Friday, November 29, 2013

ಅವಾಚ್ಯ ಶಬ್ಧ ಪ್ರಯೋಗ, ಹೀಗೊಂದು ಅನುಭವ.





ಮಡಿವಂತರುಗಳು ದಯವಿಟ್ಟು ಈ ಬರಹವನ್ನು ಓದಲು ಹೋಗಬೇಡಿ.....

ಹಳ್ಳಿಯಲ್ಲಿ  ಬೆಳೆದವರಿಗೆ ಅವಾಚ್ಯ ಶಬ್ಧಗಳು ಹೊಸದೇನಲ್ಲ. ಪಟ್ಟಣಿಗರು ಅವನ್ನೇ ಅಪರೋಕ್ಷವಾಗಿ ಆಡುವುದೂ ಹೊಸದೇನಲ್ಲ. ಆದರೆ ಕೆಲವು ಹೇಡಿಗಳು ಶಬ್ಧ ಉಪಯೋಗಿಸಿ ಹಾಗಂತ ಬಯ್ದ್ನಾ? ಎಂದು ಕೇಳುವ ಅತಿಬುದ್ದಿವಂತಿಕೆಯ ಪರೋಕ್ಷ ಬೈಗುಳ ಪ್ರದರ್ಶಿಸುತ್ತಾರೆ. ಇದು ಸಾಮಾಜಿಕ ತಾಣಗಳನ್ನೂ ಬಿಟ್ಟಿಲ್ಲ. ಸಂಪದ.ನೆಟ್ ಅಲ್ಲಿ ಒಮ್ಮೆ ಮಹಾನ್ ಜಾತಿ ವಿರೋಧಿ ಸಾಫ್ಟ್ವೇರ್ ಇಂಜಿನಿಯರ್ ಅಮೇರಿಕಾದ ರವಿ ಅವರು, ನನಗೆ ಅವಾಚ್ಯ ಶಬ್ದ ಬಳಸಿ ಪರೋಕ್ಷ ಬೈಗುಳದ ಮೂಲಕ ಬಾಯಿ ಮುಚ್ಚಿಸಲು ನೋಡಿದ್ದಾಗ ಬರೆದ ಒಂದು ಸಣ್ಣ ಅನುಭವ ಬರಹ.

ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸೇರಿದ ಹೊಸತು ಅಲ್ಲಿ ಇಲ್ಲಿ ಅಡ್ಡಾಡಿ ಹೊಸಕೆರೆಹಳ್ಳಿಯಲ್ಲಿ ರೂಮೊಂದನ್ನು ಹಿಡಿದಿದ್ದೆ. ನಂಜುಂಡೇಶ್ವರ ಸ್ಟೋರ್ಸ್ ನಿಲ್ದಾಣದಲ್ಲಿಳಿದು ಕೋಣೆಯವರೆಗೂ ನಡೆದು ಹೋಗಬೇಕಾಗಿತ್ತು. ಆಗಿನ ಮುಖ್ಯರಸ್ತೆ ಈಗಿನ ರಿಂಗ್ ರಸ್ತೆಯಾಗಿದೆ. ಅಲ್ಲಿ ಕೆಲವು ಟೀ ಅಂಗಡಿಗಳನ್ನು ಹೊಸಕೆರೆ ಹಳ್ಳಿಯವರು ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದರು. ಟೀ ಅಂಗಡಿಗಳಲ್ಲಿ ನಾನು ಸಮಯ ಕಳೆಯುತ್ತಿದ್ದಾಗ ನಡೆದ ಒಂದು ಪ್ರಸಂಗ.
ರಸ್ತೆಯಲ್ಲಿ ಸಂಜೆ ಸುಮಾರಿಗೆ ಒಂದು ಬೈಕ್ ಬಂತು. ನೋಡುವುದಕ್ಕೆ ರೌಡಿಯಂತಿರದಿದ್ದರೂ ಸ್ವಲ್ಪ ಘಾಟಿ ಮನುಷ್ಯನಂತೆ ಕಾಣುತ್ತಿದ್ದವನೊಬ್ಬ  ಬೈಕ್ ನಿಲ್ಲಿಸಿ ಟೀ ಕುಡಿದು ಬೇರೆ ಏನನ್ನೊ ತಿಂದಿರಬೇಕು. ಹಣ ಕೊಡದೇ ಹೊರಟಾಗ ಟೀ ಅಂಗಡಿಯವ ಅಣ್ಣಾ ಕಾಸು ಎಂದ. ಬೈಕ್ ಸವಾರ ಏಯ್ ಏನ್ಲಾ ನಿನ್ ಇಲ್ಲಿ ಅಂಗಡಿ ಇಟ್ಟಿರಕ್ಕೆ ಬಿಟ್ಟಿರೋದು ಹೆಚ್ಚು ಇನ್ನೂ ಕಾಸ್ ಬೇರೆ ಕೊಡ್ಬೇಕೇನ್ಲಾ ಎಂದು ಜೋರು ಮಾಡಿದಕ್ಕೆ ಜಗಳ ಶುರು ಆಯ್ತು. ಸ್ವಲ್ಪ ಜನ ಸೇರಿದರು. ಆತ ಸೋಲುವಂತೆ ಕಾಣುತ್ತಿರಲಿಲ್ಲ. ಜಗಳ ವಿಕೋಪಕ್ಕೆ ತಿರುಗಿ ಅಮ್ಮ ಅಕ್ಕನವರೆಗೂ ಬಂದು ಅವಾಚ್ಯ ಶಬ್ದಗಳ ಸುರಿಮಳೆ ಆರಂಭವಾಯ್ತು. ಅಲ್ಲಿಯೇ ಇದ್ದ ಕೆಲವರು ಇವನಿಗೆ ಬುದ್ದಿ ಕಲಿಸ್ಬೇಕಲ್ಲ ಎಂದು ಮಾತನಾಡಿಕೊಂಡು ಏನ್ಮಾಡಣ ಎಂದು ಎಲ್ಲರ ಮುಖ ನೋಡ ತೊಡಗಿದರು. ಸರಿ ನಾ ಹೇಳ್ದೆ ಹೀಗೆ ಮಾಡಿ ಎಂದು. ಅವರೆಲ್ಲರೂ ನಗುತ್ತಾ ಇರೀ ಅದೊಂದು ಪ್ರಯೋಗ ಮಾಡಿಯೇ ಬಿಡೋಣ ಎಂದು ಹೊರಟರು.  ಅಲ್ಲಿ ಕುಳಿತು ಸೀಬೆಹಣ್ಣು ಮಾರುತ್ತಿದ್ದ ಹಣ್ಣು ಹಣ್ಣು ಮುದುಕಿಯೊಂದನ್ನು ಕರೆತಂದು ಆತನ ಮುಂದೆ ನಿಲ್ಲಿಸಿ ಅದೇನೋ ಮಾಡ್ತಿನಿ ಅಂದ್ಯಲ್ಲೊ ಇವ್ಳೆ ನಮ್ಮವ್ವ ಬಾರ್ಲ ಅದೇನ್ ಮಾಡ್ತಿಯ ಮಾಡು ಎಂದವರನ್ನು ನೋಡಿದ ಅವ ಕಕ್ಕಾಬಿಕ್ಕಿಯಾಗಿ ಬಿಟ್ಟ. ಅವನಿಗೆ ಮುಂದೇನು ಹೇಳಬೇಕೆಂದು ತೋಚಲಿಲ್ಲ. ಹಣಕೊಟ್ಟವನೇ ನೆರೆದಿದ್ದ ಜನ ಧರ್ಮದೇಟು ಹಾಕಲು ಶುರುಮಾಡುತ್ತಿದ್ದಂತೆ ಬೈಕ್ ಹತ್ತಿ ಓಡಿ ಬಿಟ್ಟ. ನನ್ನ ಈ ತಂತ್ರಕ್ಕೆ ಸ್ಪೂರ್ತಿ ಸಿಕ್ಕಿದ್ದು ಹೀಗೆ.....
 

ನನ್ನೂರು ತುಂಬಾ ಹಿಂದುಳಿದ ಹಳ್ಳಿ. ಘಟನೆ ನಡೆದದ್ದು ನಾನು ಸುಮಾರು -೬ ರ ತರಗತಿಯಲ್ಲಿದ್ದಾಗ. ಹಿನ್ನೆಲೆ ಹೀಗಿದೆ. ಜಯರಾಮ ೧೦ನೇ ತರಗತಿಯಲ್ಲಿ ಬಾರಿ  ದಂಡಯಾತ್ರೆ ಮಾಡಿ ಜಮೀನನಲ್ಲಿ ದುಡಿಯಲು ಮೈ ಬಗ್ಗದೆ ದಿನಸಿ ಪೆಟ್ಟಿಗೆ ಅಂಗಡಿಯೊಂದನ್ನು ತೆರೆದಿದ್ದ. ಈಗಾಗಲೇ ಇದ್ದ ಅಂಗಡಿಯ ಕೃಷ್ಣೇಗೌಡನಿಗೆ ಇದರಿಂದ ವ್ಯಾಪಾರ  ಕಡಿಮೆಯಾಗಿತ್ತು. ಕೋಪ ಆಗಾಗ  ಜಗಳದ ರೂಪದಲ್ಲಿ ಹೊರಹೊಮ್ಮುತ್ತಿತ್ತಾದರೂ ಅತಿರೇಕಕ್ಕೆ ಹೋಗಿರಲಿಲ್ಲ. ಒಂದು ದಿನ ಬೆಳ್ಳಂಬೆಳಗ್ಗೆ ಊರಿನ ಬಸ್ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಯಾರೋ ಬೊಬ್ಬೆ ಹೊಡೆದಿದ್ದು ಕೇಳಿಸಿತು. ಆಗಿನ್ನೂ ಬೆಳಕು ಹರಿಯುತ್ತಿತ್ತು. ಅಂಗಳದಲ್ಲಿ ಮಲಗಿದ್ದ ನಾನೂ ಓಡಿದೆ.
ಕೃಷ್ನೇಗೌಡ
 ಜಯರಾಮನನ್ನು ಕೆಳಕ್ಕೆ ಕೆಡವಿ ನಾಲ್ಕು ತದುಕಿದ್ದ, ಮೂಗು ಒಡೆದು ರಕ್ತ ಸುರಿಯುತ್ತಿತ್ತು. ವಿಷಯ  ಊರಿಗೆಲ್ಲ ಹರಡಿತು. ಎರಡೂ ಸರಿಸಮನಾದ ಕುಳಗಳೇ, ತೋಟಕ್ಕೆ ಹೋಗಿದ್ದ  ಜಯರಾಮನ  ಅಣ್ಣ ಪುಟ್ಟೇಗೌಡ  ವ್ಯವಸಾಯ ಮಾಡಿಕೊಂಡು ಕಟ್ಟುಮಸ್ತಾಗಿದ್ದ ಆಳು. ವಿಷಯ ತಿಳಿದು ತೋಟಕ್ಕೆ ಹೋಗಿದ್ದವ ಬಂದವನೇ ನೇರವಾಗಿ ಎಲ್ಲರ ಎದುರಿಗೇ ತನ್ನ ವರಸೆ ಶುರುವಿಟ್ಟು ಕೊಂಡ ಅವರ....ನ್ ಎಂಬ ಪದಗಳಿಂದ ಶುರುವಾಗಿ ಪುಂಖಾನುಪುಂಖವಾಗಿ ಪದಪ್ರಯೋಗಗಳು ಹರಿಯತೊಡಗಿದವು ಪರಿಸ್ಥಿತಿ ಗಂಭೀರವಾಗುತ್ತಿತ್ತು, ಎರಡೂ ಕಡೆಯವರು ಸಮಾಧಾನ ಮಾಡುವ ಪ್ರಯತ್ನಗಳು ನಡೆದರೂ ಆಗೊಮ್ಮೆ ಈಗೊಮ್ಮೆ ಪುಟ್ಟೇಗೌಡನ  ಶಬ್ದ ಪ್ರಯೋಗ ಮುಂದುವರೆಯುತ್ತಲೇ ಇತ್ತು.
ಆಗ ಬಂತು ನೋಡಿ ಒಂದು ಹೊಸ ತಿರುವು.
ಯಾವನ್ಲಾ ಅವ್ನು ಬಯ್ದವ್ನು ಬಾರ್ಲಾ ಈಕಡಿಕ್ಕೆ ನೋಡವ ನಿನ್ ಮುಖವ, ಅದೇನ್ ಐತೆ ನಿಂತವ (ಇದು ಹಳ್ಳಿ ಹೆಂಗಸರ ಸಾಮಾನ್ಯ ಉತ್ತರ) ಎಲ್ಲರ ಗಮನ ಕಡೆಗೆ ತಿರುಗಿತು. ಬಯ್ಯುತ್ತಿದ್ದಾಕೆ ಕೃಷ್ಣೇಗೌಡನ ದೊಡ್ಡಮ್ಮ. ಯಾವೋನ್ಲಾ ಅವ್ನು, ಬಾರ್ಲಾ ಅದೇನ್ ಕಿಸಿತಿಯೋ ಕಿಸ್ಯೋ ನೋಡೇ ಬಿಡ್ತಿನಿ  ಬಾರ್ಲಾ ಎಂದವಳೇ ತನ್ನ ಸೆರಗನ್ನು ಕಿತ್ತೊಗೆದು ಎಲ್ಲರ ಮುಂದೆ ನಿಂತೇ ಬಿಟ್ಟ ಆಕೆಯನ್ನು ನೋಡಿ  ಒಮ್ಮೆಲೆ ಇಡೀ ಜನಸ್ತೋಮ ಹುಸಿನಗೆಯಲ್ಲಿ ಮುಳುಗಿತು. ೭೦ ವಯಸ್ಸು ದಾಟಿದ್ದ ಆ ಮುದುಕಿಯ ಬಾಯಿಂದ   ಮಾತುಗಳನ್ನು ಕೇಳಿದ ಪುಟ್ಟೇಗೌಡ  ಮನೆಯ ಕಡೆ ಓಡಿದ್ದ. ಜಯರಾಮನನ್ನು ಸಮಾಧಾನ ಪಡಿಸಿದ ಜನ ಸಂಜೆ  ಪಂಚಾಯಿತಿ ಸೇರಲು ನಿರ್ಧರಿಸಿದ ಜನ ಸಮೂಹ  ಕರಗಿ ಹೋಯಿತು.

No comments: