Friday, April 26, 2013

ನಾನು ಮೊದಲ ಬಾರಿ ನೂರು ರೂ ನೋಟು ನೋಡಿದ ಪ್ರಸಂಗ.



ನನ್ನದು ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಸಹಪಾಠಿ ದಯಾನಂದ ನಮ್ಮೂರ ಪಟೇಲರ ಮೊಮ್ಮಗ. ಆಗ ಕಾಂಗ್ರೆಸ್ ಮತ್ತು  ಜನತಾ ಪಕ್ಷ ಎರಡೇ ಪಕ್ಷಗಳಿದ್ದಂತೆ ತೋರುತ್ತದೆ. ಯಾವ ಚುನಾವಣೆ ಎಂಬುದು ನೆನಪಿಲ್ಲ. ಕಾಂಗ್ರೆಸ್ಸಿನ ಚಿಹ್ನೆ ಹಸು ಮತ್ತು ಕರುವಿನದ್ದು. ತಗಡಿನ ಬಿಲ್ಲೆಯ ಮೇಲೆ ಮುದ್ರಿತಗೊಂಡಿದ್ದ ಆ ಬಿಲ್ಲೆ ನಮಗೆ ಅಚ್ಚುಮೆಚ್ಚು, ಕಾರಣ ಎರಡು ತೂತ ಹಾಕಿ ದಾರ ಕಟ್ಟಿ ಜುಯ್ ಎಂದೆಳೆಯುವ ಮೋಜಿನ ಬಿಲ್ಲೆಗೆ ಅದು ಅತ್ಯಂತ ಸೂಕ್ತವಾಗಿತ್ತು. ಆಗ ಜನತಾ ಪಕ್ಷದವರು ಸಂಘರ್ಷ ಚಿತ್ರದ "ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೆ ಸೋಲು ನಿನಗೆ" ಹಾಡಿನ ರೀಮಿಕ್ಸ್ ಮಾಡಿ, ಓ ಇಂದಿರಾ ಸೋಲು ನಿನಗೆ ಎಂಬ ಹಾಡನ್ನು ಎಲ್ಲೆಡೆ ಬಿತ್ತರಿಸುತ್ತಿದ್ದ ನೆನಪು ಇದೇ ಚುನಾವಣೆಯ ಅಥವ ನಂತರದ್ದ ನೆನಪಿಲ್ಲ.

ಒಂದು ದಿನ ದಯಾನಂದ ಮಧ್ಯಾಹ್ನ ಊಟದ ನಂತರ ಬಂದು ನೂರು ರೂಪಾಯಿ ನೋಡಿದ್ಯ? ಅಂತ ಕೇಳ್ದ, ಇಲ್ಲಾ ಅಂತ ತಲೆ ಆಡಿಸಿದೆ. ನೋಡ್ತಿಯ? ಅಂದವನಿಗೆ ಗೋಣು ಹಾಕಿ ಇಚ್ಚೆ ವ್ಯಕ್ತ ಪಡಿಸಿದೆ. ಸರಿ ಬಾ ತೋರಿಸ್ತಿನಿ. ಭಯದಿಂದ ಕೇಳಿದೆ ನಿನ್ ಹತ್ರ ಹೇಗ್ ಬಂತು. ನನ್ ಹತ್ರ ಇಲ್ಲ. ನಮ್ಮನೆಲಿದೆ ತೋರಿಸ್ತಿನಿ ಬಾ.

ಪಟೇಲರು ವಂಶಪಾರಂಪರ್ಯವಾಗಿ ಕಾಂಗ್ರೆಸ್ಸಿನ ಸದಸ್ಯರು. ಅವರ ವಂಶದ ಯಾರೋ ಒಬ್ಬರು ನೆಹರುರೊಡನೆ ಇದ್ದ ಫೋಟೊವೊಂದು ಅವರ ಮನೆಯ ನಡುಮನೆಯ ಮುಂಬಾಗಿಲಿನ ಎದುರು ನೇತಾಡುತ್ತಿತ್ತು.

ಅವ್ವ ಒಳ್ಗೆ ಕೆಲ್ಸ ಮಾಡ್ತವ್ಳೆ ಎಂದ, ಮೆಲ್ಲಗೆ ನಡುಮನೆ ದಾಟಿ ಹಿಂದೆ ಕೋಣೆಯೊಂದಕ್ಕೆ ನನ್ನನ್ನು ಎಳೆದುಕೊಂಡು ಹೋದ. ಕೊಟೆಯೊಳಗೆ ನುಸುಳಿದಂತ ಅನುಭವ ದೊಡ್ಡಮನೆ, ದವಸ ಧಾನ್ಯಗಳ ತುಂಬಿತುಳುಕುತ್ತಿದ್ದ ಕೋಣೆಯ ಮೂಲೆಯೊಂದರಲ್ಲಿ ನಾಲ್ಕಾರು ತೆಳ್ಳನೆ ಗೋಣಿ ಚೀಲದ ಮೂಟೆಯ ಬಳಿಗೆ ಕರೆದೊಯ್ದು ಬೆರಳಿನಿಂದ ಚೀಲದ ದಾರಗಳನ್ನು ಬಿಡಿಸಿ ತೂತಿನಿಂದ ನೋಡು ಎಂದ ಉಹುಂ ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಮೆಲ್ಲಗೆ ಸ್ವಿಚ್ ಹಾಕಿದಾಗ ಮಂದ ಬೆಳಕು ಹರಿಯಿತು. ಯಾರ್ಲಾ ಅದು  ಕೋಣ್ಯಾಗೆ? ಎಂಬ ವಯಸ್ಸಾದ ಹೆಣ್ಣಿನ ಧ್ವನಿ ತೂರಿ ಬಂತು. ನಾನು ನಡುಗಿ ಹೋಗಿದ್ದೆ. ಏ ನಾನೆ ಕಣಜ್ಜಿ ದಯಾ ಎಂದು ರೇಗಿದ. ಅಲ್ಲೇನ್ಲಾ ಕ್ಯಾಮೆ ನಿಂಗೆ ಇಸ್ಕೂಲ್ಗೆ ಓಗಿಲ್ವೆನ್ಲಾ? ಏಯ್ ಓಗಿದಿನಿ, ಪುಸ್ಕ ಮರ್ತೋಗಿದ್ದೆ ತಗೊಂಡೋಯ್ತಿನಿ.

 ಬಾ ನೋಡು ಎಂದವನ ಹಿಂದೆ ಮೆಲ್ಲಗೆ ನಡೆದೆ. ವಾಹ್ ಕಡು ನೀಲಿ ಬಣ್ಣದ ಗರಿಗರಿ ನೋಟಿನ ಕಟ್ಟುಗಳು. ಕಾಣಿಸಿದ್ದು ಮೇಲಿನದ್ದು ಮಾತ್ರ. ಕೊನೆಯಲ್ಲಿ ಬಿಳಿ ಪಟ್ಟಿಯಂತಿದ್ದ ನೂರರ ನೋಟಿನ ಕಂತೆಗಳು. "ಈ ಮೂಟೆಯೆಲ್ಲ ಅದೆ" ಎಂದು ಹೆಮ್ಮೆಯಿಂದ ಬೀಗಿದ.

ಆಶ್ಚರ್ಯ ಮತ್ತು ಭಯ ಮಿಶ್ರಿತನಾಗಿ ಇದೆಲ್ಲ ನಿಮ್ದೇನಾ ಎಂಬ ನನ್ನ ಪ್ರಶ್ಬೆಗೆ, ಇಲ್ಲ ಎಲೆಕ್ಸನ್ ಬಂದಯ್ತಲ್ಲ, ಅದಕ್ಕೆ ಹಟ್ಟಿಯೋರ್ಗೆ ಕುಡಿಯಕ್ಕೆ ಮನೆಗಿಷ್ಟು ಅಂತ ಕೊಡಕ್ಕೇಂತ ತಂದು ಮಡಗವ್ರೆ. ಮೆಲ್ಲನೆ ಹೊರ ಬಂದು ಅಂಗಳ ದಾಟುತ್ತಿದ್ದವರಿಗೆ ದಯಾನಂದನ ತಾಯಿಯ ಇಸ್ಕೂಲಿಗೋದ್ ಬುಟ್ಟು ಇಲ್ಲೇನ್ಲ ಮಾಡ್ತಿದಿಯ ಎಂದು ಹಿಡಿದು ಕೊಂಡರು. ಯವ್ವ ಎಕ್ಸೈಸ್ ಮರ್ತೋಗಿದ್ದೆ ತಗಂಡೋಗವಾಂತ ಬಂದೆ, ನೋಡು ಇವ್ನು ಬಂದಿಲ್ವ? ಎಂದು ನನ್ನ ಕಡೆ ತೋರಿಸಿದ. ಸುಳ್ಳು ಹೇಳಿ ತಪ್ಪ್ಸಿಕೊಂಡು ಬಂದು ಶಾಲೆ ಸೇರಿದೆವು.

ಪ್ರತಿ ಬಾರಿಯೂ ಖಾನ್ಗ್ರೆಸ್ಸಿಗರು ಚುನಾವಣೆ ಅಕ್ರಮಗಳ ಬಗ್ಗೆ ಮಾತನಾಡಿದಾಗ ಈ ಪ್ರಸಂಗ ನನ್ನ ನೆನಪಿಗೆ ಬಂದು ಖಾನ್ಗ್ರೆಸ್ಸಿಗರ ನೈತಿಕತೆಯ ಬಗ್ಗೆ ಸಣ್ಣನೆಯ ನಗುವೊಂದು ನನ್ನ ಮುಖದಲ್ಲಿ ಹಾಯ್ದು ಹೋಗುತ್ತದೆ.