Saturday, January 9, 2010

ಮೂರುದಿನ ಮೂರು ಜಲಪಾತಗಳು

ಚಾರಣಕ್ಕೆ ಹೋಗ್ಲಿಕೆ ಮನಸ್ಸು ತವಕಿಸುವುದಕ್ಕೆ ಪ್ರಾರಂಭಿಸಿದಾಗಲೆ ಹತ್ತಿರದಲ್ಲಿ ಬರುವ ರಜೆ ದಿನಗಳನ್ನು ನಿರೀಕ್ಷಿಸುತ್ತಿದ್ದೆ. ಕ್ರಿಸಮಸ್ ಸಮಯದಲ್ಲಿ ನಾನು ಟ್ರೆಕಿಂಗ್ ಬರಲ್ಲ ಅಮ್ಮನ ಮನೆಗೆ ಹೋಗ್ತಿನಿ ಎನ್ನುವ ರಾಗ ಹಾಡಿದ ಹೆಂಡತಿಯ ಮಾತಿಗೆ ತಲೆದೂಗಿದೆ. ನಂಗೊತ್ತಿತ್ತು ಅದು ಅಪ್ಪಟ ಸುಳ್ಳೆಂದು, ನಾನು ಹೊರಟ ಮೇಲೆ ಆಕೆಯ ಕಾರ್ಯಕ್ರಮ ಬದಲಾಗಿ ನನ್ಜೊತೆ ಹೊರಡುವುದು ಶತಃಸಿದ್ದ ಎಂದು.

ಕೊಡಚಾದ್ರಿ ಮತ್ತು ಭೀಮೇಶ್ವರಕ್ಕೆ ಜೊತೆಯಾಗಿದ್ದ ರಾಘು ಬರುವುದಾಗಿ ತಿಳಿಸಿದರು. ಹೊಸ ಗೆಳೆಯರೊಂದಿಗೆ ಚಾರಣ ಮುದ ಕೊಡುತ್ತದೆ. ಅದರಲ್ಲೂ ಶಾಂತತೆಯೆ ಮೈವೆತ್ತಂತೆ ಇರುವ ರಾಘುವಿನ ಜೊತೆ ಪ್ರವಾಸ ಖಂಡಿತ ಒಳ್ಳೆಯ ಅನುಭವ ಕೊಡುತ್ತದೆ. ಅವರ ಸಹವಾಸದಿಂದಲಾದರೂ ನನಗೂ ಆ ಗುಣ ಬರಲಿ ಎನ್ನುವ ಆಶೆಯಿರಬೇಕು. ಆದರೆ ನನ್ನ ಪತ್ನಿ ನೀವ್ ಮಾತ್ರ ಅವ್ರ ಜೊತೆಗೆ ಹರಟೆ ಹೊಡ್ಕೊಂಡು ಸಂತೋಷವಾಗಿದ್ ಬಿಟ್ರೆ ಆಯ್ತ? ನನ್ಜೊತೆಗೆ ಯಾರೂ ಇರಲ್ಲ ಎನ್ನುವ ದೂರಿನ ಮೇರೆಗೆ, ರಾಘುವಿಗೆ ವಿಷಯ ಹೀಗಿದೆ ಹೆಂಡತಿ ಪ್ರವಾಸಕ್ಕೆ ಜೊತೆಗೂಡುವ ಸಂಭವವಿದೆ ಎಂದಾಗ ಸರಿ ಸರ್ ತಂಗಿಯರನ್ನು ಕರ್ಕೊಂಡ್ ಬರ್ತೀನಿ ಎಂದಿದ್ದು ನನ್ನ ಪತ್ನಿಗೆ ಅಗತ್ಯವಾಗಿ ಬೇಕಿದ್ದ ಜೊತೆಗಾರ್ತಿಯರ ಕೊರತೆ ನೀಗಿತ್ತು.

ಯಥಾ ಪ್ರಕಾರ ಚಾರಣದ ಜಾಗಗಳಿಗೆ ಅಂತರ್ಜಾಲ ತಾಣಗಳನ್ನು ಹುಡುಕುತ್ತಾ ಕುಳಿತೆ. ೨೫ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ೨೭ ರ ರಾತ್ರಿ ಹಿಂತಿರುಗುವಂತಹ ಸ್ಥಳಗಳು ನನ್ನ ಮೊದಲ ಆಯ್ಕೆ. ಸಂಪದದಲ್ಲೂ ಒಂದು ಮನವಿಯಿಟ್ಟೆ ಆದರೆ ಯಾವುದು ನನಗೆ ಪೂರಕವಾದ ಸಲಹೆಗಳು ಅಲ್ಲಿ ಸಿಗಲಿಲ್ಲ. ಮುಕ್ತಿಹೊಳೆ ಮತ್ತು ಬ್ರಹ್ಮಗಿರಿ ಗೆ ಹೋಗುವ ಮನಸ್ಸಿತ್ತು, ಆದರೆ ಬ್ರಹ್ಮಗಿರಿಯ ನರಿಮಲೆ ನಿರೀಕ್ಷಣಾ ಬಂಗಲೆ ಖಾಲಿಯಿರಲಿಲ್ಲದ್ದರಿಂದ ಆ ಜಾಗ ಕೈಬಿಡಬೇಕಾಯಿತು. ಮುಕ್ತಿಹೊಳೆ ಹೊನ್ನಾವರದ ಸಮೀಪವಿರುವುದರಿಂದ ಸುಮಾರು ೪೨೫ ಕಿಮೀಗಳಷ್ಟು ದೂರ ಕ್ರಮಿಸಿ ಒಂದೇ ಜಲಪಾತ ವೀಕ್ಷಿಸಿ ಹಿಂತಿರುಗುವುದು ಪ್ರಾಯೋಗಿಕವಲ್ಲ ಎಂದು ತೀರ್ಮಾನಿಸಿದೆ.

ನನ್ನ ಚಾರಣದ ಗುರುಗಳಾದ ರಾಜೇಶ್ ನಾಯಕ್ ಅವರಿಗೆ ಫೋನಾಯಿಸಿದೆ. ಮೊದಲೆರಡು ಪ್ರಯತ್ನಗಳಲ್ಲಿ ಸಿಗದ ರಾಜೇಶ್ ೩ ನೇ ಪ್ರಯತ್ನದಲ್ಲಿ ದೂರವಾಣಿ ಕರೆಗೆ ಓಗೊಟ್ಟರು. ಸಹಜವೇ ನನ್ನಂತೆ ಇನ್ನೆಷ್ಟು ಜನ ಅವರಿಗೆ ನನ್ನಂತೆ ತಲೆ ತಿನ್ತರೋ? ನನ್ನಂತಹವರಿಗೆಲ್ಲ ಸಲಹೆ ಕೊಡುವಷ್ಟ್ರಲ್ಲಿ ಅವರ ಅರ್ಧ ದಿನ ಮುಗಿದು ಹೋಗಿರುತ್ತದೆ. ಆದರೂ ಚಾರಣಿಗರ ಬಗ್ಗೆ ಅವರಿಗಿರುವ ಕಳಕಳಿ ಸ್ತುತ್ಯರ್ಹ. ಜಾಗ ಹೇಳ್ತಿನಿ ಆದ್ರೆ ಬ್ಲಾಗ್ ಬರೆದು ಆ ಜಾಗಗಳಿಗೆ ಪ್ರಚಾರ ಕೊಡ್ಬೇಡಿ ಅನ್ನುವ ಅವರ ನಿಭಂದನೆ, ಪರಿಸರದ ಬಗ್ಗೆ ಮತ್ತು ನಮ್ಮ ಕಾಡುಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಎಂದೂ ಕೂಡ ನನ್ನನ್ನು ಇದುವರೆಗೂ ರಾಜೇಶ್ ನಿರಾಸೆಗೊಳಿಸಿಲ್ಲ. ನನ್ನೆಲ್ಲ ಪ್ರಶ್ನೆಗಳಿಗೂ ಸಮಾಧಾನಕರವಾಗಿ ಉತ್ತರ ಹೇಳಿ ನನಗೆ ಬೇಕಾದ ಎಲ್ಲ ಅಗತ್ಯ ಮಾಹಿತಿ ಕೊಡುವ ರಾಜೇಶ್ ಗೆ ಈ ಮುಖೇನ ಧನ್ಯವಾದಗಳು. ಅಲ್ಲಿ ೪ ಜಲಪಾತಗಳಿವೆ ಎಂದು ತಿಳಿಸಿದ ರಾಜೇಶ್ ೨ ರ ಬಗ್ಗೆ ಮಾಹಿತಿಯಿತ್ತು ಇನ್ನೆರಡು ಜಲಪಾತಗಳ ಹೆಚ್ಚಿನ ವಿವರವನ್ನು ಹೊಳ್ಳ ಅವರಿಂದ ಪಡೆದುಕೊಳ್ಳಿ ಎಂದು ತಿಳಿಸಿದರು. ೪ ಜಲಪಾತಗಳಲ್ಲದೆ ದಾರಿಯಲ್ಲಿ ಸಿಗುವ ಆಲೇಕಾನ್ ಮತ್ತು ಕಬ್ಬಿನಸಂಕ ಜಲಪಾತಗಳಿಗೂ ಭೇಟಿ ಕೊಡಿ ಎಂಬ ಸಲಹೆ ಹೊಳ್ಳರವರಿಂದ. ಜಲಪಾತಕ್ಕೆ ತಲುಪುವ ಎಲ್ಲ ಮಾಹಿತಿಯಿತ್ತ ಹೊಳ್ಳ ಅವರಿಗೂ ಧನ್ಯವಾದಗಳು.

೨೫ ಚಪಾತಿಗಳ ಬುತ್ತಿ ಕಟ್ಟಿಕೊಂಡು ಬೆಳಿಗ್ಗೆ ವಿಜಯನಗರದ ಕಡೆಗೆ ಹೊರಟಾಗ ಸಮಯ ೭ ಗಂಟೆಯಿದ್ದಿರಬೇಕು. ನೆಲಮಂಗಲ ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಂದಾಗಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಕುಣಿಗಲ್ ತಲುಪಲು ಈ ಬಾರಿ ನಾನು ಆಯ್ದುಕೊಂಡದ್ದು ಮಾಗಡಿ ಮಾರ್ಗ. ಸ್ವಲ್ಪ ದೂರವೆನಿಸಿದರೂ ವಾಹನ ದಟ್ಟಣೆಯೆ ಇಲ್ಲದ ರಸ್ತೆ ಎನ್ನುವ ಅರಿವಿತ್ತು. ಆದರೆ ರಸ್ತೆಯ ಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಒಳ್ಳೆದಾಯ್ತು ಎಂದ ರಾಘು ವರ್ತುಲ ರಸ್ತೆಯ ಬಳಿ ಕಾಯುತ್ತಿರುವುದಾಗಿ ತಿಳಿಸಿದರು. ನೇರವಾಗಿ ಮಾಗಡಿ ನಂತರ ಕುಣಿಗಲ್ ತಲುಪಿದೆವು. ನನ್ನ ಊಹೆ ಸರಿಯಿತ್ತು ಈ ರಸ್ತೆಯಲ್ಲಿ ಸ್ವಲ್ಪವೂ ವಾಹನ ದಟ್ಟಣೆಯಿರಲಿಲ್ಲ. ರಸ್ತೆ ಸುಸ್ಥಿತಿಯಲ್ಲಿತ್ತು.

ನನ್ನ ಪ್ರವಾಸದ ಜೊತೆಗಾರರಾಗಿ ಚಿತ್ರ, ರಾಘು, ತೇಜಸ್ವಿನಿ, ಜಯಶ್ರೀ, ಗೌತಮ್, ಸುಹಾಸ್ ಮತ್ತು ಅಮಿತ್ ಭಾರದ್ವಾಜ್.

ಪರಸ್ಪರ ಪರಿಚಯಿಸಿಕೊಂಡ ನಂತರ ಕುಣಿಗಲ್ನ ಹೊಟೆಲ್ಲೊಂದರಲ್ಲಿ ಬೆಳಗಿನ ಉಪಹಾರ ಮುಗಿಸಿದೆವು. ನಮ್ಮ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ಅಲ್ಪ ವಿವರಣೆಯ ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಹಾಸನದಲ್ಲಿ ಚಹಾ ವಿರಾಮಕ್ಕೆ ನಿಂತಾಗ ಮಲ್ಲಳ್ಳಿ ಜಲಪಾತ ಮತ್ತು ಬಿಸ್ಲೆ ಘಟ್ಟದ ಬಗ್ಗೆ ತಿಳಿಸಿದೆ. ರಾಘು ಮತ್ತವರ ಗುಂಪು ಸರಿ ಆ ಜಲಪಾತವನ್ನು ನೋಡಿಯೇ ಹೋಗೋಣ ಎಂದರು. ಸಕಲೇಶಪುರದ ನಂತರ ದೋಣಿಗಲ್ ಸಮೀಪ ನಾವು ಮುಖ್ಯರಸ್ತೆಯಿಂದ ಎಡಕ್ಕೆ ತಿರುಗಬೇಕಾಗಿದೆಯೆಂದು ರಾಘುಗೆ ತಿಳಿಸಿದ್ದೆ. ಗಮನಿಸದೆ ಮುಂದುವರೆದ ರಾಘು ೧-೨ ನಿಮಿಷದಲ್ಲಿ ಹಿಂತಿರುಗಿ ಬಂದರು.

ಆಗಸ್ಟ್ ನಲ್ಲಷ್ಟೆ ಮಲ್ಲಳ್ಳಿ ಜಲಪಾತಕ್ಕೆ ಭೇಟಿ ಕೊಟ್ಟಿದ್ದರಿಂದ ದಾರಿ ಅಪರಿಚಿತವೆನಿಸಲಿಲ್ಲ. ಆದರೂ ಕೂಡು ರಸ್ತೆಗಳಲ್ಲಿ ನಾವು ಹೋಗುತ್ತಿರುವ ದಾರಿ ಸರಿಯಿದೆಯೆಂದು ಖಚಿತ ಪಡಿಸಿಕೊಳ್ಳುತ್ತಾ ಮುಂದುವರೆದೆವು. ಸುಮಾರು ೨.೧೫ ಸಮಯಕ್ಕೆ ಜಲಪಾತದ ಬಳಿ ತಲುಪಿದೆವು. ಕಳೆದ ಬಾರಿ ನನಗಾದ ಕೆಟ್ಟ ಅನುಭವ ನಮ್ಮ ವಾಹನಗಳನ್ನು ಕೆಳಗಿಳಿಸದಂತೆ ಮುಂಚೆಯೆ ಎಚ್ಚರಿಸಿತ್ತು. ವಾಹನವಿಳಿದು ನಡೆದೆವು ೧೦ ನಿಮಿಷಗಳ ನಡಿಗೆ ಜಲಪಾತದ ಬಳಿ ನಿಂತಿದ್ದೆವು. ಅದೇ ವಿಜಯ್ ಕುಮಾರ್ ನನ್ನನ್ನು ಕಂಡು ಹಿಡಿದದ್ದು ನನಗೆ ಆಶ್ಚರ್ಯ ತರಿಸಿತ್ತು.

ನೀರು ಕಡಿಮೆಯಾಗಿ ಜಲಪಾತದ ವೈಭವ ಕಡಿಮೆಯಾಗಿದ್ದರೂ ಕಳಪೆಯಾಗಿರಲಿಲ್ಲ. ಸಾರ್ ಜಲಪಾತದ ಬಳಿಗೆ ತೆರಳಲು ಕಾಲುದಾರಿ ನಿರ್ಮಿಸಿದ್ದಾರೆ ಹೋಗ್ಬನ್ನಿ ಎಂದರು ವಿಜಯ್ ಕುಮಾರ್. ರಾಘು ಕೂಡ ಹೋಗೋಣ ಎಂದಾಗ ಇಳಿಯಲು ಆರಂಭಿಸಿದೆವು. ೩ ಗಂಟೆಯಾಗಿತ್ತು ಮಧ್ಯಾನ್ಹದ ಊಟಕ್ಕೆ ನಮಗೆಲ್ಲೂ ಅವಕಾಶ ಸಿಕ್ಕಿರಲಿಲ್ಲ. ಜಲಪಾತ ಬಳಿ ಈಗಾಗಲೆ ಹೋಗಿದ್ದವರು ಹತ್ತುವುದು ತುಂಬಾ ಕಷ್ಟ ಎಂದು ಪುಕ್ಕಟೆ ಸಲಹೆಯಿತ್ತರು. ೭-೮ ಜನರ ಯುವಜನರ ಗುಂಪೊಂದು ನಮ್ಮನ್ನು ದಾಟಿ ಮುಂದೆ ಹೋಯಿತು.

ಆರಂಭದಲ್ಲಿ ಕಡಿದಾಗಿದ್ದರೂ ನಂತರದ ದಾರಿ ಸುಗಮವಾಗಿತ್ತು. ಬಂಡೆಯಿಂದ ಬಂಡೆಗೆ ಹಾರಿ ನೀರಿದ್ದ ಕಡೆ ಜಾರಿ ಜಲಪಾತದ ಸಮೀಪ ಬಂದು ನಿಂತಾಗ ಎಲ್ಲರಿಗೂ ನೀರಿನ ಹನಿಗಳ ಸಿಂಚನ. ನೀರಿಗಿಳಿಯುವ ಮನಸ್ಸಾದರೂ ಎಲ್ಲಿಯೂ ಸರಿಯಾದ ಜಾಗವಿಲ್ಲದ್ದರಿಂದ ಸಾಧ್ಯವಾಗಲಿಲ್ಲ. ಈ ಮಧ್ಯೆ ಯುವ ಗುಂಪಿನಲ್ಲೊಬ್ಬ ಜಾರಿ ೮-೧೦ ಅಡಿಗಳಷ್ಟು ಕೆಳಗಿದ್ದ ನೀರಿಗೆ ಬಿದ್ದ. ಹೆಚ್ಚು ಆಳವಿಲ್ಲದ್ದರಿಂದ ಅನಾಹುತವೇನೂ ಸಂಭವಿಸಲಿಲ್ಲ. ಬಹುಶಃ ಅದೇ ನೀರಿಗಿಳಿಯುವ ಸರಿಯಾದ ಮಾರ್ಗವಿರಬೇಕು!

ಸುದೀರ್ಘ ಛಾಯಾಚಿತ್ರದ ಅವಧಿ ಮುಗಿಸಿ ಹಿಂತಿರುಗುವಾಗ ಅಮಿತ್ ಹೊಟ್ಟೆ ಹಸಿಯುತ್ತಿದೆ ಎಂದು ವರಾತ ತೆಗೆದ ತಿಂಡಿಯೆಲ್ಲವನ್ನೂ ಕಾರಿನಲ್ಲೆ ಬಿಟ್ಟಿದ್ದರಿಂದ ಅನಿವಾರ್ಯವಾಗಿ ಕಾರಿನವರೆಗೂ ಖಾಲಿ ಹೊಟ್ಟೆಯಲ್ಲೆ ನಡೆಯಬೇಕಾಯಿತು. ಬ್ರೆಡ್ ಮತ್ತು ಕುರುಕಲು ತಿಂಡಿಗಳೇ ಊಟವಾಯಿತು. ಹಿಂತಿರುಗಿ ಪುಷ್ಪಗಿರಿ ಮುಖ್ಯ ರಸ್ತೆ ತಲುಪಿ ೧೦ ನಿಮಿಷವಾದರೂ ರಾಘು ಬರದಿದ್ದಾಗ ಆತಂಕ ಕಾಡತೊಡಗಿತು. ಮೊದಲೆ ಕಿರಿದಾದ ರಸ್ತೆ ತಕ್ಷಣ ವಾಹನ ಹಿಂತಿರುಗಿಸಿ ಬಂದ ದಾರಿಯಲ್ಲೆ ಹಿಂತಿರುಗುತ್ತಿದ್ದಾಗ ದಾರಿಯನ್ನು ತಪ್ಪಾಗಿ ಊಹಿಸಿ ದಾರಿಹೋಕರಲ್ಲಿ ವಿಚಾರಿಸುತ್ತಿದ್ದ ರಾಘು ತಂಡ ಕಾಣಿಸಿತು.

ನೇರವಾಗಿ ಬಿಸ್ಲೆಘಟ್ಟಕ್ಕೆ ಬಂದೆವು. ಬಿಸ್ಲೆ ಸುಂದರ ಸ್ಥಳದಲ್ಲಿ ಕೆಲವು ಛಾಯಾ ಚಿತ್ರಗಳ ನಂತರ ರಸ್ತೆಯಿತ್ತೆ ಇಲ್ಲಿ ಎನ್ನುವಂತಹ ಬಿಸ್ಲೆಘಟ್ಟದ ರಸ್ತೆಯಲ್ಲಿ ಕಾರು ನಿಧಾನವಾಗಿ ಚಲಿಸತೊಡಗಿತು. ದೊಡ್ಡ ಕಲ್ಲುದುಂಡಿಗಳ ಮೇಲೆಯೆ ಕಾರು ಓಡುತ್ತಿತ್ತು. ಕತ್ತಲು ಆವರಿಸಿದಂತೆ ವೇಗ ಕಡಿಮೆಯಾಗತೊಡಗಿತು. ಕತ್ತಲಿನಲ್ಲಿ ಕಾಣದೆ ಗುಂಡಿಯನ್ನು ಇಳಿಸಿದಾಗ ನನ್ನ ಕಾರಿನ ಮುಂಭಾಗಕ್ಕೆ ರಸ್ತೆಯಲ್ಲಿದ್ದ ಕಲ್ಲು ಬಲವಾಗಿಯೇ ಬಡಿಯಿತು. ಅಬ್ಬ ಕೊನೆಗೊಮ್ಮೆ ಡಾಂಬರು ರಸ್ತೆ ಕಾಣಿಸಿದಾಗ ಸ್ವರ್ಗವೇ ಸಿಕ್ಕಷ್ಟು ಸಂತೋಷ. ಸುಬ್ರಹ್ಮಣ್ಯ ತಲುಪಿದಾಗ ೭ ಗಂಟೆಯಿರಬೇಕು ಎಲ್ಲೆಲ್ಲೂ ಜನಜಂಗುಳಿ. ವಾಹನ ನಿಲ್ದಾಣದಲ್ಲಿ ಕಾರು ನಿಲ್ಲಿಸಿದಾಗ ಕೆಲವು ವಾಹನ ಚಾಲಕರು ಸಾರ್ ನೋಡಿ ನಿಮ್ಕಾರ್ ಪಂಚರ್ ಆಗಿದೆ ಎಂದರು ಅವರಲ್ಲೊಬ್ಬ ಸಾರ್ ಆಯಿಲ್ ಸಹ ಸೋರ್ತಿದೆ ಎಂದಾಗ ಎದೆ ಧಸ್ಸಕ್ಕೆಂದಿತು. ನನ್ನ ಊಹೆ ಸರಿಯಿತ್ತು. ಕಲ್ಲು ಬಡಿದಾಗ ಆದ ಆನಾಹುತ ಅದು. ಕಾರು ದುರಸ್ಥಿಯಾಗಿ ಮತ್ತೆ ರಸ್ತೆಗಿಳಿದಾಗ ಸಮಯ ರಾತ್ರಿ ೯.೩೦. ತನ್ನ ವಾಹನದಲ್ಲಿ ಊರೆಲ್ಲ ತಿರುಗಿ ತಂತ್ರಜ್ಞನನ್ನು ಹುಡುಕಿ, ವಾಹನ ದುರಸ್ಥಿಗೊಳಿಸಲು ಸಹಾಯ ಹಸ್ತ ಚಾಚಿದ ರಾಘುವಿಗೊಂದು ಧನ್ಯವಾದ.

ನನ್ನ ವಾಹನ ದುರಸ್ಥಿಗೆ ಸಹಕರಿಸಿದ ಆ ಎಲ್ಲ ಜನರಿಗೂ, ಸುಬ್ರಹ್ಮಣ್ಯದ ವಾಹನ ತಂತ್ರಜ್ಞ ರೋಹಿತ್ ಗೆ ವಿಶೇಷ ಧನ್ಯವಾದಗಳು. ದುರಸ್ಥಿಯಾಗುವಷ್ಟರಲ್ಲಿ ತಂಡದ ಎಲ್ಲರ ಊಟವಾಗಿತ್ತು. ದೇವರ ದರ್ಶನದ ಮಾತಂತೂ ದೂರವೇ ಉಳಿದಿತ್ತು. ಈಗ ವಸತಿ ಸಮಸ್ಯೆ ಅದನ್ನು ಬಗೆ ಹರಿಸಿದ್ದು ರಾಘು. ಧರ್ಮಸ್ಥಳಕ್ಕೆ ಮುನ್ನ ಸಿಗುವ ದೋಸೆ ಕ್ಯಾಂಪ್ ಮಾಲೀಕ ರಾಘು ಅವರ ಕುಟುಂಬ ಸ್ನೇಹಿತ ಅವರ ಮನೆಯಲ್ಲಿ ವಸತಿ.

ಸಕ್ಕತ್ತಾಗಿದ್ದ ನೀರ್ದೋಸೆ ಮಸಾಲೆದೋಸೆ ಎಷ್ಟು ಖಾಲಿಯಾದವೆಂದು ಲೆಕ್ಕವಿಲ್ಲ. ಅವರಿಗೊಂದು ಧನ್ಯವಾದ ಅರ್ಪಿಸಿ ನಮ್ಮ ಪ್ರಯಾಣ ಮುಂದುವರೆಯಿತು. ಪಂಚರ್ ಆಗಿದ್ದ ಚಕ್ರವನ್ನು ದುರಸ್ತಿಗೊಳಿಸಿ ಧರ್ಮಸ್ಥಳದ ಒಳಗೆ ಬಂದಾಗ ಅದೇ ಜನಜಾತ್ರೆ. ದರ್ಶನವಂತೂ ಸಾಧ್ಯವೇ ಇರದ ಸ್ಥಿತಿ. ನಮ್ಮ ಪ್ರಯಾಣ ಮುಂದುವರೆಯಿತು. ಹೊಳ್ಳ ಅವರ ಮಾಹಿತಿಯಂತೆ ಅಲ್ಲಿ ಸಿಕ್ಕ ಅಂಗಡಿಯೊಂದರಲ್ಲಿ ಮಾಹಿತಿಗಾಗಿ ಪ್ರಯತ್ನಿಸಿದೆ. ಆತ ಅಂತಹ ಜಲಪಾತ ಇಲ್ಲಿ ಎಲ್ಲೂ ಇಲ್ಲ ಎನ್ನುತ್ತ ಕೈಯಾಡಿಸಿದರು. ಮುಂದೆ ವಿಚಾರಿಸಿದರಾಯಿತು ಎಂದು ಹಿಂತಿರುಗುತ್ತಿದ್ದವನಿಗೆ ಎದುರಿಗೆ ಸಿಕ್ಕ ವ್ಯಕ್ತಿ ಓಹ್ ಆ ಅರ್ಬಿನಾ? ಇಲ್ಲಿಂದ ೧೬ ಕಿ ಮೀ ದೂರದಲ್ಲಿ ಊರು ಸಿಗುತ್ತೆ ಅಲ್ಲಿ ಕೇಳಿ ಎಂದು ಮಾಹಿತಿಯಿತ್ತರು.
-
ನಮ್ಮ ಪ್ರಯಾಣ ಜಲಪಾತ ಅರಸುತ್ತಾ ಸಾಗಿತು. ಅಲ್ಲಲ್ಲಿ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಸಾಗಿ ಕೊನೆಗೊಮ್ಮೆ ಊರು ಸೇರಿ ಅಂಗಡಿಯೊಂದರಲ್ಲಿ ವಿಚಾರಿಸಿದೆವು. ಕುಳಿತಿದ್ದ ಆ ವ್ಯಕ್ತಿ ನಡಿಲಿಕ್ಕೆ ತುಂಬಾ ದೂರ ಉಂಟು ಎಂದರು. ಅಂಗಡಿಯಲ್ಲಿದ್ದ ಪುಟ ಹುಡುಗಿ ನಿನ್ನೆ ಹೋಗ್ಬಂದೆ ೧೧ ಕ್ಕೆ ಹೊರಟು ೧೨ ಕ್ಕೆ ಜಲಪಾತ ತಲುಪಿದೆವು ಎಂದು ಹೇಳಿ ನಕ್ಕಳು. ಆ ಸಮಯಕ್ಕೆ ಆ ವ್ಯಕ್ತಿ ಹಳ್ಳಿಯ ನಾಲ್ಕೈದು ಜನರೊಡನೆ ವಿಚಾರ ವಿನಿಮಯದ ನಂತರ ಜೀಪ್ ಉಂಟಲ್ಲ ಅದರಲ್ಲಿ ಹೋಗಿ ಏಯ್ ಸುಂದರ ಜೀಪ್ ತಗೊಂಡ್ ಬಾ ಅಂತ ಹೇಳು ಎಂದರು ೨ ನಿಮಿಷದಲ್ಲಿ ಜೀಪ್ ಬಂತು. ೪೫೦ ರೂ ಕೊಡಿ ಸಾರ್ ಅಲ್ಲೆ ಇದ್ದು ಕರ್ಕೊಂಡು ಬರ್ತೇನೆ ಎಂದ ಸುಂದರನ ಜೀಪ್ ಹತ್ತಿ ಹೊರಟೆವು.

ಅರ್ಧ ಗಂಟೆ ದಟ್ಟ ಕಾಡಿನ ಮಧ್ಯೆ ಇರುವ ಜೀಪ್ ರಸ್ತೆಯಲ್ಲಿ ಪಯಣಿಸಿದ ನಂತರ ಮನೆಯೊಂದರ ಮುಂದೆ ಸುಂದರನ ಜೀಪ್ ನಿಂತಿತು. ಈ ದೂರವನ್ನು ನಾವೇನಾದ್ರೂ ನಡೆದಿದ್ದರೆ ಖಂಡಿತ ನಮಗೆ ೨-೩ ಗಂಟೆಗಳ ಸಮಯ ಬೇಕಾಗುತ್ತಿತ್ತು. ಇಲ್ಲಿಂದ ನಡೆಯಬೇಕು ಎಂದ ಸುಂದರನಿಗೆ ಮಾರ್ಗದರ್ಶನ ಮಾಡಲು ಕೋರಿದೆ. ಆ ಮನೆಯಲ್ಲಿ ಬರೀ ಲಂಗೋಟಿಯಲ್ಲಿ ನಿಂತಿದ್ದ ವಯಸ್ಸಾದ ವ್ಯಕ್ತಿ ಹತ್ತಿರವಿದ್ದ ಅರೆಬೆತ್ತಲೆಯಲ್ಲಿದ್ದ ವ್ಯಕ್ತಿಗೆ ಕತ್ತಿ ತಗೊಂಡು ಕರ್ಕೊಂಡ್ ಹೋಗ್ಬಾ ಎಂದು ಸೂಚನೆಯಿತ್ತರು. ಸರಿ ಕಾಡಿನಲ್ಲಿ ನಮ್ಮ ನಡಿಗೆ ಆರಂಭ. ಅವರ ತೋಟವನ್ನು ದಾಟಿ ದಟ್ಟ ಕಾಡಿನೊಳಗೆ ಪ್ರವೇಶಿಸಿ ನಡೆಯಲಾರಂಭಿಸಿದೆವು. ಜಿಗಣೆಗಳ ಆತಂಕವಿರಲಿಲ್ಲ. ೨೦ ನಿಮಿಷದ ನಂತರ ಜಲಪಾತದ ಬುಡಕ್ಕೆ ಬಂದು ನಿಂತಿದ್ದೆವು. ಊಹ್, ವಾವ್, ಸಖತ್ ಎನ್ನುವ ಉದ್ಗಾರಗಳು ಕೇಳಿಸಿದವು. ಜೀಪ್ ಹತ್ತಿರ ಕಾಯ್ತಿರ್ತಿನಿ ಬೇಗ ಬನ್ನಿ ಎಂದು ಹೇಳಿ ಸುಂದರ್ ಮತ್ತೆ ಜೊತೆಗೆ ಬಂದಿದ್ದ ಆ ವ್ಯಕ್ತಿ ಹಿಂತಿರುಗಿದರು. ಬಂಡೆಗಳ ಹಿನ್ನೆಲೆಯಿರುವ ಜಲಪಾತ ಮೊದಲ ನೋಟಕ್ಕೆ ಒಂದೇ ಹಂತದಲ್ಲಿ ನೇರವಾಗಿ ಜಿಗಿಯುವಂತೆ ಕಂಡರೂ ಅಲ್ಲಲ್ಲಿ ಬಂಡೆಗಳ ಮೇಲೆ ಬಿದ್ದು ಸುಂದರ ಜಲಪಾತವಾಗಿ ಪರಿಣಮಿಸಿದೆ.

ಹೊರೆಗಳನ್ನೆಲ್ಲಾ ಇಳಿಸಿ ನೇರವಾಗಿ ಜಲಪಾತದಡಿಗೆ ತೆರಳಿ ಬೀಳುತ್ತಿದ್ದ ನೀರಿಗೆ ಮೈಯೊಡ್ಡಿದರೆ ಅನುಭವಕ್ಕೆ ಬರುವ ಸುಖ ಪದಗಳಲ್ಲಿ ಹೇಳಲಾಗದು. ಪುಕ್ಕಟೆ ಮಸಾಜ್ ಕೂಡ. ೧ ಗಂಟೆಯ ನೀರಾಟದ ನಂತರ ತಂದಿದ್ದ ಬುತ್ತಿ ಬಿಚ್ಚಿ ಕೂತೆವು. ೧ ಗಂಟೆಯ ಆಸು ಪಾಸಿನಲ್ಲಿ ಊಟ ಮುಗಿಸಿ ಹಿಂತಿರುಗತೊಡಗಿದೆವು ೧೦ ನಿಮಿಷದಲ್ಲಿ ಮನೆ ತಲುಪಿ ಬಟ್ಟೆ ತೊಟ್ಟಿದ್ದ ಆ ಹಿರಿಯ ವ್ಯಕ್ತಿ ಇದರಲ್ಲಿ ಸರ್ಕಾರಿ ಅಧಿಕಾರಿ ಯಾರು ಎಂದು ಕೇಳಲು ವರಾತ ಹಚ್ಚಿದರು. ಸರಿ ಆ ವ್ಯಕ್ತಿಯ ಆಶೆ ಪೂರೈಸಿ ಜೀಪ್ ಹತ್ತಿ ಹೊರಟೆವು. ವಾರದಲ್ಲಿ ೨-೩ ತಂಡ ಮಾತ್ರ ಬರುತ್ತೆ ಸಾರ್ ಎಂದರು ಸುಂದರ್. ಒಳ್ಳೆದಾಯ್ತು ಬಿಡಪ್ಪ ಅದಕ್ಕೆ ಇನ್ನೂ ಈ ಜಲಪಾತ ತನ್ನ ನಿಸರ್ಗ ಸೌಂದರ್ಯವನ್ನು ಉಳಿಸಿಕೊಂಡಿದೆ ಇಲ್ಲಾಂದ್ರೆ ಅಷ್ಟೆ ಎನ್ನುತ್ತಾ ಜೀಪ್ನಿಂದಿಳಿದು ಕಾರ್ ಹತ್ತಿ ನಮ್ಮ ಮೂಲ ಸ್ಥಾನಕ್ಕೆ ಹಿಂತಿರುಗಿ ಲಾಡ್ಜ್ ಒಂದನ್ನು ತೆಗೆದು ಕೊಂಡು ನಿದ್ದೆಗೆ ಶರಣು.

ಸಂಜೆ ೫ ಗಂಟೆಯ ಸಮಯಕ್ಕೆ ಮತ್ತೆ ಪ್ರಯಾಣ ಆರಂಭ ಈ ಬಾರಿ ಸಮೀಪದಲ್ಲಿದ್ದ ಸುರ್ಯ (ಸೂರ್ಯ ಅಲ್ಲ) ದೇವಸ್ಥಾನದ ಕಡೆಗೆ, ಸುರ್ಯದಲ್ಲಿರುವ ಶಿವನ ದೇವಸ್ಥಾನಕ್ಕೆ. ಇಲ್ಲಿನ ವಿಶೇಷ, ಹರಕೆ ಹೊತ್ತವರು ಈಡೇರಿದ ಮೇಲೆ ಹರಕೆ ತೀರಿಸುವ ವಿಧಾನ. ತೊಂದರೆಯಿದ್ದವರು ಅಥವ ತಮಗೇನು ಬೇಕೆಂದು ಹರಸಿಕೊಂಡವರು ಅದು ಈಡೇರಿದರೆ ಈಡೇರಿದ ಹರಕೆಯ ಮಣ್ಣಿನ ಆಕೃತಿಯನ್ನು ಇಲ್ಲಿಗೆ ಅರ್ಪಿಸಿ ಹರಕೆ ತೀರಿಸಿಕೊಳ್ಳಬೇಕಾಗುತ್ತದೆ. ಬಹುಶಃ ಯಾವುದೋ ೨೪ ಗಂಟೆ ವಾರ್ತಾ ವಾಹಿನಿ ಇದರ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲ ಪ್ರಸರಿಸಿರಬೇಕು ಅದಕ್ಕೆ ಇಲ್ಲಿ ಜನಜಾತ್ರೆ ಸೇರುತ್ತದೆ. ಸದ್ಯ ನಾವು ಸಂಜೆ ಬಂದಿದ್ದರಿಂದ ಜನಜಂಗುಳಿಯಿರಲಿಲ್ಲ.

ಕತ್ತಲಾವರಿಸಿತ್ತು. ನಾವುಳಿದುಕೊಂಡಿದ್ದ ಊರಿನಲ್ಲಿ ಸಸ್ಯಾಹಾರಿ ಊಟ ಸಿಗುವುದು ಕಷ್ಟವಾದ್ದರಿಂದ ಪಕ್ಕದೂರಿನಲ್ಲಿ ಊಟ ಮಾಡಿಕೊಂಡು ಬಂದು ಲಾಡ್ಜ್ ಗೆ ಹಿಂತಿರುಗಿದೆವು. ಬೆಳಿಗ್ಗೆ ಬೇಗನೆ ಎದ್ದು ತಣ್ಣೀರಿನಲ್ಲೆ ಸ್ನಾನ ಮುಗಿಸಿ ರಾಘು ಅವರ ಸ್ನೇಹಿತನ ಮಾರ್ಗದರ್ಶನದಂತೆ ಧರ್ಮಸ್ಥಳದ ಮಂಜುನಾಥನ ದರ್ಶನಗೈಯಲು ಹೊರಟೆವು. ನನಗೆ ಖಚಿತವಾಗಿ ಅರಿವಿತ್ತು ಅದು ಸಾಧ್ಯವಿಲ್ಲದ ಮಾತೆಂದು. ಆದರೂ ಮನೆಯಲ್ಲಿ ತೀರ್ಥಕ್ಷೇತ್ರಕ್ಕೆ ಹೋಗುವುದಾಗಿ ಹೇಳಿ ಬಂದಿದ್ದೇವೆ ಆದ್ದರಿಂದ ಪ್ರಯತ್ನ ಮಾಡುವ ಎಂದ ಸಂಗಡಿಗರನ್ನು ನಿರಾಶೆ ಮಾಡಬಾರದೆಂದು ಹೊರಟಿದ್ದಾಯ್ತು. ಧರ್ಮಸ್ಥಳಕ್ಕೆ ಬರುವ ದಾರಿಯಲಿ ನೇತ್ರಾವತಿ ಬಳಿ ೧೫-೨೦ ನಿಮಿಷಗಳ ವಾಹನ ದಟ್ಟಣೆಯಿಂದಾಗಿ ನಮ್ಮ ವಾಹನಗಳು ನಿಂತಲ್ಲೆ ನಿಂತವು. ದಾರಿಯಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲ ಪ್ರವಾಸಿಗರ ವಾಹನಗಳಿದ್ದವು. ನದಿಯುದ್ದಕ್ಕೂ ಗಿಜಿಗುಡುತ್ತಿದ್ದ ಜನರು. ಈ ಮಧ್ಯೆ ವಾಹನವನ್ನೂ ಕೂಡ ನದಿಯಲ್ಲೆ ತೊಳೆಯುತ್ತಿದ್ದವರು ಮಾಲಿನ್ಯಕ್ಕೆ ತಂತಮ್ಮ ಕಾಣಿಕೆಗಳನ್ನು ಯಥಾವತ್ತಾಗಿ ಸಲ್ಲಿಸುತ್ತಿದ್ದರು. ರಸ್ತೆಯ ಬದಿಯಲ್ಲೆ ಮಲಗಿದ್ದವರು ವಾಹನಗಳನ್ನು ರಾತ್ರಿ ನಿಲ್ಲಿಸಿ ಅಲ್ಲಿಯೆ ನಿದ್ದೆ ಹೋಗಿದ್ದ ಜನರೆಷ್ಟೋ?

ದೇವಳದ ಬಳಿ ಬಂದಾಗ ರಾಘು ಸ್ನೇಹಿತ, ಸಾವಿರಾರು ಜನ ಹರಿದು ಬಂದಿರುವುದರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದಿಲ್ಲವೆಂದು ಕೈಯೆತ್ತಿ ಬಿಟ್ಟರು. ಹುಂಡಿಗೆ ಕಾಣಿಕೆಯನ್ನು ಅರ್ಪಿಸಿ, ಒಳಗೆ ಕಾಲಿಡಲೂ ಕಷ್ಟವಿದ್ದ ಹೊಟೆಲ್ನಲ್ಲಿ ತಿಂಡಿ ತಿಂದು ಮತ್ತೆ ಬಂದ ದಾರಿಯಲ್ಲೆ ಹಿಂತಿರುಗಿ ಚಾರ್ಮಡಿ ದಾರಿಯಲ್ಲಿ ಮುಂದುವರೆದು ಸ್ವಲ್ಪ ದೂರದ ನಂತರ ಎಡ ತಿರುವು ತೆಗೆದುಕೊಂಡು ನಮ್ಮ ಗಮ್ಯವಾದ ಮತ್ತೊಂದು ಜಲಪಾತದ ಹತ್ತಿರ ಊರನ್ನು ಸೇರಿದಾಗ ಸಮಯ ೧೦.೩೦.

ಇಲ್ಲೊಂದು ಜಲಪಾತವಿದೆಯಲ್ಲ ಅಲ್ಲಿಗೆ ಹೋಗುವ ದಾರಿ ಹೇಗೆಂದು ಅಲ್ಲಿದ್ದ ಒಂದಿಬ್ಬರನ್ನು ವಿಚಾರಿಸಿದೆ. ಜೀಪ್ ಇದೆ ಕರೀತೇನೆ ಹೋಗಿ ಸ್ವಲ್ಪ ದೂರ ಮಾತ್ರ ನಡಿಬೇಕು ಎಂದು ಸಂದೇಶ್ ಎಂಬ ವ್ಯಕ್ತಿಯ ಜೀಪ್ ತಂದು ನಿಲ್ಲಿಸಿದರು. ೧೦ ನಿಮಿಷದ ಜೀಪ್ ದಾರಿ ಸವೆಸುತ್ತಿದ್ದಂತೆ ಇಬ್ಬರು ಅಗಂತುಕರು ಜೀಪ್ ಗೆ ಕೈ ನೀಡಿ ನಿಲ್ಲಿಸಿದರು. ಅರಣ್ಯ ಇಲಾಖೆಯ ಟೋಪಿ ಧರಿಸಿದ್ದ ವ್ಯಕ್ತಿಗಳಿಬ್ಬರು ಇದು ಕುದುರೆಮುಖ ಅಭಯಾರಣ್ಯ ವ್ಯಾಪ್ತಿಗೆ ಬರುವುದರಿಂದ ಒಳಗೆ ಹೋಗಲು ಪೂರ್ವಾನುಮತಿ ಬೇಕೆಂದು ವರಾತ ತೆಗೆದ. ಈ ವಿಷಯವನ್ನು ಸಂದೇಶನೊಂದಿಗೆ ನಾನು ಚರ್ಚೆ ಮಾಡಿದ್ದೆ ಸಂದೇಶನ ಮುಖ ನೋಡಿದೆ ಅಪರಾಧಿ ಮನೋಭಾವದ ನಗೆ ಬೀರಿದ. ಏಕೆಂದರೆ ಈ ಮಾಹಿತಿ ನನಗೆ ಕೆಲವು ಬ್ಲಾಗ್ ಗಳಿಂದ ತಿಳಿದು ಬಂದಿತ್ತು. ಆದರೂ ಸಂದೇಶ್ ಹಾಗೇನಿಲ್ಲ ಸಾರ್ ಎಂದು ತಿಪ್ಪೆ ಸಾರಿಸಿದ್ದ. ಪೂರ್ವಾನುಮತಿಯಿಲ್ಲದೆ ಬಿಡಲು ಸಾಧ್ಯವಿಲ್ಲ ಎಂದು ಆತ ಹೇಳಿದಾಗ ಸಣ್ಣದಾಗಿ ನಗೆಯೊಂದು ನನಗೇ ಗೊತ್ತಿಲ್ಲದಂತೆ ಹಾಯ್ದು ಹೋಯ್ತು.

ನಿನ್ನೆ ನಿಮ್ಮ ಅರಣ್ಯ ಇಲಾಖೆಯ ಕಛೇರಿಗೆ ಹೋಗಿದ್ದೆ ಅಲ್ಲಿ ಅನುಮತಿ ಕೊಡಲು ಯಾರೂ ಇರ್ಲಿಲ್ಲ ಎಂದೆ. ಅವನ ಉದ್ದೇಶ ಅದಕ್ಕಿರುವ ಹಣವನ್ನು ತಾನೇ ತೆಗೆದು ಕೊಳ್ಳಬೇಕೆಂಬುದು ನನಗೆ ತಿಳಿದಿತ್ತು. ನಾನು ಕಾರ್ಕಳದ ಜಯನಾರಾಯಣವನ್ನು ಸಂಪರ್ಕಿಸಿ ಅನುಮತಿ ತೆಗೆದು ಕೊಂಡಿದ್ದೇನೆ ಬೇಕೆಂದರೆ ಮಾತನಾಡಿ ನೀವೆ ಎಂದು ನನ್ನ ದೂರವಾಣಿ ತೆಗೆದೆ. ಇಬ್ಬರೂ ಈಗ ಪರಸ್ಪರ ಮುಖ ನೋಡಿಕೊಂಡರು. ನೀವು ಡಿ ಸಿ ಎಫ್ ಕಡೆಯವರ ಸಾರ್ ಎಂದು ತಾನೆ ಪ್ರಶ್ನೆ ಹಾಕಿಕೊಂಡವ ಹಾಗಾದ್ರೆ ಹೋಗಿ ಸಾರ್ ಎಂದ. ತತ್ ಕ್ಷಣವೇ ಇರಿ ನಾನೂ ಬರ್ತಿನಿ ನಿನ್ನೆ ಮಳೆ ಬಂದಿರುವುದರಿಂದ ಕಷ್ಟ ಆಗುತ್ತೆ ನಾನೇ ಕರ್ಕೊಂಡು ಹೋಗ್ತಿನಿ ಎಂದು ಜೀಪ್ ಹತ್ತಿದ ಆಸಾಮಿ.

ಹೆಗ್ಗಡೆಯವರ ಮನೆಯ ಬಳಿ ಜೀಪ್ ನಿಲ್ಲಿಸಿ ನಡೆಯಲು ಆರಂಭಿಸಿದೆವು. ನಿನ್ನೆ ಬಿದ್ದ ಧಾರಾಕಾರ ಮಳೆಯಿಂದ ನೆಲವೆಲ್ಲ ತೋಯ್ದು ಹೋಗಿತ್ತು. ಜಿಗಣೆ ಸಂಖ್ಯೆ ಹೆಚ್ಚಿರಬಹುದೆಂಬ ನನ್ನ ಊಹೆ ತಪ್ಪಾಗಿತ್ತು. ಹರಿಯುತ್ತಿದ್ದ ಝರಿಯ ತಟದಲ್ಲೆ ಕೆಲವೊಮ್ಮೆ ನೀರನ್ನು ದಾಟುತ್ತಾ ಬಂಡೆಗಳ ಮೇಲೆ ನಡೆಯುತ್ತಾ ಅರ್ಧ ಗಂಟೆಯಲ್ಲಿ ಜಲಪಾತದ ಬಳಿ ಸೇರಿದೆವು. ಅಲ್ಲಾಗಲೆ ಒಂದು ಗುಂಪು ಜಲಪಾತದಡಿಯಲ್ಲಿ ನಿಂತಿತ್ತು. ನಿಧಾನವಾಗಿ ಅವರು ಜಾಗ ಖಾಲಿ ಮಾಡಿದಂತೆ ನಾವು ಆ ಜಾಗವನ್ನು ಆಕ್ರಮಿಸಿದೆವು. ಜಲಪಾತವಂತೂ ಸೂಊಊಪರ್ಬ್ ಸಾರ್ ಎಂದು ರಾಘು ಮೆಚ್ಚುಗೆ ವ್ಯಕ್ತಪಡಿಸಿದರು. ಜಲಪಾತದಡಿಗೆ ನಡೆಯುವಾಗ ಮೇಲಿನಿಂದ ಬೀಳುವ ನೀರು ಸಿಂಪಡಿಸಿ ಅಲ್ಲಲ್ಲಿ ಜಾರುತ್ತಿತ್ತು. ಆದರೂ ಬಿಡದೇ ನೇರವಾಗಿ ಜಲಪಾತದಡಿಯಲ್ಲಿ ನಿಂತೆವು. ನೋಟದಲ್ಲಿ ಕೋಡ್ಲುತೀರ್ಥ ಜಲಪಾತವನ್ನು ಹೋಲುವ ಜಲಪಾತ ನಿನ್ನೆ ಬಿದ್ದಿದ್ದ ಮಳೆಯಿಂದಾಗಿ ಮೈದುಂಬಿಕೊಂಡಿತ್ತು. ವರ್ಷ ಪೂರ್ತಿ ನೀರಿರುವುದು ಇದರ ವಿಶೇಷ. ಈ ಮಧ್ಯೆ ನಾವು ನಿಂತಿದ್ದ ಪ್ರದೇಶದ ಮೇಲ್ಭಾಗದಿಂದ ಕಲ್ಲೊಂದು ಜಾರುವ ಶಬ್ದ ಭಯ ಹುಟ್ಟಿಸಿತು. ತಕ್ಷಣವೇ ನಮ್ಮೊಡನೆ ಬಂದಿದ್ದ ಆ ವ್ಯಕ್ತಿ ಓಡಿ ಆ ಕಡೆ ಹೋಗಿ ಎಂದು ಕಿರುಚಿಕೊಂಡ. ದೊಡ್ಡ ಕಲ್ಲೊಂದು ಬಂದು ನಾವು ನಿಂತಿದ್ದ ಸಮೀಪವೇ ಬಂದು ಬಿತ್ತು.

ಹಿಂತಿರುಗಿ ಬಂದು ಊರು ಸೇರಿದಾಗ ಗಡಿಯಾರ ೧.೦೦ ಗಂಟೆ ತೋರಿಸುತ್ತಿತ್ತು. ನಾನಂತೂ ಆ ಹಳ್ಳಿಯ ಸೌಂದರ್ಯಕ್ಕೆ ಮಾರು ಹೋಗಿದ್ದೆ. ಸುತ್ತಲೂ ಬೆಟ್ಟ ದಟ್ಟ ಅರಣ್ಯ ಮದ್ಯೆ ಬಯಲಿನಂತಿರುವ ಊರು. ಬಯಲಲ್ಲಿ ಬೆಳೆದು ಆಗತಾನೆ ಒಣತೊಡಗಿದ ಹುಲ್ಲುಗಾವಲು, ಹಸಿರು ಗದ್ದೆ ಹಿನ್ನೆಲೆಯಲ್ಲಿ ಕುದುರೆಮುಖ ವಲಯದ ಬೆಟ್ಟಗಳು. ದೂರದಲ್ಲೊಂದು ಜಲಪಾತ ಕಾಣಿಸುತ್ತಿತ್ತು. ಅದು ಯಾವುದೆಂದು ಹೇಳಲೂ ಯಾರೂ ಇರಲಿಲ್ಲ. ಬರುವಾಗ ಕಟ್ಟಿಸಿ ತಂದಿದ್ದ ಚಪಾತಿಯನ್ನು ಮೆದ್ದು ೨ ಗಂಟೆಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಗುಂಡಿ ಬಿದ್ದಿದ್ದ ಚಾರ್ಮಡಿ ರಸ್ತೆಯಲ್ಲಿ ಮುಂದಿನ ವಾಹನ ಹತ್ತಲಾಗದೇ ನಿಂತಾಗ ಹಿಂದೆ ಬಂದ ರಾಘುವಿನ ಕಾರು ರಸ್ತೆಯಿಂದ ಕೆಳಗಿಳಿಯಿತು.
ಕಾಮಾಕ್ಷಿಪಾಳ್ಯದಿಂದ ಬಂದಿದ್ದ ಗುಂಪೊಂದು ಏಯ್ ನಮ್ ಏರೀಯಾ ಕಾರ್ ಕಣ್ರೋ ಬನ್ರೋ ಎತ್ತೋಣ ಎಂದು ಅನಾಮತ್ತಾಗಿ ಕಾರನ್ನು ಎತ್ತಿ ರಸ್ತೆಗಿಟ್ಟ ಆ ತಂಡಕ್ಕೆ ನನ್ನ ಧನ್ಯವಾದಗಳು. ನಮ್ಮ ಪಯಣ ಮುಂದುವರೆಯಿತು. ಕೊಟ್ಟಿಗೆಹಾರ ಮೂಡಿಗೆರೆ ಬೇಲೂರು ನಂತರ ಹಾಸನ ತಲುಪಿದಾಗ ಪ್ರದಕ್ಷಿಣೆಯಾಕಾರದ ನಮ್ಮ ಪ್ರಯಾಣ ಅಂತಿಮ ಹಂತಕ್ಕೆ ಬಂತು. ಹಾಸನದಲ್ಲಿ ಹೊಟ್ಟೆರಾಯನನ್ನು ತಣಿಸಿ ಬೆಂಗಳೂರು ರಸ್ತೆಗಿಳಿದೆವು.

ಕುಣಿಗಲ್ ನಂತರ ಮತ್ತದೆ ಮಾಗಡಿ ರಸ್ತೆಯಲ್ಲಿ ಪಯಣಿಸ ತೊಡಗಿದೆವು. ಮಾಗಡಿ ದಾಟಿದ ನಂತರ ಕಿರಿಕಿರಿ ಉಂಟು ಮಾಡಲು ಪ್ರಯತ್ನಿಸಿದ ಪೋರ್ಡ್ ಫಿಯೆಸ್ಟಾ ಕಾರಿನವನೊಂದಿಗೆ ಜಿದ್ದಾಜಿದ್ದಿಯಿಂದ ಕಾರು ಓಡಿಸತೊಡಗಿದಾಗ ಹಿಂದೆ ಬರುತ್ತಿದ್ದ ರಾಘುವಿನ ವಾಹನ ಮರೆತು ಹೋಗಿತ್ತು. ಅಪ್ಪಾ, ರಾಘು ಅಂಕಲ್ ಕಾರ್ ಕಾಣಿಸ್ತಾ ಇಲ್ಲ ಎಂದು ಅಮಿತ್ ಎಚ್ಚರಿಸಿದಾಗಲೇ ಆದ ತಪ್ಪಿನ ಅರಿವಾಗಿದ್ದು. ಸ್ವಲ್ಪ ಸಮಯದಲ್ಲಿ ಫೋನ್ ರಿಂಗಣಿಸಿತು. ನಮ್ಕಾರ್ ಕೆಟ್ಟು ನಿಂತಿದೆ ಎಂದಾಗ ಫಿಯೆಸ್ಟಾದವನಿಗೆ ದಾರಿ ಬಿಟ್ಟು ಹಿಂತಿರುಗಿ ಬಂದಾಗಲೆ ಗೊತ್ತಾದದ್ದು ಸುಮಾರು ೧೨-೧೩ ಕಿ. ಮೀ ಮುಂದೆ ಬಂದಿದ್ದೇನೆಂದು. ಚಾಲನೆಗೆ ತರುವ ನಮ್ಮ ಯಾವ ಪ್ರಯತ್ನಗಳು ಕೈಗೂಡದಿದ್ದಾಗ ನಮ್ಮ ಸಹಾಯಕ್ಕೆ ನಿಂತಿದ್ದ ದ್ವಿಚಕ್ರಿಗಳಿಬ್ಬರು ಹಗ್ಗದಿಂದ ಕಟ್ಟಿ ಎಳೆದು ಕೊಂಡು ಹೋಗಿ ಬಿಡಿ ಎಂಬ ಅವರ ಸಲಹೆ ಹಗ್ಗ ಕಿತ್ತು ಬಂದಾಗ ವಿಫಲವಾಯ್ತು. ರಾಘುವಿನ ಸಂಭಂದಿ ಅನಿಲ್ ನಾನಿನ್ನೂ ರವೀಂದ್ರ ಕಲಾಕ್ಷೇತ್ರದಲ್ಲಿರುವುದರಿಂದ ಬರಲು ಸಮಯ ಹಿಡಿಯುತ್ತೆಂದು ತಿಳಿಸಿದರು. ನಾವೀಗ ತಿಪ್ಪಗೊಂಡನಹಳ್ಳಿಯ ಕೆರೆ ಸಮೀಪವಿದ್ದೆವು ಆ ದ್ವಿಚಕ್ರಿಗಳಿಬ್ಬರೂ ಹೋಗ ಬೇಕಾದರೆ ಸಾರ್ ಇಲ್ಲಿ ಮಾತ್ರ ಕಾರ್ ಬಿಡ್ಬೇಡಿ ನಿಮಗೆ ಬೆಳಿಗ್ಗೆ ನಿಮ್ಮ ಕಾರಿನ ಬಿಡಿ ಭಾಗಗಳೂ ಸಿಗಲ್ಲ ಎಂದು ತಿಳಿಸಿ ಹೋಗಿದ್ದರು.

ಈಗ ನಮ್ಮ ಸಹಾಯಕ್ಕೆ ನಿಂತವರು ಹತಿರದಲ್ಲೆ ಕೆಲಸ ನಿರ್ವಹಿಸುತ್ತಿದ್ದ ಕೆಲವು ಅಗಂತುಕರು. ಅದರಲ್ಲೊಬ್ಬ ಫ್ಯೂಸ್ ಹೋಗಿರ್ಬೇಕು ನೋಡಿ ಎಂದರು ಆತನ ಊಹೆ ನಿಜ ಅದನ್ನು ನನ್ನ ಪತ್ನಿಯ ಬಳಿಯಿದ್ದ ಬಟ್ಟೆಗೆ ಹಾಕುವ ಪಿನ್ನೊಂದನ್ನು ಕತ್ತರಿಸಿ ಬದಲಿ ಪ್ಯೂಸಾಗಿ ಮಾಡಿದಾಗ ಕಾರ್ ಚಾಲನೆಗೊಂಡಿತು. ೨ ನಿಮಿಷದ ನಂತರ ಆ ಕಾರಿನ ಮುಖ್ಯ ದೀಪ ಆರಿ ಹೋಯ್ತು ನಿಧಾನಕ್ಕೆ ಸುಮಾರು ೧೦-೧೨ ಕಿ.ಮೀ ದೂರದ ತಾವರೆಕೆರೆ ಬಳಿ ಬಂದಾಗ ಕಾರ್ ಮತ್ತೆ ನಿಂತು ಹೋಯ್ತು. ಈ ಬಾರಿ ಊರಿನ ಮದ್ಯೆ ನಿಂತಿತ್ತು. ಈ ಸಮಯಕ್ಕೆ ಅನಿಲ್ ಮತ್ತು ಓಮ್ ಶಿವು ಬರುತ್ತಿರುವುದಾಗಿ ತಿಳಿಸಿದರು. ರಾಘು ಮತ್ತು ಗೌತಮ್ ಕಾರಿನೊಂದಿಗೆ ಉಳಿದು ಕೊಂಡರು ಮಿಕ್ಕವರನ್ನು ನನ್ನ ಕಾರಿನಲ್ಲಿ ಕೂರಿಸಿಕೊಂಡು ಅವರ ಮನೆಗೆ ಬಿಟ್ಟು ನಾನು ಮನೆ ಸೇರಿದಾಗ ೧೨ ಗಂಟೆಯಿರಬೇಕು.

ಚಿತ್ರಗಳು

2 comments:

Aravind GJ said...

ಚೆನ್ನಗಿದೆ ನಿಮ್ಮ ಅನುಭವಗಳು... ಸುಂದರವಾದ ಜಾಗ... ಕೆಲವು ವರುಷಗಳ ಹಿಂದೆ ಹೋಗಿದ್ದು!!

ಜಲಪಾತದ ಹೆಸರು ಹೇಳದೆ ಒಳ್ಳೆಯ ಕೆಲಸ ಮಾಡಿದ್ದೀರ.

prasca said...

ಭೇಟಿಯಿತ್ತಿದ್ದಕ್ಕೆ ಮತ್ತು ಮೆಚ್ಚುಗೆಗೆ ವಂದನೆಗಳು ಅರವಿಂದ್.
ಹಾಂ, ಜಲಪಾತದ ಬಗ್ಗೆ ಏನೂ ಮಾಹಿತಿ ಕೋಡಬೇಡಿ ಎಂದು ನನ್ನ ಚಾರಣದ ಗುರುಗಳು ರಾಜೇಶ್ ಹೇಳಿದ್ದನ್ನು ಪಾಲಿಸಿದ್ದೇನೆ.