Sunday, July 19, 2009

ಭಾರತದ ಪರಮವೀರರು: ಮೇಜರ್ ಸೋಮನಾಥಶರ್ಮ

ಸೈನಿಕನಾಗುವುದು ಮನೆತನದ ಸಂಪ್ರದಾಯವೆನಿಸುವಂತಿದ್ದ ಕುಟುಂಬವೊಂದರಲ್ಲಿ ಮೇಜರ್ ಜನರಲ್ ಅಮರನಾಥಶರ್ಮ ಅವರ ಸುಪುತ್ರ ಸೋಮನಾಥಶರ್ಮ ಹುಟ್ಟಿದ್ದು ೧೯೨೩ ರ ಜನವರಿ ೩೧ರಂದು ಹಿಮಾಚಲ ಪ್ರದೇಶದಲ್ಲಿ. ತಂದೆಯಂತೆ ಮಕ್ಕಳು ನೂಲಿನಂತೆ ಸೀರೆ ಎಂಬ ಗಾದೆಯಂತೆ ತಾನೂ ಸೈನ್ಯ ಸೇರಿದ್ದು ೨೨ ನೇ ಫೆಬ್ರವರಿ ೧೯೪೨ರಲ್ಲಿ. ಎರಡನೆ ವಿಶ್ವ ಮಹಾಯುದ್ದದಲ್ಲಿ ಪಾಲ್ಗೊಂಡು ಆರಾಕನ್ ಆಪರೇಶನ್ಸ್ ನಲ್ಲಿ ಶೌರ್ಯ ಮೆರೆದದ್ದು ಹೆಮ್ಮೆ.

೨೨ನೆ ಅಕ್ಟೋಬರ್ ೧೯೪೭ರಲ್ಲಿ ಪಾಪಿಸ್ತಾನದ ಆದಿವಾಸಿಗಳ ಸೋಗಿನಲ್ಲಿ ಭಾರತದ ಮೇಲೆರಗಿ ಶ್ರೀನಗರವನ್ನು ಆಕ್ರಮಿಸಲು ಮುಂದಾಗ ಎಚ್ಚೆತ್ತ ಸರ್ಕಾರ ಅಕ್ಟೋಬರ್ ೨೬ರಂದು ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿ ಗಡಿಯಲ್ಲಿ ನುಸುಳಿದ್ದ ಪಾಕಿ ಸೈನಿಕರನ್ನು ತೆರವುಗೊಳಿಸಲು ಸೈನಿಕರನ್ನು ನಿಯೋಜಿಸಿತು. ಈ ಹೊತ್ತಿಗಾಗಲೆ ಶ್ರೀನಗರದ ಹತ್ತಿರ ಬಂದಿದ್ದ ಶತ್ರು ಸೈನಿಕರು ಆಯಕಟ್ಟಿನ ಜಾಗಗಳಲ್ಲಿ ತಳವೂರಿದ್ದರು. ಶ್ರೀನಗರವನ್ನು ಸುತ್ತುವರೆದಿದ್ದ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತೀಯ ಸೈನಿಕರ ಮೊದಲ ದಂಡು ಶ್ರೀನಗರಕ್ಕೆ ಬಂದಿಳಿದದ್ದು ಅಕ್ಟೋಬರ್ ೨೭ರಂದು.

ಹಾಕಿಯಾಟವಾಡುತ್ತಿದ್ದಾಗ ಆದ ಕೈಮುರಿತಕ್ಕಾಗಿ ಕೈಗೆ ಪಟ್ಟಿ ಸುತ್ತಿಸಿಕೊಂಡಿದ್ದ ಸ್ಥಿತಿಯಲ್ಲಿ ಯುದ್ದ ಭೂಮಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರೂ ಮೇಜರ್ ಸೋಮನಾಥಶರ್ಮ ತನ್ನ ದಂಡಿಗೆ ತಾನೆ ನಾಯಕರಾಗಿ ಹೊರಟರು. ಅಕ್ಟೋಬರ್ ೩೧ರಂದು ಮೇಜರ್ ಸೋಮನಾಥಶರ್ಮರ ಸೈನಿಕರನ್ನು ವಿಮಾನದ ಮೂಲಕ ಶ್ರೀನಗರದಲ್ಲಿಳಿಸಲಾಯಿತು.ಈ ಹೊತ್ತಿಗಾಗಲೆ ಭಾರತೀಯ ಸೈನಿಕ ಪ್ರತಿದಾಳಿಗೆ ತತ್ತರಿಸಿದ್ದ ಪಾಕಿಸ್ತಾನಿ ಸೈನಿಕರು ಗೆರಿಲ್ಲಾ ಮಾದರಿ ಯುದ್ದಕ್ಕೆ ಶರಣಾಗಿ ಶ್ರೀನಗರವನ್ನು ಆಕ್ರಮಿಸುವ ಹುನ್ನಾರದಲ್ಲಿದ್ದರು. ಶ್ರೀನಗರದ ಉತ್ತರದಿಂದ ಉಂಟಾಗುವ ಆಕ್ರಮಣವನ್ನು ತಡೆಯಲು ೩ ದಂಡುಗಳನ್ನು ನವೆಂಬರ್ ೩ರಂದು ಬಡಗಾಂ ಹಳ್ಳಿಯ ಬಳಿ ನಿಯೋಜಿಸಲಾಯಿತು. ತಕ್ಷಣವೆ ಅಲ್ಲೊಂದು ಸೈನಿಕ ನೆಲೆಯನ್ನು ಸ್ಥಾಪಿಸಿ ಸೈನಿಕರು ತಮ್ಮ ಕಾರ್ಯಾಚರಣೆಗಿಳಿದರು.

ಮೇಜರ್ ಸೋಮನಾಥಶರ್ಮರ ತಂಡ ಬಡಗಾಂನ ದಕ್ಷಿಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಾಹ್ನ ೨.೩೫ರವರೆಗೂ ಶತ್ರುಗಳ ಯಾವುದೇ ಸುಳಿವು ದೊರೆಯಲಿಲ್ಲ. ಆದರೂ ಸೋಮನಾಥರಿಗೆ ೩ ಗಂಟೆಯವರೆಗೆ ಅಲ್ಲೆ ಮುಂದುವರೆಯಲು ಸೂಚನೆ ಬಂತು.ಆಗ ಬಂತು ನೋಡಿ ಸಣ್ಣ ಹಳ್ಳವೊಂದರ ಮರೆಯಿಂದ ಇರುವೆಗಳು ಬಂದಂತೆ ಶಸ್ತ್ರಾಸ್ತ್ರ ಮದ್ದು ಗುಂಡು ಸ್ವಯಂಚಾಲಿತ ಬಂದೂಕುಗಳನ್ನೊಳಗೊಂಡ ೭೦೦ ಶತ್ರು ಸೈನಿಕರ ದಂಡು ಮೇಜರ್ ಶರ್ಮರವರ ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿತು. ಸಂಖ್ಯೆಯಲ್ಲಿ ತನಗಿಂತ ೨-೪ ಪಟ್ಟು ಹೆಚ್ಚಿದ್ದ ಶತ್ರುವನ್ನು ತಡೆಹಿಡಿಯುವುದು ಕಷ್ಟವಾಗತೊಡಗಿತು. ತಮ್ಮ ಕಡೆಯ ಮದ್ದುಗುಂಡುಗಳು ಕಡಿಮೆಯಾಗುತ್ತಿತ್ತು ಶತ್ರುಗಳು ಹತ್ತಿರ ಬರಲಾರಂಭಿಸಿದ್ದು ಸ್ಪಷ್ಟವಾಗತೊಡಗಿತು. ಕೈಯಲ್ಲಿ ಬ್ಯಾಂಡೇಜ್ ಕಟ್ಟಿದ್ದರೂ ಸೈನಿಕರ ಬಂದೂಕುಗಳಿಗೆ ಗುಂಡು ತುಂಬಿಸುತ್ತಾ ಅವನ್ನು ತನ್ನ ಹುಡುಗರಿಗೆ ತೆರೆದ ಮೈದಾನದಲ್ಲಿ ಶತ್ರುಗಳ ನೇರ ದಾಳಿಗೆ ಗುರಿಯಾಗುವ ಅಪಾಯವಿದ್ದರೂ ರವಾನಿಸುತ್ತಾ ಮೇಜರ್ ಶರ್ಮ ತನ್ನ ತಂಡವನ್ನು ರಕ್ಷಿಸುತ್ತಾ ಶತ್ರು ಸೈನ್ಯ ಮುಂದೆ ಬರದಂತೆ ತಡೆಯುವಲ್ಲಿ ಯಶಸಸ್ವಿಯಾದರೂ ಅದು ಹೆಚ್ಚು ಸಮಯ ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಿತ್ತು. ಈ ಮಧ್ಯೆ ಶತ್ರುಗಳು ಸಫಲರಾದರೆ ಇಡೀ ಶ್ರೀನಗರ ಮತ್ತು ಶ್ರೀನಗರದ ವಿಮಾನ ನಿಲ್ದಾಣ ಶತ್ರುಗಳ ಪಾಲಾಗುವುದು ನಿಶ್ಚಿತವೆಂದರಿತ ಮೇಜರ್ ಶರ್ಮ ಭಾರತೀಯ ವಿಮಾನಗಳು ಶತ್ರುಗಳ ಗುರಿಗೆ ಸಿಗದಂತೆ ತಡೆಯನ್ನು ನಿರ್ಮಿಸಿದರು. ಈಗಾಗಲೆ ಶತ್ರುವು ತನ್ನ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಭಾರತೀಯರ ಕಡೆ ಹೆಚ್ಚು ನಷ್ಟವುಂಟಾಗತೊಡಗಿತು. ಶಸ್ತ್ರಾಸ್ತ್ರಗಳು ಖಾಲಿಯಾಗತೊಡಗಿದವು. ಮೇಜರ್ ಶರ್ಮ ಪಕ್ಕದಲ್ಲೆ ಇದ ಶತ್ರಾಸ್ತ್ರ ಸಂಗ್ರಹಕ್ಕೆ ಕೈಬಾಂಬೊಂದನ್ನು ಬಂದು ಬಿತ್ತು.

ಆದರೆ ಭಾರತೀಯ ಕೆಚ್ಚೆದೆಯ ಯೋಧರು ಪಾಕಿಸ್ತಾನಿ ಸೈನಿಕರು ಮುಂದೆ ಬರದಂತೆ ೬ ಗಂಟೆಗಳ ಕಾಲ ತಡೆಹಿಡಿದರು ಅಷ್ಟು ಸಮಯ ಸಾಕಾಗಿತ್ತು ಭಾರತೀಯರ ಇತರ ದಂಡುಗಳು ಬಂದು ಸೇರಿಕೊಳ್ಳಲು ಮುಂದಿನದ್ದೆಲ್ಲ ಇತಿಹಾಸ. ಮೇಜರ್ ಶರ್ಮ ಸೇರಿದಂತೆ ಇನ್ನೂ ೨೧ ಜನ ಸೈನಿಕರನ್ನು ಪಾಕಿಸ್ತಾನದ ಸೈನ್ಯ ಬಲಿ ತೆಗೆದುಕೊಂಡಿತ್ತು.

೧೯೪೮ರಲ್ಲಿ ಪ್ರಪ್ರಥಮ ಬಾರಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಅಪ್ರತಿಮ ಸಾಹಸ ಮೆರೆದ ಮೇಜರ್ ಸೋಮನಾಥಶರ್ಮರಿಗೆ ಪರಮವೀರ ಚಕ್ರ (ಮರಣೋತ್ತರ) ಪ್ರಶಸ್ತಿ ಪ್ರಧಾನ ಮಾಡಲಾಯಿತು. ೧೯೮೮ ರಿಂದ ೧೯೯೦ ರವರೆಗೆ ಈ ಮೇಜರ್ ಸೋಮನಾಥಶರ್ಮ ಅವರ ಸಹೋದರ ಜನರಲ್ ವಿ.ಎನ್ ಶರ್ಮ ಭಾರತೀಯ ಸೈನ್ಯದ ಅತ್ಯುನ್ನತ ಹುದ್ದೆ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದರು ಎಂಬುದು ಗಮನಾರ್ಹ.

ಮೇಜರ್ ಸೋಮನಾಥರಿಂದ ಬಂದ ಕೊನೆಯ ಸಂದೇಶ.

ಶತ್ರು ನಮ್ಮಿಂದ ಕೇವಲ ೫೦ ಯಾರ್ಡಗಳಷ್ಟು ದೂರದಲ್ಲಿದ್ದಾನೆ. ನಾವು ಅವರಿಗಿಂತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಾವು ಅತ್ಯಂತ ತೀವ್ರತರ ಗುಂಡಿನ ದಾಳಿಯನ್ನು ಎದುರಿಸುತ್ತಿದ್ದೇವೆ. ಆದರೂ ನಾವು ನಮ್ಮಲ್ಲಿ ಕಡೆಯ ಗುಂಡು ಕಡೆಯ ಪ್ರಾಣವಿರುವವರೆಗೆ ಇಲ್ಲಿಂದ ಒಂದಿಂಚೂ ಶತ್ರುವನ್ನು ಒಳಬಿಡುವುದಿಲ್ಲ.

ಕಾರ್ಗಿಲ್ ಯುದ್ದ ನಡೆದಿದ್ದು ಬಿಜೇಪಿಗಾಗಿ ಎಂದು ಸೈನ್ಯದ ಆತ್ಮ ಸ್ಥೈರ್ಯ ಕುಸಿಯುವಂತಹ ಮಾತನಾಡುವ ನಮ್ಮ ಸಂಸದರಿರುವವರೆಗೆ, ಇಂತಹ ದೇಶಭಕ್ತ ಸೈನಿಕರ ಸಾಹಸ ತ್ಯಾಗ ಬಲಿದಾನಗಳು ನಮ್ಮ ಪಠ್ಯಗಳಲ್ಲಿ ಅಳವಡಿಕೆಯಾಗುವುದಿಲ್ಲ.

No comments: