Thursday, June 19, 2008

ನುಗ್ಗೆಹಳ್ಳಿಯ ಲಕ್ಷ್ಮಿನರಸಿಂಹ ದೇವಾಲಯ

ನುಗ್ಗೆಹಳ್ಳಿಯಲ್ಲಿರುವ ಲಕ್ಷ್ಮಿನರಸಿಂಹ ದೇವಾಲಯದ ದೃಶ್ಯದ ತುಣುಕು.

Wednesday, June 18, 2008

ಗೊತ್ತುಗುರಿಯಿಲ್ಲದ ಪ್ರವಾಸ

ಶೀರ್ಷಿಕೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ೫ ಜನ ಬಿ. ಇ. ಎಲ್ ಸಹೋದ್ಯೋಗಿಗಳು ಪ್ರವಾಸ ಹೊರಡುವುದು, ಅದು ಎಲ್ಲಿಗೆ, ನಮ್ಮ ಗುರಿ ಯಾವುದು ಎಂಬ ಯಾವ ಮಾಹಿತಿ ಇಲ್ಲದೆ. ಕಪ್ಪೆ ತಕ್ಕಡಿಗೆ ಹಾಕಿದಂತ ನನ್ನ ಸಹೋದ್ಯೋಗಿಗಳನ್ನು ಹೊರಡಿಸಿಕೊಂಡು ಹೊರಡುವುದು ಮತ್ತೊಂದು ಸಾಹಸದ ಕೆಲಸವೇ ಸೈ.
೨೪/೦೬/೨೦೦೪ ರಂದು ಪ್ರವಾಸ ಹೋಗೋಣವೆಂದು ಸುಮಾರು ಒಂದು ತಿಂಗಳಿನಿಂದ ವರಾತ ಹಚ್ಚಿದವನಿಗೆ ಫಲ ದೊರೆತದ್ದು ೨೩/೦೬/೨೦೦೪ ರಂದು. ನಾನು ಮೊದಲೆ ಹೇಳಿದಂತೆ ಕಪ್ಪೆ ಬುದ್ದಿಯ ಸುರೇಶ ಮತ್ತು ಮಧುಸೂಧನರನ್ನು ಹೊರಡಿಸುವಷ್ಟರಲ್ಲಿ ಇನ್ನುಳಿದ ನಾನು, ಶ್ರೀಧರ ಮತ್ತು ಶಂಕರ ನಮಗೆ ಗೊತ್ತಿರುವ ಎಲ್ಲ ವಿದ್ಯೆಯನ್ನು ಖರ್ಚು ಮಾಡಬೇಕಾಯಿತು. ಯಾವುದೆ ಸ್ಥಳ, ಕೋಣೆ ಕಾದಿರಿಸುವ ಗೋಜಿಲ್ಲದಿರುವುದು ಮದುವೆಯಾಗಿರುವ ಬ್ರಹ್ಮಚಾರಿಗಳು ಪ್ರವಾಸ ಹೊರಟಾಗ ಮಾತ್ರ. ನಾವೆಲ್ಲ ಕೈಗೆ ಸಿಕ್ಕಿದ ಬಟ್ಟೆ ಬರೆಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೊರಡುವುದಕ್ಕೆ ಸಿದ್ದವಾಗಬೇಕಿತ್ತು. ಹೆಂಡತಿಯ ಅರೆ ಮುನಿಸು, ಅರೆ ಕೋಪದ ನೋಟ ಮತ್ತು ಚೂರಿಯಂತೆ ಇರಿಯುವ ಮಾತುಗಳು ನಮ್ಮನ್ನು ಅಧೀರರನ್ನಾಗಿಸಿದರೂ ಛಲದಂಕ ಮಲ್ಲರಂತೆ [ಅವರೆದುರಿಗೆ ಬಿಟ್ಟರೆ ನಮ್ಮ ಆಟ ಇನ್ನೆಲ್ಲು ನಡೆಯುವುದಿಲ್ಲ ;-)) ಎಂಬ ಕಟು ಸತ್ಯದ ಅರಿವು ನಮಗಿದೆ] ಸಿದ್ದರಾದೆವು. ಎಷ್ಟು ಜನ ಮನೆಗೆ ತಿಳಿಸದೆ ಬಂದಿದ್ದರೋ ;-)) ಗೊತ್ತಿಲ್ಲ!!! ಕೊನೆಗೂ ನಮ್ಮ ಪ್ರವಾಸ ಗಜಪ್ರಸವದಂತೆ ಕೈಗೂಡಿದ್ದು ೨೪ ರಂದು.
ಮಧ್ಯಾನ್ಹ ೧.೩೦ ಕ್ಕೆ ಹೊರಡುವುದಾಗಿ ತಿಳಿಸಿದ್ದರೂ ಕಾರ್ಖಾನೆಯ ಕೆಲಸಕ್ಕಷ್ಟೆ ಪ್ರವಾಸ ಹೋಗಿ ಅನುಭವವಿದ್ದ ಸುರೇಶ ಬೆಳಗಿನಿಂದಲೂ ಕಾಣದಿದ್ದಾಗ ನಮ್ಮೆಲ್ಲರ ಮುಖದಲ್ಲಿ ಆತಂಕ ಇವನು ಕೈಕೊಟ್ಟ ಎಂದು ಮನದಲ್ಲೆ ನಿಂದಿಸುತ್ತಿದವರಿಗೆ ಸರಿಯಾಗಿ ಸಾಮಾನ್ಯ ಪಾಳಿಯ ಅರ್ಧ ದಿನಕ್ಕೆ ಕಾರ್ಖಾನೆಯ ಸಮವಸ್ತ್ರ ಧರಿಸಿದ ಸುರೇಶ ಹಾಜರಾದಾಗ ನಮಗೆಲ್ಲ ಆತಂಕ ಮತ್ತು ಆಶ್ಚರ್ಯ. ಏನೋ ಪ್ರವಾಸ ಹೊರಟಿದ್ದೆವೆಲ್ಲ ಎಂದು ಕೇಳಿದವರಿಗೆ, ಹೋಗ್ಲೇಬೇಕಾ? ಎಂದು ಮರು ಪ್ರಶ್ನಿಸಿದ ಸುರೇಶನನ್ನು ಕಂಡು ತಲೆ ಚಚ್ಚಿಕೊಳ್ಳಬೇಕೆನಿಸುತ್ತಿತ್ತು. ಅವನನ್ನು ಮತ್ತೆ ಮನೆಗೆ ಓಡಿಸಿ ಬಟ್ಟೆ ಬರೆಗಳನ್ನು ತರುವಂತೆ ತಿಳಿಸಿ, ಸುರೇಶ ಬರದಿದ್ದರೆ ಬೇಡ ನಾವು ನಾಲ್ಕೆ ಜನವಾದರೂ ಸೈ ಹೊರಡುವ ಎಂದು ಉಳಿದವರನ್ನು ಹುರಿದುಂಬಿಸಿ, ತುಂಬಾ ದಿನ ಚಾಲೂ ಮಾಡದೆ ನಿಂತಿದ್ದ ನನ್ನ ಮಾರುತಿ ಓಮ್ನಿಯನ್ನು ಸಜ್ಜುಗೊಳಿಸಲು ಮನೆ ಕಡೆ ನಡೆದಾಗಲೂ ನನಗೆ ನಾವು ಪ್ರವಾಸ ಹೊರಡುವ ನಂಬಿಕೆಯಿರಲಿಲ್ಲ.
ಓಡಿಸದೆ ನಿಲ್ಲಿಸಿ ಹೆಚ್ಚು ದಿನಗಳಾಗಿದ್ದರಿಂದ ಜಪ್ಪಯ್ಯ ಎಂದರೂ ನನ್ನ ಕಾರು ಆರಂಭಗೊಳ್ಳಲೇ ಇಲ್ಲ. ಕೊನೆಗೆ ತಂತ್ರಙ್ಞನನ್ನೆ ಕರೆಸಿ ಆರಂಭಿಸಿದಾಗ ಸಮಯ ೪ ಘಂಟೆ. ಕೈಗೆ ಸಿಕ್ಕಿದ ಬಟ್ಟೆಗಳನ್ನು ತುಂಬಿಕೊಂಡು ಹೊರಡುವಷ್ಟರಲ್ಲಿ ಸುರೇಶ ತನ್ನ ದ್ವಿಚಕ್ರಧರನಾಗಿ ಕಾಣಿಸಿಕೊಂಡ. ನಮ್ಮ ಮನೆಯಲ್ಲಿ ಅವನ ವಾಹನವನ್ನು ನಿಲ್ಲಿಸಿ ದಾರಿಯಲ್ಲಿ ಶಂಕರ ಮತ್ತು ಮಧುಸೂಧನನ್ನು ಕಾರಿಗೆ ಹತ್ತಿಸಿಕೊಂಡು ಕಾರ್ಖಾನೆ ಬಳಿ ಬಂದು ಶ್ರೀಧರನನ್ನು ಕೂಡಿಸಿಕೊಂಡು ಬಿ.ಇ.ಎಲ್. ವೃತ್ತದಲ್ಲಿ ಬಂದು ನಿಂತಾಗ ಸಮಯ ಸರಿಯಾಗಿ ೫ ಘಂಟೆ.

ಗೊರಗುಂಟೆ ಪಾಳ್ಯವನ್ನು ದಾಟಿ ನೆಲಮಂಗಲದ ಹಾದಿ ಹಿಡಿದಾಗ ನಾವು ಜೋಗದ ಜಲಪಾತದೆಡೆ ಪ್ರಯಾಣಿಸುವುದೆಂದು ನಿರ್ಧರಿಸಿದೆವು. ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು ದಾಟಿದಾಗ ಸುರೇಶ ಮತ್ತು ಶಂಕರನ ಹಾಸ್ಯ ಚಟಾಕಿಗಳನ್ನು ಮತ್ತು ಕ್ರೈಂ ಸ್ಟೋರಿಯ ಕಾಕತ್ಕರ್ ಅವರ ಧಾಟಿಯಲ್ಲಿ ಅಣಕಿಸುವುದನ್ನು ಆನಂದಿಸುತ್ತಾ ವಾಹನ ಚಾಲನೆ ಮಾಡುತ್ತಿದ್ದ ನಾನು ಮುಂದೆ ಹೋಗುತ್ತಿದ್ದ ಮಾರುತಿ ಓಮ್ನಿಯನ್ನು ಗಮನಿಸಿರಲಿಲ್ಲ. ನನ್ನ ವೇಗಕ್ಕೆ ಸರಿಹೊಂದುವ ವಾಹನವೊಂದು ಮುಂದೆ ಹೋಗುತ್ತಿದ್ದರೆ ಅದನ್ನು ಸುರಕ್ಷಿತ ಅಂತರದಲ್ಲಿ ಹಿಂಬಾಲಿಸಿಕೊಂಡು ಹೋಗುವುದು ನನ್ನ ಅಭ್ಯಾಸಗಳಲ್ಲೊಂದು ಯಾವುದೆ ಒತ್ತಡವಿಲ್ಲದೆ ಹೆದ್ದಾರಿಗಳಲ್ಲಿ ಸುಲಭವಾಗಿ ವಾಹನ ಓಡಿಸುವುದಕ್ಕೆ ಒಂದು ಅನೂಕೂಲಕರ ಮಾರ್ಗವೆಂದು ನನ್ನ ನಂಬಿಕೆ. ನಮ್ಮ ಮುಂದಿನ ವಾಹನದ ಹಿಂದಿನ ಆಸನಗಳಲ್ಲಿ ಕುಳಿತಿದ್ದ ಲಲನೆಯರು ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆಂದು ತಪ್ಪಾಗಿ ಅರ್ಥೈಸಿಕೊಂಡು ಪರದಾಡುತ್ತಿದ್ದದ್ದು ನಮ್ಮ ಗಮನಕ್ಕೆ ಬಂತು!! ಅವರ ಸಂಕಟ ನೋಡಲಾರದೆ, ಅವರನ್ನು ಮುಂದೆ ಹೋಗಲು ಬಿಟ್ಟ ನಾವು ಹಿಂದೆಯೆ ಉಳಿಯುವುದಕ್ಕಾಗಿ ವಾಹನ ನಿಲ್ಲಿಸಿ ಕೆಳಗಿಳಿದರೆ ಆಗಲೆ ಸಂಜೆಯ ರವಿ ಪಡುವಣದಲ್ಲಿ ಮನೆ ಸೇರುವ ತವಕದಲ್ಲಿ ವೇಗವಾಗಿ ಧಾವಿಸುತ್ತಿದ್ದ. ಕತ್ತಲಾದಾಗ ಶ್ರೀಧರನ ಉದ್ಗಾರ "ಅಯ್ಯೊ ಬೆಂಗಳೂರಿನಲ್ಲಿ ಇಷ್ಟೋಂದು ನಕ್ಷತ್ರಗಳೆ ಇರಲ್ಲ" ಇಲ್ಲಿ ಮಾತ್ರ ಹೇಗಿದೆ ಎನ್ನುವ ಅವನ ಪ್ರಶ್ನೆಗೆ ನಕ್ಕು ವಾಹನವೇರಿ ಶಿವಮೊಗ್ಗ ತಲುಪಿದಾಗ ಸರಿಯಾಗಿ ರಾತ್ರಿ ೧೦ ಘಂಟೆ.
ಶಿವಮೊಗ್ಗದ ಪ್ರಾರಂಭದಲ್ಲೆ ತುಂಗೆಗೆ ಅಡ್ಡಲಾಗಿರುವ ಸೇತುವೆಯ ನಂತರ ಇರುವ ವಸತಿಗೃಹವೊಂದರಲ್ಲಿ ಕೋಣೆಯಂದನ್ನು ಪಡೆದು ಪಕ್ಕದಲ್ಲಿದ್ದ ಉಪಹಾರಗೃಹದಲ್ಲಿ ಊಟ ಮುಗಿಸಿ ವಾಹನ ಚಾಲನೆಯಿಂದ ಆಯಾಸಗೊಂಡಿದ್ದ ನಾನು ಮಲಗಲು ಹೊರಟೆ. ಉಳಿದವರು ಅದ್ಯಾವಾಗ ಮಲಗಿದರೊ? ನಾನರಿಯೆ.
25 ರಂದು ಬೆಳಿಗ್ಗೆ ಎಚ್ಚರವಾದಾಗಲೆ ನನ್ನ ಅರಿವಿಗೆ ಬಂದದ್ದು ಇವರೆಲ್ಲ ರಾತ್ರಿ ತುಂಬ ತಡವಾಗಿ ಮಲಗಿದ್ದರು ಎಂಬ ಸಂಗತಿ. ಪಕ್ಕದ ಉಪಹಾರಗೃಹದಲ್ಲಿ ಉಪಹಾರ ಮುಗಿಸಿ ನಮ್ಮ ಪ್ರಯಾಣ ತುಂಗ ಮತ್ತು ಭದ್ರೆಯರ ಸಂಗಮದ ಕಡೆಗೆ. ಶಿವಮೊಗ್ಗದಿಂದ ಸುಮಾರು ೧೫ ಕಿ,ಮೀ ದೂರದಲ್ಲಿರುವ ಪುಟ್ಟ ಊರು ಕೂಡಲಿ(ಕೂಡ್ಲಿ). ಇಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಶಾರದಾ ಪೀಠವಿದೆ. ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿರುವ ಎರಡೂ ನದಿಗಳ ಸಂಗಮಕ್ಕೆ ಬೆಟ್ಟದ ಹಿನ್ನೆಲೆಯಲ್ಲಿರುವ ತೆಂಗಿನ ತೋಟಗಳು ಹಚ್ಚ ಹಸಿರಿನ ಹೊಲಗದ್ದೆಗಳು ಮೆರಗನ್ನು ನೀಡುತ್ತವೆ. ಭದ್ರಾವತಿಯ ಕೈಗಾರಿಕೆಗಳಿಂದ ಭದ್ರಾ ಹೊಳೆ ಹೆಚ್ಚು ಮಲಿನಗೊಂಡಿದ್ದರೂ, ಮಳೆಗಾಲದ ಉತ್ತಮ ಮಳೆಯಿಂದ ಎಲ್ಲವೂ ಕೊಚ್ಚಿ ಹೋಗಿದ್ದರಿಂದ
ಸ್ವಲ್ಪ ನೀರಿನ ಮಲಿನತೆ ಕಡಿಮೆಯಾಗಿತ್ತು. ಮಲೆನಾಡಿನ ತಪ್ಪಲಿನ ಬಯಲು ಸೀಮೆಯ ಹಳ್ಳಿಯ ವಾತಾವರಣ, ಬೆಳಗಿನ ಪ್ರಶಾಂತತೆ ಮತ್ತು ಚುಮುಗುಡಿಸುವ ಎಳೆಯ ಬಿಸಿಲನ್ನು ಆಸ್ವಾದಿಸುತ್ತ ಕುಳಿತವರಿಗೆ ಸಮಯ ಸರಿದದ್ದೆ ಅರಿವಿಲ್ಲ. ಶಿವಮೊಗ್ಗಕ್ಕೆ ಹಿಂತಿರುಗಿ ಸಾಗರದ ಕಡೆ ನಮ್ಮ ಪಯಣ. ದಾರಿಯಲ್ಲಿ ಸಿಕ್ಕ ತ್ಯಾವರೆಕೊಪ್ಪ ಹುಲಿ/ಸಿಂಹಧಾಮಕ್ಕೊಂದು ಭೇಟಿ. ಇಡೀ ಪ್ರವಾಸಕ್ಕೆ ನಮಗೆಲ್ಲ ಮಧುಸೂಧನ ಮಹಾಶಯನ ಸಂಚಾರಿ ದೂರವಾಣಿಯೊಂದೆ (ಮೊಬೈಲ್) ನಮಗೆ ಸಂಪರ್ಕ ಸೇತುವೆ. ಘಳಿಗೆಗೊಮ್ಮೆ ಅದರಲ್ಲಿ ಸಿಗ್ನಲ್ ಇದೆಯೊ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದ ಅವನನ್ನು ನಾವೆಲ್ಲ ಕಾಡಿದರೂ ಅವನ ದೂರವಾಣಿಯಿಂದ ನಮಗಾದ ಉಪಕಾರ ಅಷ್ಟಿಷ್ಟಲ್ಲ.
ಇಲ್ಲಿಂದ ಜೋಗದ ದಾರಿಗಿಳಿಯಿತು ನನ್ನ ವಾಹನ ಆಯನೂರು, ಆನಂದಪುರ ಮುಖೇನ ಸಾಗರ ತಲುಪಿ ಅಲ್ಲಿನ ಉಡುಪಿ ಹೋಟೆಲ್ಲೊಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನೇರವಾಗಿ ಜೋಗದ ಕಡೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗದ್ದೆಗಳು ಕಣ್ಣಿಗೆ ತಂಪನ್ನೆರೆಯುವುದರಲ್ಲಿ ಯಾವುದೆ ಅನುಮಾನವಿಲ್ಲ. ಸಿಕ್ಕ ಕಡೆಯಲ್ಲೆಲ್ಲ ಫೋಟೊ ಕ್ಲಿಕ್ಕಿಸುತ್ತ ಜೋಗ ತಲುಪಿದಾಗ ಸಮಯ ೨ ಘಂಟೆಯಿರಬಹುದು. ಜಿಟಿ ಜಿಟಿ ಜಿನುಗುತಿದ್ದ ಮಳೆರಾಯ. ಜಲಪಾತದ ವೀಕ್ಷಣೆಗೆ ಅಡ್ಡಿಯುಂಟುಮಾಡುತ್ತಿದ್ದ. ಜಲಪಾತ ತಳಭಾಗಕ್ಕೆ ಇಳಿಯಲು ಇರುವ ದಾರಿ ಬಿಟ್ಟು ಬೇರೊಂದು ದಾರಿಯಲ್ಲಿ ಹೋಗಿ ಎಂದು ತೋರಿಸಿದ ಕುಡುಕನ ಮಾತಿಗೆ ಬೆಲೆ ಕೊಡದೆ ಮೆಟ್ಟಿಲುಗಳನ್ನು ಇಳಿಯಲು ಆರಂಭಿಸಿದೆವು. ಇಲ್ಲಿ ಮಧು ತಾನು ಕೆಳಗೆ ಬರುವುದಿಲ್ಲವೆಂದು ತರಲೆ ಆರಂಭಿಸಿದ. ಅವನನ್ನು ಬಿಟ್ಟು ಇಳಿಯಲು ನಾವೆಲ್ಲರೂ ಹೊರಟಾಗ ಕೆಳಗಿನಿಂದ ಬಂದ ಹೆಂಗಳೆಯರ ಗುಂಪನ್ನು ನೋಡಿದ ಮಧು ಅದೇಕೊ ತಾನು ಬರುವುದಾಗಿ ಪ್ರಕಟಿಸಿ ಇಳಿಯಲು ಸಹಾಯಕ್ಕಾಗಿ ಕೋಲೊಂದನ್ನು ಹಿಡಿದು ಹೊರಟೆ ಬಿಟ್ಟ. ತಲೆ ಹರಟೆ ಹರಟುತ್ತಾ ಇಳಿದೇ ಇಳಿದೆವು ಅಲ್ಲಲ್ಲಿ ಸಿಗುವ ಸಣ್ಣ ಅಂಗಡಿಗಳಲ್ಲಿ ನಿಂಬೆ ಪಾನಕ ಕುಡಿಯುತ್ತ ಕೊನೆಯ ಅಂಗಡಿ ತಲುಪಿ ಅಲ್ಲೆ ನಮ್ಮ ಕೆಲವು ಹೊರೆಗಳನ್ನು ಇಳಿಸಿ ಜಲಪಾತ ಸೃಷ್ಟಿಸಿರುವ ಹೊಂಡದಲ್ಲಿ ಈಜಲು ಇಳಿಯಲು ನಾನು ಹೊರಟಾಗ, ನಮ್ಮ ಮಧು ತನ್ನ ಕ್ಯಾಮೆರವನ್ನು ಅನಾಮತ್ತಾಗಿ ನೀರಿನಲ್ಲಿ ಬೀಳಿಸಿ ಬಿಟ್ಟ ಯಾಕೊ ಕ್ಯಾಮೆರ ನೀರಿಗೆ ಹಾಕಿದೆ ಎನ್ನುವ ಎಲ್ಲರ ಪ್ರಶ್ನೆಗೆ ಸ್ಟುಡಿಯೋದಲ್ಲಿ ತೊಳೆಸುವ ಬದಲು ಇಲ್ಲೆ ತೊಳೆದು ಬಿಟ್ಟೆ ಎಂದ ಮುಗ್ದನಂತೆ.

ಜಿನುಗುತ್ತಿದ್ದ ಮಳೆಯಲ್ಲಿ ಕೊರೆಯುವ ಛಳಿಯಲ್ಲಿ ಮಂಜಿನಂತೆ ಕೊರೆಯುವ ನೀರಿನಲ್ಲಿ ಈಜುತ್ತಿದ್ದರೆ, ನಮಗರಿವಿಲ್ಲದಂತೆ ನಮ್ಮ ಹಲ್ಲುಗಳು ಕಟ ಕಟ ಶಬ್ಧ ಮಾಡುತ್ತಿದ್ದವು. ಒಂದು ಘಂಟೆಯ ನೀರಾಟದ ನಂತರ ಮೇಲೆ ಹತ್ತಲು ಪ್ರಾರಂಭಿಸಿದೆವು. ಕಡಿದಾದ ಬೆಟ್ಟವನ್ನು ಹತ್ತಿ ಅಭ್ಯಾಸವಿಲ್ಲದ ಎಲ್ಲರೂ ಮತ್ತು ದೇಹ ದಣಿಯೆ ಈಜಿದ್ದ ನಾನು ಮತ್ತು ಮಧು ಹೆಜ್ಜೆಗೊಮ್ಮೆ ಕುಳಿತು ದಣಿವಾರಿಸಿಕೊಳ್ಳಬೇಕಾದ ಪರಿಸ್ಥಿತಿ. ದಾರಿಯುದ್ದಕ್ಕೂ ತಮ್ಮ ಹಾಸ್ಯ ಚಟಾಕಿಗಳಿಂದ ಚಾರಣವನ್ನು ಅವಿಸ್ಮರಣೀಯಗೊಳಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು. ದಣಿವಿನ ಮಹಿಮೆಯೋ ಅಥವ ಅತ್ಯಂತ ಉಲ್ಲಸಿತ ಮನಸ್ಸಿನ ಪ್ರಭಾವವೋ ದಾರಿಯಲ್ಲಿ ಸಿಗುವ ಪ್ರತಿ ಗೂಡಂಗಡಿಯಲ್ಲು ಸಿಗುವ ಅನಾನಸ್ ಮತ್ತು ನಿಂಬೆ ಪಾನಕ ಅಮೃತದಂತೆ ಭಾಸವಾಗುತ್ತಿತ್ತು. ಬಹುಶಃ ನಾನು ಆಸ್ವಾದಿಸಿದ ಅತ್ಯಂತ ರುಚಿಕರ ಅನಾನಸ್ ಇವೆಂದು ಹೇಳುವುದು ಖಂಡಿತ ಉತ್ಪ್ರೇಕ್ಷೆಯಲ್ಲ.
ಮನಸ್ಸಿಗೆ ಬಂದಾಗೊಮ್ಮೆ ಹೆಜ್ಜೆ ಹಾಕುತ್ತ ಯಾವುದೆ ಸಮಯದ ಪರಿವೆಯಿರದೆ ನಡೆದವರು ಕೊನೆಗೊಮ್ಮೆ ಮೇಲೇರಿ ಬಂದು ಜೋಗದಿಂದ ಕಾಣುವ ಅತಿಥಿಗೃಹಕ್ಕೆ ಹೋರಟೆವು. ಇಲ್ಲಿಂದ ಜೋಗ ಜಲಪಾತ ವಿಭಿನ್ನವಾಗಿ ಕಾಣಿಸುತ್ತದೆ. ಇದೆ ಈಗ ಮುಂಗಾರು ಮಳೆ ಸ್ಪಾಟ್ ಎಂದು ಹೆಸರುವಾಸಿಯಾಗಿದೆ. ಅಲ್ಲಿ ಮುಂಗಾರು ಮಳೆ ಚಿತ್ರೀಕರಣಗೊಳ್ಳುವುದಕ್ಕೆ ೨ ವರ್ಷ ಮುನ್ನವೆ ಆ ಜಾಗಗಳಲ್ಲಿ ಜಲಪಾತವನ್ನು, ಅದು ಬೀಳುವ ಜಾಗದಲ್ಲಿ ನಿಂತು ಇಣುಕಿ ನೋಡುವ ಸಾಹಸ ಮಾಡಿದ್ದ ಯಲ್ಲಾಪುರದ ಕಮಲಾಕ್ಷಿಯಿಂದ ಕೇಳಿ ತಿಳಿದಿದ್ದ ನಾನು ಕೂಡ ಅದನ್ನು ನೋಡೆಬಿಡುವ ಎಂದು ಬಂದು ಬಿಟ್ಟೆ. ಜಿಟಿಗುಟ್ಟುತ್ತಿರುವ ಮಳೆ ಬಂಡೆಗಳಲ್ಲಿ ಪಾಚಿ ಕಟ್ಟಿ ಜಾರುವಂತೆ ಮಾಡಿದ್ದರೂ ಜಲಪಾತ ತುದಿಗೆ ಹೊರಟಾಗ ಹಿಂದೆ ನಿಂತು ಗಾಭರಿಯಿಂದ ಬೇಡಾ ಪ್ಲೀಸ್ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ ಸುರೇಶ. ಅವನ ಚೀತ್ಕಾರ ಹೇಗಿತ್ತೆಂದರೆ ಚಲನ ಚೀತ್ರಗಳಲ್ಲಿನ ಬಲಾತ್ಕಾರ ದೃಶ್ಯಗಳಲ್ಲಿ ಕೇಳಿಬರುವ ಚೀತ್ಕಾರದಂತಿತ್ತು. ಏನಾಯಿತು ಎಂದು ಅವನಲ್ಲಿಗೆ ಬಂದು ಕೇಳಿದವರಿಗೆ ನಾವು ಅಲ್ಲಿಗೆ ಹೋಗುವುದೆ ಬೇಡವೆಂದು ಪರಿಪರಿಯಾಗಿ ನಮಗೆ ಬೇಡುತ್ತಿದ್ದ. ನೀನು ಇಲ್ಲೆ ಇರು ಬರಬೇಡವೆಂದು ಅವನನ್ನು ಸಮಾಧಾನಿಸಿ ನಿಧಾನವಾಗಿ ಜಲಪಾತ ಉಂಟಾಗುತ್ತಿದ್ದ ಜಾಗಕ್ಕೆ ಬಂದು ಕೆಳಗೆ ಬಗ್ಗಿ ನೋಡಿದವರಿಗೆ ಹೃದಯದ ಬಡಿತ ಒಮ್ಮೆಲೆ ನಿಂತು ಹೋಗುವ ಅನುಭವ. ಅಬ್ಬ ರುದ್ರರಮಣೀಯ ಕೆಳಗೆ ನಾವು ಈಜಿದ ಹೊಂಡ ಅತ್ಯಂತ ಚಿಕ್ಕದಾಗಿ ಕಾಣಿಸುತ್ತಿತ್ತು. ಅಲ್ಲಿರುವ ಜನಗಳು ಲಿಲ್ಲಿಪುಟ್ ಗಳಂತೆ ತೋರುತ್ತಿದ್ದರು. ಹೆಚ್ಚು ಹೊತ್ತು ನಿಂತರೆ ತಲೆ ದಿಮ್ಮೆಂದು ತಿರುಗುವ ಅನುಭವವಾಗುತ್ತದೆ. ಕೆಲವರು ಅಂಗಾತ ಬಂಡೆಗಳ ಮೇಲೆ ಮಲಗಿ ತಮ್ಮ ಶಿರವನ್ನು ಮಾತ್ರ ಹೊರಚಾಚಿ ಅಲ್ಲಿನ ದೃಶ್ಯವನ್ನು ವೀಕ್ಷಿಸಲು ಪ್ರಯತ್ನಿಸಿ ಸಫಲರೂ ಆದರು. ನಮ್ಮ ಸುರೇಶನ ಚೀತ್ಕಾರ ಮಾತ್ರ ಇನ್ನು ನಿಂತಿರಲಿಲ್ಲ ಅವನು ಅಳುವುದೊಂದೆ ಬಾಕಿ ಉಳಿದದ್ದು. ಅತಿಥಿ ಗೃಹದ ಕಡೆಯಿಂದ ಹೊರಟರೆ ಸಿಗುವ ಮೊದಲೆರಡು ಜಲಪಾತಗಳಲ್ಲು ಇದೆ ಅನುಭವವನ್ನು ಹೊತ್ತು ಹಿಂತಿರುಗಿ ಬಂದು ಕಾರಿನಲ್ಲಿ ಸಾಗರಕ್ಕೆ ಬಂದು ವರದಶ್ರೀ ವಸತಿಗೃಹದಲ್ಲಿ ೪ ಹಾಸಿಗೆಯ ಕೋಣೆಯೊಂದನ್ನು ಹಿಡಿದು ಹಾಸಿಗೆಗೆ ಬಿದ್ದಾಗ ಉಸ್ಸಪ್ಪ ಎನ್ನುವ ಸಾರ್ಥಕ್ಯ ನಿಟ್ಟುಸಿರು.
ನನಗೆ ಅವಶ್ಯವಾಗಿ ಬೇಕಿದ್ದ (ಏಕೆಂದರೆ ಇಡೀ ತಂಡದಲ್ಲಿ ವಾಹನ ಚಾಲನೆ ಗೊತ್ತಿದ್ದವನು ನಾನೊಬ್ಬನೆ) ಒಂದೆರಡು ಘಂಟೆಯ ವಿಶ್ರಾಂತಿಯ ನಂತರ ಸಂಜೆಯ ಫಲಹಾರಕ್ಕಾಗಿ ವರದಶ್ರೀಯ ಉಪಹಾರ ಗೃಹಕ್ಕೆ ಬಂದಾಗಲೆ ನಮಗೆ ಅರಿವಾದದ್ದು ವಸತಿಗೃಹದ ಸೌಂದರ್ಯ. ಬೆಂಗಳೂರು ಹೊನ್ನಾವರ ರಾಜ್ಯ ಹೆದ್ದಾರಿಗೆ ಅಂಟಿಕೊಂಡಂತೆ ಇರುವ ಸಾಗರದ ಕೆರೆಯ ಪಕ್ಕದಲ್ಲಿ ನಿರ್ಮಿತವಾಗಿರುವ ವಸತಿಗೃಹ ಯಾವ ಪಂಚತಾರ ವಸತಿಗೃಹಕ್ಕೂ ಕಡಿಮೆಯಿಲ್ಲ. ಉಪಹಾರಗೃಹದಿಂದ ಕಾಣುವ ಸರೋವರವಂತೂ ಮನಮೋಹಕ. ಬೆಳ್ಳಕ್ಕಿ ನೀರಕ್ಕಿಗಳ ಚೆಲ್ಲಾಟ, ನೈದಿಲೆಯ ಹೂವುಗಳು ಆ ಬದಿಯಲ್ಲಿರುವ ತೆಂಗಿನ ತೋಟ ಸರೋವರದ ಅಂದವನ್ನು ಹೆಚ್ಚಿಸಿವೆ. ಬೆಂಗಳೂರಿನಲ್ಲಿದ್ದರೆ ಇದೆ ಒಂದು ಪ್ರವಾಸಿ ತಾಣವಾಗುತ್ತಿದ್ದಿರಬಹುದು.
ರುಚಿ ಶುಚಿ ಉಪಹಾರದ ನಂತರ ನಮ್ಮ ಮುಂದಿನ ಕಾರ್ಯಕ್ರಮಕ್ಕೊಂದು ರೂಪ ಕೊಡಬೇಕಿತ್ತು ಅದಕ್ಕಾಗಿ ಸಾಗರದಲ್ಲಿರುವ ನನ್ನ ಭಾವ ಫ್ರೌಡಶಾಲೆಯ ಶಿಕ್ಷಕರಾದ ಪ್ರಸನ್ನರನ್ನು ಭೇಟಿಯಾಗಿ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾಗರದಲ್ಲೆ ಒಂದು ಸುತ್ತು ಹೊಡೆದು ಬಂದು ಮಧುವಿನ ಮೊಬೈಲ್ ಬ್ಯಾಟರಿಯನ್ನು ಜೀವ ನೀಡಲು ಹರಸಾಹಸ ಮಾಡಿ ಕೊನೆಗೆ ಅದಕ್ಕೆ ಹೊಂದುವ ಅಡಾಪ್ಟರ್ ಸಿಗದಿದ್ದಾಗ ನೇರವಾಗಿ ಫ್ಯಾನ್ ಗಾಗಿ ಬಿಟ್ಟಿದ್ದ ವೈರನ್ನೆ ಕತ್ತರಿಸಿ ಇದಕ್ಕೆ ಸುತ್ತಿ ಅವನ ಮೊಬೈಲ್ ಬ್ಯಾಟರಿಗೆ ಜೀವ ತುಂಬಿದೆವು ಏಕೆಂದರೆ ಅವನೊಬ್ಬನ ಬಳಿಯಷ್ಟೆ ಆಗ ಮೊಬೈಲ್ ಇದ್ದದ್ದು. ಇದಕ್ಕೆಲ್ಲ ತನ್ನ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದ ಸುರೇಶ ಅಭಿನಂದನಾರ್ಹ.
ರಾತ್ರಿಯ ಊಟಕ್ಕಾಗಿ ಉಪಹಾರಗೃಹದತ್ತ ನಡೆದವರಿಗೆ ಸುರೇಶ ಬಾಂಬೊಂದನ್ನು ಸಿಡಿಸಿದ. ತಾನು ತುರ್ತಾಗಿ ಬೆಂಗಳೂರಿಗೆ ಹಿಂದಿರುಗಬೇಕೆಂದು ಎಲ್ಲರನ್ನೂ ಹೌಹಾರಿಸಿಬಿಟ್ಟ. ತಾನು ಮನೆಯಲ್ಲಿ ಹೇಳಿದ್ದು ಒಂದು ದಿನದ ಪ್ರವಾಸವೆಂದೂ ಅದ್ದರಿಂದ ಮನೆಯವರೆಲ್ಲ ಗಾಭರಿಯಾಗುತ್ತಾರೆ ನಾನು ಹಿಂದಿರುಗಲೇಬೇಕೆಂದು ಹಠಹಿಡಿದು ಚಿಕ್ಕ ಮಗುವಿನಂತೆ ಕುಳಿತು ಬಿಟ್ಟ. ಸರಿ ಮಹರಾಯ ನಿಮ್ಮ ಮನೆಯವರಿಗೆ ಫೋನಾಯಿಸಿ ತಿಳಿಸುವ ಎಂದು ಸಮಾಧಾನಿಸಿದವರಿಗೆ ಇನ್ನೊಂದು ಬಾಂಬಿಟ್ಟ. ತಾನು ಉಡುಪುಗಳನ್ನು ತಂದಿಲ್ಲ ಒಂದು ದಿನಕ್ಕಾಗುವಷ್ಟು ಮಾತ್ರ ತಂದಿದ್ದೇನೆಂದು. ಸರಿ ಮತ್ತೆ ಸಾಗರದ ಮಾರುಕಟ್ಟೆಗೆ ಹೋಗಿ ಅವನಿಗೆ ಮಧು ಹೊಸ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟ. ಸುರೇಶನ ಶ್ರೀಮತಿಯನ್ನು ದೂರವಾಣಿ ಮುಖೇನ ಸಂಪರ್ಕಿಸಿ ಇನ್ನು ಎರಡು ದಿನಗಳ ನಂತರ ಬರುವುದಾಗಿ ತಿಳಿಸಿದರೆ ಅಯ್ಯೊ ಒಂದು ವಾರ ಆದಮೇಲೆ ಬನ್ನಿ ಎನ್ನುವ ಅವರ ಉತ್ತರಕ್ಕೆ ಪೆಚ್ಚು ಪೆಚ್ಚಾಗಿ ಸುರೇಶನ ಕಡೆ ನೋಡುತ್ತ ಊಟಕ್ಕೆ ಹೆಜ್ಜೆ ಹಾಕಿದೆವು.
ಬೆಳಿಗ್ಗೆ ಎದ್ದು ಬೆಳಗಿನ ಕರ್ಮಗಳನ್ನು ಮುಗಿಸಿ ವರದಶ್ರೀಯಲ್ಲೆ ಉಪಹಾರ ಮುಗಿಸಿ ವರದಹಳ್ಳಿಯ ಕಡೆ ಪ್ರಯಾಣ ಬೆಳೆಸಿದೆವು ಸಾಗರದ ನಂತರ ಒಂದು ಕಿ.ಮೀ ಮುನ್ನ ನಾವು ಎಡಭಾಗದ ರಸ್ತೆಗೆ ತಿರುಗಬೇಕಿತ್ತು. ಆದರೆ ನಾವು ಆ ದಾರಿಯನ್ನು ಬಿಟ್ಟು ಮುಂದೆ ಹೋದೆವು ಸುಮಾರು ೨-೩ ಕಿ.ಮಿ ಕ್ರಮಿಸಿದ ನಂತರ ಅನುಮಾನಗೊಂಡು ದಾರಿಹೋಕರನ್ನು ಕೇಳಿ ವಾಹನವನ್ನು ಹಿಂತಿರುಗಿಸಿದೆವು. ಮತ್ತೊಮ್ಮೆ ನಾವು ಹೋಗುವ ಸರಿಯಾದ ದಾರಿ ಸಿಗದಿದ್ದಾಗ ಪಕ್ಕದಲ್ಲಿದ್ದ ಚಹಾ ಅಂಗಡಿಯೊಂದಕ್ಕೆ ದಾರಿ ವಿಚಾರಿಸಲು ಹೋದ ಶಂಕರ ಎಷ್ಟು ಸಮಯವಾದರೂ ಬರದಿದ್ದಾಗ ನಾನೆ ವಿಚಾರಿಸಲು ತೆರಳಿದವನಿಗೆ ಕಂಡದ್ದು ಆ ಅಂಗಡಿಯಲ್ಲಿರುವ ಹಳ್ಳಿಯ ಸ್ನಿಗ್ಧ ಸೌಂದರ್ಯದ ಹುಡುಗಿಯೊಬ್ಬಳ ಸೌಂದರ್ಯಕ್ಕೆ ಮಾರುಹೋಗಿ ಅವರೊಡನೆ ಹರಟುತ್ತ ನಿಂತಿದ್ದ ಶಂಕರ. ಅವನನ್ನು ಬಲವಂತವಾಗಿ ತಾಯಿಯಿಂದ ಎಳೆಯ ಕರುವನ್ನು ಒತ್ತಾಯವಾಗಿ ಎಳೆದುಕೊಂಡು ಬರುವಂತೆ ಎಳೆದು ತಂದು ಕಾರಿನಲ್ಲಿ ಕುಳ್ಳಿರಿಸಿ ನಮ್ಮ ಪ್ರಯಾಣ ಮುಂದುವರೆಸಿದೆವು. ಈ ಬಾರಿ ಯಾವುದೆ ಅಡೆ ತಡೆಯಿಲ್ಲದೆ ಶ್ರೀಧರಾಶ್ರಮಕ್ಕೆ ಬಂದು ತಲುಪಿದೆವು. ವಾವ್!! ಎಂತಹ ಹಸಿರು ಗಿರಿಗಳ ನಡುವೆ ಇರುವ ಪ್ರಶಾಂತ ಸುಂದರ ಆಶ್ರಮ ಯಾವುದೇ ಮಠಗಳ ಆಡಳಿತಕ್ಕೂ ಒಳಪಡದೆ ಸ್ವತಂತ್ರವಾಗಿರುವ ಈ ಆಶ್ರಮ ನನ್ನನ್ನು ಬಹುವಾಗಿ ಸೆಳೆಯಿತು. ಶ್ರೀಧರ ಸ್ವಾಮಿಗಳ ತಪೋಭೂಮಿಯ ಜಾಗದಲ್ಲೆ ನಿರ್ಮಿತವಾದ ಆಶ್ರಮ ತನ್ನ ಪ್ರಶಾಂತತೆಯಿಂದ ಎಂತಹವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅಲ್ಲೆ ಇರುವ ಚಿಕ್ಕಗುಡ್ಡವೊಂದರಲ್ಲಿ ಉಕ್ಕಿಹರಿಯುವ ನೀರಿನ ಚಿಲುಮೆ ಶ್ರೀಧರ ತೀರ್ಥ. ಬೆಟ್ಟ ಹತ್ತಿ ಸಾಗಿದರೆ ಕುರುಚಲು ಕಾಡಿನಂತಹ ಜಾಗದಲ್ಲಿ ಸ್ಥಾಪಿಸಲಾಗಿರುವ ಧ್ವಜವಿದೆ. ಅಲ್ಲಿಂದ ಕಾಣುವ ಸುಂದರ ಮಲೆನಾಡಿನ ಪರಿಸರ ಎತ್ತ ನೋಡಿದರೂ ದೃಷ್ಟಿಹರಿಯುವಷ್ಟೂ ಹಸಿರೆ ಹಸಿರು. ಅಲ್ಲಿನ ನೀರವತೆಯಂತೂ ಓಹ್! ವರ್ಣಿಸಲಸದಳ. ಅದೆ ಕಾಡಿನ ದಾರಿಯಲ್ಲಿ ನಮ್ಮೊಳಗಿನ ಹಾಡುಗಾರ ಸುರೇಶ ಹಾಡಿದ "ನೀ ಮಾಯೆಯೊಳಗೋ" ಹಾಡು ನಮ್ಮನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಸ್ವಲ್ಪ ಸಮಯ ಅಲ್ಲಿನ ದಿವ್ಯ ಮೌನವನ್ನು ಆಸ್ವಾದಿಸುತ್ತ ಕುಳಿತೆವು. ನಂತರ ಏನಾದರೂ ಹೊಸದನ್ನು ಹುಡುಕುವ ನನ್ಗೆ ಪಕ್ಕದಲ್ಲೆ ಇದ್ದ ಕಾಡಿನೊಳಗೆ ಪ್ರವೇಶಿಸಿ ನೋಡುವ ಬಯಕೆಗೆ ಮೊದಲು ಬೇಡವೆಂದರೂ ನಂತರ
ತಾವಾಗಿಯೆ ನನ್ನನು ಹಿಂಬಾಲಿಸಿ ಬರದೆ ಬೇರೆ ವಿಧಿಯಿರಲಿಲ್ಲ ನನ್ನ ಸಹವರ್ತಿಗಳಿಗೆ. ಆರಂಭದಲ್ಲಿ ಸ್ಪಷ್ಟವಾಗಿರುವ ಕಾಲುದಾರಿ ಕ್ರಮೇಣ ಸಣ್ಣದಾಗಿ ಮಾಯವಾಗುತ್ತ ಹೋಗುತ್ತಿತ್ತು. ೧೦ ನಿಮಿಷಗಳ ನಡಿಗೆಯ ನಂತರ ನಮ್ಮನ್ನು ಹಿಂಬಾಲಿಸದೆ ಉಳಿದ ಮಧುವನ್ನು ಮತ್ತಷ್ಟು ಗಾಭರಿಗೊಳಿಸುವ ಸಲುವಾಗಿ ಕಾಡಿನೊಳಗೆ ಅವಿತು ಅವನನ್ನು ಸ್ವಲ್ಪ ಸಮಯ ಕಾಡಿಸಿ ಕೊನೆಗೆ ಭಯಮಿಶ್ರಿತ ಎಚ್ಚರಿಕೆಯ ಮಾತುಗಳಿಗೆ ಸೋತು ಹಿಂತಿರುಗಬೇಕಾಯಿತು. ಕಾಡಿನೊಳಗೆ ಮರದ ಮೇಲೆ ಕುಳಿತಿದ್ದ ಹಾರ್ನ್ಬಿಲ್ ಹಕ್ಕಿಯನ್ನು ಹರ ಸಾಹಸ ಪಟ್ಟು ಚಿತ್ರೀಕರಿಸಿಕೊಂಡು . ಕಣ್ಣಿಗೆ ಮಾತ್ರ ಕಾಣಿಸುತ್ತ ಕ್ಯಾಮೆರದಲ್ಲಿ ಹಿಡಿಯಲು ಹೋದರೆ ಮರೆಯಾಗುತ್ತಿದ್ದ ಮಲಬಾರ್ ಅಳಿಲನ್ನು ಚಿತ್ರೀಕರಿಸಲಾಗದೆ ನಿರಾಶೆಗೊಂಡು ಹಿಂತಿರುಗಿದೆವು. ಈ ಹೊತ್ತಿಗಾಗಲೆ ನಾವು ಕಾಡಿನಲ್ಲಿ ಸುಮಾರು ೧ ಘಂಟೆಗೂ ಹೆಚ್ಚು ಕಾಲ ಕಳೆದಿದ್ದೆವು. ಧ್ವಜಸ್ಥಂಭವನ್ನು ಬಳಸಿ ಆಶ್ರಮಕ್ಕೆ ಹಿಂತಿರುಗಿ ಅಲ್ಲಿಂದ ನೇರವಾಗಿ ಸಾಗರಕ್ಕೆ ಬಂದು ಇಕ್ಕೇರಿಯ ಕಡೆ ಹೊರಟೆವು.
ಸಾಗರದಿಂದ ೪-೫ ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿ ಇಕ್ಕೇರಿ ಇಲ್ಲಿರುವ ಅಘೋರೇಶ್ವ್ರರ ದೇವಸ್ಥಾನ ಮನ ಸೆಳೆಯುತ್ತದೆ. ಭೃಹದಾಕಾರದ ನಂದಿಯ ವಿಗ್ರಹ, ಮುಸ್ಲಿಂ ದಾಳಿಕೋರರಿಗೆ ಆಹಾರವಾದ ಅಘೋರೇಶ್ವರ ವಿಗ್ರಹದ ಪಳೆಯುಳಿಕೆಗಳು ಗಮನ ಸೆಳೆಯುತ್ತವೆ. ಕಂಬಗಳಲ್ಲಿರುವ ಕೆತ್ತನೆ ಆಕರ್ಷಣೀಯ. ಅಲ್ಲಿಂದ ನಮ್ಮ ಪ್ರಯಾಣ ಸಿಗಂದೂರು ಬಾರ್ಜ್ ನತ್ತ. ಶರಾವತಿಯ ಹಿನ್ನೀರಿನಲ್ಲಿ ರಸ್ತೆ ಮುಳುಗಿದ್ದರಿಂದ ಹಡಗಿನಂತ ಯಂತ್ರವೊಂದು ವಾಹನಗಳನ್ನು ಹಿನ್ನೀರಿನ ಆಚೆ ಬದಿಯಲ್ಲಿರುವ ರಸ್ತೆಯಲ್ಲಿ ನಮ್ಮನ್ನು ವಾಹನ ಸಮೇತ ಹೊತ್ತು ಹಾಕುತ್ತದೆ. ಇದಕ್ಕಾಗಿ ಸುಮಾರು ೨-೩ ಘಂಟೆಗಳವರೆಗೆ ಕಾಯ್ದು ಆ ದಾರಿಯಲ್ಲಿ ಬರುವ ೨ ಬಸ್ ಮತ್ತು ೫-೬ ಕಾರುಗಳನ್ನು ತುಂಬಿಕೊಂಡ ನಂತರವಷ್ಟೆ ನಮ್ಮ ಬಾರ್ಜ್ ಪಯಣಕ್ಕೆ ಮುಕ್ತಿ ಸಿಕ್ಕದ್ದು. ಸಿಗಂಧೂರಿನಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿಯಿತ್ತು ನಮ್ಮ ಪಯಣ ಮುಂದುವರೆಸಿದೆವು. ಈ ಹೊತ್ತಿಗಾಗಲೆ ಒಬ್ಬನೆ ವಾಹನ ಚಲಾಯಿಸಿದ್ದ ಆಯಾಸಕ್ಕಾಗಿ ಜ್ವರ ಬಂದಂತೆ ನನಗೆ ಭಾಸವಾಗುತ್ತಿತ್ತು. ಆದರೂ ಬೇರೆ ವಿಧಿಯಿರಲಿಲ್ಲ ನಾನು ಈಗಾಗಲೆ ತಿಳಿಸಿದಂತೆ ನನ್ನ ಸ್ನೇಹಿತರಿಗೆ ಯಾರಿಗೂ ವಾಹನ ಚಾಲನೆ ಬರುತ್ತಿರಲಿಲ್ಲ. ಸುತ್ತಲಿದ್ದ ಹಸಿರು ಗಿರಿಕಣಿವೆಗಳ ಮಧ್ಯೆ ಉತ್ತಮವಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಕಾಡುತ್ತಿದ್ದ ಜ್ವರದ ಅರಿವಿಗೆ ಬರುತ್ತಿರಲಿಲ್ಲ. ಅಂತಹ ಪ್ರಕೃತಿಯ ಮಧ್ಯೆ ವಾಹನ ಚಲಾಯಿಸುವುದೆಂದರೆ ನನಗೆ ಅತೀವ ಸಂತೋಷ.
ಈ ಹೊತ್ತಿಗಾಗಲೆ ನಮ್ಮೆಲ್ಲರ ಹೊಟ್ಟೆಗಳು ತಾಳಹಾಕಲು ಆರಂಭಿಸಿದ್ದರೂ ಕಾಡಿನ ನಟ್ಟನಡುವೆ ನಮಗೆ ಯಾವುದೆ ಕುಗ್ರಾಮವೂ ಸಿಗಲಿಲ್ಲ. ನಮ್ಮ ಹಸಿವೆ ತಣಿಸುವ ಮಾರ್ಗವೂ ಸಿಗಲಿಲ್ಲ. ಮಾರ್ಗ ಮಧ್ಯದಲ್ಲಿ ಸಿಗುತ್ತಿದ್ದ ಎಲ್ಲ ಸುಂದರ ಸ್ಥಳಗಳಲ್ಲೂ ನಿಲ್ಲಿಸಿ ಅದನ್ನು ಚಿತ್ರೀಕರಿಸುತ್ತಿದ್ದವನನ್ನು ನೋಡಿ ಮಧು ಗೊಣಗಲು ಪ್ರಾರಂಭಿಸಿದ. ಅದೆನು ಬೆಟ್ಟ ಗುಡ್ಡ ಇಲ್ಲ ಕಣಿವೆ ಕಂಡಾಕ್ಷಣ ಇಳಿದು ಹೋಗ್ತಿಯೋ ಮಹರಾಯ ಎಂಬ ಅವನ ಗೊಣಗಾಟಕ್ಕೆ ಮುಗುಳ್ನಗೆಯೊಂದೆ ನನ್ನ ಉತ್ತರವಾಗುತ್ತಿತ್ತು. ಪಾಪ!! ಅವನ ಗೊಣಗಾಟ ಸಹಜವಾದದ್ದೆ ಬೆಳಗ್ಗೆ ತಿಂದಿದ್ದ ದೋಸೆ ಎಂದೋ ಕರಗಿ ಹೋಗಿತ್ತು ಏನಾದರೂ ತಿನ್ನಲು ಸಿಕ್ಕರೆ ಸಾಕು ಎನ್ನುವ ಹತಾಶೆ ಅವನಾದಗಿತ್ತು.
ಸುಮಾರು ಅರ್ಧ ಘಂಟೆಯ ನಂತರ ಮಣ್ಣಿನ ರಸ್ತೆ ಮುಗಿದು ಡಾಂಬರು ರಸ್ತೆ ಪ್ರಾರಂಭವಾದಾಗ ಯಾವುದಾದರೂ ಹೋಟೆಲ್ ಸಿಗಬಹುದೆಂಬ ನಮ್ಮ ಅನಿಸಿಕೆ ಸುಳ್ಳೆ ಆಯಿತು. ಬಾರ್ಜ್ನಲ್ಲಿ ಕುಳಿತು ಇದ್ದ ಬದ್ದ ಬಿಸ್ಕತ್ ಗಳನ್ನೆಲ್ಲ ಮೆದ್ದಿದ್ದ ನನಗೆ ಹೆಚ್ಚು ಹಸಿವೆ ಕಾಡುತ್ತಿರಲಿಲ್ಲವಾದರೂ ಜ್ವರ ಮಾತ್ರ ಏರುಗತಿಯಲ್ಲೆ ಇತ್ತು. ಇಲ್ಲಿ ನಾವು ಎಲ್ಲಿಗೆ ಹೋಗಬೇಕು ಎನ್ನುವ ಅರಿವಿರಲಿಲ್ಲ. ದಾರಿಯಲ್ಲಿ ಸಿಗುವವರನ್ನು ಕೇಳಿ ಮುಂದೆ ಸಿಗುವ ಊರಿನ ಹೆಸರನ್ನು ತಿಳಿದುಕೊಂಡು ಮುಂದೆ ಹೋಗುವುದಷ್ಟೆ ನಮ್ಮ ಕೆಲಸ. ನಮ್ಮ ಗುರಿ ಯಾವುದು ಎಂದು ನಮಗೆ ಸ್ಪಷ್ಟವಿರಲಿಲ್ಲ. ಕೊನೆಗೊಮ್ಮೆ ಮುಖ್ಯ ರಸ್ತೆಯೊಂದು ಎದುರಾಯಿತು. ಯಾವುದೋ ಹೆದ್ದಾರಿಯಿರಬೇಕೆಂದು ಊಹಿಸುತ್ತಿದ್ದವರಿಗೆ ಎದುರಾದದ್ದು "ಕೊಡಚಾದ್ರಿ"ಗೆ ದಾರಿ ಎನ್ನುವ ತುಕ್ಕು ಹಿಡಿದ ಫಲಕ. ಹಿಂದೆ ಮುಂದೆ ನೋಡದೆ ಆ ದಾರಿಯಲ್ಲಿ ವಾಹನ ತಿರುಗಿಸಿದವನನ್ನು ಎಲ್ಲರೂ ಆಶ್ಚರ್ಯದಿಂದ ನೋಡಿದರು. ಅವರಿಗೆ ಅಲ್ಲಿನ ಸೌಂದರ್ಯದ ಬಗ್ಗೆ ತಿಳಿಸಿ ಅದೆ ದಾರಿಯಲ್ಲಿ ಮುಂದುವರೆದಾಗ ಕಣ್ಣಿಗೆ ರಾಚುವಂತಿದ್ದ ಅಲ್ಲಿನ ಹಸಿರು, ಬಣ್ಣ ಬಳಿದಂತೆ ಕಾಣುತ್ತಿದ್ದ ಹುಲ್ಲುಗಾವಲು ಮತ್ತು ಕಾಡಿನ ಸೊಬಗಿಗೆ ಅವಾರಾಗಲೆ ಮನಸೋತು ಈ ರಸ್ತೆಯ ಕೊನೆಯವರೆಗೂ ಹೋಗೋಣವೆಂದು ಅಪ್ಪಣೆಯಿತ್ತರು. ಡಾಂಬರು ರಸ್ತೆಯ ಕೊನೆಯವರೆಗೂ ಬಂದ ನಮಗೆ ಮುಂದೆ ಹೋಗಲು ದಾರಿಯಿದ್ದರೂ ನನ್ನ ವಾಹನಕ್ಕೆ ಯೋಗ್ಯವಲ್ಲದ ದಾರಿಯೆಂದು ಅರಿವಾಯಿತು. ಅಲ್ಲೆ ಹರಿಯುತ್ತಿದ್ದ ಝರಿಯೊಂದರಲ್ಲಿ ನಮ್ಮ ದಾಹ ತೀರಿಸಲು ಇಳಿದೆವು. ನೇರವಾಗಿ ನೀರಿಗಿಳಿದ ಸುರೇಶನನ್ನು ಕಾರಿನೊಳಗಿಂದಲೆ ಹೆದರಿಸಿದವನು ಶಂಕರ. ಆರಾಮವಾಗಿ ನೀರು ಕುಡಿಯುತ್ತಿದ್ದವನಿಗೆ
ಏ ಸುರೇಶ ಮೊಸಳೆ ಕಣೋ ಎನ್ನುವ ಚೀತ್ಕಾರಕ್ಕೆ ಹೆದರಿ ದಡಕ್ಕೆ ಓಡಿ ಬಂದ ಪರಿ ಇಂದಿಗೂ ನನ್ನ ಕಣ್ಣು ಕಟ್ಟಿದಂತಿದೆ. ಅವನ ಆ ಚರ್ಯೆಗೆ ನಗುತ್ತ ನಿಂತಿದ್ದ ನಮಗೆ ಅವನಿಂದ ನಮಗೆಲ್ಲ ನಿಂದನೆಯ ಪೂಜೆ. ಇಲ್ಲ ಪುಟ್ಟ!! ಇಂತಹ ಜಾಗದಲ್ಲಿ ಮೊಸಳೆಗಳು ಬರವುದಿಲ್ಲವೆಂದು ಮನದಟ್ಟು ಮಾಡಿಕೊಟ್ಟರೂ ಅವನು ಮತ್ತೆ ನೀರಿಗಿಳಿದಿದ್ದರೆ ಕೇಳಿ! ರಸ್ತೆಯಲ್ಲೆ ಮಲಗಿ ಇಲ್ಲೆ ಇದ್ದು ಬಿಡೋಣವೆಂದು ಪುಸಲಾಯಿಸಲು ತೊಡಗಿದವ ಇದೆ ಸುರೇಶನೇನ? ಬೆಂಗಳೂರಿಗೆ ಹಿಂದಿರುಗಲು ವರಾತ ಹಚ್ಚಿದವನು ಎಂದು ನೆನಪಿಸಿಕೊಂಡರೆ ನಗು ಬರುತ್ತದೆ. ಕೊನೆಗೊಮ್ಮೆ ಖಾಲಿಯಾಗಿದ್ದ ನೀರಿನ ಶೀಷೆಗಳನ್ನೆಲ್ಲ ತುಂಬಿಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಲು ಆರಂಭಿಸಿದವರಿಗೆ ಎದುರಾದದ್ದು ಮಳೆನಾಡಿನ ಮಳೆಯ ಆರ್ಭಟ. ಅಬ್ಬ ನಿನ್ನ ಪರಿಯೆ ಎಡಬಿಡದೆ ಬೋರೆಂದು ಸುರಿಯುವ ವರ್ಷಧಾರೆ ಬಯಲುಸೀಮೆಯವರಾದ ನಮಗೆ ಬಲು ಅಪರೂಪ. ಮಳೆಹನಿಯ ಜೊತೆ ಸ್ಪರ್ಧೆಗಿಳಿದ ಕಾರಿನ ವೈಪರ್ ಸೋತುಹೋಗುವುದರಲ್ಲಿ ಸಂಶಯವಿಲ್ಲ. ಈ ಹೊತ್ತಿಗಾಗಲೆ ಜ್ವರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಮುಖ್ಯ ರಸ್ತೆಗೆ ಹಿಂತಿರುಗಿ ಬಲಭಾಗಕ್ಕೆ ತಿರುಗಿ ರಸ್ತೆಯಲ್ಲಿ ಸಾಗತೊಡಗಿದೆವು. ಸ್ವಲ್ಪ ಹೊತ್ತಿನಲ್ಲೆ ನಿಟ್ಟೂರು ಎದುರಾಯಿತು ಆದರೆ ಅಲ್ಲಿ ಯಾವುದೆ ಹೋಟೇಲ್ ಸಿಗಲಿಲ್ಲ ಈ ಹೊತ್ತಿಗಾಗಲೆ ಮಧು ತನ್ನ ಅಸಹನೆ ಪ್ರದರ್ಶಿಸಲಾರಂಭಿಸಿದ. ಅರ್ಧ ಮುಕ್ಕಾಲು ಘಂಟೆ ರಸ್ತೆ ಸವೆಸಿದ ನಂತರ ಸಿಕ್ಕದ್ದು ನಗರ. ಅಬ್ಬ ಇಲ್ಲಿ ಸಿಕ್ಕ ಹೊಟೆಲ್ ಒಂದಕ್ಕೆ ದಾಳಿಯಿಟ್ಟೆವು, ದಾಂಗುಡಿಯಿಟ್ಟೆವು. ಆಕ್ರಮಿಸಿದೆವು ಎಂದೆ ಹೇಳಬೇಕು. ಬಿಸಿಯಾಗಿ ಏನಿದೆ ಎಂದು ಕೇಳಿದವರಿಗೆ ಅವನು ತಂದಿಟ್ಟದ್ದು ಖಾಲಿದೋಸೆ. ಎಷ್ಟು ಖಾಲಿ ಮಾಡಿದೆವು ಅರಿವಿಲ್ಲ. ಆಗ ಸಮಯ ಸುಮಾರು ೪ ಘಂಟೆಯಿರಬೇಕು. ಎಲ್ಲರ ಹೊಟ್ಟೆಯ ಬೆಂಕಿ ಆರಿ ತಣ್ಣಗಾಗಿತ್ತು. ಈಗ ನನ್ನ ಜ್ವರದ ಕಡೆಗೆ ಗಮನ ಹರಿಯಿತು. ಅಲ್ಲೆ ಇದ್ದ ಔಷಧದ ಅಂಗಡಿಯೊಂದರಲ್ಲಿ ಮಾತ್ರೆಯನ್ನು ತಂದು ಕೊಟ್ಟ ಶಂಕರನಿಗೊಂದು ಧನ್ಯವಾದ. ಈ ಹೊತ್ತಿಗೆ ನನ್ನ ಕಾರಿನ ಮುಖ್ಯ ದೀಪವನ್ನು ಬದಲಾಯಿಸಿದ್ದೆ. ಈಗಾಗಲೆ ಕತ್ತಲು ಆವರಿಸುವುದಕ್ಕೆ ಮುಂದಾಗಿತ್ತು. ಈಗ ನಮ್ಮ ಗುರಿ ತೀರ್ಥಹಳ್ಳಿಯೆಂದು ಅಲ್ಲಿಂದ ಮುಂದೆ ಶೃಂಗೇರಿಯನ್ನು ತಲುಪುವುದೆಂದು ತೀರ್ಮಾನಿಸಿ ನಮ್ಮ ಪಯಣ ಶುರು. ಸ್ವಲ್ಪ ದೂರ ಸಾಗಿ ಪುಟ್ಟ ಹಳ್ಳಿಯ ಪ್ರವೇಶಕ್ಕೆ ಮುನ್ನವೆ ತಟ್ಟನೆ ನಾನು ವಾಹನವನ್ನು ಗಕ್ಕನೆ ನಿಲ್ಲಿಸಿದಾಗ ಎಲ್ಲರಿಗೂ ಅಚ್ಚರಿ. ಯಾವುದೆ ಬೆಟ್ಟಗುಡ್ಡ ಇಲ್ಲದಿದ್ದರೂ ಯಾಕೆ ನಿಲ್ಲಿಸಿದೆಯೊ ಎಂದು ಕೇಳುತ್ತಿದ್ದವರಿಗೆ ನಾನು ಮುಂದೆ ರಸ್ತೆಯನ್ನು ನೋಡಲು ಸೂಚಿಸಿದಾಗ ಅವರ ಮುಖದಲ್ಲಿ ಆತಂಕಕ್ಕೆ ಕಾರಣವಾದದ್ದು ರಸ್ತೆಯಲ್ಲಿ ಸರಿದು ಹೋಗುತ್ತಿದ್ದ ದೊಡ್ಡದಾದ ಒಂದು ಹಾವು!! ಅದೆ ಸಮಯಕ್ಕೆ ಬಂದ ಹಳ್ಳಿ ಹುಡುಗರಿಬ್ಬರು ನಿಮಗೆ ಒಳ್ಳೆಯ ಶಕುನ ಆದರೆ ಇನ್ನು ಸ್ವಲ್ಪ ಹೊತ್ತು ನಿಂತು ಹೋಗಿ ಎನ್ನುವ ಅವರ ಅಪ್ಪಣೆಯನ್ನು ಶಿರಸಾವಹಿಸಿ ವಾಹನ ನಿಂತಿದ್ದರೂ ಯಾರು ವಾಹನದಿಂದ ಇಳಿಯಲಿಲ್ಲ.ಕಾರಣ ಹಾವಿನ ಭಯ. ಇಲ್ಲಿಂದ ಮುಂದೆ ತೀರ್ಥಹಳ್ಳಿಯವರೆಗೂ ತಮ್ಮ ನೈಸರ್ಗಿಕ ಕರೆಗೂ ಓಗೊಡದೆ ಕಾರಿನಿಂದ ಇಳಿಯದೆ ಕುಳಿತಿದ್ದರು ಎಂದರೆ ಅವರು ಹಾವಿಗೆ ಹೆದರಿದ್ದ ಪರಿ ನಿಮಗೆ ಆಶ್ಚರ್ಯ ತರಿಸಬಹುದು;-)).
ಸಮಯ ಸರಿದು ಹೋಗುತ್ತಿತ್ತು. ಕತ್ತಲು ಆವರಿಸುತ್ತಿತ್ತು. ಕಾರ್ಗತ್ತಲಿನಲ್ಲಿ ಹಾವಿನಂತ ಅಂಕುಡೊಂಕು ಘಟ್ಟದ ರಸ್ತೆಯಲ್ಲಿ ವಾಹನ ಛಲಾಯಿಸುವುದು ಮಜಾ ಕೊಡುತ್ತದೆ. ಗವ್ವೆನ್ನುವ ಕಡು ಕತ್ತಲೆಗೆ ಎಲ್ಲರು ಮಾತನಾಡುವುದನ್ನೂ ಕೂಡ ನಿಲ್ಲಿಸಿದ್ದರು. ಪಕ್ಕದಲ್ಲಿ ಕುಳಿತಿದ್ದ ಮಧುವಿಗೆ ನನ್ನ ವಾಹನಕ್ಕೂ ದಾರಿಕೊಡದೆ ತಾನೂ ಮುಂದೆ ಹೋಗದೆ ಇದ್ದ ಜೀಪಿನ ಸಂಖ್ಯೆಯನ್ನು ಬರೆದುಕೊಳ್ಳುವಂತೆ ಸೂಚಿಸಿದೆ. ಅದು ಒಂದು ಎಚ್ಚರಿಕೆಯ ಮತ್ತು ನನ್ನ ಪ್ರತಿ ಪ್ರಯಾಣದ ಅಭ್ಯಾಸ. ಮತ್ತೆ ಗಾಭರಿಯಾದ ಮಧುವಿಗೆ ಹೆದರುವ ಅಗತ್ಯವಿಲ್ಲ ಅದೊಂದು ಎಚ್ಚರಿಕೆಯ ಹೆಜ್ಜೆ ಅಷ್ಟೆ ಎಂದು ತಿಳಿಸಿದಾಗಲೆ ಅವನ ಮುಖದಲ್ಲಿದ್ದ ಆತಂಕದ ಗೆರೆಗಳು ಕಡಿಮೆಯಾದದ್ದು. ಜೀಪನ್ನು ಹಿಂದೆ ಹಾಕಿ ನಾವು ಮುಂದೆ ಹೋದಾಗಲೆ ನನ್ನ ಸ್ನೇಹಿತರ ಮುಖದಲ್ಲಿ ಒತ್ತಡದ ಚಿನ್ಹೆಗಳು ಬದಲಾದದ್ದು. ತೀರ್ಥಹಳ್ಳಿ ತಲುಪಿ ಶೃಂಗೇರಿಗೆ ಹೋಗುವ ರಸ್ತೆ ವಿಚಾರಿಸುತ್ತಿದ್ದವರಿಗೆ ಕೇಳಿಬಂದದ್ದು ಎಚ್ಚರಿಕೆಯ ಮಾತು. ನಕ್ಸಲೈಟ್ಗಳ ಹಾವಳಿಯಿರುವುದರಿಂದ ಇಲ್ಲೆ ಉಳಿದು ಬೆಳಿಗ್ಗೆ ಹೋಗಿ ಎಂಬ ಸಲಹೆ. ಅದು ನನಗೂ ಸರಿಯೆನಿಸಿತು ಜ್ವರದಿಂದ ಬಳಲಿದ್ದವ್ನಿಗೆ ರಾತ್ರಿ ಪ್ರಯಾಣ ಹೆಚ್ಚು ಪ್ರಯಾಸಕರ. ಸರಿ ತೀರ್ಥಹಳ್ಳಿಯಲ್ಲಿ ಜಗ್ಗೇಶನ ಚಿತ್ರೀಕರಣವಿದ್ದುದರಿಂದ ಯಾವುದೆ ವಸತಿಗೃಹವೂ ಸಿಗಲಿಲ್ಲ. ಕೊನೆಗೆ ಅಲ್ಲೆ ಇದ್ದ ಸರ್ಕಾರಿ ವಸತಿ ಗೃಹವೊಂದರಲ್ಲಿ ಕೋಣೆಗಳು ಸಿಕ್ಕಾಗ ರಾತ್ರಿ ೧೦ ಘಂಟೆ. ಇದ್ದುದರಲ್ಲೆ ಉತ್ತಮವಾದ ಉಪಹಾರಗೃಹವೊಂದರಲ್ಲಿ ಊಟಮುಗಿಸಿ ನಾಳೆ ಬೆಂಗಳೂರಿಗೆ ಹಿಂತಿರುಗಬೇಕಾಗಿರುವುದರಿಂದ ಮುಂಜಾನೆ ಬೇಗನೆ ಸಿದ್ದವಾಗಲು ಎಲ್ಲರಿಗೂ ಸೂಚಿಸಿ ನಿದ್ದೆಗೆ ಜಾರಿದವನಿಗೆ ಸಮಯದ ನೆನಪಿಲ್ಲ.
೫ ಘಂಟೆಗೆ ಎದ್ದು ಸುಖನಿದ್ದೆ ಸವಿಯುತ್ತಿದ್ದವರನ್ನು ಹೊಡೆದು ಎಚ್ಚರಗೊಳಿಸಿ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ಶೃಂಗೇರಿಯ ದಾರಿ ಹಿಡಿದೆವು.ಜ್ವರ ಹೇಳದಂತೆ ಮಾಯವಾಗಿತ್ತು. ೩೦ ನಿಮಿಷದ ನಂತರ ಸಿಗುವ ಕುವೆಂಪು ಕವಿ ಶೈಲಕ್ಕೆ ಭೇಟಿಕೊಡುವ ಮನಸ್ಸಿದ್ದರೂ ಇನ್ನೂ ಬೆಳಕು ಹರಿಯದ್ದರಿಂದ ಅದು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಇನ್ನು ನನ್ನನ್ನು ಕಾಡುತ್ತಿದೆ. ಆಗುಂಬೆಯ ಮುಖೇನ ಶೃಂಗೇರಿ ತಲುಪಿ ನದಿ ದಂಡೆಯಲ್ಲಿ ವಾಹನ ನಿಲ್ಲಿಸಿ ನೇರವಾಗಿ ನದಿಗೆ ಸ್ನಾನ ಮಾಡಲು ನಾನು ಮತ್ತು ಮಧು ತೆರಳಿದೆವು. ತನ್ನ ವಿಚಿತ್ರ ನಡತೆಯಿಂದ ಎಲ್ಲರನ್ನು ನಗಿಸುವ ಒಮ್ಮೊಮ್ಮೆ ಗಾಭರಿಗೊಳಿಸುವ ಸುರೇಶ ನದಿಗೆ ಬರದೆ ಅಲ್ಲೆ ಇದ್ದ ಸ್ನಾನಗೃಹವೊಂದರಲ್ಲಿ ಬಕೆಟ್ಟಿಗೇ ಶಾಂಪೂ ಸುರಿದು ಅದೆ ನೀರನ್ನು ಮೈಮೇಲೆ ಸುರಿದು ಕೊಂಡು ಹೊರಗೆ ಬಂದ ಪರಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಅವನ ನಂತರ ಸ್ನಾನ ಮಾಡಲು ಹೋದ ವ್ಯಕ್ತಿ ಕೋಣೆಯ ತುಂಬಾ ತುಂಬಿದ್ದ ನೊರೆಯನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದ. ಮನಸ್ಸಿಗೆ ಮುದ ನೀಡದ ಸ್ನಾನ ಸುರೇಶನನ್ನು ನದಿಗೆ ಕರೆತಂದಿತ್ತು. ತುಂಗಾ ನದಿಯಲ್ಲಿ ಈಜಿ ಹೊರಬಂದಾಗ ಸುರೇಶ ತನ್ನ ಒದ್ದೆಯಾದ ಉಡುಪನ್ನು ನನ್ನ ಕಾರಿನ ಮೇಲ್ಭಾಗದಲ್ಲಿ ಒಣಗಿಹಾಕಿದ. ನಂತರ ಶಾರದೆಯ ದರ್ಶನ ಪಡೆದು ಋಷ್ಯಶೃಂಗಗಿರಿಗೆ (ಕಿಗ್ಗ) ಹೊರಟು ದೇವಸ್ಥಾನಕ್ಕೆ ಭೇಟಿ ಕೊಟ್ಟು. ಅಲ್ಲಿಂದ ಸುಮಾರು ೧೦-೧೫ ಕಿ.ಮೀ ದೂರದಲ್ಲಿರುವ ಸಿರಿಮನೆ ಜಲಪಾತಕ್ಕೆ ತೆರಳಿದೆವು. ಮಳೆ ಬಂದದ್ದರಿಂದ ಮಣ್ಣಿನ ದಾರಿ ನನ್ನ ವಾಹನವನ್ನು ಕಣಿವೆಯ ಕಡೆಗೆ ಎಳೆಯುತ್ತಿದ್ದರೆ ಎಲ್ಲರ ಮುಖದಲ್ಲೂ ಆತಂಕದ ಛಾಯೆ. ಸಾವಕಾಶವಾಗಿ ಕಡಿದಾದ ಕಣಿವೆಗಳಲ್ಲಿ ಇಳಿದು ಬೆಟ್ಟವನ್ನು ಹತ್ತಿ ಜಲಪಾತದ ಹತ್ತಿರ ವಾಹನ ನಿಂತ ತಕ್ಷಣವೆ ಇಳಿದ ಸುರೇಶ ಕಾರಿನ ಕೆಳಗೂ ಮತ್ತು ಮೇಲೂ ಹುಡುಕತೊಡಗಿದಾಗ ನಮಗೆಲ್ಲ ಆಶ್ಚರ್ಯ. ಎನೋ ಹಾವಿನ ಭಯವೆ ಎನ್ನುವ ನಮ್ಮ ಪ್ರಶ್ನೆಗೆ ತಲೆಯಲ್ಲಾಡಿಸುತ್ತ. ಇಲ್ಲ ಮೇಲ್ಗಡೆ ನನ್ನ ಒದ್ದೆ ಬಟ್ಟೆ ಮತ್ತು ಕೆಳಗೆ ನನ್ನ ಚಪ್ಪಲಿ ಕಾಣಿಸುತ್ತಿಲ್ಲ ಎಂದು ಅಲವತ್ತುಕೊಂಡ. ಶೃಂಗೇರಿಯಲ್ಲಿ ಕಾರಿನ ಮೇಲೆ ಒಣಗಿಹಾಕಿದ್ದ ಮತ್ತು ಕಾರಿನ ಕೆಳಗೆ ಬಿಟ್ಟಿದ್ದ ಚಪ್ಪಲಿಯನ್ನು ನಮ್ಮ ಮಹಾಶಯ ೨೦ ಕಿ.ಮೀ ಬಂದ ನಂತರ ಹುಡುಕುತ್ತಿದ್ದನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಜಲಪಾತದೆಡೆಗೆ ತೆರಳಿದೆವು. ಹೆಸರೇ ಹೇಳುವಂತೆ ಸುಂದರ ಸಿರಿಮನೆ ಜಲಪಾತದಲ್ಲಿ ಮೊದಲು ನೀರಿಗಿಳಿಯಲು ಹೆದರಿದವರಿಗೆ ದಡದಲ್ಲಿ ಅಂಟಿದ ಜಿಗಣೆಗಳು ಸ್ವಾಗತಿಸಿದವು. ನೇರವಾಗಿ ಜಲಪಾತದ ಕೆಳಗೆ ನಿಂತು ನೈಸರ್ಗಿಕವಾಗಿ ದೇಹವನ್ನು ಮಸಾಜ್ ಮಾಡಿಸಿಕೊಳ್ಳುತ್ತಿದ್ದವನನ್ನು ನೋಡಿ ಒಬ್ಬೊಬ್ಬರೆ ನೀರಿಗಿಳಿಯಲು ಆರಂಭಿಸಿದರು. ಇಲ್ಲಿಂದಲೆ ಶೃಂಗೇರಿ ಮಠಕ್ಕೆ ಸ್ವಲ್ಪ ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಪಾತದಲ್ಲೆ ಸುಮಾರು ೨ ಘಂಟೆಗಳನ್ನು ಕಳೆದು ಅಲ್ಲಿಂದ ನೇರವಾಗಿ ಬಾಳೆಹೊನ್ನೂರಿಗೆ ಬಂದು ಊಟಕ್ಕಾಗಿ ಹತ್ತಿರದಲ್ಲಿದ್ದ ಊಟದ ಮೆಸ್ ಒಂದನ್ನು ಹುಡುಕಿ ಚಪಾತಿ ತಯಾರಿಸಲು ಅರ್ಧ ಘಂಟೆಯ ಸಮಯ ಕೇಳಿದವನಿಗೆ ಮನಸ್ಸಿನಲ್ಲೆ ವಂದಿಸಿ ಕಾರಿನಲ್ಲೆ ಮಲಗಿದವನಿಗೆ ಎಚ್ಚರವಾದದ್ದು ಶಂಕರ ಕರೆದಾಗಲೆ. ಚಪಾತಿಯಷ್ಟೆ ನನಗೆ ರುಚಿಸಿದ್ದು. ಚಿಕ್ಕಮಗಳೂರು, ಬೇಲೂರು, ಹಾಸನ ಕುಣಿಗಲ್ ಮುಖಾಂತರ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿಯಾಗಿತ್ತು.
೪ ವರ್ಷಗಳ ತರುವಾಯ ಎಲ್ಲ ಘಟನೆಗಳನ್ನು ನೆನಪಿಸಿಕೊಂಡು ಬರಹದಲ್ಲಿ ಹಿಡಿದಿಡುವುದು ಕಷ್ಟಕರ ನೆನಪಿಗೆ ಬಂದಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಪ್ರವಾಸ ಹೋಗಿಬಂದು ೪ ವರ್ಷಗಳ ನಂತರ ಪ್ರವಾಸ ಕಥನ ಬರೆಯಲು ಕುಳಿತಾಗ ನನ್ನ ಕಣ್ಣ ಮುಂದೆ ಹಾದು ಹೋದ ಪ್ರವಾಸದ ಪ್ರತಿಯೊಂದು ದೃಶ್ಯಗಳು ಮತ್ತು ಬಿಡುವಿನ ಸಮಯದಲ್ಲಿ ನಾವೆಲ್ಲಾ ಮೆಲುಕು ಹಾಕುವ ಆ ಕ್ಷಣಗಳು ನೆನಪಿನ ಕಚಗುಳಿಯಿಡುತ್ತವೆ. ನಾನು ಹೆಚ್ಚು ಸಂತೋಷ ಪಟ್ಟ ಪ್ರವಾಸಗಳಲ್ಲಿ ಇದು ಮೊದಲನೆಯದಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

Tuesday, June 17, 2008

ಬಂಡಜೆ ಚಾರಣ

ಹಸಿರು ತುಂಬಿದ ಪಶ್ಚಿಮಘಟ್ಟಗಳಲ್ಲಿ ಅಲೆದಾಡುವುದೆಂದರೆ ನನಗೆ ಮಹಾಪ್ರಾಣ ಆದರೆ ನಮ್ಮ ಕಾರ್ಖಾನೆಯ ಸಹೋದ್ಯೋಗಿಗಳಿಗೆ ಚಾರಣವೆಂದರೆ ಅಲ್ಪ ಪ್ರಾಣ. ಚಾರಣಕ್ಕೆ ಬರುವುದಿರಲಿ ಚಾರಣ ಎಂದು ಹೇಳುವುದೇ ತಡ ಅಂದಿನಿಂದಲೆ ನನ್ನನ್ನು ಕಂಡರೆ ದೂರ ಹೋಗಿಬಿಡುತ್ತಾರೆ. ಇದರಿಂದ ಚಾರಣ ನನ್ನ ಪಾಲಿಗೆ ಮರೀಚಿಕೆಯಾಗಿಯೆ ಉಳಿದಿತ್ತು. ಕೊನೆಗೂ ೨೦೦೭ರ ಜನವರಿ ೨೬-೨೮ರಂದು ಇರುವ ರಜಾದಿನಗಳಲ್ಲಿ ಚಾರಣಕ್ಕೆ ಹೋಗುವುದೆಂದು ನಾನು, ವಾಸು ಮತ್ತು ಶ್ರೀಷ್ ನಿರ್ಧರಿಸಿದೆವು. ಪ್ರಯಾಣದ ಸಿದ್ದತೆಗಳು ಪೂರ್ಣಗೊಳ್ಳುವ ಹಂತದಲ್ಲಿ ವಾಸುವಿನ ಸ್ನೇಹಿತರು
ಒಬ್ಬೊಬ್ಬರಾಗೆ ಬರುವ ಇಚ್ಛೆವ್ಯಕ್ತಪಡಿಸತೊಡಗಿದರು. ಸರಿ ಎಲ್ಲರನ್ನು ಒಳಗೊಂಡ ೧೪ ಜನರ ಗುಂಪು ( ಗುಂಪು ಸೂಕ್ತ ಪದ ಏಕೆಂದರೆ ಚಾರಣಕ್ಕೆ ೩-೪ ಜನರಿಗಿಂತ ಹೆಚ್ಚಾದಷ್ಟು ತೊಂದರೆಯೂ ಹೆಚ್ಚಾಗುತ್ತದೆ) ಗುರುವಾರ ರಾತ್ರಿ ಬಂಡಜೆಗೆ ಹೋಗುವುದೆಂದು ನಿರ್ಧರಿಸಿ ಹಿಂದಿನ ದಿನವೇ ವಾಹನ, ಢೇರೆ, ೧೪ ಜನಗಳಿಗೆ ೨ ದಿನಕ್ಕೆ ಬೇಕಾಗುವಷ್ಟು ಚಪಾತಿ ಮತ್ತು ಕೆಲವು ಚಾರಣ ಪರಿಕರಗಳನ್ನು ಸಿದ್ದಪಡಿಸಿಕೊಂಡೆವು.
ಬಂಡಜೆ ಬಗ್ಗೆ ಅಂತರ್ಜಾಲ ತಾಣಗಳನ್ನು ಜಾಲಾಡಿ ಸಂಗ್ರಹಿಸಿದ ಮಾಹಿತಿಯಂತೆ ಪ್ರಖ್ಯಾತ ಶೈವ ಪುಣ್ಯಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ ಸುಮಾರು ೧೩ ಕಿ.ಮೀ ದೂರದಲ್ಲಿರುವ ಬಂಡಜೆ ಮಲೆನಾಡಿನ ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿಯೆಂದರೆ ಇರುವ ನಾಲ್ಕೈದು ಮನೆಗಳು ೧-೨ ಕಿ.ಮೀ ದೂರದಲ್ಲಿರುತ್ತವೆ. ಇನ್ನು ಹೆಚ್ಚು ಮಾಹಿತಿಗಿಗಾಗಿ ಅಂತರ್ಜಾಲದಲ್ಲೆ ಸ್ನೇಹಿತರಾದ ಪಶ್ಚಿಮ ಘಟ್ಟಗಳ ಮಾಹಿತಿ ಕಣಜ ರಾಜೇಶ್ ನಾಯಕ್ ರನ್ನು ಸಂಪರ್ಕಿಸಿ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ.
ನಾನು ಆಸಕ್ತಿಯಿಂದ ಕಾಯುತ್ತಿದ್ದ ಆ ಗುರುವಾರ ಬಂದೇ ಬಿಟ್ಟಿತು, ಆದರೆ ರಾತ್ರಿ ೮.೩೦ ಕ್ಕೆ ಹೊರಡಬೇಕಾದ ನಾವು ಪ್ರಯಾಣ ಆರಂಭಿಸಿದಾಗ ರಾತ್ರಿ ೧೧ ಘಂಟೆ. ನನಗೋ ರಾತ್ರಿ ಪ್ರಯಾಣ ನರಕ ಸದೃಶ. ಇಲ್ಲಿ ನಮ್ಮ ತಂಡವನ್ನು ಪರಿಚಯಿಸುತ್ತೇನೆ. ನಾನು (ಪ್ರಸನ್ನ), ಶ್ರೀಷ್ ದೇಶಪಾಂಡೆ  ವಾಸು (ನಮ್ಮ ಬಡಾವಣೆಯ ಸ್ನೇಹಿತ) ನವೀನ್, ಶೇಷ, ಸುರೇಶ, ಬಾಲು, ಅಶೋಕ, ಆನಂದ, ರಘು, ಚಂದ್ರು, ವಿನಯ್ ಮತ್ತು ಉಮೇಶ್ (ಭದ್ರಾವತಿಯಿಂದ ಬಂದು ಹಾಸನದಲ್ಲಿ ನಮ್ಮ ತಂಡಕ್ಕೆ ಸೇರಿಕೊಂಡಾತ) ಚಾರ್ಮಡಿ ಘಟ್ಟದ ತಪ್ಪಲಿನಲ್ಲಿರುವ ಕೊಟ್ಟಿಗೆಹಾರದಲ್ಲಿ ಮಲೆನಾಡಿನ ವಿಶೇಷ ನೀರ್ ದೋಸೆಯನ್ನು ಬೆಳ್ಳಂ ಬೆಳಿಗ್ಗೆ ೪ ಘಂಟೆಗೆ ಗುಳುಂ ಎನ್ನಿಸಿ (ನೀರ್ ದೋಸೆಗೆ ಗುಳುಂ ಪದವೇ ಸೂಕ್ತ) ಉಜಿರೆ ತಲುಪಿದಾಗ ಬೆಳಿಗ್ಗೆ ೮ ಘಂಟೆ. ಸಮಯದ ಪರಿವೆ ಇಲ್ಲದ ನಮ್ಮ ಚಾರಣಿಗರು ಅಡಿಗೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ಕೊಂಡು ತಂದು ಬಂಡಜೆ ತಲುಪಿದಾಗ ೧೦ ಘಂಟೆ.
ನಾರಾಯಣ ಗೌಡರ ಮನೆಯಿಂದ ನಮ್ಮ ಚಾರಣದ ಶುಭಾರಂಭ, ಕಣ್ಣಿಗೆ ಹಬ್ಬವೆನಿಸುವಷ್ಟು ಹಸಿರು ತುಂಬಿ ನಿಂತಿರುವ ಬೆಟ್ಟಗಳು ಕೈಬೀಸಿ ಚಾರಣಕ್ಕೆ ಕರೆಯುವಂತಿತ್ತು. ಕರೆಯುತ್ತಿರುವ ಕೈ ಹಿಡಿದು ಹೊರಟ ತಕ್ಷಣ ಎದುರಾದದ್ದೊಂದು ತೊಡಕು, ನಮ್ಮ ಊಟದ ಕೆಲವು ಬುತ್ತಿಗಳನ್ನು ವಾಹನದಲ್ಲೆ ಬಿಟ್ಟು ಬಂದಿದ್ದೆವು. ನಮ್ಮನ್ನು ಇಳಿಸಿ ಹಿಂದಿರುಗುತ್ತಿದ್ದ ನಮ್ಮ ವಾಹನ ಆಗಲೆ ಉಜಿರೆ ತಲುಪಿತ್ತು ನಮ್ಮ ವಾಹನದ ಚಾಲಕನನ್ನು ಸಂಪರ್ಕಿಸುವ ನಮ್ಮ ಪ್ರಯತ್ನಕ್ಕೆ ತಣ್ಣೀರೆರಚಿದ್ದು ಸತ್ತುಹೋದ ನಮ್ಮ ಸಂಚಾರಿ ದೂರವಾಣಿಗಳು ಅಲ್ಲೆ ಗೌಡರ ಮನೆಯಿಂದ ಚಾಲಕನನ್ನು ಸಂಪರ್ಕಿಸಿ ನಮ್ಮ ಬುತ್ತಿಗಳು ಪುನಹ ಸಿಕ್ಕಾಗ ಸಮಯ ೧೦.೪೦. ಅತಿಭಾರವಾದ ವಸ್ತುಗಳೊಂದಿಗೆ ನಮ್ಮ ಚಾರಣ ಮತ್ತೆ ಆರಂಭ. ದಾರಿಯೆ ಇಲ್ಲದ ದಾರಿಯಲ್ಲಿ ನಮ್ಮ ನಡಿಗೆ. ಗೌಡರ ತೋಟವನ್ನು ದಾಟಿ ಸಣ್ಣ ಝರಿಗಳನ್ನು ಹಾಯ್ದು ಬೆಟ್ಟ ಹತ್ತಲು ಪ್ರಾರಂಭ. ಮಚ್ಚು ಹಿಡಿದು ನಮ್ಮೆಲ್ಲರ ದಾರಿಗೆ ಅಡ್ಡಲಾಗುವ ಸಣ್ಣ ಗಿಡಗಂಟೆಗಳನ್ನು ಕತ್ತರಿಸುತ್ತಾ ನಮ್ಮ ದಾರಿಯನ್ನು ಸುಗಮಗೊಳಿಸುತ್ತ ಸಾಗಿದ್ದ ನಮ್ಮ ಮಚ್ಚೇಶ್ವರ(ಸೂರಿ) ಮುಂದೆ, ಪ್ರಭಾತ್ ಪೇರಿಯಲ್ಲಿ ಉಪಾಧ್ಯಾಯರನ್ನು ಹಿಂಬಾಲಿಸುವ ಮಕ್ಕಳಂತೆ ನಾವೆಲ್ಲ ಅವನ ಹಿಂದೆ. ಮುಂದೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತ ಹೋಯಿತು. ಚಳಿಗಾಲದಲ್ಲಿ ಮರದ ಎಲೆಗಳು ಉದುರಿ ನಮ್ಮ ನಡಿಗೆ ಕಷ್ಟವಾಗುತ್ತಿತ್ತು. ನಮ್ಮಲ್ಲಿದ ಉತ್ಸಾಹ, ಹಾಡುಗಳು, ಉಮೇಶನ ಸಮಯೋಚಿತ ಮಾತುಗಳು ಮತ್ತು ಹಾಸ್ಯ ಚಟಾಕಿಗಳೇ ನಮ್ಮ ಸ್ಪೂರ್ತಿ. ಸುಮಾರು ಒಂದೂವರೆ ಘಂಟೆಯ ನಡಿಗೆಯ ನಂತರ ಶುರುವಾಯ್ತು ನೋಡಿ ತೊಂದರೆಗಳ ಆಗರ, ಹಿಂದೊಮ್ಮೆ ಇಲ್ಲಿಗೆ ಚಾರಣಕ್ಕೆ ಬಂದು ಅನುಭವವಿದ್ದ ಅಶೋಕ, ಬಾಲು ಮತ್ತು ರಘುವನ್ನು ನಂಬಿ ನಮ್ಮ ನವೀನ (ತಂಡದ ನಾಯಕ) ಗೌಡರ ಮಗನ ಮಾತು ಕೇಳದೆ ಸ್ಥಳೀಯ ಮಾರ್ಗದರ್ಶಕನನ್ನು (ಗೈಡ್) ತೆಗೆದುಕೊಳ್ಳದೆ ಇದ್ದ ಪರಿಣಾಮ ನಾವು ದಾರಿ ತಪ್ಪಿದ್ದೆವು.
ಆದರೂ, ಎನೋ ಆಶಾಭಾವನೆಯೊಂದಿಗೆ ನಮ್ಮ ಚಾರಣ, ಅರ್ಧ ಘಂಟೆಯ ನಡಿಗೆಯ ನಂತರ ನಮ್ಮ ಮುಂದಿದ್ದ ದಾರಿ ಸಂಪೂರ್ಣವಾಗಿ ಕಾಣದಾದಾಗ ಎಲ್ಲರ ಮುಖದಲ್ಲಿ ಆತಂಕ ನಿರಾಸೆ.ಚುರುಗುಡುತ್ತಿದ್ದ ಹೊಟ್ಟೆ ಊಟದ ಸಮಯವನ್ನು ನೆನಪಿಸುತ್ತಿದ್ದರೂ ಸಹ ನಮ್ಮ ಗುರಿಯಾದ ನಾಗಮೂಲ ಸಿಗುವ ಯಾವ ಲಕ್ಷಣಗಳು ಗೋಚರಿಸಲಿಲ್ಲ. ಈ ಸಮಯಕ್ಕೆ ಆಗಲೆ ಅಡಿಗೆಗಾಗಿ ತಂದಿದ್ದ ತರಕಾರಿಗಳು ನಮ್ಮೆಲ್ಲರ ಹೊಟ್ಟೆ ಸೇರತೊಡಗಿದವು. ಮುಂದೆ ಕಾಡು ಇನ್ನೂ ಹೆಚ್ಚು ದಟ್ಟವಾಗುತ್ತ ಕಡಿದಾಗುತ್ತ ಹೋದಾಗ ನಾವು ದಾರಿ ತಪ್ಪಿದ್ದು ಸುಸ್ಪಷ್ಟವಾಯಿತು. ಈಗ ನಮ್ಮ ಮುಂದೆ ಇರುವ ಅವಕಾಶವೆಂದರೆ ಗೌಡರ ಮನೆಯವರನ್ನು ಸಂಪರ್ಕಿಸಿ ದಾರಿಯನ್ನು ಅಥವ ಮಾರ್ಗದರ್ಶಕರನ್ನು ಕೇಳುವುದು. ಇವೆರಡಕ್ಕು ನಮ್ಮ ಬಳಿ ಗೌಡರ ಮನೆಯ ದೂರವಾಣಿ ಸಂಖ್ಯೆ ಇರಲಿಲ್ಲ. ಅದು ನಮ್ಮ ಚಾಲಕನ ಬಳಿ ಇತ್ತು ಆದರೆ ಆತ ತನ್ನ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿದ್ದ. ತತ್ಕ್ಷಣ ಹೊಳೆದದ್ದು ಆಪಧ್ಭಾಂದವ ರಾಜೇಶ್ ನಾಯಕ್ !!!
ಅಬ್ಬ !!! ಇಲ್ಲಿ ಎಲ್ಲರ ದೂರವಾಣಿಗಳು ಜೀವಂತವಾಗಿದ್ದವು. ರಾಜೇಶ್ ನಾಯಕ್ ಅವರಿಗೆ ನಾವಿರುವ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಕೋರಿದೆ, ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡುವುದಾಗಿ ತಿಳಿಸಿದರು. ಈ ಸಮಯದಲ್ಲಿ ರಾಜೇಶ್ ಬಗ್ಗೆ ಹೇಳಲೇ ಬೇಕು. ಇವರನ್ನು ನಾನೂ ಸಹ ಮುಖತಃ ಭೇಟಿಯಾಗಿಲ್ಲ ಆದರೂ ಅವರು ಮಾಡುವ ಸಹಾಯ ನಿಜಕ್ಕೂ ಹೊಗಳಿಕೆ ಅರ್ಹವಾದದ್ದು. ಪಕ್ಕದ ಮನೆಯವರಿಗೆ ಸಹಾಯ ಮಾಡಲು ಹಿಂಜರಿಯುವ ನಮಗೆ(ಬೆಂಗಳೂರಿಗರಿಗೆ) ಅವರ ಸಮಯೋಚಿತ ಸಹಾಯವನ್ನು ಏನೆಂದು ಹೊಗಳುವುದು. ನನ್ನ ಆಲೋಚನೆಯನ್ನು ತುಂಡರಿಸಿದ್ದು ರಾಜೇಶ್ ಅವರ ದೂರವಾಣಿ ಕರೆ. ಅವರಿಂದ ಸ್ಪಷ್ಟೋಕ್ತಿ ನಾವು ಪ್ರಾರಂಭದಲ್ಲೆ ದಾರಿ ತಪ್ಪಿರುವ ಬಗ್ಗೆ ತಿಳಿಸಿದ ರಾಜೇಶ್ ಅಲ್ಲಿಂದಲೆ ನಮ್ಮ ಗುರಿಯಾದ ನಾಗಮೂಲಕ್ಕೆ ಹೋಗಲು ನಮ್ಮ ನಡಿಗೆಯನ್ನು ಬಲಗಡೆ ಕಾಣುತ್ತಿರುವ ಬೋಳುಗುಡ್ಡದ ಜಾಡು ಹಿಡಿದು ಮುಂದುವರೆಸಲು ಸೂಚನೆ. ಮತ್ತೆ ನಮ್ಮ ದಾರಿ ಹುಡುಕಾಟ ಪ್ರಾರಂಭ. ಯಾವ ದಾರಿಯೂ ಸಿಗಲಿಲ್ಲ. ಇದೆ ಸಮಯದಲ್ಲಿ ಸಾಹಸ ಪ್ರಿಯರಾದ ವಾಸು ಮತ್ತೆ ರಘು ಎಡಕ್ಕೂ ಅಂದರೆ ಪೂರ್ವ ದಿಕ್ಕಿಗೂ, ಅಶೋಕ ಮತ್ತು ಚಂದ್ರು ಬಲಭಾಗಕ್ಕೂ ದಾರಿ ಹುಡುಕಲು ವಾನರ ಸೈನ್ಯದಂತೆ ಮುನ್ನುಗ್ಗಿದರು. ವಾಸು ಮತ್ತು ರಘು ನಿರಾಸೆಯಿಂದ ಹಿಂದಿರುಗಿದರೆ, ಅಶೊಕ ಮತು ಚಂದ್ರು ಕಡಿದಾದ ಗುಡ್ಡವನ್ನು ಏರುವ ಸಾಹಸ ಬೇಡವೆಂದು ಮತ್ತು ಅಲ್ಲೆ ಕಾಣಸಿಗುತ್ತಿದ್ದ ಪ್ರಾಣಿಗಳ ಹೆಜ್ಜೆಗಳು ಇವು ನಮ್ಮ ದಾರಿಯಲ್ಲವೆಂದು ತಿಳಿಸಿಹೇಳುತ್ತಿದೆಯೆಂದರು. ಈಗ ನಮ್ಗೆ ಉಳಿದದ್ದು ಒಂದೆ ದಾರಿ, ಅದು ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆ ಮಾತು.
ಇಲ್ಲಿಂದ ನಮ್ಮ ಇಳಿಕೆ ಪ್ರಾರಂಭ ಇಲ್ಲಿಯೂ ನಮಗೆ ಅಚ್ಚರಿ ಬಂದ ದಾರಿಯೆ ಗೊತ್ತಾಗುತ್ತಿಲ್ಲ ನಾವು ಬಂದ ದಾರಿಗೆ ಯಾವುದೆ ಗುರುತು ಸಹ ಉಳಿಸಿಲ್ಲ. ಅದು ಹೇಗೋ ಗಿಡಮರಗಳನ್ನು ಬಳಸಿ ಸೂರ್ಯನ ದಿಕ್ಕನ್ನೆ ಸೂಚಿಯಾಗಿಟ್ಟುಕೊಂಡು ಮೈಕೈ ತರಚಿಕೊಂದು ಬಟ್ಟೆಗಳೆಲ್ಲ ಹರಿದು ಹೋಗುತ್ತಿದ್ದರೂ ಲೆಕ್ಕಿಸದೆ ಇಳಿದೇ ಇಳಿದೆವು. ಕೊನೆಗೆ ಮನುಷ್ಯ ನಿರ್ಮಿತ ಕಲ್ಲಿನ ಸಣ್ಣ ಗೋಡೆಯೊಂದು ಗೋಚರಿಸಿತು. ಅಂದರೆ ನಮ್ಮ ದಾರಿ ಸರಿಯಿರಬಹುದೆಂಬ ಊಹೆ, ಅದನ್ನೆ ಗುರಿಯಾಗಿಟ್ಟುಕೊಂಡು ಕೆಳಗಿಳಿದೆವು.
ಬಿಸಿಲಿನ ಝಳಕ್ಕೆ ಮೈ ಮನಸ್ಸು ತಲೆ ಕಾದ ಕಬ್ಬಿಣದಂತೆ ಸುಡುತ್ತಿತ್ತು. ಅಲ್ಲೆ ಹರಿಯುತ್ತಿದ್ದ ಸಣ್ಣ ಝರಿಯೊಂದಕ್ಕೆ ಬೇಸಿಗೆಯಲ್ಲಿ ಎಮ್ಮೆಗಳು ನೀರಿಗೆ ಬೀಳುವಂತೆ ಬಿದ್ದಾಗ ಪ್ರಪಂಚವೇ ಮರೆತು ಹೋಗುವಷ್ಟು ಸುಖವೆನಿಸುತ್ತಿತ್ತು. ಒಂದು ಘಂಟೆಗು ಹೆಚ್ಚು ನೀರಿನಲ್ಲಿದ್ದರೂ ನಮ್ಮ ದಣಿವು ಮಾತ್ರ ಆರಿರಲೇ ಇಲ್ಲ. ಮಾನವ ಧ್ವನಿ ನಮ್ಮನ್ನು ಇಹ ಲೋಕಕ್ಕೆ ಎಳೆದು ತಂದವು. ಅಲೆ ಇದ್ದ ಅಜ್ಜಿ ಮನೆಯವರ ಮಾತುಗಳೆ ಇರಬೇಕು. ನೀರಿನಿಂದೆದ್ದು ಚಪಾತಿಯ ಬುತ್ತಿಗೆ ಕೈ ೧೪ ಜನಕ್ಕೆ ೨ ದಿನಕ್ಕೆ ಅಂತ ತಂದಿದ್ದ ಚಪಾತಿ ಒಂದೆ ಹೊತ್ತಿಗೆ ಖಾಲಿ! ಸುಮಾರು ೪.೩೦ರ ಸಮಯಕ್ಕೆ ಸ್ಥಳೀಯರ ಗುಂಪೊಂದು ನಾಗಮೂಲದ ದಾರಿ ತೋರಿಸುವ ಭರವಸೆ ಕತ್ತಲಿನಲ್ಲಿನ ಆಶಾಕಿರಣದಂತಿತ್ತು. ಇಲ್ಲದಿದ್ದರೆ ನಮಗೆ ಹಿಂತಿರುಗುವ ದಾರಿಯಷ್ಟೆ ಗಟ್ಟಿಯಾಗುತ್ತಿತ್ತು. ದಿನ ಪೂರ ಚಾರಣದಿಂದ ಅತಿ ಹೆಚ್ಚು ದಣಿದಿದ್ದ ಉಮೇಶ ಇಲ್ಲಿಂದ ಚಾರಣ ಮುಂದುವರೆಸಲು ಇಷ್ಟ ಪಡದೆ ಉಜಿರೆಗೆ ಹೋಗಿ ತಂಗಿರುವುದಾಗಿ ತಿಳಿಸಿ ನಮ್ಮಿಂದ ಬೀಳ್ಕೊಂಡರು.
ಉಳಿದ ೧೩ ಜನ ಮಾರ್ಗ ದರ್ಶಕನ ಸಹಾಯದಿಂದ ಮತ್ತೆ ಚಾರಣವನ್ನು ಪುನರಾರಂಭಿಸಿದೆವು. ಹೌದು!! ಈ ಬಾರಿ ಯಾವುದೇ ಅಡೆ ತಡೆಯಿಲ್ಲದೆ ನಾಗಮೂಲಕ್ಕೆ ನಮ್ಮ ಪ್ರಯಾಣ. ಕಡಿದಾದ ಬೆಟ್ಟವನ್ನು ಹತ್ತುವುದು ಓಹ್!! ಏದುಸಿರು ಬಂದಂತಹ ಅನುಭವ. ಅರ್ಧ ದಾರಿ ಕ್ರಮಿಸುವಷ್ಟರಲ್ಲಿ ಅಶೋಕನನ್ನು ನಾಗಮೂಲ ತಲುಪಿಸಿ ನಮ್ಮ ಮಾರ್ಗದರ್ಶಕ ಆಗಲೇ ಹಿಂದಿರುಗುತ್ತಿದ್ದ ಅವನಿಗೆ ಅವನ ಬೆಟ್ಟ ಹತ್ತುವ ನೈಪುಣ್ಯತೆಗೆ ಒಂದು ನಮಸ್ಕಾರ ಹೇಳಿ ನಾವೆಲ್ಲ ಮುಂದುವರೆದೆವು. ನನ್ನ ಮೈಭಾರವನ್ನೆ ನಾನು ಹೊರಲಾರದೆ ಒದ್ದಾಡುತ್ತಿದ್ದರು ಇನ್ನಷ್ಟು ಭಾರವನ್ನು ನನ್ನ ಮೇಲೆ ಹೇರಿ ನನಗಾದ ತೊಂದರೆಯನ್ನೆ ನೋಡುತ್ತ ರಾಕ್ಷಸಾನಂದ ಪಡುತ್ತಿದ್ದ ವಾಸುವನ್ನು ಶಪಿಸುತ್ತ ಅಂದಿನ ಗುರಿ ನಾಗಮೂಲವನ್ನು ತಲುಪಿದಾಗ ಸಂಜೆ ೬.೩೦
ಜುಳು ಜುಳು ಹರಿಯುವ ನೀರಿನ ದಂಡೆಯಲ್ಲಿ ಡೇರೆ ಹಾಕಲು ಪ್ರಶಸ್ತವಾದ ಸ್ಥಳ. ೧೩ ಜನಕ್ಕೆ ಸಾಕಾಗುವುದಿಲ್ಲವಾದರೂ ಬೇರೆ ವಿಧಿಯೆ ಇರಲಿಲ್ಲ. ಅಡಿಗೆ ಮಾಡ್ಬೇಕೆನ್ನುವ ನವೀನನ ಉತ್ಸಾಹಕ್ಕೆ ಯಾರು ಸ್ಪಂದಿಸಲಿಲ್ಲ. ಅದು ನಮ್ಮ ನಿತ್ರಾಣಕ್ಕೆ ಹಿಡಿದ ಕನ್ನಡಿ. ಒಣಗಿದ ಮರದ ಕೊಂಬೆಗಳನ್ನೆಲ್ಲ ಒಟ್ಟಾಗಿಸಿ ಬೆಂಕಿ ಹಚ್ಚಿದಾಗ ಚಾರಣದ ಸಾರ್ಥಕ ಅನುಭವ. ಕಾಡಿನಲ್ಲಿ ಮಲಗುವುದೆ ಒಂದು ಅಧ್ಬುತವಾದ ಅನುಭವ. ಬೆಳದಿಂಗಳ ರಾತ್ರಿಯಾದರೂ ಮರಗಳ ಎಲೆಗಳನ್ನು ಸೀಳಿಕೊಂಡು ಕತ್ತಲನ್ನು ಓಡಿಸುವ ತೀಕ್ಷ್ಣತೆ
ಬೆಳದಿಂಗಳಿಗಿರಲಿಲ್ಲ ನೀರವ ಮೌನದಲ್ಲಿ ಹುಳುಹುಪ್ಪಟೆಗಳ ಶಬ್ದ ಒಂದು ಬಗೆಯ ಸಂಗೀತದಂತೆ ಭಾಸವಾಗುತ್ತದೆ. ಆಗಾಗ ಎಲ್ಲೋ ಆಕ್ರಮಣಕ್ಕೆ ಒಳಗಾದ ಸಣ್ಣಪುಟ್ಟ ಪ್ರಾಣಿಗಳ ಅಥವ ಪಕ್ಷಿಗಳ ಚೀತ್ಕಾರ ಮೈ ಜುಮ್ಮೆನಿಸುತ್ತದೆ. ನಮ್ಮ ಜಾಗದ ಪಕ್ಕದಲ್ಲೆ ಇದ್ದ ಮರಗಳಲ್ಲಿನ ಜೀರುಂಬೆಗಳು ಆಗಾಗ ಹೊರಡಿಸುತ್ತಿದ್ದ ಜಿರ್ ಎನ್ನುವ ಶಬ್ದ ಎಲ್ಲರನ್ನು ಆಶ್ಚರ್ಯಗೊಳಿಸುತ್ತಿತ್ತು.
ಅತಿಯಾದ ಆಯಾಸಕ್ಕೆ ಊಟವೂ ಸೇರದಂತಹ ಸ್ಥಿತಿ ಸೇರಿದಷ್ಟು ಹೊಟ್ಟೆಗೆ ಸೇರಿಸಿ (ಇಲ್ಲದಿದ್ದರೆ ನಾಳೆ ಮತ್ತೆ ನಡೆಯಲಾಗುವುದಿಲ್ಲವೆಂಬ ಭಯ) ನಾನು, ವಾಸು, ರಘು, ದೇಶಪಾಂಡೆ ಮತ್ತು ಚಂದ್ರು ಡೇರೆಯೊಳಗೆ ನುಸುಳಿದಾಗ ರಾತ್ರಿ ೧೧.೩೦. ಚಳಿಯಿರಬಹುದೆಂಬ ನಮ್ಮ ಊಹೆ ಸುಳ್ಳು. ಅದಕ್ಕಾಗಿ ತಂದಿದ್ದ ಚಾದರಗಳೆಲ್ಲ ಹೊರೆಯಾಯಿತಷ್ಟೆ. ಸುಮಾರು ೨ ಘಂಟೆಯಿರಬಹುದು ಹೊರಗೆ ಮಲಗಿದ್ದ ಎಲ್ಲರಿಗೂ (ಯಾವಾಗ ಮಲಗಿದರೋ ಗೊತ್ತಿಲ್ಲ) ಚಳಿಯಾಗತೊಡಗಿದಾಗ ನವೀನ ಮತ್ತು ಸೂರಿ ಎಲ್ಲರನ್ನು ಎಚ್ಚರಗೊಳಿಸಿ ನಮ್ಮ ನಿದ್ರೆಯನ್ನು ಹಾಳುಗೆಡವಲು ನೋಡಿದರಾದರೂ ಕುಂಭಕರ್ಣರನ್ನು ಎಚ್ಚರಗೊಳಿಸುವ ಅವರ ಸಾಹಸ ವಿಫಲವಾಯಿತು. ರಾತ್ರಿ ೨ ಘಂಟೆಯಲ್ಲಿ ಮತ್ತೆ ಬೆಂಕಿ ಹಚ್ಚಿ ನಮ್ಮನ್ನು ನಿದ್ದೆ ಮಾಡಲು ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು ನವೀನ್! ;-)
ಕಾಡಿನಲ್ಲಿ ಬೆಳಕು ಹರಿಯುವುದನ್ನು ನೋಡುವುದೆ ಒಂದು ಹೊಸ ಅನುಭವ ಗೂಡು ಬಿಟ್ಟು ಹೊರಡುವ ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಹಾರುತ್ತಿದ್ದರೆ, ಅದನ್ನು ಹರಿಯುತ್ತಿರು ನೀರಿನಲ್ಲಿ ಕಾಲಿಟ್ಟುಕೊಂಡು ನೋಡುತ್ತಾ ಕೂತರೆ ಪ್ರಪಂಚವೆ ಮರೆತುಹೋಗುತ್ತೆ. ಪ್ರಾತಃ ವಿಧಿಗಳನ್ನು ಪೂರೈಸಿ, ಬೆಳಗಿನ ಉಪಹಾರ ಸಿದ್ದಪಡಿಸಲು ಅಡಿಗೆ ಭಟ್ಟರ ಪೋಷಾಕಿನಲ್ಲಿ ಶೇಷ ಸಿದ್ದರಾದರು. ರಾತ್ರಿಯಿಂದಲೂ ಉರಿಯುತ್ತಿದ್ದ ಬೆಂಕಿಯಿಂದಲೆ ಒಲೆಯೊಂದನ್ನು ಸಿದ್ದಪಡಿಸಿಕೊಂಡು ನೀರು ಕುದಿಸಿ, ನಿನ್ನೆ ಬಕಾಸುರರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡಿದ್ದ ಕೆಲವು ತರಕಾರಿಗಳನ್ನು ಬೇಯಿಸಿ ಮಾಡಿದ ಮ್ಯಾಗಿ ಶ್ಯಾವಿಗೆ (೨ ಬಾರಿ) ಒಲೆಯಿಂದ ಇಳಿಸುವ ಕ್ಷಣಾರ್ಧದಲ್ಲೆ ಮಂಗ ಮಾಯ!! ಅಷ್ಟಿತ್ತು ನಮ್ಮ ಹಸಿವಿನ ಆರ್ಭಟ.
೮.೩೦ರ ಸುಮಾರಿಗೆ ನಮ್ಮ ಭಾರವನ್ನೆಲ್ಲ ಬಂಡೆಯ ಕೆಳಗೆ ಜೋಡಿಸಿ ಢೇರೆಗಳನ್ನು ಅದರ ಮೇಲೆ ಮುಚ್ಚಿ ಜಲಪಾತದೆಡೆಗೆ ನಮ್ಮ ನಡಿಗೆ. ಇಂದೆನೋ ಚಾರಣದ ವೇಗ ಸ್ವಲ್ಪ ಹೆಚ್ಚಿದಂತೆ ಭಾಸವಾಗುತ್ತಿತ್ತು. ವಿಶೇಷವೇನು ಇಲ್ಲದೆ ಕಡಿದಾಗಿರುವ ಬೆಟ್ಟವನ್ನು ಹತ್ತುತ್ತ ಈಗಾಗಲೆ ತಮ್ಮ ಚಾರಣವನ್ನು ಮುಗಿಸಿ ಹೊರಟ ಬೇರೆ ತಂಡಗಳೊಡನೆ ಮಾತುಕತೆಯಾಡುವ ನೆಪದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತ ಬೆಟ್ಟವನ್ನು ಹತ್ತುತ್ತಿದ್ದರೆ. ಶೇಷ ತಯಾರಿಸಿಕೊಟ್ಟ ಮ್ಯಾಗಿ ಎಲ್ಲಿ ಹೋಯಿತೊ ಗೊತ್ತೆ ಆಗಲಿಲ್ಲ. ೧೦ ಘಂಟೆಯ ಸಮಯಕ್ಕೆ ಸಮತಟ್ಟಾದ ಬಂಡೆಯಿರುವ ಜಾಗಕ್ಕೆ ಬಂದು ತಲುಪಿದೆವು. ಪಕ್ಕದಲ್ಲೆ ಹರಿಯುತ್ತಿದ್ದ ಸಣ್ಣ ನೀರಿನ ಹರಿವು ಸುತ್ತಲೂ ಮರ ಗಿಡಗಳ ರಕ್ಷಣೆ. ಈ ಜಾಗ ರಾತ್ರಿ ಢೇರೆ ಹಾಕಿ ತಂಗುವುದಕ್ಕೆ ಪ್ರಶಸ್ತವಾದ ಸ್ಥಳ. ಮುಂದೆ ಮತ್ತೆ ದಾರಿಯದೆ ತೊಂದರೆ ಇಲ್ಲಿಂದ ಮುಂದಕ್ಕೆ ಮತ್ತೆ ದಾರಿ ಕಾಣದಾಯಿತು. ಕೊನೆಗೆ ನಮ್ಮನ್ನು ಈ ಮುಂಚೆ ಭೇಟಿಯಾದ ತಂಡಗಳ ಸಲಹೆ ಮತ್ತು ನಮ್ಮ ರಘು, ಅಶೋಕ, ವಾಸುರವರ ಸಾಹಸ ಪ್ರಿಯತೆ ನಮ್ಗೆ ಸರಿಯಾದ ದಾರಿಯನ್ನು ಹುಡುಕಿ ಅದರಲ್ಲಿ ಮುಂದುವರೆಯಲು ಸಹಾಯ ಮಾಡಿತು. ಮತ್ತೆ ಸುಮಾರು ೧ ಘಂಟೆ ಬೆಟ್ಟವನ್ನು ಹತ್ತಲಾಗದೆ ಹತ್ತುತ್ತ ಅಲ್ಲಲ್ಲಿ ಜಾರುತ್ತ ಬೀಳುತ್ತ ನಡೆಯುತ್ತಿದ್ದರೂ ಜಲಪಾತದ ಕುರುಹೂ ಕೂಡ ಸಿಗುತ್ತಿಲ್ಲ ಶಬ್ದವೂ ಸಹ ಇಲ್ಲ. ಕೊನೆಗೊಮ್ಮೆ ನಮ್ಮ ಕಷ್ಟವನ್ನು ನೋಡಲಾರದೆ ಒಮ್ಮೆಲೆ ಜಲಪಾತವೇ ನಮ್ಮ ಬಳಿ ಬಂತೆನೋ ಅನಿಸುವಷ್ಟು ಹತ್ತಿರದಲ್ಲೆ ನೀರು ಧುಮ್ಮಿಕ್ಕುವ ಶಬ್ದ ಕಿವಿಗೆ ಬಿತ್ತು. ಬಂಡೆಗಳ ಮದ್ಯೆ ಹಾಯ್ದು ಕೆಲವನ್ನು ಏರಿ ಉಹ್! ಜಲಪಾತ ತಲುಪುವಷ್ಟರಲ್ಲಿ ಮುಂದೆ ಒಂದೂ ಹೆಜ್ಜೆ ಎತ್ತಿಡಲಾಗದಷ್ಟು ಆಯಾಸ. ನಮ್ಮೆಲ್ಲ ಆಯಾಸಕ್ಕೆ ಪರಿಹಾರ ಜಲಪಾತದ ತಣ್ಣನೆಯ ನೀರಿನ ಸಿಂಚನ. ಸುಮಾರು ೩೦೦ ಅಡಿಗಳಿಂದ ಹಂತ ಹಂತವಾಗಿ ಧುಮುಕುವ ನೀರ ಧಾರೆ ದಣಿದ ಮೈಮನಸ್ಸುಗಳಿಗೆ ಅಮೃತವೆನ್ನುವಂತಿತ್ತು. ಎಡಬಿಡದೆ ೨ ಘಂಟೆಗಳ ಜಲಕ್ರೀಡೆ ನಮ್ಮಲ್ಲಿ ಮತ್ತೆ ಚೈತನ್ಯ ತುಂಬಿತು.
ನಾಗರೀಕ ಜನರ ಅನಾಗರೀಕ ಕುರುಹುಗಳಾದ ಮದ್ಯದಶೀಷೆಗಳು, ಪ್ಲಾಸ್ಟಿಕ್ಚ್ ಚೀಲಗಳು ಮತ್ತು ಗುಟ್ಕಾಪಳೆಯುಳಿಕೆಗಳನ್ನು ಸ್ವಚ್ಛಗೊಳಿಸಿ, ನಾವು ತಂಗಿದ್ದ ಜಾಗಕ್ಕೆ ಹಿಂದಿರುಗಿ ಮತ್ತೊಮ್ಮೆ ಒಲೆ ಹಚ್ಚುವ ನವೀನನ ಉತ್ಸಾಹಕ್ಕೆ ತಡೆಹಿಡಿದು, ಅವಲಕ್ಕಿಯನ್ನು ನೆನೆಸಿ ತೆಂಗಿನಕಾಯಿ ಬೆಲ್ಲದೊಂದಿಗೆ ಬೆರೆಸಿ ಚಪ್ಪರಿಸಿಕೊಂಡು ತಿಂದು ಗೌಡರ ಮನೆಯತ್ತ ಹೊರಟೆವು. ಒಂದೂವರೆಯ ಘಂಟೆಯ ನಡಿಗೆ ನಮ್ಮನ್ನು ಬೆಟ್ಟದ ತಳಭಾಗಕ್ಕೆ ತಂದು ನಿಲ್ಲಿಸಿತ್ತು. ಹಿಂದಿನ ದಿನ ಸ್ನಾನ ಮಾಡಿದ ಜಾಗದಲ್ಲೆ ಇಂದು ಮತ್ತೊಮ್ಮೆ ಸ್ನಾನ ಮಾಡಿ ಪಕ್ಕದಲ್ಲೆ ಇದ್ದ ಅಜ್ಜಿಯ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ೨ನೇ ಮನೆಯಲ್ಲಿ ಮದುವೆ ನಿಶ್ಚಿತಾರ್ಥದ ಪ್ರಯುಕ್ತ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದ
ಸ್ವೀಕರಿಸಿ ಗೌಡರ ಮನೆಯ ಬಳಿ ಬೆನ್ನ ಮೇಲಿನ ಹೊರೆಯನ್ನು ಆಗಲೆ ಬಂದು ನಿಂತಿದ್ದ ನಮ್ಮ ವಾಹನಕ್ಕೆ ವರ್ಗಾಯಿಸಿ ಗೌಡರ ಮಗನೊಡನೆ ಸ್ವಲ್ಪ ಸಮಯ ಸ್ಥಳೀಯ ಸಮಸ್ಯೆ, ವಿಶೇಷತೆಗಳು ಅಲ್ಲಿರುವ ಪ್ರಾಣಿ ಸಂಕುಲಗಳು ಇಲ್ಲಿನ ಜನರ ಜೀವನ ಶೈಲಿಯ ಬಗ್ಗೆ ಚರ್ಚಿಸಿ ಅವರ ಆತಿಥ್ಯ ಮನೋಭಾವಕ್ಕೆ ಅಚ್ಚರಿಗೊಂದು ನಮಗಾಗಿ ಕಾಯುತ್ತಿದ್ದ ಉಮೇಶನೋಂದಿಗೆ ವಾಹನವನ್ನೇರಿ ವಾಸು ಮತ್ತು ರಘುವಿನ ಆಸೆಯಂತೆ (ಊಟಕ್ಕೆ ಮಾತ್ರ) ಧರ್ಮಸ್ಥಳದ ಮಂಜುನಾಥನ ದರ್ಶನಂಗೈದು ಪುಷ್ಕಳವಾಗಿ (ಮತ್ತೆ ರಘು ಮತ್ತು ವಾಸು) ಭೋಜನ ಮುಗಿಸಿ ೧೦ ಘಂಟೆಗೆ ಧರ್ಮಸ್ಥಳವನ್ನು ಬಿಟ್ಟು, ೧.೦೦ ಘಂಟೆಗೆ ಹಾಸನದಲ್ಲಿ ಸೂರಿ ವಿನಯ್ ಮತ್ತು ಆನಂದರನ್ನು ಬೀಳ್ಕೊಟ್ಟು ಚೆನ್ನರಾಯಪಟ್ಟಣದಲ್ಲಿ ಉಮೇಶನನ್ನು ಭದ್ರಾವತಿಗೆ ಸಾಗಹಾಕಿ ಮನೆ ತಲುಪಿದಾಗ ಬೆಳಗಿನ ೪.೪೫
೪-೫ ಬಾರಿ ಚಾರಣ ಕೈಗೊಂಡಿದ್ದರೂ ಮೊದಲನೆ ಬಾರಿ ಬರಹದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ನನ್ನ ಕ್ಷೇತ್ರವಲ್ಲ ತಪ್ಪುಗಳಿದ್ದರೆ ಕ್ಷಮಿಸಿ ನನ್ನನ್ನು ತಿದ್ದಲು ನಿಮ್ಮ ಅನಿಸಿಕೆಗಳನ್ನು ತಿಳಿಸಿ
prasannakannadiga@yahoo.co.in
prasannakannadiga@gmail.com

Monday, June 9, 2008

ಆಗುಂಬೆ ಸುತ್ತ

ಬೇಸರ ಹುಟ್ಟಿಸುವ ಬೆಂಗಳೂರಿನ ಏಕತಾನತೆಯಿಂದ ದೂರ ಓಡಬೇಕೆನ್ನಿಸಿದರೂ, ರಜಾ ದಿನಗಳಲ್ಲಷ್ಟೆ ಅದು ಸಾಧ್ಯವಾಗುವುದೆಂಬ ಕಟುಸತ್ಯದ ಅರಿವು ನನಗಿದೆ. ಆದ್ದರಿಂದಲೆ ವಾರದ ರಜಾದಿನಗಳಿಗೆ ಬೇರೆ ಯಾವುದಾದರೂ ರಜೆ ಜೋಡಣೆಯಾಗುವುದನ್ನೆ ಕಾಯುತ್ತಿರುತ್ತೇನೆ. ನನ್ನ ಕೆಲವು ಸಹೋದ್ಯೋಗಿಗಳನ್ನು ಆಹ್ವಾನಿಸುವ ಮನಸ್ಸಾದರೂ ಅವರು ಬರುವುದಿಲ್ಲವೆಂದು ನನಗೆ ಗೊತ್ತು ಏಕೆಂದರೆ ಬಿ ಇ ಎಲ್ ಉದ್ಯೋಗಿಗಳಿಗೆ ಪ್ರವಾಸವೆಂದರೆ ಪ್ರಸವದಷ್ಟೆ ಸಂಕಟ. ಹಣ ಪೋಲು ಎನ್ನುವವರು ಕೆಲವರಾದರೆ, ವಯಕ್ತಿಕ ಕಾರಣ ಕೆಲವರಿಗೆ. ಮತ್ತೆ ಕೆಲವರಿಗೆ ಒಂದು ದಿನದ ಪ್ರವಾಸವಾದರೆ ಓ ಕೆ ಎಂಬ ಸಬೂಬು. ನಿಮಗೆ ಆಶ್ಚರ್ಯ ಆಗಬಹುದು ನಮ್ಮ ಕಾರ್ಖಾನೆಯ ಕೆಲವರಿಗೆ ಬಿ ಇ ಎಲ್ ಮತ್ತು ಅವರ ಮನೆ ಬಿಟ್ಟು ಬೇರೆ ಜಾಗ ಗೊತ್ತೇ ಇಲ್ಲ ಅನ್ನುವುದು ವ್ಯಂಗ್ಯವಲ್ಲ ಕಟು ಸತ್ಯ.
ಇದೆಲ್ಲದರ ಅರಿವಿದ್ದುದರಿಂದಲೆ ಯಾರನ್ನು ಆಹ್ವಾನಿಸುವ ಗೋಜಿಗೆ ಹೋಗಲಿಲ್ಲ. ೨೦೦೬ರ ಕ್ರೈಸ್ತ ವರ್ಷದ ಕೊನೆಯ ದಿನಗಳಲ್ಲಿ ಅಂದರೆ ಡಿಸೆಂಬರ್ ೩೦, ೩೧ ಮತ್ತು ಜನವರಿ ೧ ರಂದು ಸಂಸಾರ ಸಮೇತ ಪ್ರವಾಸ ಹೋಗುವುದೆಂದು ನಿಶ್ಚಯಿಸಿದೆ. ಪ್ರವಾಸದ ಸ್ಠಳ ಮಾತ್ರ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಹಸಿರು ತುಂಬಿದ ಪ್ರಕೃತಿ ತಾಣಗಳಷ್ಟೆ ನನ್ನ ಪ್ರವಾಸದ ಗುರಿ. ನನ್ನ ಮುಂದಿದ್ದ ಆಯ್ಕೆಗಳು ಜೋಗದ ಜಲಪಾತ, ಚಿಕ್ಕಮಗಳೂರಿನ ಸುತ್ತಮುತ್ತ, ಧರ್ಮಸ್ಥಳ ಸುಬ್ರಮಣ್ಯ ಕೊಡಗು ಶೃಂಗೇರಿ, ಹೊರನಾಡು, ಕುದುರೆಮುಖ ಮತ್ತು ಬಿಳಿಗಿರಿರಂಗನ ಬೆಟ್ಟ. ಉತ್ತರ ಕರ್ನಾಟಕ ಜಿಲ್ಲೆ ಹೆಚ್ಚು ದೂರ ೩ ದಿನಗಳು ಸಾಕಾಗುವುದಿಲ್ಲ. ಧರ್ಮಸ್ಥಳ, ಸುಬ್ರಮಣ್ಯ ಮತ್ತು ಬಿಸ್ಲೆಘಟ್ಟ ಪ್ರವಾಸವನ್ನು ಅಕ್ಟೋಬರ್ ತಿಂಗಳಿನಲ್ಲಿ ಮುಗಿಸಿದ್ದರಿಂದ ಯಾವುದೆ ನಿರ್ಧಾರ ತೆಗೆದುಕೊಳ್ಳದೆ ೩೦ರ ಬೆಳಗ್ಗೆ ೯.೦೦ ಗಂಟೆಗೆ ಕಾರು ಹೊರಟಾಗ ಎಲ್ಲಿ ಹೋಗುತ್ತಿದ್ದೇನೆಂದು ಗೊತ್ತಿರಲಿಲ್ಲ.
ನಾನು ನನ್ನ ಪತ್ನಿ, ಪುತ್ರ ನನ್ನ ಅಕ್ಕ ಭಾವ ಪ್ರಯಾಣಕ್ಕೆ ಹೊರಟವರು ಕೊನೆ ಕ್ಷಣದಲ್ಲಿ ಅಕ್ಕ ಬರಲಾಗಲಿಲ್ಲ ಉಳಿದವರು ಪ್ರಯಾಣ ಬೆಳೆಸಿದೆವು. ನೆಲಮಂಗಲ ಹತ್ತಿರವಾಗುತ್ತಿದ್ದಂತೆ ಎಲ್ಲಿಗೆ ಹೋಗುವುದು ಎಂಬುದನ್ನು ನಿರ್ಧರಿಸಬೇಕಿತ್ತು. ನೆಲಮಂಗಲಕ್ಕೆ ಹೋಗುವ ರಾಷ್ತ್ರೀಯ ಹೆದ್ದಾರಿಯಲ್ಲಿನ ವಾಹನದಟ್ಟಣೆಯ ಪರಿಣಾಮ ಯೋಚನೆ ಮಾಡುವುದಕ್ಕೆ ಸಹ ಆಗುವುದಿಲ್ಲ. ಮನಸ್ಸಿನಲ್ಲಿದ್ದದ್ದು ಕೊಲ್ಲೂರು , ಕೊಡಚಾದ್ರಿ ಅಥವ ದಿನಪತ್ರಿಕೆಯೊಂದರಲ್ಲಿ ಬಂದ ವರದಿಯ ಕುಂದಾದ್ರಿ. ಸಹೋದ್ಯೋಗಿ ಮತ್ತು ಸ್ನೇಹಿತ ಶೃಂಗೇರಿಯವರಾದ ವಸಂತರ ಬಳಿ ಶೃಂಗೇರಿಯಲ್ಲಿ ವಸತಿ ಸೌಕರ್ಯ ಸಿಗುತ್ತದೆಯೆಂದು ಖಾತರಿಪಡಿಸಿಕೊಂಡೆ. ಈಗ ನಮ್ಮ ಪ್ರಯಾಣ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ, ಗುರಿಯಿಟ್ಟ ಬಾಣದಂತೆ ಹಾಸನದ ಕಡೆಗೆ. speeಓಡೊ ಮೀಟರ್ ೧೦೦ ರ ಗಡಿ ದಾಟುತ್ತಿದ್ದರೂ ಪ್ರಯಾಣವೇ ಸಾಗುತ್ತಿಲ್ಲವೆನಿಸುತ್ತಿತ್ತು. ಸೋಲೂರು ಮತ್ತು ಕುಣಿಗಲ್ ಮದ್ಯೆ ಇರುವ ಕರಡಿಗುಚ್ಚಮ್ಮನ ದೇವಸ್ಠಾನದ ಆವರಣದಲ್ಲಿರುವ ತ್ರಿಮುಖ ಗಣಪನಿಗೊಂದು ಸಲ್ಯುಟ್ ಹೊಡೆದು (ಇದು ನನ್ನ ಪ್ರತಿ ಪಯಣದ ಅಭ್ಯಾಸ) ಕುಣಿಗಲ್, ಎಡೆಯೂರು, ಬೆಳ್ಳೂರು, ಹಿರಿಸಾವೆ ಚೆನ್ನರಾಯಪಟ್ಟಣದ ಮಾರ್ಗವಾಗಿ ಹಾಸನ ತಲುಪಿದಾಗ ಸಮಯ ೧೨.೧೫. ಹಾಸನದಿಂದ ಬೇಲೂರು ಮಾರ್ಗವಾಗಿ (ಈ ರಸ್ತೆಯನ್ನು ಈಗ ತುಂಬ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ) ಚಿಕ್ಕಮಗಳೂರು ತಲುಪಿದಾಗ ಗಡಿಯಾರ ೧.೦೦ ಗಂಟೆ ತೋರಿಸುತ್ತಿತ್ತು. ಪುಷ್ಕಳವಾಗಿ ಊಟ ಮುಗಿಸಿ ಹೊರಟರೆ ಪ್ರಯಾಣದ ಕಡಲೊಳು ಮೊಬೈಲ್ ರಿಂಗಣ. ಹೊರಡುವ ಮೊದಲೇ ಕಛೇರಿಯಿಂದಾದ ಒಪ್ಪಂದ. ಕಛೇರಿಯಲ್ಲಿನ ಕೆಲಸಕ್ಕೆ ತೊಂದರೆಗಳು ಕಾಣಿಸಿಕೊಂಡರೆ ದೂರವಾಣಿ ಮುಖೇನ ಸಂಪರ್ಕಿಸುವುದಾಗಿ ನಮ್ಮ ಹಿರಿಯ ವ್ಯವಸ್ಥಾಪಕರಿಂದ ಒಡಂಬಡಿಕೆ {ಬಡಬಡಿಕೆ;-) }. ಅದರಂತೆ ಅವರ ಎಲ್ಲ ಪ್ರಶ್ನೆಗಳಿಗೆ ನನ್ನಿಂದಾದ ಸಹಾಯ ಮಾಡುತ್ತ ಕೆಟ್ಟು ಹೋದ ಶೃಂಗೇರಿ ರಸ್ತೆಯಲ್ಲಿ ತೂಕಡಿಸುತ್ತ ಮದ್ಯೆ ಮದ್ಯೆ ಕಛೇರಿಯಿಂದ ಬರುವ ದೂರವಾಣಿ ಕರೆಗಳನ್ನು ಉತ್ತರಿಸುತ್ತ (ಕತ್ತರಿಸುತ್ತ) ಶೃಂಗೇರಿ ತಲುಪಿದಾಗ ದೇಹ ನಿದ್ದೆ ಬಯಸುತ್ತಿತ್ತು.
ವಸತಿ ಸಿಗುವುದಿಲ್ಲವೆನ್ನಿಸುವಂತಹ ಜನದಟ್ಟಣೆಯಲ್ಲೂ ಅರ್ಧ ಗಂಟೆಯ ನೀರೀಕ್ಷೆಯ ನಂತರ ಅದೃಷ್ಟವಶಾತ್ ಕೊಠಡಿ ಸಿಕ್ಕೇಬಿಟ್ಟಿತು. ತಣ್ಣನೆಯ ನೀರಿನ ಸ್ನಾನದಿಂದ ಪ್ರಯಾಣ ಮತ್ತು ಬಿಸಿಲಿನಿಂದಾದ ಆಯಾಸ ಮಾಯವಾಗಿತ್ತು. ವೀಣಾಪಾಣಿಯ ದರ್ಶನ ಮಾಡಿ ಭರ್ಜರಿ ಭೋಜನ ಮುಗಿಸಿ, ನಮ್ಮ ಕೊಠಡಿಯ ಹೊರಗೆ ಇರುವ ಆವರಣದಲ್ಲಿ ಬೀಡು ಬಿಟ್ಟ ಶಾಲಾ ಮಕ್ಕಳ ಗದ್ದಲದ ನಡುವೆಯು ಒಳ್ಳೆಯ ನಿದ್ದೆಗೆ ಶರಣು. ಮಾರನೆದಿನ ಬೆಳಗಿನ ಉಪಹಾರದ ನಂತರ ಆಗುಂಬೆಯತ್ತ ಪಯಣ. ದಿವಂಗತ ಶಂಕರ್ ನಾಗ್ ತಮ್ಮ ಮಾಲ್ಗುಡಿ ಡೇಸ್ ಚಿತ್ರೀಕರಿಸಿದ್ದ ಸುಂದರವಾದ ಪುಟ್ಟ ಊರು. ಇಲ್ಲಿಂದ ಉತ್ತಮವಾದ ರಸ್ತೆ ಶೃಂಗೇರಿಯನ್ನು ತೀರ್ಥಹಳ್ಳಿಗೆ ಮತ್ತು ಸೋಮೇಶ್ವರಕ್ಕೆ ಜೋಡಿಸುತ್ತದೆ. ಇಲ್ಲಿ ನೋಡಲೇಬೇಕಾದ ಸ್ಥಳಗಳ ಬಗ್ಗೆ ರಾಜೇಶ್ ನಾಯಕ್ ರಿಂದ ಮಾಹಿತಿ. ಬರ್ಕಣ, ಜೋಗಿಗುಂಡಿ, ಒಣಕಬ್ಬೆ ಜಲಪಾತ, ಆಗುಂಬೆಯ ಸೂರ್ಯಾಸ್ತಮಾನ ಕುಂದಾದ್ರಿ ಮತ್ತು ಹೆಬ್ರಿ ಇಲ್ಲಿ ನೋಡಲೇಬೇಕಾದ ಸ್ಥಳಗಳು. ಹತ್ತಿರದಲ್ಲೆ ಇದ್ದ ಆರಕ್ಷಕ ಠಾಣೆಯಲ್ಲಿ ನಮ್ಮ ವಿಳಾಸ ಬರೆದು (ನಕ್ಸಲೈಟ್ ಗಳ ಹಾವಳಿಯಿಂದ ಇದು ಕಡ್ಡಾಯ) ಬರ್ಕಣದ ಕಡೆ ಅಲ್ಲೆ ಇದ್ದ ಕೆಲ ಚಿಕ್ಕ ಹುಡುಗರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಹೊರಟೆವು.
ಆಗುಂಬೆಯಿಂದ ಬರ್ಕಣ ಸುಮಾರು ೪ ಕಿ.ಮೀ ದೂರ ಇದೆ. ೧ ಕಿ.ಮೀ ನಂತರ ವಾಹನ ಕ್ರಮಿಸಲು ಯೋಗ್ಯವಲ್ಲದ ದಾರಿಯಲ್ಲಿ ವಾಹನ ಅಲ್ಲೆ ಬಿಟ್ಟು ಬರ್ಕಣಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿದೆವು. ದಟ್ಟ ಕಾನನದ ಮಧ್ಯೆ ಸ್ಪಷ್ಟವಾಗಿರುವ ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಬರ್ಕಣಕ್ಕೆ ತಲುಪಿದೆವು. ಇಲ್ಲಿ ನನಗೆ ನಿರಾಶೆ ಕಾದಿತ್ತು. ನಾನು ನೀರೀಕ್ಷಿಸಿದ್ದು ಜಲಪಾತವನ್ನು, ಜಲಪಾತವೇನೊ ಇದೆ, ಆದರೆ ಅದು ಅಲ್ಲಿಂದ ತುಂಬಾ ದೂರದಲ್ಲಿ ಸಣ್ಣದಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರ ಹೋಗಲು ೧ ದಿನದ ನಡಿಗೆ ಎಂದು ತಿಳಿದು ಅಲ್ಲೆ ಕಾಣುವ ಕಣಿವೆಯ ದೃಶ್ಯವನ್ನು ಬೆಳಕಿನ ಬೋನಿನಲ್ಲಿ ಸೆರೆ ಹಿಡಿದು ಹಿಂತಿರುಗಿ ಬರುವ ದಾರಿಯಲ್ಲಿ ಮತ್ತೊಮ್ಮೆ ವಾಹನವನ್ನು ರಸ್ತೆಬದಿಗೆ ನಿಲ್ಲಿಸಿ ಜೋಗಿ ಗುಂಡಿಯನ್ನು ತಲುಪಿದೆವು. ಜೋಗಿಗುಂಡಿಗೆ ತಲುಪುವ ಹಾದಿಯಲ್ಲು ಅಮೂಲ್ಯ ಗಿಡಮೂಲಿಕೆಗಳು ಲಭ್ಯವಿದೆಯೆಂದು ನಮ್ಮ ಮಾರ್ಗದರ್ಶಕನ ಮಾಹಿತಿ. ಇಲ್ಲೂ ಸಹ ಮತ್ತೊಮ್ಮೆ ನನಗೆ ನಿರಾಸೆಯೆ. ಸಣ್ಣದೊಂದು ಝರಿ ಹರಿದು ಚಿಕ್ಕದಾದ ಬಂಡೆಯ ಪಕ್ಕದಲ್ಲಿ ಧುಮುಕಿ ಒಂದು ಹಳ್ಳವನ್ನು ಸೃಷ್ಟಿಸಿದೆ. ಅದೇ ಜೋಗಿಗುಂಡಿ!! ಮಳೆಗಾಲದಲ್ಲಿ ತುಂಬಿ ಹರಿಯುವ ಜಲಧಾರೆ ಕಣ್ಣಿಗೆ ಹಬ್ಬ ಎಂದು ನಮ್ಮ ಮಾರ್ಗದರ್ಶಕನ ಅಂಬೋಣ. ಅದು ಎಷ್ಟು ನಿಜವೋ ಅವನಿಗೆ ಮಾತ್ರ ಗೊತ್ತು. ಜನ ವಸತಿ ಪ್ರದೇಶದಿಂದ ಸ್ವಲ್ಪವೇ ದೂರದಲ್ಲಿ ಅಲ್ಪ ಸ್ವಲ್ಪ ಕಾಡು ಇಲ್ಲಿ ಉಳಿದಿರುವುದೆ ಸಮಾಧಾನಕರ ವಿಷಯ.
ಜೋಗಿಗುಂಡಿಯಿಂದ ನಮ್ಮ ಪ್ರಯಾಣ ಒಣಕಬ್ಬೆಯ ಕಡೆಗೆ ಆಗುಂಬೆಯಿಂದ ಸೋಮೇಶ್ವರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಬಲಭಾಗಕ್ಕೆ ಸಿಗುವ ಅರಣ್ಯ ಇಲಾಖೆಯ ಪ್ರವಾಸಿ ಗೃಹದ ಹತ್ತಿರದಲ್ಲಿರುವ ದಾರಿಗೆ ಅಡ್ಡಲಾಗಿರುವ ತುಕ್ಕು ಹಿಡಿದ ಕಬ್ಬಿಣದ ಬಾಗಿಲಿನ ಮೂಲಕ ನಮ್ಮ ನಡಿಗೆ ಆರಂಭ. ಸುಮಾರು ೨ ಕಿಮೀ ನಡೆಯ ನಂತರವೇ ನಾವು ಸಂಪೂರ್ಣ ದಟ್ಟ ಕಾಡಿನೊಳಗೆ ಹೆಜ್ಜೆ ಹಾಕುತ್ತಿರುವ ಅನುಭವವಾಗಿದ್ದು. ಇಲ್ಲಿ ನಕ್ಸಲೈಟರ ಹಾವಳಿ ಹೆಚ್ಚು ಎಂದು ನಂತರ ಸ್ಥಳೀಯರಿಂದ ತಿಳಿದು ಬಂತು. ಸ್ವಲ್ಪ ದೂರದಲ್ಲಿ ಮರವೊಂದು ದಾರಿಗೆ ಅಡ್ಡಲಾಗಿ ಬಿದ್ದು ಮುಂದಿನ ರಸ್ತೆ ಮುಚ್ಚಿ ಹೋದಂತೆ ಭಾಸವಾಗುತ್ತಿತ್ತು. ಕಾಡಿನಲ್ಲಿ ಬೆಳೆಯುವ ಮರಗಳ ಬೃಹಧಾಕಾರದ ಬಗ್ಗೆ ಬಿದ್ದಿದ್ದ ಮರ ಒಂದು ಸಣ್ಣ ಪರಿಚಯದಂತೆ ಇತ್ತು. ಮರದ ಬೇರುಗಳು ಸಂಪೂರ್ಣವಾಗಿ ಹೊರಬಂದು ಸುಮಾರು ೩೦ ಅಡಿಗಳಷ್ತು ಅಗಲವಾದ ೧೦ ಅಡಿ ಆಳವಾದ ಹಳ್ಳ ತೋಡಿದಂತಿತ್ತು. ಅಡ್ಡಲಾಗಿ ಬಿದ್ದಿದ್ದ ಮರವನ್ನು ದಾಟಿ ಹೋಗುವುದು ಕಷ್ಟವೆನಿಸತೊಡಗಿತು. ಬಳಸಿಕೊಂಡು ಕೊಂಡು ಹೋಗಲು ಮರ ತುಂಬ ದೊಡ್ಡದಿತ್ತು. ಮರದ ಮುಂಭಾಗದಿಂದ ದಾಟಲು ಕಾಡಿನೊಳಗೆ ೧೦೦ ಅಡಿಗಳಷ್ಟು ದೂರ ಬಳಸಿ ಮತ್ತೆ ದಾರಿಗೆ ಬರುವಷ್ಟರಲ್ಲಿ ಮೈ ಕೈ ತರಚಿ ಬಟ್ಟೆಗಳು ಅಲ್ಲಲ್ಲಿ ಹರಿದು ಹೋಗಿದ್ದವು. ಇದೆ ತೆರನಾದ ಅಡ್ಡ ಬಿದ್ದ ೪ ಮರಗಳನ್ನು ದಾಟಿ ೧ ಕಿ.ಮೀ ನಡಿಗೆಯ ನಂತರ ಜಲಪಾತದಲ್ಲಿ ನೀರು ಧುಮುಕುವ ಶಬ್ದ. ಇಲ್ಲಿಂದ ಮುಂದೆ ಕಲ್ಲು ಮತ್ತು ಸಿಮೆಂಟ್ ಬಳಸಿ ಮೆಟ್ಟಿಲುಗಳನ್ನು ಕಟ್ಟಲಾಗಿದ್ದರೂ ಮರಗಳ ಎಲೆಗಳು ಎಲ್ಲವನ್ನು ಮುಚ್ಚಿಬಿಟ್ಟಿದ್ದವು. ಮೆಟ್ಟಿಲುಗಳನ್ನಿಳಿದ ತಕ್ಷಣವೆ ಒಂದು ಚಿಕ್ಕ ನೀರಿನ ಹಳ್ಳ ಎದುರಾಯಿತು. ಜಲಪಾತವಿರುವ ಸುಳಿವಿಲ್ಲ ಮುಂದೆ ಹೋಗಲು ದಾರಿಯಿಲ್ಲ ನೀರು ಬೀಳುವ ಶಬ್ದ ಮಾತ್ರ ಅತ್ಯಂತ ಸಮೀಪದಲ್ಲಿ ಕೇಳಿಸುತ್ತಿದೆ. ಸಲ್ಪ ಸಮಯ ನಿಂತು ಅವಲೋಕಿಸಿದಾಗ ಕಾಣಿಸಿದ್ದು ಜಲಪಾತ. ಹೌದು!!! ನಾವು ಜಲಪಾತದ ಮೇಲ್ಭಾಗಕ್ಕೆ ಬಂದು ನಿಂತಿದ್ದೆವು. ಇಲ್ಲಿಂದ ಕೆಳಗೆ ನೋಡಿದರೆ ನೀರು ಧುಮುಕುವ ದೃಶ್ಯ ರುದ್ರ ರಮಣೀಯ ಆದರೆ ಎದೆ ನಡುಗಿಸುವುದು ಶತಃಸಿದ್ದ. ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಜಲಪಾತವನ್ನು ಬಗ್ಗಿ ನೋಡುವ ದುಃಸಾಹಸಕ್ಕೆ ಎಲ್ಲರಿಂದ ವಿರೋಧ ವ್ಯಕ್ತವಾದರೂ ಬಿಡದೆ ಬೆಳಕಿನ ಬೋನಿನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಹೆಚ್ಚು ಸಮಯ ಕಳೆಯದಎ ಹೊರಟು ಬಂದೆವು.
ಆಗುಂಬೆಗೆ ಹಿಂತಿರುಗಿ ಅಲ್ಲೆ ಇದ್ದ ಸಣ್ಣ ಉಪಹಾರ ಗೃಹದಲ್ಲಿ ಊಟ ಮುಗಿಸಿ ಕುಂದಾದ್ರಿಗೆ ಹೋಗುವ ದಾರಿ ತಪ್ಪಿ ಆಗುಂಬೆ ಘಟ್ಟ ಇಳಿದು ಸೋಮೇಶ್ವರ ತಲುಪಿದ್ದೆ. ಸೋಮೆಶ್ವರಕ್ಕೆ ಹೋಗಬೇಕಾದರೆ ಕಡಿದಾದ ಘಟ್ಟವನ್ನು ಇಳಿಯಬೇಕಾಗುತ್ತದೆ, ಎಂತಹ ಚಾಲಕನಿಗೂ ಅರೆ ಕ್ಷಣ ಎಚ್ಚರ ತಪ್ಪಿದರೆ ಅಪಘಾತ ಶತಃಸಿದ್ದ. ಮತ್ತೆ ಘಟ್ಟವನ್ನು ಹತ್ತುವಾಗ ಕೆಟ್ಟು ನಿಂತಿದ್ದ ಟೆಂಪೋ ಟ್ರಾಕ್ಸ್ ಮೇಲಿದ್ದ ಫಲಕ ನನ್ನ ಗಮನ ಸೆಳೆಯಿತು ಕಾರಣ ಅದರ ಮೇಲಿದ್ದ ಶಾಲೆಯ ವಿಳಾಸ, ನಾನು ಓದಿದ್ದ ಪ್ರಾಥಮಿಕ ಶಾಲೆಯ ಮಕ್ಕಳು ಪ್ರವಾಸ ಹೊರಟಿದ್ದ ವಾಹನ ಕೆಟ್ಟು ನಿಂತಿತ್ತು. ಅವರೊಂದಿಗೆ ಸ್ವಲ್ಪ ಸಮಯ ಕಳೆದು ಕುಂದಾದ್ರಿಗೆ ನನ್ನ ಪ್ರಯಾಣ. ಆಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ೭-೮ ಕಿ.ಮೀ ಗಳನಂತರ ಬಲಗಡೆಗೆ ತಿರುಗಿ ಸುಮಾರು ೫ ಕಿ,ಮೀಗಳ ನಂತರ ಬೆಟ್ಟದ ದಾರಿ ಪ್ರಾರಂಭ ೨ ಕಿ.ಮೀ ನಂತರ ಸಿಗುವುದೇ ಕುಂದಾದ್ರಿ. ನಮ್ಮ ನಂದಿ ಬೆಟ್ಟವನ್ನು ಹೋಲುವ ಜನ ಸಂದಣಿಯಿಲ್ಲದ ಜಾಗ. ಆಶ್ಚರ್ಯ ಅಂದರೆ ಮಲೆನಾಡಿನ ಮದ್ಯೆ ಬಯಲು ಸೀಮೆಯಲ್ಲಿರುವ ಸಣ್ಣ ಬೆಟ್ಟ ಕುಂದಾದ್ರಿ. ಜಿನ ದೇವಸ್ತಾನ ಅದಕ್ಕೆ ಅಂಟಿಕೊಂದು ಇರುವ ಹಸಿರು ನೀರಿನ ಕೊಳ ಅಷ್ಟೇನೂ ಆಕರ್ಷಣಿಯವಲ್ಲ. ಬೆಂಗಳೂರಿಗೆ ಸಮೀಪವಿದ್ದಿದ್ದರೆ ಬಹುಷಃ ಅತ್ಯಂತ ಜನಪ್ರಿಯ ತಾಣವಾಗಿರುತ್ತಿತ್ತೇನೊ!!!
೩-೪ ಬಾರಿ ಆಗುಂಬೆಯ ಸೂರ್ಯಾಸ್ತವನ್ನು ವೀಕ್ಷಿಸಿದ್ದರೂ ಮತ್ತೊಮ್ಮೆ ನೋಡಬೇಕೆಂದು ಆಗುಂಬೆ ಸೇರುವ ಹೊತ್ತಿಗೆ ಸೂರ್ಯ ಆಗಲೆ ತನ್ನ ಕೆಲಸ ಮುಗಿಸಿ ಮನೆ ಸೇರುವ ತವಕದಲ್ಲಿ ಪಡುವಣ ದಿಕ್ಕಿಗೆ ಓಡುತ್ತಿದ್ದ. ಆಗುಂಬೆಯ ಸೂರ್ಯಾಸ್ತ ವೀಕ್ಷಿಸಲು ಆಗಲೆ ಜನಜಂಗುಳಿ ನೆರೆದಿತ್ತು. ಸೂರ್ಯಾಸ್ತಮಾನದ ದೃಶ್ಯಗಳನ್ನು ಕಣ್ಣು, ಕ್ಯಾಮೆರಗಳಲ್ಲಿ ಸೆರೆ ಹಿಡಿದು. ಸುಂದರ ದೃಶ್ಯ ಕಾವ್ಯ ಬರೆದ ದಿನಕರನಿಗೊಂದು ನಮಸ್ಕಾರ ಹೊಡೆದು ನಮ್ಮ ಪಯಣ ಈಗ ರಾಜೇಶ್ ನಾಯಕ್ ರ ಸೂಚನೆಯಂತೆ ಹೆಬ್ರಿ ಕಡೆಗೆ ಗವ್ವೆನ್ನುವ ಮಲೆನಾಡಿನ ಕಾರ್ಗತ್ತಲಿನಲ್ಲಿ ವಾಹನ ಚಲಾಯಿಸುವುದೆ ಒಂದು ಅಪೂರ್ವ ಅನುಭವ. ಎದುರಿಗೆ ಬರುತ್ತಿರುವ ದೊಡ್ಡ ವಾಹನವೊಂದಕ್ಕೆ ದಾರಿಬಿಡುವ ಭರದಲ್ಲಿ ರಸ್ತೆಯಿಂದ ಕೆಳಗಿಳಿದ ನನ್ನ ಮಾರುತಿ ಓಮ್ನಿಯ ಹಿಂಬದಿಯ ಎಡಗಡೆಯ ಚಕ್ರ ನಿಂತಲ್ಲೆ ತಿರುಗತೊಡಗಿತು. ಅತ್ಯಂತ ಕಡಿಮೆ ವೇಗದಲ್ಲಿದ್ದುದರಿಂದ ಯಾರಿಗೂ ಯಾವುದೆ ತೊಂದರೆಯಾಗಲಿಲ್ಲ. ಹೊರಗೆ ಏನೂ ಕಾಣದಂತಹ ಕಾರ್ಗತ್ತಲು. ಕಾಡು ಪ್ರಾಣಿಗಳ ಭಯ ಬೇರೆ. ಕಾರಿನಿಂದ ಕೆಳಗಿಳಿಯಲೂ ಭಯ. ಬೇರೆ ವಿಧಿಯಿಲ್ಲದೆ ನಾನು ಮತ್ತು ಭಾವ ವಾಹನದ ಚಕ್ರ ಎತ್ತಿ ಇಡಲು ಪ್ರಯತ್ನಿಸಿದ್ದು ವ್ಯರ್ಥ. ಕತ್ತಲಿನಲ್ಲೊಂದು ಆಶಾಕಿರಣವೆಂಬಂತೆ ದೂರದಲ್ಲೊಂದು ವಾಹನದ ಮಿಣುಕು. ಎಷ್ಟೆ ಆಗಲಿ ಮಲೆನಾಡಿನ ಜನತೆ ಆಟೋದಲ್ಲಿದ್ದ ೮ ಜನ ಅನಾಮತ್ತಾಗಿ ಎತ್ತಿ ನನ್ನ ವಾಹನವನ್ನು ರಸ್ತೆಗಿಟ್ಟರು ಅಬ್ಬ !!! ಹೆಬ್ರಿ ತಲುಪಿದಾಗ ರಾತ್ರಿ ೮.೩೦
ಮರುದಿನ ಚುಮುಚುಮು ಚಳಿಯಲ್ಲಿ ಬಿಸಿಬಿಸಿ ಕೊಟ್ಟೆ ಕಡುಬು, ನೀರ್ ದೋಸೆ ತಿಂದು ಜೋಮ್ಲುತೀರ್ಥ ತಲುಪಿದಾಗ ೯ ಗಂಟೆ. ಬಂಡೆ ಕಲ್ಲುಗಳ ಮಧ್ಯೆ ರಭಸವಾಗಿ ಹರಿಯುವ ಸೀತೆ ಮನಮೋಹಕ ಚಿತ್ರ ಬಿಡಿಸಿಟ್ಟಿದ್ದಾಳೆ. ಹಲವು ಕವಲುಗಳಾಗಿ, ಕೆಲವು ಕಡೆ ಧುಮ್ಮಿಕ್ಕುವ, ತಕ್ಷಣವೆ ಮಂದಗಮನೆಯಾಗುವ ಸೀತೆ ಸೃಷ್ಠಿಸಿರುವ ಜೋಮ್ಲುತೀರ್ಥ ಬೆಂಗಳೂರಿಗರಿಗೆ ಹೇಳಿಮಾಡಿಸಿದಂತ ಪಿಕ್ನಿಕ್ ತಾಣವಾಗಬಲ್ಲುದು. ಆದರೆ ಸ್ಥಳೀಯ ಆಡಳಿತ ಅಳವಡಿಸಿರುವ ಸೂಚನಾ ಫಲಕದಲ್ಲಿರುವ ಮೃತಪಟ್ಟವರ ಪಟ್ಟಿ ಭೀತಿ ಹುಟ್ಟಿಸುವುದು ನಿಶ್ಚಿತ.
ಈಗಾಗಲೆ ಸೂರ್ಯ ತನ್ನ ಚುರುಕುತನವನ್ನು ಹರಿತಗೊಳಿಸಿದ್ದ. ಇನ್ನು ಉಳಿದದ್ದು ಪ್ರವಾಸದಲ್ಲಿನ ಕಟ್ಟ ಕಡೆಯ ತಾಣ ಕೋಡ್ಲುತೀರ್ಥ. ಹೆಬ್ರಿಯಲ್ಲಿ ಯಾರಿಂದಲೂ ಇದರ ಬಗ್ಗೆ ಮಾಹಿತಿ ಸಿಗಲಿಲ್ಲ. ಕೊನೆಗೆ ಕೆಲವು ಆಟೋ ಚಾಲಕರು ದೂರದಲ್ಲಿ ನಿಂತಿದ್ದ ವ್ಯಕ್ತಿಯಬ್ಬರನ್ನು ತೋರಿಸಿ ಅವರನ್ನ್ನು ಕಾಣಲು ಹೇಳಿದರು. ಆ ವ್ಯಕ್ತಿಯ (ಗೌಡ ಎಂದಷ್ಟೆ ತಿಳಿದು ಬಂದದ್ದು) ಹೆಸರು ತಿಳಿಯದೆ ತಪ್ಪು ಮಾಡಿದೆನೆಂದು ಈಗ ನನ್ನ ಅನಿಸಿಕೆ. ಗೌಡರು ಕೋಡ್ಲು ತೀರ್ಥದ ಸಮೀಪದ ಹಳ್ಳಿಯೊಂದರಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುವಾತ. ನಮ್ಮೊಡನೆ ಬರಲು ಒಪ್ಪಿದ ಗೌಡರೊಂದಿಗೆ ನಮ್ಮ ಪ್ರಯಾಣ ಕೋಡ್ಲುತೀರ್ಥದ ಕಡೆಗೆ. ಹೆಚ್ಚು ಮಾತನಾಡಲು ಬಯಸದ ಆ ವ್ಯಕ್ತಿಯಿಂದ ವಿವರ ತಿಳಿಯಲು ಪ್ರಯತ್ನಿಸಿದ ನನ್ನ ಶ್ರಮ ವ್ಯರ್ಥ! ಸುಮಾರು ೧೫ ಕಿ.ಮೀ ಪಯಣದ ನಂತರ ತನ್ನ ಮನೆ ಬಂದಾಕ್ಷಣ ಮುಂದೆ ಹೋಗುವ ದಾರಿ ನಮಗೆ ತೋರಿಸಿ ವಾಹನದಿಂದ ಇಳಿದು ಹೋಗೆ ಬಿಟ್ಟ ಆ ವ್ಯಕ್ತಿ. ನರಪಿಳ್ಳೆಯೂ ಕಾಣ ಸಿಗದ ಕಾಡಿನಲ್ಲಿ ಉತ್ತಮವಾದ ಡಾಂಬರು ರಸ್ತೆ ನಮ್ಮನ್ನು ೨ ಮನೆಗಳಿರುವ ಜಾಗಕ್ಕೆ ತಂದು ನಿಲ್ಲಿಸಿತ್ತು. ಅಲ್ಲಿಂದ ಸಣ್ಣದೊಂದು ಹೊಳೆ ದಾಟಲು ವಾಹನಕ್ಕೆ ಯೋಗ್ಯವಲ್ಲದ ಸೇತುವೆಯನ್ನು ದಾಟಿ ನಮ್ಮ ಚಾರಣ ಆರಂಭ. ಸುಮಾರು ೩ ಕಿ.ಮೀಗಳ ನಡಿಗೆಯ ನಂತರ ಕಾಡು ದಾರಿಯ ಮದ್ಯೆ ಸಿಗುವ ದನಗಾಹಿಗಳಿಂದ ಅಥವ ದಾರಿಹೋಕರಿಂದ ನಾವು ಹೋಗುತ್ತಿರುವ ದಾರಿ ಸರಿಯಿದೆಯೆಂದು ಖಾತರಿಪಡಿಸಿಕೊಂಡು ಬೆಟ್ಟ ಹತ್ತಲು ಆರಂಭಿಸಿದೆವು. ನಮ್ಮೆಲ್ಲರನ್ನು ನಿತ್ರಾಣಗೊಳಿಸುವ ಬೆಟ್ಟವನ್ನು ಹತ್ತಲಾಗದೆ ಹತ್ತಿ, ಇಲ್ಲದ ದಾರಿಯಲ್ಲಿ ಜಲಪಾತದ ಶಬ್ದವನ್ನೆ ಹಿಡಿದು ಜಲಪಾತದ ಸಮೀಪ ಬಂದಾಗ ಹೃದಯ ಬಾಯಿಗೆ ಬಂದಂತ ಅನುಭವ. ಓಹ್! ಎಂತಹ ನಿರ್ಜನ ಜಾಗ. ಮನಮೋಹಕ ಜಲಪಾತ. ಕವಲುಗಳಿರದೆ ನೇರವಾಗಿ ಒಮ್ಮೆಲೆ ಕೆಳಗೆ ಧುಮುಕುವ ಜಲಲ ಜಲಧಾರೆ!!!! ೧೨ ಗಂಟೆಯ ಉರಿಬಿಸಿಲಿನ ಸಮಯಲ್ಲು ಕೊರೆಯುವ ಚಳಿ ಹುಟ್ಟಿಸುವ ತಣ್ಣನೆಯ ವಾತಾವರಣ. ಮೈಮನದಣಿಯುವಷ್ಟು ನೀರಿನಲ್ಲಿ ಈಜಿದ್ದು ಹಿತಕರ ಅನುಭವ. ಒಂದು ಗಂಟೆಯ ನಂತರ ಕಾರಿಗೆ ಹಿಂತಿರುಗಿ ಅಲ್ಲಿಂದ ನೇರವಾಗಿ ಆಗುಂಬೆ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮುಖಾಂತರ ಬೆಂಗಳೂರು ತಲುಪಿದಾಗ ರಾತ್ರಿ ೧೨.
ಒಂದು ಉತ್ತಮವಾದ ಪ್ರವಾಸವನ್ನು ಪೂರ್ಣಗೊಳಿಸಿದ ಸಂತೃಪ್ತ ಭಾವ.

Saturday, June 7, 2008

ಆನೆಝರಿ ಮತ್ತು ಭೀಮೇಶ್ವರಿ

ಆನೆಝರಿ ಒಂದು ಪ್ರವಾಸ ಕಥನ

ಕಾಲೇಜ್ ಸ್ನೇಹಿತ ಮಂಜು ಹೇಳಿದಾಗಿನಿಂದ ತಲೆಯಲ್ಲಿ ಕೊರೆಯುತ್ತಿದ್ದದ್ದು ಆನೆಝರಿ ಪ್ರಕೃತಿ ಶಿಬಿರ. ಒಮ್ಮೆ ಹೋಗಿ ಬಾ ನಿಂಗೆ ತುಂಬಾ ಇಷ್ಟಆಗುತ್ತೆ ಎಂಬ ಅವನ ಅನಿಸಿಕೆ, ನನಗೋ ಹೊಸ ಜಾಗ ಅಂದ್ರೆ ಗೊತ್ತಾದಾಗ್ಲೆ ಹಾರಿ ಬಿಡುವ ಮನಸ್ಸು ಆದ್ರೆ ಜವಾಬ್ದಾರಿಗಳು ಕೇಳ್ಬೇಕಲ್ಲ? ಮಗನ ಪರೀಕ್ಷೆಗಳೆಲ್ಲ ಮುಗಿದು ಅವನ ಶಾಲೆಯ ರಜಾ ಘೋಷಣೆಯ ನಂತರವಷ್ಟೆ ನಮ್ಮ ಪ್ರವಾಸದ ಯೋಜನೆಗಳ ಪ್ರಾರಂಭ. ಪ್ರವಾಸದ ಸ್ಥಳಗಳನ್ನು ಯೋಜಿಸುವುದೇ ಅತ್ಯಂತ ತಲೆನೋವಿನ ಕೆಲಸ. ಕಬಿನಿ ಹಿನ್ನೀರಿನ ಜಾಗಗಳನ್ನು ನೋಡುವ ಮನಸ್ಸಿದ್ದರೂ ಜಂಗಲ್ ಲಾಡ್ಜಸ್ ನಮ್ಮಂತ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಕೈಗೆಟುಕದ ಕಾರಣ ನಮ್ಮ ಪ್ರವಾಸ ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ಕಡೆಗೆ ಅನ್ನೊ ಹಾಡಿನ ಹಾಗೆ ನನ್ನ ನೆಚ್ಚಿನ ತಾಣವಾದ ಪಶ್ಚಿಮ ಘಟ್ಟಗಳ ಕಡೆಗೆ>>>------------->
ನಮ್ಮ ಪ್ರವಾಸ ಕಾರ್ಯಕ್ರಮಕ್ಕೆ ಒಂದು ರೂಪ ಕೊಡುವುದಕ್ಕೆ ಕೂತವರು ಸಹೋದ್ಯೋಗಿ ಶ್ರೀಧರ, ಶಂಕರ ಮತ್ತು ನಾನು. ನನ್ನ ಹಿಂದಿನ ಪ್ರವಾಸ ಕಥನಗಳಲ್ಲಿನ ಟೀಕೆಯೋ? ಅಥವ ನಾನು ನೋಡಿಬಂದ ಸ್ಥಳಗಳ ಸೌಂದರ್ಯ ಇವರಿಬ್ಬರನ್ನು ನನ್ನೊಡನೆ ಬರಲು ಪ್ರೇರೇಪಿಸಿತೋ? ಗೊತ್ತಿಲ್ಲ ಅಂತು ನನ್ನೊಡನೆ ಬರಲು ಅನ್ನುವುದಕ್ಕಿಂತ ಅವರೆ ನನ್ನನು ಪ್ರವಾಸಕ್ಕೆ ಹೊರಡಿಸಲು ಯಶಸ್ವಿಯಾದರು ಎನ್ನುವುದು ಹೆಚ್ಚು ಸೂಕ್ತವಿರಬೇಕು. ೨೦೦೮ ರ ಏಪ್ರಿಲ್ ೧೨ ರಿಂದ ೧೬ ರವರೆಗೆ ಪ್ರವಾಸದ ದಿನಗಳೆಂದು ನಿರ್ಧರಿಸಿದೆವು.
ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯ ಪ್ರದೇಶ ನನ್ನ ಮೊದಲ ಆಯ್ಕೆ ಆದರೆ ಕಾಡ್ಗಿಚ್ಚಿನ ಸಮಯವೆಂದು ಅಲ್ಲಿನ ಅರಣ್ಯಾಧಿಕಾರಿಗಳು ಅಲ್ಲಿಗೆ ಪ್ರವೇಶ ನಿರಾಕರಿಸಿದರು. ಇದೆಲ್ಲದರ ರಗಳೆಯೆ ಬೇಡವೆಂದು ಸ್ನೇಹಿತ ಮಂಜು ಹೇಳಿದಂತೆ ಪ್ರಸಿದ್ಧ ಯಾತ್ರಾ ಸ್ಥಳ ಕೊಲ್ಲೂರಿನ ಸಮೀಪವಿರುವ "ಆನೆಝರಿ" ಪ್ರಕೃತಿ ಶಿಬಿರಕ್ಕಾಗಿ ಕಾರ್ಕಳ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿಯನ್ನು (ಜಯನಾರಾಯಣ) ಸಂಪರ್ಕಿಸಿ ೨ ರಾತ್ರಿಗೆ ೩ ಢೇರೆಗಳನ್ನು ಕಾದಿರಿಸಿದೆವು. ನಂತರದ ೨ ದಿನಗಳಿಗಾಗಿ ಸ್ಥಳ ನಿರ್ಧಾರವನ್ನು ನನ್ನ ತಲೆಗೆ ಕಟ್ಟೀದರು. ಸರಿ ಜೋಗದ ಸಮೀಪವಿರುವ ಪತ್ರಕರ್ತ ಶ್ರೀ ರಾಘವೇಂದ್ರ ಶರ್ಮರನ್ನು ಸಂಪರ್ಕಿಸಿ ಹೊನ್ನೆಮರಡು ಬಗ್ಗೆ ವಿಚಾರಿಸಲಾಗಿ ಮುಂದಿನ ೨ ತಿಂಗಳ ಕಾಲ ಅವಕಾಶವಿಲ್ಲವೆಂದು ತಿಳಿಸಿದರು. ಆದರೆ ಕಾರ್ಗಲ್ ಬಳಿಯಿರುವ "ಮುಪ್ಪಾನೆ ಪ್ರಕೃತಿ ಶಿಬಿರ", ಗೇರುಸೊಪ್ಪ ಬಳಿಯ ಹಿನ್ನೀರಿನ ಸ್ಥಳಗಳನ್ನು ಸೂಚಿಸಿದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿರದೆ ಮತ್ತು ಕಾಲಾವಕಾಶವೂ ಕಡಿಮೆಯಿದ್ದುದರಿಂದ ವಸತಿಗಾಗಿ ಒಂದು ಢೇರೆಯನ್ನು ನಂಬಿ ನಮ್ಮ ಪ್ರವಾಸ ಆರಂಭಿಸೋಣವೆಂದು ಹೇಳಿದಾಗ ನನ್ನ ಇಬ್ಬರ ಸಹೋದ್ಯೋಗಿಗಳ ಮುಖದಲ್ಲು ಹುಣಿಸೆಹಣ್ಣು ತಿಂದವರ ಭಾವ ಇಣುಕಿತ್ತು. ನೀನು ಹೇಗೆ ಹೇಳಿದ್ರೆ ಹಾಗೆ ಎನ್ನುವ ಅವರ ಮಾತನ್ನೆ ಆಧಾರವಾಗಿಟ್ಟುಕೊಂಡು ಅವರಿಗೆ ಧೈರ್ಯ ಹೇಳಿದ್ದಾಯ್ತು. ಏನೇ ಆಗಲಿ ನಾನು ಅಲ್ಲಿನ ಸ್ಥಳಗಳ ಮಾಹಿತಿಗಾಗಿ ಪಶ್ಚಿಮಘಟ್ಟಗಳ ಮಾಹಿತಿ ಕಣಜ ರಾಜೇಶ್ ನಾಯಕ್ ಅವರನ್ನು ಸಂಪರ್ಕಿಸಿದೆ. ನಾನು ಹೋಗುವ ಜಾಗಗಳ ಮಾಹಿತಿ ಕೊಟ್ಟಿದ್ದೆ ತಡ ಅವರು ಸೂಚಿಸಿದ ಹೆಸರು "ಭೀಮೇಶ್ವರ". ನಿಮಗೆ ತುಂಬ ಇಷ್ಟ ಆಗುತ್ತೆ ಹೋಗಿಬನ್ನಿ ಎನ್ನುವ ಅವರ ಅನಿಸಿಕೆ ಆದರೆ ಅವರು ಕೊಟ್ಟ ಮಾಹಿತಿಗಳು ನನ್ನ ಸಹೋದ್ಯೋಗಿಗಳ ನಿದ್ದೆ ಕೆಡಿಸಿತ್ತು. ಅದಕ್ಕೂ ಮುಂಚೆ ದಬ್ಬೆಫಾಲ್ಸಿಗೂ ಒಂದು ಭೇಟಿ ಕೊಡಿ ಎಂಬ ರಾಜೇಶರ ಮಾತು ನನಗೆ ಕುಣಿದಾಡುವಷ್ಟು ಸಂತಸ ತಂದಿತು
ನಮ್ಮ ಮೊದಲನೆ ದಿನದ ಪ್ರಯಾಣ ಸುಮಾರು ೪೧೫ ಕಿ.ಮೀ ಗಳನ್ನು ಕ್ರಮಿಸಬೇಕಿರುವುದರಿಂದ ಬೆಳಿಗ್ಗೆ ೪ ಗಂಟೆಗೆ ನಮ್ಮ ಪ್ರಯಾಣ ಆರಂಭಿಸಬೇಕಿತ್ತು. ಶ್ರೀಧರನ ಮಾರುತಿ ವ್ಯಾನ್ ತುಮಕೂರು ರಸ್ತೆಗಿಳಿದಾಗ ಸಮಯ ೫.೩೦. ತರೀಕೆರೆಯ ಬಳಿ ಕೆಟ್ಟು ಹೋದ ರಸ್ತೆಯನ್ನು ಶಪಿಸುತ್ತಾ ನಮ್ಮ ಪಯಣ. ಶಿವಮೊಗ್ಗದಲ್ಲಿ ಊಟ ಮಾಡಿ, ತ್ಯಾವರೆಕೊಪ್ಪ ಹುಲಿಧಾಮ ತಲುಪಿದಾಗ ಸಮಯ ೨.೦೦ ಗಂಟೆ. ಇಲ್ಲಿರುವ ಪುಟ್ಟ ಮೃಗಾಲಯವನ್ನು ಎಲ್ಲರು ಆಸ್ವಾದಿಸುತ್ತಿದ್ದರೆ, ನನಗೆ ಸ್ವಚ್ಛಂದವಾಗಿ ಕಾಡಿನಲ್ಲಿ ಜೀವಿಸುವ ಪ್ರಾಣಿಗಳನ್ನು ಮಾನವರು ತಮ್ಮ ಮೋಜಿಗಾಗಿ ಪಂಜರಗಳಲ್ಲಿ ಕೂಡಿ ಹಾಕಿ ಅವುಗಳನ್ನು ವಿವಿಧ ರೀತಿಯಲ್ಲಿ ಹಿಂಸಿಸುವುದನ್ನು ನೋಡುತ್ತಿದ್ದರೆ ನಿಜಕ್ಕೂ ಮನ ಕಲಕುತ್ತದೆ. ಅವುಗಳು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆಯೋ ಆ ದೇವರೆ ಬಲ್ಲ!! ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿಗಿಂತ ಮಿಗಿಲಾದ ಹೇಯಕರ, ಈ ದೃಶ್ಯಗಳು ಎಂದು ನನ್ನ ವಯಕ್ತಿಕ ಭಾವನೆ. ಇದರಲ್ಲಿ ಬೇರೆ ಯಾರ ಮನ ನೋಯಿಸುವ ಇರಾದೆಯಿಲ್ಲ. ಸ್ವತಂತ್ರವಾಗಿ ಬದುಕುವ ಪ್ರಾಣಿಗಳನ್ನು ಈ ರೀತಿಯಲ್ಲಿ ನೋಡಿ ಖುಷಿ ಪಡುವ ಮಾನವರೆಲ್ಲರನ್ನು ಒಮ್ಮೆ ಈ ಪಂಜರಗಳಲ್ಲಿ ಪ್ರದರ್ಶನಕ್ಕಿಟ್ಟು ಬಂದವರೆಲ್ಲ ಇದೇ ರೀತಿ ಹಿಂಸಿಸಿದರೆ ಬಹುಶಃ ಆ ಪ್ರಾಣಿಗಳ ನೋವು ನಮಗರ್ಥವಾಗಬಹುದೆಂಬ ನನ್ನ ಮನಸ್ಸಿನ ಊಹೆಗೆ ನನ್ನ ಮನದಲ್ಲೆ ಒಂದು ವ್ಯಂಗ್ಯದ ನಗೆಯಷ್ಟೆ ನನಗೆ ಹೊಳೆದದ್ದು. ಬಿರು ಬೇಸಿಗೆಯಲ್ಲೂ ಆಕಸ್ಮಿಕವಾಗಿ ಬಂದ ಮೋಡದ ವಾತಾವರಣ ಪಂಜರದಲ್ಲಿದ್ದ ನವಿಲೊಂದು ಗರಿಬಿಚ್ಚಿ ನರ್ತಿಸುವಂತೆ ಮಾಡಿತು. ಸುಮಾರು ೫-೬ ನಿಮಿಷಗಳ ಕಾಲ ನಡೆದ ಈ ನರ್ತನ ಮನಸ್ಸಿಗೆ ಮುದ ನೀಡಿತು. ವಾಹ್! ಯಾವ ಕಲಾಕಾರನೂ ಆ ಬಣ್ಣಗಳನ್ನು ಅಷ್ಟು ಹಿತವಾಗಿ ನೈಜವಾಗಿ ಬೆರೆಸಿ ಆ ಚಿತ್ರವನ್ನು ಬಿಡಿಸಲಾರ. ನಾನು ಬಾಲ್ಯ ಕಳೆದ ಹಳ್ಳಿಯಲ್ಲಿನ ಹೊಲ ಗದ್ದೆಗಳ ಕೊಯ್ಲಿನ ಸಮಯದಲ್ಲಿ ದಾಳಿಯಿಡುತ್ತಿದ್ದ ನವಿಲುಗಳು ಸಂಜೆಯಾಗುತ್ತಿದ್ದಂತೆ ನಮ್ಮ ತೋಟದ ಸನಿಹ ಕೀಲಿ ಕೊಟ್ಟ ಸಹ ನರ್ತಕಿಯರಂತೆ ಗರಿ ಬಿಚ್ಚಿ ಕುಣಿಯುತ್ತಿದ್ದ ನವಿಲಿನ ಸುತ್ತ ಸುತ್ತುತ್ತಿದ್ದ ನವಿಲುಗಳ ನರ್ತನ ನನ್ನ ಮನಸ್ಸಿನಲ್ಲಿ ತಟ್ಟನೆ ಹಾಯ್ದು ಹೋಯಿತು. ತನ್ನ ನಿಧಾನ ಪ್ರವೃತ್ತಿಯಿಂದ ಇಂತಹ ಒಂದು ದೃಶ್ಯವನ್ನು ಕಳೆದು ಕೊಂಡ ಶ್ರೀಧರ ನಿಜಕ್ಕೂ ನತದೃಷ್ಟ. ನವಿಲಿನ ನರ್ತನ ನೋಡಲು ದಾಳಿಯಿಟ್ಟ ಮುಸ್ಲಿಂ ಸಮುದಾಯದ ೩೦-೪೦ ಜನರ ಗುಂಪಿನ ಗಲಾಟೆಗೆ ಹೆದರಿ ನವಿಲು ಗರಿ ಮುದುರಿ ಕುಳಿತಿತು. ಸ್ವತಂತ್ರವಾಗಿ ಅಲ್ಲದಿದ್ದರು ಪಂಜರದೊಳಗೆ ನರ್ತಿಸಲೂ ಮನುಷ್ಯ್ರನ ಉಪಟಳ ಆ ನವಿಲಿಗೆ.
ಕೊನೆ ಪಕ್ಷ ಹುಲಿಧಾಮದಲ್ಲಿರುವ ಹುಲಿ ಮತ್ತು ಇರುವ ಎರಡು ಸಿಂಹಗಳೆ ಇದ್ದುದರಲ್ಲಿ ಸ್ವತಂತ್ರವಾಗಿವೆಯಾದರೂ ಆಹಾರಕ್ಕಾಗಿ ಜನರನ್ನೆ ನಂಬಿರುವ ಇವು ಮೃಗಾಲಯಗಳಲ್ಲಿರುವ ಪ್ರಾಣಿಗಳಿಗಿಂತ ಎಷ್ಟೋ ಮೇಲು ಎನ್ನುವ ಬಾವನೆ ಮನಸ್ಸಿಗೆ ಕೊಂಚ ನಿರಾಳತೆಯನ್ನು ತರುತ್ತದೆ. ಮನುಷ್ಯರನ್ನು ನೋಡಿ ನೋಡೀ ಅವಕ್ಕು ಬೇಸರ ಬಂದಿರಬೇಕು ಇವರಿಗೇನಪ್ಪ ನಮ್ಮನ್ನು ನೋಡೋದು ಬಿಟ್ಟು ಬೇರೆ ಕೆಲಸನೆ ಇಲ್ವ? ಅಂತ ಇವು ಮಾತಾಡಿಕೊಳ್ಳುತ್ತಿವೆಯೆನೋ ಎನ್ನುವ ಭಾವನೆ ಬರುವ ಹಾಗೆ ನಮ್ಮನ್ನು ನೋಡಿ ಆಕಳಿಸುತ್ತಿರುತ್ತವೆ. ಜಿಂಕೆ, ಕಡವೆ ಕೃಷ್ಣಮೃಗ ಸಾಂಬಾರ್ ಮತ್ತು ಆಗಾಗ ಕಾಣಿಸಿಕೊಳ್ಳುವ ನವಿಲುಗಳು ಇಲ್ಲಿವೆ.
೩.೩೦ಕ್ಕೆ ಹುಲಿ/ಸಿಂಹಧಾಮದಿಂದ ಹೊರಟು ಆಯನೂರು, ರಿಪ್ಪನ್ ಪೇಟೆ ಮಾರ್ಗವಾಗಿ ಹೊಸನಗರ ತಲುಪಿ ನಮ್ಮ ಚೈತನ್ಯರಥಗಳ ಸಾರಥಿಗಳಾದ ಶ್ರೀಧರ, ಶಂಕರನಿಗೆ ವಿಶ್ರಾಮ ದೊರಕುವ ಸಲುವಾಗಿ ಚಹಾ ಕುಡಿದು ನಗರ ಮಾರ್ಗದಲ್ಲಿ ಶಿಥಿಲಗೊಂಡಿರುವ ಸೇತುವೆಯ ಬಳಿ ಸ್ವಲ್ಪ ದಾರಿ ತಪ್ಪಿ ಮತ್ತೆ ಸರಿಯಾದ ದಾರಿಯಲ್ಲಿ ನಿಟ್ಟೂರು ಮಾರ್ಗವಾಗಿ ಘಟ್ಟದ ರಸ್ತೆಗಳಲ್ಲಿ ಹಾಯ್ದು ಕೊಲ್ಲೂರು ತಲುಪಿದಾಗ ಸಂಜೆ ರವಿ ಆಗಲೆ ತನ್ನ ಮನೆ ಸೇರಿಕೊಂಡಿದ್ದ. ಅರಣ್ಯ ಇಲಾಖೆಯ ಜಯನಾರಾಯಣರನ್ನು ದೂರವಾಣಿ ಮುಖೇನ ಸಂಪರ್ಕಿಸಿ, ಕೊಲ್ಲೂರಿನ ಅರಣ್ಯ ಇಲಾಖೆಯ ಕಛೇರಿಗೆ ನಾವು ಬಂದ ಉದ್ದೇಶಗಳನ್ನು ಮತ್ತು ನಾವು ತಂಗಬೇಕಾಗಿರುವ ಜಾಗವನ್ನು ತಿಳಿಸಿದೆವು. ಅರಣ್ಯ ಇಲಾಖೆಯ ಪತ್ರ ಆಗಲೆ ಇಲ್ಲಿಗೆ ತಲುಪಿರುವ ಬಗ್ಗೆ ನಮಗೆ ಮಾಹಿತಿ ದೊರೆಯಿತು. ಕೊಲ್ಲೂರು ಭಟ್ಕಳ ರಸ್ತೆಯಲ್ಲಿ ೩ ಕಿ ಮಿ ಕ್ರಮಿಸಿದ ನಂತರ ಬಲಭಾಗದಲ್ಲಿರುವ ಫಲಕವೇ ನಮಗೆ ಆನೆಝರಿಗೆ ಹೋಗಲು ಮಾರ್ಗದರ್ಶಕ ಎನ್ನುವ ಮಾಹಿತಿ ಅರಣ್ಯ ಇಲಾಖೆಯ ನೌಕರನಿಂದ ಸಿಕ್ಕಿತು. ಈ ಹೊತ್ತಿಗಾಗಲೆ ಸಂಪೂರ್ಣ ಕತ್ತಲು ಆವರಿಸಿತು. ೩ ಕಿ.ಮಿ ನಂತರ ಮುಖ್ಯರಸ್ತೆಯಲ್ಲಿರುವ ಫಲಕವನ್ನೆ ಆಧರಿಸಿ ಸಿಗುವ ಕಚ್ಛಾರಸ್ತೆಯಲ್ಲಿ ದಟ್ಟ ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಿ ಪ್ರಕೃತಿ ಶಿಬಿರ ತಲುಪಿದಾಗ ಆಗಲೆ ಅಲ್ಲಿ ಸುಮಾರು ಜನರಿರುವ ಕುರುಹಾಗಿ ನಿಂತಿದ್ದ ೨-೩ ವಾಹನಗಳು ನಮಗೆ ಸ್ವಾಗತ ಕೋರಿದವು. ಶಿಬಿರದ ಮೇಲ್ವಿಚಾರಕ ಮಹಾಬಲ ನಮಗಾಗಿ ಕಾದಿರಿಸಿದ್ದ ಢೇರೆಗಳನ್ನು ತೋರಿಸಿ ಇವತ್ತಿನ ಮಟ್ಟಿಗೆ (ಇಲಾಖೆಯ ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿಯಿಲ್ಲದೆ ಹಾಜರಾದ್ದರಿಂದ) ನಮಗೆ ಊಟ ದೊರಕುವುದಿಲ್ಲವೆಂದು ತಿಳಿಸಿದರು. ಸರಿ ನಾವೆಲ್ಲ ಢೇರೆಯೊಳಗೆ ನಮ್ಮ ಹೊರೆಗಳನ್ನೆಲ್ಲಾ ಇಳಿಸಿದೆವು. ಮಲೆಯಾಳಿಗಳೇ ತುಂಬಿ ಹೋಗಿರುವ ಕೊಲ್ಲೂರಿಗೆ ಬಂದು ಗಂಟಲಲ್ಲಿ ಇಳಿಯಲು ಹರತಾಳ ಹೂಡುತ್ತಿದ್ದ ಊಟವೆಂದು ಕೊಟ್ಟ ಪದಾರ್ಥವನ್ನು ತಿನ್ನಲಾಗದೆ ಹೊಟ್ಟೆಗೆ ತುರುಕಿ ಹಿಂತಿರುಗಿ ಬಂದು ಹಾಸಿಗೆ ಮೇಲೆ ಬಿದ್ದಾಗ ನಿದ್ರಾದೇವಿ ಯಾವಾಗ ಆವರಿಸಿಕೊಂಡಳೋ? ಗೊತ್ತಿಲ್ಲ.
ಗಡಿಯಾರ ಅರಚಿಕೊಳ್ಳಲು ಆರಂಭಿಸಿದಾಗಲೆ ಎಚ್ಚರವಾದದ್ದು. ಹೊತ್ತಿಗಾಗಲೆ ತನ್ನಿಬ್ಬರು ಮಕ್ಕಳೊಂದಿಗೆ ಶಿಬಿರದ ಪಕ್ಕದಲ್ಲೆ ಮಂದಗಮನೆಯಾಗಿ ಹರಿಯುತ್ತಿದ್ದ ಸೌಪರ್ಣಿಕೆಯ ದಡದಲ್ಲಿ ಕುಳಿತು ಬೆಳಗಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ಶಂಕರ ಸ್ವಾಗತಿಸಿದ. ಮಂದ ಬೆಳಕಿನಲ್ಲಿ ಮರಗಳ ಹಸಿರು ಬಣ್ಣವನ್ನೆ ಹಚ್ಚಿ ಕೊಂಡಿದ್ದ ಸೌಪರ್ಣಿಕ ನದಿಯ ನೀರು ಹಸಿರಾಗಿ ಕಾಣಿಸುತ್ತಿತ್ತು. ಆಗ ತಾನೆ ಉದಯಿಸುತ್ತಿದ್ದ ಸೂರ್ಯ ಕಿರಣಗಳು ನೀರಿನಲ್ಲಿ ಪ್ರತಿಫಲಿಸಿ ಎಲೆಗಳೊಡನೆ ಚಿನ್ನಾಟವಾಡುವುದನ್ನೆ ಮೈಮರೆತು ನೋಡುತ್ತಾ ನಿಂತಿದ್ದ ಶಂಕರನ್ನು ಢೇರೆಗೆ ಕರೆ ತಂದು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವಂತೆ ತಿಳಿಸಿದೆ. ಢೇರೆಯ ಬಳಿ ಬಂದರೆ ಮಗ ಅಮಿತ್ ಒಂದೇ ಉಸಿರಿನಲ್ಲಿ ತಾನು ನೋಡಿದ ಕೆಂಪು ಮಲಬಾರ್ ಅಳಿಲಿನ ಬಗ್ಗೆ ಹೇಳಲು ತವಕಿಸುತ್ತಿದ್ದ.
ಆನೆಝರಿ ಪ್ರಕೃತಿ ಶಿಬಿರ ದಟ್ಟ ಕಾಡಿನ ಮಧ್ಯೆ ಇರುವ ೫ ಢೇರೆಗಳಿರುವ ಒಂದು ತಾಣ. ಆದರೂ ಕುದುರೆ ಮುಖದ ಭಗವತಿ ಪ್ರಕೃತಿ ಶಿಬಿರಕ್ಕೂ ತುಂಬ ವ್ಯತ್ಯಾಸವಿದೆ ಕಾಡಿನ ಪಕ್ಕದಲ್ಲಿ ಹರಿಯುವ ಭದ್ರಾ ಹೊಳೆಯ ದಡದಲ್ಲಿ ಬೆಟ್ಟಗಳಿಂದ ಸುತ್ತುವರೆದಿರುವ ಬಯಲಲ್ಲಿ ನಿರ್ಮಿತವಾಗಿರುವ ಭಗವತಿ ಒಂದು ಸ್ವರ್ಗವನ್ನು ಸೃಷ್ಟಿಸಿದರೆ, ಸೂರ್ಯನ ಕಿರಣಗಳು ಭೇದಿಸಲು ಕಷ್ಟಪಡುವ ದಟ್ಟ ಅರಣ್ಯದ ಮಧ್ಯೆ ಹರಿಯುವ ಸೌಪರ್ಣಿಕ ನದಿಯದಡದಲ್ಲಿ ಹೊರ ಪ್ರಪಂಚದಿಂದ ದೂರ ಉಳಿದಿರುವಂತೆ ತೋರುವ ಆನೆಝರಿಗೂ ತನ್ನದೇ ಆದ ವೈಶಿಷ್ಟ್ಯವಿದೆ.
ನಮ್ಮೊಡನೆ ಬಂದಿದ್ದ ಸ್ಟೀವ್ ಇರ್ವಿನ್ (ಶ್ರೀಧರ) ರಾತ್ರಿ ಹಾದು ಹೋಗಿರಬಹುದಾದ ಹೆಬ್ಬಾವಿನ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದ. ಅಲ್ಲೆ ಮರದ ಮೇಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮಲಬಾರ್ ಅಳಿಲನ್ನು ತೋರಿಸಿ ಅದರ ಚಿತ್ರೀಕರಣ ಮಾಡುವಂತೆ ಆದೇಶಿಸಿದ. ಸರಿ ಅವನ ಅಣತಿಯಂತೆ ನನ್ನ ಕಣ್ಣಿನಿಂದ ಅದು ಮರೆಯಾಗುವಾವರೆಗೂ ಚಿತ್ರೀಕರಿಸಿ ಢೇರೆಗೆ ಹಿಂತಿರುಗಿ ಸ್ನಾನ ಮಾಡಿ ಕೊಲ್ಲೂರಿನಲ್ಲಿ ದೋಸೆ ತಿಂದು ಮುಗಿಸಿ ಹೊರ ಬಂದಾಗ ಆಗಲೇ ಸಮಯ ೧೦.೦೦. ಇವತ್ತಿನ ನಮ್ಮ ಕಾರ್ಯಕ್ರಮ ಕೊಡಚಾದ್ರಿ ಶಿಖರ. ಸರಿ ಅಲ್ಲೆ ಇದ್ದ ಜೀಪ್ ಗೆ ೧೨೦೦ ರೂಗಳ ಬಾಡಿಗೆ ಮಾತನಾಡಿ ಜೀಪ್ ಹತ್ತಿ ಕುಳಿತೆವು. ೩ ಬಾರಿ ಕೊಲ್ಲೂರಿಗೆ ಬಂದಿದ್ದರೂ ಕೊಡಚಾದ್ರಿಗೆ ಹೋಗಲಾಗಿರಲಿಲ್ಲ. ಹೋದ ಬಾರಿ ಕೊಲ್ಲೂರಿಗೆ ಬಂದಾಗ ಕೊಡಚಾದ್ರಿ ತಪ್ಪಲಿನಲ್ಲಿರುವ ಹಿಡ್ಲುಮನೆ ಜಲಪಾತಕ್ಕೆ ಭೇಟಿ ನೀಡಲು ಸಾಧ್ಯವಾಗಿತ್ತೆ ವಿನಃ ಕೊಡಚಾದ್ರಿಗೆ ಅದರ ರಸ್ತೆಯಿಂದಾಗಿ ತಪ್ಪಿ ಹೋಗಿತ್ತು. ಕೊಡಚಾದ್ರಿ ಪರ್ವತದ ತಪ್ಪಲಿನವರೆಗಷ್ಟೆ ನಮ್ಮ ವಾಹನಗಳು ಹೋಗಲು ಸಾಧ್ಯ. ಅಲ್ಲಿಂದ ಮೇಲಕ್ಕೆ ಅಂದರೆ ಸುಮಾರು ೧೦-೧೨ ಕಿ.ಮೀ ಗಳಷ್ಟು ಜೀಪ್ ಮಾತ್ರ ಹತ್ತಲು ಸಾಧ್ಯ. ಅಬ್ಬ ಅದೇನು ಜೀಪೋ ರೋಬಟ್ಟೋ ಗೊತ್ತಿಲ್ಲ ರಸ್ತೆಯೇ ಇಲ್ಲದ ಬಂಡೆಗಳ ಮೇಲೆ ನಾನು ನೋಡಿದ್ದರಲ್ಲೆ ಅತ್ಯಂತ ಕಡಿದಾದ ದಿಬ್ಬಗಳಲ್ಲಿ ನಿರಾಯಾಸವಾಗಿ ವಾಹನವನ್ನು ಚಲಾಯಿಸುವ ಚಾಲಕನ ಚಾಲಾಕಿತನಕ್ಕೆ ಒಮ್ಮೆ ನಮಸ್ಕಾರ ಹೇಳಲೇಬೇಕು. ಇಂತಹ ದುರ್ಗಮ ದಾರಿಯಲ್ಲು ಎದುರಿಂದ ಇಳಿದು ಬರುತ್ತಿರುವ ಜೀಪ್ ಗಳಿಗೆ ಜಾಗ ಬಿಡುತ್ತ (ಅದು ಯಾವ ಬದಿಯಲ್ಲಾದರು ಸರಿಯೆ) ಸಾಗುವ ಪರಿ ಅಧ್ಭುತ!!
ಕೊಲ್ಲೂರಿನಿಂದ ೪೦ ಕಿ.ಮೀ ದೂರದಲ್ಲಿರುವ ಕೊಡಚಾದ್ರಿಯಲ್ಲಿ ಭಟ್ಟರ ಮನೆಯವರೆಗೂ ಜೀಪ್ನಲ್ಲಿ ಹೋಗಿ ಅಲ್ಲಿಂದ ಸರ್ವಙ್ಞ ಪೀಠಕ್ಕೆ ನಡೆದೇ ಹೋಗಬೇಕೆಂದು ಮತ್ತೆ ಅದಕ್ಕಾಗಿ ನಮಗೆ ಆತ ದಯಪಾಲಿಸಿದ ಸಮಯ ೨ ಗಂಟೆಗಳು ಮಾತ್ರ ಅದಕ್ಕಿಂತ ಹೆಚ್ಚಾದಲ್ಲಿ ಗಂಟೆಗೆ ನೂರು ರೂಗಳನ್ನು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆಂದು ಎಚ್ಚರಿಸಿದ ನಮ್ಮ ಮಲೆಯಾಳಿ/ಕನ್ನಡ ಚಾಲಕ. ೧೨ ಗಂಟೆಗೆ ದೇವಸ್ಥಾನದ ಬದಿಯಲ್ಲಿ ಬಿಟ್ಟು ೨.೦೦ ಗಂಟೆಗೆ ಸರಿಯಾಗಿ ಹಿಂತಿರುಗುವಂತೆ ನಮಗೆ ತಿಳಿಸಿ ಅವನ ಸ್ನೇಹಿತರ ಜೊತೆ ಮಾಯವಾದ. ದೇವಸ್ಥಾನದ ಅರ್ಚಕರಿಗೆ ನಮಗೆಲ್ಲ ಊಟಕ್ಕೆ ವ್ಯವಸ್ಥೆ ಮಾದುವಂತೆ ವಿನಂತಿಸಿ. ಸರ್ವಙ್ಞ ಪೀಠದ ಕಡೆ ನಮ್ಮ ದಾಪುಗಾಲು. ಕಾಲುದಾರಿಯಲ್ಲಿ ಕಾಡಿನ ಮಧ್ಯೆ ನಮ್ಮ ನಡಿಗೆ ಸುಮಾರು ಅರ್ಧ ಗಂಟೆ ನಡಿಗೆಯ ನಂತರ ಸಣ್ಣದೊಂದು ಗುಹೆಯ ಒಳಗೆ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಕೈ ಮುಗಿದು ಇನ್ನೂ ಕ್ಲಿಷ್ಟಕರವಾದ ಬೆಟ್ಟವನ್ನು ಹತ್ತಲು ಆರಂಭಿಸಿದರೆ. ಅತ್ಯಂತ ಕಡಿದಾದ ಬೆಟ್ಟ ಹತ್ತುವುದು ಪ್ರಯಾಸಕರ. ಹೃದಯ ಬಡಿದು ಕೊಳ್ಳುವ ಶಬ್ಧ ತಮಟೆ ಹೊಡೆದಂತೆ ಕೇಳಿಸಲು ಆರಂಭವಾದಗಲೆಲ್ಲ ನಿಂತು ವಿಶ್ರಮಿಸಿ ಮತ್ತೆ ನಡಿಗೆ ಮತ್ತದೆ ಪುನರಾವರ್ತನೆ. ಸಧ್ಯ ದಟ್ಟವಾದ ಕಾಡಿನ ಮಧ್ಯೆ ಬಿಸಿಲಿನ ಝಳವಿಲ್ಲದೆ ನಮ್ಮ ನಡಿಗೆಗೆ ಸೂರ್ಯ ಸ್ವಲ್ಪ ಸಹಾಯ ಮಾಡಿದ್ದ. ದಾರಿಯುದ್ದಕ್ಕೂ ಸಿಗುವ ಮಲೆಯಾಳಿಗಳು ಪ್ಲಾಸ್ಟಿಕ್ ಮತ್ತು ಗುಟ್ಕಾ ಪಳೆಯುಳಿಕೆಗಳು ಮುಜುಗರ ತರಿಸುತ್ತವೆ. ಈಗಲೂ ಸಹ ದಟ್ಟ ಅರಣ್ಯದ ಮಧ್ಯೆಯಿರುವಲ್ಲಿಗೆ ಆ ಪುಣ್ಯಾತ್ಮ ಆದಿ ಶಂಕರರು ಅದು ಹೇಗೆ ನಡೆದು ಬಂದರೋ ಆ ಪರಮಾತ್ಮನೇ ಬಲ್ಲ. ಅದೂ ಇಲ್ಲಿ ಬಂದು ಪೀಠ ಸ್ಥಾಪಿಸಿವುದು ಊಹಿಸಲೂ ಆಗದ ವಿಷಯ. ಕಿರಿಯ ವಯಸ್ಸಿನ ಅರ್ಚಕನ ಪ್ರಕಾರ ಬೆಳಗಿನ ಸಮಯದಲ್ಲಿ ಕಾಡು ಕೋಣಗಳ ಹಿಂಡು ಸಿಗುವ ಅವಕಾಶಗಳಿವೆ. ಬಹುಶಃ ಕಚ್ಛಾ ರಸ್ತೆಯಿರುವುದರಿಂದಲೋ ಏನೋ ಅತಿ ಹೆಚ್ಚಿನ ಚಾರಣಿಗರನ್ನು ಆಕರ್ಷಿಸುವ ಈ ಪರ್ವತ ಈಗಾಗಲೆ ತನ್ನ ಪ್ರಾಕೃತಿಕ ಸೊಬಗನ್ನು ಕಳೆದುಕೊಳ್ಳುವತ್ತ ಸಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ನಡೆಸಬೇಕೆಂದಿದ್ದ ಗಣಿಗಾರಿಕೆಯನ್ನು ಇಲ್ಲಿನ ಜನತೆ ಯಶಸ್ವಿಯಾಗಿ ತಡೆಹಿಡಿದಿರುವುದು ಸಮಾಧಾನಕರ ಸಂಗತಿ. ಸುತ್ತಲೂ ಇರುವ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದೆವು. ಆಗಾಗ ಬದಲಾಗುವ ವಾತಾವರಣ ಮನಸ್ಸಿಗೆ ಮುದ ತುಂಬುತ್ತದೆ. ನಾವಿದ್ದಷ್ಟು ಸಮಯ ಸೂರ್ಯ ದರ್ಶನವಾಗಲೇ ಇಲ್ಲ. ಮೋಡಗಳು ಅವಕಾಶ ಕೊಟ್ಟಾಗ ಚಿತ್ರಗಳನ್ನು ತೆಗೆದು ಕೊಳ್ಳುತ್ತಾ ಅಲ್ಲೆ ಇರುವ ಪುಟ್ಟ ಅಂಗಡಿಯೊಂದರಲ್ಲಿ ನಿಂಬೆ ಪಾನಕ ಕುಡಿದು ಹಿಂತಿರುಗಲು ಆರಂಭ. ದಾರಿಯುದ್ದಕ್ಕು ಬಿಟ್ಟಿದ ಪಾದರಕ್ಷೆಗಳನ್ನು ಹುಡುಕಿ ಕಾಲಿಗೇರಿಸಿಕೊಂಡು ಕೆಳಗೆ ಬರುವಾಗ ಸಮಯ ೧.೫೦. ಚಾಲಕನಿಗೆ ಕಾಯಲು ಹೇಳಿ ಮತ್ತೆ ನಿಧಾನವಾಗಿ ಇಳಿದು ಬಂದ ಶ್ರಿಧರನೊಡಗೂಡಿ ಭಟ್ಟರ ಮನೆಯ ಊಟಕ್ಕೆ ತೆರಳಿದೆವು. ಬಾಯಿ ಚಪ್ಪರಿಸುವ ಉಪ್ಪಿನಕಾಯಿ, ಹಲಸಿನ ಹಪ್ಪಳ ಸೊಪ್ಪಿನಹುಳಿ ಮತ್ತು ತಿಳಿಸಾರಿನ ಭಟ್ಟರ ಮನೆಯ ಊಟ ವಾಹ್! ಲೊಟ್ಟೆ ಹೊಡೆಯುತ್ತ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದ್ದಾಯ್ತು. ಇಷ್ಟು ರುಚಿಯಿರುವ ಅಕ್ಕಿ(ಅನ್ನ) ನಮ್ಮ ಬೆಂಗಳೂರಿನಲ್ಲಿ ಯಾಕೆ ಸಿಗುವುದಿಲ್ಲ? ನೀವು ಏನೇ ಹೇಳಿ "ಬಡವರ ಮನೆಯ ಊಟ ಚೆನ್ನ ಸಿರಿವಂತರ ಮನೆಯ ನೋಟ ಚೆನ್ನ" ಅನ್ನುವ ಗಾದೆಯನ್ನು ನಾನು ಈ ರೀತಿ ಬದಲಿಸಿದ್ದೇನೆ. "ಹವ್ಯಕರ ಮನೆ ಊಟ ಚೆನ್ನ. ಮಲೆನಾಡಿನ ನೋಟ ಚೆನ್ನ". ನೋಟ ಅನ್ನುವುದನ್ನು ನೀವು ನೋಟ, ಕಾಡು, ಪರಿಸರ, ಅಲ್ಲಿನ ಹಸಿರು, ಮುಗ್ಧ ಜನ, ಅವರ ಔದಾರ್ಯ ಏನೆಂದು ಓದಿಕೊಂಡರೂ ನಡೆಯುತ್ತದೆ. ಅವರ ಔದಾರ್ಯದ ಇನ್ನು ಒಂದು ಉದಾಹರಣೆ ಮುಂದೆ ನಿಮಗೆ ಪರಿಚಯಿಸುತ್ತೇನೆ.
೩ ಗಂಟೆಗೆ ಅಲ್ಲಿಂದ ಹೊರಟ ನಮ್ಮ ವಾಹನ ಅಲ್ಲಲ್ಲಿ ಛಾಯಾಚಿತ್ರಗಳಿಗಾಗಿ ನಿಲ್ಲುತ್ತ ಸಾಗಿತ್ತು. ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತಕ್ಕೆ ಹೆಸರಾದ ಮಲೆಯಾಳಿಗಳ ಒಗ್ಗಟ್ಟಿಗೆ ನಿದರ್ಶನವಾಗಿ ನಡೆದ ಈ ಘಟನೆ ಸಾಕ್ಷಿಯಾಯಿತು. ನಮ್ಮ ಮುಂದೆ ಹೋಗುತ್ತಿದ್ದ ಜೀಪ್ ಒಂದು ಕೆಟ್ಟು ನಿಂತಿತು. ಹಿಂದೆ ಬರುತ್ತಿದ್ದ ಎಲ್ಲ ಜೀಪುಗಳು ಅವನ ಸಹಾಯಕ್ಕೆ ನಿಂತವು. ಅಷ್ಟರಲ್ಲಾಗಲೆ ಒಬ್ಬ ಚಾಲಕ ಕೊಲ್ಲೂರಿಗೆ ಸುದ್ದಿ ಮುಟ್ಟಿಸಿ ಬೇರೆ ವಾಹನಕ್ಕೆ ವ್ಯವಸ್ಥೆ ಮಾಡಿದ್ದ. ನಾನು ನಮ್ಮ ಚಾಲಕನನ್ನು ಗೋಳು ಹುಯ್ದುಕೊಳ್ಳಲಾರಂಭಿಸಿದೆ. ನಾವು ತಡ ಮಾಡಿದರೆ waiting charge ಕೇಳುವ ನೀವು ಈಗ ನಮ್ಮದಲ್ಲದ ತಪ್ಪಿಗೆ ನಮ್ಮನ್ನೇಕೆ ಕಾಯಿಸುತ್ತಿದ್ದೀರಿ ಮತ್ತು ನಮಗೆ ತಡವಾದರೆ ನಮಗೆ ಹೇಳಿರುವ ಹಾಗೆ ನಿನಗೂ ಸಹ ಗಂಟೆಗೆ ೧೦೦ ರೂ ಕಡಿತಗೊಳಿಸುತ್ತೇನೆ ಎಂದು. ಅದ್ಯಾವುದು ಅವನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕೊನೆಗೆ ಆ ಜೀಪ್ ದುರಸ್ಥಿಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ ನಮ್ಮ ಚಾಲಕ ತನ್ನ ವಾಹನ ಪ್ರಾರಂಭಿಸಿದ. ಇಷ್ಟರಲ್ಲಾಗಲೇ ಸುತ್ತಲಿದ್ದ ಹಸಿರುರಾಶಿಯನ್ನು ನಮ್ಮ ಬೆಳಕಿನ ಬೋನಿನಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿ ಬಂದೆವು. ಢೇರೆಗೆ ಹಿಂತಿರುಗಿ ಮಹಾಬಲ ಕೊಟ್ಟ ಚಹಾ ಕುಡಿದು ಸೌಪರ್ಣಿಕ ಹೊಳೆಗೆ ಇಳಿದಾಗ ಸಂಜೆ ೬ ಗಂಟೆ. ಮನದಣಿಯೆ ಜಲಕ್ರೀಡೆ ಮೈಮನಸ್ಸಿನ ಆಯಾಸವನ್ನೆಲ್ಲ ಪರಿಹರಿಸಿತು. ಮಕ್ಕಳಂತು ನೀರಿನಿಂದ ಹೊರಗೆ ಬರಲು ಸಿದ್ದರಿರಲಿಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ಹೊರತಂದೆವು. ಕೊಲ್ಲೂರಿನಿಂದ ತಂದಿದ್ದ ಹಾಲು ಸಕ್ಕರೆ ಚಹಾಪುಡಿಯಿಂದ ನಾವೆ ಈಗ ಚಹಾ ಮಾಡಲು ಕುಳಿತೆವು. ಶ್ರೀಮತಿ ಶಂಕರ್ ನೆರವಿನಿಂದ ನಮ್ಮ ಚಹಾ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ೮ ಗಂಟೆಗೆ ಮಹಾಬಲ, ಊಟಕ್ಕೆಂದೆ ನಿರ್ಮಿಸಿರುವ ಒಂದು ಹೆಂಚಿನ ಷಟ್ಕೋನದ ಚಪ್ಪರದಲ್ಲಿ ನಿಮ್ಮ ಊಟ ಸಿದ್ದವಿದೆ ಎಂದು ತಿಳಿಸಿದರು. ಶ್ಯಾವಿಗೆಪಾಯಸ, ಚಪಾತಿ, ಪಲ್ಯ ಗಟ್ಟಿ ಮೊಸರಿನಿಂದ ಕೂಡಿದ ಪುಷ್ಕಳ ಭೋಜನ ೧೦ ಗಂಟೆಗೆ ಮುಗಿಯಿತು.
೧೫ರಂದು ಬೆಳಿಗ್ಗೆ ೭ ಗಂಟೆಗೆ ಎದ್ದು ಮಗನೊಂದಿಗೆ ನಿನ್ನೆ ಸಂಜೆಗಿಂತ ವಿಭಿನ್ನವಾದ ಮತ್ತು ಸುಂದರವಾದ ಜಾಗ ಹುಡುಕಿ ೧ ಗಂಟೆ ಸ್ನಾನ ಮಾಡಿ ಶಿಬಿರಕ್ಕೆ ಹಿಂತಿರುಗಿ ಮಹಾಬಲ ಕೊಟ್ಟ ಉಪಹಾರ ಮುಗಿಸಿ ಅವರಿಂದ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೊಂದು ನಮಸ್ಕಾರ ತಿಳಿಸಿ ಅಲ್ಲಿಂದ ಬೀಳ್ಕೊಂಡೆವು. ಕೊಲ್ಲೂರಿಗೆ ಬಂದು ದೇವಿಯ ದರ್ಶನ ಮಾಡಿ ರಾಜೇಶ್ ನಾಯಕ್ ರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ನಮ್ಮ ಮುಂದಿನ ತಾಣವಾದ ಭೀಮೇಶ್ವರಕ್ಕೆ ತಲುಪುವ ಬಗ್ಗೆ ಮಾಹಿತಿ ಪಡೆದುಕೊಂಡೆ. ಈಗ ನಾವು ಸುಳ್ಳಳ್ಳಿ ತಲುಪಿ ಅಲ್ಲಿಂದ ಕೋಗಾರು ದಾರಿಯಲ್ಲಿ ಸಾಗಿ ಕೋಗಾರಿಗಿಂತ ಮೊದಲೆ ಸಿಗುವ ಕೂಡು ರಸ್ತೆಯಲ್ಲಿ ಎಡಕ್ಕೆ ತಿರುಗಿ ೩ ಕಿ.ಮೀ ನಂತರ ಸಿಗುತ್ತದೆ ಭೀಮೇಶ್ವರ.. ಅದಕ್ಕೂ ಮುಂಚೆ ನಾವು ದಬ್ಬೆ ಜಲಪಾತಕ್ಕೆ ಭೇಟಿ ಕೊಡಬೇಕಾದರಿಂದ ನಮ್ಮ ಪ್ರಯಾಣ ಕೋಗಾರಿನ ಕಡೆಗೆ. ಅದಕ್ಕಾಗಿ ಕೊಲ್ಲೂರು-ನಿಟ್ಟೂರು ದಾರಿಯಲ್ಲಿ ಸಿಗುವ ಅರಣ್ಯ ಇಲಾಖೆಯ ತಪಾಸಣೆ ಠಾಣೆಯ ತಕ್ಷಣ ಎಡಭಾಗಕ್ಕೆ ಸಿಗುವ ದಾರಿಯಲ್ಲಿ ನಮ್ಮ ವಾಹನಗಳು ಸ್ವಲ್ಪ ವೇಗವಾಗಿ ಮುಂದೋಡತೊಡಗಿದವು. ಬಿರು ಬೇಸಿಗೆಯಿದ್ದರೂ ಅಲ್ಲಲ್ಲಿ ಹರಿಯುವ ಸಣ್ಣ ಸಣ್ಣ ಝರಿಗಳು, ಹಚ್ಚ ಹಸಿರಲ್ಲದಿದ್ದರೂ ಕಣ್ಣಿಗೆ ತಂಪನ್ನೆರೆಯುವ ಹಸಿರು, ಮತ್ತು ಸ್ವಚ್ಛ ಗಾಳಿಯನ್ನು ಆಸ್ವಾದಿಸುತ್ತಿದ್ದವನಿಗೆ ಕಾಣಸಿಕ್ಕಿದ್ದು ಸಣ್ಣ ಹೊಳೆ ಮತ್ತು ಅದು ನಿರ್ಮಿಸಿರುವ ನೈಸರ್ಗಿಕ ಹೊಂಡ ತಕ್ಷಣವೇ ಕಾರಿನಿಂದ ಇಳಿದವರೆ ಅಲ್ಲೆ ಇದ್ದ ಹಳ್ಳಿಗರಿಂದ ಯಾವುದೆ ಅಪಾಯವಿಲ್ಲವೆಂದು ಖಾತರಿಪಡಿಸಿಕೊಂಡು ಎಲ್ಲರೂ ಎಮ್ಮೆಗಳಂತೆ ನೀರಿಗೆ ಬಿದ್ದಿದ್ದೆ. ಮೇಲೆ ಸುಡುವ ಬಿಸಿಲಿದ್ದರೂ ತಣ್ಣನೆ ಮಲೆನಾಡಿನ ಹೊಳೆ. ಓಹ್! ವರ್ಣಿಸಲದಳ ಕ್ರಮೇಣ ಆಳವಾಗುತ್ತಾ ಹೋಗುವ ಈ ಸ್ಥಳ ಒಂದು ಈಜು ಕೊಳವೇ ಸೈ. ಸೇತುವೆಗೆಂದು ನಿರ್ಮಿಸಿರುವ ಕೊಳವೆಗಳಿಂದ ನೀರಿಗೆ ಜಿಗಿದು ಈಜಲು ಒಳ್ಳೆಯ ಜಾಗ. ಮಕ್ಕಳಂತು ಸಮಯದ ಪರಿವೆಇಲ್ಲದೆ ನೀರಾಟವಾಡಿದರು. ಹೊಟ್ಟೆ ತಾಳ ಹಾಕಲು ಪ್ರಾರಂಭಿಸಿದಾಗಲೇ ಅಲ್ಲಿಂದ ಎದ್ದದ್ದು. ಸುಳ್ಳಳ್ಳಿ ತಲುಪಿ ಅತ್ಯಂತ ಚಿಕ್ಕ ಹೋಟೆಲ್ ಒಂದರಲ್ಲಿ ಊಟಮಾಡಿ ಭೀಮೇಶ್ವರದ ದಾರಿಯಲ್ಲಿ ಸಾಗಿದ್ದೆವು. ಈಗ ನಮ್ಮ ಮುಂದೆ ಇದ್ದ ಪ್ರಶ್ನೆ. ನಾವು ತಂಗುವ ಜಾಗದ ಬಗ್ಗೆ. ಮತ್ತು ಅಲ್ಲಿ ಅಂದಿನ ಊಟದ ವ್ಯವಸ್ಥೆಯ ಬಗ್ಗೆ. ಇದಕ್ಕಾಗಿ ಯಾವುದೇ ಸಿದ್ದತೆಯಿಲ್ಲದೆ ನಾವು ಬಂದಿದ್ದೆವು. ಆದರೂ ರಾಜೇಶ್ ನಾಯಕ್ ಅಲ್ಲೆ ವಾಸಿಸುವ ಭೀಮೆಶ್ವರ ದೇವಸ್ಥಾನದ ಅರ್ಚಕರೆ ಅಡುಗೆ ಮಾಡಿ ಕೊಡುತ್ತಾರೆಂದು ಮಾಹಿತಿ ಇತ್ತಿದ್ದರು. ಸರಿ ನಾವೀಗ ಬಿಳಿಗಾರಿಗೆ ಬಂದು ನಿಂತಿದ್ದೆವು. ದಬ್ಬೆ ಜಲಪಾತ ಮತ್ತು ಕನೂರು ಕೋಟೆಗೆ ಇದೇ ಹೆಬ್ಬಾಗಿಲು. ಅಂದ್ರೆ ಇಲ್ಲಿಂದಲೆ ಹೋಗಬೇಕು. ಸರಿ ಇಲ್ಲಿ ದಬ್ಬೆ ಜಲಪಾತಕೆ ಹೋಗಲು ಅಲ್ಲಿ ಮಾಹಿತಿ ಪಡೆಯುತ್ತಿದ್ದಾಗ ನಮಗೆ ತಿಳಿದದ್ದು ನಾವು ಬಂದ ಸಮಯ ಮೀರಿಹೋಗಿದೆ ಎನ್ನುವುದು ಏಕೆಂದರೆ ಈಗಾಗಲೆ ಸಮಯ ೩ ಗಂಟೆ ತೋರಿಸುತ್ತಿತ್ತು. ಸಮಯ ಪರಿಪಾಲನೆ ಮಾಡದಿದ್ದುರ ಪರಿಣಾಮ. ಅಲ್ಲೆ ಇದ್ದ ಅಂಗಡಿಯ ಚಂದ್ರಕಾಂತ್ ಈಗ ಜಲಪಾತಕ್ಕೆ ನೀವು ಹೋಗುವುದು ಅಸಾಧ್ಯ ಬೆಳಿಗ್ಗೆ ಹೋಗುವುದು ಸೂಕ್ತ ಎನ್ನುವ ಸಲಹೆ ನೀಡಿದರು. ಸರಿ ಉಳಿದುಕೊಳ್ಳಲು ಜಾಗ ಭೀಮೆಶ್ವರ ಎನ್ನುವುದು ನನ್ನ ಅಭಿಪ್ರಾಯ. ಯಾವುದೇ ವಸತಿ ಗೃಹ ಇಲ್ಲದ ಈ ಊರಿನಲ್ಲಿ ಹೇಗೆ ಉಳಿಯುವುದು ಎನ್ನುವ ನನ್ನ ಮನಸ್ಸನ್ನು ಓದಿದವರಂತೆ ಕಂಡ ಅಲ್ಲೆ ಇದ್ದ ಶಾಂತರಾಂ ಹೆಗ್ಗಡೆಯವರು ಭೀಮೇಶ್ವರದ ಭಟ್ಟರಿಗೆ ದೂರವಾಣಿ ಮುಖೇನ ಸಂಪರ್ಕಿಸಲು ಪ್ರಯತ್ನ ಪಟ್ಟರಾದರೂ ಆ ಬದಿಯಿಂದ ಯಾವುದೆ ಉತ್ತರ ಬರದಿದ್ದಾಗ ಬಹುಶಃ ದೇವಸ್ಥಾನಕ್ಕೆ ಪೂಜೆಗೆ ಹೋಗಿರುತ್ತಾರೆ ಅಥವ ಅವರ ಸ್ವಂತ ಊರಿಗೂ ಹೋಗಿರಬಹುದಾದ ಅವಕಾಶವಿರುವುದರಿಂದ ಅಲ್ಲಿ ಹೋಗಿ ತಂಗುವ ಬದಲು ನಮ್ಮ ಮನೆಗೆ ಬಂದು ಉಳಿದುಕೊಳ್ಳಿ ಎಂದು ತುಂಬು ಮನಸ್ಸಿನಿಂದ ಆಹ್ವಾನಿಸಿದರು. ಇದನ್ನೆ ನಾನು ಹವ್ಯಕರ ನಿರ್ಮಲ ಮನಸ್ಸಿನ ಔದಾರ್ಯ ತುಂಬಿದ ಆತಿಥ್ಯ ಮನೋಭಾವವೆಂದು ಬಣ್ಣಿಸಿದ್ದು ಅಪರಿಚಿತರನ್ನು ಸಹ ಮನೆಗೆ ಬಂದು ತಂಗಲು ನಾವು (ಬೆಂಗಳೂರಿಗರು) ಯಾರು ತಾನೆ ಆಹ್ವಾನಿಸುತ್ತೇವೆ ನೀವೆ ಹೇಳಿ? ಕಾಡಿನ ಮಧ್ಯೆಯಿರುವ ಭೀಮೇಶ್ವರದಲ್ಲಿ ರಾತ್ರಿ ತಂಗುವ ನನ್ನ ಯೋಜನೆಯಿಂದ ಭಯಗೊಂಡಿದ್ದ ಶ್ರೀಧರ ತಕ್ಷಣವೇ ದೂರದಿಂದ ನಮ್ಮ ಮಾತುಕತೆಯನ್ನು ಗಮನಿಸಿ ಅಲ್ಲಿಂದಲೆ ಒಪ್ಪಿಕೊಳ್ಳುವಂತೆ ನನಗೆ ಕೈಯಾಡಿಸುವ ಮೂಲಕ ಸೂಚನೆ ಕೊಡಲು ಆರಂಭಿಸಿದ. ಆದರೂ ನಯವಾಗಿ ಅವರ ಆಹ್ವಾನವನ್ನು ನಿರಾಕರಿಸಿ ಚಂದ್ರಕಾಂತ್ ಮನೆಯಲ್ಲಿ ರಾತ್ರಿ ಆಡುಗೆಗೆ ಬೇಕಾದ ಕೆಲವು ಪಾತ್ರೆಗಳನ್ನು ಮತ್ತ್ತು ಅವರ ಅಂಗಡಿಯಲ್ಲು ಅಡುಗೆ ಬೇಕಾದ ಪದಾರ್ಥಗಳನ್ನು ಖರೀದಿಸಿ. ಬೆಳಿಗ್ಗೆ ಹಿಂತಿರುಗಿದಾಗ ಅಲ್ಲಿನ ವಿಶೇಷ ಅಕ್ಕಿರೊಟ್ಟಿ ಚಟ್ನಿಯನ್ನು ನಮಗಾಗಿ ಸಿದ್ದ ಪಡಿಸಿರುವುದಾಗಿ ಚಂದ್ರಕಾಂತ್ ತಿಳಿಸಿದರು. ಅಲ್ಲಿಂದ ಭೀಮೇಶ್ವರದ ಕಡೆಗೆ ನಮ್ಮ ವಾಹನಗಳನ್ನು ತಿರುಗಿಸಿದೆವು.
ಭೀಮೇಶ್ವರದಲ್ಲಿ ರಾಮನವಮಿ
ಯಾವುದೇ ತೊಂದರೆಯಿಲ್ಲದೆ ಮುಖ್ಯರಸ್ತೆಯಲ್ಲಿನ ಭೀಮೇಶ್ವರ ಫಲಕವಿರುವ ಸ್ಥಳ ಸಿಕ್ಕಿತು. ಅಲ್ಲಿಂದ ೩ ಕಿ,ಮೀ ದೂರ ಕಚ್ಛಾ ರಸ್ತೆಯಲ್ಲಿ ಕ್ರಮಿಸ ಬೇಕಿತ್ತು. ೧ ಕಿ.ಮೀ ನಷ್ಟು ನಿರಾಯಾಸವಾಗಿ ಓಡಿದ ನಮ್ಮ ವಾಹನಗಳಿಗೆ ಕಡಿದಾದ ಮತ್ತು ಕಲ್ಲುಗಳಿಂದ ತುಂಬಿದ ರಸ್ತೆ ಎದುರಾಯಿತು. ವಾಹನ ಬರಿ ಇಳಿಜಾರಾದ ರಸ್ತೆಯಲ್ಲೆನೊ ಇಳಿಯುತ್ತಿತ್ತು ಇದೇ ಇಳಿಜಾರುಗಳು ಹಿಂತಿರುಗುವಾಗ ನಮ್ಮ ವಾಹನಗಳು ಹತ್ತುವ ಬಗ್ಗೆ ನನ್ನ ಅನುಮಾನ ಕಾಡತೊಡಗಿತು. ಸರಿ ದೇವರ ಮೇಲೆ ಭಾರ ಹಾಕಿ ಮುಂದೆ ಹೋಗಿದ್ದಾಯ್ತು. ೨ ಕಡೆ ಸಣ್ಣಗೆ ಹರಿಯುತ್ತಿದ್ದ ಹಳ್ಳದಲ್ಲಿ ಅತಿ ನಿಧಾನವಾಗಿ ವಾಹನಗಳನ್ನು ನಡೆಸಿಕೊಂಡು ದಟ್ಟ ಕಾಡಿನ ಮಧ್ಯೆ ಅಲ್ಲಲ್ಲಿ ವಾಹನದಿಂದಿಳಿದು ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ ನಮ್ಮ ಗುರಿಯಾದ ಭಟ್ಟರ ಮನೆ ತಲುಪಿದಾಗ ಸಮಯ ಸಂಜೆ ೫.೩೦. ತಕ್ಷಣವೆ ರಾತ್ರಿಗೆ ಬೇಕಾಗುವ ಸೌದೆಯನ್ನು ಎಲ್ಲರೂ ಕೂಡಿ ಒಂದು ಕಡೆ ಪೇರಿಸಿ, ಭಟ್ಟರ ಮನೆಯ ಒಲೆಯಲ್ಲಿ ಆಡುಗೆ ಮಾಡಲು ಪ್ರಾರಂಭ. ಅಡುಗೆ ಒಲೆ ಎಂದರೇನೆಂಬುದೆ ತಿಳಿಯದ ಶ್ರೀಮತಿ ಶ್ರಿಧರ ಅವರ ಪರದಾಟ ನನಗೆ ನಗು ತರಿಸುತ್ತಿತ್ತು. ಕಟ್ಟಿಗೆ ಒಗ್ಗೂಡಿಸಲು ಸಹಾಯ ಮಾಡದೆ ತನ್ನ ಮಗನೊಡನೆ ಆನಂದವಾಗಿ ಕಾಲ ಕಳೆಯುತ್ತಿದ್ದ ಶ್ರೀಧರನ್ನು ಎಳೆದು ತಂದು ಇನ್ನಷ್ಟು ಕಟ್ಟಿಗೆ ತರಲು ಬಲವಂತ ಮಾಡಿ ಅವನಿಂದ ಸ್ವಲ್ಪ ಕೆಲಸ ತೆಗೆಯುವಲ್ಲಿ ನನ್ನ ಕೌಶಲ್ಯವನ್ನೆಲ್ಲ ಖರ್ಚು ಮಾಡಬೇಕಾಯಿತು. ಕತ್ತಲೆ ಆವರಿಸುತ್ತಿದ್ದಂತೆ ಆಡುಗೆ ಕೆಲಸದಲ್ಲಿ ಹೆಂಗಸರೆಲ್ಲ ನಿರತರಾದರೆ ನಮ್ಮ ಶ್ರೀಧರನಿಗೆ ಕಾಡು ಪ್ರಾಣಿಗಳ ಮತ್ತು ಸಮಾಜ ಘಾತುಕಶಕ್ತಿಗಳ ಭಯ ಆವರಿಸಲಾರಂಭಿಸಿತು. ಬೀಗ ಹಾಕಿದ್ದ ಭಟ್ಟರ ಕೊಠಡಿಯ ಬೀಗ ತೆಗೆಯುವಂತೆ ನನಗೆ ವರಾತ ಹಚ್ಚಲು ಆರಂಭಿಸಿದ. ಭಟ್ಟರು ಬರುವುದಕ್ಕೆ ಇನ್ನು ಸಮಯವಿದ್ದುದರಿಂದ ಅವನಿಗೆ ಸ್ವಲ್ಪ ಸಮಯ ಕಾಯಲು ಹೇಳಿ ಮನೆಯ ಅಂಗಳದ ಹೊರಗೆ ಬೆಂಕಿ ಹಚ್ಚಲು ಅಣಿಮಾಡತೊಡಗಿದೆ. ಇಷ್ಟರಲ್ಲಾಗಲೆ ಶ್ರೀಧರ ತನ್ನ ಭಯವೆಂಬ ಬೆಂಕಿಯನ್ನು ಶಂಕರನಿಗೂ ಸಹ ವರ್ಗಾಯಿಸಿದ್ದ. ವಿದ್ಯುತ್ ತಂತಿಗಳು ಇಲ್ಲಿಯವರೆಗೂ ಬಂದಿವೆಯಾದರೂ ಅದರಲ್ಲಿ ವಿದ್ಯುತ್ ಹರಿಯುತ್ತಿರುವ ಯಾವ ಲಕ್ಷಣಗಳು ಕಾಣಿಸಲಿಲ್ಲ. ಬೆಳಕಿಗಾಗಿ ನಾವು ತಂದಿದ್ದ ಅಡುಗೆ ಎಣ್ಣೆಯನ್ನೆ ಉರುವಲಾಗಿಸಿ ದೀಪ ಹಚ್ಚಿ ನಮ್ಮಂತವರಿಗಾಗಿಯೆ ಭಟ್ಟರು ಬಿಟ್ಟಿದ್ದ ಸೀಮೆಎಣ್ಣೆಯ ಬುಡ್ಡಿಯನ್ನು ಬಳಸಿಕೊಂಡು ಕತ್ತಲನ್ನು ಓಡಿಸುವ ನಮ್ಮ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಯಿತು. ಗವ್ವೆನ್ನುವ ಕಾರ್ಗತ್ತಲು, ದೂರದಲ್ಲಿ ನಿಂತ ನಮ್ಮ ಬಿಳಿ ಬಣ್ಣದ ವಾಹನಗಳೂ ಸಹ ಕಣ್ಣಿಗೆ ಬೀಳದಷ್ಟು ಕತ್ತಲು ಒಮ್ಮೆಲೆ ಆವರಿಸಿತು. ಬೆಳದಿಂಗಳಿನ ದಿನಗಳಾದರೂ ನಮ್ಮ ದುರಾದೃಷ್ಟಕ್ಕೆ ಮೋಡಗಳು ಚಂದ್ರನನ್ನು ಮರೆ ಮಾಡಿದ್ದವು. ಬೆಟ್ಟದ ಮೇಲಿನಿಂದ ಕೊಳವೆಯ ನೀರು ಸದಾಕಾಲ ಬಚ್ಚಲಿನ ನಂತಹ ಜಾಗಕ್ಕೆ ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ ಕಟ್ಟಿಗೆಯ ಒಲೆಯಲ್ಲಿ ಭಟ್ಟರು ಇರಿಸಿದ್ದ ಪಾತ್ರೆಯನ್ನು ಉಪಯೋಗಿಸಿ ಚಿತ್ರಾನ್ನ ಮತ್ತು ಹುರುಳಿಕಾಯಿ ಪಲ್ಯ ಮಾಡುವ ಯೋಜನೆ ಸಿದ್ದವಾಯಿತು. ಇದ್ದುದರಲ್ಲೆ ಸಣ್ಣದಾದ ಕಟ್ಟಿಗೆಗಳಿಂದ ಒಲೆಹಚ್ಚಿ ಅನ್ನ ಮಾಡಲು ಸಿದ್ದ. ಎಷ್ಟು ದಿನವಾಗಿತ್ತೋ? ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಊಟಮಾಡಿ! ಆ ಭಾಗ್ಯ ಈ ಮುಖೇನ ಒದಗಿ ಬಂದಿತ್ತು. ನಿನ್ನೆ ರಾಮನವಮಿಯಾದ್ದರಿಂದ ಅಡುಗೆಗಾಗಿ ಸ್ವಲ್ಪ ಹೆಚ್ಚೆನಿಸುವಷ್ಟು ತಂದಿದ್ದ ನಿಂಬೆಹಣ್ಣಿನ ಪಾನಕ ಮತ್ತು ಸೌತೆಕಾಯಿಯ ಕೋಸಂಬರಿಗೆ ಚಿತ್ರ ಮತ್ತು ಸವಿತ ಸಿದ್ದತೆ ನಡೆಸುತ್ತಿದ್ದರು. ಇಷ್ಟರಲ್ಲಾಗಲೆ ಭಯದಿಂದ ಮುದುಡಿಹೋಗಿದ್ದ ಶ್ರೀಧರ ಮಲಗಲು ಸಾಧ್ಯವಿಲ್ಲವೆಂದು ನನ್ನೊಡನೆ ಚರ್ಚಿಸಲು ಪ್ರಾರಂಭಿಸಿದ. ಭಯ ಎನ್ನುವುದು ಸಾಂಕ್ರಾಮಿಕದಂತೆ ಹಬ್ಬುವ ಗುಣವಾದ್ದರಿಂದ ನನ್ನೊಳಗೂ ನುಸುಳಲು ಪ್ರಾರಂಭವಾದ ಭಯವನ್ನು ಹೋಗಲಾಡಿಸಲು ಸ್ವಲ್ಪ ದೂರ ನಡೆದು ಹೋಗಿ ಬಂದೆ. ಅವನೊಡನೆ ಹೆಚ್ಚು ಮಾತನಾಡದೆ ಅವನಿಗೆ ಧೈರ್ಯ ಹೇಳಿ ಅಂಗಳದ ಹೊರಗೆ ಉರಿಯುತ್ತಿದ್ದ ಬೆಂಕಿಗೆ ಕಟ್ಟಿಗೆ ಹಾಕುವ ನೆಪವೊಡ್ಡಿ ಅವನಿಂದ ತಪ್ಪಿಸಿಕೊಳ್ಳಲು ಆರಂಭಿಸಿದೆ. ಅದಕ್ಕೂ ಶ್ರೀಧರನಿಂದ ಅಡ್ಡಿ, ಕಟ್ಟಿಗೆ ಮುಗಿದು ಹೋಗುವ ಭಯ ಅವನಿಗೆ, ಇಲ್ಲ ಪುಣ್ಯಾತ್ಮ ೨ ದಿನಕ್ಕೆ ಆಗುವಷ್ಟು ಸೌದೆ ಇದೆ ಎಂದು ಹೇಳಿದರೂ ಅವನು ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ೮ ಗಂಟೆಯ ಸುಮಾರಿಗೆ ನಿಂಬೆಹಣ್ಣಿನ ಪಾನಕ ಕುಡಿದು ಸೌತೆಕಾಯಿಯ ಕೋಸಂಬರಿಯನ್ನು ಕತ್ತಲೆಯಲ್ಲಿ ಕುಳಿತು ರಾಮನವಮಿಯ ಪ್ರಯುಕ್ತ ನಿಧಾನವಾಗಿ ಮೆಲ್ಲತೊಡಗಿದೆವು.
೯ ಗಂಟೆ ಸಮಯಕ್ಕೆ ಸರಿಯಾಗಿ ಅಡುಗೆ ಸಿದ್ದವಾಯಿತು. ಕತ್ತಲೆಯಲ್ಲಿ ಮಾಡಿದ ಚಿತ್ರಾನ್ನ ಹುರುಳಿಕಾಯಿ ಪಲ್ಯ ಚಟ್ನಿಪುಡಿಯನ್ನು ಅಲ್ಲೆ ಇದ್ದ ಬಾಳೆ ಎಲೆಗಿಂತ ದೊಡ್ಡದಾದ ಕೆಸುವಿನ ದಂಟಿನ ಎಲೆಯ ಮೇಲಿನ ಊಟ ಮೃಷ್ಟಾನ್ನ ಭೋಜನ ಮೆದ್ದಂತಹ ಅನುಭವ. ಈಗ ಮಲಗುವ ಕಾರ್ಯಕ್ರಮಕ್ಕೆ ಅಣಿಯಾಗಬೇಕಿತ್ತು. ತನ್ನ ಭಯವನ್ನು ಹೆಚ್ಚಿಸಿಕೊಂಡಿದ್ದ ಶ್ರೀಧರನನ್ನು ಸಂತೈಸಲು ಭಟ್ಟರ ಕೊಠಡಿಯ ಬೀಗವನ್ನು ಕಟ್ಟಿಗೆಯಿಂದ ಮೀಟಿ ತೆಗೆದು ಹೆಂಗಸರು ಮಕ್ಕಳನ್ನೆಲ್ಲ ಕೊಠಡಿಯ ಒಳಗೆ ಮಲಗಿಕೊಳ್ಳಲು ವ್ಯವಸ್ಥೆ ಮಾಡಿದಾಗ ಶ್ರೀಧರನ ಮುಖ ಸ್ವಲ್ಪ ಶಾಂತವಾದದ್ದು. ಈ ಮಧ್ಯೆ ದ್ವಿಚಕ್ರ ವಾಹನದ ಸದ್ದೊಂದು ನಮ್ಮೆಲ್ಲರ ಗಮನ ಸೆಳೆಯಿತು. ತಕ್ಷಣವೇ ಶ್ರೀಧರ ಯುದ್ದಕ್ಕಾಗಿ ಅಲ್ಲೆ ಇದ್ದುದರಲ್ಲಿ ಗಟ್ಟಿಯಾದ ಕಟ್ಟಿಗೆಯೊಂದನ್ನು ಆಯ್ದು ಕೊಂಡ. (ಕೊನೆಗೆ ಅದನ್ನು ನಾವು ಮಲಗುವ ಜಾಗದಲ್ಲಿ ತಂದು ಇರಿಸಿಕೊಂಡ) ಮುಖ್ಯ ರಸ್ತೆ ಇಲ್ಲಿಂದ ಕೇವಲ ೩ ಕಿ.ಮೀ ಗಳಷ್ಟೆ ದೂರವಿರುವುದರಿಂದ ಅಲ್ಲಿ ಓಡಾಡುವ ವಾಹನಗಳ ಶಬ್ಧ ಕೇಳಿಸುವುದು ಸಹಜ. ಅಥವ ನನ್ನ ಮನಸ್ಸಿಗೆ ಬಂದದ್ದು ೩೨ ಕರೆಗಳು ಬಂದರೂ ಯಾರು ಸ್ವೀಕರಿಸದೆ ಇದ್ದುದರಿಂದ ಬಿಳಿಗಾರಿನ ಚಂದ್ರಕಾಂತ ನಮ್ಮನ್ನು ಸ್ಥಿತಿ ತಿಳಿಯಲು ಬರಬಹುದು ಎನ್ನುವುದು ನನ್ನ ಅನುಮಾನ ಆದರೆ ಮತ್ತೆ ಶ್ರೀಧರ ಇಲ್ಲ ಚಂದ್ರಕಾಂತ ಅಥವ ನಾವು ಬಂದ ವಿಷಯ ಗೊತ್ತಿರುವ ಯಾರಾದರೂ ನಮ್ಮನ್ನು ಆಕ್ರಮಿಸಲು ಜನ ಕರ್ಕೊಂಡು ಬರ್ತಾ ಇರ್ಬೇಕು ಎನ್ನುವ ವಾದ. ಕೊನೆಗೆ ಆ ಶಬ್ಧ ಕ್ರಮೇಣ ದೂರವಾಯಿತು. ನಮಗೂ ನಿರಾಳತೆ.
೧೧ ಗಂಟೆಯವರೆಗೂ ಹರಟೆ ಹೊಡೆದು ಮಲಗಲು ಅಣಿಯಾದರೆ ಶ್ರೀಧರ ತಾನು ಮಲಗುವುದಿಲ್ಲವೆಂದು ಘೋಷಿಸಿ ಬಿಟ್ಟ ಸರದಿಯಲ್ಲಿ ಇಬ್ಬರು ಕಾವಲು ಕಾಯೋಣ ಎನ್ನುವುದ ಅವನ ವಾದ. ಬೇಕಿಲ್ಲ ಶ್ರೀಧರ ಇಲ್ಲಿ ಯಾವುದೇ ಕಾಡು ಪ್ರಾಣಿಯಾಗಲಿ ಅಥವ ಮನುಷ್ಯರಾಗಲಿ ಬರುವುದಿಲ್ಲ ಎನ್ನುವ ಮಾತನ್ನು ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾನು, ಶ್ರೀಧರ ಮತ್ತು ಶಂಕರನನ್ನು ಬಿಟ್ಟು ಮಿಕ್ಕವರನ್ನೆಲ್ಲಾ ಮಲಗಿಸಿ ಹೊರಗೆ ಅಂಗಳದಲ್ಲಿ ನಾವು ಮಲಗಲು ಸಿದ್ದತೆ ಮಾಡಿಕೊಂಡರೂ ಶ್ರೀಧರ ಬಿಡಲೊಲ್ಲ. ಇಷ್ಟರಲ್ಲಾಗಲೆ ಎಲ್ಲರೂ ಮಲಗಿದ್ದ ಕೊಠಡಿಯ ಬಾಗಿಲಿಗೆ ಶ್ರೀಧರ ಉದ್ದವಾದ ಕಟ್ಟಿಗೆಗಳನ್ನು ಅಡ್ಡ ಇರಿಸಿ ಭದ್ರತೆಯನ್ನು ಧೃಡೀಕರಿಸಿದ್ದೇನೆಂದು ಭಾವಿಸಿದ್ದ. ಬರುವ ಕಾಡು ಪ್ರಾಣಿಗಳಿಗೆ ಇದ್ಯಾವ ಲೆಖ್ಖ ಎನ್ನುವುದು ಅವನಿಗೆ ಅರಿವೇ ಇರಲಿಲ್ಲ. ನನ್ನನ್ನು ಮಲಗಲು ಬಿಡದ ಇದೇ ಶ್ರೀಧರನೆನಾ ಯಾವಾಗಲೂ ತನ್ನ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದವನು ಎನ್ನುವಷ್ಟು ಬದಲಾಗಿದ್ದವನಿಂದ ಇಂದು ಒಂದೂ ಚಟಾಕಿಗಳು ಸಿಡಿಯಲಿಲ್ಲ. ನನಗೋ ನಿದ್ದೆ ಕೆಟ್ಟರೆ ಬೆಳಿಗ್ಗೆ ಹುಚ್ಚನಾಗುವುದು ಖಂಡಿತ ಆದರೂ ಈ ಶ್ರೀಧರ ನನ್ನನ್ನು ಬಿಡಲೊಲ್ಲ. ಇದ್ದ ಬದ್ದ ರಾಜಕೀಯ, ಕ್ರೀಡೆ, ನಮ್ಮ ಹಳೆಯ ಅನುಭವಗಳು, ನಮ್ಮ ಕಾರ್ಖಾನೆ, ನಮ್ಮ ಸಹೋದ್ಯೋಗಿಗಳು ಎಲ್ಲವನ್ನು ಚರ್ಚಿಸಿದರೂ ಸಮಯ ೧೨.೩೦. ಶಂಕರ ತಾನು ಮಲಗುವುದಾಗಿ ಹೇಳಿ ಹೋದ. ನಾನು ಶ್ರೀಧರ ಮಾತ್ರ ಉಳಿದೆವು. ಇನ್ನಷ್ಟು ಸಮಯ ಅದೆ ವಿಚಾರಗಳನ್ನು ಮಾತನಾಡಿದರೂ ಸಮಯ ಮುಂದೆ ಹೋಗುತ್ತಿರಲಿಲ್ಲ. ಬಲವಂತವಾಗಿ ನಿದ್ದೆಯನ್ನು ತಡೆದಿದ್ದರೂ ತೂಕಡಿಕೆ ನನಗರಿವಿಲ್ಲದಂತೆ ನನ್ನನು ಆವರಿಸಲು ಆರಂಭಿಸಿತು. ಕೊನೆಗೆ ೧.೩೦ ಕ್ಕೆ ಶ್ರೀಧರನಿಗೆ ನಿನೇನಾದ್ರು ಮಾಡಿಕೊ ಮಹರಾಯ ನಾನು ಮಲಗುತ್ತೇನೆ ಎಂದು ಹೇಳಿ ಬಂದು ಅಂಗಳದಲ್ಲಿ ಶಂಕರನ ಪಕ್ಕ ಮಲಗಿದೆ. ತಕ್ಷಣವೆ ನಿದ್ರೆ ಆವರಿಸಿತು. ಇದ್ದಕ್ಕಿದ್ದಂತೆ ಯಾರೋ ನನ್ನನ್ನು ತಿವಿದು ಎಚ್ಚರಿಸಲು ಪ್ರಯತ್ನಿಸುತ್ತಿರುವುದು ಅರಿವಾಯಿತು ಅದು ಶಂಕರನ ಕೆಲಸ. ಏನ್ ಮಹರಾಯ ನಿನ್ನ ಗೋಳು ಈಗ ಎಂದು ಬಿಡಲಾರದೆ ಕಣ್ಣು ಬಿಡಲು ಪ್ರಯತ್ನಿಸುತ್ತಿದ್ದರೆ ಅವನು ನನ್ನ ಕಿವಿಯ ಬಳಿ ಪ್ರಸನ್ನ ಯಾವುದೋ ಪ್ರಾಣಿ ಬಂದು ಬಕೆಟ್ಟಲ್ಲಿ ನೀರು ಕುಡಿಯುತ್ತಿದೆ ಎಂದು ಪಿಸುಗುಟ್ಟಿದ. ಶ್ರೀಧರ ಎದ್ದು ಕುಳಿತು ನಿಜವಾಗ್ಲು ಪ್ರಸನ್ನ ಎಂದು ಕೋರಸ್ ಹಾಡಿದ. ನನಗೆ ನಿದ್ದೆಯಿಲ್ಲದ್ದಕ್ಕೆ ಅಳಬೇಕೋ ಇವರುಗಳ ಫಜೀತಿ ನೋಡಿ ನಗಬೇಕೊ ತಿಳಿಯಲಿಲ್ಲ. ಇಲ್ಲಪ್ಪ ಯಾವುದೆ ಪ್ರಾಣಿ ಮನುಷ್ಯರಿರುವ ಕಡೆ ಬರಲ್ಲ ಕಣ್ರೋ ಅಂದ್ರು ಇಲ್ಲ ನೋಡೋಣ ಬಾ ಎನ್ನುವ ಅವರ ಒಂದೆ ಹಟಕ್ಕೆ ಮಣಿದು ಕಣ್ಣುಜ್ಜಿಕೊಂಡು ಎದ್ದುಕುಳಿತೆ. ನೋಡು ಪ್ರಸನ್ನ, ಹೊರಗೆ ಉರಿಯುತ್ತಿರುವ ಬೆಂಕಿ ಕಡಿಮೆಯಾದ ತಕ್ಷಣ ಇಲ್ಲಿ ನೀರು ಜೋರಾಗಿ ಪಾತ್ರೆಯಿಂದ ತುಂಬಿ ಹೊರಗೆ ಬೀಳುತ್ತಿದೆ. ಹಾಗಾಗಿ ಅದು ಕತ್ತಲಲ್ಲಿ ಯಾವುದೋ ಕಾಡು ಪ್ರಾಣಿ ನೀರು ಕುಡಿಯಲು ಬಂದಿದೆ ಎನ್ನುವುದು ಇವರ ವಾದ ಸರಣಿ. ಇವರು ಹೆದರುತ್ತಿದ್ದ ನೀರು ಬೀಳುತ್ತಿದ್ದ ಜಾಗಕ್ಕೆ ಬಂದು ಅಲ್ಲೆಲ್ಲ ಬೆಳಕು ಬಿಟ್ಟು ಇವರಿಗೆಲ್ಲ ಅಲ್ಲೇನು ಬಂದಿಲ್ಲ ಎನ್ನುವುದನ್ನು ಖಾತರಿ ಪಡಿಸಿ
ಅಂಗಳದಲ್ಲಿ ಉರಿಯುತ್ತಿದ್ದ ಬೆಂಕಿಗೆ ಇನ್ನಷ್ಟು ಉರುವಲು ತುರುಕಿ ಅದು ಹೆಚ್ಚಾಗಿ ಉರಿಯಲು ಆರಂಭಿಸಿದಾಗಲೂ ಅದೇ ನೀರು ಬೀಳುವ ಶಬ್ಧವಿದೆ ಎಂದು ಅವರಿಗೆ ಮನದಟ್ಟು ಮಾಡಿಸಿ ಹಿಂತಿರುಗಿ ಬಂದು ಮಲಗಿದೆ. ಬಾಗಿ ಬಂದಿದ್ದ ಕೊಳವೆಯಲ್ಲಿ ಸಂಗ್ರಹವಾಗುವಾವವರೆಗೂ ಸಣ್ಣಗೆ ಸುರಿಯುತ್ತಿದ್ದ ನೀರು ಕೊಳವೆ ಭರ್ತಿಯಾದ ಕೂಡಲೆ ಒಮ್ಮೆಲೆ ಸುರಿಯುತ್ತಿದ್ದದ್ದು ಇವರ ಗಾಭರಿಗೆ ಕಾರಣವಾಗಿತ್ತು. ಇದನ್ನು ನಾನು ಇಲ್ಲಿಗೆ ಬಂದಾಗಲೆ ಗಮನಿಸಿದ್ದುದ್ದರಿಂದ ಅವರ ಮಾತಿಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ಹಿಂತಿರುಗಿ ಬಂದು ಮಲಗಿದೆ. ಸ್ವಲ್ಪ ಸಮಯಕ್ಕೆ ಶಂಕರ ಮುಸುಕಿನ ಒಳಗಿನಿಂದಲೆ ನಗಲು ಪ್ರಾರಂಭಿಸಿದಾಗ ನನ್ನ ಕೋಪ ತಾಳ್ಮೆ ಮೀರಿತು. ಏನೆಂದು ವಿಚಾರಿಸಲು ಅವನು ನಗುತ್ತಾ ಅದೆ ನೀರು ಬೀಳುತ್ತಿದ್ದ ಜಾಗದ ಕಡೆ ಬೆರಳು ತೋರಿಸಿದ. ಎಷ್ಟೆಲ್ಲ ಇವರಿಗೆ ಹೇಳಿದರೂ ಶ್ರೀಧರ ಎಲ್ಲೆಲ್ಲಿ ಒಳಬರುವ ಅವಕಾಶಗಳಿದ್ದವೊ ಅವನ್ನೆಲ್ಲ ಉರುವಲಿಗಾಗಿ ತಂದಿದ್ದ ದೊದ್ದ ಕಡ್ಡಿಗಳಿಂದ ಅದನ್ನೆಲ್ಲ ಅಡ್ಡ ಹಾಕಿ ಮುಚ್ಚಲು ಪ್ರಯತ್ನಿಸುತ್ತಿದ್ದ. ನಗು ತಡೆಯಲಾರದೆ ಮುಸುಕಿನೊಳಗೆ ನಕ್ಕು ಮತ್ತೆ ಮಲಗಿದೆ. ಅರ್ಧ ಗಂಟೆಯಷ್ಟೆ ಕಣ್ಣು ಮುಚ್ಚಲು ಸಾಧ್ಯವಾಗಿದ್ದರಿಂದಲೋ ಏನೋ ನನಗೆ ಏಳಲು ಆಗುತ್ತಿರಲಿಲ್ಲ.ಎಲ್ಲೋ ದೂರದಲ್ಲಿ ಯಾವುದೋ ಮಗು ಅಳುತ್ತಿರುವಂತೆ ಭಾಸವಾಗ ತೊಡಗಿತು. ಬಹುಶಃ ಕನಸಿರಬೇಕು ಎಂದು ಮಗ್ಗಲು ಹೊರಳಲು ಪ್ರಯತ್ನಿಸಿದರೆ ಶ್ರೀಧರನ ಪತ್ನಿಯ ಧ್ವನಿ ಕೇಳಿಸಿತು. ಸರಿ ಇದು ಕನಸಲ್ಲ ಶ್ರೀಧರನ ಮಗ ಸುಮಂತ್ ಜ್ವರದಿಂದ ಅಳುತ್ತಿದ್ದ. ಸುಳ್ಳಳ್ಳಿಯ ಸಮೀಪ ಎಷ್ಟು ಬೇಡವೆಂದರೂ ಕೇಳದೆ ಅವನನ್ನು ನೀರಿನಲ್ಲಿ ಆಡಿಸಿದ್ದರ ಪರಿಣಾಮ ಜ್ವರ ಮೈಸುಡುತ್ತಿತ್ತು.ಮಾತ್ರೆಯೊಂದನ್ನು ಪುಡಿ ಮಾಡಿ ಸರಿರಾತ್ರಿಯಲ್ಲಿ ಸಕ್ಕರೆಯೊಂದಿಗೆ ಬೆರೆಸಿ ತಿನ್ನಿಸಿ, ಹರಸಾಹಸ ಮಾಡಿ ಎಚ್ಚರವಾಗೇ ಕುಳಿತಿದ್ದ ಶ್ರೀಧರನಿಗೊಂದು ನಮಸ್ಕಾರ ಹೇಳಿ ಇನ್ನು ಸಾಧ್ಯವೆ ಇಲ್ಲ ಎನ್ನುವಷ್ಟು ಬರುತ್ತಿದ್ದ ನಿದ್ರಾದೇವಿಯನ್ನು ಕಾಯಿಸದೆ ಮಲಗಿದಾಗ ಸಮಯ ೨.೩೦.
ದೂರದಲ್ಲೆಲ್ಲೊ ಹಕ್ಕಿಯೊಂದು ಇಂಪಾಗಿ ರಾಗವಾಗಿ ಹಾಡುವ ಧ್ವನಿ ನನ್ನನ್ನು ಎಚ್ಚರಿಸಿತು ಆಗ ಸಮಯ ೪.೩೦. ಶ್ರೀಧರ ಈಗಲೂ ಎಚ್ಚರವಾಗಿದ್ದ ಕುರುಹುಗಳು ಗೋಚರಿಸಿತು. ಸರಿ ಮತ್ತೊಮ್ಮೆ ಮಲಗಿದವನಿಗೆ ಎಚ್ಚರಿಸಿದ್ದು ಅದೆ ಹಕ್ಕಿಗಳ ಚಿಲಿಪಿಲಿ. ವಾಹ್ ಎಂತಹ ಅನುಭೂತಿ ಸ್ವಾಮಿ ದಟ್ಟ ಕಾಡಿನ ನಡುವಿನ ಬೆಳಗು. ಹಕ್ಕಿಗಳ ಚಿಲಿಪಿಲಿ. ಹಳ್ಳಿಯಲ್ಲಿ ಬೆಳೆದಂತ ನನ್ನಂತವನಿಗೆ ಸರ್ವೆ ಸಾಮಾನ್ಯವಾದರೂ, ಇಷ್ಟೊಂದು ಲಯ ತಾಳಬದ್ದ ಮತ್ತು ನಿರಂತರವಾಗಿರುತ್ತದೆ ಎನ್ನುವ ಅರಿವು ನನಗಿರಲಿಲ್ಲ. ಇದು ನಿಜಕ್ಕೂ ಹೊಸ ಅನುಭವ. ಈಗ ಶ್ರೀಧರ ಹೆಂಡತಿ ಮಗ ಮಲಗಿದ್ದ ಕೋಣೆಯೊಳಗೆ ಮೆಲ್ಲಗೆ ನುಸುಳಿ ನಿದ್ರೆಗೆ ಶರಣಾದ. ಸಮಯ ಬೆಳಗಿನ ೫.೩೦ ಇರಬೇಕು. ಮತ್ತೆ ೮ ಗಂಟೆಗೆ ಎಚ್ಚರಗೊಂಡ ಶ್ರೀಧರ ಬೆಳಗಿನ ಕಾರ್ಯಕ್ರಮಗಳೆಲ್ಲವನ್ನೂ ಮುಗಿಸಿ ಬೀಗ ಒಡೆದಿದ್ದಕ್ಕೆ ಭಟ್ಟರಿಗೊಂದು ತಪ್ಪೊಪ್ಪಿಗೆ ಪತ್ರ ಮತ್ತು ಅದಕ್ಕಾದ ನಷ್ಟ ಪರಿಹಾರವಾಗಿ ಸ್ವಲ್ಪ ಹಣವನ್ನು ಇಟ್ಟು ನಮ್ಮ ದೂರವಾಣಿ ಸಂಖೆಯನ್ನು ಬರೆದಿಟ್ಟು ಅಲ್ಲಿಂದ ಹೊರಟಾಗ ೯.೩೦. ಎರಡೂ ವಾಹನಗಳು ಎಲ್ಲಿಯು ತೊಂದರೆ ಕೊಡದೆ ಬೆಟ್ಟ ಹತ್ತಿ ಬಂದದ್ದು ಒಂದು ನೆಮ್ಮದಿಯ ಸಂಗತಿ . ೧೦ ಗಂಟೆಗೆ ಕೋಗಾರಿನ ಮುಖಾಂತರ ಬಿಳಿಗಾರು ತಲುಪಿದಾಗ ೧೦ ಗಂಟೆ. ನಮಗಾಗಿ ಕಾಯ್ದು ತಣ್ಣಗಾಗಿ ಹೋಗಿದ್ದ ಮಲೆನಾಡಿನ ಅಕ್ಕಿರೊಟ್ಟಿಯನ್ನು ತೆಂಗಿನಕಾಯಿ ಚಟ್ನಿ, ಬದನೆಕಾಯಿ ಚಟ್ನಿ ಮತ್ತು ಜೋನಿಬೆಲ್ಲದೊಂದಿಗೆ ಹೆಚ್ಚಿನಿಸುವಷ್ಟು ಎಲ್ಲರೂ ಹೊಟ್ಟೆತುಂಬಿಸಿಕೊಂಡರು. ಮಕ್ಕಳು ಮತ್ತು ಹೆಂಗಸರಿಂದ ದಬ್ಬೆ ಜಲಪಾತಕ್ಕೆ ಇಳಿಯಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯ ಮಾತು ಅಲ್ಲಿರುವ ಎಲ್ಲರ ಒಕ್ಕೊರಲು.
ಚಂದ್ರಕಾಂತರಿಂದ ದಬ್ಬೆ ಜಲಪಾತಕ್ಕೆ ಹೋಗುವ ದಾರಿಯನ್ನು ಕೇಳಿ ತಿಳಿದುಕೊಂಡು ಬಿಳಿಗಾರು-ಕಾರ್ಗಲ್ ರಸ್ತೆಯಲ್ಲಿ ೩ ಕಿ.ಮೀ ಕ್ರಮಿಸಿದ ನಂತರ ಎಡಕ್ಕೆ ಸಿಗುವ ಏಕೈಕ ರಸ್ತೆಯಲ್ಲಿ ಸುಮಾರು ೪ ಕಿ.ಮೀ ಕ್ರಮಿಸಿದ ನಂತರ ಸಿಗುವ ಎರಡನೆ ಹೊಳೆಯ ನಂತರ ಎಡಕ್ಕೆ ತಿರುಗುವ ಬದಲು ಬಲ ಭಾಗದ ರಸ್ತೆಯಲ್ಲಿ ಮುಂದೆ ಹೋಗಿ ಸ್ವಲ್ಪ ಸಮಯದ ನಂತರ ಬಂದ ದ್ವಿಚಕ್ರಿಯೊಬ್ಬನಿಂದ ಸರಿಯಾದ ದಾರಿ ತಿಳಿದು ಮತ್ತೆ ಹಿಂತಿರುಗಿ ಸರಿಯಾದ ದಾರಿಗೆ ಬಂದು ರಸ್ತೆಯ ಕೊನೆಯನ್ನು ತಲುಪಿದಾಗ ಸಿಕ್ಕದ್ದು ನಾಡಹೆಂಚಿನ ಮನೆ. ದಬ್ಬೆ ಫಾಲ್ಸಿಗೆ ಎಲ್ಲರೂ ಇಳಿಯುವುದು ಅಸಾಧ್ಯ ಎನ್ನುವ ಅವರ ಮಾತಿಗೆ ಬೆಲೆ ಕೊಡದೆ. ದಾರಿ ತೋರಿಸುವಂತೆ ಅವರಿಗೆ ವಿನಂತಿಸಿಕೊಂಡೆ. ಒಬ್ಬರಿಗೆ ೫ ರೂನಂತೆ ಅಕ್ರಮವಾಗಿ ಆತ ಹಣ ವಸೂಲಿ ಮಾಡಿದ್ದು ಮಲೆನಾಡಿಗರಲ್ಲೂ ಸ್ವಾರ್ಥಿಗಳಿದ್ದಾರೆ ಎನ್ನುವುದು ಮುಖಕ್ಕೆ ರಾಚುವಂತಿತ್ತು. ಸರಿ ಬಂಡೆ ಇಳಿಯುವುದಕ್ಕೆ ಹಗ್ಗ ತೆಗೆದು ಕೊಳ್ಳುವಂತೆ ಆತ ಸೂಚಿಸಿದ. ಅದಕ್ಕೆ ೧೫ ರೂ ಸಹ ನಮ್ಮಿಂದ ಮತ್ತೆ ವಸೂಲಿ. ಕೊನೆಗೆ ಯಾರೂ ದಬ್ಬೆ ಜಲಪಾತಕ್ಕೆ ಇಳಿಯುವ ಸಾಹಸಕ್ಕೆ ಕೈ ಹಾಕಲಿಲ್ಲ ಏಕೆಂದರೆ, ಮನೆಯಿರುವ ಜಾಗದಿಂದ ಅಲ್ಲಿ ಅಂತದ್ದೊಂದು ಜಲಪಾತವಿದೆಯೆಂದು ಊಹಿಸುವುದು ಸಾಧ್ಯವಿಲ್ಲ ಅಂತಹ ಜಾಗದಲ್ಲಿ ಒಮ್ಮೆಲೆ ಉದ್ಭವವಾಗುವ ಕಣಿವೆಗೆ ಮರದ ಬಳ್ಳಿಗಳಂತೆ ಹೊರಟಿರುವ ಬೇರುಗಳನ್ನು ಹಿಡಿಸು ಹವ್ಯಾಸಿ ಗೋಡೆ ಹತ್ತುವವರಂತೆ ಕಣಿವೆ ಇಳಿಯುವ ಸಾಹಸ ಸಾಧ್ಯವಿಲ್ಲವೆಂದು ಎಲ್ಲರೂ ಹಿಂತಿರುಗಿದರೂ ನನ್ನ ಮಗನಾದ ಅಮಿತ್ ಅಪ್ಪ ಹೋಗೋಣ ಎಂದು ೨-೩ ಮರಗಳ ಬೊಡ್ಡೆ ಹಿಡಿದು ಇಳಿದೇ ಬಿಟ್ಟ ಅವನನ್ನು ಹಿಡಿದುಕೊಳ್ಳಲು ನನ್ನ ಪತ್ನಿ. ಕೊನೆಗೆ ಅವರಿಬ್ಬರನ್ನು ಉಪಾಯವಾಗಿ ಹಿಂದೆ ಕಳುಹಿಸಿದೆ ಈ ಸಮಯಕ್ಕಾಗಲೆ ನಮಗೆ ದಾರಿ ತೋರಿಸಲು ಬಂದಿದ್ದವ ಹುಷಾರು ಎಂದು ಹೇಳಿ ನನಗೆ ಸಮಯವಿಲ್ಲ ಎಂದು ತಿಳಿಸಿ ಹಿಂದೆ ಹೋಗಿ ಬಿಟ್ಟಿದ್ದ. ಎನಾದರೂ ಆಗಲಿ ಎಂದು ಕೊಂಡು ಇಳಿಯಲು ಆರಂಭಿಸಿದೆ. ಜಾರಿಕೆಯಿಲ್ಲದಿದ್ದರೂ ಬಂಡೆಗಳ ಮಧ್ಯೆ ಬೇರು ಬಿಟ್ಟಿರುವ ಮರಗಳ ಬೇರು ಹಿಡಿದು ಇಳಿಯುವುದು ಓಹ್ ನಿಜಕ್ಕೂ ರೋಮಾಂಚನ ಕೈತಪ್ಪಿ ಜಾರಿದರೆ ಯಾವುದೋ ಬಂಡೆಗಳ ಮಧ್ಯೆ ಅಥವ ಮರದ ಬೇರಿಗೆ ಸಿಕ್ಕಿ ಹಾಕಿಕೊಳ್ಳುವುದು ಖಚಿತ. ಯಾವುದೆ ಜೀವಿಗಳೂ ಕಾಣ ಸಿಗದ ದಟ್ಟಕಾಡಿನ ಮಧ್ಯೆ ನಾನೊಬ್ಬನೆ ಇಳಿಯುತ್ತಿದ್ದರೆ ಒಂದೆಡೆ ಭಯ ಒಂದೆಡೆ ಮೈ ಜುಮ್ಮೆನಿಸುವಂತಹ ಅನುಭವ ತರುವ ಕಣಿವೆಯ ಆಳ. ಬಂಡೆ ಕೊರಕಲುಗಳ ಮಧ್ಯೆ ಇಳಿಯುತ್ತಾ ಹೋದೆ. ಸುಮಾರು ೨೦ ನಿಮಿಷ ಇಳಿದಮೇಲೆ ಸಿಕ್ಕದ್ದು ಅಡ್ಡಬಿದ್ದ ದೊಡ್ಡಮರ ಅದರ ಅಗಾಧತೆಯನ್ನು ಊಹಿಸುವುದು ಕಷ್ಟ ಅಂತಹ ದೊಡ್ಡ ಮರವನ್ನು ಬಹುಶಃ ನಾನು ನೋಡಿದ್ದು ಇದೇ ಮೊದಲು. ದುರಾದೃಷ್ಟವಶಾತ್ ಡಿಜಿಟಲ್ ಕ್ಯಾಮೆರ ತರುವುದನ್ನು ಮರೆತಿದ್ದೆ. ಪರವಾಗಿಲ್ಲ ಏಕೆಂದರೆ ಹ್ಯಾಂಡಿ ಕ್ಯಾಂ ಇದೆಯಲ್ಲ. ಕೊನೆಗೊಮ್ಮೆ ದೊಡ್ಡ ಬಂಡೆಯೊಂದು ಕಣಿವೆಗೆ ಲಂಭವಾಗಿ ಚಾಚಿಕೊಂಡು ನಿಂತಿದ್ದ ಜಾಗಕ್ಕೆ ಬಂದು ನಿಂತಿದ್ದೆ. ಇಲ್ಲಿಂದ ಜಲಪಾತದ ಮೊದಲ ದರ್ಶನವಾಗುತ್ತದೆ. ಇಲ್ಲಿಯವರೆಗೂ ಬರಿ ಜಲಪಾತದ ಶಬ್ಧ ಮಾತ್ರ ಕೇಳಿಸುತ್ತಿರುತ್ತದೆ. ತುಂಬ ಜನ ಇಲ್ಲಿಂದಲೆ ಹಿಂತಿರುಗುತ್ತಾರೆ ಎಂದು ಆ ನಮ್ಮ ಮಾರ್ಗದರ್ಶಕ ನನಗೆ ತಿಳಿಸಿದ್ದ.
ಇಲ್ಲಿಂದ ಕೆಳಗಿಳಿಯಲು ಹಗ್ಗದ ಸಹಾಯ ಬೇಕೇಬೇಕು. ಇಲ್ಲೂ ಸಹ ನಮ್ಮ ಅನಾಗರೀಕ ಕುರುಹುಗಳಾದ ಗುಟ್ಕಾ ಮತ್ತು ಬೇರೆ ಬೇರೆ ಪ್ಲಾಸ್ಟಿಕ್ ಪದಾರ್ಥಗಳು ನಮ್ಮ ನಾಗಿರೀಕ ಜನ ಎಸೆದು ಹೋಗಿರುವುದು ವಿಷಾದನೀಯ. ಅಲ್ಲೆ ಇದ್ದ ಸಣ್ಣ ಮರದ ಬೊಡ್ಡೆಗೆ ನಾನು ತಂದಿದ್ದ ಹಗ್ಗವನ್ನು ಕಟ್ಟಿ ಇಳಿಯುವ ಸಾಹಸಕ್ಕೆ ಕೈ ಹಾಕೋಣವೆನಿವಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ನಾನು ಇಳಿಯಬೇಕಾಗಿದ್ದ ಮಾರ್ಗದಲ್ಲಿ ಹಾರಾಡುತ್ತಿದ್ದ ಅಂಗೈ ಅಗಲದ ಬಣ್ಣದ ಚಿಟ್ಟೆ. ಎಷ್ಟೆ ಪ್ರಯತ್ನಿಸಿದರೂ ಅದನ್ನು ನನ್ನ ಕ್ಯಾಮೆರಾದಲ್ಲಿ ಹಿಡಿಯಲು ಆಗಲೆ ಇಲ್ಲ. ಸರಿ ಕಟ್ಟಿದ್ದ ಹಗ್ಗ ಎಲ್ಲವೂ ಸರಿಯಿದೆಯೆಂದು ಪರೀಕ್ಷಿಸಿ ಮೆಲ್ಲಗೆ ಬಂಡೆ ಇಳಿಯಲು ಆರಂಭಿಸಿದೆ ೫ ಹೆಜ್ಜೆ ಕೆಳಗಿಳಿಯುವಷ್ಟರಲ್ಲಿ ನಾನು ಹಿಡಿದಿದ್ದ ಹಗ್ಗ ಸರ್ರನೆ ಜಾರಿತು. ಅಷ್ಟೆ ನನ್ನ ಕತೆ ಇವತ್ತಿಗೆ ಮುಗಿಯಿತು ಎಂದು ಕೊಂಡೆ. ಸದ್ಯ ಅಂತದ್ದೇನೂ ಆಗಲಿಲ್ಲ ನಾನು ಕಟ್ಟಿದ್ದ ಹಗ್ಗ ಸರಿಯಾಗೆ ಇತ್ತು. ಆದರೆ ಇಳಿಯಬೇಕಾದರೆ ಬಂಡೆಯನ್ನು ಬಳಸಿ ಬಂದದ್ದರಿಂದ ನನ್ನ ಭಾರಕ್ಕೆ ಅದು ಬಂಡೆಯಿಂದ ತಪ್ಪಿಸಿ ಸ್ವಲ್ಪ ಕೆಳಗೆ ೩-೪ ಅಡಿಗಳಷ್ಟು ಜಾರಿತು. ಹೃದಯವೇ ಬಾಯಿಗೆ ಬಂದಂತಹ ಅನುಭವ. ಇದರ ಜೊತೆಗೆ ನೆತ್ತಿ ಸುಡುವ ಸೂರ್ಯ ದೇವ. ಬಂಡೆ ಇಳಿದು ಮತ್ತೆರಡು ಬಂಡೆಗಳನ್ನು ದಾಟಿ ಒಂದು ಇಳಿಜಾರಿನಲ್ಲಿ ನಿಧಾನವಾಗಿ ಇಳಿದರೆ ನಾನು ಕಣಿವೆ ತಳಭಾಗದಲ್ಲಿದ್ದೆ. ಈಗ ಬಂಡೆಗಳನ್ನು ದಾಟುತ್ತಾ ಇಳಿಯುವ ಅಥವ ಹತ್ತುವ ಗೋಜಿಲ್ಲದೆ ನೇರವಾಗಿ ನಡೆಯುತ್ತಾ ಎದುರಿಗೆ ಧುಮುಕುತ್ತಿರುವ ಜಲಪಾತದ ಕಡೆ ನಡೆಯಲು ತೊಡಗಿದೆ. ಸುತ್ತಲೂ ಒಮ್ಮೆ ಅವಲೋಕಿಸಿದರೆ ಭಯ ಮನಸ್ಸಿಗೆ ಹತ್ತಲು ಆರಂಭಿಸಿತು ಇಡೀ ಕಣಿವೆಯಲ್ಲಿ ನಾನೊಬ್ಬನೆ!!! ಯಾವುದಾದರು ಕಾಡು ಪ್ರಾಣಿಗಳು ಆಕ್ರಮಿಸಿಬಿಟ್ಟರೆ ಎನ್ನುವ ಭಯ ಕಾಡಲು ಪ್ರಾರಂಭಿಸಿತು. ಅದರಲ್ಲು ಚಂದ್ರಕಾಂತ್ ಮತ್ತವರ ತಂಡ ಹೇಳಿದ ಮಾತು ನೆನೆಪಿಗೆ ಬಂದು ಹೋಯ್ತು. ಸಾರ್ ಆನೆ ಮತ್ತು ಸಿಂಹ ಎರಡನ್ನು ಬಿಟ್ಟು ಇನ್ನು
ಎಲ್ಲ ತೆರನಾದ ಪ್ರಾಣಿಗಳು ನಮ್ಮ ಕಾಡಿನಲ್ಲಿವೆ ಸಾರ್ ಎನ್ನುವ ಮಾತು. ತಲೆಯನ್ನೊಮ್ಮೆ ಕೊಡವಿಕೊಂಡು ಕ್ಯಾಮೆರದಲ್ಲಿ ಜಲಪಾತವನ್ನು ಚಿತ್ರೀಕರಿಸುತ್ತಾ ಮತ್ತೆ ಜಲಪಾತದೆಡೆ ಹೆಜ್ಜೆ ಹಾಕಿದೆ. ಜಲಪಾತದ ಹತ್ತಿರ ಬರುವಷ್ಟರಲ್ಲಿ ತಲೆ ಮತ್ತು ಮೈ ಬಿಸಿಲಿಗೆ ಕಾಯ್ದು ಕಾವಲಿಯಂತೆ ಸುಡಲು ಆರಂಭಿಸಿತು. ಜಲಪಾತದ ಬುಡಕ್ಕೆ ಬಂದು ಜಲಪಾತದ ನೀರು ಹರಿದು ನಿರ್ಮಾಣವಾಗಿದ್ದ ಸಣ್ಣ ಹೊಂಡವೊಂದರಲ್ಲಿ ಮುಳುಗಿ ನನ್ನ ಶರೀರದ ತಾಪ ಆರಿಸಿಕೊಂಡು ಮನದಣಿಯೆ ಜಲಪಾತವನ್ನು ವೀಕ್ಷಿಸಿ. ಅಲ್ಲಿನ ನಿಶ್ಯಬ್ಧತೆಯನ್ನು ಆನಂದಿಸುತ್ತ ಸ್ವಲ್ಪ ಸಮಯ ಕಳೆದು ೧.೦೦ ಗಂಟೆಗೆ ಸರಿಯಾಗಿ ಅಲ್ಲಿಂದ ಹಿಂತಿರುಗತೊಡಗಿದೆ ಮತ್ತೆ ಹಗ್ಗದ ಸಹಾಯದಿಂದ ಬಂಡೆಯನ್ನು ಹತ್ತಿ. ಏದುಸಿರು ಬಿಡುತ್ತಾ ನನಗೇ ಕೇಳುತ್ತಿದ್ದ ನನ್ನ ಹೃದಯದ ಬಡಿತವನ್ನು ಆಲಿಸುತ್ತಾ ೩-೪ ಹೆಜ್ಜೆಗೊಮ್ಮೆ ದಣಿವಾರಿಸಿಕೊಳ್ಳುತ್ತಾ ಕಣಿವೆಯನ್ನು ಏರಲು ತೊಡಗಿದೆ. ೧.೪೦ ಕ್ಕೆ ಸರಿಯಾಗಿ ನಮ್ಮ ತಂಡದವರನ್ನು ಸೇರಿಕೊಂಡೆ. ಅಷ್ಟರಲ್ಲಾಗಲೇ ಅವನನ್ನು ಬಿಟ್ಟು ಹೋಗಿದ್ದಕ್ಕಾಗಿ ಅಳುತ್ತ ಕುಳಿತಿದ್ದ ಮಗನನ್ನು ಸಮಾಧಾನ ಮಾಡಿ, ಮನೆಯ ಪಕ್ಕದಲ್ಲಿ ಸುರಿಯುತ್ತಿದ್ದ ಸಣ್ಣ ಜಲಪಾತದಂತಹ ನೀರಿಗೆ ತಲೆಯೊಡ್ಡಿದ್ದರೆ ಚುರ್ ಎಂದ ಭಾವ. ಕಾರು ಹಿಂದೆ ತೆಗೆದು ಕೊಳ್ಳುವ ಭರದಲ್ಲಿ ಅಲ್ಲಿನ ಮನೆಯವರ ಚಪ್ಪಡಿ ಕಲ್ಲೊಂದರ ಅಂಚು ಒಡೆದು ಹೋಗಿದ್ದರಿಂದ ಮತ್ತದೆ ದುರಾಸೆಯ ಜನರಿಗೆ ೧೫೦ ರೂ ದಂಡ ತೆತ್ತು ೨.೦೦ ಗಂಟೆಗೆ ಅಲ್ಲಿಂದ ಹೊರಟು ಉತ್ತಮವಾದ ರಸ್ತೆಯಲ್ಲಿ ಕಾರ್ಗಲ್ ಸೇರಿ ಅಲ್ಲಿನ ಹೋಟೆಲೊಂದರಲ್ಲಿ ಊಟ ಮಾಡಿ ಮುಪ್ಪಾನೆ ಪ್ರಕೃತಿ ಶಿಬಿರಕ್ಕೆ ಹೋಗಲು ಪಟ್ಟ ಪ್ರಯತ್ನ ವ್ಯರ್ಥವಾಯಿತು. ಗೇರುಸೊಪ್ಪದ ಹಿನ್ನೀರಿಗೆ ಭೇಟಿ ಕೊಡುವ ನಮ್ಮ ಪೂರ್ವ ಯೋಜನೆ ನಮ್ಮ ಮಂದಗತಿಯ ಸಹೋದ್ಯೋಗಿಯಿಂದ ಸಾಧ್ಯವಾಗಲಿಲ್ಲ. ಸಮಯ ಸರಿಯಾಗಿ ಪಾಲಿಸದೆ ಇದ್ದುದರ ಪರಿಣಾಮ ನಾವು ಖಚಿತವಾಗಿ ೩ ಸುಂದರ ಸ್ಥಳಗಳನ್ನು ತಪ್ಪಿಸಿಕೊಂಡೆವು ಎಂದು ಹೇಳಲು ಮನ ನೋಯುತ್ತದೆ. ಲಿಂಗನಮಕ್ಕಿ ಅಣೆಕಟ್ಟು ವೀಕ್ಶಿಸಲು ಅನುಮತಿ ಸಿಗದ ಕಾರಣ ನಿರಾಸೆಯಿಂದ ಹಿಂತಿರುಗಿ ಜೋಗದ ಕಡೆ ಪಯಣಿಸಿದೆವು.
ಮೈದುಂಬಿ ಧುಮುಕುತ್ತಿದ್ದ ಜೋಗವನ್ನು ನೋಡಿದವನಿಗೆ ಒಣಗಿ ನಿಂತಿರುವ ಜೋಗದ ಗುಂಡಿಯನ್ನು ನೋಡಲು ಮನಸ್ಸಿಲ್ಲದೆ ಕಾರಿನಲ್ಲಿ ಮಲಗಿ ದಬ್ಬೆಗೆ ಹೋಗಿಬಂದಿದ್ದ ಆಯಾಸವನ್ನು ಪರಿಹರಿಸಿಕೊಳ್ಳಲು ನಿರ್ಧರಿಸಿದೆ. ಸುಮಾರು ೪೫ ನಿಮಿಷಗಳು ಒಳ್ಳೆಯ ನಿದ್ದೆ ತೆಗೆದೆ. ಜೋಗದಿಂದ ನೇರವಾಗಿ ತಾಳಗುಪ್ಪ ಮಾರ್ಗವಾಗಿ ಸಾಗರ ತಲುಪಿ ಚಹಾ ಸೇವಿಸುತ್ತಿರುವಾಗ ಭೀಮೇಶ್ವರದ ಭಟ್ಟರಿಂದ ದೂರವಾಣಿ ಕರೆ ಬಂತು. ಬಹುಶಃ ಕೋಪಿಸಿಕೊಂಡು ನಿಂದಿಸಬಹುದಎಂಬ ನನ್ನ ಊಹೆ ೨೦೦% ಸುಳ್ಳಾಯಿತು ನಮ್ಮ ತಪ್ಪೊಪ್ಪಿಗೆ ಪತ್ರ ಕೆಲಸ ಮಾಡಿತ್ತು. ನಮ್ಮನು ಕ್ಷಮಿಸಿ ಸಾಗರದಿಂದ ಮತ್ತೆ ಭೀಮೇಶ್ವರಕ್ಕೆ ಬಂದು ಅಲ್ಲಿ ತಂಗುವಂತೆಯೂ ಇಂದು ಅವರೆ ಅಡುಗೆ ಮಾಡುವುದಾಗಿಯೂ ಮತ್ತೆ ನಮಗಾಗಿ ದೇವರಿಗೆ ವಿಶೇಷ ಅಭಿಷೇಕ ಮಾಡಿ ನಂತರ ತೆರಳುವುಂತೆ ಕೇಳಿದ್ದು ಅವರ ದೊಡ್ಡ ಗುಣವೇ ಅಲ್ಲವೆ. ನಾವು ಮಾಡುವ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೆ ಎಷ್ಟೋ ಸಮಸ್ಯೆಗಳು ಬಗೆ ಹರಿಯುತ್ತವೆ ಎನ್ನುವ ಪಾಠವನ್ನು ಕಲಿತಂತಾಯ್ತು.
ನಾನು ಮತ್ತು ಶಂಕರ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ಕೊಟ್ಟ ನಂತರ ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿ ಅಂತೆಯೆ ವರದಹಳ್ಳಿಯ ಕಡೆ ಹೊರಟು ಪ್ರಶಾಂತವಾದ
ವರದಹಳ್ಳಿಯಲ್ಲಿ ಸ್ವಲ್ಪ ಸಮಯ ಕೆಳೆದು. ಶಿವಮೊಗ್ಗಕ್ಕೆ ಬಂದು ಹೋಟೆಲ್ಲೊಂದರಲ್ಲಿ ಊಟ ಮಾಡಿ ಶ್ರೀಧರ ಕಾದಿರಿಸಿದ್ದ ವಸತಿ ಗೃಹವೊಂದರಲ್ಲಿ ತಂಗಿದ್ದು ಬೆಳಿಗ್ಗೆ ಎದ್ದು ತರೀಕೆರೆಯ ಬಳಿಯಿರುವ ಅಮೃತಾಪುರದ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬೀರೂರು ಅರಸಿಕೆರೆ ತಿಪಟೂರು ನಿಟ್ಟೂರು ಮತ್ತು ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಿದಾಗ ಸಂಜೆ ೬ ಗಂಟೆ.
ಪ್ರವಾಸ ಇಲ್ಲಿಗೆ ಮುಗಿಸುತ್ತಿದ್ದೇನೆ. ಪ್ರವಾಸಕ್ಕೆ ಸಹಕರಿಸಿದ ಕಾರ್ಕಳ ಅರಣ್ಯ ವಿಭಾಗದ ಜಯನಾರಾಯಣರಿಗು ತಮ್ಮಲ್ಲಿರುವ ಮಾಹಿತಿಯನ್ನಿತ್ತು ಎಲ್ಲ ರೀತಿಯಲ್ಲು ಎಂತಹುದೇ ಸಮಯದಲ್ಲು ಸಹಾಯಕ್ಕೆ ನಿಲ್ಲುವ ರಾಜೇಶ್ ನಾಯಕ್ ರಿಗು ಮತ್ತು ದಟ್ಸ್ ಕನ್ನಡ ಮೂಲಕ ಪರಿಚಯವಾದ ತಳವಾಟದ ಪತ್ರಕರ್ತ ಶ್ರೀ ರಾಘವೇಂದ್ರ ಶರ್ಮರಿಗೂ ಮನದಲ್ಲೆ ವಂದಿಸಿ ಮನೆ ಸೇರಿದೆ. ಸಹನೆಯಿಂದ ಈ ಪ್ರವಾಸ ಕಥನ ಓದಿದ ತಮಗೆ ಧನ್ಯವಾದ. ನಿಮ್ಮ ಅನಿಸಿಕೆ ತಿಳಿಸಲು ಮರೆಯಬೇಡಿ

ವಂದನೆಗಳೊಂದಿಗೆ
ಪ್ರಸನ್ನ
prasannakannadiga@yahoo.co.in
ಚಿತ್ರಗಳು