Thursday, November 26, 2009

ಕಸಬ್ ತಂದೆಯ ಸಂದರ್ಶನ!!!

ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್ನುವುದು ಒಂದು ಕ್ಷಣ ಕಾಡಿದರೂ, ಭಯೋತ್ಪಾದಕರು ಅಂದ್ರೆ ಸಿಗೋದೆ ಪಾಕಿಸ್ಥಾನದಲ್ಲಿ. ಹೌದಲ್ವ? ನೇರ manufacturing unit ಗೆ ಹೋದ್ರೆ ಒಳ್ಳೆ ಮಾಲು ಸಿಗೋದು ಖಚಿತೆವೆಂದೆನಿಸಿ ಸರಿ ಅಲ್ಲಿಗೆ ಹೋಗೋಣ ಎಂದು ತೀರ್ಮಾನಿಸಿ ಹೊರಟೇಬಿಟ್ಟೆ.

ಹೋಗೋದ್ ಹೇಗೆ? ಕಳೆದ ಏಪ್ರಿಲ್ ನಲ್ಲಿ ವಾಘಾ ಗಡಿ ಸಂದರ್ಶಿಸಿದ್ದರಿಂದ ಆ ಮೂಲಕವೇ ಯಾವ್ದಾದ್ರೂ ಈರುಳ್ಳಿ ಲಾರಿ ಒಳ್ಗೆ ಸೇರ್ಕೊಂಡು ಹೋದ್ರಾಯ್ತು ಅನ್ಕೊಂಡೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗ್ಬೇಕೂಂದ್ರೆ ವೀಸಾ ಬೇಕು, ಹುಹ್ ಏನ್ಮಾಡೋದು ಅದೆ ಅಲ್ಲಿಂದ ಇಲ್ಲಿಗ್ ಬರ್ಲಿಕ್ಕೆ ಒಂದು ಕ್ರಿಕೆಟ್ ಮ್ಯಾಚ್ ಇದ್ರೆ ಸಾಕು. ಇಲ್ವ ಒಂದು ಗನ್ ಸಾಕು ನೋಡಿ.
***
ಪಾಕಿಸ್ತಾನ ಏನೋ ಸೇರ್ಕೊಂಡಿದ್ದಾಯ್ತು ಇನ್ನು ಯಾರನ್ನು ಸಂದರ್ಶನ ಮಾಡೋದು ಅಂತ ಯೋಚ್ನೆ. ಹೌದು ಮುಂಬೈ ದಾಳಿಯಲ್ಲಿನ ಕಸಬ್ ತಂದೆನ ಸಂದರ್ಶಿಸಿದರೆ ಹೇಗೆ? ಅದೆ ಸರಿ. ಪಾಕಿಸ್ತಾನದಲ್ಲಿನ ಕಾಶ್ಮೀರ ಉಗ್ರರ ಸ್ವರ್ಗವಾದ್ರೂ ಅಲ್ಲಿಗ್ ಬಿಡಲ್ಲ ಯಾಕೇಂದ್ರೆ? ಸ್ವತಃ ಪಾಕಿಸ್ತಾನದ ಸರ್ಕಾರವೇ ಅಲ್ಲಿಗೆ ಬೇರೆಯವ್ರು ಹೋಗದಹಾಗೆ ಸ್ವತಃ ಕಟ್ಟೆಚ್ಚರ ವಹಿಸಿದೆ. ಯಾರಿಗೂ ಹೋಗ್ಲಿಕ್ಕೆ ಬಿಡಲ್ಲ ಅದ್ರಲ್ಲೂ ಭಾರತದ ಬುದ್ದಿಜೀವಿಗಳನ್ನಂತೂ ಸುತರಾಂ ಬಿಡೋದೆ ಇಲ್ಲ. ಸರ್ಕಾರನೇ ಐಎಸೈ ಮೂಲಕ ತರಭೇತಿ ಕೊಡ್ತಾ ಇರೋ ವಿಷ್ಯ ಪ್ರಪಂಚದಲ್ಲಿ ಎಲ್ರಿಗೂ ಗೊತ್ತಿದ್ರೂ ಈ ಭಾರತೀಯ ಬುದ್ದಿಜೀವಿಗಳು ನಮ್ಮ ಬೆಂಬಲಕ್ಕೆ ನಿಂತಿದರೆ ಅನ್ನೊ ವಿಷ್ಯ ಪಾಕಿಸ್ತಾನದ ಸರ್ಕಾರಕ್ಕೆ ಗೊತ್ತಿರೊದ್ರಿಂದ ಅವ್ರಾದ್ರೂ ನಮ್ಮ ಬೆಂಬಲಕ್ಕಿರ್ಲಿ ಅನ್ನುವ ಮುಂದಾಲೋಚನೆ, ಇರ್ಲಿ ಬಿಡಿ.

ಅಲ್ಲಿಗ್ ಬಿಡದೇ ಇದ್ದದ್ದು ಒಳ್ಳೆದಾಯ್ತು ಇಷ್ಟಕ್ಕೂ ಭಯೋತ್ಪಾದಕರ ಉತ್ಪಾದಕನನ್ನು ಸಂದರ್ಶಿಸುವ ಅವಕಾಶ ಒಳ್ಳೆಯದಲ್ವೆ?
ಹಾಗೂ ಹೀಗೂ ಮಾಡಿ ಕಸಬ್ ತಂದೆ ನಂಗೆ ಸಂದರ್ಶನ ಕೊಡ್ಲಿಕ್ಕೆ ಒಪ್ಪಿದ ಅದೂ ೨೫೦೦೦ ಕೊಡ್ತೀನಿ ಅಂದ್ಮೇಲೆ

ಮೊದಲನೇ ಪ್ರಶ್ನೆ: ಸಾರ್ ಯಾವ ಕಾರಣಕ್ಕೆ ನೀವು ನಿಮ್ಮ ಮಗನನ್ನ ಭಯೋತ್ಪಾದಕನಾಗಿ ಮಾಡೋದಿಕ್ಕೆ ಒಪ್ಪಿದ್ರಿ?
ಕಸಬ್ ತಂದೆ: ಬಡತನ, ಈಗ ನೋಡಿ ಇವತ್ತಿನ ಸಂಪಾದನೆ ೨೫೦೦೦. ಒಂದು ಗಂಟೆಗೆ. ಬೇಗ ಮುಗ್ಸಿ ಇನ್ನೂ ಡಾಲರ್ ಕೊಡೋವ್ರು ಕಾಯ್ತಿರ್ತರೆ.

ಪ್ರಶ್ನೆ: ನಿಮ್ಗೆ ಅದು ಸರಿ ಅನ್ಸುತ್ತ? ನಿಮ್ಮ ಮಗ ಬೇರೆ ದೇಶದಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ನಿಮ್ಮ ದೇಶಕ್ಕೆ ಕೆಟ್ಟ ಹೆಸ್ರು ತರ್ತನಲ್ಲ?
ಉತ್ತರ: ನಮ್ಗೆ ದೇಶಕ್ಕಿಂತ ಧರ್ಮ ಮುಖ್ಯ. ನಂಗೆ ಅವ್ನೊಬ್ನೆ ಮಗ ಅಲ್ಲ ಇನ್ನೂ ಇದರೆ. ಇಷ್ಟಕ್ಕೂ ಅವ್ನೇನು ಸತ್ತೇನು ಹೋಗಿಲ್ವಲ್ಲ. ಮೊಂದೊಂದು ದಿನ ಬಂದೇ ಬರ್ತನೆ ಅನ್ನೊ ನಂಬಿಕೆ ಇದೆ ನಂಗೆ.

ಪ್ರಶ್ನೆ: ಅದು ಹೇಗೆ ಸಾರ್ ಅಷ್ಟೊಂದು ವಿಶ್ವಾಸ?
ಉತ್ತರ: ನಿಮ್ಮ ಸರ್ಕಾರದ ಮೇಲೆ ನನಗೆ ವಿಶ್ವಾಸವಿದೆ. ಭಾರತೀಯರು ಕರುಣಾಮಯಿಗಳು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅಲ್ಲಿ ನಮ್ಮ ಬೆಂಬಲಿಗರು ಸಹಾಯ ಮಾಡೇ ಮಾಡ್ತರೆ.

ಪ್ರಶ್ನೆ: ಯಾರು ಸಾರ್ ನಿಮ್ಮ ಬೆಂಬಲಿಗರು? ಮಾನವ ಹಕ್ಕುಗಳ ಆಯೋಗನ?
ಉತ್ತರ: ಇಲ್ಲ, ಅಲ್ಲಿನ ಬುದ್ದಿಜೀವಿಗಳು. ಯಾವುದೇ ಕಾರಣಕ್ಕೂ ಅವನನ್ನು ನೇಣಿಗೇರಿಸಲು ಅವ್ರು ಬಿಡಲ್ಲ, ಅಲ್ಲಿನ ಸರ್ಕಾರಕ್ಕೂ ನಮ್ಮವ್ರ ಓಟ್ ಬೇಕಾಗಿರೋವರ್ಗೂ ನನ್ ಮಗ ಸೇಫ್.

ಇದ್ದಕ್ಕಿದ್ದಂತೆ ಮನೆ ಮುಂದೆ ಜನಗಳು ಸೇರ್ಲಿಕ್ಕೆ ಶುರು ಆಯ್ತು ನಂಗೆ ಭಯ. ಭಯ ಪಟ್ಕೋಬೇಡಿ ಅವ್ರು ನಿಮ್ಗೆ ಏನೂ ಮಾಡ್ಲಿಕ್ಕೆ ಬಂದಿಲ್ಲ, ಬೇಗ ನಿಮ್ ಕೊನೆ ಪ್ರಶ್ನೆ ಕೇಳಿ ನಾನು ಹೊರ್ಡಬೇಕು.

ಎಲ್ಲಿಗ್ ಹೋಗ್ತಿದೀರ ಸಾರ್? ಇಷ್ಟೊಂದು ಜನ ಇಲ್ಲಿ ಯಾಕೆ ಸೇರ್ತಿದರೆ?

ನಾವೆಲ್ಲ ಸೇರಿ ಲಷ್ಕರ್ ಎ ತೋಯ್ಬ ಆಫೀಸ್ಗೆ ಹೋಗ್ತಾ ಇದೀವಿ ಅದಕ್ಕೆ.

ಯಾಕೆ ಸಾರ್?

ನಮ್ಮ ಮಕ್ಕಳನ್ನೆಲ್ಲ ಅವರ ಕ್ಯಾಂಪಿಗೆ ಸೇರಿಸ್ಕೊಳಿ ಅಂತ ಹೇಳಲಿಕ್ಕೆ.
ಓಹ್ ಎಲ್ರನ್ನೂ ಭಯೋತ್ಪಾದಕರನ್ನ ಮಾಡ್ಕೊಳಿ ಅಂತ ಕೇಳ್ತಿದೀರಾ?

ಹೌದು! ಆದ್ರೆ ಒಂದು ಕಂಡೀಶನ್ ಹಾಕ್ದಿವಿ.
ಏನು ಸಾರ್ ಕಂಡಿಶನ್ ನಮ್ ಮಕ್ಕಳನ್ನೆಲ್ಲ ಬರೀ ಭಾರತದ ಮೇಲೆ ಮಾತ್ರ ಭಯೋತ್ಪಾದಕರಾಗಿ ಕಳಿಸ್ಬೇಕು ಬೇರೆಲ್ಲೂ ಕಳಿಸ್ಬಾರ್ದು ಅಂತ.

ಓಹ್ ಯಾಕೆ ಸಾರ್ ನಿಮ್ಗೆ ಭಾರತದ ಮೇಲಿಷ್ಟು ದ್ವೇಷ?
ದ್ವೇಷನೂ ಇಲ್ಲ ಮಣ್ಣೂ ಇಲ್ಲಯ್ಯ. ಅಲ್ಲಿಗ್ ಹೋಗಿ ಸಿಕ್ಕಾಕೊಂಡ್ರೆ ನಮ್ಮ ಮಕ್ಳಿಗೆ ರಾಜಾತಿಥ್ಯ ಸಿಗುತ್ತೆ. ತಿಂಗಳಿಗೆ ಕೊಟ್ಯಾಂತರ ಖರ್ಚು ಮಾಡಿ ಸಾಕ್ಕೊಳ್ತರೆ. ಶಿಕ್ಷೆ ಅಂತೂ ಆಗೋದೆ ಇಲ್ಲ. ವಿಚಾರಣೆ ನೆಪದಲ್ಲಿ ಅವನ ಜೀವನ ಪೂರ್ತಿ ಅಲ್ಲೆ ಇದ್ದು ಕೊನೆಗೊಂದು ದಿನ ಅಲ್ಲಿಯ ಪೌರತ್ವವೂ ಸಿಗುತ್ತೆ ಮುಂದೊಂದು ದಿನ ಮಂತ್ರಿ ಆದ್ರೂ ಆಗ್ಬಹುದು!!! ಇಲ್ಲಿದ್ರೆ ಏನ್ ಸಿಗುತ್ತೆ?

Friday, November 13, 2009

ಏನಾಗಿದೆ ಈ TV9ಗೆ?

ಇಂದು ಈ ವಾಹಿನಿಯು ಸರಿ ಸುಮಾರು ೧೧ ಗಂಟೆಯಿಂದ ಪ್ರಿಯಾಂಕ ಮತ್ತು ಆನಂದ್ ಸಂಭಂದದ ಕತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿತ್ತು. ನಾನು ಮಧ್ಯಾನ್ಹ ೧೨ ಗಂಟೆಗೆ ಊಟಕ್ಕೆ ಬಂದಾಗ ಪರಿತ್ಯಕ್ತ ಪ್ರೇಮಿ ಆಕೆಯ ಅಕ್ಕಂದಿರೊಡನೆ ಸ್ಟುಡಿಯೋಗೆ ಬಂದಾಗ ಕಾರ್ಯಕ್ರಮ ನೋಡಿದ್ದೆ. ಮತ್ತೆ ಸಂಜೆ ಬಂದಾಗ ಈ ವಾಹಿನಿ ಒಂದು ದೃಶ್ಯದ ತುಣುಕನ್ನು ತೋರಿಸುತ್ತಿತ್ತು. ಆಕೆ ಗರ್ಭಿಣಿಯೆನ್ನುವ ಕಾರಣಕ್ಕೆ ಅಳುತ್ತಾ ಕುಳಿತಿದ್ದ ಆ ಹೆಣ್ಣಿನ ಹೊಟ್ಟೆಯನ್ನು ಫೋಕಸ್ ಮಾಡಿ ತೋರಿಸ್ತಾ ಇದ್ದ ಆ ದೃಶ್ಯ ಇವರ ಕೀಳು ಅಭಿರುಚಿಯ ದ್ಯೋತಕವೋ? ಅಥವಾ ಗರ್ಭಿಣಿ ಎಂದಾಕ್ಷಣ ಮುಂದೆ ಬಂದಿರುವ ಹೊಟ್ಟೆಯ ಸಾಕ್ಷ್ಯ ತೋರಿಸಲು ಆ ಕ್ಯಾಮೆರಾದವ ಪ್ರಯತ್ನಿಸುತ್ತಿದ್ನಾ ತಿಳಿಯಲಿಲ್ಲ. ಆಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ತೋರಿಸುವುದು ಅಸಭ್ಯತನ ಎಂದು ಅನ್ನಿಸ್ಲಿಲ್ವ? ನಾನಿಲ್ಲಿ ಮಡಿವಂತಿಕೆಯ ಬಗ್ಗೆ ಯೋಚಿಸ್ತಾ ಇಲ್ಲ. ಆದ್ರೆ ಹೊಟ್ಟೆ ತೋರ್ಸಿ ಆತ ಏನು ದೃಢ ಪಡಿಸ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದ ಅಂತ? ಇಷ್ಟಕ್ಕೂ ೨-೩ ತಿಂಗಳ ಗರ್ಭಿಣಿಯ ಹೊಟ್ಟೆಲಿ ಇವನಿಗೆ ಏನು ಸಾಕ್ಷ್ಯ ಸಿಗುತ್ತೆ ಅನ್ನುವಷ್ಟು ಕಾಮ್ನ್ ಸೆನ್ಸ್ ಇಲ್ವ ಈ ವರದಿಗಾರರಿಗೆ? ಇದ್ದ ೧-೨ ನಿಮಿಷದ ದೃಶ್ಯದ ತುಣುಕನ್ನು ಇಡೀ ದಿನ ತೋರಿಸುವ ಇವರ ಚಾಳಿ ಇಲ್ಲೂ ಮುಂದುವರೆದು ಪದೆ ಪದೇ ಇದೇ ದೃಶ್ಯ ತೋರಿಸ್ತಿದ್ದದ್ದು ಆ ವಾರ್ತಾ ವಾಚಕನಿಗೂ , ಅಲ್ಲೆ ಬಂದು ಕುಳಿತಿದ್ದ ಪ್ರಮೀಳಾ ನೇಸರ್ಗಿಗೂ ಏನೂ ಅನ್ನಿಸ್ದೇ ಇದ್ದದ್ದು ಆಶ್ಚರ್ಯ! ನನಗೆ ಈಗ್ಲೂ ಅರ್ಥ ಆಗ್ತಿಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ಮೇಲೆ ಈತನ ಕಣ್ಣೇಕೆ ಬಿತ್ತು ಅಂತ.

Friday, October 9, 2009

ಸ್ವರ್ಣವಲ್ಲಿಯವರೆಗೂ

ಪ್ರವಾಸ ಕಥನ ಬರೆಯಲಿಕ್ಕೆ ಯಾಕೋ ಮನಸ್ಸಿಲ್ಲ. ಆದ್ರೂ ಚಿತ್ರವನ್ನಾದ್ರೂ ಇಲ್ಲಿ ಲಗತ್ತಿಸೋಣ ಅನ್ನಿಸ್ತು ಅದಕ್ಕೆ ಹೀಗೆ.



ತುಂಗ ಭದ್ರೆಯರ ಸಂಗಮ ಕೂಡ್ಲಿ

ಶಾರದಾ ಪೀಠದ ಆವರಣದ ಬಳಿಯಿರುವ ದೇವಳ



ಕೂಡ್ಲಿಯಿಂದ ಹಿಂತಿರುಗುವಾಗ



ಗುಡವಿ ದಾರಿಯಲ್ಲಿ


ಗುಡವಿ ಪಕ್ಷಿಧಾಮದಲ್ಲಿ


ಹತ್ತಿಯ ಉಂಡೆಗಳಂತೆ ಹಕ್ಕಿಗಳು


ಮಧುಕೇಶ್ವರನ ದ್ವಾರಪಾಲಕ



ಮಳೆಯಲ್ಲಿ ತೋಯ್ದ ಮಧುಕೇಶ್ವರ ದೇವಳ


ಗೋಪುರ


ಬನವಾಸಿಯಲ್ಲಿರುವ ಅಪರೂಪದ ತ್ರೀಲೋಕ ಮಂಟಪ



ಮಳೆಯಲ್ಲಿ ಒದ್ದೆಯಾದ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ರಸ್ತೆಗಳು



ದಾರಿಯಲ್ಲಿ ಸಿಕ್ಕ ಪ್ರತಿಯೊಂದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು



ಸ್ವರ್ಣವಲ್ಲಿ ಮಠದ ಬಳಿಯಿರುವ ಶಾಲ್ಮಲೆ


ಉಂಚಳ್ಳಿ ಜಲಪಾತ, ೩ ನೇ ವೀಕ್ಷಣಾ ಗೋಪುರಕ್ಕೆ ಇಳಿಯಲು ಅಸಾಧ್ಯವಾದಂತ ಮಳೆಯಲ್ಲಿ


ಅಘನಾಶಿನಿಯ ಸೇತುವೆಯ ಮೇಲೆ ನಮ್ಮ ತಂಡ


ಶನಿವಾರ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರ ಪರಿಣಾಮವಿರಬೇಕು, ಜೋಗಿನ ತುಂಬಾ ಬರೀ ಮಂಜು

ಉಕ್ಕಿ ಹರಿದ ಅಘನಾಶಿನಿ ಸೇತುವೆಯ ಮೇಲೆ ಹರಿಯುತ್ತಿದ್ದರಿಂದ ೧೦ ನಿಮಿಷ ನೀರಿನ ಮಟ್ಟ ಇಳಿದ ನಂತರವಷ್ಟೆ ಹೊರಟಿದ್ದು.



೩ ದಿನ ಮುಂಚೆ ಅನಿಲ್, ರಾಘು ಮತ್ತು ರಾಮಶೇಷನ್ ಜೊತೆ ಬಂದಾಗ ಇಲ್ಲಿ ಕುಳಿತಿದ್ದು ಈಗ ಸಹಾಯವಾಯ್ತು

ಕೋಗಾರು ಭಟ್ಕಳ ರಸ್ತೆಯಲ್ಲಿ ಸಿಕ್ಕ ಝರಿ, ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಎಲ್ಲೆಲ್ಲೂ ಜಲಧಾರೆಗಳು ಮೈದುಂಬಿ ಹರಿಯುತ್ತಿದ್ದವು



ಚನ್ನೆಕಲ್ ಜಲಪಾತ


ಅರವಿಂದ್, ರಾಘವೇಂದ್ರ ಶರ್ಮ ಮತ್ತು ರಾಜೇಶ್ ನಾಯಕ್ ಅವರ ಬ್ಲಾಗ್ ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಈ ಜಲಪಾತಕ್ಕೆ ಹೋಗಿದ್ದು


ಭೀಮೇಶ್ವರ ದೇವಸ್ಥಾನದ ಬಳಿಯ ಜಲಪಾತ



ಭೀಮೇಶ್ವರದ ಬಳಿಯ ಹೊಳೆ


*****ಚಂಡೆಮನೆ ಜಲಪಾತ******

ಅಕ್ಟೋಬರ್ ೨, ೩ ಮತ್ತು ೪ ರಂದು ಇದ್ದ ರಜಾ ಸಮಯದಲ್ಲಿ ಮಾಡಿದ ಪ್ರವಾಸದ ಚಿತ್ರಗಳಿವು. ಸಾಗರದಲ್ಲಿ ಉಳಿದು ಅಲ್ಲಿಂದ ೩ ರಂದು ಗುಡವಿ, ಬನವಾಸಿ ಸ್ವರ್ಣವಲ್ಲಿ ಮತ್ತು ಉಂಚಳ್ಳಿ ಜೋಗ ನೋಡಿದ ನಂತರ ಸಾಗರಕ್ಕೆ ಹಿಂತಿರುಗಿ ಮರುದಿನ ಜೋಗ,ಕೋಗಾರು ಭಟ್ಕಳ ರಸ್ತೆಯಲ್ಲಿರುವ ಮಳೆಗಾಲದ ಜಲಪಾತಗಳಾದ ಚಂಡೆಮನೆ, ಚನ್ನೆಕಲ್ ನಂತರ ಭೀಮೇಶ್ವರಕ್ಕೆ ನಡೆದು ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಹಿಂತಿರುಗಿ ಬಂದು ಅಂದೆ ರಾತ್ರಿ ೯ ಘಂಟೆಗೆ ಬೆಂಗಳೂರು ತಲುಪಿದೆ.

ನನ್ನ ಸ್ನೇಹಿತ ರಘು, ಸ್ವರ್ಣವಲ್ಲಿಗೆ ಹೋಗಿದ್ದೆ ಅಂತ ಚಾಮರಾಜ ಪೇಟೆಯಿಂದ ಬಸವನಗುಡಿಗೆ ಹೋಗಿ ಬಂದಹಾಗೆ ಹೇಳ್ತಿಯಿದ್ದಲ್ಲೊ ಅಂತ ಒಳ್ಗೊಳ್ಗೆ ನಗ್ತಿದ್ದ. ಅದೇನು ವ್ಯಂಗ್ಯದ ನಗುವೊ? ಆಶ್ಚರ್ಯದ್ದೊ? ತಿಳಿಯಲಿಲ್ಲ ಅದಕ್ಕೆ ಈ ಬರಹ

Tuesday, September 1, 2009

ಮಲ್ಲಳ್ಳಿ ಮತ್ತು ಮೂಕನ ಮನೆ ಪ್ರವಾಸ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.

ಚೆನ್ನಾಗಿದೆ ಸಾರ್ ಹೋಗ್ಬನ್ನಿ ಎನ್ನುವ ದಾಸೇಗೌಡ್ರು ಗೋಪಿಯ ದೂರವಾಣಿ ಸಂಖ್ಯೆಯನ್ನಿತ್ತರು. ಸಂಪರ್ಕಿಸಿದಾಗ ಗೋಪಿಯವ್ರು ಹೇಳಿದ್ದು ಬನ್ನಿ ಸಾರ್, ತುಂಬಾ ಚೆನ್ನಾಗಿದೆ ಮಳೆ ಚೆನ್ನಾಗಿ ಆಗಿರುವುದರಿಂದ ಜಲಪಾತಗಳು ಮೈದುಂಬಿವೆ ಎಂದರು. ನಮ್ಮೂರಿನಲ್ಲೆ ವಸತಿ ಗೃಹವಿದೆ ತಂಗಲು ಸಮಸ್ಯೆಯಿಲ್ಲ. ಇಲ್ಲಿಂದ ಕೇವಲ ೨೦ ಕಿ ಮೀ ದೂರದಲ್ಲಿದೆ ಮೂಕನ ಮನೆಯೆಂದಾಗ ನನಗೆ ಆಗಲೆ ಹೊರಟು ಬಿಡೋಣವೆನಿಸಿತ್ತು ಆದರೆ ಶನಿವಾರ ರಜೆಯಿರುವುದರಿಂದ ಸೂಕ್ತ ಎಂದು ನಿರ್ಧರಿಸಿದೆ.
ಸರಿ ಶುಕ್ರವಾರದವೆರೆಗೂ ಆ ಬಗ್ಗೆ ಯಾರಲ್ಲೂ ಚರ್ಚಿಸಿರಲಿಲ್ಲ ಪ್ರವಾಸ ಹೋಗಲೇ ಬೇಕೆಂಬ ಒತ್ತಡ ಒಂದೆ ಸಮ ಹೆಚ್ಚುತ್ತಿತ್ತು. ಕೆಲಸ, ಬೆಂಗಳೂರಿನ ವಾಹನ ದಟ್ಟಣೆ ಇದೇ ಆಗಿದೆ ಎನ್ನುವ ಪತ್ನಿಯ ಗೊಣಗಾಟಕ್ಕೆ ಆಗಾಗ ಮುಕ್ತಿ ಕೊಡಿಸಲು ಪ್ರವಾಸ ಎನ್ನುವ ಅದ್ಭುತ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಗಸ್ಟ್ ೧೫ ಶನಿವಾರ ಬೆಳಿಗ್ಗೆ ೬ ಗಂಟೆಗೆ ಹೊರಡೋಣ ಎಂದು ತಿಳಿಸಿ ಬೆಳಿಗ್ಗೆ ಎದ್ದಾಗ ಸಮಯ ೬.೩೦. ತಕ್ಷಣ ಗೋಪಿಯವರಿಗೆ ಕರೆ ಮಾಡಿದೆ. ಅವರ ಪತ್ನಿ ತುಂಬಾ ಮಳೆಯಿದೆ ಇಲ್ಲೆಲ್ಲ ನಿನ್ನೆ ಅಂತೂ ಸಿಕಾಪಟ್ಟೆ ಮಳೆ ಬಂತು ಎಂದು ಮಾಹಿತಿಯಿತ್ತರು. ಸರಿ ಮಳೆಯಿದ್ರೆ ಹೊಗೋದು ಬೇಡ ಎಂದವನಿಗೆ ಅಡುಗೆ ಮನೆಯಿಂದ ಮಿಸೈಲ್ಗಳು ಹಾರಿಬರುತ್ತವೆನೋ ಎಂದೆಣಿಸಿದ್ದವನಿಗೆ ಅಂತಾದ್ದೇನೂ ನಡೆಯಲಿಲ್ಲ ಎಂಬ ಸಮಾಧಾನ. ಮುಂದಿನವಾರ ಗೌರಿ ಗಣೇಶ ಹಬ್ಬ ಇನ್ನೆಲ್ಲಿ ಹೋಗಲಿಕ್ಕೆ ಆಗುತ್ತೆ ಎಂಬ ಅಸಮಾಧಾನದ ಮಾತು ಮಾತ್ರ ಬಂದಿದ್ದು.

ಆಗಸ್ಟ್ ೨೨ರ ಶನಿವಾರ ಹೊರಡೋಣ ಎಂದವನಿಗೆ ಪತ್ನಿಯಿಂದ ಬಂದ ಮರು ಪ್ರಶ್ನೆ ಈ ಸರ್ತಿನೂ ಅನಿಶ್ಚಿತತೆಯಿರಲ್ಲ ಅಲ್ವ? ಹರಿಹರಪುರ ಶ್ರೀಧರ್ ಅವರ ಮನೆಗೆ ಭೇಟಿಯಿತ್ತು ನಂತರ ಪ್ರವಾಸ ಮುಂದುವರೆಸುವ, ನಾವೂ ಬರ್ತೀವಿ ಎಂದು ವಾರ ಪೂರ್ತಿ ಆಶ್ವಾಸನೆ ಕೊಟ್ಟು ಕೊನೆ ಕ್ಷಣದಲ್ಲಿ ಕೈ ಎತ್ತಿದ ಸಂಪದಿಗಳು ರಾಕೇಶ್ ಮತ್ತು ವಿನಯ್. ನನ್ಗೆ ಯಾವುದೆ ಕೆಲಸದ ಒತ್ತಡ ಬರದಿದ್ದರೆ ಮಾತ್ರ ಬರ್ತೀನಿ ಎನ್ನುವ ಆಶ್ವಾಸನೆಯಿತ್ತಿದ್ದವರು ಅದರಂತೆ ಕೆಲ್ಸದ ಒತ್ತಡದಿಂದ ಬರಲಾಗುವುದಿಲ್ಲ ಎಂದು ತಿಳಿಸಿದವರು ಭಾಸ್ಕರ್. ಈ ಬಾರಿ ನನ್ನ ಸಹೋದ್ಯೋಗಿಗಳಿಗಾರಿಗೂ ಬೇಕೆಂದೆ ತಿಳಿಸಿರಲಿಲ್ಲ. ಮುಂದಿನ ಬಾರಿ ನಿನ್ಜೊತೆ ಪ್ರವಾಸಕ್ಕೆ ನಾವೂ ಬರ್ತೀವಿ ಎನ್ನುವ ನನ್ನ ಸಹೋದ್ಯೋಗಿ ಮಿತ್ರರು ಪ್ರವಾಸ ಹೊರಟಾಗ ಮಾತ್ರ ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಆದ್ದರಿಂದ ಅವರ್ಯಾರಿಗೂ ತಿಳಿಸುವ ಗೋಜಿಗೆ ಹೋಗಲಿಲ್ಲ.

೨೯ರ ಶನಿವಾರ ಮಗನನ್ನು ೧೧ ಗಂಟೆಗೆ ಶಾಲೆಯಿಂದ ಕರೆತಂದು ಊಟ ಮಾಡಿ ಮನೆ ಬಿಟ್ಟಾಗ ಸಮಯ ೧.೩೦. ತುಮಕೂರು ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಬದಲಿ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆಯೆಂದೆಣಿಸಿ ಹೆಸರಘಟ್ಟ ಮಾರ್ಗ ಹಿಡಿದವನಿಗೆ ಹಳೆದಾರಿಯೇ ಸೂಕ್ತವೆನಿಸಿತ್ತು. ಕರಡಿಗುಚ್ಚಮ್ಮ ದೇವಸ್ತಾನದ ಆವರಣದ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಬಹುತೇಕ ರಸ್ತೆ ಅಗಲೀಕರಣಕ್ಕಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಮಧ್ಯೆ ಹಾಸನ ತಲುಪಿದಾಗ ೪ ಗಂಟೆ. ೨-೩ ಸುತ್ತು ಹೊಡೆದ ನಂತರ ಶ್ರೀಧರ್ ಅವರು ಬಂದು ಮನೆಗೆ ಕರೆದು ಕೊಂಡು ಹೋದರು.

ನನ್ನ ಯೋಜನೆಯಂತೆ ಅಂದೆ ನಾನು ನನ್ನ ಗಮ್ಯವಾದ ಗೋಪಿಯರ ತಿಳಿಸಿದ ವಸತಿ ಗೃಹ ತಲುಪಬೇಕಿತ್ತು. ಆದರೆ ಶ್ರೀಧರ್ ಅವರ ಆತ್ಮೀಯ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೆ ಉಳಿಯ ಬೇಕಾಯಿತು. ಹಾಸನದ ವಾರಿಗೆಯ ಅಕ್ಕನ ಮನೆಗೆ ಮತ್ತು ಅಕ್ಕನ ಮಗಳ (ಭಾವ ಅನಂತ್ ಮತ್ತು ಆದಿಶೇಷ ಶ್ರೀಧರ್ ಅವರಿಗೂ ಪರಿಚಯವಿದ್ದರಿಂದ) ಮನೆಗೆ ಭೇಟಿಯಿತ್ತೆ. ಶ್ರೀಧರ್ ಅವರ ಮನೆಯ ತಿಳಿಸಾರು ಮಜ್ಜಿಗೆಹುಳಿಯ ಭರ್ಜರಿ ಭೋಜನ ಉದರ ತಣಿಸಿದರೆ, ಅವರ ನಾದಿನಿ ಹಾಡಿದ ಭಾವಗೀತೆಗಳು ಮನ ತಣಿಸಿದವು. ಅಂತಹ ಹೃದಯಸ್ಪರ್ಶಿ ಆತಿಥ್ಯಕ್ಕೆ ನಾವು ಚಿರಋಣಿ ಶ್ರೀಧರ್ ಸಾರ್.

ಬೆಳಗಿನ ಕಾರ್ಯಕ್ರಮದ ನಂತರ ಮಂಗಳ ದ್ರವ್ಯಗಳೊಡನೆ ನಮ್ಮನ್ನು ಬೀಳ್ಕೊಟ್ಟ ಶ್ರೀಧರ್ ಕುಟುಂಬಕ್ಕೆ ಮನದಲ್ಲೆ ವಂದಿಸುತ್ತಾ ಅಲ್ಲಿಂದ ಹೊರಟೆವು. ೨-೩ ಕಿ ಮೀ ನಡೆಯಬೇಕಾಗುತ್ತೆ ಎನ್ನುವ ಗೋಪಿಯವರ ಮಾತಿನಿಂದ ಶ್ರೀಧರ್ ಮತ್ತವರ ಕುಟುಂಬವನ್ನು ಪ್ರವಾಸಕ್ಕೆ ಬನ್ನಿ ಎಂದು ಆಹ್ವಾನಿಸದೆ ಅಲ್ಲಿಂದ ಹೊರಟೆ. ಕೆಟ್ಟು ನಿಂತಿರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಪ್ರಯಾಣದ ವೇಗವನ್ನು ಮಿತಿಗೊಳಿಸುತ್ತಿತ್ತು. ೮.೩೦ರ ಸಮಯಕ್ಕೆ ಹೊಟ್ಟೆ ಹಸಿತಾಯಿದೆ ಅಪ್ಪ ಎನ್ನುವ ಮಗನ ಮಾತಿಗೆ ಹೌದು ನನಗೂ ಎಂದು ಹೆಂಡತಿ ಕೋರಸ್ ಆರಂಭಿಸಿದಾಗ ಇದ್ದ ಜಾಗದಲ್ಲಿ ವಿಚಾರಣೆ ೨-೩ ಕಿ ಮೀ ಹಿಂದಿರುವ ಸುರಭಿ ನೆಕ್ಸ್ಟ್ ಮಾತ್ರವೇ ಪರಿಹಾರವೆಂದು ಸೂಚಿಸಿತು. ಮತ್ತೆ ಹಿಂತಿರುಗಿ ಬಂದು ಸುರಭಿಯಲ್ಲಿ ತಿಂಡಿ ತಿಂದು ನಮ್ಮ ಪ್ರಯಾಣ ಗೋಪಿಯವರ ಮನೆಯತ್ತ. ದಾರಿಯುದ್ದಕ್ಕೂ ಸಿಗುವ ಹಸಿರು ಹುಲ್ಲುಗಾವಲುಗಳು ಅಲ್ಲಿ ಮೇಯುತ್ತಿರುವ ಹಸುಕರುಗಳ ಕೊರಳಿನ ಘಂಟೆಯ ನಿನಾದ ದೂರದಲ್ಲಿರುವ ಬೆಟ್ಟಗುಡ್ಡಗಳ ಹಸಿರು ಹಿನ್ನೆಲೆ ಮತ್ತೆ ಮತ್ತೆ ವಾಹನ ನಿಲ್ಲಿಸಿ ಅಲ್ಲಿನ ಸೌಂದರ್ಯ ಸವಿಯೋಣವೆನಿಸುತ್ತದೆ. ಹೀಗೆ ಮುಂದುವರೆದರೆ, ಇಂದೆ ಬೆಂಗಳೂರಿಗೆ ಹಿಂತಿರುಗುವ ನಮ್ಮ ಯೋಜನೆ ವಿಫಲವಾಗುತ್ತದೆ ಎಂಬ ಭಯ ಬೇರೆ. ರಸ್ತೆ ಬದಿಯುದ್ದಕ್ಕೂ ಹರಿಯುವ ಜುಳುಜುಳು ನೀರು ಅದನ್ನಾಧರಿಸಿ ಬೆಳೆದು ನಿಂತ ಹಸಿರು ಪೈರು ಸ್ವಚ್ಛಂದವಾಗಿ ಬೀಸುವ ಶುದ್ದ ಗಾಳಿ ಹಕ್ಕಿ ಪಕ್ಷಿಗಳ ಕಲರವ ಕಣ್ಣು ಹಾಯಿಸಿದಷ್ಟು ಕಾಣುವ ಹಸಿರು ಜನಗಳೆ ಓಡಾಡದ ರಸ್ತೆಗಳು ಎಂತಹವರನ್ನು ಕವಿಯನ್ನಾಗಿಸುತ್ತವೆಯೆನೋ?

ಸಮಯದ ಪರಿವೆಯೇ ಇಲ್ಲದೆ ಆ ಹಸಿರು ಸೌಂದರ್ಯವನ್ನು ಕಣ್ಣುಗಳಿಗೆ ತುಂಬಿಕೊಳ್ಳುತ್ತಾ ವಾಹನ ಚಲಾಯಿಸುವುದು ನನಗೆ ಅತ್ಯಂತ ಸಂತಸದ ವಿಚಾರ. ಗೋಪಿಯವರ ಮನೆ ವಿಚಾರಿಸಿದಾಗ ಅವ್ರ ಮಗ ಅವ್ರು ಹಾಸನಕ್ಕೆ ಹೋಗಿದ್ದಾರೆ ನಾನೇ ಹೇಳ್ತಿನಿ ಹೇಗೆ ಹೋಗ್ಬೇಕೂಂತ ಎಂದು ತಿಳಿಸಿದರು ಅವರ ಹೋಟೆಲ್ನಲ್ಲಿ ಟೀ ಕುಡಿದು ಅವರ ಮಾರ್ಗದರ್ಶನ ಮತ್ತು ಯೋಜನೆಯಂತೆ ಮಲ್ಲಳ್ಳಿ ಜಲಪಾತದ ಕಡೆಗೆ ವಾಹನ ತಿರುಗಿಸಿದೆ. ಅಲ್ಲಲಿ ಸಿಗುವ ರಸ್ತೆಯ ಕವಲುಗಳಲ್ಲಿ ಸರಿಯಾದ ದಾರಿ ತಿಳಿದುಕೊಳ್ಳಲು ಯಾರೂ ಸಿಗುತ್ತಿರಲಿಲ್ಲ ಆದರೂ ಎಲ್ಲಿಯೂ ದಾರಿ ತಪ್ಪದೇ ನಮ್ಮ ವಾಹನ ಓಡುತ್ತಿತ್ತು. ಹಿಂದೊಮ್ಮೆ ಈ ರಸ್ತೆಯಲ್ಲಿ ಪುಷ್ಪಗಿರಿಗೆ ಬಂದಿದ್ದರಿಂದ ಸ್ವಲ್ಪ ಪರಿಚಿತವೆನಿಸುತ್ತಿದ್ದದ್ದು ಇದಕ್ಕೆ ಸಹಾಯಕವಾಗಿತ್ತು.
ಕೊನೆಗೊಮ್ಮೆ ಘಟ್ಟದ ರಸ್ತೆಯಲ್ಲಿನ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಾ ನಡೆಯಿತು ನಮ್ಮ ಪಯಣ. ಅಲ್ಲಲ್ಲಿ ಮಳೆ ನೀರು ನಿಂತು ಹಳ್ಳದಂತೆ ಕಾಣಿಸಿದ ಕಡೆ ವಾಹನದಿಂದಿಳಿದು ಕೋಲಿನಿಂದ ಅದರ ಆಳ ಪರೀಕ್ಷಿಸಿ ನಂತರ ಹೋಗುವುದು ಸುರಕ್ಷಿತವೆಂದು ತಿಳಿದು ಅದರಂತೆ ನಡೆದೆ. ಸುಮಾರು ೩ ಕಿ ಮೀ ನಂತರ ಇನ್ನು ವಾಹನ ಮುಂದೆ ಹೋಗುವುದು ಸಾಧ್ಯವಿಲ್ಲವೆಂದು ಅರಿತಾಗ ಅಲ್ಲಿಯೇ ವಾಹನ ನಿಲ್ಲಿಸಿ ನಡೆಯುತ್ತಾ ಹೊರಟೆವು. ಇಡೀ ಪ್ರದೇಶ ನಿರ್ಜನವಾಗಿತ್ತು. ಬರೀ ಕೀಟಗಳ ಝೇಂಕಾರ ಹಕ್ಕಿಗಳ ಚಿಲಿಪಿಲಿ ಮಾತ್ರವೇ ಕೇಳಿಸುತ್ತಿತ್ತು. ದಾರಿಯುದ್ದಕ್ಕೂ ಕಾಡುಹೂಗಳು ಹಸಿರು ಬಣ್ಣದ ಕಾಡಿಗೆ ಬಗೆಬಗೆಯ ಬಣ್ಣದ ಮೆರಗು ತಂದಿತ್ತಿದ್ದವು. ಹೂವಿನಲ್ಲಿರುವ ನಕ್ಷತ್ರ ಮನಸೆಳೆಯಿತು. ಜೀಪ್ ಹೋಗಬಹುದಾಗಿದ್ದ ದಾರಿಯಾದರಿಂದ ಎಲ್ಲಿಯೂ ದಾರಿತಪ್ಪುವ ಆತಂಕವಿರಲಿಲ್ಲ.

೧೫ ನಿಮಿಷದ ನಡಿಗೆ ನಮ್ಮನ್ನು ಹಸಿರಿನಿಂದ ಕೂಡಿದ ತೆರೆದ ಬಯಲಿಗೆ ಕರೆ ತಂದಿತ್ತು. ಕಲ್ಲಿನ ರಾಶಿಯ ಮೇಲೆ ಕೊಡೆ ಹಿಡಿದು ಕುಳಿತಿದ್ದ ವ್ಯಕ್ತಿಯಯೊಬ್ಬ ನಮ್ಮನ್ನು ನೋಡಿದೊಡನೆ ಎದ್ದು ಬಂದು ವಂದಿಸಿ ಪರಿಚಯ ಮಾಡಿಕೊಂಡರು. ಅಲ್ಲಿನ ಪ್ರದೇಶಗಳನ್ನೆಲ್ಲ ಸ್ಥೂಲವಾಗಿ ತಿಳಿಸಿದ ವಿಜಯ್ ಕುಮಾರ್ ನಮ್ಮೊಡನೆ ಜಲಪಾತದೆಡೆಗೆ ನಡೆದರು. ಮೊದಲ ನೋಟದಲ್ಲೆ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ ದೂರದಲ್ಲಿ ಧುಮ್ಮಿಕ್ಕುವ ಕುಮಾರಧಾರ. ಮೇಲಿನಿಂದ ಯಾರೋ ಹಾಲನ್ನು ಚೆಲ್ಲುತ್ತಿದ್ದಾರೆಂಬಂತೆ ಬೆಳ್ಳಗೆ ಬಂಡೆಗಳ ಮೇಲಿನಿಂದ ಹರಿಯುವ ಪರಿ ಸುಂದರ. ಎದುರಿಗೆ ನಿಸರ್ಗ ನಿರ್ಮಿತ ವೀಕ್ಷಣಾಗೋಪುರದಂತಿರುವ ಬಂಡೆಯ ಬದಿ ನಿಂತು ನೋಡುವುದೇ ಚೆಂದ. ಬಹುಶಃ ಸುತ್ತಲೂ ಇರುವ ಹಸಿರು ಮಧ್ಯದಲ್ಲಿ ಹಾಲ್ನೊರೆಯಂತೆ ಬೀಳುವ ಜಲಧಾರೆಗೆ ಮೆರುಗು ತಂದಿರಬೇಕು. ೬೦-೭೦ ಅಡಿಗಳಷ್ಟು ಕೆಳಗಿಳಿಯುತ್ತಾ ಹೋದಂತೆಲ್ಲ ಜಲಧಾರೆಯ ಸೌಂದರ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಜಲಧಾರೆಯವರೆಗೂ ಹಸಿರು ಹಬ್ಬಿರುವುದು ಈ ಜಲಪಾತದ ವಿಶೇಷಗಳಲ್ಲೊಂದು ಆದ್ದರಿಂದಲೇ ಹಾಲಿನ ಬಣ್ಣದ ನೀರಿಗೆ ಹಸಿರು ಬಣ್ಣದ ಹಿನ್ನೆಲೆ ಇರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಸಿದೆಯೆನಿಸುತ್ತದೆ.

ಹೆಚ್ಚೇನು ಜನ ಬರಲ್ಲ ಸಾರ್, ಎನ್ನುವ ವಿಜಯ್ ಕುಮಾರ್ ಮಾತಿನಲ್ಲಿ ಹೊಟ್ಟೆಪಾಡು ಎದ್ದು ಕಾಣುತ್ತದೆ. ಜನ್ಮತಃ ವಿಕಲಾಂಗತೆಯಿರುವ ವಿಜಯ್ ಬಗ್ಗೆ ಅನುಕಂಪ ಮೂಡುತ್ತದೆ. ಅದಕ್ಕಾಗಿ ನಾವೇನು ಆತನಿಗೆ ಹಣ ಕೊಡಬೇಕಾಗಿಲ್ಲ ಆತ ಅಲ್ಲಿನ ಪರಿಸರವನ್ನು ಶುಚಿಕೊಳಿಸಿದ್ದು ನೋಡಿ ಮನ ತುಂಬಿ ಬರುತ್ತದೆ. ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ವಸ್ತುಗಳೆಲ್ಲವನ್ನೂ ಒಂಡೆಡೆ ಗುಡ್ಡೆ ಹಾಕಿ ಅವನ್ನು ಸಾಗಿಸುವುದು ಅವರ ನಿತ್ಯ ಕಾಯಕಗಳಲ್ಲೊಂದು. ಸಾರ್, ಇಲ್ಲಿಂದ ಜಲಪಾತ ಧುಮುಕುವ ಜಾಗಕ್ಕೆ ದಾರಿಯಿದೆ ಹೋಗಿ ಸಾರ್ ಎನ್ನುವ ಮೃದುಭಾಷಿ ವಿಜಯ್ ಆತ್ಮೀಯನಂತೆ ವರ್ತಿಸುವುದು ಖುಷಿ ತರಿಸುತ್ತದೆ.

ಆತನ ಮಾತಿನಂತೆ ಕೆಳಗಿಳಿದು ಹೊರಟವರಿಗೆ ೫ ನಿಮಿಷದಲ್ಲಿ ಕುಮಾರಧಾರ ಸಿಕ್ಕಿತು. ಈಗಾಗಲೆ ಅಲ್ಲಿ ಇಬ್ಬರು ನದಿಯಲ್ಲಿ ಆಟವಾಡುತ್ತಿದ್ದರು. ಜಲಪಾತ ಉಂಟಾಗುವ ಎಷ್ಟೋ ಸ್ಥಳಗಳನ್ನು ನಾನು ನೋಡಿದ್ದೇನೆ ಆದರೆ ಈ ಸ್ಥಳದಷ್ಟು ಯಾವುದೂ ನನಗೆ ಇಷ್ಟೊಂದು ಅಪ್ಯಾಯವೆನಿಸಿರಲಿಲ್ಲ. ಧ್ಯಾನಕ್ಕೆ ಕುಳಿತವರಂತೆ ನಾವು ಮೂವರು ಆ ಸ್ಥಳದ ಸೌಂದರ್ಯವನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಎಷ್ಟು ಬಾರಿ ಬೆಳಕಿನ ಬೋನನ್ನು ಮುಟುಕಿಸಿದರೂ ತೃಪ್ತಿಯಿರಲಿಲ್ಲ. ನೀರಿಗಿಳಿದು ೩ ಮುಳುಗು ಹಾಕಿ ಅಲ್ಲಿಂದ ಹೊರಟೆವು. ಹಿಂತಿರುಗಿ ಬರುವಾಗ ದಾರಿಯಲ್ಲಿ ಸಿಕ್ಕ ನಾಗರಿಕ ಮಾನವನ ಕುರುಹಾದ ಮದ್ಯದ ಶೀಷೆಗಳು ಬಿದ್ದದ್ದು ಗಮನಕ್ಕೆ ಬಂತು. ಬಹುಷಃ ವಿಜಯ್ ಇಲ್ಲಿವರೆಗು ನಡೆದು ಬರಲಾಗಿಲ್ಲವಾದ್ದರಿಂದ ಅವು ಇಲ್ಲಿ ಉಳಿದಿರಬಹುದು ಅದನ್ನು ಹೊರತು ಪಡಿಸಿ ಉಳಿದಂತೆ ಇನ್ನು ಸ್ವಚ್ಚತೆ ಕಾಪಾಡಿಕೊಂಡಿರುವುದು, ಬಹುಶಃ ಸ್ಥಳ ಇನ್ನೂ ಹೆಚ್ಚು ಪ್ರಸಿದ್ದಿಗೆ ಬರದಿರುವುದರಿಂದ ಕಾರಣವಿರಬೇಕು.
ನನಗೆ ಇದುವರೆವಿಗೂ ಅರ್ಥವಾಗದ ಸಂಗತಿಯೆಂದರೆ ಇಂತಹ ಸ್ಥಳಗಳಲ್ಲಿ ಬಂದು ಕುಡಿಯುವ ಅಗತ್ಯವೇನು ಎಂಬುದು. ನನ್ನ ಕೆಲವು ಸ್ನೇಹಿತರ ಸಮರ್ಥಿಸಿಕೊಳ್ಳುವುದು ಪ್ರಕೃತಿಯ ಮಡಿಲಿನಲ್ಲಿ ನಶೆ ಹೆಚ್ಚು ಏರುತ್ತದೆ ಎನ್ನುವುದು. ಹೇಗೆ ಸಾಧ್ಯ ಮದ್ಯದಲ್ಲಿಲ್ಲದ ನಶೆ ಪ್ರಕೃತಿಯದೆ? ಪ್ರಕೃತಿಯೇ ನಶೆ ಏರಿಸುವಷ್ಟು ಸುಂದರವಾಗಿದ್ದರೆ ಈ ಮದ್ಯದ ಅವಶ್ಯಕ್ಯಾತೆ ಏಕೆ? ಪ್ರಕೃತಿಯ ನಶೆ ಸಾಕಲ್ಲವೆ? ಊಹೂಂ ಇನೂ ಅರ್ಥವಾಗಿಲ್ಲ. ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ.

ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆಯಲು ಆರಂಭಿಸಿದೆವು. ಪುಷ್ಪಗಿರಿ ದೇವಸ್ತಾನಕ್ಕೆ ಹೋಗಿ ಎಂದ ವಿಜಯ್ಗೆ ಈಗಾಗಲೆ ನೋಡಿದ್ದೇನೆ ಎಂದು ತಿಳಿಸಿದೆ. ಈಗ ದೇವಸ್ತಾನದವರೆಗೂ ರಸ್ತೆಯಿದೆ ತುಂಬಾ ಚೆನ್ನಾಗಿದೆ ಹೋಗ್ಬನ್ನಿ ಎಂದರು. ನಾವು ಇನ್ನೂ ಒಂದು ಜಲಪಾತ ವೀಕ್ಷಿಸ ಬೇಕಿರುವುದರಿಂದ ಆಗುವುದಿಲ್ಲವೆಂದು ತಿಳಿಸಿ ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆದು ವಾಹನ ಏರಿ ಮೂಕನ ಮನೆ ಜಲಪಾತದ ಕಡೆಗೆ ಹೊರಟೆವು. ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಕೆರೆ ಗಮನ ಸೆಳೆಯಿತು. ನೀರಿಗಿಳಿದು ಈಜುವ ಮನಸ್ಸಾದರೂ ಸಮಯದ ಅಭಾವದಿಂದ ಹಾಗೆ ಮಾಡಲಾಗಲಿಲ್ಲ. ೪ ವರ್ಷದ ಹಿಂದೆ ನೀರೆಂದರೆ ಭಯ ಬೀಳುತ್ತಿದ್ದ ಅಮಿತ್ ಈಗೆಲ್ಲ ನೀರು ಕಂಡರೆ ಸಾಕು ಅಪ್ಪಾ ಈಜೋಣ ಎನ್ನುವುದು ಮುಗುಳ್ನಗೆ ತರಿಸುತ್ತದೆ

ಅವರಿವರನ್ನು ಕೇಳಿಕೊಂಡು ನಾವು ಮೂಕನ ಮನೆ ಜಲಪಾತದ ಕಡೆ ತೆರಳುತ್ತಿದ್ದಾಗ ಅತ್ಯಂತ ಇಳಿಜಾರಿನಲ್ಲಿ ವಾಹನ ಇಳಿಸಬಾರದಿತ್ತು ಆದರೆ ಗಮನಿಸದೆ ಇಳಿಸಿದಾಗ ಅರಿವಾದದ್ದು ಆಗಿ ಹೋದ ತಪ್ಪು. ಸುಮಾರು ೧೦೦ ಮೀಟರ್ಗಳಿಗೂ ಹೆಚ್ಚು ಉದ್ದವಿರುವ ಒಂದೆ ದಿಬ್ಬವನ್ನು ಇಳಿಸಲು ಆರಂಭಿಸಿದ್ದೆ ಮಧ್ಯೆ ಕಾರು ಕೊರಕಲಿಗೆ ಇಳಿದಿತ್ತು. ಹೆಂಡತಿ ಮತ್ತು ಮಗನ ಮುಖದಲ್ಲಿ ಆತಂಕ ಮಡುಗಟ್ಟುತ್ತಿತ್ತು. ಗಾಭರಿಯಾಗಲಿಲ್ಲ ಘಟಿಸಿದ ಮೇಲೆ ಯೋಚ್ನೆ ಮಾಡಿ ಪ್ರಯೋಜನವಿಲ್ಲ. ಮುಂದೆ ಏನ್ಮಾಡ್ಬೇಕು ಎನ್ನುವುದನ್ನು ಯೋಚಿಸುತ್ತಾ ಕಾರಿನ ಜ್ಯಾಕ್ನಿಂದ ಚಕ್ರವನ್ನು ಮೇಲೆತ್ತಿ ಚಕ್ರದ ಕೆಳಗೆ ಕಲ್ಲಿಟ್ಟು ವಾಹನವನ್ನು ದಾರಿಗೆ ತಂದು ಕೆಳಗಿಳಿಸಿದೆ. ಏಕೆಂದರೆ ಮತ್ತೆ ಹಿಂತಿರುಗುವ ಹಾಗಿರಲಿಲ್ಲ. ಕೆಳಗೆ ವಾಹನ ನಿಲ್ಲಿಸಿ ಅಲ್ಲೆ ಹಿಂದಿನ ದಿನ ಕಳೆದು ಹೋಗಿದ್ದ ದನ ಹುಡುಕಿ ಕೊಂಡು ಹಿಂತಿರುಗುತ್ತಿದ್ದ ವ್ಯಕ್ತಿ ವಿಶ್ವನಾಥ್ ಜಲಪಾತದೆಡೆಗೆ ಹೋಗಲು ಸಹಾಯ ಕೇಳಿದಾಗ ಬನ್ನಿ ನಾನೇ ಕರ್ಕೊಂಡು ಹೋಗ್ತೀನಿ ಎಂದು ಸಿಕ್ಕಿದ್ದ ಎತ್ತನ್ನು ಮೇಯಲು ಬಿಟ್ಟು ನಮ್ಮೊಡನೆ ಹೆಜ್ಜೆ ಹಾಕಿದರು. ಮುಕ್ತಿಹೊಳೆಯ ದಂಡೆಯಲ್ಲೆ ಮಳೆಯಿಂದ ಒದ್ದೆಯಾಗಿ ಜಾರುತ್ತಿದ್ದ ಬಂಡೆಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಬ್ಬರಿಗೆ ಒಬ್ಬರು ಆಸರೆಯಾಗಿ ಜಲಪಾತದೆಡೆಗೆ ತೆರಳಿದೆವು. ಕಾಲಲ್ಲಿ ಜಿಗಣೆಗಳು ಹಿಡಿದರೂ ( ಅಭ್ಯಾಸವಾಗಿ ಹೋಗಿದೆ) ತಲೆ ಕೆಡಿಸಿಕೊಳ್ಳದೆ ೧೫ ಅಡಿಗಳಷ್ಟೆ ದೂರದಲ್ಲಿದ್ದ ಜಲಪಾತದ ಜಾಗಕ್ಕೆ ತಲುಪಿದೆವು. ೧೫-೨೦ ಅಡಿಯಿಂದ ಧುಮುಕುವ ಜಲಪಾತ ನದಿಪಾತ್ರದ ಉದ್ದಕ್ಕೂ ಹರಡಿದೆ. ನಿಜಕ್ಕೂ ನಾನು ಅಂತರ್ಜಾಲದಲ್ಲಿ ನೋಡಿ ಹೊರಟು ಬಂದಿದ್ದಕ್ಕೂ ಇದಕ್ಕೂ ಏನೂ ಸ್ವಾಮ್ಯವಿರಲಿಲ್ಲ. ಆದರೂ ಸಕ್ಕತ್ತಾಗಿರುವ ಜಲಪಾತ. ಬೇಸಿಗೆಯಲ್ಲಿ ಜಲಪಾತದಡಿಗೆ ಹೋಗಬಹುದು ಎಂದು ವಿಶ್ವನಾಥ್ ತಿಳಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಈ ಜಲಪಾತ ಮುಳುಗಡೆಯಾಗಲಿದೆ ಎಂಬ ವಿಷಯ ನೋವನ್ನುಂಟು ಮಾಡಿತು. ಅಭಿವೃದ್ಧಿಯೆಂಬ ಹೆಮ್ಮಾರಿಗೆ ಅದಿನ್ನೆಷ್ಟು ಪ್ರಕೃತಿ ಬಲಿಯಾಗಬೇಕಿದೆಯೋ?

ಪತ್ನಿ ಮತ್ತು ಪುತ್ರನನ್ನು ಜಲಪಾತವುಂಟಾಗುತ್ತಿದ್ದ ಸ್ಥಳದಲ್ಲೇ ಬಿಟ್ಟು, ನಾನು ಮತ್ತು ವಿಶ್ವನಾಥ್ ಇನ್ನೂ ಕೆಳಕ್ಕಿಳಿದು ಜಲಪಾತದ ಮುಂದೆ ನಿಂತೆವು. ಒಂದೆರಡು ಚಿತ್ರ ತೆಗೆಯುವಷ್ಟರಲ್ಲಿ ಕತ್ತಲಾಗುವಂತೆ ಮೋಡಗಳು ಮುಸುಕಿಕೊಳ್ಳಲಾರಂಭಿಸಿದವು. ಮಳೆ ಬರುವಷ್ಟರಲ್ಲಿ ವಾಹನ ಸೇರಿಕೊಳ್ಳುವ ಸಲುವಾಗಿ ಹಿಂತಿರಿಗುವಾಗ ೭-೮ ಜನ ಹುಡುಗರ ಗುಂಪು ಎದುರಾಯಿತು. ಉಭಯಕುಶಲೋಪರಿಯ ನಂತರ ಅವರಿಗೆ ನನ್ನ ಕಾರು ಮೇಲೆ ಹತ್ತದಿದ್ದರೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡು ಕಾರಿನತ್ತ ತೆರಳಿದೆ. ಈಗ ಇತ್ತು ಸರ್ಕಸ್. ಸುಮಾರು ೫೦ ಮೀಟರ್ ನಂತರ ಸಿಕ್ಕ ಆ ದಿಬ್ಬವನ್ನು ಹತ್ತಲಾರದೆ ನನ್ನ ವಾಹನ ಅಡ್ಡ ಸಿಕ್ಕಿ ಹಾಕಿ ಕೊಂಡಿತು. ಹಿಂಬದಿಯ ಚಕ್ರ ಕಲ್ಲುಗಳನ್ನಿಡುತ್ತಿದ್ದ ಅಮಿತ್ ಮತ್ತು ಚಿತ್ರ ಮುಖದಲ್ಲಿ ಗಾಭರಿ ಸ್ಪಷ್ಟವಾಗಿತ್ತು. ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿ ಮತ್ತೆ ಮತ್ತೆ ಪ್ರಯತ್ನಿಸಿದೆ. ಈಗಾಗಲೆ ಮಳೆ ಭೋರೆಂದು ಸುರಿಯುತ್ತಾ ನಮ್ಮ ಪ್ರಯತ್ನ ಮತ್ತಷ್ಟು ಕ್ಲಿಷ್ಟವಾಗಿಸಿತು.ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಕೊನೆಗೊಮ್ಮೆ ಆ ಹುಡುಗರನ್ನು ಕರೆ ತರಲು ಚಿತ್ರ ನಡೆದಳು. ಅವರು ಬರುವಷ್ಟರಲ್ಲಿ ಮತ್ತಷ್ಟು ಪ್ರಯತ್ನಿಸಿದ್ದರಿಂದ ಕಾರಿನ ಬ್ರೇಕುಗಳು ಮತ್ತು ಕ್ಲಚ್ ವಾಸನೆ ಬರಲು ಆರಂಭಿಸಿತು. ಆ ಸಮಯಕ್ಕೆ ನಡೆದು ಬಂದ ಹುಡುಗರು ನೀವು ಕೆಳಕ್ಕಿಳಿಯಿರಿ ಎಂದು ತಿಳಿಸಿ ಅವರಲ್ಲೊಬ್ಬ ಚಾಲಕನಾಗಿ ಮಿಕ್ಕವರು ಹಿಂದಿನಿಂದ ತಳ್ಳಿ ಮೇಲಕ್ಕೆ ತಂದಿತ್ತರು. ಅವರ ಈ ಸಹಾಯ ಅವಿಸ್ಮರಣೀಯ. ಮೇಲೆ ತಳ್ಳುವ ಭರದಲ್ಲಿ ಆ ಹುಡುಗರಲ್ಲೊಬ್ಬರ ಚಪ್ಪಲಿ ಕಿತ್ತುಹೋಯಿತು. ಪಾಪ ಆತ ಬರಿಗಾಲಿನಲ್ಲಿ ಊರು ಸೇರಬೇಕಾದದ್ದು ಅದೂ ನನ್ನಿಂದ ತುಂಬಾ ಬೇಜಾರಿನ ಸಂಗತಿ.

ಮೇಲಕ್ಕೆ ಬಂದ ಮೇಲೆ ಚಾಲಕನ ಸ್ಥಾನದಲ್ಲಿದ್ದ ಆ ವ್ಯಕ್ತಿ ಸಾರ್, ಕ್ಲಚ್ ಮತ್ತು ಬ್ರೇಕ್ ಬಿಸಿಯಾಗಿ ತುಂಬಾ ವಾಸನೆ ಬರ್ತಾ ಇದೆ ಟೈರ್ಗಳಂತೂ ೫೦೦೦ ಕಿ ಮೀ ಓಡುವಷ್ಟು ಸವೆದಿವೆ ಎಲ್ಲಾದರೂ ಒಂದರ್ಧ ಗಂಟೆ ವಾಹನದ ಬಿಸಿ ಆರುವವರೆಗೆ ನಿಂತು ಹೋಗಿ ಎಂದು ಸಲಹೆಯಿತ್ತರು ಈಗಾಗಲೆ ಸಮಯ ೪ ಗಂಟೆಯಾಗಿತ್ತು. ನಾವು ಇಂದೆ ಬೆಂಗಳೂರು ತಲುಪ ಬೇಕಿತ್ತು. ಮಳೆ ಮಾತ್ರ ಭೋರೆಂದು ಸುರಿದೇ ಸುರಿಯುತ್ತಿತ್ತು. ಅಲ್ಲೊಂದು ಕೈಮರದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ತನ್ನನ್ನು ಕರೆದೊಯ್ಯುವಂತೆ ವಿನಂತಿಸಿ ಕೊಂಡವನನ್ನು ಕೂರಿಸಿಕೊಂಡು ಹೊರಟೆ. ಆತನ ೩೦ ಎಕರೆ ಏಲಕ್ಕಿ ತೋಟ ಮುಳುಗಡೆಯಾಗುತ್ತಿದೆ ಎಂದು ದುಃಖಿಸಿದರು. ನಾವು ಆದಷ್ಟು ಬೇಗ ಬೆಂಗಳೂರು ತಲುಪ ಬೇಕಿತ್ತು ಆದರೂ ಸಹಾಯ ಮಾಡಿದ ಆ ಚಾಲಕನ ಸಲಹೆಯಂತೆ ೧೦ ನಿಮಿಷಗಳ ವಿಶ್ರಾಂತಿಯ ನಂತರ ವಾಸನೆ ಸ್ವಲ್ಪ ಕಡಿಮೆಯಾದ ಮೇಲೆ ಸುರಿಯುವ ಮಳೆಯಲ್ಲೆ ಹೊರಟೆವು ಆತನ ಊರಿನಲ್ಲಿ ಆಗಂತುಕನನ್ನಿಳಿಸಿ ಸಕಲೇಶಪುರ ಸೇರಿ ಊಟಕ್ಕೆ ಕುಳಿತಾಗ ಸಮಯ ೫ ಗಂಟೆ.

ಊಟ ಮಾಡಿ ೫.೩೦ ಕ್ಕೆ ಸಕಲೇಶಪುರದಿಂದ ಹೊರಟು ಹಿರೀಸಾವೆ ಬರುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತು. ಕತ್ತಲಾದ ನಂತರ ವಾಹನ ಚಲನೆ ಕಷ್ಠವಾಗತೊಡಗುತ್ತದೆ. ಎದುರಿಗೆ ಬರುತ್ತಿರುವ ವಾಹನಗಳ ದೀಪ ಅದೆಷ್ಟು ಪ್ರಖರವಾಗಿ ಕ್ರೂರವಾಗಿ ಕಣ್ಣು ಕುಕ್ಕುತ್ತದೆಯೆಂದರೆ, ಇಡೀ ದಿನ ಕಣ್ಣುಗಳ ಮೂಲಕ ಮನಸ್ಸಿಗೆ ತುಂಬಿಕೊಂಡ ಆ ಪ್ರಕೃತಿ ಸೌಂದರ್ಯ ಈ ದೀಪಗಳ ಪ್ರಖರತೆಯಿಂದ ಆ ಕಣ್ಣಿನ ಮೂಲಕವೆ ಪ್ರವೇಶಿಸಿ ಮೆದುಳಿನಲ್ಲಿರುವ ಆ ದೃಶ್ಯಗಳನ್ನು EPROM ಅಳಿಸಿದಂತೆ ಅಳಿಸಿಬಿಡುತ್ತದಯೇನೋ ಎನಿಸಿ ಬಿಡುತ್ತದೆ. ಬೆಳ್ಳೂರುಕ್ರಾಸ್, ಯಡಿಯೂರು ಕುಣಿಗಲ್ ಮಾರ್ಗವಾಗಿ ಬೆಂಗಳೂರು ಸೇರಿದಾಗ ರಾತ್ರಿ ೯.೩೦.

ಚಿತ್ರಗಳು

Thursday, August 6, 2009

ಭಾರತದ ಪರಮವೀರರು: ನಾಯಕ್ ಜಾದೂನಾಥ್ ಸಿಂಗ್


೨೧ನೆ ನವೆಂಬರ್ ೧೯೧೬ ರಲ್ಲಿ ಉತ್ತರ ಪ್ರದೇಶದ ಷಹಜಹಾಂಪುರದಲ್ಲಿ ಜನನ. ೨೧ನೆ ನವೆಂಬರ್ ೧೯೪೧ ರಲ್ಲಿ ಸೈನ್ಯದಲ್ಲಿ ೧ನೆ ರಜಪೂತ್ ಗೆ ಸೇರ್ಪಡೆ.
೧೯೪೭ರ ಛಳಿಗಾಲದಲ್ಲಿ ನಡೆದ ಭಾರತದ ಮೇಲಿನ ಆಕ್ರಮಣದಲ್ಲಿ ನೌಷೇರವನ್ನು ಉಳಿಸಲು ಪ್ರಾಣ ತೆತ್ತ ವೀರ.

ಡಿಸೆಂಬರ್ ೨೪ರಂದು ಝಂಗಾರ್ ಪಾಕಿಸ್ತಾನಿ ದಾಳಿಕೋರರ ವಶವಾಯಿತು. ಇದು ಮುಂದಿನ ಆಕ್ರಮಣಕ್ಕೆ ಪಾಕಿಸ್ತಾನಿ ಸೈನಿಕರಿಗೆ ಆಯಕಟ್ಟಿನ ಜಾಗವಾಗಿ ಪರಿಣಮಿಸಿತು. ಮಿರ್ಪುರದಿಂದ ಪೂಂಛ್ ವರೆಗಿನ ಎಲ್ಲ ಸಂಪರ್ಕ ಕೇಂದ್ರಗಳು ಪಾಕಿಸ್ತಾನದ ವಶದಲ್ಲಿದ್ದದ್ದು ಅವರಿಗೆ ಇನ್ನಷ್ಟು ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ನೌಷೇರವನ್ನು ಆಕ್ರಮಿಸುವ ಯೋಜನೆ ಪಾಕಿಸ್ತಾನಿಯರದ್ದಾಗಿತ್ತು. ಇದರ ಸುಳಿವು ದೊರೆತ ಭಾರತೀಯ ಸೈನ್ಯ ನೌಷೇರವನ್ನು ಉಳಿಸಿಕೊಳ್ಳುವ ಸಲುವಾಗಿ ಜನವರಿ ೧೯೪೮ರಲ್ಲಿ ಶತ್ರುವನ್ನು ತಡೆಯಲು ಮುಂದಾಗಿ ನೌಷೇರಾದ ವಾಯುವ್ಯಕ್ಕಿದ್ದ ಕೋಟ್ ಹಳ್ಳಿಯನ್ನು ವಶಪಡಿಸಿಕೊಂಡಿತು. ಯಾವುದೇ ತೆರನಾದ ದಾಳಿಯಿಂದ ನೌಷೇರವನ್ನು ರಕ್ಷಿಸಬೇಕಾಗಿತ್ತು.
ನೌಷೇರಾಕ್ಕೆ ಇರುವ ಎಲ್ಲ ಮಾರ್ಗಗಳಲ್ಲು ಆಯಕಟ್ಟಿನ ಜಾಗಗಳಲ್ಲಿ ಸಣ್ಣ ಸಣ್ಣ ಅಡಗುದಾಣಗಳನ್ನು ನಿರ್ಮಿಸಿ ಕಾವಲು ಹಾಕಲಾಯಿತು. ತೈನ್ಧಾರ್ ಮಾರ್ಗ ನೌಷೇರಾದ ಉತ್ತರಭಾಗಕ್ಕೆ ದಾರಿಯಾಗಿತ್ತು ಆದ್ದರಿಂದ ಇದನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿತ್ತು.

ನೀರಿಕ್ಷಿಸಿದಂತೆ ವೈರಿಗಳ ದಾಳಿ ಫೆಬ್ರವರಿ ೬ರಂದು ಮಂಜುಮುಸುಕಿದ ಮುಂಜಾನೆಯಲ್ಲಿ ತೈನ್ಧಾರ್ ಪ್ರದೇಶದಲ್ಲಿ ಪ್ರಾರಂಭವಾಗಿತ್ತು. ಮದ್ದು ಗುಂಡುಗಳು ಹಾರಾಡತೊಡಗಿದವು. ಶತ್ರು ಈ ಸಣ್ಣ ಅಡಗುದಾಣ ಮತ್ತು ತಡೆಯ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಲಾರಂಭಿಸಿದ. ಅದೆಷ್ಟು ಪ್ರಖರ ದಾಳಿಯೆಂದರೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಗುಂಡು ಮತ್ತು ಸಣ್ಣ ಫಿರಂಗಿಗಳ ಶಬ್ದದಿಂದ ಅನುರಣಿಸಿತು. ಇದರ ಮಧ್ಯದಲ್ಲಿಯೆ ತೈನ್ಧಾರ್ ನ ತುತ್ತ ತುದಿಯ ಮೇಲಿದ್ದ ಭಾರತೀಯ ಕಾವಲಿನ ಮೇಲೂ ದಾಳಿ ನಡೆಯಿತು. ಕತ್ತಲು ಕರಗಿ ಬೆಳಕು ಹರಿಯುವ ಸಮಯದಲ್ಲಿ ಶತ್ರು ಭಾರತೀಯ ಸೈನಿಕರ ಹತ್ತಿರಕ್ಕೆ ಬಂದು ನಿಂತಿದ್ದ. ಸೂರ್ಯನ ಬೆಳಕಿನ ಬದಲು ಭಾರತೀಯ ಸೈನಿಕರನ್ನು ಶತ್ರುವಿನ ಗುಂಡಿನ ಮೊರೆತ ಸ್ವಾಗತಿಸಿತು. ನೂರಾರು ಪಾಕಿ ಸೈನಿಕರು ನೌಷೇರಾವನ್ನು ಆಕ್ರಮಿಸುವ ಸಲುವಾಗಿ ಭಾರತೀಯ ಅಡಗುತಾಣಗಳ ಮೇಲೆ ಸತತವಾಗಿ ದಾಳಿಯಿಡುತ್ತಾ ಮುನ್ನುಗ್ಗುತ್ತಿದ್ದರು.
೨ನೆ ಅಡಗುತಾಣದಲ್ಲಿದ್ದ ನಾಯಕ್ ಜಾದೂನಾಥ್ ಸಿಂಗ್ ಅತ್ಯಂತ ಆಯಕಟ್ಟಿನ ತಾಣದ ಜವಾಬ್ದಾರಿ ಹೊತ್ತಿದ್ದರು ಈ ಅಡಗುತಾಣ ವಶವಾದರೆ ಶತ್ರು ಸುಲಭವಾಗಿ ನೌಷೇರಾಕ್ಕೆ ನಡೆದು ಬಿಡುತ್ತಿದ್ದ. ಈ ಅಪಾಯವನ್ನರಿತ ಜಾದೂನಾಥ್ ಸಿಂಗ್ ಅವರ ೯ ಜನರ ತಂಡ ಪಾಕಿಸ್ತಾನದ ನೂರಾರು ಸೈನಿಕರ ಸಂಖ್ಯೆಗೆ ಹೋಲಿಸಿದರೆ ಅತ್ಯಂತ ಪುಟ್ಟ ತಂಡ ಅದ್ಯಾವ ಪರಿ ಶತ್ರುಗಳ ಮೇಲೆ ಎಗರಿ ಬಿತ್ತೆಂದರೆ ತಮಗಿಂತ ಸಂಖ್ಯೆಯಲ್ಲಿ ೫-೬ ಪಟ್ಟು ಹೆಚ್ಚು ಜನರಿದ್ದ ಶತ್ರುಪಡೆ ಅನೀರಿಕ್ಷಿತ ಪ್ರತಿದಾಳಿಗೆ ಕಕ್ಕಾಬಿಕ್ಕಿಯಾಗಿ ದಿಕ್ಕಾ ಪಾಲಾಗಿ ಹೋಯಿತು. ಒಂದಾದ ಮೇಲೊಂದರಂತೆ ಅಲೆ ಅಲೆಯಾಗಿ ದಾಳಿ ಮಾಡುವ ಹೊಂಚು ಹಾಕಿದ್ದ ಪಾಕಿಸ್ತಾನಿ ಸೈನಿಕರು ೨ನೆ ದಾಳಿಗೆ ಸಿದ್ದರಾಗುತ್ತಿದ್ದರು. ಸಮರ್ಥ ನಾಯಕತ್ವ ಮತ್ತು ಮುಂಚೂಣಿಯಲ್ಲಿ ನಿಂತು ಕೆಚ್ಚೆದೆಯಿಂದ ಕಾದಾಡುವ ಜಾದೂನಾಥ್ ಸಿಂಗ್ ಧೈರ್ಯ ಸಾಹಸಗಳು ಶತ್ರುವಿನ ತಲೆ ಕೆಡಿಸಿತ್ತು.
ಮೊದಲನೆ ದಾಳಿಯಲ್ಲಿ ಗಾಯಾಳುವಾದ ೪ ಜನ ಸೈನಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿ, ಚದುರಿಹೋಗಿದ್ದ ತನ್ನವರನ್ನು ಒಟ್ಟು ಗೂಡಿಸಿ ಮತ್ತೊಂದು ದಾಳಿಯನ್ನು ತಡೆಯಲು ಸನ್ನದ್ದವಾಯಿತು ರಣಧೀರರ ಪಡೆ. ಈ ಬಾರಿಯಿದ್ದದ್ದು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.
೨ನೆ ದಾಳಿ ಆರಂಭವಾಯಿತು. ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಆದರೆ ಅಸಾಧಾರಣ ಧೈರ್ಯ ಕೆಚ್ಚೆದೆ ದೇಶಪ್ರೇಮವೆ ಸೊತ್ತಾಗಿದ್ದ ಚಿಕ್ಕ ತುಕಡಿ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಶತ್ರು ಶಿಬಿರದ ಬಾಗಿಲಲ್ಲೆ ಬಂದು ನಿಂತಿದ್ದ ಈ ಬಾರಿ ತಾನೂ ಸೇರಿದಂತೆ ಎಲ್ಲರೂ ಗಾಯಗೊಂಡರೂ ತನ್ನ ಸಹ ಸೈನಿಕರೊಬ್ಬರ ಕೆಳಗೆ ಬಿದ್ದಿದ್ದ ಬ್ರೆನ್ ಗನ್ನೆತ್ತಿಕೊಂಡು ತೆರೆದ ಮೈದಾನದಲ್ಲೆ ಶತ್ರುವನ್ನು ಎದುರಿಸುವುದು ಸಾಧ್ಯವಾಗುವುದು ಎಂಟೆದೆಯಿರುವವರಿಗೆ ಮಾತ್ರ. ಜಾದೂನಾಥ್ ಸಿಂಗ್ ಈ ಆಕ್ರಮಣ ಅವರ ಸಹೋದ್ಯೋಗಿಗಳಲ್ಲೂ ಹುರುಪು ತಂದಿತು. ಈ ಬಾರಿ ಜಯ ತನ್ನದೆ ಎಂದು ನಿಶ್ಚಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಕೊನೆಯ ಘಳಿಗೆಯಲ್ಲಿನ ಈ ಪರಾಕ್ರಮಿಯನ್ನು ಎದುರಿಸಲಾಗದೆ ಓಡಿಹೋಗಬೇಕಾಯಿತು.. ಹಾಗಾಗಿ ಇವರಿದ್ದ ನೌಷೇರದ ದಾರಿ ೨ನೆ ದಾಳಿಗೆ ಸಿಕ್ಕಿರೂ ಉಳಿದು ಕೊಂಡಿತು. ಯಾವುದು ವಿಜಯವಾಗಬೇಕಿತ್ತೋ ಅದು ಪರಾಜಯವಾಗಿ ಅವರನ್ನು ಹಿಂಬಾಲಿಸಿತ್ತು.

೩ ನೆ ದಾಳಿಯ ಹೊತ್ತಿಗೆ ಜಾದೂನಾಥ್ ಸಿಂಗ್ ತಂಡ ಸಂಪೂರ್ಣವಾಗಿ ಗಾಯಾಳುಗಳ ತಂಡವಾಗಿತ್ತು. ಉಳಿದಿದ್ದವರು ಮೂರು ಮತ್ತೊಂದು ಜನವಾಗಿದ್ದರು. ಈ ಬಾರಿ ಕಡೆಯದೆಂಬಂತೆ ಶತ್ರು ತನ್ನೆಲ್ಲ ಬಲವನ್ನು ಹೆಚ್ಚಿಸಿಕೊಂಡು ದಾಳಿಯಿಟ್ಟಿದ್ದ. ಜಾದೂನಾಥ್ ಒಬ್ಬನೆ ಈಗ ಉಳಿದಿದ್ದು. ತನ್ನ ಬಿಡಾರವನ್ನು ನೌಷೇರಾದ ದಾರಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಛಲದಿಂದ ಸ್ಟೆನ್ ಗನ್ ಕೈಗೆತ್ತಿಕೊಂಡರು. ಶತ್ರುವು ಬರುವ ಮೊದಲೆ ಅವರ ದಾರಿಗೆ ಅಡ್ಡಲಾಗಿ ನಿಂತು ಗಾಯಗೊಂಡಿದ್ದರೂ ಏಕಾಂಗಿಯಾಗಿ ತಾವೆ ಅವರನ್ನು ಅಡ್ಡಗಟ್ಟಿದರು..ಇವರ ಈ ದಾಳಿಯ ಪರಿಗೆ ಹತ್ತಾರು ಜನರಿದ್ದ ಶತ್ರು ಸೈನಿಕರು ತತ್ತರಿಸಿಹೋದರು. ಅಳಿದುಳಿದವರಿಂದ ಇಂತಹ ಪ್ರತಿದಾಳಿಯನ್ನು ನಿರೀಕ್ಷಿಸಿರದ ಮತ್ತು ಶತ್ರುವನ್ನು ಸರಿಯಾಗಿ ಅಂದಾಜಿಸದ ಪಾಕಿ ಸೈನಿಕರು ಈ ಬಾರಿಯು ಸಹ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗ ಬೇಕಾಯಿತು. ಈ ಅಂತಿಮ ನಿರ್ಣಾಯಕ ಹೋರಾಟದಲ್ಲಿ ಒಂದು ಗುಂಡು ಜಾದೂನಾಥ್ ಸಿಂಗ್ ರ ದೇಶಪ್ರೇಮವನ್ನು ಪರೀಕ್ಷಿಸಲು ಹೃದಯವನ್ನು ಹೊಕ್ಕರೆ ಇನ್ನೊಂದು ತಲೆ ಸೀಳಿತ್ತು.

ಆದರೆ ಜಾದೂನಾಥ್ ಸಿಂಗ್ ಅವರ ಬಂದೂಕಿನಿಂದ ಹಾರಿದ ಒಂದೊಂದು ಗುಂಡುಗಳು ಪಾಕಿಸೈನಿಕರನ್ನು ನೌಷೇರದಿಂದ ಒಂದೊಂದು ಮೈಲು ದೂರ ಕಳುಹಿಸಿತ್ತು.

ನಾಯಕ್ ಜಾದೂನಾಥರ ಈ ಅಪ್ರತಿಮ ಸಾಹಸಕ್ಕೆ ಪರಮ ವೀರಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.



ಆಧಾರ: ಸಂಗ್ರಹಿತ ಬರಹಗಳು
ಚಿತ್ರಕೃಪೆ: ಭಾರತೀಯ ಸೈನ್ಯದ ಅಂತರ್ಜಾಲ ಪುಟ

Friday, July 31, 2009

೧ ದಿನದ ಜೋಗ್ ಪ್ರವಾಸ

ದಟ್ಸ್ ಕನ್ನಡ ದಲ್ಲಿ ಹೆಚ್ಚಾಗಿ ಬರೆಯುತ್ತಿದ್ದ ತಳವಾಟದ ಪತ್ರಕರ್ತ ರಾಘವೇಂದ್ರ ಶರ್ಮ ಅವರ ಪರಿಚಯವಾಗಿದ್ದಕ್ಕೆ ಅಂತರ್ಜಾಲಕ್ಕೊಂದು ಧನ್ಯವಾದ ಹೇಳಲೇಬೇಕು. ಅವರ ಜೋಗಕ್ಕೆ ಬನ್ನಿ ಎಂಬ ಲೇಖನ ಓದಿ ಸಂಪರ್ಕಿಸಿದವನಿಗೆ ಅವರ ಮಾತುಗಳು ಆತ್ಮೀಯತೆ ಉಂಟು ಮಾಡಿದ್ದವು. ಸಾರ್, ಲಿಂಗನಮಕ್ಕಿ ತುಂಬಿ ಅಣೆಕಟ್ಟಿನಿಂದ ನೀರು ಹೊರಬಿಟ್ಟ ತಕ್ಷಣ ನನಗೆ ತಿಳಿಸಿ ತಕ್ಷಣ ಹೊರಟು ಬರ್ತೇನೆ ಎಂದವನಿಗೆ ಶರ್ಮ ನಿರಾಶೆ ಮಾಡಲಿಲ್ಲ. ೧೯೮೮ರಲ್ಲಿ ಒಮ್ಮೆ ಕಾಲೇಜಿನಿಂದ ಹೀಗೆ ಅಣೆಕಟ್ಟಿನಿಂದ ನೀರು ಬಿಟ್ಟಾಗ ಜೋಗಿಗೆ ಹೋಗಿದ್ದರಿಂದ ಜೋಗದ ಆ ವೈಭವ ಕಣ್ಣಿನಿಂದ ಮರೆಯಾಗಿರಲಿಲ್ಲ.

೦೮/೦೮/೨೦೦೭ ರಂದು ಶರ್ಮರಿಂದ ರಾತ್ರಿ ೯ ಗಂಟೆಯ ಸಮಯಕ್ಕೆ ದೂರವಾಣಿ ಕರೆಬಂತು ಅಣೆಕಟ್ಟೆಯ ಬಾಗಿಲುಗಳು ತೆರೆಯುತ್ತಿವೆ ಹೊರಟು ಬನ್ನಿ ಎಂಬ ಸಂದೇಶ. ಸರಿ ರಾತ್ರಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುವುದು ಕಷ್ಟಕರ. ಬರುವ ಇಂಗಿತ ವ್ಯಕ್ತಪಡಿಸಿದ ಪತ್ನಿಗೆ ಸಾಧ್ಯವಿಲ್ಲವೆಂದು ತಿಳಿಸಿ, ಹೇಗೆ ಹೋಗೋದು ಎಂದು ಯೋಚಿಸುತ್ತಿದ್ದವನಿಗೆ ಸಹಾಯ ಮಾಡಿದ ಪತ್ನಿಗೊಂದು ಧನ್ಯ್ವಾದ ಅರ್ಪಿಸದಿದ್ದರೆ ಜೊತೆಯಲ್ಲಿ ಕರೆದೊಯ್ಯದಿದ್ದಕ್ಕೆ ಕೋಪಿಸಿಕೊಂಡಿದ್ದ ಪತ್ನಿಯ ಕೋಪಕ್ಕೆ ತುಪ್ಪ ಸುರಿದಂತೆಯೆ ಸೈ. ೧೧.೩೦ಕ್ಕೆ ಹೊರಡುವ ಶಿವಮೊಗ್ಗೆಯ ರೈಲಿಗೆ ಬಟ್ಟೆ ಚೀಲಕ್ಕೆ ತುಂಬಿಕೊಂಡವನು ಮನೆಯವರಿಗೆಲ್ಲ ಕೈಬೀಸಿ ಬಸ್ ನಿಲ್ದಾಣಕ್ಕೆ ನಡೆದೆ. ಬಿ.ಇ.ಎಲ್ ವೃತ್ತದಲ್ಲಿ ಬಸ್ಸಿನಿಂದಿಳಿದು ಗೊರಗುಂಟೆ ಪಾಳ್ಯದವರೆಗೆ ಖಾಸಗಿ ವಾಹನವೊಂದರಲ್ಲಿ ಬಂದಿಳಿದಾಗ ರಾತ್ರಿ ೧೦.೩೦. ಟಿಕೆಟ್ ಕಾದಿರಿಸುವುದು ಸಾಧ್ಯವಿಲ್ಲ ಎಂದು ತಿಳಿದು ಬಂತು. ಸರಿಯಾಗಿ ೧೧.೪೫ ಕ್ಕೆ ರೈಲು ನಿಲ್ದಾಣಕ್ಕೆ ಬಂತು. ಟಿಕೆಟ್ ಕಾದಿರಿಸಿರಲಿಲ್ಲವಾದ್ದರಿಂದ ಸಾಮಾನ್ಯ ಬೋಗಿಗೆ ನುಗ್ಗಿದೆ. ಎಲ್ಲ ಆಸನಗಳೂ ಭರ್ತಿಯಾಗಿದ್ದವು. ಟಿ.ಟಿ ಯನ್ನು ಹುಡುಕಿ ಮಲಗಲು ಜಾಗ ಸಿಕ್ಕಾಗ ರೈಲು ತುಮಕೂರು ತಲುಪಿತ್ತು. ಭದ್ರಾವತಿ ಬಳಿ ಬಂದಾಗ ಎಚ್ಚರಗೊಂಡೆ ಸಮಯ ೫ ಗಂಟೆಯಿರಬೇಕು.

ರೈಲಿನ ಹಳಿಯ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳಗಳು ಬಿದ್ದಿದ್ದ ಮಳೆಯ ಪ್ರಮಾಣದ ಸಂಕೇತವಾಗಿದ್ದವು. ಶಿವಮೊಗ್ಗ ನಿಲ್ದಾಣ ತಲುಪಿದಾಗ ೬ ಗಂಟೆ. ನಿಲ್ದಾಣದಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ಹೊರಗೆ ನಿಂತಿದ್ದ ಬಸ್ ಹಿಡಿದೆ. ಸೀಟ್ ಸಿಗುವ ಲಕ್ಷಣವಿರಲಿ ಒಳಗೆ ಹೋಗಲೂ ಜಾಗವಿರದ ಬಸ್ಸಿನಲ್ಲಿ ಹೇಗೋ ತೂರಿಕೊಂಡು ಒಳಸೇರಿದೆ. ೮ ಗಂಟೆಗೆ ಸಾಗರ ತಲುಪಿಸಿದ ಪುಣ್ಯಾತ್ಮ. ನೇರವಾಗಿ ಅಕ್ಕನ ಮನೆಗೆ ನಡೆದೆ. ಸ್ನಾನ ಮಾಡಿ ಅಕ್ಕ ಕೊಟ್ಟ ತಿಂಡಿ ತಿಂದು. ಸೀದಾ ಬಸ್ ನಿಲ್ದಾಣಕ್ಕೆ ಬಂದು ತಳವಾಟದ ಕಡೆಯ ಬಸ್ ಹತ್ತಿದೆ. ೧೦ ನಿಮಿಷದಲ್ಲಿ ತಳವಾಟದಲ್ಲಿಳಿದಿದ್ದೆ. ಬೈಕಿನಲ್ಲಿ ಬಂದ ಶರ್ಮ ಪರಿಚಯದ ನಂತರ ಅವರ ಬೈಕಿನಲ್ಲಿ ಕುಳಿತವನಿಗೆ ಜೀವ ಬಾಯಿಗೆ ಬರುವುದೊಂದು ಬಾಕಿ ಅವರು ಆ ಜಾರುವ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಪರಿ ಆ ರೀತಿಯಿತ್ತು. ಇವರೇನಾದ್ರು ಮುಂಚೆ ಯಾವ್ದಾದ್ರೂ ಬೈಕ್ ರೇಸ್ಗೆ ಹೋಗಿದ್ರೇನಪ್ಪ ಅನ್ಸಿತ್ತು. ೨ ನಿಮಿಷದಲ್ಲಿ ಬೈಕ್ ಮನೆ ಮುಂದೆ ನಿಂತಿತ್ತು, ನನಗೆ ಹೋಗುತ್ತಿದ್ದ ಜೀವ ಮರಳಿ ಬಂದಿತ್ತು. ವಾವ್ ಎಂತಹ ಸುಂದರ ಪರಿಸರದ ಮನೆ ಅಂತೀರಿ. ಯಾರಾದ್ರು ಲೇಖಕರು ಬರೆಯಲಿಕ್ಕೆ ಕುಳಿತರೆ ಆ ಮನೆಯ ಬಗ್ಗೆ ಒಂದು ಪುಸ್ತಕ ಬರೆಯಬಹುದೇನೊ? ನನ್ನನ್ನು ಅತಿಯಾಗಿ ಸೆಳೆದದ್ದು ಕೊಟ್ಟಿಗೆಯಲ್ಲಿದ್ದ ಹಸುವಿನ ಕರು.

ಸ್ನಾನ ಸಂಧ್ಯಾವಂದನೆ ಮುಗಿಸಿದ ಶರ್ಮರೊಡನೆ ಮತ್ತೊಂದು ಸುತ್ತಿನ ತಿಂಡಿ. ಶರ್ಮ ಅವರ ಮಗ, ಶರ್ಮ ಅವರ ಅಣ್ಣನ ಮಗಳು ಮತ್ತು ನನ್ನನ್ನು ಹೊತ್ತ ಮಾರುತಿ ಓಮ್ನಿ ಜೋಗಿನ ದಾರಿ ಹಿಡಿಯಿತು. ಚೈನಾ ಗೇಟ್ ಬಳಿ ಇನ್ನೇನು ಸೇತುವೆ ಯ ಮೇಲ್ಭಾಗವನ್ನು ತಲುಪುವಂತೆ ಹರಿಯುತ್ತಿದ್ದ ಕೆಂಪು ಬಣ್ಣದ ಶರಾವತಿ ಭಯ ಹುಟ್ಟಿಸಿದಳು. ನನಗೋ ಬೇಗ ಜಲಪಾತ ತಲುಪುವ ಕಾತರ. ೧೦ ನಿಮಿಷಗಳಲ್ಲಿ ಜಲಪಾತದೆದುರಿಗೆ ನಿಂತಿದ್ದೆವು. ಅಣೆಕಟ್ಟೆಯ ೮ ಬಾಗಿಲುಗಳನ್ನು ತೆರೆಯಲಾಗಿತ್ತು. ೧೧ ಬಾಗಿಲುಗಳು ತೆರೆದರೆ ಜಲಪಾತದ ೪ ಕವಲುಗಳು ಕೂಡಿಕೊಳ್ಳುತ್ತವೆ ಎಂದು ಶರ್ಮ ಮಾಹಿತಿಯಿತ್ತರು. ನಾನು ಜಲಪಾತದ ಕಡೆ ಗಮನ ನೆಟ್ಟಿದ್ದರೆ ಇದು ಸಾಮಾನ್ಯ ದೃಶ್ಯವಾದ್ದರಿಂದ ಶರ್ಮರ ದೃಷ್ಠಿ ಬೇರೆ ಕಡೆಯಿದ್ದದ್ದು ನನ್ನ ಗಮನಕ್ಕೆ ಬರಲೇ ಇಲ್ಲ. ಹೌದು ಜೋಗದ ವೈಭವವನ್ನು ಅದು ತುಂಬಿ ಹರಿಯುವಾಗಲೇ ಸವಿಯಬೇಕು. ಆಗಾಗ ಮೋಡಗಳು ಜಲಪಾತವನ್ನು ಮರೆಮಾಚುತ್ತಿದ್ದವು ಸ್ವಲ್ಪ ಸಮಯಕ್ಕೆ ಮತ್ತೆ ಗೋಚರಿಸಿದಾಗ ನೆರೆದಿದ್ದ ಜನರಿಂದ ಉತ್ಸಾಹದ ಕೇಕೆ. ಸುಮಾರು ೧ ಗಂಟೆಯ ನಂತರ ಅಲ್ಲಿಂದ ಹೊರಟು ಪ್ರತಿಯೊಂದು ಕವಲುಗಳನ್ನು ನೋಡಲು ಎದುರಿಗೆ ಕಾಣುವ ಅತಿಥಿಗೃಹದ ಕಡೆ ಹೊರಟೆವು. ನಾನಿಲ್ಲೆ ಇರ್ತೀನಿ ನೀವು ನೋಡ್ಕೊಂಡು ಬನ್ನಿ ಎಂದರು ಶರ್ಮ.

ಜಲಪಾತ ಉಂಟಾಗುತ್ತಿದ್ದ ಬಳಿ ನಿಂತವನಿಗೆ ಕೆಲವರು ಗದರಿದರು. ಅಲ್ಲಿಂದ ಹೊರಟು ಬಂದು ನೇರವಾಗಿ ಶರ್ಮ ಅವರ ಮನೆಯಲ್ಲಿ ಹಲಸಿನ ಹಪ್ಪಳ ತಿಳಿಸಾರಿನ ಊಟ. ಲೊಟ್ಟೆ ಹೊಡ್ಕೊಂಡು ಊಟ ಮಾಡಿದ್ದು ಮತ್ತು ಉಪ್ಪಿನ ಕಾಯಿಯ ರುಚಿ ನನ್ನ ನಾಲಿಗೆಗೆ ಇನ್ನೂ ನೆನಪಿದೆ. ಆಗಾಗ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿತ್ತು. ಅವರು ಬರೆದ ಜೇನಿನ ಪುಸ್ತಕ ಸಾಕಿದ್ದ ಜೇನುಗಳು ಕೊಟ್ಟಿಗೆಯಲ್ಲಿದ್ದ ಲಕ್ಷಿಯ ಮಗಳು ಎಲ್ಲವನ್ನು ಕ್ಯಾಮೆರಾದಲ್ಲಿ ತುಂಬಿಕೊಂಡು ೨ ಗಂಟೆ ಸುಮಾರಿಗೆ ತಳವಾಟದ ಬಸ್ ನಿಲ್ದಾಣಕ್ಕೆ ಬಂದು ನಿಂತ ಸ್ವಲ್ಪ ಸಮಯಕ್ಕೆ ಸಾಗರದ ಬಸ್ ಬಂತು. ಭಾವ ಆ ಸಮಯಕ್ಕೆ ಬೆಂಗಳೂರಿಗೆ ರೈಲು ಟಿಕೆಟ್ ಕಾದಿರಿಸಿದ್ದರು. ಅವರಿಗೊಂದು ನಮಸ್ಕಾರ ತಿಳಿಸಿ. ಶಿವಮೊಗ್ಗದ ಬಸ್ ಹಿಡಿದೆ. ಭಾವನ ಸ್ನೇಹಿತರು ರೈಲಿನ ಟಿಕೆಟ್ ಕೊನೆಯ ಕ್ಷಣದಲ್ಲಿ ತಲುಪಿಸಿದರು. ಸಮಯಕ್ಕೆ ಸರಿಯಾಗಿ ಹೊರಟ ರೈಲು ಬೆಳಿಗ್ಗೆ ೫ ಗಂಟೆಗೂ ಮುನ್ನವೇ ಯಶವಂತಪುರ ತಲುಪಿತ್ತು. ಮುಂಚೆಯೇ ತಿಳಿಸಿದ್ದರಿಂದ ತಂದೆ ದ್ವಿಚಕ್ರದೊಡನೆ ಕಾಯುತ್ತಿದ್ದರು. ಮನೆಗೆ ಬಂದು ಸಣ್ಣದೊಂದು ನಿದ್ದೆ ತೆಗೆದು ೮ ಗಂಟೆಗೆ ಕಛೇರಿ ತಲುಪಿದೆ. ಒಂದೇ ದಿನದಲ್ಲಿ ಜೋಗಿಗೆ ಹೋಗಿಬಂದೆ ಎಂದವನ ಮಾತನ್ನು ನಂಬಲು ಯಾರೂ ಸಿದ್ದರಿರಲಿಲ್ಲ. ಇಂತಹ ಒಂದು ಪ್ರವಾಸ ಸಾಧ್ಯವಾಗಿದ್ದು ರಾಘವೇಂದ್ರ ಶರ್ಮ ಅವರ ಸಮಯೋಚಿತ ಸಹಾಯದಿಂದ. ಎಂತಹ ಅಪರಿಚಿತರಿಗಾದರೂ ಸಹಾಯ ಮಾಡುವ ಮಲೆನಾಡಿಗರ ಗುಣ ನನಗೆ ಅತ್ಯಂತ ಅಚ್ಚುಮೆಚ್ಚು. ಅದೆಷ್ಟೆ ಅಪರಿಚಿತರಾದರೂ ಊಟ ಮಾಡಿಕೊಂಡೇ ಹೋಗಬೇಕೆಂದು ಪಟ್ಟು ಹಿಡಿಯುವ ಅವರ ಗುಣಗಳು ಸಕ್ಕತ್. ಅದು ತಳವಾಟದ ರಾಘವೇಂದ್ರ ಶರ್ಮ ಅವರಿರಬಹುದು ಉಂಚಳ್ಳಿ ಜಲಪಾತದ ಬಳಿಯ ಹೆಗಡೆಯವರಿರಬಹುದು ಸಹಸ್ರಲಿಂಗದ ಬಳಿಯ ಶಿವಾನಂದ್ ಇರಬಹುದು ಅಥವಾ ಯಲ್ಲಾಪುರದ ಗೀತಾಭವನದ ಭಾಗವತರಿರಬಹುದು. ನಾನಂತು ಒಂದು ಗಾದೆಯನ್ನೆ ಹೀಗೆ ಪರಿವರ್ತಿಸಿದ್ದೇನೆ. "ಮಲೆನಾಡಿನ ನೋಟ ಚೆನ್ನ ಹವ್ಯಕರ ಮನೆ ಊಟ ಚೆನ್ನ". ೧ ದಿನ ೨ ರಾತ್ರಿಗಳಲ್ಲಿ ಜೋಗದ ಪ್ರವಾಸ ಮುಗಿಸಿ ಬಂದ ನನ್ನಿಂದ ಸ್ಪೂರ್ತಿಗೊಂಡ ಸುಮಾರು ಹತ್ತು ಜನ ಆ ವರ್ಷ ಜೋಗಿಗೆ ಭೇಟಿಯಿತ್ತರು.

ಪ್ರವಾಸಕ್ಕೆ ಬನ್ನಿ ಆದರೆ ಸ್ವಚ್ಚತೆ ಕಾಪಾಡಿ ಎಂಬ ಶೀರ್ಷಿಕೆಯಡಿ ಶರ್ಮ ಅವರು ಅಂದು ನಾವೆಲ್ಲ ಜಲಪಾತ ನೋಡುವುದರಲ್ಲಿ ಮೈಮರೆತಾಗ ತೆಗೆದ ಚಿತ್ರಗಳು ನಮಗೆಲ್ಲ ನಾಚಿಕೆ ತರಿಸುವಂತಿದ್ದವು.

ಹಾಂ! ೨ ವರ್ಷಗಳ ನಂತರ ಈಗೇಕೆ ಇದೆಲ್ಲ ಎಂದು ಅನುಮಾನ ನಿಮಗೆ ಬಂದಿರಬಹುದು. ಇಂದೂ ಕೂಡ ರಾಘವೇಂದ್ರ ಶರ್ಮ ದೂರವಾಣಿಯಲ್ಲಿ ಹೇಳಿದ್ದು ಲಿಂಗನಮಕ್ಕಿಯ ನೀರಿನ ಮಟ್ಟ ೧೮೦೭ ಅಡಿ ತಲುಪಿದೆ ೧೮೧೨ ಅಡಿ ತಲುಪಿದರೆ ಅಣೆಕಟ್ಟೆಯ ಬಾಗಿಲುಗಳು ತೆರೆಯುವ ಸಾಧ್ಯತೆಗಳಿವೆ ಬರ್ತೀರಾ ಎಂದು ಕೇಳಿದಾಗ ಹಳೆಯದೆಲ್ಲ ನೆನಪು ಬಂತು ಅದರ ಫಲವೇ ಈ ಕೊರೆತ. ನಾನಂತೂ ಅವರ ದೂರವಾಣಿಗೆ ಕಾಯ್ತಾ ಇದ್ದೇನೆ, ನೀವೂ ಜೊತೆಯಾಗಿ. ಅಂದಹಾಗೆ ನೆನಪಿರಲಿ ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ ದೂರದಲ್ಲಿರುವ ವಿಶ್ವವಿಖ್ಯಾತ ಜೋಗ್ ಜಲಪಾತವನ್ನು ೨ ರಾತ್ರಿ ಮತ್ತು ಒಂದು ದಿನದ ಅವಧಿಯಲ್ಲಿ ಭೇಟಿ ಕೊಟ್ಟು ಹಿಂತಿರುಗಬಹುದು. ಜೋಗದ ಸನಿಹದಲ್ಲೆ ತಳವಾಟದ ಯುವಕರು ನಿರ್ಮಿಸಿ ನಿರ್ವಹಿಸುತ್ತಿರುವ ಉಳಿಮನೆ (ಹೋಂಸ್ಟೇ) ನಿಮಗೆ ಸಹಾಯವಾಗಬಲ್ಲುದು. ರಾಘವೇಂದ್ರ ಶರ್ಮರ ಬ್ಲಾಗ್ ವಿಳಾಸ ಪಕ್ಕದಲ್ಲಿದೆ. ನೀವೂ ಪ್ರಯತ್ನಿಸಿ.

Thursday, July 23, 2009

ಹಾಸ್ಯ ಪ್ರಸಂಗ


ನನ್ನ ಕಾಲೇಜು ದಿನಗಳಲ್ಲಿ ನಡೆದ ಹಾಸ್ಯ ಪ್ರಸಂಗ

ಕಾಲೇಜಿದ್ದಿದ್ದೇ ಪಟ್ಟಣದ ಮಧ್ಯ ಭಾಗದಲ್ಲಿ. ಸಹಪಾಠಿಗಳಾದ ನಟ ಮತ್ತು ಮಂಜು ಬಾಲ್ಯ ಸ್ನೇಹಿತರು. ನಟರಾಜನಿಗೆ ನಾವಿಟ್ಟ ಅಡ್ಡಹೆಸರು ನರ್ವಸ್ ನಟ ಅನ್ವರ್ಥವಾಗಿತ್ತು. ನಟ ಕಾಲೇಜಿಗೆ ಬರ್ಬೇಕಾದ್ರೆ ಸಂತೆಬೀದಿಯಲ್ಲೆ ಬರ್ಬೇಕಿತ್ತು. ನಮ್ ಕಾಲೆಜಿದ್ದಿದ್ದು ಬಿ ಹೆಚ್ ರಸ್ತೆಯ ಒಂದು ಕಲ್ಲಿನ ಕಟ್ಟಡದ ಮೊದಲನೆ ಮಹಡಿಯಲ್ಲಿ. ಕಲ್ಪತರು ಕಾಲೇಜಿಗೆ ಹೋಗುವ ಹುಡುಗಿಯರನ್ನೆಲ್ಲ ನೋಡ್ಕೊಂಡು ನಿಲ್ಲುವ ನಮ್ಗಂತೂ ಮೊದಲ ಮಹಡಿ ಅಚ್ಚುಮೆಚ್ಚಿನ ತಾಣ.

ಮಾಮೂಲಿನಂತೆ ಗಾಭರಿಗೊಂಡಿದ್ದ ಭಯ ಮಿಶ್ರಿತ ಕಣ್ಣುಗಳ ನಟ ಸ್ವಲ್ಪ ಓಡೋಡ್ಕೊಂಡೆ ಬಂದ. ಅವನ ಗಾಭರಿಯ ಪರಿಚಯವಿದ್ದ ನಮ್ಗ್ಯಾರಿಗೂ ಅದು ಅಸಹಜವೆನಿಸಲಿಲ್ಲ. ಮಂಜುವಿನ ಬಳಿಗೆ ಬಂದವನೆ, "ಮಂಜ ಸಂತೆಬೀದಿ ಸರ್ಕಲ್ನಲ್ಲಿ ಸೈಕಲ್ನಲ್ಲಿ ಬರ್ಬೇಕಾದ್ರೆ ದಾರಿಗೆ ಒಂದು ಮುದುಕಿ ಅಡ್ಡ ಬಂದ್ಬಿಟ್ಲು ಕಣೋ". "ಡ್ಯಾಶ್ ಹೊಡೆದ್ಬಿಡ್ತಾ ಇದ್ದೆ. ಹೊಡೆದಿದ್ರೆ ಅಷ್ಟೆ ಪೀಸ್ ಪೀಸ್ ಆಗೋಗ್ತಾ ಇದ್ಲು" ಎಂದು ಬೆವರೊರೆಸಿಕೊಂಡ. ಮಂಜು ತಲೆ ಮೇಲೆ ಐಸ್ ಇಟ್ಕೊಂಡವನ ಹಾಗೆ ಹೇಳಿದ

"ಒಳ್ಳೆದಾಗ್ತಿತ್ತಲ್ಲೊ ನಾವೆಲ್ರೂ ಒಂದೊಂದ್ ಪೀಸ್ ಗೆ ಲೈನ್ ಹೊಡಿಬಹುದಿತ್ತಲ್ಲೊ"
.
.
.
.
.
( ಹರೆಯದ ಹುಡುಗಿಯರನ್ನು "ಪೀಸ್" (ತುಂಡು) ಅಂತ ಹರೆಯದ ಹುಡುಗರು ಕರೆಯುತ್ತಿದ್ದದ್ದು ನಮ್ಮೂರ್ಕಡೆ ಚಾಲ್ತಿಯಲ್ಲಿತ್ತು)