೦೮/೦೮/೨೦೦೭ ರಂದು ಶರ್ಮರಿಂದ ರಾತ್ರಿ ೯ ಗಂಟೆಯ ಸಮಯಕ್ಕೆ ದೂರವಾಣಿ ಕರೆಬಂತು ಅಣೆಕಟ್ಟೆಯ ಬಾಗಿಲುಗಳು ತೆರೆಯುತ್ತಿವೆ ಹೊರಟು ಬನ್ನಿ ಎಂಬ ಸಂದೇಶ. ಸರಿ ರಾತ್ರಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುವುದು ಕಷ್ಟಕರ. ಬರುವ ಇಂಗಿತ ವ್ಯಕ್ತಪಡಿಸಿದ ಪತ್ನಿಗೆ ಸಾಧ್ಯವಿಲ್ಲವೆಂದು ತಿಳಿಸಿ, ಹೇಗೆ ಹೋಗೋದು ಎಂದು ಯೋಚಿಸುತ್ತಿದ್ದವನಿಗೆ ಸಹಾಯ ಮಾಡಿದ ಪತ್ನಿಗೊಂದು ಧನ್ಯ್ವಾದ ಅರ್ಪಿಸದಿದ್ದರೆ ಜೊತೆಯಲ್ಲಿ ಕರೆದೊಯ್ಯದಿದ್ದಕ್ಕೆ ಕೋಪಿಸಿಕೊಂಡಿದ್ದ ಪತ್ನಿಯ ಕೋಪಕ್ಕೆ ತುಪ್ಪ ಸುರಿದಂತೆಯೆ ಸೈ. ೧೧.೩೦ಕ್ಕೆ ಹೊರಡುವ ಶಿವಮೊಗ್ಗೆಯ ರೈಲಿಗೆ ಬಟ್ಟೆ ಚೀಲಕ್ಕೆ ತುಂಬಿಕೊಂಡವನು ಮನೆಯವರಿಗೆಲ್ಲ ಕೈಬೀಸಿ ಬಸ್ ನಿಲ್ದಾಣಕ್ಕೆ ನಡೆದೆ. ಬಿ.ಇ.ಎಲ್ ವೃತ್ತದಲ್ಲಿ ಬಸ್ಸಿನಿಂದಿಳಿದು ಗೊರಗುಂಟೆ ಪಾಳ್ಯದವರೆಗೆ ಖಾಸಗಿ ವಾಹನವೊಂದರಲ್ಲಿ ಬಂದಿಳಿದಾಗ ರಾತ್ರಿ ೧೦.೩೦. ಟಿಕೆಟ್ ಕಾದಿರಿಸುವುದು ಸಾಧ್ಯವಿಲ್ಲ ಎಂದು ತಿಳಿದು ಬಂತು. ಸರಿಯಾಗಿ ೧೧.೪೫ ಕ್ಕೆ ರೈಲು ನಿಲ್ದಾಣಕ್ಕೆ ಬಂತು. ಟಿಕೆಟ್ ಕಾದಿರಿಸಿರಲಿಲ್ಲವಾದ್ದರಿಂದ ಸಾಮಾನ್ಯ ಬೋಗಿಗೆ ನುಗ್ಗಿದೆ. ಎಲ್ಲ ಆಸನಗಳೂ ಭರ್ತಿಯಾಗಿದ್ದವು. ಟಿ.ಟಿ ಯನ್ನು ಹುಡುಕಿ ಮಲಗಲು ಜಾಗ ಸಿಕ್ಕಾಗ ರೈಲು ತುಮಕೂರು ತಲುಪಿತ್ತು. ಭದ್ರಾವತಿ ಬಳಿ ಬಂದಾಗ ಎಚ್ಚರಗೊಂಡೆ ಸಮಯ ೫ ಗಂಟೆಯಿರಬೇಕು.
ರೈಲಿನ ಹಳಿಯ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳಗಳು ಬಿದ್ದಿದ್ದ ಮಳೆಯ ಪ್ರಮಾಣದ ಸಂಕೇತವಾಗಿದ್ದವು. ಶಿವಮೊಗ್ಗ ನಿಲ್ದಾಣ ತಲುಪಿದಾಗ ೬ ಗಂಟೆ. ನಿಲ್ದಾಣದಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ಹೊರಗೆ ನಿಂತಿದ್ದ ಬಸ್ ಹಿಡಿದೆ. ಸೀಟ್ ಸಿಗುವ ಲಕ್ಷಣವಿರಲಿ ಒಳಗೆ ಹೋಗಲೂ ಜಾಗವಿರದ ಬಸ್ಸಿನಲ್ಲಿ ಹೇಗೋ ತೂರಿಕೊಂಡು ಒಳಸೇರಿದೆ. ೮ ಗಂಟೆಗೆ ಸಾಗರ ತಲುಪಿಸಿದ ಪುಣ್ಯಾತ್ಮ. ನೇರವಾಗಿ ಅಕ್ಕನ ಮನೆಗೆ ನಡೆದೆ. ಸ್ನಾನ ಮಾಡಿ ಅಕ್ಕ ಕೊಟ್ಟ ತಿಂಡಿ ತಿಂದು. ಸೀದಾ ಬಸ್ ನಿಲ್ದಾಣಕ್ಕೆ ಬಂದು ತಳವಾಟದ ಕಡೆಯ ಬಸ್ ಹತ್ತಿದೆ. ೧೦ ನಿಮಿಷದಲ್ಲಿ ತಳವಾಟದಲ್ಲಿಳಿದಿದ್ದೆ. ಬೈಕಿನಲ್ಲಿ ಬಂದ ಶರ್ಮ ಪರಿಚಯದ ನಂತರ ಅವರ ಬೈಕಿನಲ್ಲಿ ಕುಳಿತವನಿಗೆ ಜೀವ ಬಾಯಿಗೆ ಬರುವುದೊಂದು ಬಾಕಿ ಅವರು ಆ ಜಾರುವ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಪರಿ ಆ ರೀತಿಯಿತ್ತು. ಇವರೇನಾದ್ರು ಮುಂಚೆ ಯಾವ್ದಾದ್ರೂ ಬೈಕ್ ರೇಸ್ಗೆ ಹೋಗಿದ್ರೇನಪ್ಪ ಅನ್ಸಿತ್ತು. ೨ ನಿಮಿಷದಲ್ಲಿ ಬೈಕ್ ಮನೆ ಮುಂದೆ ನಿಂತಿತ್ತು, ನನಗೆ ಹೋಗುತ್ತಿದ್ದ ಜೀವ ಮರಳಿ ಬಂದಿತ್ತು. ವಾವ್ ಎಂತಹ ಸುಂದರ ಪರಿಸರದ ಮನೆ ಅಂತೀರಿ. ಯಾರಾದ್ರು ಲೇಖಕರು ಬರೆಯಲಿಕ್ಕೆ ಕುಳಿತರೆ ಆ ಮನೆಯ ಬಗ್ಗೆ ಒಂದು ಪುಸ್ತಕ ಬರೆಯಬಹುದೇನೊ? ನನ್ನನ್ನು ಅತಿಯಾಗಿ ಸೆಳೆದದ್ದು ಕೊಟ್ಟಿಗೆಯಲ್ಲಿದ್ದ ಹಸುವಿನ ಕರು.
ಸ್ನಾನ ಸಂಧ್ಯಾವಂದನೆ ಮುಗಿಸಿದ ಶರ್ಮರೊಡನೆ ಮತ್ತೊಂದು ಸುತ್ತಿನ ತಿಂಡಿ. ಶರ್ಮ ಅವರ ಮಗ, ಶರ್ಮ ಅವರ ಅಣ್ಣನ ಮಗಳು ಮತ್ತು ನನ್ನನ್ನು ಹೊತ್ತ ಮಾರುತಿ ಓಮ್ನಿ ಜೋಗಿನ ದಾರಿ ಹಿಡಿಯಿತು. ಚೈನಾ ಗೇಟ್ ಬಳಿ ಇನ್ನೇನು ಸೇತುವೆ ಯ ಮೇಲ್ಭಾಗವನ್ನು ತಲುಪುವಂತೆ ಹರಿಯುತ್ತಿದ್ದ ಕೆಂಪು ಬಣ್ಣದ ಶರಾವತಿ ಭಯ ಹುಟ್ಟಿಸಿದಳು. ನನಗೋ ಬೇಗ ಜಲಪಾತ ತಲುಪುವ ಕಾತರ. ೧೦ ನಿಮಿಷಗಳಲ್ಲಿ ಜಲಪಾತದೆದುರಿಗೆ ನಿಂತಿದ್ದೆವು. ಅಣೆಕಟ್ಟೆಯ ೮ ಬಾಗಿಲುಗಳನ್ನು ತೆರೆಯಲಾಗಿತ್ತು. ೧೧ ಬಾಗಿಲುಗಳು ತೆರೆದರೆ ಜಲಪಾತದ ೪ ಕವಲುಗಳು ಕೂಡಿಕೊಳ್ಳುತ್ತವೆ ಎಂದು ಶರ್ಮ ಮಾಹಿತಿಯಿತ್ತರು. ನಾನು ಜಲಪಾತದ ಕಡೆ ಗಮನ ನೆಟ್ಟಿದ್ದರೆ ಇದು ಸಾಮಾನ್ಯ ದೃಶ್ಯವಾದ್ದರಿಂದ ಶರ್ಮರ ದೃಷ್ಠಿ ಬೇರೆ ಕಡೆಯಿದ್ದದ್ದು ನನ್ನ ಗಮನಕ್ಕೆ ಬರಲೇ ಇಲ್ಲ. ಹೌದು ಜೋಗದ ವೈಭವವನ್ನು ಅದು ತುಂಬಿ ಹರಿಯುವಾಗಲೇ ಸವಿಯಬೇಕು. ಆಗಾಗ ಮೋಡಗಳು ಜಲಪಾತವನ್ನು ಮರೆಮಾಚುತ್ತಿದ್ದವು ಸ್ವಲ್ಪ ಸಮಯಕ್ಕೆ ಮತ್ತೆ ಗೋಚರಿಸಿದಾಗ ನೆರೆದಿದ್ದ ಜನರಿಂದ ಉತ್ಸಾಹದ ಕೇಕೆ. ಸುಮಾರು ೧ ಗಂಟೆಯ ನಂತರ ಅಲ್ಲಿಂದ ಹೊರಟು ಪ್ರತಿಯೊಂದು ಕವಲುಗಳನ್ನು ನೋಡಲು ಎದುರಿಗೆ ಕಾಣುವ ಅತಿಥಿಗೃಹದ ಕಡೆ ಹೊರಟೆವು. ನಾನಿಲ್ಲೆ ಇರ್ತೀನಿ ನೀವು ನೋಡ್ಕೊಂಡು ಬನ್ನಿ ಎಂದರು ಶರ್ಮ.
ಜಲಪಾತ ಉಂಟಾಗುತ್ತಿದ್ದ ಬಳಿ ನಿಂತವನಿಗೆ ಕೆಲವರು ಗದರಿದರು. ಅಲ್ಲಿಂದ ಹೊರಟು ಬಂದು ನೇರವಾಗಿ ಶರ್ಮ ಅವರ ಮನೆಯಲ್ಲಿ ಹಲಸಿನ ಹಪ್ಪಳ ತಿಳಿಸಾರಿನ ಊಟ. ಲೊಟ್ಟೆ ಹೊಡ್ಕೊಂಡು ಊಟ ಮಾಡಿದ್ದು ಮತ್ತು ಉಪ್ಪಿನ ಕಾಯಿಯ ರುಚಿ ನನ್ನ ನಾಲಿಗೆಗೆ ಇನ್ನೂ ನೆನಪಿದೆ. ಆಗಾಗ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿತ್ತು. ಅವರು ಬರೆದ ಜೇನಿನ ಪುಸ್ತಕ ಸಾಕಿದ್ದ ಜೇನುಗಳು ಕೊಟ್ಟಿಗೆಯಲ್ಲಿದ್ದ ಲಕ್ಷಿಯ ಮಗಳು ಎಲ್ಲವನ್ನು ಕ್ಯಾಮೆರಾದಲ್ಲಿ ತುಂಬಿಕೊಂಡು ೨ ಗಂಟೆ ಸುಮಾರಿಗೆ ತಳವಾಟದ ಬಸ್ ನಿಲ್ದಾಣಕ್ಕೆ ಬಂದು ನಿಂತ ಸ್ವಲ್ಪ ಸಮಯಕ್ಕೆ ಸಾಗರದ ಬಸ್ ಬಂತು. ಭಾವ ಆ ಸಮಯಕ್ಕೆ ಬೆಂಗಳೂರಿಗೆ ರೈಲು ಟಿಕೆಟ್ ಕಾದಿರಿಸಿದ್ದರು. ಅವರಿಗೊಂದು ನಮಸ್ಕಾರ ತಿಳಿಸಿ. ಶಿವಮೊಗ್ಗದ ಬಸ್ ಹಿಡಿದೆ. ಭಾವನ ಸ್ನೇಹಿತರು ರೈಲಿನ ಟಿಕೆಟ್ ಕೊನೆಯ ಕ್ಷಣದಲ್ಲಿ ತಲುಪಿಸಿದರು. ಸಮಯಕ್ಕೆ ಸರಿಯಾಗಿ ಹೊರಟ ರೈಲು ಬೆಳಿಗ್ಗೆ ೫ ಗಂಟೆಗೂ ಮುನ್ನವೇ ಯಶವಂತಪುರ ತಲುಪಿತ್ತು. ಮುಂಚೆಯೇ ತಿಳಿಸಿದ್ದರಿಂದ ತಂದೆ ದ್ವಿಚಕ್ರದೊಡನೆ ಕಾಯುತ್ತಿದ್ದರು. ಮನೆಗೆ ಬಂದು ಸಣ್ಣದೊಂದು ನಿದ್ದೆ ತೆಗೆದು ೮ ಗಂಟೆಗೆ ಕಛೇರಿ ತಲುಪಿದೆ. ಒಂದೇ ದಿನದಲ್ಲಿ ಜೋಗಿಗೆ ಹೋಗಿಬಂದೆ ಎಂದವನ ಮಾತನ್ನು ನಂಬಲು ಯಾರೂ ಸಿದ್ದರಿರಲಿಲ್ಲ. ಇಂತಹ ಒಂದು ಪ್ರವಾಸ ಸಾಧ್ಯವಾಗಿದ್ದು ರಾಘವೇಂದ್ರ ಶರ್ಮ ಅವರ ಸಮಯೋಚಿತ ಸಹಾಯದಿಂದ. ಎಂತಹ ಅಪರಿಚಿತರಿಗಾದರೂ ಸಹಾಯ ಮಾಡುವ ಮಲೆನಾಡಿಗರ ಗುಣ ನನಗೆ ಅತ್ಯಂತ ಅಚ್ಚುಮೆಚ್ಚು. ಅದೆಷ್ಟೆ ಅಪರಿಚಿತರಾದರೂ ಊಟ ಮಾಡಿಕೊಂಡೇ ಹೋಗಬೇಕೆಂದು ಪಟ್ಟು ಹಿಡಿಯುವ ಅವರ ಗುಣಗಳು ಸಕ್ಕತ್. ಅದು ತಳವಾಟದ ರಾಘವೇಂದ್ರ ಶರ್ಮ ಅವರಿರಬಹುದು ಉಂಚಳ್ಳಿ ಜಲಪಾತದ ಬಳಿಯ ಹೆಗಡೆಯವರಿರಬಹುದು ಸಹಸ್ರಲಿಂಗದ ಬಳಿಯ ಶಿವಾನಂದ್ ಇರಬಹುದು ಅಥವಾ ಯಲ್ಲಾಪುರದ ಗೀತಾಭವನದ ಭಾಗವತರಿರಬಹುದು. ನಾನಂತು ಒಂದು ಗಾದೆಯನ್ನೆ ಹೀಗೆ ಪರಿವರ್ತಿಸಿದ್ದೇನೆ. "ಮಲೆನಾಡಿನ ನೋಟ ಚೆನ್ನ ಹವ್ಯಕರ ಮನೆ ಊಟ ಚೆನ್ನ". ೧ ದಿನ ೨ ರಾತ್ರಿಗಳಲ್ಲಿ ಜೋಗದ ಪ್ರವಾಸ ಮುಗಿಸಿ ಬಂದ ನನ್ನಿಂದ ಸ್ಪೂರ್ತಿಗೊಂಡ ಸುಮಾರು ಹತ್ತು ಜನ ಆ ವರ್ಷ ಜೋಗಿಗೆ ಭೇಟಿಯಿತ್ತರು.
ಪ್ರವಾಸಕ್ಕೆ ಬನ್ನಿ ಆದರೆ ಸ್ವಚ್ಚತೆ ಕಾಪಾಡಿ ಎಂಬ ಶೀರ್ಷಿಕೆಯಡಿ ಶರ್ಮ ಅವರು ಅಂದು ನಾವೆಲ್ಲ ಜಲಪಾತ ನೋಡುವುದರಲ್ಲಿ ಮೈಮರೆತಾಗ ತೆಗೆದ ಚಿತ್ರಗಳು ನಮಗೆಲ್ಲ ನಾಚಿಕೆ ತರಿಸುವಂತಿದ್ದವು.
ಹಾಂ! ೨ ವರ್ಷಗಳ ನಂತರ ಈಗೇಕೆ ಇದೆಲ್ಲ ಎಂದು ಅನುಮಾನ ನಿಮಗೆ ಬಂದಿರಬಹುದು. ಇಂದೂ ಕೂಡ ರಾಘವೇಂದ್ರ ಶರ್ಮ ದೂರವಾಣಿಯಲ್ಲಿ ಹೇಳಿದ್ದು ಲಿಂಗನಮಕ್ಕಿಯ ನೀರಿನ ಮಟ್ಟ ೧೮೦೭ ಅಡಿ ತಲುಪಿದೆ ೧೮೧೨ ಅಡಿ ತಲುಪಿದರೆ ಅಣೆಕಟ್ಟೆಯ ಬಾಗಿಲುಗಳು ತೆರೆಯುವ ಸಾಧ್ಯತೆಗಳಿವೆ ಬರ್ತೀರಾ ಎಂದು ಕೇಳಿದಾಗ ಹಳೆಯದೆಲ್ಲ ನೆನಪು ಬಂತು ಅದರ ಫಲವೇ ಈ ಕೊರೆತ. ನಾನಂತೂ ಅವರ ದೂರವಾಣಿಗೆ ಕಾಯ್ತಾ ಇದ್ದೇನೆ, ನೀವೂ ಜೊತೆಯಾಗಿ. ಅಂದಹಾಗೆ ನೆನಪಿರಲಿ ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ ದೂರದಲ್ಲಿರುವ ವಿಶ್ವವಿಖ್ಯಾತ ಜೋಗ್ ಜಲಪಾತವನ್ನು ೨ ರಾತ್ರಿ ಮತ್ತು ಒಂದು ದಿನದ ಅವಧಿಯಲ್ಲಿ ಭೇಟಿ ಕೊಟ್ಟು ಹಿಂತಿರುಗಬಹುದು. ಜೋಗದ ಸನಿಹದಲ್ಲೆ ತಳವಾಟದ ಯುವಕರು ನಿರ್ಮಿಸಿ ನಿರ್ವಹಿಸುತ್ತಿರುವ ಉಳಿಮನೆ (ಹೋಂಸ್ಟೇ) ನಿಮಗೆ ಸಹಾಯವಾಗಬಲ್ಲುದು. ರಾಘವೇಂದ್ರ ಶರ್ಮರ ಬ್ಲಾಗ್ ವಿಳಾಸ ಪಕ್ಕದಲ್ಲಿದೆ. ನೀವೂ ಪ್ರಯತ್ನಿಸಿ.
No comments:
Post a Comment