದೇವಸ್ತಾನಕ್ಕೆ ಭೇಟಿಯಿತ್ತೆವು. ಇದರ ಮುಖ್ಯ ಅರ್ಚಕರು ದಾವಣಗೆರೆಯ ಕನ್ನಡಿಗರು.

ರಾಜ್ಯಾಡಾಳಿತ ಮುಗಿಸಿದ ಪಾಂಡವರು ಸ್ವರ್ಗಾರೋಹಣಕ್ಕಾಗಿ ಹಿಮಾಲಯದ ಕಡೆ ನಡೆದು ಬರುತ್ತಿರುವಾಗ ಶಿವ ತಪಸ್ಸು ಮಾಡುತ್ತಿದ್ದ ಈ ಸ್ಥಳಕ್ಕೆ ದರ್ಶನಕ್ಕೆ ಬರುತ್ತಾರೆ. ಅದರ ಸುಳಿವು ತಿಳಿದ ಸೋದರ ಹತ್ಯೆ ಮಾಡಿದ ಪಾಂಡವರಿಗೆ ದರ್ಶನ ಕೊಡಲು ಮನಸ್ಸಿಲ್ಲದೆ ಶಿವ ಇಲ್ಲಿಂದ ಮಾಯವಾಗುತ್ತಾನೆ. ಅವನು ತಪಸ್ಸು ಮಾಡಿದ ಈ ಸ್ಥಳವನ್ನು ಪಾಂಡವರು ಪೂಜಿಸುತ್ತಾರೆ ಅದೆ ಗುಪ್ತಕಾಶಿ. ದೇವಳದ ಮುಂಭಾಗದಲ್ಲಿ ಎರಡೂ ಕಡೆಯೂ ಸಣ್ಣದಾಗಿ ಭೀಳುವ ನೀರನ್ನು ಒಂದು ಕಲ್ಯಾಣಿಯಲ್ಲಿ ಸಂಗ್ರಹಗೊಂಡು ಮುಂದೆ ಹರಿದು ಹೋಗುತ್ತದೆ. ಇದನ್ನು ಯಮುನೆ ಮತ್ತು ಗಂಗಾ ತೀರ್ಥವೆಂದೂ ಕರೆಯುತ್ತಾರೆ ಎನ್ನುವುದು ಅಲ್ಲಿನವರು ತಿಳಿಸಿದ ಸ್ಥಳ ಪುರಾಣ. ಗುಪ್ತಕಾಶಿಯಲ್ಲಿ ಕರ್ನಾಟಕದಿಂದ ಬಂದಿದ್ದ ಪ್ರವಾಸಿಗಳು ನಮಗೆ ಎದುರಾದರು. ಕೆಲವರನ್ನು ಮಾತನಾಡಿಸುತ್ತಾ ಕೆಲವರಿಗೆ ಮುಗುಳ್ನಗೆ ವಿನಿಮಯಿಸುತ್ತಾ ಸಾಗಿದೆವು. ಸಾಬ್ ಜಲ್ದಿ ಆವೋ ಗೇಟ್ ಬಂದ್ ಹೋಜಾತಾ ಹೈ ಎನ್ನುವ ಪಾಂಡೆಯ ಕರೆಗೆ ಓಗೊಟ್ಟು ವಾಹನ ಹತ್ತಿದೆವು. ರಾತ್ರಿ ೮ ಗಂಟೆಯ ಸುಮಾರಿಗೆ ಸರಸ್ವತಿಪುರ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದ ಪಾಂಡೆ ಸಾರ್ ಗೌರಿಕುಂಡದಲ್ಲಿ ಕೋಣೆಗಳು ಸಿಗುವುದಿಲ್ಲ ಆದ್ದರಿಂದ ಇಲ್ಲೆ ಉಳಿಯೋಣ ಇಲ್ಲಿಂದ ಗೌರಿಕುಂಡ ಕೇವಲ ೫ .ಮೀ ದೂರವಿದೆ ಎಂದು ನಮ್ಮನ್ನು ಪುಸಲಾಯಿಸಿದ ಅವನ ಹುನ್ನಾರ ನನಗೆ ತಿಳಿಯಿತು. ಸರಿ ಅವನೆಂದಂತೆ ಅಲ್ಲೆ ಇದ್ದ ಹೊಟೆಲ್ಲೊಂದರಲ್ಲಿ ಕೋಣೆ ತೆಗೆದುಕೊಂಡು ಅನ್ನಪೂರ್ಣ ಎಂಬ ಹೋಟೇಲ್ನಲ್ಲಿ ಊಟ ಮಾಡಿ ಮಲಗಿದೆವು.
ಮುಂದುವರೆಯುತ್ತದೆ..................

No comments: