೩ ತಿಂಗಳು ಮೊದಲೆ ಪ್ರವಾಸದ ಬಗ್ಗೆ ಆಗಾಗ ಮಾತನಾಡುತ್ತಿದ್ದ ನಾವು ಏಪ್ರಿಲ್ ೨೦೦೯ ರ ಮಕ್ಕಳ ರಜಾ ಸಮಯದಲ್ಲಿ ಪ್ರವಾಸಕ್ಕೆ ಮಹೂರ್ತ ನಿಗಧಿ ಪಡಿಸಿದೆವು. ಅಂತೆಯೆ ಅದಕ್ಕೊಂದು ಸ್ಪಷ್ಟ ರೂಪು ಕೊಡಲು ಕುಳಿತಾಗ ನಾನು ಕಾಶ್ಮೀರದ ವಿಷಯ ಪ್ರಸ್ತಾಪಿಸಿದೆ, ಅದೇಕೊ ಮೌನ ಮನೆಮಾಡಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನಾನು ಶ್ರೀಕಾಂತನಿಗೆ ದುಂಬಾಲು ಬಿದ್ದೆ. ಸ್ವತಃ ಧೈರ್ಯಶಾಲಿಯಾದ ಶ್ರೀಕಾಂತ ಬಹುಶಃ ಸಂಸಾರ ಸಮೇತ ಹೋಗಬೇಕಿರುವುದರಿಂದ ಅವನಲ್ಲಿ ಹಿಂಜರಿಕೆ ಕಾಣಿಸುತ್ತಿತ್ತು. ನನ್ನ ಭಂಡ ಧೈರ್ಯವನ್ನೆ ಅವನಲ್ಲೂ ತುಂಬಿ ಅವನನು ಒಪ್ಪಿಸಿದೆ. ಶ್ರೀಕಾಂತನ ಸಹೋದರ ಮಂಜುನಾಥ್ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ಕಾಶ್ಮೀರ ಕಾರ್ಯಕ್ರಮ ರದ್ದುಗೊಳಿಸಿ ಎಂದು ನಮ್ಮನ್ನು ಪದೇ ಪದೇ ಎಚ್ಚರಿಸಿದರೂ (ಅವರಿಗೆ ಸಿಗುವ ಮಾಹಿತಿಯಂತೆ ಅದು ಸಹಜವೆ) ನಾನು ಹೋಗೇ ತೀರುವುದಾಗಿ ಹಠ ಹಿಡಿದಾಗ ಅನಿವಾರ್ಯವಾಗಿ ಎಲ್ಲರೂ ಒಪ್ಪಿದರೆನೋ? ಶ್ರೀಕಾಂತನ ಸಹೋದ್ಯೋಗಿ ಕಾಂತರಾಜು ಪ್ರತಿವರ್ಷ ಆಯೋಜಿಸುವ ಪ್ರವಾಸದಲ್ಲೆ ಹೋಗಲು ಕೂಡ ಅವಕಾಶವಿದ್ದರೂ ಪೂರ್ವ ನಿರ್ಧರಿತ ಪ್ರವಾಸಗಳು ನಮಗೆ ಸೂಕ್ತವಲ್ಲ ಎಂದು ಅವನಿಗೆ ತಿಳಿಸಿ ನಮ್ಮ ಪ್ರವಾಸ ಕಾರ್ಯಕ್ರಮಕ್ಕೊಂದು ರೂಪ ಕೊಡಲು ಕುಳಿತೆವು. ಏಪ್ರಿಲ್ ಮೊದಲನೆ ವಾರದಲ್ಲಿ ಉತ್ತರಭಾರತದ ವಾತಾವರಣ ಸಮಂಜಸವಾಗಿದ್ದರೂ ನಮ್ಮ ಗಾಯತ್ರಿ ಸಹಕಾರ ಸಂಘದ ಕೆಲವು ಕಾರ್ಯಕ್ರಮಗಳು ಮತ್ತು ಕೇದಾರನಾಥ ದೇವಸ್ಥಾನದ ಬಾಗಿಲು ತೆಗೆಯುವುದು ಏಪ್ರಿಲ್ ೨೯ರಂದು ಎಂಬ ವಿಷಯ ನಮ್ಮ ಕಾರ್ಯಕ್ರಮವನ್ನು ಏಪ್ರಿಲ್ ೩ನೇ ವಾರಕ್ಕೆ ಮುಂದೂಡುವಂತೆ ಮಾಡಿದ್ದು ನಮ್ಮ ಆತಂಕವನ್ನು ಹೆಚ್ಚಾಗಿಸಿತ್ತು. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ ಕೂಡಲೆ ಕೇಂದ್ರ ಚುನಾವಣಾ ಆಯೋಗ, ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿ ನಮ್ಮ ಭಯಕ್ಕೆ ತುಪ್ಪ ಸುರಿದಿತ್ತು. ಅದೃಷ್ಟವಶಾತ್ ಕಾಶ್ಮೀರ ಚುನಾವಣೆಗಳು ನಮ್ಮ ಕಾರ್ಯಕ್ರಮಕ್ಕೆ ತೊಂದರೆ ಉಂಟುಮಾಡದಂತಿದ್ದದ್ದು ಖುಷಿಕೊಡುವ ವಿಚಾರ. ನಮ್ಮ ಕಾರ್ಯಕ್ರಮವನ್ನು ಅಂತಿಮಗೊಳಿಸಿ ಅಂತರ್ಜಾಲದಲ್ಲೆ ರೈಲ್ವೆ ಟಿಕೆಟ್ಗಳನ್ನು ಜಮ್ಮುವರೆಗೆ ಮತ್ತು ದೆಹಲಿಯಿಂದ ಬೆಂಗಳೂರಿಗೆ ಕಾದಿರಿಸಿದೆವು. ನಾನಿರುವ ಬಡಾವಣೆಯಲ್ಲಿರುವ ಸುಮಾರು ೩೦ ಕಾಶ್ಮೀರಿ ಪಂಡಿತರ ಕುಟುಂಬಗಳಲ್ಲಿ ಒಂದಾದ ನನ್ನ ಮನೆಯ ಹಿಂದಿರುವ ಕುಲ್ದೀಪ್ ಪಂಡಿತ್ ಅವರನ್ನು ನಮಗೆ ಸಹಾಯ ಮಾಡುವಂತೆ ಕೇಳಿದಾಗ ಅತ್ಯಂತ ಆತ್ಮೀಯತೆಯಿಂದ ನಮಗೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು. ಅವರ ಮಗನ ಮದುವೆ ಮೇ ೬ ರಂದು ಜಮ್ಮುನಲ್ಲಿರುವುದಾಗಿ ಅದಕ್ಕೂ ಬರಬೇಕೆಂದು ದುಂಬಾಲುಬಿದ್ದರು ಆದರೆ ನಮ್ಮ ಕಾರ್ಯಕ್ರಮದಂತೆ ಅದು ಸಾಧ್ಯವಿಲ್ಲವೆಂದು ಅವರಿಗೆ ತಿಳಿಸಿ ನಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಅವರ ಸಹೋದರ ಜಮ್ಮುವಿನಲ್ಲಿ ವಾಸವಾಗಿರುವ ದಿಲೀಪ್ ಅವರನ್ನು ಸಂಪರ್ಕಿಸಿ ನಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆಯಿತ್ತರು. ಅವರ ನಿರ್ದೇಶನದಂತೆ ಕಾಶ್ಮೀರದ ನಮ್ಮ ಪ್ರವಾಸ ಕಾರ್ಯಕ್ರವನ್ನು ಅಂತಿಮಗೊಳಿಸಿದೆವು.ನಮ್ಮ ಕಾರ್ಯಕ್ರಮ ಇಂತಿತ್ತು.
೧೭-ಏಪ್ರಿಲ್ ಬೆಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ೧೯ರಂದು ಸೇರುವುದು, ಕೆಲವು ಸ್ಥಳಗಳ ವೀಕ್ಷಣೆಗೆ ಅವಕಾಶ.
೧೯ರಂದು ರಾತ್ರಿ ಜಮ್ಮುಗೆ ರೈಲಿನಲ್ಲಿ ಹೊರಟು ೨೦ರಂದು ಜಮ್ಮು ವೀಕ್ಷಣೆಯ ನಂತರ ಕಾಟ್ರಾಗೆ ಪಯಣ ಅಂದಿನ ರಾತ್ರಿ ವೈಷ್ಣೋದೇವಿಯ ದರ್ಶನ
ಮರುದಿನ ಬೆಳಿಗ್ಗೆ ಕಾಟ್ರದಿಂದ ಕಾಶ್ಮೀರದ ಶ್ರೀನಗರಕ್ಕೆ ಪಯಣ, ೩ ದಿನ ಕಾಶ್ಮೀರ ಪ್ರವಾಸ, ೩೫ ರಂದು ಹಿಂತಿರುಗಿ ಜಮ್ಮು, ಮತ್ತು ಅಂದೆ ಶ್ರೀಕಾಂತನ ಅಣ್ಣನ ಮನೆಯಿರುವ ಧರ್ಮಶಾಲ ಗೆ ಪಯಣ.
ಅಲ್ಲಿಂದ ೧ ದಿನದ ನಂತರ ಕುಲು ಮನಾಲಿ ರೋಹ್ತಾಂಗ್ ಪಾಸ್ ೨ ದಿನದ ಕಾರ್ಯಕ್ರಮ ೨ ನೇದಿನದ ರಾತ್ರಿ ಚಂಡೀಗಡಕ್ಕೆ ಪಯಣ ಅಲ್ಲಿಂದ ಹರಿದ್ವಾರಕ್ಕೆ ೧ ದಿನದ ನಂತರ ಕೇದಾರನಾಥ ಮತ್ತು ಬದರಿನಾಥ ದರ್ಶನ ೪ ದಿನಗಳ ಕಾರ್ಯಕ್ರಮ. ಹಿಂತಿರುಗಿ ಬಂದು ಒಂದು ದಿನದ ನಂತರ ದೆಹಲಿಗೆ ಪಯಣ. ಇದಕ್ಕೆ ಅನುಗುಣವಾಗಿ ರಾತ್ರಿ ಪ್ರಯಾಣ ಇರದಂತೆ, ಇದ್ದರೂ ರೈಲು ಸೌಲಭ್ಯವಿರುವ ಕಡೆ ರೈಲು ಪ್ರಯಾಣಕ್ಕೆ ಕಾದಿರಿಸಿದೆವು. ಈ ಮಧ್ಯೆ ಕಾಶ್ಮೀರದ ( ಪಾಕಿಸ್ತಾನದಲ್ಲಿ ತಾಲಿಬಾನ್ಗಳ ಆಕ್ರಮಣ ಮತ್ತು ಅವರಲ್ಲಿ ಕೆಲವರು ಕಾಶ್ಮೀರಕ್ಕೆ ನುಸುಳಿರುವ ಬಗೆ ಪತ್ರಿಕೆಗಳಲ್ಲಿ ಬಂದ) ಕೆಲವು ಸುದ್ದಿಗಳು ನಮ್ಮ ನಿರ್ಧಾರ ಸರಿಯಲ್ಲವೇನೊ ಎಂಬ ಆತಂಕ ತಂದದ್ದೂ ಇದೆ.
ಬಡಾವಣೆಯ ಕಾಶ್ಮೀರಿ ಸ್ನೇಹಿತರು ಅದ್ಯಾವುದು ಸಮಸ್ಯೆ ಪ್ರವಾಸಿಗರನ್ನು ಕಾಡುವುದಿಲ್ಲ ಎಂದು ನನ್ನಲ್ಲಿ ಧೈರ್ಯ ತುಂಬಿದರು. ಏಕೆಂದರೆ ಕಾಶ್ಮೀರದ ಜನರ ಬದುಕು ನಿಂತಿರುವುದೇ ಪ್ರವಾಸಿಗರನ್ನು ಅವಲಂಭಿಸಿ ಎನ್ನುವ ಸತ್ಯ ಅವರಿಗರಿವಾಗಿರುವುದು ಇದಕ್ಕೆ ಕಾರಣ ಅದರಲ್ಲೂ ಯಾವುದೇ ವಿದೇಶಿ ಪ್ರವಾಸಿಗರು ಬರುವುದಿಲ್ಲವಾದರಿಂದ, ಅಲ್ಲಿಗೆ ಭಾರತೀಯ ಪ್ರವಾಸಿಗರಷ್ಟೆ ಗಟ್ಟಿ ಎನ್ನುವ ಕಟು ಸತ್ಯದ ಅರಿವು ಅವರಿಗಿದೆ ಎಂಬ ಧೈರ್ಯ ತುಂಬುವ ಮಾತು ನನ್ನಲ್ಲೇನೊ ಉತ್ಸಾಹ ತುಂಬುತ್ತಿತ್ತು. ಈ ಮಧ್ಯೆ SPICE JET ನ ಅಗ್ಗದ ದರದ ದೆಹಲಿ-ಬೆಂಗಳೂರು ವಿಮಾನದ ಟಿಕೆಟ್ ಲಭ್ಯವಾಗಿದ್ದು ಸಂತಸದ ವಿಚಾರ.
ಈ ಮಧ್ಯೆ ಸಹಕಾರ ಸಂಘದ ಕಾರ್ಯಕ್ರಮಗಳು ಸುಸೂತ್ರವಾಗಿ ಏಪ್ರಿಲ್ ೧೧ ರಂದು ನಡೆಯಿತು. ಏಪ್ರಿಲ್ ೧೭ರಂದು ನಮ್ಮ ಪ್ರಯಾಣದ ದಿನ. ಇದ್ದ ೪-೫ ದಿನದಲ್ಲಿ ನಮ್ಮ ಬಟ್ಟೆ ಬರೆ ಸಾಮಾನುಗಳನ್ನು ಹೊಂದಿಸಿ ಬ್ಯಾಗುಗಳಿಗೆ ತುಂಬುವ ಕೆಲಸ ಅಗತ್ಯವಾಗಿ ಮಾಡಬೇಕಿದ್ದ ಕೆಲಸದ ಬಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆವು. ಶ್ರೀಮತಿ ಗೀತಾಪ್ರಸಾದ್, ಶ್ರೀಮತಿ ಪದ್ಮಶ್ರೀಕಾಂತ್ ಮತ್ತು ನನ್ನ ಪತ್ನಿ ಶ್ರೀಮತಿ ಚಿತ್ರ ತಮ್ಮದೇ ಆದ ಶಾಪಿಂಗ್ ಮಾಡಿ ಸುಸ್ತಾಗಿದ್ದರೆ? ಇರಲಿಕ್ಕಿಲ್ಲ ಬಿಡಿ. ರೈಲಿನಲ್ಲಿ ಸಿಗುವ ಊಟ ಬೇಡವೆಂದು ಚಪಾತಿ ಚಟ್ನಿಪುಡಿ ಪಲ್ಯಗಳು ಟಿ ಬ್ಯಾಗ್ ಕಾಫಿ ಮಾಡಲು ಅದಕ್ಕೆ ಬೇಕಾಗುವ ಪರಿಕರಗಳು ಹಣ್ಣುಗಳು ಒಣಹಣ್ಣುಗಳು ಔಷಧಗಳು ಪ್ರತಿಯೊಂದು ಅಣಿಯಾಗುತ್ತಿದ್ದವು.ಆದರೆ ಅದು ದೊಡ್ಡ ಹೊರೆಯಾಗಿ ಹೋಗುತ್ತಿತ್ತು. ಆಗ ಬಂತು ಒಂದು ಸುದ್ದಿ. ಕಾಶ್ಮೀರದಲ್ಲಿ ಸಾಮಾನ್ಯವಾಗಿ ವಸತಿ ಅತ್ಯಂತ ಹೆಚ್ಚು ಖರ್ಚು ತರುವ ಸಮಸ್ಯೆ. ಆದರೆ ನಮ್ಮ ಕುಲ್ದೀಪ್ ಅವರ ಸಹೋದರ ಶ್ರೀನಗರದ ಜೇಷ್ಠಾದೇವಿ ಮಂದಿರದಲ್ಲಿ ನಮಗೆ ವಸತಿ ಕಾದಿರಿಸಿದ ಸುದ್ದಿ ಸಂತಸದಾಯಕ ವಿಚಾರ. ಜಮ್ಮುವಿನಿಂದಲೆ ವಾಹನದ ವ್ಯವಸ್ಥೆ ಮಾಡಿ ಅತ್ಯಂತ ನಂಬುಗೆಯ ಹಿಂದೂ ಚಾಲಕನನ್ನು ವ್ಯವಸ್ಥೆಗೊಳಿಸಿರುವುದಾಗಿ ಅವರು ತಿಳಿಸಿದರು. ಜೇಷ್ಠಾದೇವಿ ಮಂದಿರದಲ್ಲಿ ನಮಗೆ ಅಡುಗೆ ಮಾಡಲು ಎಲ್ಲ ಪರಿಕರಗಳು, ಪಾತ್ರೆ, ಗ್ಯಾಸ್ ಲಭ್ಯವಿದ್ದು, ಅಡುಗೆಗೆ ಬೇಕಾದ ಪದಾರ್ಥಗಳನ್ನು( ಮೆಣಸಿನಪುಡಿ, ಸಾಂಬಾರ್ಪುಡಿ ಮುಂತಾದವು) ತೆಗೆದುಕೊಂಡು ಹೋಗಲು ತಿಳಿಸಿದರು.
ಏಪ್ರಿಲ್ ೧೭ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಹೊರಡಲಿದ್ದ ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ನಮ್ಮನ್ನು ಬೀಳ್ಕೊಡಲು ಬಂದ ವಸಂತ ಮತ್ತು ನರಸಿಂಹ ಪ್ರಸಾದನ ಮಕ್ಕಳಾದ ವರುಣ್ ಮತ್ತು ವೈಶಾಖ್ ರಿಗೊಂದು ಧನ್ಯವಾದ ತಿಳಿಸಿ ವಸಂತ್ ಕೊಟ್ಟ ರುಚಿಯಾದ ಉಪ್ಪಿನಕಾಯಿಯೊಡನೆ ಚಪಾತಿಯನ್ನು ತಿಂದು ಮಲಗುವ ಮೂಲಕ ನಮ್ಮ ಪ್ರಯಾಣದ ಶುಭಾರಂಭವಾಯಿತು.
ನಮ್ಮ ತಂಡ
ನಾನು, ನನ್ನ ಪತ್ನಿ ಶ್ರೀಮತಿ ಚಿತ್ರ ನನ್ನ ಪುತ್ರ ಅಮಿತ್ ಭಾರದ್ವಾಜ್
ಶ್ರೀಕಾಂತ್ ಆತನ ಧರ್ಮಪತ್ನಿ ಪದ್ಮಶ್ರೀಕಾಂತ್ ಮಕ್ಕಳಾದ ಸುಷ್ಮಿತ ಮತ್ತು ಸುಪ್ರಿಯ
ನರಸಿಂಹ ಪ್ರಸಾದ್ ಮತ್ತು ಆತನ ಧರ್ಮ ಪತ್ನಿ ಗೀತಾಪ್ರಸಾದ್
೬+೩
ಕಾಡುಹರಟೆ, ತಲೆಕೆಟ್ಟ ತರಲೆ ಮಾತುಗಳು, ಹಾಸ್ಯ, ಕಾಲೆಳೆತ, ಮೌನ, ನಿಟ್ಟುಸಿರು ಎಲ್ಲವುಗಳೊಂದಿಗೆ ನಮ್ಮ ೨ ದಿನದ ಪ್ರಯಾಣ ದೆಹಲಿ ತಲುಪಿಸಿತ್ತು. ಪ್ರಯಾಣದ ಮಧ್ಯೆ ರೈಲಿನಲ್ಲಿ ಅಡುಗೆ ಮನೆಗೆ ಹೋದವನಿಗೆ ಅಲ್ಲಿಯ ಕೊಳಕು ಪ್ರಪಂಚದ ಅರಿವಾಯಿತು. ಹಾಲು ಬಿಸಿಮಾಡಿಸಿಕೊಳ್ಳಲೆಂದು ಹೋದವನಿಗೆ ನಿಂತಲ್ಲೆ ಉಗಿಯುತ್ತ ಅಲ್ಲೆ ತೊಳೆಯುತ್ತ ಉಳಿದಿದ್ದ ನಿನ್ನೆಯ ಅನ್ನವನ್ನು ಎಲ್ಲವನ್ನು ಅಲ್ಲೆ ಬಿಸಾಡುತ್ತಾ ಅದರ ಮೇಲೆಯೆ ನಡೆಯುತ್ತಾ ಇದ್ದ ಆ ಅಡುಗೆಯವನನ್ನು ನೋಡಿ ನಾವು ಇಲ್ಲಿ ಊಟ ಮಾಡದಿದ್ದುದೇ ಒಳ್ಳೆಯದೇನೊ ಅನ್ನಿಸಿದ್ದು ಸುಳ್ಳಲ್ಲ. ಆದರೆ ಎಲ್ಲವೂ ಅಷ್ಟೆ ಅಲ್ಲವೆ ನನಗೆ ಕಾಣಿಸಿದ್ದರಿಂದ ಹೀಗೆ ಅಷ್ಟೆ ಅಲ್ಲವೆ?
ದೆಹಲಿಯ ನಿಲ್ದಾಣದಲ್ಲಿ ಇಳಿದಾಗ ಸಮಯ ೮ ಗಂಟೆಯಿರಬೇಕು. ಆಟೋದವನೊಡನೆ ಚೌಕಾಸಿ ಮಾಡಿ ಅಲ್ಲಿಂದ ಪ್ರಸಾದಿಯ ಸಂಭಂದಿ ಕಾದಿರಿಸಿದ ಸಂಸತ್ತಿನ ಬಳಿಯ ತೀನ್ ಮೂರ್ತಿ ಮಾರ್ಗ್ ರಸ್ತೆಯಲ್ಲಿರುವ ಎಂಪಿ ಮನೆಯೊಂದರಲ್ಲಿ ವಾಸ್ತವ್ಯ ಒದಗಿಸಿಕೊಟ್ಟ ಪ್ರಸಾದಿಯ ಸಂಭಂದಿ ಅಮರನಾಥ ಪ್ರಸಾದ್ ಗೆ ಒಂದು ಧನ್ಯವಾದ. ಬೆಳಗಿನ ಕಾರ್ಯಕ್ರಮ ಮತ್ತು ಸ್ವಲ್ಪ ವಿಶ್ರಾಂತಿ ಬಳಿಕ ಹತ್ತಿರದ ಮೈಸೂರು ಕೆಫೆಯಲ್ಲಿ ಅದರ ಮಾಲೀಕ ಕನ್ನಡಿಗ ದೀಪಕ್ ಜೊತೆ ಹರಟುತ್ತಾ ತಿಂಡಿ ಮುಗಿಸಿ ಮೆಟ್ರೋ ಹತ್ತಿಳಿದು ಕರೋಲ್ ಭಾಗ್ ಗೆ ಬಂದು ಮುಂದಿನ ಪ್ರಯಾಣಕ್ಕೆ ಬೇಕಾದ ಕೆಲವು ಸಾಮಗ್ರಿಗಳನ್ನು ಸುಡು ಬಿಸಿಲಿನಲ್ಲಿ ಖರೀದಿಸಿ ಅಲ್ಲೆ ಇರುವ ಉಡುಪಿ ಭವನದಲ್ಲಿ ಊಟ ಮಾಡಿ ದಾರಿಯುದ್ದಕ್ಕೂ ಸಿಗುತ್ತಿದ್ದ ತಣ್ಣಗಿನ ಪಾನೀಯಗಳನ್ನು ಕುಡಿಯುತ್ತಾ ಖರೀದಿ ಮುಗಿಸಿದೆವು. ದೆಹಲಿಯಲ್ಲಿ ನನಗೆ ತುಂಬಾ ಇಷ್ಟವಾದದ್ದು ಕರೋಲ್ ಭಾಗ್ ಏಕೆಂದರೆ ಅಲ್ಲಿ ನಡೆಸಬಹುದಾದ ಚೌಕಾಸಿ ಮತ್ತು ಅಗ್ಗದ ದರಕ್ಕೆ ಸಿಗುವ ವಸ್ತುಗಳು ಅದರಲ್ಲು ಕಾರುಗಳ ಅಲಂಕಾರಿಕ ವಸ್ತುಗಳಂತೂ ಅರ್ಧ ಬೆಲೆಗೆ ಸಿಗುತ್ತದೆಯೆನ್ನುವ ನನ್ನ ಸ್ನೇಹಿತರ ಮಾತು ಸತ್ಯ. ಸುಮಾರು ೨೦ ವರ್ಷದ ಸರ್ದಾರ್ಜಿಯೊಬ್ಬನ ವ್ಯಾಪಾರವನ್ನು ಗಮನಿಸುತ್ತಾ ನಿಂತೆ. ದಾರಿಯಲ್ಲಿ ನಮ್ಮ ಮೆಜೆಸ್ಟಿಕ್ನಲ್ಲಿ ಬರುವಂತೆ ಬಂದ ಯುವಕನೊಬ್ಬ ಸಾರ್ ನನ್ನ ಹತ್ತಿರ ಕನ್ನಡಕವಿದೆ ಕಳ್ಳತನದಿಂದ ತಂದದ್ದು ಒಳ್ಳೆಯ ಕಂಪೆನಿಯದ್ದು ತುಂಬಾ ಅಗ್ಗದದರಕ್ಕೆ ಕೊಡ್ತಿನಿ ಸಾರ್ ತಮ್ಮನಿಗೆ ಓದಲಿಕ್ಕೆ ಪೀಸ್ ಕೊಡ್ಬೇಕು ಅದಕ್ಕೆ ಹೀಗೆ ಸಾರ್ ಎನ್ನುತ್ತಾನೆ. ಇದು ಬಹುಶಃ ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಅನುಭವಕ್ಕೆ ಬಂದಿರುತ್ತದೆ. ಅದೇ ರೀತಿ ಈ ಸರ್ದಾರ್ಜಿಯ ಮತ್ತವನ ಸ್ನೇಹಿತರ ಜೊತೆ ಆತ ಮಾತಿಗೆ ನಿಂತ ನಾನೂ ಗಮನಿಸುತ್ತಾ ನಿಂತೆ. ೯೫೦ ಬೆಲೆ ಹೇಳಿದ ಆ ಕನ್ನಡಕವನ್ನು ಆತ ೭೫೦ ರೂಗೆ ಖರೀದಿಸಿದ. ಸರಿ ನನಗೂ ಆ ಕನ್ನಡಕ ಹಿಡಿಸಿತು. ಸ್ವಲ್ಪ ಮುಂದೆ ಹೋದೆ ಅಲ್ಲಿ ಪಾದಚಾರಿ ರಸ್ತೆಯಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದವನ ಬಳಿ ಇನೊಬ್ಬ ಅದೆ ತೆರನಾದ ಕನ್ನಡಕ ವ್ಯಾಪಾರ ಮಾಡುತ್ತಿದ್ದ. ನಾನು ಅಲ್ಲಿಗೆ ಸಮೀಪಿಸುವಷ್ಟರಲ್ಲಿ ಆಗಲೆ ಚೌಕಾಸಿ ಪ್ರಾರಂಭವಾಗಿತ್ತು. ಆ ಗಿರಾಕಿ ಅದನ್ನು ೯೦ ರೂಗೆ ಕೇಳಿದ ಅವನು ಕೊಡುವುದಿಲ್ಲವೆಂದು ಕಳಿಸಿಬಿಟ್ಟ. ಆ ವ್ಯಕ್ತಿ ಸ್ವಲ್ಪ ಮುಂದೆ ಚಲಿಸಿದ ತಕ್ಷಣ ನಾನು ಅವನನ್ನು ಮಾತನಾಡಿಸಿದೆ ಅಷ್ಟು ಕಡಿಮೆಗೆ ಸಿಗುತ್ತದೆಯೆ ಎಂದು, ಅಶ್ಟೆ ಅದರ ಬೆಲೆಯೆಂದು ತಿಳಿಸಿ ಆ ಆಸಾಮಿ ಹೋಗಿಬಿಟ್ಟ. ೨ ರಸ್ತೆ ದಾಟುವಷ್ಟರಲ್ಲಿ ಆ ತೆರನಾದ ಯುವಕ ನನ್ನ ಬಳಿ ಬಂದ ಮತ್ತದೆ ರಾಗ. ನನ್ನ ದರ ತಿಳಿಸುತ್ತೇನೆಂದೆ ಸರಿ ಎಂದ ೫೦ ರೂ ಎಂದೆ ಆಶ್ಚರ್ಯ ವ್ಯಕ್ತ ಪಡಿಸುತಾ ನನ್ನ ಕಡೆ ನೋಡಿದವನು ಸ್ವಲ್ಪ ದೂರ ಹೊರಟು ಹೋದ ಮತ್ತೆ ಹಿಂತಿರುಗಿ ಬಂದು ನನ್ನನ್ನು ಬಯ್ದ. ಸರಿ ಬಿಡಪ್ಪ ಎಂದವನಿಗೆ ಕನ್ನಡಕಕೊಟ್ಟು ೫೦ ರೂ ತೆಗೆದು ಕೊಂಡು ಹೋದ. ಫೋಟೋಗಾಗಿಯಷ್ಟೆ ಈ ಕನ್ನಡಕಗಳು . ಈ ಮಧ್ಯೆ ಜಮ್ಮುವಿನಿಂದ ದಿಲೀಪ್ ೨ ಬಾರಿ ದೂರವಾಣಿ ಕರೆ ಮಾಡಿ ನಮ್ಮ ಕಾರ್ಯಕ್ರಮ ಮತ್ತು ನಾವು ತಲುಪುವ ಸಮಯ ಮತ್ತೆ ನಮ್ಮ ರೈಲಿನ ಬಗ್ಗೆ ವಿಚಾರಿಸಿದರು. ಅವರ ಈ ಸಹಾಯ ಮನೋಭಾವ ನನ್ನನ್ನು ತುಂಬಾ ಕಾಡಿತು. ನಾವ್ಯಾರೊ? ಅವರ್ಯಾರೊ? ಆದರೂ ಈ ಮಟ್ಟಿನ ಸಹಾಯ!!! ಮತ್ತೆ ಕೋಣೆಗೆ ಹಿಂತಿರುಗಿ ಅಲ್ಲಿಂದ ಆಟೋವೊಂದನ್ನು ಹಿಡಿದು ರೈಲು ನಿಲ್ದಾಣ ತಲುಪಿ ತುಂಬಿ ತುಳುಕುತ್ತಿದ್ದ ಜಮ್ಮು ರೈಲಿನಲ್ಲಿ ನಮ್ಮ ನಮ್ಮ ಆಸನಗಳನ್ನು ಹುಡುಕಿ ಮಲಗಿದೆವು. ಬೆಳಗಿನ ಸಮಯ ೫.೩೦ಕ್ಕೆ ದೂರವಾಣಿ ರಿಂಗಣಿಸತೊಡಗಿತು. ಆ ಕಡೆಯಿಂದ ದಿಲೀಪ್ ಕರೆ ಮಾಡುತ್ತಿದ್ದರು. ಈಗಾಗಲೆ ಜಮ್ಮು ರೈಲ್ವೆ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿರುವುದಾಗಿ ತಿಳಿಸಿದ ದಿಲೀಪ್ ತಾನು ತೊಟ್ಟಿರುವ ಬಟ್ಟೆಯ ಬಗ್ಗೆ ಮತ್ತು ನಾವು ಅವರನ್ನು ಗುರುತಿಸುವ ಬಗ್ಗೆ ತಿಳಿಸಿದರು. ಜಮ್ಮುಕಾಶ್ಮೀರ ರಾಜ್ಯದ ವ್ಯಾಪ್ತಿಯಲ್ಲಿ ಯಾವುದೇ ಪ್ರೀಪೇಡ್ ದೂರವಾಣಿಗಳು ಕೆಲಸ ಮಾಡುವುದಿಲ್ಲ.
ನಿಗದಿತ ಸಮಯಕ್ಕಿಂತ ೧ ಗಂಟೆ ತದವಾಗಿ ರೈಲು ಜಮ್ಮು ತಲುಪಿತು. ಕುಲ್ದೀಪ್ ಪಡಿಯಚ್ಚಿನಂತಿದ್ದ ದಿಲೀಪ್ ಗುರುತಿಸಲು ಹೆಚ್ಚು ಕಷ್ಟವಾಗಲಿಲ್ಲ. ಪರಿಚಯದ ನಂತರ ನಮ್ಮ ಕಾರ್ಯಕ್ರಮ ಮತ್ತು ನಾವು ಅಗತ್ಯವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿ ನಾವು ತೆಗೆದುಕೊಳ್ಳಬಹುದಾದ ಎಚ್ಚರದ ಬಗ್ಗೆ ನಮಗೆ ಮಾಹಿತಿಯಿತ್ತರು. ಅದರಂತೆ ಇಂದು ನಾವು ನಮ್ಮ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ವೈಷ್ಣೋದೇವಿಗೆ ಹೋಗುವ ಬದಲು ನೇರವಾಗಿ ಕಾಶ್ಮೀರಕ್ಕೆ ಹೋಗಬೇಕಾಗಿ ಬಂತು ಕಾರಣ ವೈಷ್ಣೋದೇವಿಯಲ್ಲಿದ್ದ ಜನಜಂಗುಳಿ. ರಲ್ವೇ ನಿಲ್ದಾಣದ ಸಮೀಪಕ್ಕೆ ಹೊರಗಿನ ವಾಹನಗಳನ್ನು ಬಿಡುವುದಿಲ್ಲವಾದ್ದರಿಂದ ಸ್ವಲ್ಪದೂರದಲ್ಲಿ ನಮಗಾಗಿ ಕಾದಿರಿಸಿದ್ದ ವಾಹನವೇರಲು ದಿಲೀಪ್ ಅವರ ಮಾರುತಿ ಓಮ್ನಿಯಲ್ಲಿ ನಮ್ಮ ೧೩ ದೊಡ್ಡ ದೊಡ್ಡ ಬ್ಯಾಗ್ ಗಳನ್ನು ತುಂಬಿಕೊಂಡು ನಾವು ೯ ಮತ್ತು ದಿಲೀಪ್ ನಮ್ಮ ವಾಹನದ ಬಳಿ ಬಂದೆವು. ನಮ್ಮ ವಾಹನಕ್ಕೆ ಇನ್ನೇನು ನಮ್ಮ ಹೊರೆಗಳನ್ನು ತುಂಬಬೇಕೆನ್ನುವಷ್ಟರಲ್ಲಿ ಪ್ರತ್ಯಕ್ಷನಾದ ಅನಾಮಿಕನೊಬ್ಬ ನಮ್ಮ ಚಾಲಕ ಮತ್ತು ದಿಲೀಪ್ ಜೊತೆ ಮಾತುಕತೆಯಾಡಲು ಪ್ರಾರಂಭಿಸಿ ಜಗಳವಾಡಲು ಶುರುವಿಟ್ಟುಕೊಂಡ. ನಮಗೆ ಏನೆಂದು ಅರ್ಥವಾಗಲಿಲ್ಲ. ಸ್ಥಳೀಯ ವಾಹನಗಳನ್ನು ಬಿಟ್ಟು ಬೇರೆ ವಾಹನಗಳನ್ನು ನಾವು ತೆಗೆದುಕೊಳ್ಳುವಂತಿಲ್ಲ ಅದು ಅಲ್ಲಿನ ಅಲಿಖಿತ ನಿಯಮ. ದಿಲೀಪ್ ಆ ವ್ಯಕ್ತಿಗೆ ಹೇಳಿ ಇಂದು ಇವರು ಪಯಣಿಸುವುದಿಲ್ಲವೆಂದೂ ನಾಳೆ ಕಳುಹಿಸುತ್ತೇನೆಂದು ತಿಳಿಸಿ ಮತ್ತೊಮ್ಮೆ ನಮ್ಮೆಲ್ಲರನ್ನೂ ನಮ್ಮ ಹೊರೆಗಳನ್ನೂ ಅವರ ಓಮ್ನಿಗೆ ತುಂಬಿ ಗಾಡಿ ಓಡಿಸಿದರು. ಮುಂದಿನ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಕಾಯುತ್ತಿರುವಂತೆ ನಮ್ಮ ವಾಹನದ ಚಾಲಕನಿಗೆ ತಿಳಿಸಿದರು ಇನ್ನೇನು ಆ ಸ್ಥಳ ಬರುವಷ್ಟರಲ್ಲಿ ನಾವಿದ್ದ ದಿಲೀಪ್ ವಾಹನ ಬಹುಶಃ ನಮ್ಮಲ್ಲೆರ ಭಾರ ಹೊರಲಾರದೆ ಮುಂದಿನ ಎಡಚಕ್ರ ಠುಸ್ಸೆಂದು ಶಬ್ದ ಮಾಡುತ್ತ ಅಲುಗಾಡುತ್ತ ನಿಂತು ಹೋಯಿತು. ಇಳಿದು ಚಕ್ರ ಬದಲಾಯಿಸಿದೆವು. ಅಲ್ಲೆ ಇದ್ದ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ನಮ್ಮ ವಾಹನವನ್ನೇರಿ ದಿಲೀಪ್ಗೊಂದು ಧನ್ಯವಾದ ತಿಳಿಸಿ ಅಲ್ಲಿಂದ ಹೊರಟೆವು.
ನಮ್ಮ ಚಾಲಕ ಕೆಂಪು ಮಿಶ್ರಿತ ಬಿಳಿ ಬಣ್ಣದ, ನಗುಮೊಗದ ರಾಕೇಶ್ ಮಿತಭಾಷಿ. ಎಚ್ಚರಿಕೆಯಿಂದ ಕಣಿವೆರಸ್ತೆಯಲ್ಲಿ ಅಗತ್ಯವಿದ್ದಷ್ಟೆ ಮಾತನಾಡುತ್ತ ನಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಾಹನ ಚಲಾಯಿಸುತ್ತಿದ್ದ ರಾಕೇಶ್ ಸಧ್ಯಕ್ಕೆ ನಮ್ಮ ಆಧಾರ. ಆತನ ಹಿಂದಿ ನಮಗೆ ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತು. ೧೦.೩೦ ಕ್ಕೆ ಹಸಿವಿನಿಂದ ಬಳಲಿ ಹೋದಮೇಲೆ ತಿಂಡಿಗೆ ನಿಲ್ಲಿಸಿದ ಅವನ ಮೇಲೆ ನನಗಂತೂ ಕೋಪ ತಡೆಯಲಾರದಷ್ಟು ಬರುತ್ತಿತ್ತು. ಕೊನೆಗೊಮ್ಮೆ ಹಿಂದೂ ವೈಷ್ಣೋ ಪಂಜಾಬಿ ಡಾಭಾವೊಂದರಲ್ಲಿ ವಾಹನ ನಿಲ್ಲಿಸಿದ ರಾಕೇಶ್. ಆ ಡಾಭಾ ಮಾಲೀಕ ತಿಂಡಿ ಕೊಡಲು ಮತ್ತೊಂದು ಗಂಟೆ ತೆಗೆದುಕೊಂಡ. ಇಶ್ಟರಲ್ಲಾಗಲೆ ಒಂದು ಸುತ್ತು ಮಳೆ ಬಂದು ನಿಂತಿತು. ಇಲ್ಲಿಂದ ನಮ್ಮ ಆಹಾರದ ಬವಣೆ ಪ್ರಾರಂಭವಾಯಿತು ಉಪ್ಪಿಲ್ಲದೆ ಮಾಡಿದ ರೋಟಿ, ಪಲ್ಯವೆಂದು ಕೊಡುವ ಆಲೂ ನಮ್ಮ ನಿತ್ಯ ಆಹಾರವಾಗಿ ಒಗ್ಗಿಸಿ ಕೊಳ್ಳಬೇಕಿತ್ತು. ಜಮ್ಮುಕಾಶ್ಮೀರದಲ್ಲಿ ಅನ್ನ ಸಿಗುತ್ತದೆ ಆದರೆ ಅದರ ಜೊತೆಗೆ ಬರೀ ಸಾಸಿವೆ ಎಣ್ಣೆಯಲ್ಲಿ ಮಾಡಿದ ಆಲೂಗಡ್ಡೆ ಪಲ್ಯಗಳೆ ನಮಗೆ ಗತಿ.
ಬೇಸಿಗೆಯಾದ್ದರಿಂದ ಕಣಿವೆಯಲ್ಲಿನ ಹಸಿರು ಮಾಯವಾಗಿತ್ತು ಎಲ್ಲಿಯೂ ದಟ್ಟಕಾಡು ಕಂಡು ಬರಲೇ ಇಲ್ಲ. ತಾವಿ ನದಿ ನಮ್ಮ ದಾರಿಯುದ್ದಕ್ಕೂ ನಾವು ಹೋಗುತ್ತಿರುವ ವಿರುದ್ದ ದಿಕ್ಕಿನಲ್ಲಿ ರಭಸವಾಗಿ ಹರಿದು ಬರುತ್ತ ಮೋಹಕವಾಗಿ ಕಾಣಿಸುತ್ತಿತ್ತು. ಅಲ್ಲಲ್ಲಿ ಕಣಿವೆಯ ರಾಷ್ಟ್ರೀಯ ಹೆದ್ದಾರಿ ಭೂಕುಸಿತವಾಗಿದ್ದ ಕುರುಹುಗಳು ಭಯ ಹುಟ್ಟಿಸುತ್ತಿತ್ತು. ದಾರಿಯುದ್ದಕ್ಕೂ ೫-೧೦ ಕಿ.ಮೀ ಗಳಿಗೊಮ್ಮೆ ಭಾರತೀಯ ಅರೆಮಿಲಿಟರಿ ಪಡೆಯ ಯೋಧರು ಪಹರೆ ಕಾಯುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ೨ ಗಂಟೆ ಸುಮಾರಿಗೆ ಮತ್ತೊಂದು ವೈಷ್ಣೋ ಪಂಜಾಬಿ ಡಾಭಾದಲ್ಲಿ ಊಟಕ್ಕೆ ನಿಂತಾಗ ಮತ್ತದೆ ಬೇಸರ. ೪ ಗಂಟೆಯ ಸುಮಾರಿಗೆ ಕಣಿವೆಗಳು ಮರೆಯಾಗಿ ಬಯಲು ಪ್ರದೇಶ ತೆರೆದುಕೊಳ್ಳುವ ಜಾಗದಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ೨೭೦೦ ಮೀಟರ್ ಉದ್ದವಿರುವ ಸುರಂಗದ ಮುಖಾಂತರ ಹಾದು ಅಲ್ಲಲ್ಲಿ ಕಾಶ್ಮೀರ ಫೋಲೀಸರಿಗೆ ಲಂಚ ತಿನ್ನಿಸುತ್ತಾ ಶ್ರೀನಗರ ಸಮೀಪಿಸಿದವರಿಗೆ ನಿಜಕ್ಕೂ ಅಲ್ಲಿನ ಸೌಂದರ್ಯ ಅಚ್ಚರಿ ತಂದಿತು. ರಸ್ತೆಯುದ್ದಕ್ಕೂ ಚಿಗುರೆಲೆಗಳಿಂದ ಕೂಡಿದ ಸಾಲಾಗಿ ನಿಂತ ಹಸಿರು ಮರಗಳು ಹಿಂಭಾಗದಲ್ಲಿ ಸೂರ್ಯ ಮರೆಯಾಗುತ್ತಿರುವ ಕೇಸರಿ ಬಣ್ಣ ಇಡೀ ವಾತಾವರಣಕ್ಕೆ ಮೆರಗು ತಂದು ನಾವು ಆನಂದಿಸುತ್ತಿದ್ದರೆ ನಮ್ಮ ಚಾಲಕನಿಗೆ ಕತ್ತಲಾಗುವುದರೊಳಗೆ ಶ್ರೀನಗರದ ಗೂಡು ಸೇರಿಕೊಳ್ಳುವ ತವಕ. ಏಕೆಂದರೆ ಉಗ್ರಗಾಮಿಗಳ ಹಾವಳಿಯ ಭಯ. ಕೊನೆಗೊಮ್ಮೆ ಶ್ರೀನಗರ ಸಿಕ್ಕಾಗ ನಮ್ಮೆಲ್ಲರಲ್ಲೂ ನಿಟ್ಟುಸಿರು. ಇಲ್ಲಂತೂ ಅರ್ಧ ಮೈಲಿ ದೂರಕ್ಕಿಬ್ಬರು ಯೋಧರು ಪಹರೆ ಕಾಯುತ್ತಿರುವುದು ಅಲ್ಲಿನ ಪರಿಸ್ಥಿತಿಯ ಅರಿವು ನಮ್ಮಲ್ಲಿ ಮೂಡಿಸಿತು. ಬಂದು ತಪ್ಪು ಮಾಡಿದೇವೆನೋ ಎಂಬ ಭಾವನೆ ನನ್ನ ಮನದಲ್ಲೂ ಸುಳಿದದ್ದಿದೆ. ದಾರಿಯಲ್ಲಿ ಜೇಷ್ಠಾದೇವಿ ಮಂದಿರದ ದಾರಿ ವಿಚಾರಿಸಲು ರಾಕೇಶ್ ಅತ್ಯಂತ ಹೆಚ್ಚು ಕಾಳಜಿಯಿಂದ ಅತ್ಯಂತ ಸುರಕ್ಷಿತ ಜಾಗಗಳಲ್ಲೆ ತನ್ನ ವಾಹನ ನಿಲ್ಲಿಸುತ್ತಿದ್ದದ್ದು ನನ್ನ ಗಮನಕ್ಕೆ ಬಾರದೇ ಹೋಗಲಿಲ್ಲ. ಅರ್ಧ ಗಂಟೆಯ ಹುಡುಕಾಟದ ನಂತರ ದಾಲ್ ಸರೋವರವನ್ನು ಬಳಸಿ ನಿಷಾದ್ ಉದ್ಯಾವನದ ದಾರಿಯಲ್ಲಿ ಸಾಗಿ ರಾಜಭವನದ ಸಮೀಪ ಬಲ ತಿರುವು ತೆಗೆದುಕೊಳ್ಳುವಂತೆ ಯೋಧನೊಬ್ಬ ತಿಳಿಸಿದ್ದು ಸರಿಯಿತ್ತು. ಜೇಷ್ಠಾದೇವಿ ಮಂದಿರಕ್ಕೆ ಬಂದಿಳಿದಾಗ ಸೂರ್ಯ ತನ್ನ ಕೆಲಸ ಮುಗಿಸಿ ಮರೆಯಾಗುತ್ತಿದ್ದ.
ವಾವ್!! ಅದೆಷ್ಟು ಪ್ರಶಾಂತ ಮತ್ತು ಸುಂದರ ಸ್ಥಳವೆಂದರೆ ಪದಗಳಿಗೆ ನಿಲುಕದ್ದು. ಬರೀ ಹಸಿರು ಗಿಡಮರಗಳಿಂದ ಆವೃತವಾಗಿದ್ದ ಬೆಟ್ಟದ ಹಿನ್ನೆಲೆಯಲ್ಲಿರುವ ಪ್ರದೇಶ. ಎದುರಿಗೆ ಕಾಣುವ ದಾಲ್ ಸರೋವರ. ಜೇಷ್ಠಾದೇವಿ ಮಂದಿರದಲ್ಲೆ ನೀವು ೧ ದಿನ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಕಳೆಯಬಹುದೆಂದು ಕುಲ್ದೀಪ್ ಹೇಳಿದ್ದು ಸುಳ್ಳಲ್ಲ. ಸುತ್ತಲೂ ಬೆಟ್ಟಗುಡ್ಡ ಎದುರಿಗೆ ಮಾತ್ರ ದಾಲ್ ಸರೋವರ, ಎಲ್ಲೋ ಕಾಡಿನೊಳಗೆ ಇದ್ದ ಅನುಭವ. ಬರೀ ಹಕ್ಕಿ ಪಕ್ಷಿಗಳ ಕಲರವ ಬಿಟ್ಟರೆ ಬೇರೇನೂ ಕೇಳಿಸದ ಆದರೆ ಅಷ್ಟೆ ಸುರಕ್ಷಿತವಾದ ಜಾಗದಲ್ಲಿದ್ದದ್ದು ಊಹ್! ನೆಮ್ಮದಿಯ ನಿಟ್ಟುಸಿರು ಬಿಡುವಷ್ಟು ನಿರಾಳತೆ ತಂದಿದ್ದು ಸುಳ್ಳಲ್ಲ. ೩ ಕೊಠಡಿಗಳನ್ನು ನಮಗೆ ಕೊಟ್ಟು ಜೇಷ್ಠಾದೇವಿ ಧರ್ಮಸ್ಥ ಮಂಡಳಿಯ ಮೇಲ್ವಿಚಾರಕರೂ, ವ್ಯವಸ್ಥಾಪಕರೂ ಚೌಧರಿಯವರು ಅಡುಗೆಗೆ ಬೇಕಾಗುವ ಎಲ್ಲ ಪದಾರ್ಥಗಳು ಲಭ್ಯವಿದೆ ಎಂದು ತಿಳಿಸಿದರು. ಅನ್ನ ಮತ್ತು ತಿಳಿಸಾರು ಮಾಡಿ ಊಟಮಾಡಿ ಮಲಗಿದೆವು.
ಬೆಳಿಗ್ಗೆ ಕೃಷ್ಣ ವೈಷ್ಣೋ ಪಂಜಾಬಿ ಡಾಬಾದಲ್ಲಿ ತಿಂಡಿ ಮುಗಿಸಿ ನಮ್ಮ ಪ್ರಯಾಣ ಗುಲ್ಮಾರ್ಗ್ ಕಡೆ. ದಾರಿಯುದ್ದಕ್ಕೂ ಹೂಬಿಟ್ಟಿರುವ ಸೇಬಿನ ಮರಗಳು, ಬಂದೂಕು ಹಿಡಿದಿರುವ ಭಾರತೀಯ ಯೋಧರು ಮತ್ತ್ತು ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಗುಂಪುಗುಂಪಾಗಿ ಮಾತನಾಡುತ್ತಾ ನಿಂತಿರುವ ಜನಗಳು ನನಗಂತೂ ಇಲ್ಲಿನ ಜನರು ಅತ್ಯಂತ ಸೋಮಾರಿಗಳಿರಬಹುದೆಂದು ಅನಿಸಿತು. ೮೫ ಕಿ.ಮೀ ದೂರದ ಗುಲ್ಮಾರ್ಗ್ ತಲುಪಲು ನಮ್ಮ ಚಾಲಕ ತೆಗೆದುಕೊಂಡ ಸಮಯ ಬರೊಬ್ಬರಿ ೩ ಗಂಟೆಗಳು. ದೂರದಿಂದಲೆ ಮಂಜು ಆವರಿಸಿರುವ ಬೆಟ್ಟಗಳ ದೃಶ್ಯ ಮನಸೆಳೆಯುತ್ತದೆ. ಪ್ರಾರಂಭದಲ್ಲಿ ಅಲ್ಲಲ್ಲಿ ಬೆಳ್ಳಗಿನ ಹತ್ತಿ ಬಿದ್ದಂತೆ ಗೋಚರಿಸುವ ಬೆಟ್ಟಗಳು ಮುಂದೆ ಬಂದಂತೆ ಇಡೀ ಪರ್ವತಗಳೆ ಮಂಜಿನ ಆವೃತವಾಗಿರುವುದು ಗಮನಕ್ಕೆ ಬರುತ್ತದೆ. ದಾರಿಯುದ್ದಕ್ಕೂ ಇದ್ದ ಯೋಧರೊಡನೆ ಫೋಟೊ ತೆಗೆಸಿಕೊಳ್ಳಬೇಕೆಂಬ ಹಂಬಲದೊಡನೆ ಕಣಿವೆಯ ಒಂದು ಕಡೆ ನಮ್ಮ ವಾಹನ ನಿಂತ ಕ್ಷಣಾರ್ಧದಲ್ಲಿ ಅಲ್ಲಿದ್ದ ಸೈನಿಕರ ಗುಂಪು ತಮ್ಮ ಕೈಲಿದ್ದ ಅತ್ಯಾಧುನಿಕ ಬಂದೂಕಗಳನ್ನು ತೆಗೆದು ಸಜ್ಜಾಗಿದ್ದು ನಮ್ಮೆಲ್ಲರನ್ನು ದಿಗ್ಮೂಡರನ್ನಾಗಿಸಿತು. ಅವರೊಡನೆ ಮಾತನಾಡಿ ಅವರ ಅನುಮತಿಯನ್ನು ಕೋರಿ ಅವರನ್ನು ಒಪ್ಪಿಸಿ ಒಂದೆರಡು ಫೋಟೋ ಕ್ಲಿಕಿಸಿದೆವು. ದಾರಿಯುದ್ದಕ್ಕೂ ಇಂತಹ ಚಿತ್ರಗಳನ್ನು ತೆಗೆಯಲೆಂದೆ ನಿರ್ಮಿಸದ ಸ್ಥಳಗಳಲ್ಲಿ ನಿಂತು ಚಿತ್ರ ತೆಗೆಯುತ್ತಾ ಶ್ರೀಮತಿ ಗೀತಾ ಅವರಂತೂ ಶೀನಗರಕ್ಕೆ ಬರುವ ದಾರಿಯಲ್ಲಿ ಕಾಣ ಸಿಗುವ ಮಂಜಿನ ಬೆಟ್ಟಕ್ಕೆ ಹೋಗಲು ತಯಾರಿದ್ದರೂ ಅನಿವಾರ್ಯವಾಗಿ ಇಲ್ಲಿಯವರೆಗೆ ಕಾಯಬೇಕಾಗಿ ಬಂತು. ಗುಲ್ಮಾರ್ಗ್ ಬಂದಿಳಿದ ತಕ್ಷಣವೆ ಅಲ್ಲಿನ ಕುದುರೆ ಮಾಲೀಕರಿಂದ ಕಿರಿಕಿರಿ ಪ್ರಾರಂಭವಾಗುತ್ತದೆ. ನಮ್ಮನ್ನು ವಾಹನದಿಂದ ಇಳಿಯಲು ಬಿಡುವುದೇ ಇಲ್ಲ. ಬೆಟ್ಟದ ದಾರಿಯಲ್ಲಿ ನನಗೆ ತಲೆತಿರುಗುವಿಕೆ ಬಂದು ವಾಂತಿಯ ಅನುಭವವಾಗುವುದರಿಂದ ಅವೋಮಿನ್ ಮಾತ್ರೆ ತಿಂದು ತೂಕಡಿಸುತ್ತಾ ಅಲ್ಲಲ್ಲಿ ಏಳುತ್ತಾ ಇದ್ದವನನ್ನು ೧ ಬಾಡಿಗೆ ಕುದುರೆ ೮೦೦ ಹೇಳ್ತಾ ಇದನೆ ಏನ್ಮಾಡೋಣ ಎಂದು ಕರೆದ ಶ್ರೀಕಾಂತನ ಧ್ವನಿ ಎಚ್ಚರಿಸಿರಬೇಕು. ನಡೆದು ಹೋಗೋಣ ಎಂದವನಿಗೆ ಶ್ರೀಕಾಂತ ಸಾಧ್ಯವಿಲ್ಲ ನನ್ನ ಮಕ್ಕಳು ನಡೆಯುವುದಿಲ್ಲ ಎಂದು ಘೋಷಿಸಿಬಿಟ್ಟ. ಅನಿವಾರ್ಯವಾಗಿ ಒಂದು ಕುದುರೆಗೆ ೭೦೦ ರೂಗಳಂತೆ( ಸರಿಯಾಗಿ ಮೋಸ ಹೋಗಿದ್ದು ನಂತರ ಅರಿವಿಗೆ ಬಂತು) ಮಾತನಾಡಿದೆವು. ಅದೂ ಅವರು ಹೇಳುವ ೭ ಕಿ.ಮೀಗಳೆಂದು ತಿಳಿದು.( ಆದರೆ ಅದು ಕೇವಲ ೨ ಕಿ.ಮೀ ಗಳಿಗಿಂತಲೂ ಕಡಿಮೆ ದೂರಕ್ಕೆ) ೭ ಸ್ಥಳಗಳನ್ನು ವೀಕ್ಷಿಸಬಹುದು ಎನ್ನುವ ಅವರ ಮಾತು ಹಸೀ ಸುಳ್ಳು. ಸುತ್ತಿ ಬಳಸಿ ೧.೫ ಕಿ.ಮೀ ದೂರದಲ್ಲಿರುವ ನೇರವಾಗಿ ನಡೆದು ಬಂದರೆ ಕೇವಲ ೧.ಕೀಮೀ ಇರುವ ಖಿಲಾನ್ ಮಾರ್ಗ್ ಗೆ ಬಂದೆವು. ಇದೊಂದೆ ಗುಲ್ಮಾರ್ಗದಲ್ಲಿರುವ ಸುಂದರ ಸ್ಥಳ. ಮತ್ತು ಇದರ ಜೊತೆಗೆ ರೋಪ್ ವೇ ಮಾತ್ರ. ಕುದುರೆಗಳ ಹೆಜ್ಜೆಯಿಂದಾದ ಕೊಚ್ಚೆಯ ಮೇಲಿಳಿದು ಮಂಜಿನ ಬೆಟ್ಟವೇರಲು ಪ್ರಾರಂಭಿಸಿದೆವು. ಒಂದು ಜರ್ಕಿನ್ ಮತ್ತು ಒಂದು ಜೊತೆ ರಬ್ಬರ್ ಬೂಟಿಗೆ (ಛಳಿ ತಡೆಯಲು) ೧೫೦ ರೂಗಳನ್ನು ತೆತ್ತಿದ್ದೆವು.
ಸುಮಾರು ಒಂದೂವರೆ ಗಂಟೆಗಳ ಕಾಲ ಮಂಜಿನ ಆಟವಾಡಿದೆವು ಸುಮಾರು ೧ ಕಿ.ಮೀ ದೂರ ದೇವದಾರು ವೃಕ್ಷಗಳಿಂದಾವೃತವಾಗಿರುವ ಬೆಟ್ಟ ಹತ್ತಿ ಮೇಲೆ ಸಿಕ್ಕ ಮನೆಯಂತಹ ಜಾಗದಲ್ಲಿ ಮಂಜಿನಲ್ಲಿ ಜಾರುತ್ತಾ ಬೀಳುತ್ತಾ ಅಲ್ಲಲ್ಲಿ ಫೋಟೋಗಳನ್ನು ತೆಗೆಯುತ್ತಾ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಇಳಿದು ಕುದುರೆ ಹತ್ತಿ ದಾರಿಯಲ್ಲಿ ಸಿಗುವ ಕೆಲವು ಸ್ಥಳಗಳನ್ನು ದೂರದಿಂದಲೆ ತೋರಿಸುತ್ತಾ ಎ ಏಕ್ ಪಾಯಿಂಟ್ ಹೈ ಸಾಬ್ ಎನ್ನುತ್ತಾ ನಮಗೆ ಹೊಟ್ಟೆ ಉರಿಸುತ್ತಾ ಇದ್ದ ಕುದುರೆಯ ಮಾಲೀಕನನ್ನು ಒದ್ದು ಬಿಡಬೇಕೆನ್ನುವಷ್ಟು ಕೋಪ ಉಕ್ಕಿಬರುತ್ತಿತ್ತು. ಅವರು ಪ್ರವಾಸಿಗರಿಗೆ ಮಾಡುವ ಮೋಸಕ್ಕೆ. ಹಿಂತಿರುಗಿ ನಮ್ಮ ವಾಹನವಿರುವ ಸ್ಥಳಕ್ಕೆ ಬಂದಾಗ ೨ ಗಂಟೆಯಿರಬೇಕು. ತೊಟ್ಟಿದ್ದ ಬಾಡಿಗೆ ಬಟ್ಟೆಗಳನ್ನು ಹಿಂತಿರುಗಿಸಿ ಟೀ ಕುಡಿಯುವಷ್ಟರಲ್ಲಿ ಅಲ್ಲಿನ ವ್ಯಾಪಾರಿಗಳು ಇಲ್ಲಿಂದ ಓಡಿ ಹೋಗಬೇಕೆನಿವಷ್ಟು ಬೇಸರ ತರಿಸುತ್ತಾರೆ. ತಕ್ಷಣವೆ ಮಳೆ ಸುರಿಯಲು ಪ್ರಾರಂಭಿಸಿತು ೫ ನಿಮಿಶ ಸುರಿದ ನಂತರ ಮಳೆ ನಿಂತಿತು ನಂತರ ೫ ನಿಮಿಶದಲ್ಲಿ ಮಂಜು ಬೀಳಲಾರಂಬಿಸಿತು. ಕಡಲೆಕಾಳು ಗಾತ್ರದ ಹತ್ತಿ ಬೀಳುತ್ತಿದೆಯೇನೋ ಎಂಬಂತೆ ಸಣ್ಣಗೆ ಪ್ರಾರಂಭವಾದ ಇದು ನಮಗಂತೂ ಪ್ರಥಮ ಅನುಭವ. ಕೈಲಿ ಹಿಡಿದರೆ ಹತ್ತಿ ಮುಟ್ಟಿದಷ್ಟೆ ಮೃದು. ಮಂಜಿನ ಮಳೆ ೨-೩ ನಿಮಿಷಗಳ ನಂತರ ನಿಂತು ಹೋಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಸಿಕ್ಕ ಡಾಬಾವೊಂದರಲ್ಲಿ ರುಚಿಯಾದ ಫ್ರೈಡ್ ರೈಸ್ ಮತ್ತು ಪಲಾವ್ ಊಟಮಾಡಿ ಶ್ರೀನಗರ ತಲುಪಿದೆವು. ದಾರಿಯಲ್ಲಿ ಸಂತೆ ನಡೆಯುತ್ತಿದ್ದ ಪ್ರದೇಶವೊಂದರಲ್ಲಿ ಕಲ್ಲಂಗಡಿ ಹಣ್ಣು ತೆಗೆದುಕೊಳ್ಳಬೇಕೆಂಬ ನನ್ನ ಮಾತಿಗೆ ರಾಕೇಶ್ ಬೆಲೆ ಕೊಡದೆ ವಾಹನ ನಿಲ್ಲಿಸು ಎಂದು ಕೇಳಿದರೂ ಏನೂ ಮಾತನಾಡದೆ ಬಂದು ಸ್ವಲ್ಪ ದೂರ ಬಂದ ನಂತರ ಆತ ಹೇಳಿದ ಮಾತು ನಮ್ಮೆಲ್ಲರನ್ನೂ ಅಧೀರರನ್ನಾಗಿಸಿತು. ಅದು ಶ್ರೀನಗರದ ಲಾಲ್ ಚೌಕ್ ಭಯೋತ್ಪಾದಕ ಚಟುವಟಿಕೆಗಳಿಗೆ ಅತ್ಯಂತ ಕುಖ್ಯಾತಿ ಪಡೆದ ಪ್ರದೇಶ ಅಲ್ಲಿ ಯಾವ ಪ್ರಾವಾಸಿಗಳು ನಿಲ್ಲುವುದಿಲ್ಲ ನಿಂತರೆ ಅದೂ ಜಮ್ಮುವಿನ ವಾಹನವೆಂದು ತಿಳಿದ ಮರುಕ್ಷಣವೇ ಗ್ರೆನೇಡ್ ಬಂದು ಬೀಳುವುದರಲ್ಲಿ ಸಂಶವೇ ಇಲ್ಲವೆಂದು ಆತ ತಿಳಿಸಿದಾಗ ನಾವೆಲ್ಲಾ ಸಣ್ಣಗೆ ಆ ಛಳಿಯಲ್ಲೂ ಬೆವರಿದ್ದೆವೆ??
ಇಡೀ ಶ್ರೀನಗರ ಭಾರತೀಯ ಯೋಧರಿಂದ ತುಂಬಿ ಹೋಗಿದೆಯೆಂದೆ ಹೇಳಬೇಕು ಇಲ್ಲದಿದ್ದರೆ ಅಲ್ಲಿ ದಿನಕ್ಕೊಂದು ರಕ್ತಪಾತ ಕಟ್ಟಿಟ್ಟ ಬುತ್ತಿ. ಕಾಶ್ಮೀರದ ಬಗ್ಗೆ ಕೇಳಿದ್ದೆವು ಆದರೆ ಹತ್ತಿರದಿಂದ ನೋಡಿ ನಿಜಕ್ಕೂ ಭಯ ನನ್ನನ್ನು ಕಾಡಿತು. ಯಾವಾಗಲೂ ಬೆಂಕಿಯ ಮೇಲೆ ಕುಳಿತಂತೆ ಭಾಸವಾಗುತ್ತಿರುತ್ತದೆ. ಭಯೋತ್ಪಾದಕರು ಪ್ರವಾಸಿಗರ ತಂಟೆಗೆ ಇತ್ತೀಚೆಗೆ ಬರುತ್ತಿಲ್ಲವಾದರೂ ಇತ್ತೀಚೆಗೆ ನುಸುಳಿದ ತಾಲಿಬಾನಿಗಳಿಗೆ ಅವೆಲ್ಲ ಲೆಕ್ಕವಿಲ್ಲ ಎಂಬ ಮಾತುಗಳು ನಮ್ಮ ಮನದಲ್ಲಿ ರಿಂಗಣಿಸುತ್ತವೆ. ಯೋಧರು ಮತ್ತು ಭಯೋತ್ಪಾದಕರ ನಡುವೆ ನಡೆಯುವ ಗುಂಡಿನ ಚಕಮಕಿಗೆ ಆಗಾಗ ಪ್ರವಾಸಿಗಳು ಬಲಿಯಾಗುವುದಿದೆ. ಇಷ್ಟಾದರೂ ಇಲ್ಲಿನ ಸ್ಥಳೀಯ ಸರ್ಕಾರ ಯೋಧರ ನಿಯೋಜನೆಯನ್ನು ವಿರೋಧಿಸುತ್ತದೆ.
ಸೋದರರಂತೆ ಬದುಕುತ್ತಿದ್ದ ಅಮಾಯಕ ಹಿಂದೂ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಭಯೋತ್ಪಾದಕರೊಡಗೂಡಿ ಅವರ ಆಸ್ತಿ ಪಾಸ್ತಿಗಳನ್ನು ಕಬಳಿಸಿ ಹೆಣ್ಣು ಮಕ್ಕಳನ್ನು ಬಲಾತ್ಕರಿಸಿ, ಮತಾಂತರಿಸಿ ಕದ್ದೊಯ್ದು ಅಲ್ಲಿಂದ ಒದ್ದೋಡಿಸಿ ಇಂದು ಭಾರತೀಯ ಪ್ರವಾಸಿಗಳ ಪೈಸೆಯನ್ನೆ ನೆಚ್ಚಿಕೊಂಡು ಕೂತಿರುವುದು ವಿಪರ್ಯಾಸವೇ ಸೈ. ಸ್ವರ್ಗ ಸದೃಶವಾಗಿರಬೇಕಾದ ಪ್ರಶಾಂತತೆಯಿಂದಿರಬೇಕಾದ ಸುಂದರ ನಾಡೊಂದನ್ನು ರಕ್ತಮಯವನ್ನಾಗಿಸಲು ದಾರಿಮಾಡಿಕೊಟ್ಟ ಎಲ್ಲ ನಾಯಕಮಣಿಗಳು ಇಂದು ಪೂಜನೀಯರಾಗಿರುವುದು ನಮ್ಮ ದೇಶದ ದುರಾದೃಷ್ಟವೇ ಸೈ IT HAPPENS ONLY IN INDIA.
ಕಾಶ್ಮೀರದ ಬಗ್ಗೆ ಬೆಂಗಳೂರಿನ ಹವಾನಿಯಂತ್ರಿತ ಕೊಣೆಗಳಲ್ಲಿ ಕುಳಿತು ಮಾರುದ್ದ ಲೇಖನ ಬರೆಯುವ ಡೋಂಗಿ ಜಾತ್ಯಾತೀತವಾದದ ಸ’ಮಜಾ’ವಾದಿ ಬುದ್ದಿಜೀವಿಗಳು ಒಮ್ಮೆ ಇಲ್ಲಿ ಬಂದು ಪರಿಸ್ಥಿತಿಯನ್ನು ಅವಲೋಕಿಸಿದರೆ!!! ಅದಕ್ಕೆಲ್ಲ ಅವರಿಗೆ ಸಮಯ ಮತ್ತು ಸಂಯಮವೆಲ್ಲಿದೆ ಬಿಡಿ ಅವರ ತೆವಲಿನೇದ್ದರೂ ಲೇಖನ ಗೀಚಿ ಬಿಸಾಡಿ ರಾಡಿ ಎರಚಿ ಓಡಿ ಹೋಗುವುದಷ್ಟೆ ಕಾಯಕ. ಈಗೀಗ ಮತಾಂಧತೆಯನ್ನು ಅಪ್ಪಿಕೊಂಡ ಇಲ್ಲಿನ ಸ್ಥಳೀಯರಿಗೂ ತಾವು ಮಾಡಿರುವ ತಪ್ಪಿನ ಅರಿವಾಗಿರುವುದು ಅವರ ಮಾತಿನಿಂದಲೆ ಕೇಳಿ ತಿಳಿದವನಿಗೆ ಎಲ್ಲೊ ಒಂದು ಸಣ್ಣ ಆಶಾಕಿರಣ ಕಂಡಿದ್ದು ಸುಳ್ಳೇನಲ್ಲ. ಇಡೀ ಕಾಶ್ಮೀರ ಕಣಿವೆಯನ್ನು ಭಾರತೀಯ ಸೇನೆ ತನ್ನ ಹತೋಟಿಯಲ್ಲಿಟ್ಟುಕೊಂಡಿರುವುದು ಸ್ಥಳೀಯ ಆಡಳಿತಕ್ಕೆ ಕಣ್ಣು ಕೆಂಪಾಗಾಗಿಸಿರುವುದು ಸಹಜವೇ. ಇಂದು ನಾವೇನಾದರೂ ಯಾವುದೇ ಅಹಿತಕರ ಘಟನೆಯಿಲ್ಲದೆ ಹಿಂತಿರುಗಿ ಬಂದಿದ್ದೇವೆಂದರೆ ಅಲ್ಲಿ ಹಗಲಿರುಳೆನ್ನದೆ, ಮಳೆ, ಅಲ್ಲಿನ ಮೂಳೆ ಕೊರೆಯುವ ಛಳಿಯನ್ನು ಲೆಕ್ಕಿಸದೆ ದಾರಿಯುದ್ದಕ್ಕೂ ಕಣ್ಣಿಗೆ ಎಣ್ಣೆಬಿಟ್ಟು ಕೊಂಡು ಕಾಯುತ್ತಿರುವ ಯೋಧರು ಕಾರಣ. ಭಾರತೀಯ ಯೋಧರೆ ನಿಮಗಿದೋ ನನ್ನ ಕೃತಜ್ಙತಾಪೂರ್ವಕ ನಮನ. ನೀವು ನಮ್ಮ ದೇಶದ ಹೆಮ್ಮೆ ಮತ್ತು ಗರ್ವ.
ರಾತ್ರಿ ಹಿಂತಿರುಗಿ ಬಂದವರಿಗೆ ಶ್ರೀಮತಿ ಗೀತಾ ಪದ್ಮ ಮತ್ತು ಚಿತ್ರಾರವರು ಅಡುಗೆ ಮಾಡಲು ಕೆಲ ಸಾಮಗ್ರಿಗಳ ಪಟ್ಟಿ ನೀಡಿ ತರುವಂತೆ ಆಜ್ಙಾಪಿಸಿದರು. ರಾಕೇಶ್ ಒಲ್ಲದ ಮನಸ್ಸಿನಿಂದಲೆ ನಮ್ಮೊಡನೆ ಬರಲು ಒಪ್ಪಿದ ಆದರೆ ಆತನ ಎಚ್ಚರಿಕೆಯ ಮಾತುಗಳು ನಮ್ಮನ್ನು ಬಿಡದೇ ಕಾಡಿದ್ದುಂಟು. ರಾತ್ರ್ರಿ ೭.೩೦ರ ನಂತರ ಇರುವ ಜಾಗದಿಂದ ಹೊರಬರಬೇಡಿರೆಂದು ದಿಲೀಪ್ ಸಹ ಜಮ್ಮುವಿನಲ್ಲಿ ನಮಗೆ ಎಚ್ಚರಿಕೆ ನೀಡಿದ್ದರೂ ಜೇಷ್ಠಾದೇವಿ ಮಂದಿರದಲ್ಲಿನ ಅಂಗಡಿಯಲ್ಲಿ ಬಹುತೇಕ ಅಡುಗೆ ಪದಾರ್ಥಗಳು ಲಭ್ಯವಿದ್ದರೂ ಕೆಲವು ಅತ್ಯಗತ್ಯ ಪದಾರ್ಥಗಳು ಅಲ್ಲಿ ಸಿಗದ ಕಾರಣ ನಾವು ಶ್ರೀನಗರ ಮಾರುಕಟ್ಟೆಗೆ ಹೋಗಬೇಕಾಗಿ ಬಂತು ಅಂತೂ ಧೈರ್ಯಮಾಡಿ ರಾಕೇಶ್ ನಮ್ಮೊಡನೆ ಬರಲು ಒಪ್ಪಿದ. ನಾಣು ಮತ್ತೆ ಪ್ರಸಾದ್ ತರಕಾರಿ ತರಲು ಇಳಿದರೆ ಹಣ್ಣುಗಳನ್ನು ಇನ್ನೂ ಸ್ವಲ್ಪ ಮುಂದೆ ಹೋಗಿ ಬಂದ ಶ್ರೀಕಾಂತನನ್ನು ಕರೆದುಕೊಂಡ ಹೋದ ರಾಕೇಶ್ ಅಲ್ಲಿನ ಜನಜಂಗುಳಿ ನೋಡಿ ಗಾಭರಿಯಿಂದ ಅವನು ಕೇಳಿದಷ್ಟು ಹಣ ಪಾವತಿಸಿ ಹಣ್ಣೆತ್ತಿಕೊಂಡು ವಾಹನ ಸೇರಿದ್ದು ನಡೆಯಿತು. ಇಂದಂತೂ ಶ್ರೀನಗರದಲ್ಲಿ ವಿಪರೀತ ಛಳಿಯಿತ್ತು. ಬೆಚ್ಚಗಿನ ಬಟ್ಟೆಯಿಲ್ಲದೆ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಚಪ್ಪಲಿಯಿಲ್ಲದೆ ನೆಲದ ಮೇಲಿಟ್ಟ ಕಾಲು ಅಲ್ಲೆ ಮರಗಟ್ಟುವಂತೆ ಭಾಸವಾಗುತ್ತಿತ್ತು. ವೀಪರೀತ ಛಳಿಯಿಂದ ಇಂದು ಬೇಗನೆ ಮಲಗಿದೆವು.
ಬೆಳಿಗ್ಗೆ ೭ ಗಂಟೆಗೆ ಹೊರಡಬೇಕಿದ್ದವರು ಜೇಷ್ಠಾದೇವಿ ಮಂದಿರದಿಂದ ಹೊರಟಾಗ ೮.೩೦. ನೇರವಾಗಿ ಆದಿ ಶಂಕರರಿಂದ ಪೂಜಿಸಲ್ಪಟ್ಟ ಶಿವ ದೇವಸ್ಥಾನದ ಕಡೆಗೆ ನಮ್ಮ ಪ್ರಯಾಣ. ಶ್ರೀನಗರದ ಸಂಪೂರ್ಣ ಪಕ್ಷಿನೋಟ ಇಲ್ಲಿಂದ ಲಭ್ಯ. ೩ ಕಡೆಯಿಂದಲೂ ಬೆಟ್ಟಗಳಿಂದ ಸುತ್ತುವರೆದ ಮಧ್ಯೆ ಸರೋವರನ್ನೊಳಗೊಂಡ ಅತ್ಯಂತ ಸುಂದರ ನಗರ ಶ್ರೀನಗರ. ಪ್ರಸಾದಿಯಂತೂ ಕಸಗುಡಿಸುವ ಹೆಣ್ಣನ್ನೂ ಸಹ ಅವಳಿರುವ ಬಣ್ಣಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದ. ಚಿವುಟಿದರೆ ರಕ್ತ ಚಿಮ್ಮುವ ವರ್ಣದ ಕಾಶ್ಮೀರ ಹೆಣ್ಣುಗಳು ಮನಮೋಹಕರೆಂಬುದರಲ್ಲಿ ಸಂಶವೇ ಇಲ್ಲ. ದಾರಿಯುದ್ದಕ್ಕೂ ಸಾಲಾಗಿ ಬರುತ್ತಿದ್ದ ಪುಟ್ಟ ಶಾಲಾ ಮಕ್ಕಳ ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಸಾದಿ ಮತ್ತು ನಾನು ನಿರತರಾಗಿದ್ದೆವು.
ಒಂದು ಕಿಮೀಗಳಿಗಿಂತ ಮುನ್ನವೆ ನಮ್ಮ ಕ್ಯಾಮೆರಾಗಳನ್ನೆಲ್ಲ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಕಿತ್ತುಕೊಂಡು ಬಿಡುತ್ತಾರೆ. ಕೊನೆಯ ಅರ್ಧ ಮೈಲಿಯನ್ನು ಕಾಲ್ನಡಿಗೆಯಲ್ಲಿ ಹತ್ತುವುದು ತುಸು ತ್ರಾಸದಾಯಕವಾದರೂ ಅಲ್ಲಿಂದ ಕಾಣಸಿಗುವ ಶ್ರೀನಗರದ ರಮ್ಯನೋಟ ದೇಹಶ್ರಮದ ಕಡೆ ಗಮನ ಹರಿಸಲು ಅವಕಾಶ ಕೊಡುವುದಿಲ್ಲ. ವಸಂತ ಋತುವಿನ ಮಹಿಮೆಯಿಂದ ಶಂಕರಾಚಾರ್ಯ ಮಂದಿರದ ಬೆಟ್ಟದಲ್ಲಿ ಹೂಗಳು ಅರಳಿ ನಿಂತ ಬೆಟ್ಟದ ಸೌಂದರ್ಯವನ್ನು ಹೆಚ್ಚಿಸಿದ್ದವು.
೩೨ ವರ್ಷಕ್ಕೆ ದೇಹತ್ಯಾಗ ಮಾಡಿದ ಆ ಮಹಾನುಭಾವ ಅದು ಹೇಗೆ ದಕ್ಷಿಣ ಭಾರತದಿಂದ ಇಲ್ಲಿಗೆ ನಡೆದು ಬಂದರೆಂಬುದೆ ವಿಸ್ಮಯ. ಅದು ಆ ಕಾಲದಲ್ಲಿ ರಸ್ತೆಗಳೇ ಇರದ ಘನ ಘೋರ ಕಾಡು ಮೇಡುಗಳಲ್ಲಿ ಆ ಪುಣ್ಯಾತ್ಮ ಅದು ಹೇಗೆ ಭಾರತದ ಉದ್ದಗಲಕ್ಕೂ ಸಂಚರಿಸಿ ನಶಿಸಿಹೋಗುತ್ತಿದ್ದ ಸನಾತನ ಧರ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಿದರೋ ಆ ದೇವರೆ(ಇದ್ದರೆ?) ಬಲ್ಲ. ದಕ್ಷಿಣದ ಕಾಲಾಡಿಯಲ್ಲಿ ಹುಟ್ಟಿ ಉತ್ತರದ ತುತ್ತತುದಿಯವರೆಗೂ ಸಂಚರಿಸಿ ಹಿಮಾಲಯಗಳಲ್ಲಿ ಆಲೆದು ನಾಲ್ಕೂ ದಿಕ್ಕಿನಲ್ಲಿ ಪೀಠಗಳನ್ನು ಸ್ಥಾಪಿಸಿ ಧರ್ಮ ಮರುಸ್ಥಾಪನೆ ಮಾಡಿದ ಆದಿ ಗುರು ಶ್ರೀಶಂಕರ ಭಗವತ್ಪಾದರು ಇಲ್ಲಿಯ ಶಂಕರಾಚಾರ್ಯ ಬೆಟ್ಟದಲ್ಲಿ ತಪಸ್ಸುಗೈದ ಗುಹೆ ಈಗಲೂ ದರ್ಶನಕ್ಕೆ ಲಭ್ಯವಿದೆ, ಇನ್ನೆಷ್ಟು ದಿನ ಇರುತ್ತೆ ಗೊತ್ತಿಲ್ಲ? ಏಕೆಂದರೆ ಇದನ್ನು ಕಾಶ್ಮೀರ ಸರ್ಕಾರ ಶಂಕರಾಚಾರ್ಯ ದೇವಸ್ತಾನದ ಬೆಟ್ಟವನ್ನು ಮೊದಲ ಹೆಜ್ಜೆಯಾಗಿ ತಕೌತ್-ಎ-ಸುಲೇಮಾನ್ ಎಂದು ಹೆಸರು ಬದಲಿಸಿದೆ.
ಇಲ್ಲಿ ನಮಗೆ ಬೆಳಗಾವಿಯಿಂದ ಬಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಕನ್ನಡಿಗರೊಡನೆ ಉಭಯಕುಶಲೋಪರಿ ವಿನಿಮಯ ಕೂಡ ನಡೆಯಿತು. ಕರ್ನಾಟಕದಿಂದ ದೂರವಿದ್ದಾಗ ಕನ್ನಡಿಗರು ಸಿಕ್ಕು ಮಾತನಾಡಿಸಿದರೆ ಅದು ಅತ್ಯಂತ ಸಂತೋಷದಾಯಕ. ಅದರಲ್ಲಿ ಕಾಶ್ಮೀರದಿಂದ ವಲಸೆ ಹೋಗಿ ಬೆಳಗಾವಿಯಲ್ಲಿ ನೆಲೆಸಿರುವ ಕಾಶ್ಮೀರ ಪಂಡಿತರ ಕುಟುಂಬವೊಂದು ಅಪ್ಪಟ ಕನ್ನಡಿಗರಾಗಿರುವುದು ಅಚ್ಚರಿ ತರಿಸಿತು. ನಮ್ಮ ಕುಲ್ದೀಪ್ ಪಂಡಿತ್ ಹೇಳುವ ಮಾತು ಇಲ್ಲಿ ನೆನಪು ಮಾಡಿಕೊಳ್ಳಲೇ ಬೇಕು. ನಾನು ಕಾಶ್ಮೀರಿ ಆದರೆ ನನ್ನ ಎರಡೆನೆ ಮಾತೃ ಭಾಷೆ ಕನ್ನಡ ೨ನೆ ತವರು ಕನ್ನಡನಾಡು ಎನ್ನುವ ಕುಲ್ದೀಪ್ ಸಾಧ್ಯವಿದ್ದಷ್ಟು ಕನ್ನಡದಲ್ಲೆ ಮಾತನಾಡುತ್ತಾರೆ ಮತ್ತು ತಮ್ಮ ವ್ಯವಹಾರದಲ್ಲಿ ಕೆಲಸ ಕೊಟ್ಟಿರುವ ಎಲ್ಲರೂ ಕನ್ನಡಿಗರು ಎನ್ನುವುದು ಅವರ ಹೆಮ್ಮೆ. ಕನ್ನಡಿಗರನ್ನೂ ಆಂಗ್ಲಭಾಷೆಯಲ್ಲೆ ಮಾತನಾಡಿಸುವ ಒಂದು ವರ್ಗದ ಕನ್ನಡಿಗರು ಇಲ್ಲಿ ಮಾತ್ರ ಕನ್ನಡದಲ್ಲೆ ಮಾತನಾಡಿಸುತ್ತಿದ್ದದ್ದು ಸಂತಸದ ವಿಚಾರ.
ಸುಮಾರು ೧ ಗಂಟೆಯ ನಂತರ ನಿಧಾನವಾಗಿಳಿದು ಬಂದು ವಾಹನ ಸೇರಿಕೊಂಡೆವು. ಇಲ್ಲಿಂದ ನೇರವಾಗಿ ನಾವು ಭೇಟಿ ಕೊಟ್ಟದ್ದು ಉದ್ಯಾನವನಗಳಿಗೆ ಶ್ರೀನಗರದಲ್ಲಿ ಸುಮಾರು ೬ ಉದ್ಯಾನವನಗಳಿವೆ ಒಂದಕ್ಕಿಂತ ಒಂದು ಸುಂದರ ಹೂದೋಟಗಳು. ನಿಷಾತ್, ಚೆಷ್ಮಶಾಹಿ, ಪರಿ ಮಹಲ್ ನಾವು ಈ ೩ ಉದ್ಯಾನವನಗಳನ್ನು ನೋಡಲು ಸಾಧ್ಯವಾಯಿತು. ೪ ಗಂಟೆಯ ಸಮಯಕ್ಕೆ ದಾಲ್ ಸರೋವರಕ್ಕೆ ಭೇಟಿಯಿತ್ತೆವು. ಚೆಷ್ಮಶಾಹಿಯಲ್ಲಿನ ನೀರು ಅತ್ಯಂತ ಪ್ರಸಿದ್ದ ಮತ್ತು ಅತ್ಯಂತ ಶುದ್ದ ಮತ್ತು ರುಚಿಗೆ ಹೆಸರುವಾಸಿ. ಪ್ರಥಮ ಪ್ರಧಾನಮಂತ್ರಿ ಕಾಶ್ಮೀರಿಯೇ ಆದ ನೆಹರೂಗೆ ಕುಡಿಯುವ ನೀರು ದಿನಂಪ್ರತಿ ಇಲ್ಲಿಂದಲೆ ವಿಮಾನದಲ್ಲಿ ತೆಗೆದುಕೊಂಡುಕೊಂಡು ಹೋಗಲಾಗುತ್ತಿತ್ತೆಂದು ಅಲ್ಲಿನ ಕೆಲವರ ವರದಿ. ಪುಟ್ಟ ಶಾಲಾ ಮಕ್ಕಳನ್ನು ಇಲ್ಲಿನ ಅದ್ಯಾನವನದಲ್ಲಿ ಆಡುತ್ತಿದ್ದದ್ದು ಆ ಉದ್ಯಾನವನಕ್ಕೆ ಚಿಟ್ಟೆಗಳ ದಂಡು ಲಗ್ಗೆ ಇಟ್ಟಿದಿಯೆಂಬ ಭಾವನೆ ತರಿಸಿದ್ದು ಸಹಜವೆ. ಹಾಲು ಬಿಳಿಯ ಚರ್ಮದ ಕದಪುಗಳಿಗೆ ಗುಲಾಭಿ ರಂಗು ಬಳಿದಂತಿರುವ ಪುಟ್ಟ ಮಕ್ಕಳು ಗಾಢ ಕೆಂಪು ಹಳದಿ ಹಸಿರು ಬಣ್ಣದ ಬಟ್ಟೆ ತೊಟ್ಟು ನೂರಾರು ಮಕ್ಕಳು ನಲಿದಾಡುತ್ತಿದ್ದರೆ ಅದು ಕಣ್ಣಿಗೆ ಹಬ್ಬ. ಫೋಟೊಗಳಿಗೆ ಒಲ್ಲೆಯೆನ್ನುವವರನ್ನು ಬಲವಂತವಾಗಿ ಫೋಟೊ ತೆಗೆಸಿದೆವು. ಇಲ್ಲಿನ ಉದ್ಯಾನವನಗಳಲ್ಲಿ ಕಾಣ ಸಿಗುವ ಕಡು ಬಣ್ಣದ ಹೂಗಳು ಇಲ್ಲಿನ ವಾತಾವರಣಕ್ಕೆ ಬಣ್ಣ ಹಚ್ಚುತ್ತದೆ. ಒಂದೊಂದು ಹೂಗಳು ಒಂದೊಂದು ವಿಶೇಷ ರೀತಿಯಲ್ಲಿ ಬಣ್ಣದಲ್ಲಿ ತನ್ನದೇ ಆದ ಸೌಂದರ್ಯವನ್ನು ತಂದಿದೆ. ಟುಲಿಪ್ ಕೂಡ ಇಲ್ಲಿ ಲಭ್ಯ.
ಛಳಿಗಾಲದಲ್ಲಿ ಸಂಪೂರ್ಣವಾಗಿ ನೀರಿನ ಮೇಲ್ಪದರ ಹಿಮವಾಗುವ ಈ ಸರೋವರ ಪ್ರಪಂಚದಲ್ಲೆ ಅತ್ಯಂತ ಸುಂದರ ಸರೋವರವೆಂದು ಅಲ್ಲಿಯವರ ಅಂಬೋಣ. ಇಲ್ಲಿನ ದೋಣಿಮನೆಗಳು ಪ್ರಸಿದ್ದ. ಒಂದು ದಿನಕ್ಕೆ ಸುಮಾರು ೧೫೦೦ ದಿಂದ ೬೦೦೦ ರೂ ವರೆಗಿನ ಬೋಟ್ ಹೌಸ್ ಗಳು ಲಭ್ಯ. ಸರೋವರದ ಮಧ್ಯೆಯೆ ಮಾರುಕಟ್ಟೆಯಿರುವುದು ಮತ್ತೆ ಸರೋವರದ ಮಧ್ಯೆಯೆ ಜನ ಜೀವಿಸುವುದು ಅಲ್ಲಿಯೆ ಒಂದು ಅಂಚೆ ಕಛೇರಿ, ಸರ್ಕಾರಿ ಕಛೇರಿ ಇರುವುದು ಇಲ್ಲಿನ ವಿಶೇಷತೆ ಒಬ್ಬೊಬ್ಬರೆ ಹೆಣ್ಣುಗಳು ಇಲ್ಲಿನ ದೋಣಿ ಹುಟ್ಟು ಹಾಕುತ್ತಾ ಹೋಗುವುದು ನಡೆದಾಡಿದಷ್ಟೆ ಸಲೀಸು. ನಮ್ಮ ಚಾಲಕ ಮುನ್ನೆಚ್ಚರಿಕೆಯ ಮಾತುಗಳು ನಮ್ಮನ್ನು ಅಲ್ಲಿನ ಮಾರುಕಟ್ಟೆಯಲ್ಲಿ ಏನನ್ನು ಖರೀದಿಸಲು ಬಿಡಲಿಲ್ಲ. ಸರೋವರವೆನೋ ಸುಂದರ ಆದರೆ ದೋಣಿವಿಹಾರಕ್ಕೆ ಹೊರಟಾಕ್ಷಣ ದೋಣಿಯಲ್ಲೆ ಹಿಂಬಾಲಿಸುವ ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ತಿನ್ನುತಾರೆ. ಕಾಶ್ಮೀರದ ಮುತ್ತುಗಳ ಬಳೆ ಓಲೆ ಸರ ಮುಂತಾದ ಆಭರಣಗಳನ್ನು ದೋಣಿಯಲ್ಲೆ ಕುಳಿತು ಮಾರುತ್ತಾರೆ. ಕೇಸರಿ ಮತ್ತು ಒಣಹಣ್ಣುಗಳನ್ನೂ ಸಹ, ಅದೂ ಅತಿಯೆನಿಸುವಷ್ಟು ಪ್ರವಾಸಿಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಿದ್ದಹಸ್ತರು. ಶ್ರೀಮತಿ ಗೀತಾಪ್ರಸಾದ್ ಅವರ ಬಳೇ ಓಲೆ ಮುಂತಾದ ಆಭರಣಗಳ ಖರೀದಿ ನಡೆದೇ ಇತ್ತು. ೩೫೦ ರೂ ಪ್ರತಿ ಗ್ರಾಂ ಗೆ ಇರುವ ಕೇಸರಿಯನ್ನು ೪೦ ರೂಗೆ ಕೊಟ್ಟು ಹೋಗುತ್ತಾನೆಂದರೆ ಅದೆಂತ ಗುಣಮಟ್ಟದ್ದಿರಬೇಕು ಯೋಚಿಸಿ. ಈ ಮಾರಾಟಗಾರರ ಜಾಲ ಎಷ್ಟು ಬಲವಾಗಿದೆಯೆಂದರೆ ನಾವು ದೋಣಿಯಿಂದ ಇಳಿದು ಆ ಮಾರುಕಟ್ಟೆಯಲ್ಲಿ ಅವನ ನಿಷ್ಠರಾದ ಒಂದು ಅಂಗಡಿಗೆ ಭೇಟಿಕೊಡುವಂತೆ ಬೆದರಿಕೆ ಕೂಡಾ ಹಾಕುತ್ತಾನೆ. ನಾನಂತೂ ಇಂತದಕ್ಕೆಲ್ಲಾ ಜಗ್ಗುವವನೆ ಅಲ್ಲ. ನನ್ನ ಮೊಂಡಾಟ ಅವನಿಗೆ ಕಿರಿಕಿರಿ ಉಂಟಾಗಿ ನಮ್ಮನ್ನು ವಿಧಿಯಿಲ್ಲದೆ ಹಿಂತಿರುಗಿ ಕರೆದುಕೊಂಡು ಹೊರಟ. ಆ ಬಟ್ಟೆ ಅಂಗಡಿಗೆ ಹೋಗದಿದ್ದರೆ ವಾಪಸ್ ಕರೆದುಕೊಂಡು ಹೋಗುವುದಿಲ್ಲ ಎಂದು ಬೆದರಿಸಿದ ಪ್ರಸಂಗಗಳಿವೆಯೆಂದು ನನ್ನ ಸಹೋದ್ಯೋಗಿ ನಿರ್ಮಲ ಈ ಲೇಖನ ಬರೆಯುವ ಸಂದರ್ಭದಲ್ಲಿ ತಿಳಿಸಿದರು.
ನೇರವಾಗಿ ಮಂದಿರಕ್ಕೆ ಹಿಂತಿರುಗಿದೆವು.
ಮರುದಿನ ನಮ್ಮ ಪ್ರಯಾಣ ನೇರವಾಗಿ ಪಹಲ್ಗಾಂ ಕಡೆಗಿರಬೇಕಿತ್ತು ಆದರೆ ಪಹಲ್ಗಾಂ ನೋಡದಿದ್ದರೂ ಪರವಾಗಿಲ್ಲ ಸಾರ್ ಪಟ್ನಿಟಾಪ್ ಅದೇ ರೀತಿಯಿದೆ ಅಲ್ಲೆ ಇಂದು ಉಳಿದು ನಾಳೆ ಹೋಗೋಣ ಎಂದ ನಮ್ಮ ಚಾಲಕ ಬಹುಶಃ ಅಲ್ಲಿನ ವಸತಿ ಗೃಹಗಳಲ್ಲಿ ಸಿಗುವ ಕಮೀಶನ್ ಹಣದ ಆಸೆಗಿರಬೇಕು ಆಯ್ತು ಹಾಗೇ ಮಾಡೋಣ ಎಂದು ತಿಳಿಸಿ ಪಟ್ನಿಟಾಫ್ ಅಂದರೆ ಜಮ್ಮುವಿನ ಕಡೆಗೆ ಹೊರಟೆವು. ೮.೩೦ ಕ್ಕೆ ಮುನ್ನ ಸುರಂಗದ ಬಾಗಿಲು ತೆಗೆಯುವುದಿಲ್ಲವಾದ್ದರಿಂದ ಶ್ರೀನಗರದಿಂದ ಒಂದು ಗಂಟೆಯ ಪ್ರಯಾಣದ ನಂತರ ಪಂಜಾಬಿ ಡಾಬಾವೊಂದರಲ್ಲಿ ದೋಸೆಯೆನ್ನುವ ಹುಳಿಮಡುಗಟ್ಟಿದ್ದ ದೋಸೆಯನ್ನು ತಿಂದು ಹೊರಟೆವು. ಕ್ರಿಕೆಟ್ ಬ್ಯಾಟ್ಗಳು ಅತೀ ಅಗ್ಗದ ದರದಲ್ಲಿ ಸಿಗುತ್ತವೆ. ಬ್ಯಾಟ್ ತಯಾರಿಸಲು ಬಳಸುವ ಮರ ಇಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಅಕ್ರೂಟನ್ನು ನಾವು ಶ್ರೀನಗರದಲ್ಲಿ ಖರೀದಿಸಿ ಮೋಸ ಹೋಗಿದ್ದೇವೆಂದು ಇಲ್ಲಿ ತಿಳಿಯಿತು.
೧ ಗಂಟೆಯ ಪ್ರಯಾಣ ನಮ್ಮನ್ನು ಸುರಂಗ ಮಾರ್ಗಕ್ಕೆ ತಂದು ನಿಲ್ಲಿಸಿತು. ಇಲ್ಲಿ ನಮ್ಮ ಚಾಲಕ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟ. ಏಕೆಂದು ವಿಚಾರಿಸಿದವನಿಗೆ ಇಲ್ಲಿಂದ ಮುಂದೆ ಉಗ್ರಗಾಮಿಗಳ ಯಾವುದೇ ಉಪಟಳದ ಭಯವಿಲ್ಲ ಎಂದ. ಹೌದು ಅವನು ಹೇಳಿದ್ದು ನಿಜ ನಾವೆಂತ ಭೀತಿ ತುಂಬಿದ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವೆಂದರೆ, ಹಿಂದಿನ ದಿನ ನಾವು ಗುಲ್ಮಾರ್ಗ್ ಗೆ ಹೋಗುವ ದಾರಿಯಲ್ಲಿ ಒಂದು ಹಳ್ಳಿಯಲ್ಲಿ ಉಗ್ರಗಾಮಿಗಳ ಅಡಗುತಾಣದ ಬಳಿ ಸೈನಿಕರು ನಡೆಸಿದ ದಾಳಿಗೆ ೫ ಜನ ಬಲಿಯಾಗಿದ್ದನ್ನು ಚೌಧರಿ ನನಗೆ ತಿಳಿಸಿದ್ದರು ನಾನು ದಯಮಾಡಿ ನಮ್ಮ ಗುಂಪಿನ ಯಾರಿಗೂ ಇದನ್ನು ತಿಳಿಸಬೇಡಿರೆಂದು ಮನವಿಮಾಡಿದೆ. ನಾನೀ ವಿಷಯ ಬಹಿರಂಗಗೊಳಿಸಿದ್ದು ಧರ್ಮಶಾಲದಲ್ಲಿ. ನಾವು ಕಾಶ್ಮೀರದಲ್ಲಿದ್ದ ೩ ದಿನದಲ್ಲಿ ಉಗ್ರಗಾಮಿಗಳು ಮತ್ತು ಸೈನಿಕರ ನಡುವಿನ ಚಕಮಕಿಯ ಘಟನೆಗಳು ನಡೆದದ್ದು ೪ ಸತ್ತದ್ದು ೭ ಜನ. ಚುನಾವಣೆ ವಿಫಲಗೊಳಿಸುವುದು ಅವರ ಗುರಿ. ಅದಕ್ಕೆ ಕೆಲವು ಸ್ಥಳೀಯರ ಕುಮ್ಮಕ್ಕೂ ಕೂಡಾ ಇದೆ ಸಹಜ ಅಲ್ವೆ? ಪಾಕೀಸ್ತಾನ ಮಾಡಿದ್ದೆಲ್ಲ ಸರಿಯೆನ್ನುವ ಭಾರತೀಯ ಬುದ್ದಿಜೀವಿಗಳಿರಬೇಕಾದರೆ ಇದೇನು ಅಂಥಹ ಅಪರಾಧವಲ್ಲ ಬಿಡಿ.
ಪಟ್ನಿ ಟಾಪ್ ನಮ್ಮ ಕೆಮ್ಮಣ್ಣುಗುಂಡಿಯಶ್ಟೆ ಸುಂದರ ೧ ಗಂಟೆಯ ಕಾಲ ಇಲ್ಲಿದ್ದು ಚಾಲಕನಿಗೆ ನೇರವಾಗಿ ಕಾಟ್ರಕ್ಕೆ ತೆರಳುವುಂತೆ ಹೇಳಿದೆವು ಒಲ್ಲದ ಮನಸ್ಸಿನಿಂದ ಆತ ಗಾಡಿ ಚಲಾಯಿಸಿದ. ಕಾಟ್ರಾದಲ್ಲಿಳಿದಾಗ ಸಂಜೆ ೫ ಗಂಟೆ. ಇಲ್ಲಿಂದ ೧೪ ಕಿ.ಮೀ ದೂರದಲ್ಲಿರುವ ಗುಹಾ ದೇವಾಲಯ ವೈಷ್ಣೋದೇವಿಗೆ ನಡದೆ ಹೋಗಬೇಕು ಇಲ್ಲವೆ ಕಚ್ಚರ್ ಎನ್ನುವ ಕುದುರೆ ಮತ್ತು ಕತ್ತೆಯ ಸಂಗಮದ ಪ್ರಾಣಿಯ ಮೇಲೆ ಸವಾರಿ ಮತ್ತು ೩ನೆ ಯ ಆಯ್ಕೆ ಡೋಲಿ. ನಡೆದೆ ಹತ್ತುವ ತೀರ್ಮಾನ ತೆಗೆದು ಕೊಂಡು ನಡೆಯಲು ಆರಂಭಿಸಿದೆವು. ದಾರಿಯುದ್ದಕ್ಕೂ ದೀಪಗಳು ಮತ್ತು ೨೪ ಗಂಟೆ ಕಾರ್ಯ ನಿರ್ವಹಿಸುವ ಅಂಗಡಿಗಳು ನಮ್ಮ ನಡಿಗೆಯನ್ನು ಸ್ವಲ್ಪ ಆರಾಮಗೊಳಿಸುತ್ತವೆ. ಅಬ್ಬ ಇಲ್ಲಿನ ಜನರ ಈ ದೇವಿಯ ಮೇಲಿನ ಭಕ್ತಿಗೆ ಮೇರೆಯೇ ಇಲ್ಲ. ಕುಂಟರು ಕುರುಡರು ವಯಸ್ಸಾದವರು ಎಲ್ಲ ರೀತಿಯ ಜನ ಅಷ್ಟೂ ದೂರ ಬರೀ ಕಾಲ್ನಡಿಗೆಯಲ್ಲೆ ಕ್ರಮಿಸುತ್ತಾರೆ. ಒಬ್ಬನಂತೂ ನನ್ನ ಗಮನಕ್ಕೆ ಬಂದ ಪೋಲಿಯೋ ಪೀಡಿತ ಯುವಕ. ರಭಸವಾಗಿ ಆತ ಹತ್ತಿ ಹೋಗುತ್ತಿದ್ದದ್ದು ನನಗೆ ಅತ್ಯಾಶ್ಚರ್ಯ ಉಂಟು ಮಾಡಿತ್ತು. ಇನ್ನೊಬ್ಬ ಯುವಕ ಹೆಜ್ಜೆ ನಮಸ್ಕಾರ ಹಾಕುತ್ತಿದ್ದದ್ದು ಅದಕ್ಕಿಂತ ಆಶ್ಚರ್ಯ. ಆತ ದೇವಸ್ತಾನ ತಲುಪಲು ಕನಿಷ್ಠ ೩ ದಿನಗಳಾದರೂ ಬೇಕು. ೫ ಗಂಟೆಗಳಲ್ಲಿ ಸುಮಾರು ೧೨.೩೦ನಿಮಿಷಕ್ಕೆ ದೇವಸ್ತಾನ ತಲುಪಿದೆವು. ಭೈರವ ಬಾಬಾನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಗುಹೆಯನ್ನು ಹೊಕ್ಕ ಪಾರ್ವತಿಯ ಮಂದಿರ ವೈಷ್ನೋದೇವಿ ಎಂದು ಇಲ್ಲಿನ ಜನರ ನಂಬಿಕೆ. ಇಲ್ಲಿಂದ ಮೇಲೆ ಅದೇ ಭೈರೂ ಬಾಬಾನ ಮಂದಿರವಿದೆ ಅಲ್ಲಿಗೆ ಹೋಗಲು ನಮಗ್ಯಾರಿಗೂ ಮನಸ್ಸಿರಲಿಲ್ಲ ನಮ್ಮಲ್ಲಿ ತ್ರಾಣವೂ ಉಳಿದಿರಲಿಲ್ಲ. ದೇವಿಯ ದರ್ಶನದ ನಂತರ ಕಾಲ್ನಡಿಗೆಯಲ್ಲಿ ಇಳಿಯಲು ಸಾಧ್ಯವಿಲ್ಲವೆಂದು ತಿಳಿಸಿ ಶ್ರಿಕಾಂತ ಮತ್ತು ಪ್ರಸಾದ್ ಕಚ್ಚರ್ ಹತ್ತಿದರು ವಿಧಿಯಿಲ್ಲದೆ ನಾನೂ ಕೂಡ ಅವರನ್ನೆ ಹಿಂಬಾಲಿಸಬೇಕಾಯಿತು. ಬೆಳಗಿನ ಜಾವ ೨.೩೦ಕ್ಕೆ ಹೊರಟು ೭ ಗಂಟೆ ಸುಮಾರಿಗೆ ಕಾಟ್ರ ತಲುಪಿ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದವರಿಗೆ ಎಚ್ಚರವಾದದ್ದು ೧೧ ಗಂಟೆಗೆ. ಅಲ್ಲಿಂದ ಹೊರಟು ಮಧ್ಯಾನ್ಹ ೧ ಗಂಟೆ ಸುಮಾರಿಗೆ ಜಮ್ಮು ತಲುಪಿದೆವು. ಕೋಣೆಗಳನ್ನು ತೆಗೆದುಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ, ದೇವಸ್ತಾನಗಳ ನಗರ ಜಮ್ಮು ವೀಕ್ಷಣೆಗೆ ಹೊರಟೆವು. ಮೊದಲಿಗೆ ಜಾಮ್ನು ಗುಫಾ, ಬಹುಕೋಟೆ ಕಾಳಿ ಮಂದಿರಕ್ಕೆ ಭೇಟಿಯಿತ್ತೆವು. ನಂತರ ನಮ್ಮ ಚಾಲಕ ನಮ್ಮಿಂದ ಬೀಳ್ಕೊಂಡ. ಅವನಿಗೆ ಸಲ್ಲಬೇಕಾದಷ್ಟು ಹಣ ಪಾವತಿಸಿ ಅವನಿಗೆ ಟಾಟಾ ಮಾಡಿದೆವು. ಸಂಜೆ ೭ ರ ಸುಮಾರಿಗೆ ಹೊರಬಂದು ನಾನು ಮತ್ತು ಶ್ರೀಕಾಂತ ಧರ್ಮಶಾಲಕ್ಕೆ ಇರುವ ಬಸ್ ವಿಚಾರಿಸಿ ಮುಂಗಡ ಟಿಕೆಟ್ ಸಾಧ್ಯವಿಲ್ಲದ್ದರಿಂದ ಅದು ಬರುವ ಸಮಯ ಮತ್ತು ಸ್ಥಳ ವಿಚಾರಿಸಿದೆವು. ಅಶ್ಟರಲ್ಲಿ ಸಜ್ಜಾಗಿದ್ದ ಉಳಿದವರೊಡನೆ ರಘುನಾಥ ಮಂದಿರಕ್ಕೆ ಭೇಟಿಯಿತ್ತೆವು. ಎರಡು ಬಾರಿ ಉಗ್ರರ ದಾಳಿಗೆ ಸಿಕ್ಕು ಬದುಕುಳಿದಿರುವ ರಘುನಾಥ ಮಂದಿರದ ಪ್ರಶಾಂತತೆ ನನಗಿಷ್ಟವಾಯಿತು. ನಾವು ಅಲ್ಲಿಗೆ ಬರುವ ಸಮಯಕ್ಕೆ ಸರಿಯಾಗಿ ಮಂಗಳಾರತಿ ನಡೆಯುತ್ತಿತ್ತು. ಇಲ್ಲಿರುವ ಸ್ಫಟಿಕದ ಶಿವಲಿಂಗ ಅತ್ಯಂತ ಆಕರ್ಷಣೀಯ. ದೇವಸ್ತಾನದಿಂದ ಹೊರಬಂದು ಲಘು ಉಪಹಾರ ಬಾಳೆಹಣ್ಣು ಮತ್ತು ಲಸ್ಸಿ (ಎಲ್ಲವೂ ಸೇರಿ ಊಟದಂತೆ) ಸೇವಿಸಿ ಮಲಗಿದೆವು. ಇಲ್ಲಿಗೆ ನಮ್ಮ ಜಮ್ಮುಕಾಶ್ಮೀರ ಪ್ರವಾಸ ಮುಗಿದಿತ್ತು. ಪ್ರವಾಸಕ್ಕೆ ನೆರವಾದ ಕುಲ್ದೀಪ್ ಪಂಡಿತ್ ಮತ್ತು ದಿಲೀಪ್ ಪಂಡಿತ್ ಮತ್ತು ಅವರ ಕುಟುಂಬ ವರ್ಗಕ್ಕೆ ನಾವೆಲ್ಲರೂ ಚಿರಋಣಿಗಳು. ನಾವು ಕಾಶ್ಮೀರಕ್ಕೆ ಹೋಗ್ತಿವಿ ಎಂದು ತಿಳಿದ ಎಲ್ಲ ಸ್ನೇಹಿತರು ಅಲ್ಲಿನ ಅಪಾಯದ ಬಗ್ಗೆ ಎಚ್ಚರಿಸಿದರೂ ನನ್ನ ಭಂಡ ಧೈರ್ಯ ಇಲ್ಲಿಗೆ ಎಳೆದು ತಂದಿತ್ತು.
2 comments:
ಸಂಸಾರದೊಂದಿಗೆ ಕಾಶ್ಮೀರಕ್ಕೆ ಹೋದ ನಿಮ್ಮ ಸಾಹಸ ಮೆಚ್ಚುವಂತದ್ದು...
ಅಮಾಯಕ ಪಂಡಿತರ ಮೇಲೆ ದೌರ್ಜನ್ಯ ಎಸಗಿರುವ ದೇಶ ದ್ರೋಹಿ ಕಾಶ್ಮೀರಿಗಳ ಮೇಲೆ ನನಗೆ ಕೆಟ್ಟ ಕೋವವಿದೆ.
ಅರವಿಂದ್,
ಬ್ಲಾಗ್ ಗೆ ಬಂದಿದಕ್ಕೆ ನನ್ನಿ. ಹೌದು ಅದೊಂತರ ಸಾಹಸವೇ ಎಂದು ಇಂದಿನ ಕಾಶ್ಮೀರದ ಪರಿಸ್ಥಿತಿ ನೋಡಿದರೆ ಅನಿಸುವುದು ಸಹಜವೆ. ಅಮಾಯಕ ಪಂಡಿತರ ಕಥೆ ಒಬ್ಬೊಬ್ಬರದೂ ಒಂದು ರಕ್ತ್ಸಿಕ್ತ ಇತಿಹಾಸವಾಗಿದೆ ಅವರ ನೆರವಿಗೆ ಬರದೇ ಇರುವ ಸರ್ಕಾರಗಳಂತೂ ಈ ದೇಶದ ರಾಜಕಾರಣಿಗಳ ಮಸ್ಥಿತಿಗೆ ಹಿಡಿದ ಕನ್ನಡಿ.
Post a Comment