Monday, November 17, 2008

ಕಾಡುವ ಆಕೆಯ ಕಂಗಳ ನೆನಪು

ನನಗಿನ್ನೂ ಚೆನ್ನಾಗಿ ನೆನೆಪಿದೆ ಆ ದಿನ. ಬಹುಶಃ ಆ ಮುಖ ನಾನು ಮರೆತಿರಬಹುದು. ಆದರೆ ಘಟನೆಯನ್ನಲ್ಲ. ಆಗಿನ್ನೂ  ತರಭೇತಿ ಮುಗಿಸಿ ಅಲ್ಲಿಯೇ ಕೆಲಸಕ್ಕೆ ಸೇರಿ ಸ್ವಲ್ಪ ದಿನಗಳಾಗಿತ್ತು. ಜೊತೆಯಲ್ಲಿದ್ದ ಅಕ್ಕನ ಮದುವೆಯಿಂದ ಉಂಟಾದ ಶೂನ್ಯದ ಖಿನ್ನತೆ ಇನ್ನೂ ಕಾಡುತ್ತಿತ್ತು. ಅದರಿಂದ ಹೊರ ಬರಲು ಅರ್ಧ ದಿನ ರಜೆ ಹಾಕಿ ವೃತ್ತದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದೆ. ಆಗಿನ್ನೂ ವರ್ತುಲ ರಸ್ತೆಯಾಗಿರಲಿಲ್ಲ. ಹಾಗಾಗಿ ಎರಡೂ ಕಡೆಯ ಬಸ್ ಗಳನ್ನು ನಿರೀಕ್ಷಿಸುತ್ತ ನನ್ನಂತೆ ಇನ್ನೂ ೮-೧೦ ಜನರಿದ್ದರು. ೧ ಘಂಟೆಯ ಸಮಯವಿರ ಬೇಕು ಏಕೆಂದರೆ ಈಗಿನ್ನೂ ಊಟ ಮುಗಿಸಿ ಹೊರ ಬಂದಿದ್ದೆ. ಹಳ್ಳಿಯ ಕಡೆಯಿಂದ ಬಂದ ಬಸ್ಸೊಂದರಿಂದ ಒಬ್ಬ ಯುವತಿಯನ್ನು ಒಬ್ಬ ಹೆಂಗಸು ಕೆಳಗೆಳೆದು ತಂದರು. ಸ್ವಲ್ಪ ದೂರದಲ್ಲಿದ್ದರಿಂದ ಅವರ ಸಂವಾದಗಳು ಅಲ್ಲಿದ್ದವರಿಗೆ ಕೇಳಿಸುತ್ತಿರಲಿಲ್ಲ, ಆದರೂ ಅದು ಅಸಹಜವಾಗಿದ್ದದ್ದು ಎಲ್ಲರಿಗೂ ತಿಳಿಯುವಂತಿತ್ತು. ಅವರಿಬ್ಬರನ್ನು ಆಟೋದಲ್ಲಿ ಬಂದ ಮಧ್ಯ ವಯಸ್ಕನೊಬ್ಬ ಕೂಡಿಕೊಂಡಾಗ ಆ ಯುವತಿ ಜೋರಾಗಿ ಕಿರಿಚಾಡಲು ಪ್ರಾರಂಭಿಸಿದಳು. ಅವರ ಸಂಭಾಷಣೆ ಈಗ ಎಲ್ಲರಿಗೂ ಕೇಳಿಸುತ್ತಿತ್ತು. ಮಧ್ಯಾನ್ಹವಾದ್ದರಿಂದ ಹೆಚ್ಚೇನು ಜನರಿರಲಿಲ್ಲ. ಆಕೆಯ ಮಾತುಗಳಿಂದ ನಮಗನ್ನಿಸಿದ್ದು ಆ ಯುವತಿ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ ಆಕೆಯ ತಾಯಿ ಅವಳನ್ನು ಕರೆದೊಯ್ಯುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂಬುದು.
ಸ್ವಲ್ಪ ಸಮಯ ವಾಗ್ವಾದವನ್ನು ನಾವೆಲ್ಲ (ಅಲ್ಲಿದ್ದ ಜನರು) ಗಮನಿಸುತ್ತಿದ್ದೇವೆಂದು ಆಕೆಯ ತಾಯಿ (ನಮ್ಮ ಊಹೆ) ನೋಡಮ್ಮ ನಾನು ನಿನ್ನ ತಾಯಿ ಹಾಗೆಲ್ಲ ಹಠ ಮಾಡ್ಬಾರ್ದು ಅಂತ ಹೇಳಿದಾಕ್ಷಣ ಆ ಯುವತಿ ನೀನ್ಯಾವ ಸೀಮೆ ತಾಯಿನೆ? ಎಂದು ಅಬ್ಬರಿಸಿದಳು. ಮೆಲ್ಲಗೆ ಜನರ ಗುಂಪು ಅವರ ಸುತ್ತ ನೆರೆಯಿತು. ಒಬ್ಬೊಬರೂ ಒಂದೊಂದು ವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಯಾಕೊ ಆ ಯುವತಿ ಕಂಗಾಲಾಗಿದ್ದಾಳೆಂದು ನನಗನಿಸುತ್ತಿತ್ತು. ಆಕೆಯ ಕಣ್ಣಿನಲ್ಲಿದ್ದ ಭಯ ಆತಂಕ ನನಗಿನ್ನೂ ನೆನಪಿದೆ. ಈಗ ಸುತ್ತಲಿದ್ದ ಜನ ಸಂಧಾನಕ್ಕಿಳಿದರು ಯಾಕಮ್ಮಾ ಹೀಗ್ಮಾಡ್ತಿಯ? ಹೋಗು ಮನೆಗೆ ಎಂದು ಬುದ್ದಿವಾದ ಹೇಳಿದವರಿಗೆ ನನ್ ಮನೆಗೆ ಹೋಗ್ತಿನಿ ಬಿಡಿ ಅಂತ ಹೇಳಿ ಎಂದು ಆಕೆ ದಬಾಯಿಸಿದಳು. ಅದಕ್ಕೆ ಆಕೆಯ ತಾಯಿ ಎಂದು ಕರೆದು ಕೊಂಡ ಹೆಂಗಸು ನೋಡೀ ಸಾರ್ ಬಿಟ್ರೆ ಮನೆ ಬಿಟ್ಟು ಓಡಿ ಹೋಗ್ತಳೆ ಮದುವೆ ನಿಶ್ಚಯ ಆಗಿದೆ ಎಂದು ಗೋಗರೆದಳು. ಅಲ್ಲಿ ನೆರೆದವರಿಗೆಲ್ಲಾ ಪೀಕಲಾಟ ಯಾರು ಸರಿ ಯಾರು ತಪ್ಪು ಎಂಬ ಜಿಜ್ಞಾಸೆ. ಆಕೆ ಕೊನೆಗೊಮ್ಮೆ ನೀವು ನನ್ನ ಏನ್ಮಾಡ್ತೀರ ಅಂತ ಗೊತ್ತು ನನ್ನ ಬಿಡಿ ನಾನು ಮನೆಗೆ ಹೋಗ್ತಿನಿ ಎಂದು ಕೊಸರಿಕೊಂಡು ಆಟೋದ ಬಳಿಗೆ ಓಡಿದವಳನ್ನು ಆಕೆಯ ಜೊತೆಯಲ್ಲಿದ್ದವನ ಜೊತೆ ಇನ್ನಿಬ್ಬರು ದಾರಿ ಹೋಕರು ಮತ್ತೆ ಹಿಡಿದಿಟ್ಟುಕೊಂಡರು. ನನಗೆ ಫೋನ್ ಮಾಡಕ್ಕಾದ್ರು ಅವಕಾಶ ಕೊಡೀ ಅಂತ ಆಕೆ ಗೋಗರೆದಳು.
ನನ್ನ ಪೋಲೀಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಎಂದಾಗ ತಾಯಿಯೆಂದು ಹೇಳಿಕೊಳ್ಳುತ್ತಿದ್ದವಳ ಮುಖ ಕಪ್ಪಿಟ್ಟಿತು. ಸಾರ್ ಪೋಲಿಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಸಾರ್ ಎಂದು ನಾನು ಮತ್ತು ಇನ್ನಿಬ್ಬರು ಹೇಳೀದಾಗ ಸುಮ್ನೆ ಕೂತ್ಕೊಳ್ರೀ ನೀವಿನ್ನು ಪಡ್ಡೆ ಹುಡುಗರು ನಿಮ್ಗೇನ್ ಗೊತ್ತು ಪ್ರಪಂಚ ಎಂದು ದಬಾಯಿಸಿದರು ನಾವೂ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟೆವು. ಕೊನೆಗೊಮ್ಮೆ ಅಲ್ಲಿದ್ದ ಜನಗಳಲ್ಲ ಸೇರಿ ಚಾಲಕನ ಜೊತೆಯಲ್ಲಿ ಆಕೆಯನ್ನು ಒಂದು ಆಟೋದಲ್ಲಿ ಕೂರಿಸಿಕೊಂಡರು ಆಗ ಆಕೆ ಅಯ್ಯೊ ಬಿಡ್ರೀ ನನ್ನ ಇವ್ರೆಲ್ಲ ಸೇರ್ಕೊಂದು ನನ್ನ ಮಾರಿ ಬಿಡ್ತರೆ ಸೂ..... ಮಾಡ್ತಾರೆ ಎಂದು ಜೋರಾಗಿ ಅಳುತ್ತಲೆ ಆಟೋದೊಳಗೆ ಬಲವಂತವಾಗಿ ಕುಳಿತಳು. ಅಲ್ಲಿದ್ದವರೆಲ್ಲ ನಿಸ್ಸಹಾಯಕಾರಾಗಿ ಆ ದೃಶ್ಯವನ್ನೆ ನೋಡುತ್ತಿದ್ದರು. ಆಟೋ ಮುಂದೋಡಿದಂತೆ ಆಕೆಯ ಅಳು ಜೋರಾಗಿ ಮತ್ತೆ ಆಟೋ ಶಬ್ಧದಲ್ಲಿ ಕರಗಿಹೋಯಿತು.
ಈ ಘಟನೆ ನಡೆದು ಸುಮಾರು ೧೫ ವರ್ಷಗಳಾದರೂ ನಾನು ಪ್ರತಿ ಬಾರಿ ಆ ಜಾಗಕ್ಕೆ ಬಂದಾಗಲೆಲ್ಲ ಭಯ ಮಿಶ್ರಿತ ಕಂಗಾಲಾಗಿದ್ದ ಆಕೆಯ ಮುಖ ಕಣ್ಣೆದುರಿಗೆ ಬರುತ್ತದೆ. ಆಕೆ ನಿಜಕ್ಕೂ ವೇಶ್ಯಾವಾಟಿಕೆ ಸೇರಿದಳೆ ಅಥವ ತಂದೆ ತಾಯಿಯ ಮನೆ ಸೇರಿದಳೆ ಗೊತ್ತಿಲ್ಲ. ಒಂದು ಹೆಣ್ಣಿಗಾಗುತ್ತಿದ್ದ ಅನ್ಯಾಯವನ್ನು ಸ್ವಲ್ಪ ಸಮಯಪ್ರಜ್ಙೆ ಮೆರೆದಿದ್ದರೆ ತಪ್ಪಿಸ ಬಹುದಿತ್ತಲ್ಲ ಆದರೂ ನಾವು ಅಸಹಾಯಕರಾಗಿ ನಿಂತೆವಲ್ಲ ಎನ್ನುವ ನೋವು ಇನ್ನೂ ಕಾಡುತ್ತದೆ. ಈ ಘಟನೆ ನೆನಪಾದಗಲೆಲ್ಲ ಖಿನ್ನತೆ ಆವರಿಸಿ ಬಿಡುತ್ತದೆ.