ಸಾರ್ ಬೆಳಿಗ್ಗೆ ೫ ಗಂಟೆಗೆ ಹೊರಡೋಣ ಇಲ್ಲಾಂದ್ರೆ ಒಂದೆ ದಿನದಲ್ಲಿ ಹತ್ತಿ ಇಳಿಯುವುದು ಕಷ್ಟ ಆಗುತ್ತೆ ಎಂದ ಪಾಂಡೆ ಮಾತಿಗೆ ತಲೆದೂಗಿದೆವು. ಎತ್ತರಕ್ಕೆ ಹೋದಹಾಗೆ ಆಮ್ಲಜನಕದ ಕೊರತೆಯಾಗುತ್ತೆ ಎಂದು ಆಮ್ಲಜನಕದ ಸಿಲಿಂಡರ್ಗಳನ್ನು ಕೊಂಡೆವು. ಬೆಳಿಗ್ಗೆ ೫ ಗಂಟೆಗೆ ಪಾಂಡೆಯನ್ನು ಎಚ್ಚರಗೊಳಿಸಿ ವಾಹನದಲ್ಲಿ ಹೊರಟೆವು. ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಇಂದು ಕೇದಾರನಾಥದ ಬಾಗಿಲು ತೆರೆದ ೨ನೆ ದಿನ. ೬ ತಿಂಗಳು ಹಿಮದಿಂದ ಮುಚ್ಚಿ ಹೋಗಿರುವ ದೇವಸ್ತಾನವನ್ನು ಈ ಬಾರಿ ಏಪ್ರಿಲ್ ೨೯ರಂದು ತೆರೆಯುತ್ತಾರೆಂದು ತಿಳಿಸಲಾಗಿತ್ತು. ಆದರೆ ಅದನ್ನು ಮೇ ೧ ರಂದು ತೆರೆಯಲಾಗಿತ್ತು. ಆದ್ದರಿಂದಲೇ ಏನೋ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗೌರಿ ಕುಂಡ ತಲುಪುವಷ್ಟರಲ್ಲಿ ೬.೩೦ ಆಗಿತ್ತು. ದಾರಿಯಲ್ಲಿ ನನ್ನ ಗಮನವನ್ನು ಒಂದು ಮಾರುತಿ ಕಾರು ಸೆಳೆಯಿತು. ಎಲ್ಲರಿಗೂ ಅದನ್ನೆ ತೋರಿಸಿದೆ. ಹೌದು ಹಿಂದೆ ಕಾರ್ತೀಕ್ ಪುನೀತ್ ಎಂಬ ಕನ್ನಡ ಲಿಪಿ ನನ್ನ ಗಮನ ಸೆಳೆದಿತ್ತು. KA-17 ನೊಂದಣಿ ಸಂಖ್ಯೆ ಆಶ್ಚರ್ಯ ಉಂಟು ಮಾಡಿತ್ತು. ಯಾರೋ ದೆಹಲಿಯಲ್ಲೊ ಅಥವ ಹರಿದ್ವಾರದಲ್ಲಿ ನೆಲೆಸಿರುವ ಕನ್ನಡಿಗರಿರಬೇಕು ಎಂದು ಯೋಚನೆ ಮಾಡುತ್ತಾ ಗೌರಿಕುಂಡ ಎಂಬ ಬಿಸಿ ನೀರಿನ ಕುಂಡದ ಕಡೆಗೆ ಪಯಣಿಸಿದೆವು. ಕುಂಡವೆನ್ನುವ ಆ ಒಂದು ದೊಡ್ಡದಾದ ತೊಟ್ಟಿಯಂತಹ ಜಾಗದಲ್ಲಿ ಈಗಾಗಲೆ ೧೫-೨೦ ಜನ ಸ್ನಾನ ಮಾಡುತ್ತಿದ್ದರು. ಸಣ್ಣದಾದ ನಲ್ಲಿಯಿಂದ ಬೀಳುತ್ತಿದ್ದ ನೀರಿನಂತೆ ಒಂದೆ ಸಮನೆ ಸುರಿಯುತ್ತದ್ದ ನೀರನ್ನು ಸಂಗ್ರಹಿಸಿ ಅದನ್ನೆ ಸ್ನಾನ ಕುಂಡವಾಗಿ ಪರಿವರ್ತಿಸಿದ ಅಲ್ಲಿ ಸ್ನಾನ ಮಾಡಲು ಯಾರಿಗೂ ಮನಸ್ಸಾಗಲಿಲ್ಲ. ಆದರೂ ಸ್ನಾನ ಮಾಡದೆ ದೇವಸ್ತಾನಕ್ಕೆ ಹೋಗುವುದು ಸಲ್ಲ. ಸರಿ ಒಮ್ಮೆ ಅಲ್ಲಿ ಬೀಳುತ್ತಿದ್ದ ನೀರನ್ನು ತಲೆಯ ಮೇಲೆ ಸುರಿದುಕೊಂಡು ಪಕ್ಕದಲ್ಲೆ ಇದ್ದ ಖಾಸಗಿ ಸ್ನಾನದ ಮನೆಗಳಲ್ಲಿ ಸ್ನಾನ ಮಾಡಿ ಹೊರಟೆವು. ೬೫೦ ರೂಗಳಿಗೆ ಒಂದರಂತೆ ಕಚ್ಚರ್ ಅನ್ನು ತೆಗೆದುಕೊಂಡೆವು.
ಸುಮಾರು ೮.೩೦ಕ್ಕೆ ನಮ್ಮ ೧೪ ಕಿ.ಮೀ ಗಳ ಕಚ್ಚರ್ ಪ್ರಯಾಣ ಪ್ರಾರಂಭವಾಯಿತು.ಶ್ರೀಕಾಂತ ಅಧಿಕೃತ ಚೀಟಿ ತರದೆ ಹತ್ತಿದುದರಿಂದ ಅವನಿಗೆ ನಡೆಯಲು ಆಗದಂತಹ ಒಂದು ಕಚ್ಚರ್ ಸಿಕ್ಕಿ ಅವನು ತುಂಬ ಹಿಂದೆ ಉಳಿಯತೊಡಗಿದ. ಕೆಲವು ಶಕ್ತಿಯುತವಾದ ಪ್ರಾಣಿಗಳು ಮಾತ್ರ ಬೇಗನೆ ಬೇಗನೆ ಹತ್ತಿ ಹೋಗುತ್ತವೆ. ಆದರೆ ಕೆಲವು ಪ್ರಯಾಣಿಕರನ್ನು ಬೀಳಿಸಿದ ಪ್ರಸಂಗಗಳೂ ಇವೆ. ನಿಧಾನವಗಿ ತೆರೆಯುತ್ತಾ ಹೋಗುವ ಕಣ್ವೆ ಆಳವಾಗುತ್ತ ಹಿಂದೆ ಬಂದ ಕಣಿವೆಗಳು ಮರೆಯಾಗುತ್ತ ಹೋಗುತ್ತವೆ. ಬಹುಶಃ ಮಳೆ ಬಿದ್ದರೆ ಜಾರಬಹುದೆಂಬ ಕಾರಣಕ್ಕೆ ಸಿಮೆಂಟ್ ಕಲ್ಲು ರಸ್ತ್ರೆಗಳು ಈ ಪ್ರಾಣಿಗಳಿಗೆ ನಡೆಯಲು ತುಂಬಾ ಕಷ್ಟ ಕೊಡುತ್ತವೆ. ಸ್ವತಃ ಪ್ರಾಣಿಪ್ರಿಯನಾದ ನಾನು ಈ ಪ್ರಾಣಿಗಳ ಮೇಲೆ ಕೂತು ಹೋಗಲು ನನ್ನ ಮನಸ್ಸೇಕೊ ಒಪ್ಪುತ್ತಿರಲಿಲ್ಲ.ನಡೆಯಲು ನಾಣು ಸಿದ್ದನಿದ್ದೆ ಆದರೆ ಸ್ನೇಹಿತರೊಡನೆ ಬಂದಾಗ ನನ್ನಿಂದ ಅವರಿಗೆ ತೊಂದರೆಯಾಗಬಾರದೆಂದು ಅನಿವಾರ್ಯವಾಗಿ ನಾನು ಅವರೊಡನೆ ಹೋಗಲೇ ಬೇಕಿತ್ತು. ನಮ್ಮ ಹೊಟ್ಟೆಹೊರೆಯುವುದಕ್ಕೆ ಪ್ರಾಣಿಗಳನ್ನು ಬಳಸಿಕೊಳ್ಳುವುದಕ್ಕೆ ನನ್ನ ಮನಸ್ಸು ಸಹಕರಿಸುತ್ತಿರಲಿಲ್ಲ. ಅದು ದೇವಸ್ತಾನವೇ ಆಗಿರಲಿ ಬೆಂಗಳೂರಿನ ಒಂಟೆತ್ತಿನ ಗಾಡಿಗಳೇ ಆಗಿರಲಿ ಅಥವ ಟನ್ ಗಟ್ಟಲೇ ಭಾರ ಹೇರುವ ನಮ್ಮ ರೈತರಾಗಲಿ ಎಲ್ಲರೂ ಒಂದೆ ಎನ್ನುವುದು ನನ್ನ ಮನದಾಳದ ಅಭಿಪ್ರಾಯ. ಆದರೆ ವ್ಯವಸ್ಥೆಯ ಮುಂದೆ ನಾನೊಂದು ಹುಲುಕಡ್ಡಿ ಎಂಬ ವಾಸ್ತವದ ಅರಿವೂ ನನಗಿರಲೇಬೆಕಲ್ಲ.
ಶ್ರೀಕಾಂತನ ಕಚ್ಚರ್ಗೆ ಬಹುಶಃ ಅದರ ಮಾಲೀಕ ಅದಕ್ಕೇನು ತಿನ್ನಿಸಿರಲಿಲ್ಲವೊ ಅಥವ ವಯಸ್ಸು ಮೀರಿದ್ದ ಪ್ರಾಣಿಯೋ ತುಂಬ ಕಡೆ ನಡೆಯಲಾರದೆ ನಿಂತು ಬಿಡುತ್ತಿತ್ತು. ಕೆಲವೊಮ್ಮೆ ಆಯ ತಪ್ಪಿ ಬಿದ್ದದ್ದು ಇದೆ. ತಿಂಡಿಗೆಂದು ದಾರಿಯ ಡಾಬಾವೊಂದರಲ್ಲಿ ಕುಳಿತೆವು. ಈ ಬಾರಿ ಪ್ರಸಾದೆ ಮುಂದೆ ನಡೆದು ಹೋಗಿದ್ದ ಸುಮಾರು ಅರ್ಧ ಗಂಟೆಯ ನಂತರ ನಾವು ಬರದಿದ್ದುರಿಂದ ಹಿಂತಿರುಗಿ ಬಂದು ನಮ್ಮನ್ನು ಸೇರಿಕೊಂಡ ಆ ಹೊತ್ತಿಗೆ ನಡೆಯಲಾರದೆ ನಡೆದು ಬಂದ ಶ್ರೀಕಾಂತನ ಕಚ್ಚರ್ ಏನೂ ತಿನ್ನಲು ನಿರಾಕರಿಸಿತು. ಆ ಮಾಲೀಕನನ್ನು ಸಿಗಿದು ಬಿಡುವಷ್ಟು ಕೋಪ ನನಗೆ ಬರುತ್ತಿತ್ತು.
ಕೇದಾರನಾಥಕ್ಕೆ ತುಂಬ ಕನ್ನಡಿಗರು ಬರುತ್ತಿರುವುದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ತರಿಸಿತ್ತು. ಡೋಲಿಗಳಲ್ಲಿ ಬುಟ್ಟಿಗಳಲ್ಲಿ ಕಚ್ಚರ್ಗಳಲ್ಲಿ ಕನ್ನಡಿಗರು ನಮಗೆ ಎದುರಾದರು. ಅವರೆಲ್ಲ ಬೇರೆ ಬೇರೆ ಟ್ರಾವೆಲ್ಸ್ ಗಳು ನಡೆಸುವ ಪ್ರವಾಸ ಕಾರ್ಯಕ್ರಮದಲ್ಲಿ ಜೊತೆಯಾಗಿ ಬಂದವರು. ಮೊದಲನೇ ದಿನವೇ ಭೇಟಿಯಿತ್ತು ಹಿಂತಿರುಗುತ್ತಿದ್ದ ಹಿಂದುತ್ವದ ಬಾಂಬ್ ಎಂದು ಪ್ರಸಿದ್ದವಾದ ಉಮಾಭಾರತಿಯ ಫೋಟೋ ತೆಗೆಯಲು ಹೋದವನನ್ನು ಅವರ ಅಂಗರಕ್ಷಕರು ತಡೆದರು.
ಹಿಮದ ಬೆಟ್ಟಗಳಿಂದ ಇಳಿದುಬರುವ ನದಿಯನ್ನು ಯಾರೋ ಮಂದಾಕಿನಿಯೆಂದು ತಿಳಿಸಿದರು. ಸುಮಾರು ೨ ಕಿ.ಮೀ ಗಳ ನಂತರ ಕಣಿವೆಯಲ್ಲಿ ಹಸಿರುಮರಗಳು ಕಾಣಿಸತೊಡಗಿದವು. ಇಲ್ಲವರೆಗೂ ಒಣಗಿದ್ದ ಕಂದು ಬಣ್ಣದ ಹುಲ್ಲು ಮತ್ತು ಮರಗಳು ಕಣಿವೆಗೆ ಕಂದು ಬಣ್ಣ ಬಳಿದಿದ್ದರೆ ಈಗ ತಿಳಿಹಸಿರು ಎಲ್ಲೆಲ್ಲೂ ಗೋಚರವಾಗತೊಡಗಿತು. ಕಣಿವೆಗಳ ನಂತರ ಮತ್ತೊಂದು ಮಗದೊಂದು ದಾಟಿ ಸುಮಾರು ೧.೨೦ಕ್ಕೆ ಹಿಮಾವೃತ ಪರ್ವತಗಳಿಂದ ಸುತ್ತುವರೆದಿರುವ ದೇವಸ್ತಾನದ ಸಮೀಪ ಬಂದು ಕಚ್ಚರ್ಗಳಿಂದ ಇಳಿದೆವು.
ಗುಪ್ತಕಾಶಿಯಿಂದ ತಪ್ಪಿಸಿಕೊಂಡ ತಪೋನಿರತ ಶಿವನನ್ನು ಹುಡುಕುತ್ತಾ ಪಾಂಡವರು ಇಲ್ಲಿಗೆ ಬಂದಾಗ ಇಲ್ಲ್ಯೂ ಆತ ದರ್ಶನ ಕೊಡದೆ ತಪ್ಪಿಸಿಕೊಳ್ಳಲು ನಂದಿ ವೇಷ ಧರಿಸಿ ಅಲ್ಲೆ ಇದ್ದ ಹಸುಗಳೊಂದಿಗೆ ಸೇರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಧರ್ಮರಾಯನ ಉಪಾಯದಂತೆ ಭೀಮ ತನ್ನ ಕಾಲುಗಳ ಕೆಳಗೆ ಹಸುಗಳು ಹಾಯ್ದು ಹೋಗುವಂತೆ ನಿಂತಾಗ ಅವನ ಕಾಲ ಕೆಳಗೆ ನುಸುಳದೆ ಶಿವ ದರ್ಶನವಾಗುತ್ತದೆ ಎಂದು ಧರ್ಮರಾಯನ ಉಪಾಯ. ಹಾಗಾದಾಗ ವಿಧಿಯಿಲ್ಲದೆ ಅಲ್ಲೆ ಭೂಗರ್ಭ ಪ್ರವೇಶಿಸಿದ ಶಿವನ ಭುಜವೇ ಈ ಕೇದಾರನಾಥ ಎಂದು ಅಲ್ಲಿನ ಕಥೆ.
ಅಲ್ಲಲ್ಲಿ ದಾರಿಯುದ್ದಕ್ಕೂ ಬಿದ್ದಿದ್ದ ಹಿಮವಿದ್ದರೂ ಚಳಿಯಂತೂ ನಮಗೆ ಕಾಣಿಸಲಿಲ್ಲ. ಬೆಳ್ಳಿಬೆಟ್ಟಗಳ ಹಿನ್ನೆಲೆ ಪ್ರಕೃತಿಯ ಪ್ರಿಯರಿಗೆ ಕುಣಿದಾಡುವಂತೆ ಮಾಡುತ್ತದೆ. ಇಲ್ಲಿಂದ ಮುಂದಕ್ಕೂ ಕೆಲ ಹವ್ಯಾಸಿ ಸಾಹಸಿಗಳು ಚಾರಣ ನಡೆಸುತ್ತಾರೆಂದು ಕೆಲವರು ತಿಳಿಸಿದರು. ಭೈರಪ್ಪನವರ "ನಿರಾಕರಣ" ಕಾದಂಬರಿಯಲ್ಲಿ ಬರುವ ಸುಮೇರು ಪರ್ವತ ಯಾವುದೆಂದು ಹುಡುಕಲು ಪ್ರಯತ್ನಿಸಿದವನಿಗೆ ಅಲ್ಲಿ ಯಾವುದೇ ಸ್ಪಂದನ ಸಿಗಲಿಲ್ಲ. ಯಾರೂ ಹೇಳಲೂ ಇಲ್ಲ. ಕೆಲವು ಹವ್ಯಾಸಿ ಚಾರಣಿಗರು ಆ ಬೆಟ್ಟದ ಹಿಂದೆ ಎಂದು ಕೈ ತೋರಿಸಿ ಸುಮ್ಮನೆ ನಡೆದರು. ಕೇದಾರನಾಥನ ದರ್ಶನ ಪಡೆದು ಹೊರಬಂದು ದೇವಸ್ತಾನದ ಆವರಣದಲ್ಲಿ ಕುಳಿತೆವು. ಈಗ ಚಳಿ ಸ್ವಲ್ಪ ಸ್ವಲ್ಪವೆ ಕಾಣಿಸತೊಡಗಿತು. ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಸಂಪದದಲ್ಲಿ ಲೇಖನಮಾಲೆ ಪ್ರಕಟಿಸಿದ್ದ ಅನಿಲ್ ರಮೇಶ್ ಗೆ ಫೋನಾಯಿಸಿ ಮಾತನಾಡಿಸಿ ಅವರಿಗೆ ನಾವಿಲ್ಲಿರುವ ವಿಷಯ ತಿಳಿಸಿದೆ. ದೂದ್ ಗಂಗಾ ನದಿ ಹೆಸರಿಗೆ ತಕ್ಕಂತೆ ಹಾಲಿನನಂತೆ ಬಿಳುಪಾಗಿ ಬೆಟ್ಟದಿಂದ ಇಳ್ಯುತ್ತಿದ್ದದ್ದು ಮನೋಹರ. ಇಲ್ಲೆ ಒಂದು ದಿನ ಉಳಿದರೆ ಅದೆಲ್ಲವನ್ನು ಹತ್ತಿರದಿಂದ ನೋಡಬಹುದೆಂಬ ಆಸೆ ಮನದಲ್ಲಿ ಸುಳಿದು ಹೋಯ್ತು.
ದೇವಸ್ತಾನದ ಆವರಣದಲ್ಲಿ ನಾವು ಕುಳಿತಿದ್ದ ಜಾಗಕ್ಕೆ ನಾವು ದಕ್ಷಿಣ ಭಾರತೀಯರೆಂದು ತಿಳಿದ ತಮಿಳುನಾಡಿನ ಅಯ್ಯರ್ ದಂಪತಿಗಳು ನಮ್ಮೊಡನೆ ಕುಳಿತರು. ವಯೋವೃದ್ದರನ್ನು ರುದ್ರ ಹೇಳುವಂತೆ ಕೇಳಿದೆ. ಪ್ರಾಸಬದ್ದವಾಗಿ ಅವರು ಪಠಿಸಿದ ರುದ್ರಪ್ರಶ್ನೆ ಆ ವಾತಾವರಣಕ್ಕೆ ಕಳೆಗಟ್ಟಿ ನಮ್ಮನ್ನೆಲ್ಲ ಒಂದು ಕ್ಷಣ ಅಲೌಕಿಕ ಲೋಕಕ್ಕೆ ಕರೆದೊಯ್ಯಿತು. ಅವರಿಗೊಂದು ನಮಸ್ಕಾರ ಹೇಳಿ ಅಲ್ಲಿಂದ ಇಳಿಯಲು ಪ್ರಾರಂಭಿಸಿದಾಗ ಸಮಯ ೩.೩೦ ಇರಬೇಕು. ೨ ಕಿ.ಮೀ ನಡೆಯುವಷ್ಟರಲ್ಲಿ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ನಡೆದುಬರುತ್ತಿದ್ದದ್ದು ಆಶ್ಚರ್ಯ. ಮುಗುಳ್ನಗುತ್ತ ಕೈಮುಗಿಯುತ್ತ ನಮ್ಮಡೆಗೆ ಕೈಬೀಸಿ ನಡೆದ ಅಂಬಾನಿಯ ಫೋಟೊ ತೆಗೆಯಬೇಕೆನಿಸಿತು. ಆದರೆ ಅವನ ಅಂಗರಕ್ಷಕರು ಅದಕ್ಕೆ ಅವಕಾಶವೀಯಲಿಲ್ಲ. ನಮ್ಮ ಚಾಲಕ ಪಾಂಡೆ ನಮಗಿಂತ ೧ ಗಂಟೆ ತಡವಾಗಿ ಹೊರಟವ ನಮ್ಮೊಡನೆ ದೇವಸ್ತಾನ ಸಮೀಪಿಸಿದಾಗ ಅವನ ನಡಿಗೆಯ ಚಾಕಚಕ್ಯತೆಗೆ ತಲೆದೂಗಲೇಬೇಕಾಯಿತು.
೩ ಕಿ.ಮೀ ವರೆಗೆ ನಮ್ಮೊಡನೆ ನಡೆದು ಬರುತ್ತಿದ್ದ ಶ್ರೀಕಾಂತ ಮತ್ತು ಪ್ರಸಾದ್ ಕುಟುಂಬಗಳು ನಮ್ಮ ವೇಗಕ್ಕೆ ಸಮನಾಗಿ ಬರದೆ ಹಿಂದುಳಿಯತೊಡಗಿದ್ದರು. ನಿಧಾನವಾಗಿ ನಡೆಯಲು ನನಗೆ ಸಾಧ್ಯವಿಲ್ಲದ್ದರಿಂದ ನಾನು ಶ್ರೀಕಾಂತನ ಮಗಳು ಸುಷ್ಮಿತ ನನ್ನ ಮಗ ಅಮಿತ್ ಮತ್ತು ನನ್ನ ಪತ್ನಿಯೊಂದಿಗೆ ನನ್ನದೇ ಆದ ವೇಗದಲ್ಲಿ ಹಿಂತಿರುಗತೊಡಗಿದೆ. ರಾತ್ರಿ ಎಂಟುಗಂಟೆಯ ಒಳಗೆ ನಾವು ಗೌರಿಕುಂಡದಿಂದ ಹೊರಡಬೇಕೆಂದು ನಮ್ಮ ಚಾಲಕ ಹೇಳಿದ್ದು ನನಗೆ ನೆನಪಿತ್ತು. ಇದು ಹರಟೆ ಹೊಡೆಯುತ್ತಾ ನಡೆಯುವ ಚಾರಣವಲ್ಲವೆಂದು ನನಗೆ ತಿಳಿದಿತ್ತು. ದಾರಿ ಉದ್ದಕ್ಕೂ ಸಿಕ್ಕ ಕನ್ನಡಿಗರೊಡನೆ ಕೆಲವು ಕ್ಷಣಗಳು ಕಳೆಯುತ್ತಾ ಅವರ ಕುಶಲೋಪರಿ ವಿಚಾರಿಸುತ್ತಾ ಆಗಾಗ ಕ್ಯಾಮೆರಾಗಳ ಕಣ್ಣು ಮಿಟುಕಿಸುತ್ತಾ ಇಳಿಯುತ್ತಿದ್ದೆವು. ಪ್ರತಿ ೨೦ ನಿಮಿಷಕ್ಕೊಮ್ಮೆ ಕುಳಿತು ದಣಿವಾರಿಸಿಕೊಳ್ಳುತ್ತಾ ಕಣಿವೆಗಳನ್ನು ಹಿಂದಕ್ಕಿಕ್ಕಿ ಮತ್ತೊಂದು ಕಣಿವೆ ಕಡೆಗೆ ಇಳಿಯುತ್ತಿದ್ದೆವು. ಹಾಲ್ನೊರೆಯಂತೆ ಝರಿಗಳು ಕಣಿವೆಯುದ್ದಕ್ಕೂ ನಮ್ಮೊಡನೆ ಆಕಾಶದಿಂದ ಇಳಿದುಬಂದಂತೆ ಭಾಗೀರಥಿ ನಮ್ಮೊಡನೆ ಇಳಿದು ಬರುತ್ತಾಳೆ. ನಮ್ಮೆದುರಿಗೆ ೨ ಕಚ್ಚರ್ ಗಳು ಒಂದಕ್ಕೊಂದು ಜಗಳವಾಡುತ್ತಾ ಕುಳಿತಿದ್ದವರನ್ನು ಬೀಳಿಸಿದ್ದು ನೋಡಿ ಅಲ್ಲಿದ್ದ ಎಲ್ಲರೂ ಗಾಭರಿಯಾದರು. ಬೆಳಿಗ್ಗೆ ತಿಂಡಿತಿಂದ ಡಾಬಾದಲ್ಲೆ ಈಗಲೂ ಇದ್ದುದರಲ್ಲಿ ತಿನ್ನಲಾಗುವಂತಹ ತಿನಿಸನ್ನು ತೆಗೆದುಕೊಂಡೆವು.
ಕನ್ನಡ ಭಾಷೆಯಲ್ಲಿ ಸಂಭಾಷಿಸುತ್ತಾ ಇಳಿಯುತ್ತಿದ್ದ ತಾಯಿ ಮತ್ತೆ ಮಗನನ್ನು ಮಾತನಾಡಿಸಿದೆವು ಕುಶಲೋಪರಿ ವಿಚಾರಣೆಯ ನಂತ ಎಲ್ಲಿ ಯಾವೂರು ಹೇಗೆ ಬಂದ್ರಿ ಎಂದವರಿಗೆ ದಾವಣಗೆರೆ ಸಾರ್ ಕಾರ್ನಲ್ಲಿ ಬಂದಿದಿವಿ ಎಂದವರನನ್ನು ನಾನು ತಕ್ಷಣ ಕೇಳಿದ ಪ್ರಶ್ನೆ ಕಾರ್ತೀಕ್ ಪುನೀತ್ ಮಾರುತಿ ಕಾರು ನಿಮ್ದೆನ? ಎಂದು ನಗುತ್ತಾ ತಲೆಯಾಡಿಸಿದವರಿಗೆ ಮತ್ತೊಂದು ಕುತೂಹಲದ ಪ್ರಶ್ನೆ ಎಲ್ಲಿ ಕೆಲ್ಸ ಮಾಡ್ತೀರ ಹರಿದ್ವಾರದಲ್ಲ ಅಥವ ದೆಹಲಿನ? ಎಂದವರಿಗೆ ಇಲ್ಲ ದಾವಣಗೆರೆಯಲ್ಲಿ ಎಲೈಸಿ ಏಜೆಂಟ್ ಅಲ್ಲಿಂದಾನೆ ಕಾರಲ್ಲಿ ಬಂದ್ವಿ ಎಂದವರನ್ನು ನೋಡಿ ಗಾಭರಿಯಾಗುವ ಸರದಿ ನಮ್ಮದಾಗಿತ್ತು. ಅದೂ ಮಾರುತಿ ಕಾರಿನಲ್ಲಿ ಹೇಗೆ ಬಂದ್ರಿ ಎಂದವರಿಗೆ ನಾವು ಊರುಬಿಟ್ಟು ೧ ತಿಂಗಳಾಯ್ತು ಎಂದು ಹೇಳಿದರು ಎಲ್ಲೆಲ್ಲಿ ಹೋಗಿದ್ರಿ ಎಂದವರಿಗೆ ಸಾರ್ ಜಮ್ಮು ಕಾಶ್ಮೀರ ಕುಲ್ಮಾರ್ ಸೋನ್ಮಾರ್ಗ್ ಪಹಲ್ಗಾಂ ಎಂದಾಗ ಮತ್ತೊಮ್ಮೆ ಆಶ್ಚರ್ಯ ಚಕಿತರಾಗುವ ಅವಕಾಶ. ಅದೂ ನಮ್ತಂದೆ ಒಬ್ರೆ ಡ್ರೈವ್ ಮಾಡ್ತಾ ಇರೋದು ಎಂದು ಆತ ಹೇಳಿದಾಗ ತಲೆ ತಿರುಗುವುದೊಂದು ಬಾಕಿ. ಇಬ್ಬರಿಗೂ ಕೈಯೆತ್ತಿ ಮುಗಿದು ಅವರ ಸಾಹಸಕ್ಕೆ ದೊಡ್ಡದೊಂದು ನಮಸ್ಕಾರ ಹಾಕಿ ಅವರೊಂದಿಗೆ ಸ್ವಲ್ಪ ದೂರ ಇಳಿದೆವು. ನಂತರ ಅವರು ಹಿಂದುಳಿದರು. ಈ ಬಾರಿ ದಾರಿಯಲ್ಲಿ ಎದುರಾದದ್ದು ನಮ್ಮ ರಾಜ್ಯದ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್. ಡೋಲಿಯಲ್ಲಿ ಹೋಗುತ್ತಿದ್ದವರನ್ನು ನೋಡಿ ಮುಗುಳ್ನಕ್ಕಾಗ ಆತ್ಮೀಯರಂತೆ ಏನ್ರೀ ಚೆನ್ನಾಗಿದಿರಾ ಎಂದು ಕನ್ನಡದಲ್ಲಿ ಕೇಳಿದಾಗ ನನಗೆ ಆಶ್ಚರ್ಯ. ಇವರಿಗೆ ಹೇಗೆ ಗೊತ್ತಾಯಿತು ನಾನು ಕನ್ನಡಿಗ ಅಂತ!
೬.೩೦ ಕ್ಕೆ ಗೌರಿಕುಂಡದ ಬಳಿ ಅಂಗಡಿಯೊಂದರಲ್ಲಿ ನಮ್ಮ ಕೆಲವು ಹೊರೆಗಳನ್ನು ಇಟ್ಟಿದ್ದ ಅಂಗಡಿಗೆ ಹೋಗಿ ಕುಳಿತೆವು. ಬಿಸಿನೀರಿನ ತೊಟ್ಟಿಯಿಂದ ನೀರೆಲ್ಲ ಹೊರಗೆ ಬಿಟ್ಟಿದ್ದರು. ಸ್ವಚ್ಚವಾಗಿ ಬೀಳುತ್ತಿದ್ದ ನೀರಿನಲ್ಲಿ ಒಮ್ಮೆ ಸ್ನಾನ ಮಾಡಿದಾಗ ಮೈಮನಸ್ಸುಗಳು ಹಗುರಾದೆಂತೆನಿಸಿತು. ಬೆಂಗಳೂರಿನಿಂದ ಬಂದಿದ್ದ ಮಧ್ಯ ವಯಸ್ಕರ ದೊಡ್ಡ ಗುಂಪಿನೊಡನೆ ಸ್ವಲ್ಪ ಸಮಯ ಹರಟೆ ಹೊಡೆದೆ. ಗಂಟೆ ೭.೩೦ ಆದರೂ ಶ್ರೀಕಾಂತ ಮತ್ತು ಪ್ರಸಾದಿಯ ಸುಳಿವೇ ಇರಲಿಲ್ಲ. ಚಾಲಕ ಪಾಂಡೆ ಬಂದು ಸಾರ್ ಗೇಟ್ ಹಾಕ್ಬಿಡ್ತರೆ ಬೇಗ ಬನ್ನಿ ಎಂದ ಆದರೆ ಇವರಿಬ್ಬರ ಮೊಬೈಲ್ಗಳು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದವು.
ಅನ್ನಪೂರ್ಣದಲ್ಲಿ ಮೊಸರು ಸಿಗದಿರುವುದರಿಂದ ಇಲ್ಲೆ ಮೊಸರು ಖರೀದಿಸಿದೆ. ೮.೧೫ಕ್ಕೆಲ್ಲ ಶ್ರೀಕಾಂತ ಮತ್ತು ಪ್ರಸಾದಿ ನನ್ನ ಮೇಲೆ ಕೆಂಗಣ್ಣು ಬಿಡುತ್ತಾ (ಜೊತೆಯಲ್ಲಿ ಬರದಿದ್ದಕ್ಕೆ) ಮೆಲ್ಲಗೆ ಇಳಿಯಲಾರದೆ ಇಳಿದು ಬಂದರು. ಸಾರ್ ಗೇಟ್ ಹಾಕ್ಭಿಟ್ಟಿರುತ್ತೆ ಇನ್ನು ಇಲ್ಲೆ ಉಳಿಯಬೇಕು ಎಂದು ಪಾಂಡೆ ವರಾತ ಹಚ್ಚಿದವನಿಗೆ ನೀನು ನಡಿ ಮಹರಾಯ ಎಂದವನನ್ನು ಹೊರಡಿಸಿಕೊಂಡು ಹೊರಟೆ. ನಮ್ಮ ಪುಣ್ಯಕ್ಕೆ ಬಾಗಿಲು ಮುಚ್ಚಿರಲಿಲ್ಲ. ಆದರೆ ಆ ೫-೬ ಕಿ.ಮೀ ಗಳು ಪಾಂಡೆ ಆ ಕಣೀವೆಯಲ್ಲಿ ಕಾರು ಓಡಿಸಿದ ಪರಿ ಸ್ವತಃ ಚಾಲಕನೂ ಆದ ನನಗೆ ಗಾಭರಿ ಹುಟ್ಟಿಸಿತು. ಅನ್ನಪೂರ್ಣದಲ್ಲಿ ಇದ್ದುದರಲ್ಲಿ ರುಚಿಯಾದ ಕೆಲವು ತಿನಿಸುಗಳನ್ನು ಸೇವಿಸಿ ಮಲಗಿದೆವು.
ಬೆಳಿಗ್ಗೆ ೪ ಗಂಟೆಗೆ ಎದ್ದು ಬಿಸಿನೀರಿಗಾಗಿ ಹೊಟೆಲ್ನವನ ಮುಂದೆ ಬಕೆಟ್ ಹಿಡಿದು ನಿಂತೆ ಈ ಸಮಯಕ್ಕಾಗಲೆ ೩-೪ ಬಕೆಟ್ಗಳು ಇದ್ದವು ಒಂದು ಬಕೆಟ್ ಬಿಸಿನೀರಿಗೆ ೨೦ ರೂ ತೆತ್ತು ಎಲ್ಲರೂ ಸ್ನಾನ ಮಾಡಿ ಹೊರಟಾಗ ಸುಮಾರು ೬ ಗಂಟೆಯಿರಬೇಕು. ೮ ಗಂಟೆ ಸಮಯಕ್ಕೆ ರಂಭಾಪುರಿ ಮಠಕ್ಕೆ ಕರೆದೊಯ್ದ ವಾಹನದಿಂದ ನಾನು ಅವೋಮಿನ್ ಪ್ರಭಾವದಿಂದ ಕೆಳಗಿಳಿಯಲಿಲ್ಲ. ಹೊಟ್ಟೆ ಚುರುಗುಡತೊಡಗಿತು. ತಿನ್ನಲೂ ಏನೂ ಸಿಗುತ್ತಿರಲಿಲ್ಲ. ಈ ಪಾಂಡೆ ಡಾಬಾದಲ್ಲಿ ನಿಲಿಸಲು ಹಿಂದೆ ಮುಂದೆ ನೋಡುತ್ತಿದ್ದದ್ದು ನನ್ನನ್ನು ಕೆರಳಿಸಿತು. ಕೊನೆಗೆ ದಾರಿಯಲ್ಲಿ ಸಿಕ್ಕ ಗೂಡಂಗಡಿಯಲ್ಲಿ ೧೩ ಪ್ಯಾಕ್ ಬಿಸ್ಕತ್ತುಗಳನ್ನು ಮತ್ತು ಸೌತೇಕಾಯಿಯನ್ನು ತೆಗೆದುಕೊಂಡು ಎಲ್ಲವೂ ಖಾಲಿಯಾದಗಲೆ ನನಗೆ ಹೊರಪ್ರಪಂಚದ ಅರಿವಾದದ್ದು. ತನ್ನ ಹಠಬಿಡದೆ ಪಾಂಡೆ ನಮ್ಮನ್ನು ಮಿನಿ ಸ್ವಿಟ್ಸರ್ಲ್ಯಾಂಡ್ಗೆ ಕರೆದೊಯ್ದ ಅಲ್ಲಿನ ಹೋಟೆಲ್ನಲ್ಲಿ ಎಲ್ಲರೂ ತಿಂಡಿತಿಂದರು ನನಗೆ ಮತ್ತದೆ ಶುಚಿತ್ವದ ಸಮಸ್ಯೆ. ಬ್ರೆಡ್ ಮತ್ತು ಜ್ಯಾಂ ನನ್ನ ಆಹಾರವಾಯಿತು. ಬಹುಶಃ ಹಿಮಾವೃತವಾಗಿದ್ದಾಗ ಸುಂದರವಾಗಿರಬಹುದಾದ ಮಿನಿ ಸ್ವಿಟ್ಸರ್ಲ್ಯಾಂದ್ ನಮ್ಯಾರನ್ನು ಸೆಳೆಯಲಿಲ್ಲ. ನೇರವಾಗಿ ಜೋಷಿಮಠಕ್ಕೆ ತೆರಳಲು ಪ್ರಾರಂಭಿಸಿದೆವು. ಕಣಿವೆಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಣ್ಣುಕುಸಿತ ಗೋಚರವಾಗುತ್ತಿತ್ತು. ಅತಿ ಆಳವಾದ ಕಣಿವೆಗಳ ದಡಕ್ಕೆ ವಾಹನ ಬಂದಾಗ ಹೃದಯ ಬಾಯಿಗೆ ಬಂದ ಅನುಭವವಾಗುತ್ತದೆ. ಕಣಿವೆಯಲ್ಲಿ ಮೇಲಿಂದ ಬೀಳುತ್ತಿದ್ದ ಕಲ್ಲುಗಳು ಇನ್ನೊಂದು ಕಲ್ಲ್ನ ಮೇಲೆ ಬಿದ್ದಾಗ ಉಂಟಾಗುವ ಕಿಡಿ ಬೆಂಕಿಯಾಗಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತಿತ್ತು. ಇದೇ ಹೊಗೆ ಇಡೀ ಕಣಿವೆಯನ್ನು ಆವರಿಸುತ್ತಿತ್ತು.
ಜೋಷಿಮಠದ ಹೋಟೆಲ್ಲೊಂದರಲ್ಲಿ ಊಟಮಾಡಿದೆವು. ಈ ಸಮಯಕಾಗಲೆ ನಮಗೆಲ್ಲ ಊಟವೆಂದರೆ ಯಾಕೋ ಓಡಿಹೋಗುವಂತೆ ಅನಿಸುತ್ತಿತ್ತು. ನನ್ನ ಮಗನಂತೂ ಸಂಪೂರ್ಣವಾಗಿ ಹಣ್ಣುಗಳಲ್ಲೆ ಕಾಲ ಹಾಕಲಾರಂಭಿಸಿದ. ನಮಗೂ ಯಾರಾದರೂ ದಕ್ಷಿಣಭಾರತೀಯ ಅನ್ನ ತಿಳಿಸಾರು ಕೊಟ್ಟರೆ ಸಾಕೆನಿಸುತ್ತಿತ್ತು. ಎಲ್ಲರೂ ಅಕ್ಕಿರೊಟ್ಟಿ ತೆಂಗಿನಕಾಯಿಯ ಚಟ್ನಿಯನ್ನು ನೆನಪಿಸಿಕೊಂಡು ಬಾಯಲ್ಲಿ ನೀರೂರಿಸುತ್ತಿದ್ದರು. ನಮ್ಮಲ್ಲಾ ತಿಂಡಿಗಳು ಕಣ್ಣ ಮುಂದೆ ಹಾದು ಹೋದವು. ಶ್ರೀಕಾಂತ ಅನಂತಮಠಕ್ಕೆ ಫೋನಾಯಿಸಿ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವೇ ಎಂದು ವಿಚಾರಿಸಿದ. ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ನಮ್ಮ ಅನ್ನ ತಿಳಿಸಾರಿನ ಆಸೆ ಮತ್ತೊಮ್ಮೆ ಗರಿಗೆದರಿತು.
ಸಂಜೆ ೫ ಗಂಟೆಯವರೆಗೆ ರಸ್ತೆ ಮುಚ್ಚಿರುವುದರಿಂದ ನಾವಿಲ್ಲಿ ಹೆಚ್ಚು ಸಮಯ ಕಳೆಯಲು ಅನುಕೂಲವಾಯ್ತು. ರಸ್ತೆ ಮುಚ್ಚುವ ಪ್ರಕ್ರಿಯೆ ಕಣಿವೆ ರಸ್ತೆಗಳಲ್ಲಿ ಒಮ್ಮುಖ ಸಂಚಾರಕ್ಕೆ ಮಾಡಿಕೊಂಡ ವ್ಯವಸ್ತೆ. ಪ್ರತಿ ೨ ಗಂಟೆಗಳಿಗೊಮ್ಮೆ ಒಂದು ದಿಕ್ಕಿನಿಂದ ವಾಹನಗಳಿಗೆ ಅನುವು ಮಾಡಿ ಕೊಡಲಾಗುತ್ತದೆ. ೫ ಗಂಟೆ ತೆಗೆಯುವ ಬಾಗಿಲಿಗೆ ಕಾಯುತ್ತ ನಿಂತೆವು. ಜೋಷಿಮಠದಿಂದ ಕಣಿವೆ ರುದ್ರ ಭಯಂಕರವಾಗಿದೆ. ಮಂಜಿನಿಂದಾವೃತವಾದ ಕಣಿವೆಗಳು ಅಲ್ಲಲ್ಲಿ ಕುಸಿತದಿಂದಾದ ತೊಂದರೆಗಳು ರಸ್ತೆಯನ್ನು ಹದೆಗೆಡಿಸಿವೆ. ಎಚ್ಚರಿಕೆಯಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ಅಪಘಾತ ಖಂಡಿತ. ಎಲ್ಲೆಲ್ಲೂ ಬೆಳ್ಳಿಯಂತೆ ಮಿಂಚುವ ಬೆಟ್ಟಗಳು. ಕಣಿವೆಯ ತಳಭಾಗದಿಂದ ಬೆಟದ ಮಧ್ಯಭಾಗಕ್ಕೆ ಬಂದು ಅಲ್ಲಿಂದ ಮತ್ತೊಂದು ಬೆಟ್ಟದ ತಳಭಾಗಕ್ಕೆ ಹೀಗೆ ಸಾಗುತ್ತಾ ಹೋಗುವ ದಾರಿಯಲ್ಲಿ ಬಲು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದ ಪಾಂಡೆ ಬೇರೆ ವಿಧಿ ಇಲ್ಲ ಏಕೆಂದರೆ ರಸ್ತೆ ಅಷ್ಟು ಹದಗೆಟ್ಟಿದೆ ಎನ್ನುವುದಕ್ಕಿಂತ ಅಲ್ಲಿನ ರಸ್ತೆಯನ್ನು ಉತ್ತಮವಾಗಿ ನಿರ್ವಹಿಸಿಸಲು ಸಾಧ್ಯವೂ ಇಲ್ಲವೆಂದೆನಿಸುತ್ತದೆ. ಕೊನೆಗೊಮ್ಮೆ ಬದರಿನಾಥಕ್ಕೆ ಬಂದಿಳಿದೆವು. ಅರ್ಧ ಗಂಟೆ ಅಲ್ಲಿ ಇಲ್ಲಿ ಕೇಳಿ ಓಡಾಡಿ ಉಡುಪಿಯ ಪೇಜಾವರ ಮಠದ ಅನಂತಮಠಕ್ಕೆ ಬಂದಿಳಿದು ಕನ್ನಡದ ಅಕ್ಷರಗಳನ್ನು ಕಂಡಾಗ ಅದೇನೋ ಖುಷಿ.
ಸಾರ್ ಬೆಳಿಗ್ಗೆ ಬೇಗ ಹೊರಟರೆ ಮಾತ್ರ ಹರಿದ್ವಾರ ತಲುಪಲು ಸಾಧ್ಯ ಎಂದು ಪಾಂಡೆ ಎಚ್ಚರಿಸಿದ. ದೇವಸ್ತಾನಕ್ಕೆ ಹೋಗಿ ಬದರಿ ನಾರಾಯಣನ ದರ್ಶನ ಮಾಡಿಕೊಂಡು ಬನ್ನಿ ಎಂದರು ಅಲ್ಲಿನ ಆಡಳಿತ ನೋಡಿಕೊಳ್ಳುವ ಶೇಷಾಚಾರ್. ಅವರು ಹೇಳಿದಂತೆ ದೇವಸ್ತಾನದ ಕಡೆ ಹೊರಟೆವು. ಇಲ್ಲಿ ಬಿಸಿನೀರಿನ ಕುಂಡದಲ್ಲಿ ಮನದಣಿಯೆ ಸ್ನಾನ ಮಾಡಿದೆವು. ನಮ್ಮಲ್ಲಿದ್ದ ಪ್ರಯಾಣದ ಆಯಾಸವೆಲ್ಲ ಪರಿಹಾರವಾಯಿತು. ಕೊರೆಯುವ ಛಳಿಯಲ್ಲೂ ಅದು ಹೇಗೆ ಅಷ್ಟು ಬಿಸಿನೀರು ಬರುತ್ತದೆಯೋ ಗೊತ್ತಿಲ್ಲ. ಹರಿದು ನದಿಗೆ ಸೇರುವವರೆಗೂ ಅದೆ ಬಿಸಿ ಉಳಿದು ಕೊಳ್ಳುವುದು ಆಶ್ಚರ್ಯ. ಸಾಲಿನಲ್ಲಿದ್ದವರೆಲ್ಲ ಬಹುತೇಕರು ಕನ್ನಡಿಗರೆ. ಅದರಲ್ಲೂ ಕೆಲವರು ಕೇದಾರನಾಥದಲ್ಲಿ ಭೇಟಿಯಾಗಿದ್ದವರು. ನೂಕುನುಗ್ಗಲಿನಲ್ಲಿ ನಿಂತು ಬದರೀನಾರಾಯಣನ ದರ್ಶನ ಪಡೆದೆವು. ಫೋಟೋಗಳನ್ನು ತೆಗೆದುಕೊಂಡ ನಂತರ ನಿಧಾನವಾಗಿ ದೇವಸ್ತಾನದಿಂದ ಇಳಿದು ಬಂದೆವು. ದಾರಿಯುದ್ದಕ್ಕೂ ಖರೀದಿ ಮಾಡುತ್ತಾ ಹೊರಟವರಿಗೆ ಮಾರುಕಟ್ಟೆಯ ಕೊನೆಯಲ್ಲಿ ಇಬ್ಬರು ಹೆಂಗಸರು ನಿಂತು ಕನ್ನಡದಲ್ಲಿ ಮಾತನಾಡಿಕೊಳ್ಳಿತ್ತಿದ್ದದ್ದು ಮತ್ತು ಅವರು ಗುಂಪಿನಿಂದ ಬೇರೆಯಾಗಿ ಅವರ ವಾಸ್ತವ್ಯದ ಸ್ಥಳ ಸಿಗದೆ ಪರದಾಡುತ್ತಿದ್ದದ್ದು ಗಮನಕ್ಕೆ ಬಂತು. ನಮ್ಮಲ್ಲಿದ್ದ ದೂರವಾಣಿಗಳಿಂದ ಅವರ ಗುಂಪಿನ ನಾಯಕರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಆ ಪುಣ್ಯಾತ್ಮ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿದ್ದರಿಂದ ಸಾಧ್ಯವಾಗಲಿಲ್ಲ. ಅವರು ಕೊಟ್ಟ ಇನ್ನೊಂದು ಸಂಖ್ಯೆ ಧಾರವಾಡೆಯದ್ದಾಗಿತ್ತು. ಕೊನೆಗೆ ನಾನು ಶ್ರೀಕಾಂತ ಅವರಿಬ್ಬರನ್ನು ಅವರ ಗಮ್ಯಕ್ಕೆ ಸೇರಿಸಿ ಬರುವುದಾಗಿ ತಿಳಿಸಿ ಮಿಕ್ಕವರನ್ನು ಕಳಿಸಿದೆವು ಇಲ್ಲದಿದ್ದರೆ ಊಟ ಸಿಗದಿರಬಹುದು ಎಂಬ ಭಯ. ಸರಿ ಅರ್ಧ ಗಂಟೆಯ ಪ್ರಯತ್ನದ ನಂತರ ಅವರ ವಾಸ್ತವ್ಯದ ಸ್ಥಳವನ್ನು ಕಂಡು ಹಿಡಿದು ಅವರನ್ನು ಕೋಣೆಗೆ ತಲುಪಿಸಿ ಹಿಂತಿರುಗಿ ಬಂದು ಊಟಕ್ಕೆ ಕೂತವರಿಗೆ ಹೊಗೆಯಾಡುತ್ತಿದ್ದ ಅನ್ನ ತಿಳಿಸಾರು ನೋಡಿದವರಿಗೆ ಹಸಿವು ಇಮ್ಮಡಿಸಿತು. ತಟ್ಟೆಯಾಕಾರದ ಎಲೆಯ ತಳಭಾಗ ಕಿತ್ತು ಬರುವವರೆಗೂ ಅನ್ನ ಚಟ್ನಿ ತಿಳಿಸಾರು ಅದೆಷ್ಟು ಬರಗೆಟ್ಟು ತಿಂದೆವೆಂದರೆ ಒಂದು ಬಕೆಟ್ ಅನ್ನ ನಿಮಿಶಾರ್ಧದಲ್ಲಿ ಖಾಲಿಯಾಗಿತ್ತು. ನಗುನಗುತ್ತಲೆ ನಮಗೆಲ್ಲ ಉಣಬಡಿಸಿದ ಅನಂತಮಠಕ್ಕೆ ಅದರ ಸಿಬ್ಬಂದಿವರ್ಗಕ್ಕೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಹೊಟ್ಟೆಗೆ ಬಿದ್ದ ಮೇಲೆ ಛಳಿ ತನ್ನ ಪ್ರತಾಪ ತೋರಿಸಲು ಪ್ರಾರಂಭಿಸಿತು. ಬರಿಗಾಲಿನಲ್ಲಿ ಕಾಲಿಡಲೂ ಆಗದಷ್ಟು ನೆಲ ಕೊರೆಯುತ್ತಿತ್ತು. ಶೇಷಾಚಾರ್ ಒಡನೆ ಸ್ವಲ್ಪ ಸಮಯ ಹರಟಿ ಅವರಿಗೆ ನಮಸ್ಕರಿಸಿ ಕೋಣೆ ಸೇರಿದೆವು.
ಬೆಳಿಗೆ ೬ ಗಂಟೆಗೆ ಮುಚ್ಚಿರುವ ರಸ್ತೆ ತೆಗೆಯುವ ಸಮಯಕ್ಕೆ ಹೊರಡಬೇಕಿತ್ತು. ೪.೩೦ಕ್ಕೆದ್ದು ಸಿದ್ದರಾದೆವು. ೫ ಗಂಟೆಗೆಲ್ಲ ನಿಚ್ಚಳವಾಗಿ ಬೆಳಕು ಹರಿದಿತ್ತು. ನಿನ್ನೆ ಸಂಜೆಗಿಂತ ಇಂದು ಬದರೀನಾಥ ಸುಂದರವಾಗಿ ಕಾಣಿಸುತ್ತಿತ್ತು. ಸುತ್ತಲೂ ಆವರಿಸಿರುವ ಹಿಮ ಪರ್ವತಗಳು ಕೊರೆಯುವ ಛಳಿ ಓಹ್ ಇಲ್ಲೆ ಇದ್ದು ಬಿಡೋಣವೆನಿಸುತ್ತದೆ. ವರ್ಷದಲ್ಲಿ ೬ ತಿಂಗಳು ಸಂಪೂರ್ಣವಾಗಿ ಮುಚ್ಚಿ ಹೋಗುವ ಈ ಪ್ರದೇಶಗಳು ಮಿಕ್ಕ ೬ ತಿಂಗಳು ಮಾತ್ರ ಪ್ರವಾಸಿಗರಿಗೆ ಲಭ್ಯ. ೬ ತಿಂಗಳು ಕಾಲ ಸಂಪೂರ್ಣ ಸೈನಿಕರ ಹಿಡೀತದಲ್ಲಿರುತ್ತದೆ ಈ ಪ್ರದೇಶಗಳು ಎಂದು ಶೇಷಾಚಾರ್ ತಿಳಿಸಿದರು. ೬ ತಿಂಗಳು ಇಲ್ಲಿನ ಎಲ್ಲ ಕಟ್ಟಡಗಳು ಹಿಮದಿಂದ ಮುಚ್ಚಿಹೋಗಿರುತ್ತದಂತೆ. ಇಲ್ಲಿ ಭೇಟಿಕೊಡುವ ಇನ್ನೂ ಕೆಲವು ಸ್ಥಳಗಳಿದ್ದವೆಂದು ಕೆಲವರು ತಿಳಿಸಿದರೂ ನಮಗೆ ಸಮಯಾವಕಾಶವಿಲ್ಲದ್ದರಿಂದ ನಾವು ಹೀತಿರುಗಬೇಕಾಯಿತು.
೬.೩೦ ಸುಮಾರಿಗೆ ರಸ್ತೆ ತೆಗೆದ ತಕ್ಷಣವೆ ನಮ್ಮ ವಾಹನ ಹೊರಟಿತು. ಸುಮಾರು ೩೫೦ ಕಿ.ಮೀಗಳಷ್ಟು ದೂರ ಅದೂ ಬೆಟ್ಟಗುಡ್ಡಗಳ ರಸ್ತೆಯಲ್ಲಿ ಕ್ರಮಿಸಬೇಕಿರುವುದರಿಂದ ಬೇಗನೆ ಹೊರಡುವುದು ಸೂಕ್ತವೆನ್ನುವುದು ನಮ್ಮ ಪಾಂಡೆಯ ಅಭಿಪ್ರಾಯ.
ಸಂಜೆ ಸುಮಾರು ೪ ಗಂಟೆಗೆ ಋಷಿಕೇಶಕ್ಕೆ ಬಂದಿಳಿದೆವು. ದಾರಿಯಲ್ಲಿ ಗಂಗೆಯಲ್ಲಿ ರಾಫ್ಟಿಂಗ್ ಮಾಡುವವರ ನೂರಾರು ತಂಡಗಳು ನದಿ ದಂಡೆಯಲ್ಲಿ ಬಿಡಾರ ಹೂಡಿರುವುದು ವಿಶೇಷ. ಲಕ್ಶ್ಮಣಜೂಲ ರಾಮ್ ಜೂಲ ಭೇಟಿಕೊಟ್ಟು ಹರಿದ್ವಾರಕೆ ಬಂದು ವ್ಯಾಸಾಶ್ರಮದಲ್ಲಿ ಕೋಣೆಗಳನ್ನು ಪಡೆದು ಉಳಿದು ಕೊಂಡೆವು . ಕೇದಾರನಾಥ ಮತ್ತು ಬದರೀನಾಥ ಪ್ರವಾಸಕ್ಕೆ ಕನಿಷ್ಠ ೫ ದಿನಗಳ ಬಾಡಿಗೆ ಕೊಡಲೇಬೇಕೆಂದು ಹಠ ಹಿಡಿದ ಪ್ರವಾಸಿ ಏಜೆಂಟ್ ಗೆ ಅದೆಲ್ಲ ಸಾಧ್ಯವಿಲ್ಲವೆಂದು ತಿಳಿಸಿ ೪ ದಿನದ ಬಾಡಿಗೆಯನ್ನು ಕೊಟ್ಟು ಪಾಂಡೆಯನ್ನು ನಾಳೆ ಸಂಜೆ ನಮ್ಮನ್ನು ರೈಲ್ವೆ ನಿಲ್ದಾಣಕ್ಕೆ ನಮ್ಮನ್ನು ತಲುಪಿಸುವಂತೆ ಕೇಳಿಕೊಂಡೆವು. ಅತ್ಯಂತ ಆತ್ಮೀಯನಾಗಿದ್ದ ಪಾಂಡೆ ಸಂತೋಷದಿಂದ ಒಪ್ಪಿಕೊಂಡ.
ಹರ್ಕಿಪೌಡಿಯಲ್ಲಿನ ಮಾರುಕಟ್ಟೆಯಲ್ಲಿ ೩-೪ ಗಂಟೆಗಳ ಕಾಲ ಸುತ್ತಾಡಿ, ಮಾನಸ ದೇವಿ ಮಂದಿರ ಮತ್ತಿತರ ಸ್ಥಳಗಳಿಗೆ ಭೇಟಿಯಿತ್ತು. ಆಶ್ರಮಕ್ಕೆ ಹಿಂತಿರುಗಿ ಉರಿಬಿಸಿಲಿನಲ್ಲಿ ಆಶ್ರಮದ ಪಕ್ಕದಲ್ಲಿ ತಣ್ಣಗೆ ಹರಿಯುತ್ತಿದ್ದ ಗಂಗೆಯಲ್ಲಿ ನೀರಿಗಿಳಿದಾಗ ಧನ್ಯೋಸ್ಮಿ ಎಂಬ ಭಾವ. ೧ ಗಂತೆ ಕಳೆದದ್ದೆ ಗೊತ್ತಾಗಲಿಲ್ಲ. ಆಶ್ರಮದಲ್ಲಿ ಊಟಮಾಡಿ ಮತ್ತೆ ಹರ್ಕಿಪೌಡಿ ಮಾರುಕಟ್ಟೆ ನಂತರ ಗಂಗೆಯ ಆರತಿ ಮುಗಿಸಿಕೊಂಡು ಆಶ್ರಮಕ್ಕೆ ಹಿಂತಿರುಗಿದೆವು. ಗಂಗೆಯ ಆರತಿ ನೋಡಲು ಸಾವಿರಾರು ಜನರು ಸೇರುವುದು ವಿಶೇಷ.
ರಾತ್ರಿ ೧೨.೪೦ ನಿಮಿಷಕ್ಕೆ ಇದ್ದ ರೈಲಿಗೆ ನಮ್ಮನ್ನು ಕಳುಹಿಸಲು ಪಾಂಡೆ ೧೦.೦೦ಕ್ಕೆ ಹಾಜರಾದಾಗ ಮಳೆ ಜಿನುಗತೊಡಗಿತ್ತು. ನಮ್ಮನ್ನು ನಿಲ್ದಾಣಕ್ಕೆ ಬಿಟ್ಟು ಪಾಂಡೆ ಹಿಂತಿರುಗಿದಾಗ ಸಮಯ ೧೦.೪೫. ಜನರಿಂದ ತುಂಬಿ ಹೋಗಿದ್ದ ರೈಲ್ವೆ ನಿಲ್ದಾಣದಲ್ಲಿ ನಮ್ಮ ಹೊರೆಗಳನ್ನೆಲ್ಲಾ ಒಂದೆಡೆ ಇರಿಸಿ ಸುತ್ತಲೂ ಕುಳಿತು ಎಲ್ಲರೂ ತೂಕಡಿಸಲು ಪ್ರಾರಂಬಿಸಿದರು. ಪ್ರಸಾದಿ ಮತ್ತು ಗೀತ ಒಳ್ಳೆಯ ನಿದ್ದೆಯನ್ನೆ ತೆಗೆದರು. ನಾನು, ನನ್ನ ಪತ್ನಿ ಮತ್ತು ಶ್ರೀಕಾಂತ ಹೊರೆಗಳನ್ನೆಲ್ಲಾ ಕಾಯುತ್ತ ಕೂರಬೇಕಾಯಿತು.
ಸಮಯಕ್ಕೆ ಸರಿಯಾಗಿ ಬಂದ ರೈಲಿಗೆ ನಿದ್ದೆ ಮಾಡುತ್ತಿದ್ದ ಎಲ್ಲರನ್ನೂ ಎಚ್ಚರಗೊಳಿಸಿ ನಮ್ಮ ಸ್ಥಳಗಳನ್ನು ಹುಡುಕಿಕೊಂಡು ನಿದ್ರಿಸಿದೆವು. ಅಬ್ಬ ನಿಜಕ್ಕೂ ನಮಗೆ ಈ ವಿಶ್ರಾಂತಿ ಅತ್ಯಗತ್ಯವಾಗಿತ್ತು. ೬ ಗಂಟೆಗೆ ದೆಹಲಿ ತಲುಪಿದ ರೈಲಿನಿಂದಿಳಿದು ನೇರವಾಗಿ ತೀನ್ಮೂರ್ತಿಮಾರ್ಗ್ ಸೇರಿದೆವು. ಸ್ನಾನಾದಿಗಳನಂತರ ಮೆಟ್ರೊ ಹತ್ತಿ ಕರೋಲ್ಭಾಗ್ ಗೆ ಬಂದು ಕೆಲವು ಅಗತ್ಯ ವಸ್ತುಗಳ ಖರೀದಿಯ ನಂತರ ಅಲ್ಲಿಂದಲೆ ಅಕ್ಷರಧಾಮಕ್ಕೆ ತೆರಳಿದೆವು. ಭವ್ಯವಾಗಿ ನಿಂತ ಅಕ್ಷರಧಾಮ ಸ್ವಾಮಿ ನಾರಾಯಣ ಮಂದಿರ ಮನಸೆಳೆಯಿತು. ಸಾವಿರಾರು ಜನರು ಭೇಟಿಯಿತ್ತರೂ ಅತ್ಯಂತ ಸ್ವಚ್ಚವಾಗಿ ಮತ್ತು ಬಿಗಿ ಭದ್ರತೆಯನ್ನೂ ಕೂಡ ಖಾಸಗಿಯವರಿಂದಲೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆಯೆಂದರೆ ನಮಗದು ಆಶ್ಚರ್ಯಕರವೆ.
ಶಿಲ್ಪಕಲೆಯ ಉತ್ಕೃಷ್ಠತೆ ಇಲ್ಲಿ ಅನಾವರಣಗೊಂಡಿದೆಯೆನ್ನಬೇಕು ಅದೂ ಇತ್ತೀಚಿನ ದಿನಗಳಲ್ಲಿ ನಿರ್ಮಿಸಲ್ಪಟ್ಟಿದೆಯೆಂಬುದು ಹೆಮ್ಮೆಯ ಸಂಗತಿ. ಸಂಜೆ ೭ ಗಂಟೆ ಸುಮಾರಿಗೆ ಕೋಣೆಗೆ ಹಿಂತಿರುಗಿ ಮೈಸೂರು ಕೆಫೆಯಲ್ಲಿ ಊಟಮಾಡಿ ಮಲಗಿದವರಿಗೆ ತಿಗಣೆಗಳು ಸೊಳ್ಳೆಗಳು ಕಾಡಲಾರಂಭಿಸಿದವು ನಾನಂತೂ ಒಂದು ನಿಮಿಷವೂ ನಿದ್ದೆ ಮಾಡಲಿಲ್ಲ. ನನ್ನ ಮಗನಿಗೆ ಎಲ್ಲ ಕಡೆ ಕಚ್ಚಿದ್ದರಿಂದ ಮೈ ಪೂರ್ತಿ ಗುಳ್ಳೆಗಳಾದವು.
ಬೆಳಿಗ್ಗೆ ೬ ಗಂಟೆಗೆ ನಾನು ಮತ್ತು ಪ್ರಸಾದ್, ಆಗ್ರ ಮತ್ತು ಮಥುರಾ ಪ್ರವಾಸಕ್ಕಾಗಿ ಹೊರಟೆವು. ಶ್ರೀಕಾಂತ ಮಗಳ ಅನಾರೋಗ್ಯದಿಂದ ನಮ್ಮೊಡನೆ ಬರಲಾಗಲಿಲ್ಲ. ೯ ಗಂಟೆಯ ಸಮಯಕ್ಕೆ ತಿಂಡಿಗೆಂದು ನಿಂತ ಹೋಟೆಲ್ನಲ್ಲಿ ಒಟ್ಟು ನಾಲ್ಕು ಜನ ೧೬ ಕೆಟ್ಟ ರುಚಿಯ ಇಡ್ಲಿಗೆ ೩೦೦ ರೂ ತೆತ್ತು ಅವನನ್ನು ಶಪಿಸುತ್ತಾ ಬಸ್ ಹತ್ತಿದೆವು. ದಾರಿಯಲ್ಲಿ ಚುನಾವಣಾ ಜನಜಂಗುಳಿಯಿಂದ ಸುಮಾರು ೩-೪ ಗಂಟೆಗಳ ವಾಹನ ದಟ್ಟಣೆಯಿಂದ ಬಸ್ ನಿಂತಾಗ ಅದೇನು ನೋಡೋಣವೆಂದು ಹೊರಬಂದವನಿಗೆ ಬಿಸಿಲಿನ ಬೇಗೆಗೆ ತಲೆ ತಿರುಗಿ ಬಂದು ಓಡಿಹೋಗಿ ಮತ್ತೆ ಓಡಿ ಹೋಗಿ ಬಸ್ಸಿನಲ್ಲಿ ಕುಳಿತೆ. ೨ ಗಂಟೆಗೆ ಆಗ್ರಾದಲ್ಲಿ ಇಳಿದು ಕೆಂಪುಕೋಟೆ ನೋಡಿ ಕೊಂಡು ತಾಜ್ ಮಹಲ್ ಬಳಿಬಂದಾಗ ೩೦ ವರ್ಷಗಳ ಹಿಂದೆ ಇದೇ ದಿನ ಇಲ್ಲಿ ಬಂದದ್ದು ಅಂದು ದೆಹಲಿಗೆ ಹಿಂತಿರುಗುವಾಗ ನಮ್ಮ ಅಜ್ಜ ಕಳೆದು ಹೋದದ್ದು ಅವರನ್ನು ಹುಡುಕುವಾಗ ನಮ್ಮಪ್ಪನ ರಬ್ಬರ್ ಚಪ್ಪಲಿ ಜಿನುಗುತ್ತಿದ್ದದ್ದು ನನ್ನ ಮನದಲ್ಲಿ ಹಾಯ್ದು ಹೋಯ್ತು. ಆ ಹೊತ್ತಿಗೆ ದೂರವಾಣಿಯಲ್ಲಿ ಅಮ್ಮ ಹುಶಾರು ಕಣೋ ಇದೇ ನರಸಿಂಹ ಜಯಂತಿಯ ಹಿಂದಿನ ದಿನ ತಾತ ಕಳೆದು ಹೋಗಿದ್ರು ಅಮಿತ್ ನ ಹುಶಾರಾಗಿ ನೋಡ್ಕೋ ಎಂದು ನನಗೆ ಎಚ್ಚರಿಕೆಯಿತ್ತರು. ತಾಜ್ ಮಹಲ್ನಂತರ ಮಥುರಾದಲ್ಲಿ ಕೃಷ್ನ ಜನ್ಮಸ್ಥಾನ ಬೃಂದಾವನ ನೋಡಿಕೊಂಡು ರಾತ್ರಿ ೨.೩೦ಕ್ಕೆ ದೆಹಲಿಗೆ ಹಿಂತಿರುಗಿ ಬಂದೆವು. ಈ ಬಾರಿ ತಿಗಣೆಯಿರದ ಕೋಣೆಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಅಂಟಿಕೊಂಡು ಮಲಗಬೇಕಾಯಿತು.
೭ ರಂದು ಬೆಳಿಗ್ಗೆ ಚುನಾವಣೆಯಿದ್ದುದ್ದರಿಂದ ಯಾವುದೆ ಮಾರುಕಟ್ಟೆಗಳು ತೆಗೆದಿಲ್ಲವಾದ್ದರಿಂದ ಬಿರ್ಲಾ ಮಂದಿರಕ್ಕೆ ಭೇಟಿಕೊಟ್ಟಿ ಕಮಲ ಮಹಲ್ ನೋಡಲಾಗದಿದ್ದುದಕ್ಕೆ ವಿಷಾದಿಸುತ್ತಾ ಟ್ಯಾಕ್ಸಿ ಹತ್ತಿ ವಿಮಾನ ನಿಲ್ದಾಣಕ್ಕೆ ಬಂದು ಸಮಯಕ್ಕೆ ಸರಿಯಾಗಿ ಹೊರಟ ವಿಮಾನದಲ್ಲಿ ಬೆಂಗಳೂರಿಗೆ ಬಂದವನೆ ಅಮ್ಮನಿಗೆ ಕರೆ ಮಾಡಿ ಅಕ್ಕಿರೊಟ್ಟಿ ಕಾಯಿ ಚಟ್ನಿ ಅನ್ನ ತಿಳಿಸಾರು ಮಾಡು ಎಂದು ಫೋನಾಯಿಸಿದೆ. ಮನೆಗೆ ಬಂದು ಅಮ್ಮ ಕೊಟ್ಟ ಅಕ್ಕಿ ರೊಟ್ಟಿ ಕೈಯಲ್ಲಿ ಹಿಡಿದಾಗ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ. ಅತ್ಯಂತ ಧೀರ್ಘವಾದ ಈ ಪ್ರವಾಸ ಕಥನ ಬೇಗ ಮುಗಿಸಬೇಕೆಂಬ ತವಕ ನನಗೂ ಇತ್ತು. ನಿಮ್ಮ ತಲೆತಿಂದಿದ್ದಕ್ಕೆ ಕ್ಷಮೆಯಿರಲಿ. ನೀವೂ ಹೋಗಿಬನ್ನಿ. ಪ್ರವಾಸಕ್ಕೆ ಸಹಕರಿಸಿದ ಅದರಲ್ಲೂ ಕುಲ್ದೀಪ್ ಮತ್ತು ದಿಲೀಪ್ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ. ಧನ್ಯವಾದಗಳು.
No comments:
Post a Comment