Friday, July 3, 2009

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-2

ಕಾಟ್ರಾದಿಂದ ಧರ್ಮಶಾಲಕ್ಕೆ ಇರುವ ಬಸ್ ಜಮ್ಮುವಿಗೆ ಬಂದಾಗ ಬೆಳಿಗ್ಗೆ ೮.೩೦. ನಮ್ಮೆಲ್ಲ ಹೊರೆಗಳನ್ನು ಹೊತ್ತ ಕೂಲಿಯವ ನಡೆಯುವುದು ನೋಡಿ ನನಗೆ ಗಾಭರಿಯಾಯ್ತು. ಸುಮಾರು ೧೦ ದೊಡ್ಡ ದೊಡ್ಡ ಚೀಲಗಳನ್ನು ಅನಾಯಾಸವಾಗಿ ತನ್ನಲ್ಲಿದ್ದ ಒಂದೇ ಒಂದು ಹಗ್ಗದ ಸಹಾಯದಿಂದ ಹೊತ್ತುಕೊಂಡು ನಡದೇ ಬಿಟ್ಟ. ಹೊರೆಗಳನ್ನೆಲ್ಲ ಬಸ್ಸಿನ ಮೇಲ್ಭಾಗಕ್ಕೆ ತುಂಬಿ ಬಸ್ ಹೊರಟ ಸ್ವಲ್ಪ ಸಮಯಕ್ಕೆ ಪ್ರಸಾದಿಯ ಚಮತ್ಕಾರ ಶುರುವಾಯ್ತು, ನನ್ನ ಅಂಗೈ ನೋಡುತ್ತ ಭವಿಷ್ಯ ಹೇಳುವಂತೆ ನಟಿಸುತ್ತಿದ್ದವನನ್ನನ್ನು ಹಿಂದೆ ಕುಳಿತಿದ್ದ ನಡುವಯಸ್ಸು ದಾಟಿದ ಹಳ್ಳಿಯವನೊಬ್ಬ ತನಗೂ ಹೇಳುವಂತೆ ಪೀಡಿಸಲು ಪ್ರಾರಂಭಿಸಿದ. ಹಿಂದಿ ಬರದ ಪ್ರಸಾದಿ ತನ್ನ ಹರಕು ಮುರಕು ಭಾಷೆಯಲ್ಲಿ ಹೆಳಿದ್ದಕ್ಕೆಲ್ಲ ಅವನು ತಲೆಯಾಡಿಸುತ್ತಿದ್ದದ್ದು ನಗು ತರಿಸುತ್ತಿತ್ತು. ಅವನ ಕಾಟ ಸಹಿಸಲಾರದ ಪ್ರಸಾದಿ ಕೊನೆಗೆ ನಾನು ಕನ್ನಡಕ ತಂದಿಲ್ಲವೆಂದು ಹೇಳಿ ತಪ್ಪಿಸಿಕೊಂಡ. ಗುರುದಾಸ್ಪುರ, ಪಠಾಣ್ ಕೋಟ್ ಮಾರ್ಗವಾಗಿ ಧರ್ಮಶಾಲಕ್ಕೆ ನಾವು ತಲುಪಿದಾಗ ಸೂರ್ಯ ನೆತ್ತಿಬಿಟ್ಟು ಕೆಳಗಿಳಿಯಲು ಆರಂಭಿಸಿದ್ದ. ಬಸ್ ನಿಲ್ದಾಣದಿಂದ ನೇರವಾಗಿ ಮಂಜುನಾಥರ ಮನೆಗೆ ಟ್ಯಾಕ್ಸಿಯಲ್ಲಿ ಬಂದಿಳಿದೆವು. ಶ್ರೀ ಮಂಜುನಾಥ ಮತ್ತು ಮನೆಯವರ ಆತ್ಮೀಯತೆ ಸ್ಮರಣೀಯ. ಉತ್ತರ ಭಾರತದ ತಿನಿಸುಗಳನ್ನು ತಿಂದು ಜಡ್ಡುಗಟ್ಟಿದ್ದ ನಾಲಿಗೆಗೆ ಒಳ್ಳೆಯ ಅವಲಕ್ಕಿಒಗ್ಗರಣೆ, ಉಪ್ಪಿನಕಾಯಿ ಮತ್ತು ಕಾಫಿ ಅಮೃತದಂತಿತ್ತು.

ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗಾಗಿರುವ ಬಡಾವಣೆಯಲ್ಲಿ ನಮ್ಮ ವಾಸ್ತವ್ಯ ತುಂಬಾ ಖುಷಿ ತಂತು. ಬೆಟ್ಟದ ಬುಡದಲ್ಲಿರುವ ಬಡಾವಣೆ, ಒಂದು ಸಾಲಿನ ಬೆಟ್ಟದ ನಂತರದ ಶ್ರೇಣಿಗಳಲ್ಲಿ ಮಂಜು ಆವೃತವಾಗಿರುವುದು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ. ಆದರೂ ಛಳಿ ಮಾತ್ರ ಸ್ವಲ್ಪವೂ ಇರಲಿಲ್ಲ. ರಾತ್ರಿ ಬಿಸಿಬೇಳೆಬಾತ್, ಅನ್ನ, ತಿಳಿಸಾರನ್ನು ಭರ್ಜರಿಬೇಟೆಯಾಡಿದೆವು. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಪರಮವೀರಚಕ್ರ ಪುರಸ್ಕೃತರ ಬಗ್ಗೆ ಇರುವ ಫಲಕಗಳು ನಮ್ಮ ಕಣ್ಣಂಚನ್ನು ತೇವಗೊಳಿಸದೆ ಬಿಡುವುದಿಲ್ಲ. ಇದೆ ರಕ್ಷ್ಣಣಾ ಬಡಾವಣೆಯ ಮುಂದಿರುವ ಟ್ಯಾಂಕ್ ಗಳು ೧೯೭೧ ರ ಯುದ್ದದಲ್ಲಿ ವಶಪಡಿಸಿಕೊಂಡವು ಎಂದು ಮಂಜುನಾಥ್ ತಿಳಿಸಿದರು. ರಕ್ಷಣಾವಲಯವಾದ್ದರಿಂದ ಚಿತ್ರಗಳನ್ನು ತೆಗೆದುಕೊಳ್ಳುವ ದುಃಸಾಹಸಕ್ಕೆ ಕೈಯಿಡಲಿಲ್ಲ. ಬೆಳಿಗ್ಗೆ ವಾಹನವೊಂದರಲ್ಲಿ ಮಾಡಿಕೊಂಡು ಮಂಜುನಾಥರ ಸಂಸಾರದೊಂದಿಗೆ ’ಜ್ವಾಲಾಜಿ’ಯತ್ತ ನಮ್ಮ ಪಯಣ. ಇಲ್ಲಿನ ಕಾಡುಗಳ ವಿಶೇಷತೆಯೆಂದರೆ ಕರಿಬೇವಿನ ಮರಗಳು ತುಂಬಿರುವುದು ದಾರಿಯುದ್ದಕ್ಕು ಇರುವ ಕುರುಚಲು ಕಾಡಿನಲ್ಲಿ ಕರಿಬೇವಿನ ಮರ ಹೇರಳವಾಗಿ ಬೆಳೆದಿದೆ. ಆದರೆ ಇಲ್ಲಿನ ಜನಕ್ಕೆ ಅದರ ಉಪಯೋಗ ಗೊತ್ತಿಲ್ಲ ಎಂಬುದು ಶ್ರೀಮತಿ ಮಂಜುನಾಥರ ಮಾಹಿತಿ. ಶ್ರೀಮತಿ ಗ್ತಾ ಅವರಂತು ಬೆಂಗಳೂರಿನಲ್ಲಿ ಕರಿಬೇವಿನ ಸೊಪ್ಪು ಸಿಗುವುದಿಲ್ಲವೆಂಬಂತೆ ಅದನ್ನು ಶೇಖರಿಸತೊಡಗಿದ್ದು ನನಗೆ ಅತ್ಯಂತ ಕುತೂಹಲಭರಿತ ತಮಾಷೆಯಾಗಿ ಕಾಣಿಸಿತು.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ಜ್ವಾಲಾಜಿ ದೇವಸ್ತಾನದ ಸಮೀಪಕ್ಕೆ ಬಂದು ನಿಂತಿದ್ದೆವು. ತನ್ನಿಂತಾನೆ ಉರಿಯುವ ಅಗ್ನಿ ಯೆ ಇಲ್ಲಿನ ದೇವರು ತಲೆಯ ಮೇಲೆ ಸುಡುವ ಸೂರ್ಯದೇವ. ಪಾರ್ವತಿಯೆಂದು ಆರಾಧಿಸುವ ಜನರು. ಔರಂಗಜೇಬ ಅದನ್ನು ತಟ್ಟೆಯಿಂದ ಮುಚ್ಚಿ ಆರಿಸಲು ನೋಡಿದ ಕುರುಹಾಗಿ ಬೆಂಕಿಯ ಬಿಸಿಗೆ ಕರಗಿ ತೂತಾಗಿರುವ ತಟ್ಟೆ ಈಗಲೂ ಪ್ರದರ್ಶನಕ್ಕಿದೆ. ಸುಮಾರು ೭ ಎಂಟು ಕಡೆ ಈ ತೆರನಾದ ಬೆಂಕಿ ನಿರಂತರವಾಗಿ ನಮ್ಮ ಗ್ಯಾಸ್ ಒಲೆಗಳಂತೆ ಉರಿಯುತ್ತಿರುತ್ತದೆ. ಕೆಲವು ನೀರಿನ ದಡದಲ್ಲೂ ಸಹ. ತನ್ನ ತಂದೆ ದಕ್ಷನಿಂದ ಅವಮಾನಿತಳಾಗಿ ಗತಿಸಿದ ಹೆಂಡತಿಯ ಶವವನ್ನು ಹೊತು ತಿರುಗುತ್ತಿದ್ದ ಶಿವನನ್ನು ಅದರಿಂದ ಹೊರ ತರಲು ತನ್ನ ಚಕ್ರದಿಂದ ಕಳೇಬರವನ್ನು ಚೂರಾಗಿಸಿದಾಗ ಕಳೇಬರದ ಭಾಗವೊಂದು ಇಲ್ಲಿ ಬಿದ್ದಿತ್ತೆಂದು ಇಲ್ಲಿ ಕಥೆ ಹೇಳುತ್ತಾರೆ. ಮತ್ತೊಮ್ಮೆ ಇಲ್ಲಿನ ಜನರ ಭಕ್ತಿಯ ಪರಾಕಾಷ್ಠತೆಯ ಪರಿಚಯ ಇಲ್ಲಿ ನನಗಾಯಿತು. ಸಿಖ್ಖರು ಕೂಡಾ ಇಲ್ಲಿನ ಮಾತೆಯ ದೇಗುಲಕ್ಕೆ ಭಕ್ತಿಯಿಂದ ನಡೆದುಕೊಳ್ಳುವುದು ವಿಶೇಷತೆ. ಸುಮಾರು ೨ ಗಂಟೆಗಳ ಸರತಿಸಾಲಿನಲ್ಲಿ ಉರಿಯುವ ಬಿಸಿಲಲ್ಲಿ ನಿಂತು ಎಲ್ಲ ಉರಿಯುತ್ತಿರುವ ಬೆಂಕಿಯ ದರ್ಶನಂಗೈದು ಹೊರಬಂದಾಗ ಸಮಯವಾಗಲೆ ೨ ಗಂಟೆ ದಾಟಿತ್ತು.

ಮನೆಯಿಂದಲೇ ತಯಾರಿಸಿ ತಂದಿದ್ದ ಪುಳಿಯೊಗರೆ ಮತ್ತು ಮೊಸರನ್ನವನ್ನು ತಿಂದು ಧರ್ಮಶಾಲದ ಸಮೀಪವಿರುವ ಮತ್ತೊಂದು ದೇಗುಲಕ್ಕೆ ಭೇಟಿಯಿತ್ತು ಮನೆಗೆ ತಲುಪಿದಾಗ ೭.೩೦. ಶ್ರೀ ಮಂಜುನಾಥ್ ಪರಮವೀರಚಕ್ರ ವಿಜೇತರ ಬಗ್ಗೆ ಮಾಹಿತಿ ನೀಡುತ್ತೇನೆಂದು ಭರವಸೆಯಿತ್ತರು. ಅವರಿಗೂ ಸಂಪದವನ್ನು ಪರಿಚಯಿಸಿದೆ. ಸದಸ್ಯರಾಗಿದ್ದಾರೆಯೆ? ಗೊತ್ತಿಲ್ಲ.
ನೇರವಾಗಿ ಚಿಂತಮಯಿ ದೇವಸ್ತಾನಕ್ಕೆ ಬಂದೆವು. ಸೂರ್ಯ ಈ ಹೊತ್ತಿಗಾಗಲೆ ನಾನಿನ್ನು ನಿಮ್ಮನ್ನು ಸುಡಲಾರೆ ಎಂದು ಬಸವಳಿದು ಮನೆಯತ್ತ ಓಡುತ್ತಿದ್ದ. ಚೂರಾದ ಶಿವನ ಪತ್ನಿಯ ದೇಹದ ಮತ್ತೊಂದು ಭಾಗ ಇಲ್ಲಿ ಬಿದ್ದಿತ್ತೆಂಬುದು ನಂಬಿಕೆ.

ಬೆಳಿಗ್ಗೆ ೭ ಗಂಟೆಗೆ ಮತ್ತೆ ನಮ್ಮ ಪ್ರಯಾಣ ಈ ಬಾರಿ ಅಮೃತಸರದ ಕಡೆಗೆ. ನಮ್ಮ ಪೂರ್ವನಿಗಧಿತ ಯೋಜನೆಯಂತೆ ಕುಲು-ಮನಾಲಿಗೆ ತೆರಳಬೇಕಿತ್ತು. ಆದರೆ ಗುಲ್ಮಾರ್ಗ್ ಮತ್ತು ಕಾಶ್ಮೀರಗಳನ್ನು ನೋಡಿದ ಮೇಲೆ ಅದರ ಅವಶ್ಯಕತೆಯಿಲ್ಲವೆಂದು ಶ್ರೀಕಾಂತ್ ಮತ್ತು ಪ್ರಸಾದಿಯ ಸಲಹೆಗೆ ನನಗೆ ಮನಸ್ಸಿಲ್ಲದಿದ್ದರೂ ಒಪ್ಪಲೇಬೇಕಾಯಿತು. ಸರಿ ಅದರಂತೆ ಹೊರಟಾಗ ದಾರಿಯುದ್ದಕ್ಕೂ ಕಣಿವೆಗಳು ಆಳದಲ್ಲಿ ಹರಿದು ಬರುತ್ತಿರುವ ನದಿ. ಬಿಸಿಲಿನ ಝಳ ನಮ್ಮನ್ನು ನೀರಿಗಿಳಿಯುವಂತೆ ಮಾಡಿತು. ಸಾರ್ ವಾಘಾ ಗಡಿ ತಲುಪುವುದು ಕಷ್ಟ ಆಗುತ್ತೆ ಎಂದು ಅಲವತ್ತುಕೊಂಡ ಚಾಲಕನ ಮಾತನ್ನು ಗಮನಿಸದೆ ೧ ಗಂಟೆಗಳ ಕಾಲ ನೀರಲ್ಲಿ ಕಳೆದೆವು. ಹಿಮಾಚಲ ಪ್ರದೇಶವನ್ನು ದಾಟಿ ಪಂಜಾಬ್ ಪ್ರಾಂತ್ಯವನ್ನು ಪ್ರವೇಶಿಸಿದಾಗಲೆ ಉತ್ತರಭಾರತದ ಕಡು ಕೆಟ್ಟ ಬಿಸಿಯ ಅನುಭವವಾದದ್ದು. ಬೆಂಗಳೂರಿನಿಂದ ರೈಲಿನಲ್ಲಿ ಬರಬೇಕಾದರೆ ಮಧ್ಯಪ್ರದೇಶ ದಾಟಿದ ಮೇಲೆ ಬಿಸಿಯ ಅನುಭವವಾದರೂ ೨ನೆ ದರ್ಜೆಯ ಹವಾನಿಯಂತ್ರಿತ ದಬ್ಬಿಯಲ್ಲಿದ್ದದರಿಂದ ಈ ತೆರನಾದ ಬಿಸಿಲಿನ ಝಳದ ಅನುಭವವಾಗಿರಲಿಲ್ಲ. ೧೯೭೯ರಲ್ಲಿ ನಮ್ಮ ತಂದೆಯ ರಬ್ಬರ್ ಚಪ್ಪಲಿ ಆಗ್ರಾದಲ್ಲಿನ ಬಿಸಿಲಿನ ಬಿಸಿಗೆ ಜಿನುಗುವುದನ್ನು ನಾನು ಕಂಡಿದ್ದೆ ಆದರೆ ಅದೆಲ್ಲ ೩೦ ವರ್ಷಗಳ ಹಿಂದಿನ ನೆನಪು ಮಾತ್ರ ಇತ್ತು. ನೀರು ಸಿಕ್ಕ ಕಡೆಯಲ್ಲೆಲ್ಲ ತಲೆಗೆ ಸುರಿದು ಕೊಳ್ಳುತ್ತ ಒದ್ದೆ ಬಟ್ಟೆಗಳನ್ನು ವಾಹನದ ಕಿಟಕಿಗೆ ಅಡ್ಡ ಹಿಡಿದು ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳುವ ನಮ್ಮ ಯಾವ ಪ್ರಯತ್ನಗಳು ಹೆಚ್ಚು ಫಲ ಕೊಡಲಿಲ್ಲ. ಮಧ್ಯಾಹ್ನ ಶ್ರೀಮತಿಮಂಜುನಾಥ್ ತಯಾರಿಸಿಕೊಟ್ಟಿದ್ದ ಚಪಾತಿಯನ್ನು ಜಲಂಧರ್ ಸಮೀಪದಲ್ಲಿದ್ದ ಪಂಜಾಬ್ ರಾಜ್ಯ ಡೈರಿಯ ಮುಂದೆ ಇರುವ ಉದ್ಯಾನವನದಲ್ಲಿ ತಿಂದು ಮುಗಿಸಿದೆವು. ಲಸ್ಸಿ ಕುಡಿದು ಮತ್ತೊಮ್ಮೆ ನೀರು ತುಂಬಿಕೊಂಡು ಹೊರಟೆವು.

ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕ ಕುಲ್ದೀಪ್ ಸಂಜೆ ೫ ರ ಸುಮಾರಿಗೆ ವಾಘಾ ಗಡಿಗೆ ನಮ್ಮನ್ನು ತಲುಪಿಸಿದ. ಅರ್ಧ ಮೈಲಿಯಷ್ಟು ನಡೆದು ಭಾರತ ಪಾಕೀಸ್ತಾನ ಗಡಿಯನ್ನು ತಲುಪಿದೆವು. ಸಂಜೆ ಕತಲಾಗುವುದಕ್ಕೆ ಮುನ್ನ ರಾಷ್ಟ್ರಧ್ವಜವನ್ನು ಇಳಿಸಿ ಗಡಿ ಮುಚ್ಚುವ ಪ್ರಕ್ರಿಯೆಯಲ್ಲಿ ನಡೆಯುವ ಕೆಲವು ಪೆರೇಡ್ ಗಳು ಆಕರ್ಷಣೀಯ. ಆ ಪ್ರಕ್ರಿಯೆಗೂ ಮುನ್ನ ಅಲ್ಲಿ ರಾಷ್ಟ್ರಭಕ್ತಿ ಗೀತೆಗಳನ್ನು ಮೊಳಗಿಸಿ ಬಂದಿದ್ದ ತರುಣಿಯರು, ಹೆಂಗಸರು ಮತ್ತು ಮಕ್ಕಳು ಮಾಡಿದ ನೃತ್ಯ ಸೊಗಸಾಗಿತ್ತು. ಪಂಜಾಬಿನ ತರುಣಿಯರಿಗೆ ನೃತ್ಯ ಬಹುಶಃ ಜನ್ಮದಲ್ಲೆ ಬಂದ ಕಲೆಯಿರಬೇಕು. ಬೋಲೋ ಭಾರತ್ ಮಾತಾಕಿ ಜೈ ಎಂಬ ಶಬ್ದವನ್ನು ಗಡಿಯಾಚೆಗೂ ಅನುರಣಿಸುವಂತೆ ಮಾಡಿದ ಶ್ರೀಕಾಂತ ಅಭಿನಂದನೀಯ. ರಾಷ್ಟ್ರಧ್ವಜವನ್ನು ಹಿಡಿದು ಗಡಿವರೆಗೂ ಓಡಿಹೋದ ಚಿತ್ರಾ ಮತ್ತು ಗೀತಾರ ಮುಖದಲ್ಲಿ ಅದೇನೋ ಗೆದ್ದ ಮನೋಭಾವ. ೭ ಗಂಟೆಗೆ ಸುಮಾರಿಗೆ ಅಲ್ಲಿಂದ ಹೊರಟು ೮ ಗಂಟೆ ಸುಮಾರಿಗೆ ಅಮೃತಸರಕ್ಕೆ ಹಿಂತಿರುಗಿ ಗುರುದ್ವಾರದ ಧರ್ಮಶಾಲೆಯೊಂದರಲ್ಲಿ ಹವಾನಿಯಂತ್ರಿತ ಕೊಠಡಿಯೊಂದನ್ನು ಪಡೆದು ನಮ್ಮ ಹೊರೆಗಳನ್ನೆಲ್ಲ ಕೋಣೆಗೆ ತುಂಬಿದೆವು. ಗುರುದ್ವಾರದ ಹೊರಗೆ ಹಗಲಿರುಳು ನಡೆಯುವ ಧರ್ಮದೂಟವೆಂದು ಕೊಟ್ಟ ರೊಟ್ಟಿ ತಿಂದು ಸ್ವರ್ಣಮಂದಿರಕ್ಕೆ ತೆರಳಿದೆವು. ಹೊರಗೆ ಬಿಸಿ ಹಬೆಯಿದ್ದರೂ ಮಂದಿರದ ಭಾಗದಲ್ಲಿ ಮಾತ್ರ ಹವೆ ತಂಪಾಗಿದ್ದದ್ದು ನಮ್ಮನ್ನು ಅಲ್ಲೆ ಹೆಚ್ಚು ಸಮಯ ಕಳೆಯುವಂತೆ ಮಾಡಿತು. ಇಲ್ಲಿನ ಸ್ವರ್ಣಮಂದಿರ ಸ್ವಚ್ಚತೆ ಮಾತ್ರ ಅತ್ಯಂತ ಪ್ರಶಂಸನೀಯ. ಎಲ್ಲವೂ ಸ್ವಯಂ ಸೇವಕರಿಂದ ಅಚ್ಚುಕಟ್ಟಾಗಿ ನಿರ್ವಹಿಸಲ್ಪಡುತ್ತಿರುವ ಸ್ವರ್ಣಮಂದಿರ ಮನಸೆಳೆಯುತ್ತದೆ. ಸ್ವರ್ಣ ಮಂದಿರವನ್ನು ಸಂದರ್ಶಿಸಿ ಬಂದು ಕೋಣೆಗೆ ಬಿದ್ದದ್ದಾಯ್ತು. ಬೆಳಿಗ್ಗೆ ಅಮೃತಸರದಲ್ಲಿದ್ದ ಬೇರೆ ಬೇರೆ ಮಂದಿರಗಳ ದರ್ಶನದ ನಂತರ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ಬಂದು ತಲುಪಿದೆವು. ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಜನ ಬಿದ್ದ ಬಾವಿ, ಗೋಡೆಗೆ ತಗುಲಿದ ಗುಂಡೇಟುಗಳು ಅಂದು ನಡೆದ ದುರಂತಕ್ಕೆ ಸಾಕ್ಷೀಭೂತವಾಗಿ ನಿಂತಿವೆ.

ಸೈಕಲ್ ರಿಕ್ಷಾಗಳು ಇಷ್ಟು ಕಡಿಮೆ ದರದಲ್ಲಿ ನಿಮಗೆ ಸಿಗುತ್ತವೆಂದರೆ ನಂಬಲೂ ಸಾಧ್ಯವಿಲ್ಲ. ೩-೪ ಕಿ.ಮೀ ಗಳಿಗೆ ಕೇವಲ ೪-೫ ರೂಗಳಿಗೆ ದುಂಬಾಲು ಬೀಳುತ್ತಾರೆ ಅತ್ಯಂತ ಶ್ರಮಜೀವಿ ಪಂಜಾಬಿಗಳು ಇಲ್ಲಿ ನಮಗೆ ಭಿಕ್ಷುಕರೇ ಕಾಣ ಸಿಗಲಿಲ್ಲ. ನೀರೆತ್ತುವ ಅಥವ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ನಾವು ಬಳಸುವ ಡೀಸೆಲ್ ಜನರೇಟರ್ ಗಳನ್ನೆ ಬಳಸಿ ೪ ಚಕ್ರದ ವಾಹನ ಮಾಡಿಕೊಂಡು ಓಡಿಸುವ ಇವರು ಬುದ್ದಿವಂತರೂ ಕೂಡ. ಮತ್ತೊಮ್ಮೆ ರಾತ್ರಿ ಸ್ವರ್ಣಮಂದಿರಕ್ಕೆ ಭೇಟಿ ನೀಡಿದೆವು. ಸೈಕಲ್ ರಿಕ್ಷಾಗಳಲ್ಲಿ ನಮ್ಮ ಹೊರೆಗಳನ್ನೆಲ್ಲ ತುಂಬಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದು ಅಮೃತಸರದಿಂದ ಚಂಡೀಗಡ ತಲುಪಲು ಅಂಬಾಲ ದಂಡಿನವರೆಗೆ ಕಾದಿರಿಸಿದ್ದ ರೈಲಿನಲ್ಲಿ ಪ್ರಯಾಣಿಸಿ ಬೆಳಗಿನ ಜಾವ ೪ ಗಂಟೆಗೆ ೫೦ ಕಿ.ಮೀ ದೂರವಿದ್ದ ಚಂಡೀಗಡವನ್ನು ಮತ್ತೊಂದು ರೈಲಿನಲ್ಲಿ ತಲುಪಿದಾಗ ಬೆಳಿಗೆ ೬.೦೦ ಗಂಟೆ. ಈಗಾಗಲೇ ಚಂಡೀಗಡಕ್ಕೆ ಬಂದು ಅನುಭವವಿದ್ದ ಶ್ರೀಕಾಂತ ಹೇಳಿದಂತೆ ರಾಕ್ ಗಾರ್ಡನ್ ಮತ್ತು ಒಂದು ಸರೋವರವನ್ನು ನೋಡಿದೆವು. ಸುಡು ಬಿಸಿಲು ಬೆಂದುಹೋಗುವಷ್ಟು ಪ್ರಖರವಾಗಿತ್ತು. ಯಾರ ಮುಖದಲ್ಲೂ ಕಳೆಯಿರಲಿಲ್ಲ. ಬರೀ ಉಪಯೋಗಿಸಿ ಬಿಸಾಡಿದ ವಸ್ತುಗಳಿಂದಲೆ ನಿರ್ಮಿಸಿರುವ ರಾಕ್ ಗಾರ್ಡನ್ ಆಗಲಿ ಸುಂದರ ಸರೋವರವಾಗಲಿ ನಮ್ಮ ಮನಸೆಳೆಯಲಿಲ್ಲ ಬಹುಶಃ ಬಿಸಿಲಿನಿಂದ ಬಸವಳಿದು ಹೋಗಿದ್ದೆವು. ಅದು ಫೋಟೋಗಳಲ್ಲಿ ಕೂಡ ಪ್ರತಿಫಲಿತವಾಗಿದೆ. ಮಧ್ಯಾಹ್ನ ೨ ಗಂಟೆಗಿದ್ದ ರೈಲನ್ನು ಹಿಡಿದು ೩ನೇ ದರ್ಜೆ ಎಸಿಯಲ್ಲಿ ಮಲಗಿದವರಿಗೆ ಎಚ್ಚರವಾಗಿದ್ದು ೬ಕ್ಕೆ. ಎಲ್ಲರಿಗೂ ನವ ಚೈತನ್ಯವನ್ನು ತಂದುಕೊಟ್ಟ ಈ ರೈಲಿನ ಪ್ರಯಾಣ ನೆಮ್ಮದಿ ತಂತು. ಏಕೆಂದರೆ ಚಂಡಿಗಡದ ರಣ ಬಿಸಿಲು ನಮ್ಮೆಲ್ಲರನ್ನೂ ಹೈರಾಣವಾಗಿಸಿತ್ತು. ಸಂಜೆ ೬.೩೦ರ ಸುಮಾರಿಗೆ ಹರಿದ್ವಾರಕ್ಕೆ ಬಂದಿಳಿದೆವು.

ಬೆಂಗಳೂರಿನಿಂದಲೆ ಸ್ನೇಹಿತ ರಾಜೀವ್ ಅವರ ದಾಯಾದಿ ಶ್ರವಣ್ ಅವರಿಂದ ನಮಗಾಗಿ ಕಾದಿರಿಸಿದ ವಾಹನದಲ್ಲಿ ನಮಗಾಗಿ ಮೀಸಲಾಗಿದ್ದ ಬಿ.ಹೆಚ್.ಇ.ಎಲ್ ಅತಿಥಿಗೃಹಕ್ಕೆ ತಲುಪಿ ಅವರು ಕೊಟ್ಟ ಊಟವನ್ನು ಮಾಡಿ ಇನ್ನು ಮುಂದಿನ ದಿನಕ್ಕೆ ನಮ್ಮ ಸಾರಥಿಯಾಗಿ ಬಂದಿದ್ದ ಸುಶೀಲ್ ಪಾಂಡೆಯನ್ನು ಬೆಳಿಗ್ಗೆ ಬೇಗನೆ ಬರುವಂತೆ ತಿಳಿಸಿದೆವು.

೨೪ರ ಹರೆಯದ ಯುವಕ ಪಾಂಡೆ ಒಳ್ಳೆಯ ಮಾತುಗಾರ. ಮದುವೆಗೆ ಹುಡುಗಿಯ ಹುಡುಕಾಟದಲ್ಲಿದ್ದ ಅವನನ್ನು ಛೇಡಿಸುತ್ತಾ ಸಾಗುತ್ತಿದ್ದದ್ದು ಅವನಿಗೂ ಖುಷಿಕೊಟ್ಟಿತು. ನಮ್ಮ ಇಂದಿನ ಪ್ರಯಾಣದ ಗುರಿ ಗೌರಿಕುಂಡ. ಋಷಿಕೇಶದ ನಂತರ ಬರೀ ಕಣಿವೆಗಳಲ್ಲಿ ಸಾಗುವ ರಸ್ತೆ. ಎಲ್ಲೆಲ್ಲೂ ಉರಿಬಿಸಿಲು ಪ್ರಯಾಣವನ್ನು ಪ್ರಯಾಸವನ್ನಾಗಿಸುತ್ತಿತ್ತು. ಇದರ ಮಧ್ಯೆ ಒಳ್ಳೆಯ ಹೋಟೆಲ್ಗಳು ಸಿಗದೆ ಹಣ್ಣುಗಳು ಸಿಗದೆ ಹಸಿವು ಕಾಡುತ್ತಿದ್ದರು ಬೇರೆ ವಿಧಿಯಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಯಾವುದೋ ಒಂದು ಡಾಭಾದ ಮುಂದೆ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಪಾಂಡೆ. ಮತ್ತೊಮ್ಮೆ ಅದೆ ರುಚಿಯಿಲ್ಲದ ಸಾಸಿವೆ ಎಣ್ಣೆಯ ಅಡುಗೆ ವಾಕರಿಕೆ ತರಿಸುತ್ತಿತ್ತು. ಹೇಗೋ ಸಂಭಾಳಿಸಿಕೊಂಡು ಸೇರಿದಷ್ಟು ನುಂಗುತ್ತಾ ಸಂಭಾಳಿಸಿಕೊಳ್ಳುತ್ತಿದ್ದೆವು. ದಾರಿಯು ಕಣಿವೆಯುದ್ದಕ್ಕೂ ಹೊಗೆ ತುಂಬಿದ್ದು ನನಗೆ ಆಶ್ಚರ್ಯ ತರಿಸುತ್ತಿತ್ತು ಬಹುಶಃ ಬಿಸಿಲಿನ ಝಳಕ್ಕೆ ಹಾಗೆ ಕಾಣಿಸುತ್ತಿದ್ದಿರಬೇಕು. ರಸ್ತೆಯ ಮಧ್ಯೆ ವಾಹನ ನಿಲ್ಲಿಸಿ ದೇಖೋ ಸಾಬ್ ಎ ರುದ್ರಪ್ರಯಾಗ್ ದೇವ ಪ್ರಯಾಗ್ ಹೈ ಎಂದು ಹೇಳುತ್ತಿದ್ದ ಪಾಂಡೆ. ಒಂದು ಕಣಿವೆಯಿಂದ ಹಸಿರು ಮಿಶ್ರಿತ ನೀರು ಮತ್ತೊಂದು ಕಣಿವೆಯಿಂದ ಹರಿದು ಬರುತ್ತಿದ್ದ ಮಣ್ಣುಮಿಶ್ರಿತ ನೀರು ಸೇರುವ ಸಂಗಮಗಳು ಅಲ್ಲೊಂದು ದೇವಸ್ತಾನ. ೩-೪ ಪ್ರಯಾಗಗಳ ನಂತರ ಸಂಜೆ ಚಹಾ ಸೇವನೆಯ ನಂತರ ಗುಪ್ತಕಾಶಿಯಲ್ಲಿ ವಾಹನ ನಿಲ್ಲಿಸಿದ ಪಾಂಡೆ ಇಲ್ಲಿರುವ ಕಾಶಿವಿಶ್ವೇಶ್ವರ ದೇವಸ್ತಾನಕ್ಕೆ ಭೇಟಿಯಿತ್ತೆವು. ಇದರ ಮುಖ್ಯ ಅರ್ಚಕರು ದಾವಣಗೆರೆಯ ಕನ್ನಡಿಗರು.

ರಾಜ್ಯಾಡಾಳಿತ ಮುಗಿಸಿದ ಪಾಂಡವರು ಸ್ವರ್ಗಾರೋಹಣಕ್ಕಾಗಿ ಹಿಮಾಲಯದ ಕಡೆ ನಡೆದು ಬರುತ್ತಿರುವಾಗ ಶಿವ ತಪಸ್ಸು ಮಾಡುತ್ತಿದ್ದ ಈ ಸ್ಥಳಕ್ಕೆ ದರ್ಶನಕ್ಕೆ ಬರುತ್ತಾರೆ. ಅದರ ಸುಳಿವು ತಿಳಿದ ಸೋದರ ಹತ್ಯೆ ಮಾಡಿದ ಪಾಂಡವರಿಗೆ ದರ್ಶನ ಕೊಡಲು ಮನಸ್ಸಿಲ್ಲದೆ ಶಿವ ಇಲ್ಲಿಂದ ಮಾಯವಾಗುತ್ತಾನೆ. ಅವನು ತಪಸ್ಸು ಮಾಡಿದ ಈ ಸ್ಥಳವನ್ನು ಪಾಂಡವರು ಪೂಜಿಸುತ್ತಾರೆ ಅದೆ ಗುಪ್ತಕಾಶಿ. ದೇವಳದ ಮುಂಭಾಗದಲ್ಲಿ ಎರಡೂ ಕಡೆಯೂ ಸಣ್ಣದಾಗಿ ಭೀಳುವ ನೀರನ್ನು ಒಂದು ಕಲ್ಯಾಣಿಯಲ್ಲಿ ಸಂಗ್ರಹಗೊಂಡು ಮುಂದೆ ಹರಿದು ಹೋಗುತ್ತದೆ. ಇದನ್ನು ಯಮುನೆ ಮತ್ತು ಗಂಗಾ ತೀರ್ಥವೆಂದೂ ಕರೆಯುತ್ತಾರೆ ಎನ್ನುವುದು ಅಲ್ಲಿನವರು ತಿಳಿಸಿದ ಸ್ಥಳ ಪುರಾಣ. ಗುಪ್ತಕಾಶಿಯಲ್ಲಿ ಕರ್ನಾಟಕದಿಂದ ಬಂದಿದ್ದ ಪ್ರವಾಸಿಗಳು ನಮಗೆ ಎದುರಾದರು. ಕೆಲವರನ್ನು ಮಾತನಾಡಿಸುತ್ತಾ ಕೆಲವರಿಗೆ ಮುಗುಳ್ನಗೆ ವಿನಿಮಯಿಸುತ್ತಾ ಸಾಗಿದೆವು. ಸಾಬ್ ಜಲ್ದಿ ಆವೋ ಗೇಟ್ ಬಂದ್ ಹೋಜಾತಾ ಹೈ ಎನ್ನುವ ಪಾಂಡೆಯ ಕರೆಗೆ ಓಗೊಟ್ಟು ವಾಹನ ಹತ್ತಿದೆವು. ರಾತ್ರಿ ೮ ಗಂಟೆಯ ಸುಮಾರಿಗೆ ಸರಸ್ವತಿಪುರ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದ ಪಾಂಡೆ ಸಾರ್ ಗೌರಿಕುಂಡದಲ್ಲಿ ಕೋಣೆಗಳು ಸಿಗುವುದಿಲ್ಲ ಆದ್ದರಿಂದ ಇಲ್ಲೆ ಉಳಿಯೋಣ ಇಲ್ಲಿಂದ ಗೌರಿಕುಂಡ ಕೇವಲ ೫ .ಮೀ ದೂರವಿದೆ ಎಂದು ನಮ್ಮನ್ನು ಪುಸಲಾಯಿಸಿದ ಅವನ ಹುನ್ನಾರ ನನಗೆ ತಿಳಿಯಿತು. ಸರಿ ಅವನೆಂದಂತೆ ಅಲ್ಲೆ ಇದ್ದ ಹೊಟೆಲ್ಲೊಂದರಲ್ಲಿ ಕೋಣೆ ತೆಗೆದುಕೊಂಡು ಅನ್ನಪೂರ್ಣ ಎಂಬ ಹೋಟೇಲ್ನಲ್ಲಿ ಊಟ ಮಾಡಿ ಮಲಗಿದೆವು.
ಮುಂದುವರೆಯುತ್ತದೆ..................

Wednesday, July 1, 2009

ನೇಪಾಳ ಮತ್ತು ಈಶಾನ್ಯಭಾರತ ಪ್ರವಾಸ ಹೋಗಿಬಂದ ಮೇಲೆ ಉತ್ತರಭಾರತ ಪ್ರವಾಸವೆಂದರೆ ಏಕೋ ಒಂದು ರೀತಿಯ ಭಯ ಆವರಿಸುತ್ತಿತ್ತು. ಬಹುಶಃ ನೇಪಾಳದಲ್ಲಿ ನಮಗೆ ಎದುರಾದ ತೊಂದರೆ ಮತ್ತು ಅಲ್ಲಿ ನಾವು ಅನುಭವಿಸಿದ ಮಾನಸಿಕ ಕಷ್ಟಗಳು ಮತ್ತು ಆರ್ಥಿಕ ನಷ್ಟ ನನ್ನನ್ನು ಯೋಚನೆಗೀಡುಮಾಡಿತ್ತು. ಆದರೂ ಭಾರತದಲ್ಲಿರುವಾಗಲೇ ಕಾಶ್ಮೀರವನ್ನೊಮ್ಮೆ ನೋಡಬೇಕೆಂಬ ಹಂಬಲ ನನ್ನಲ್ಲಿ ಬಲವಾಗಿತ್ತು. ಒಮ್ಮೆ ನನ್ನೊಡನೆ ಪ್ರವಾಸಕ್ಕೆ ಬಂದವರು ಮತ್ತೊಮ್ಮೆ ನನ್ನೊಡನೆ ಬರದಿರುವುದು ಒಂದು ಸಮಸ್ಯೆಯೆ. ಬಹುಶಃ ನನ್ನ ನಡವಳಿಕೆಗಳೋ ಅಥವ ಅತಿಯಾದ ಸಮಯ ಪಾಲನೆ ಮಾಡುವ ನನ್ನ ಗುಣವೋ ಇದಕ್ಕೆ ಕಾರಣವಿರಬಹುದು ಗೊತ್ತಿಲ್ಲ. ಅದೇನೆ ಇರಲಿ ಈ ಬಾರಿ ನನ್ನೊಡನೆ ಪ್ರವಾಸಕ್ಕೆ ಬರಲು ಒಪ್ಪಿದವರು ಸಹೋದ್ಯೋಗಿ ಮತ್ತು ಗಾಯತ್ರಿ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀಕಾಂತ ಮತ್ತು ನರಸಿಂಹ ಪ್ರಸಾದ.

೩ ತಿಂಗಳು ಮೊದಲೆ ಪ್ರವಾಸದ ಬಗ್ಗೆ ಆಗಾಗ ಮಾತನಾಡುತ್ತಿದ್ದ ನಾವು ಏಪ್ರಿಲ್ ೨೦೦೯ ರ ಮಕ್ಕಳ ರಜಾ ಸಮಯದಲ್ಲಿ ಪ್ರವಾಸಕ್ಕೆ ಮಹೂರ್ತ ನಿಗಧಿ ಪಡಿಸಿದೆವು. ಅಂತೆಯೆ ಅದಕ್ಕೊಂದು ಸ್ಪಷ್ಟ ರೂಪು ಕೊಡಲು ಕುಳಿತಾಗ ನಾನು ಕಾಶ್ಮೀರದ ವಿಷಯ ಪ್ರಸ್ತಾಪಿಸಿದೆ, ಅದೇಕೊ ಮೌನ ಮನೆಮಾಡಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನಾನು ಶ್ರೀಕಾಂತನಿಗೆ ದುಂಬಾಲು ಬಿದ್ದೆ. ಸ್ವತಃ ಧೈರ್ಯಶಾಲಿಯಾದ ಶ್ರೀಕಾಂತ ಬಹುಶಃ ಸಂಸಾರ ಸಮೇತ ಹೋಗಬೇಕಿರುವುದರಿಂದ ಅವನಲ್ಲಿ ಹಿಂಜರಿಕೆ ಕಾಣಿಸುತ್ತಿತ್ತು. ನನ್ನ ಭಂಡ ಧೈರ್ಯವನ್ನೆ ಅವನಲ್ಲೂ ತುಂಬಿ ಅವನನು ಒಪ್ಪಿಸಿದೆ. ಶ್ರೀಕಾಂತನ ಸಹೋದರ ಮಂಜುನಾಥ್ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ಕಾಶ್ಮೀರ ಕಾರ್ಯಕ್ರಮ ರದ್ದುಗೊಳಿಸಿ ಎಂದು ನಮ್ಮನ್ನು ಪದೇ ಪದೇ ಎಚ್ಚರಿಸಿದರೂ (ಅವರಿಗೆ ಸಿಗುವ ಮಾಹಿತಿಯಂತೆ ಅದು ಸಹಜವೆ) ನಾನು ಹೋಗೇ ತೀರುವುದಾಗಿ ಹಠ ಹಿಡಿದಾಗ ಅನಿವಾರ್ಯವಾಗಿ ಎಲ್ಲರೂ ಒಪ್ಪಿದರೆನೋ? ಶ್ರೀಕಾಂತನ ಸಹೋದ್ಯೋಗಿ ಕಾಂತರಾಜು ಪ್ರತಿವರ್ಷ ಆಯೋಜಿಸುವ ಪ್ರವಾಸದಲ್ಲೆ ಹೋಗಲು ಕೂಡ ಅವಕಾಶವಿದ್ದರೂ ಪೂರ್ವ ನಿರ್ಧರಿತ ಪ್ರವಾಸಗಳು ನಮಗೆ ಸೂಕ್ತವಲ್ಲ ಎಂದು ಅವನಿಗೆ ತಿಳಿಸಿ ನಮ್ಮ ಪ್ರವಾಸ ಕಾರ್ಯಕ್ರಮಕ್ಕೊಂದು ರೂಪ ಕೊಡಲು ಕುಳಿತೆವು. ಏಪ್ರಿಲ್ ಮೊದಲನೆ ವಾರದಲ್ಲಿ ಉತ್ತರಭಾರತದ ವಾತಾವರಣ ಸಮಂಜಸವಾಗಿದ್ದರೂ ನಮ್ಮ ಗಾಯತ್ರಿ ಸಹಕಾರ ಸಂಘದ ಕೆಲವು ಕಾರ್ಯಕ್ರಮಗಳು ಮತ್ತು ಕೇದಾರನಾಥ ದೇವಸ್ಥಾನದ ಬಾಗಿಲು ತೆಗೆಯುವುದು ಏಪ್ರಿಲ್ ೨೯ರಂದು ಎಂಬ ವಿಷಯ ನಮ್ಮ ಕಾರ್ಯಕ್ರಮವನ್ನು ಏಪ್ರಿಲ್ ೩ನೇ ವಾರಕ್ಕೆ ಮುಂದೂಡುವಂತೆ ಮಾಡಿದ್ದು ನಮ್ಮ ಆತಂಕವನ್ನು ಹೆಚ್ಚಾಗಿಸಿತ್ತು. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ ಕೂಡಲೆ ಕೇಂದ್ರ ಚುನಾವಣಾ ಆಯೋಗ, ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿ ನಮ್ಮ ಭಯಕ್ಕೆ ತುಪ್ಪ ಸುರಿದಿತ್ತು. ಅದೃಷ್ಟವಶಾತ್ ಕಾಶ್ಮೀರ ಚುನಾವಣೆಗಳು ನಮ್ಮ ಕಾರ್ಯಕ್ರಮಕ್ಕೆ ತೊಂದರೆ ಉಂಟುಮಾಡದಂತಿದ್ದದ್ದು ಖುಷಿಕೊಡುವ ವಿಚಾರ. ನಮ್ಮ ಕಾರ್ಯಕ್ರಮವನ್ನು ಅಂತಿಮಗೊಳಿಸಿ ಅಂತರ್ಜಾಲದಲ್ಲೆ ರೈಲ್ವೆ ಟಿಕೆಟ್ಗಳನ್ನು ಜಮ್ಮುವರೆಗೆ ಮತ್ತು ದೆಹಲಿಯಿಂದ ಬೆಂಗಳೂರಿಗೆ ಕಾದಿರಿಸಿದೆವು. ನಾನಿರುವ ಬಡಾವಣೆಯಲ್ಲಿರುವ ಸುಮಾರು ೩೦ ಕಾಶ್ಮೀರಿ ಪಂಡಿತರ ಕುಟುಂಬಗಳಲ್ಲಿ ಒಂದಾದ ನನ್ನ ಮನೆಯ ಹಿಂದಿರುವ ಕುಲ್ದೀಪ್ ಪಂಡಿತ್ ಅವರನ್ನು ನಮಗೆ ಸಹಾಯ ಮಾಡುವಂತೆ ಕೇಳಿದಾಗ ಅತ್ಯಂತ ಆತ್ಮೀಯತೆಯಿಂದ ನಮಗೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು. ಅವರ ಮಗನ ಮದುವೆ ಮೇ ೬ ರಂದು ಜಮ್ಮುನಲ್ಲಿರುವುದಾಗಿ ಅದಕ್ಕೂ ಬರಬೇಕೆಂದು ದುಂಬಾಲುಬಿದ್ದರು ಆದರೆ ನಮ್ಮ ಕಾರ್ಯಕ್ರಮದಂತೆ ಅದು ಸಾಧ್ಯವಿಲ್ಲವೆಂದು ಅವರಿಗೆ ತಿಳಿಸಿ ನಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಅವರ ಸಹೋದರ ಜಮ್ಮುವಿನಲ್ಲಿ ವಾಸವಾಗಿರುವ ದಿಲೀಪ್ ಅವರನ್ನು ಸಂಪರ್ಕಿಸಿ ನಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆಯಿತ್ತರು. ಅವರ ನಿರ್ದೇಶನದಂತೆ ಕಾಶ್ಮೀರದ ನಮ್ಮ ಪ್ರವಾಸ ಕಾರ್ಯಕ್ರವನ್ನು ಅಂತಿಮಗೊಳಿಸಿದೆವು.ನಮ್ಮ ಕಾರ್ಯಕ್ರಮ ಇಂತಿತ್ತು.
೧೭-ಏಪ್ರಿಲ್ ಬೆಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ೧೯ರಂದು ಸೇರುವುದು, ಕೆಲವು ಸ್ಥಳಗಳ ವೀಕ್ಷಣೆಗೆ ಅವಕಾಶ.
೧೯ರಂದು ರಾತ್ರಿ ಜಮ್ಮುಗೆ ರೈಲಿನಲ್ಲಿ ಹೊರಟು ೨೦ರಂದು ಜಮ್ಮು ವೀಕ್ಷಣೆಯ ನಂತರ ಕಾಟ್ರಾಗೆ ಪಯಣ ಅಂದಿನ ರಾತ್ರಿ ವೈಷ್ಣೋದೇವಿಯ ದರ್ಶನ
ಮರುದಿನ ಬೆಳಿಗ್ಗೆ ಕಾಟ್ರದಿಂದ ಕಾಶ್ಮೀರದ ಶ್ರೀನಗರಕ್ಕೆ ಪಯಣ, ೩ ದಿನ ಕಾಶ್ಮೀರ ಪ್ರವಾಸ, ೩೫ ರಂದು ಹಿಂತಿರುಗಿ ಜಮ್ಮು, ಮತ್ತು ಅಂದೆ ಶ್ರೀಕಾಂತನ ಅಣ್ಣನ ಮನೆಯಿರುವ ಧರ್ಮಶಾಲ ಗೆ ಪಯಣ.
ಅಲ್ಲಿಂದ ೧ ದಿನದ ನಂತರ ಕುಲು ಮನಾಲಿ ರೋಹ್ತಾಂಗ್ ಪಾಸ್ ೨ ದಿನದ ಕಾರ್ಯಕ್ರಮ ೨ ನೇದಿನದ ರಾತ್ರಿ ಚಂಡೀಗಡಕ್ಕೆ ಪಯಣ ಅಲ್ಲಿಂದ ಹರಿದ್ವಾರಕ್ಕೆ ೧ ದಿನದ ನಂತರ ಕೇದಾರನಾಥ ಮತ್ತು ಬದರಿನಾಥ ದರ್ಶನ ೪ ದಿನಗಳ ಕಾರ್ಯಕ್ರಮ. ಹಿಂತಿರುಗಿ ಬಂದು ಒಂದು ದಿನದ ನಂತರ ದೆಹಲಿಗೆ ಪಯಣ. ಇದಕ್ಕೆ ಅನುಗುಣವಾಗಿ ರಾತ್ರಿ ಪ್ರಯಾಣ ಇರದಂತೆ, ಇದ್ದರೂ ರೈಲು ಸೌಲಭ್ಯವಿರುವ ಕಡೆ ರೈಲು ಪ್ರಯಾಣಕ್ಕೆ ಕಾದಿರಿಸಿದೆವು. ಈ ಮಧ್ಯೆ ಕಾಶ್ಮೀರದ ( ಪಾಕಿಸ್ತಾನದಲ್ಲಿ ತಾಲಿಬಾನ್ಗಳ ಆಕ್ರಮಣ ಮತ್ತು ಅವರಲ್ಲಿ ಕೆಲವರು ಕಾಶ್ಮೀರಕ್ಕೆ ನುಸುಳಿರುವ ಬಗೆ ಪತ್ರಿಕೆಗಳಲ್ಲಿ ಬಂದ) ಕೆಲವು ಸುದ್ದಿಗಳು ನಮ್ಮ ನಿರ್ಧಾರ ಸರಿಯಲ್ಲವೇನೊ ಎಂಬ ಆತಂಕ ತಂದದ್ದೂ ಇದೆ.

ಬಡಾವಣೆಯ ಕಾಶ್ಮೀರಿ ಸ್ನೇಹಿತರು ಅದ್ಯಾವುದು ಸಮಸ್ಯೆ ಪ್ರವಾಸಿಗರನ್ನು ಕಾಡುವುದಿಲ್ಲ ಎಂದು ನನ್ನಲ್ಲಿ ಧೈರ್ಯ ತುಂಬಿದರು. ಏಕೆಂದರೆ ಕಾಶ್ಮೀರದ ಜನರ ಬದುಕು ನಿಂತಿರುವುದೇ ಪ್ರವಾಸಿಗರನ್ನು ಅವಲಂಭಿಸಿ ಎನ್ನುವ ಸತ್ಯ ಅವರಿಗರಿವಾಗಿರುವುದು ಇದಕ್ಕೆ ಕಾರಣ ಅದರಲ್ಲೂ ಯಾವುದೇ ವಿದೇಶಿ ಪ್ರವಾಸಿಗರು ಬರುವುದಿಲ್ಲವಾದರಿಂದ, ಅಲ್ಲಿಗೆ ಭಾರತೀಯ ಪ್ರವಾಸಿಗರಷ್ಟೆ ಗಟ್ಟಿ ಎನ್ನುವ ಕಟು ಸತ್ಯದ ಅರಿವು ಅವರಿಗಿದೆ ಎಂಬ ಧೈರ್ಯ ತುಂಬುವ ಮಾತು ನನ್ನಲ್ಲೇನೊ ಉತ್ಸಾಹ ತುಂಬುತ್ತಿತ್ತು. ಈ ಮಧ್ಯೆ SPICE JET ನ ಅಗ್ಗದ ದರದ ದೆಹಲಿ-ಬೆಂಗಳೂರು ವಿಮಾನದ ಟಿಕೆಟ್ ಲಭ್ಯವಾಗಿದ್ದು ಸಂತಸದ ವಿಚಾರ.

ಈ ಮಧ್ಯೆ ಸಹಕಾರ ಸಂಘದ ಕಾರ್ಯಕ್ರಮಗಳು ಸುಸೂತ್ರವಾಗಿ ಏಪ್ರಿಲ್ ೧೧ ರಂದು ನಡೆಯಿತು. ಏಪ್ರಿಲ್ ೧೭ರಂದು ನಮ್ಮ ಪ್ರಯಾಣದ ದಿನ. ಇದ್ದ ೪-೫ ದಿನದಲ್ಲಿ ನಮ್ಮ ಬಟ್ಟೆ ಬರೆ ಸಾಮಾನುಗಳನ್ನು ಹೊಂದಿಸಿ ಬ್ಯಾಗುಗಳಿಗೆ ತುಂಬುವ ಕೆಲಸ ಅಗತ್ಯವಾಗಿ ಮಾಡಬೇಕಿದ್ದ ಕೆಲಸದ ಬಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆವು. ಶ್ರೀಮತಿ ಗೀತಾಪ್ರಸಾದ್, ಶ್ರೀಮತಿ ಪದ್ಮಶ್ರೀಕಾಂತ್ ಮತ್ತು ನನ್ನ ಪತ್ನಿ ಶ್ರೀಮತಿ ಚಿತ್ರ ತಮ್ಮದೇ ಆದ ಶಾಪಿಂಗ್ ಮಾಡಿ ಸುಸ್ತಾಗಿದ್ದರೆ? ಇರಲಿಕ್ಕಿಲ್ಲ ಬಿಡಿ. ರೈಲಿನಲ್ಲಿ ಸಿಗುವ ಊಟ ಬೇಡವೆಂದು ಚಪಾತಿ ಚಟ್ನಿಪುಡಿ ಪಲ್ಯಗಳು ಟಿ ಬ್ಯಾಗ್ ಕಾಫಿ ಮಾಡಲು ಅದಕ್ಕೆ ಬೇಕಾಗುವ ಪರಿಕರಗಳು ಹಣ್ಣುಗಳು ಒಣಹಣ್ಣುಗಳು ಔಷಧಗಳು ಪ್ರತಿಯೊಂದು ಅಣಿಯಾಗುತ್ತಿದ್ದವು.ಆದರೆ ಅದು ದೊಡ್ಡ ಹೊರೆಯಾಗಿ ಹೋಗುತ್ತಿತ್ತು. ಆಗ ಬಂತು ಒಂದು ಸುದ್ದಿ. ಕಾಶ್ಮೀರದಲ್ಲಿ ಸಾಮಾನ್ಯವಾಗಿ ವಸತಿ ಅತ್ಯಂತ ಹೆಚ್ಚು ಖರ್ಚು ತರುವ ಸಮಸ್ಯೆ. ಆದರೆ ನಮ್ಮ ಕುಲ್ದೀಪ್ ಅವರ ಸಹೋದರ ಶ್ರೀನಗರದ ಜೇಷ್ಠಾದೇವಿ ಮಂದಿರದಲ್ಲಿ ನಮಗೆ ವಸತಿ ಕಾದಿರಿಸಿದ ಸುದ್ದಿ ಸಂತಸದಾಯಕ ವಿಚಾರ. ಜಮ್ಮುವಿನಿಂದಲೆ ವಾಹನದ ವ್ಯವಸ್ಥೆ ಮಾಡಿ ಅತ್ಯಂತ ನಂಬುಗೆಯ ಹಿಂದೂ ಚಾಲಕನನ್ನು ವ್ಯವಸ್ಥೆಗೊಳಿಸಿರುವುದಾಗಿ ಅವರು ತಿಳಿಸಿದರು. ಜೇಷ್ಠಾದೇವಿ ಮಂದಿರದಲ್ಲಿ ನಮಗೆ ಅಡುಗೆ ಮಾಡಲು ಎಲ್ಲ ಪರಿಕರಗಳು, ಪಾತ್ರೆ, ಗ್ಯಾಸ್ ಲಭ್ಯವಿದ್ದು, ಅಡುಗೆಗೆ ಬೇಕಾದ ಪದಾರ್ಥಗಳನ್ನು( ಮೆಣಸಿನಪುಡಿ, ಸಾಂಬಾರ್ಪುಡಿ ಮುಂತಾದವು) ತೆಗೆದುಕೊಂಡು ಹೋಗಲು ತಿಳಿಸಿದರು.

ಏಪ್ರಿಲ್ ೧೭ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಹೊರಡಲಿದ್ದ ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ನಮ್ಮನ್ನು ಬೀಳ್ಕೊಡಲು ಬಂದ ವಸಂತ ಮತ್ತು ನರಸಿಂಹ ಪ್ರಸಾದನ ಮಕ್ಕಳಾದ ವರುಣ್ ಮತ್ತು ವೈಶಾಖ್ ರಿಗೊಂದು ಧನ್ಯವಾದ ತಿಳಿಸಿ ವಸಂತ್ ಕೊಟ್ಟ ರುಚಿಯಾದ ಉಪ್ಪಿನಕಾಯಿಯೊಡನೆ ಚಪಾತಿಯನ್ನು ತಿಂದು ಮಲಗುವ ಮೂಲಕ ನಮ್ಮ ಪ್ರಯಾಣದ ಶುಭಾರಂಭವಾಯಿತು.

ನಮ್ಮ ತಂಡ

ನಾನು, ನನ್ನ ಪತ್ನಿ ಶ್ರೀಮತಿ ಚಿತ್ರ ನನ್ನ ಪುತ್ರ ಅಮಿತ್ ಭಾರದ್ವಾಜ್
ಶ್ರೀಕಾಂತ್ ಆತನ ಧರ್ಮಪತ್ನಿ ಪದ್ಮಶ್ರೀಕಾಂತ್ ಮಕ್ಕಳಾದ ಸುಷ್ಮಿತ ಮತ್ತು ಸುಪ್ರಿಯ
ನರಸಿಂಹ ಪ್ರಸಾದ್ ಮತ್ತು ಆತನ ಧರ್ಮ ಪತ್ನಿ ಗೀತಾಪ್ರಸಾದ್
೬+೩
ಕಾಡುಹರಟೆ, ತಲೆಕೆಟ್ಟ ತರಲೆ ಮಾತುಗಳು, ಹಾಸ್ಯ, ಕಾಲೆಳೆತ, ಮೌನ, ನಿಟ್ಟುಸಿರು ಎಲ್ಲವುಗಳೊಂದಿಗೆ ನಮ್ಮ ೨ ದಿನದ ಪ್ರಯಾಣ ದೆಹಲಿ ತಲುಪಿಸಿತ್ತು. ಪ್ರಯಾಣದ ಮಧ್ಯೆ ರೈಲಿನಲ್ಲಿ ಅಡುಗೆ ಮನೆಗೆ ಹೋದವನಿಗೆ ಅಲ್ಲಿಯ ಕೊಳಕು ಪ್ರಪಂಚದ ಅರಿವಾಯಿತು. ಹಾಲು ಬಿಸಿಮಾಡಿಸಿಕೊಳ್ಳಲೆಂದು ಹೋದವನಿಗೆ ನಿಂತಲ್ಲೆ ಉಗಿಯುತ್ತ ಅಲ್ಲೆ ತೊಳೆಯುತ್ತ ಉಳಿದಿದ್ದ ನಿನ್ನೆಯ ಅನ್ನವನ್ನು ಎಲ್ಲವನ್ನು ಅಲ್ಲೆ ಬಿಸಾಡುತ್ತಾ ಅದರ ಮೇಲೆಯೆ ನಡೆಯುತ್ತಾ ಇದ್ದ ಆ ಅಡುಗೆಯವನನ್ನು ನೋಡಿ ನಾವು ಇಲ್ಲಿ ಊಟ ಮಾಡದಿದ್ದುದೇ ಒಳ್ಳೆಯದೇನೊ ಅನ್ನಿಸಿದ್ದು ಸುಳ್ಳಲ್ಲ. ಆದರೆ ಎಲ್ಲವೂ ಅಷ್ಟೆ ಅಲ್ಲವೆ ನನಗೆ ಕಾಣಿಸಿದ್ದರಿಂದ ಹೀಗೆ ಅಷ್ಟೆ ಅಲ್ಲವೆ?

ದೆಹಲಿಯ ನಿಲ್ದಾಣದಲ್ಲಿ ಇಳಿದಾಗ ಸಮಯ ೮ ಗಂಟೆಯಿರಬೇಕು. ಆಟೋದವನೊಡನೆ ಚೌಕಾಸಿ ಮಾಡಿ ಅಲ್ಲಿಂದ ಪ್ರಸಾದಿಯ ಸಂಭಂದಿ ಕಾದಿರಿಸಿದ ಸಂಸತ್ತಿನ ಬಳಿಯ ತೀನ್ ಮೂರ್ತಿ ಮಾರ್ಗ್ ರಸ್ತೆಯಲ್ಲಿರುವ ಎಂಪಿ ಮನೆಯೊಂದರಲ್ಲಿ ವಾಸ್ತವ್ಯ ಒದಗಿಸಿಕೊಟ್ಟ ಪ್ರಸಾದಿಯ ಸಂಭಂದಿ ಅಮರನಾಥ ಪ್ರಸಾದ್ ಗೆ ಒಂದು ಧನ್ಯವಾದ. ಬೆಳಗಿನ ಕಾರ್ಯಕ್ರಮ ಮತ್ತು ಸ್ವಲ್ಪ ವಿಶ್ರಾಂತಿ ಬಳಿಕ ಹತ್ತಿರದ ಮೈಸೂರು ಕೆಫೆಯಲ್ಲಿ ಅದರ ಮಾಲೀಕ ಕನ್ನಡಿಗ ದೀಪಕ್ ಜೊತೆ ಹರಟುತ್ತಾ ತಿಂಡಿ ಮುಗಿಸಿ ಮೆಟ್ರೋ ಹತ್ತಿಳಿದು ಕರೋಲ್ ಭಾಗ್ ಗೆ ಬಂದು ಮುಂದಿನ ಪ್ರಯಾಣಕ್ಕೆ ಬೇಕಾದ ಕೆಲವು ಸಾಮಗ್ರಿಗಳನ್ನು ಸುಡು ಬಿಸಿಲಿನಲ್ಲಿ ಖರೀದಿಸಿ ಅಲ್ಲೆ ಇರುವ ಉಡುಪಿ ಭವನದಲ್ಲಿ ಊಟ ಮಾಡಿ ದಾರಿಯುದ್ದಕ್ಕೂ ಸಿಗುತ್ತಿದ್ದ ತಣ್ಣಗಿನ ಪಾನೀಯಗಳನ್ನು ಕುಡಿಯುತ್ತಾ ಖರೀದಿ ಮುಗಿಸಿದೆವು. ದೆಹಲಿಯಲ್ಲಿ ನನಗೆ ತುಂಬಾ ಇಷ್ಟವಾದದ್ದು ಕರೋಲ್ ಭಾಗ್ ಏಕೆಂದರೆ ಅಲ್ಲಿ ನಡೆಸಬಹುದಾದ ಚೌಕಾಸಿ Eye-wink ಮತ್ತು ಅಗ್ಗದ ದರಕ್ಕೆ ಸಿಗುವ ವಸ್ತುಗಳು ಅದರಲ್ಲು ಕಾರುಗಳ ಅಲಂಕಾರಿಕ ವಸ್ತುಗಳಂತೂ ಅರ್ಧ ಬೆಲೆಗೆ ಸಿಗುತ್ತದೆಯೆನ್ನುವ ನನ್ನ ಸ್ನೇಹಿತರ ಮಾತು ಸತ್ಯ. ಸುಮಾರು ೨೦ ವರ್ಷದ ಸರ್ದಾರ್ಜಿಯೊಬ್ಬನ ವ್ಯಾಪಾರವನ್ನು ಗಮನಿಸುತ್ತಾ ನಿಂತೆ. ದಾರಿಯಲ್ಲಿ ನಮ್ಮ ಮೆಜೆಸ್ಟಿಕ್ನಲ್ಲಿ ಬರುವಂತೆ ಬಂದ ಯುವಕನೊಬ್ಬ ಸಾರ್ ನನ್ನ ಹತ್ತಿರ ಕನ್ನಡಕವಿದೆ ಕಳ್ಳತನದಿಂದ ತಂದದ್ದು ಒಳ್ಳೆಯ ಕಂಪೆನಿಯದ್ದು ತುಂಬಾ ಅಗ್ಗದದರಕ್ಕೆ ಕೊಡ್ತಿನಿ ಸಾರ್ ತಮ್ಮನಿಗೆ ಓದಲಿಕ್ಕೆ ಪೀಸ್ ಕೊಡ್ಬೇಕು ಅದಕ್ಕೆ ಹೀಗೆ ಸಾರ್ ಎನ್ನುತ್ತಾನೆ. ಇದು ಬಹುಶಃ ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಅನುಭವಕ್ಕೆ ಬಂದಿರುತ್ತದೆ. ಅದೇ ರೀತಿ ಈ ಸರ್ದಾರ್ಜಿಯ ಮತ್ತವನ ಸ್ನೇಹಿತರ ಜೊತೆ ಆತ ಮಾತಿಗೆ ನಿಂತ ನಾನೂ ಗಮನಿಸುತ್ತಾ ನಿಂತೆ. ೯೫೦ ಬೆಲೆ ಹೇಳಿದ ಆ ಕನ್ನಡಕವನ್ನು ಆತ ೭೫೦ ರೂಗೆ ಖರೀದಿಸಿದ. ಸರಿ ನನಗೂ ಆ ಕನ್ನಡಕ ಹಿಡಿಸಿತು. ಸ್ವಲ್ಪ ಮುಂದೆ ಹೋದೆ ಅಲ್ಲಿ ಪಾದಚಾರಿ ರಸ್ತೆಯಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದವನ ಬಳಿ ಇನೊಬ್ಬ ಅದೆ ತೆರನಾದ ಕನ್ನಡಕ ವ್ಯಾಪಾರ ಮಾಡುತ್ತಿದ್ದ. ನಾನು ಅಲ್ಲಿಗೆ ಸಮೀಪಿಸುವಷ್ಟರಲ್ಲಿ ಆಗಲೆ ಚೌಕಾಸಿ ಪ್ರಾರಂಭವಾಗಿತ್ತು. ಆ ಗಿರಾಕಿ ಅದನ್ನು ೯೦ ರೂಗೆ ಕೇಳಿದ ಅವನು ಕೊಡುವುದಿಲ್ಲವೆಂದು ಕಳಿಸಿಬಿಟ್ಟ. ಆ ವ್ಯಕ್ತಿ ಸ್ವಲ್ಪ ಮುಂದೆ ಚಲಿಸಿದ ತಕ್ಷಣ ನಾನು ಅವನನ್ನು ಮಾತನಾಡಿಸಿದೆ ಅಷ್ಟು ಕಡಿಮೆಗೆ ಸಿಗುತ್ತದೆಯೆ ಎಂದು, ಅಶ್ಟೆ ಅದರ ಬೆಲೆಯೆಂದು ತಿಳಿಸಿ ಆ ಆಸಾಮಿ ಹೋಗಿಬಿಟ್ಟ. ೨ ರಸ್ತೆ ದಾಟುವಷ್ಟರಲ್ಲಿ ಆ ತೆರನಾದ ಯುವಕ ನನ್ನ ಬಳಿ ಬಂದ ಮತ್ತದೆ ರಾಗ. ನನ್ನ ದರ ತಿಳಿಸುತ್ತೇನೆಂದೆ ಸರಿ ಎಂದ ೫೦ ರೂ ಎಂದೆ ಆಶ್ಚರ್ಯ ವ್ಯಕ್ತ ಪಡಿಸುತಾ ನನ್ನ ಕಡೆ ನೋಡಿದವನು ಸ್ವಲ್ಪ ದೂರ ಹೊರಟು ಹೋದ ಮತ್ತೆ ಹಿಂತಿರುಗಿ ಬಂದು ನನ್ನನ್ನು ಬಯ್ದ. ಸರಿ ಬಿಡಪ್ಪ ಎಂದವನಿಗೆ ಕನ್ನಡಕಕೊಟ್ಟು ೫೦ ರೂ ತೆಗೆದು ಕೊಂಡು ಹೋದ. ಫೋಟೋಗಾಗಿಯಷ್ಟೆ ಈ ಕನ್ನಡಕಗಳು Eye-wink. ಈ ಮಧ್ಯೆ ಜಮ್ಮುವಿನಿಂದ ದಿಲೀಪ್ ೨ ಬಾರಿ ದೂರವಾಣಿ ಕರೆ ಮಾಡಿ ನಮ್ಮ ಕಾರ್ಯಕ್ರಮ ಮತ್ತು ನಾವು ತಲುಪುವ ಸಮಯ ಮತ್ತೆ ನಮ್ಮ ರೈಲಿನ ಬಗ್ಗೆ ವಿಚಾರಿಸಿದರು. ಅವರ ಈ ಸಹಾಯ ಮನೋಭಾವ ನನ್ನನ್ನು ತುಂಬಾ ಕಾಡಿತು. ನಾವ್ಯಾರೊ? ಅವರ್ಯಾರೊ? ಆದರೂ ಈ ಮಟ್ಟಿನ ಸಹಾಯ!!! ಮತ್ತೆ ಕೋಣೆಗೆ ಹಿಂತಿರುಗಿ ಅಲ್ಲಿಂದ ಆಟೋವೊಂದನ್ನು ಹಿಡಿದು ರೈಲು ನಿಲ್ದಾಣ ತಲುಪಿ ತುಂಬಿ ತುಳುಕುತ್ತಿದ್ದ ಜಮ್ಮು ರೈಲಿನಲ್ಲಿ ನಮ್ಮ ನಮ್ಮ ಆಸನಗಳನ್ನು ಹುಡುಕಿ ಮಲಗಿದೆವು. ಬೆಳಗಿನ ಸಮಯ ೫.೩೦ಕ್ಕೆ ದೂರವಾಣಿ ರಿಂಗಣಿಸತೊಡಗಿತು. ಆ ಕಡೆಯಿಂದ ದಿಲೀಪ್ ಕರೆ ಮಾಡುತ್ತಿದ್ದರು. ಈಗಾಗಲೆ ಜಮ್ಮು ರೈಲ್ವೆ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿರುವುದಾಗಿ ತಿಳಿಸಿದ ದಿಲೀಪ್ ತಾನು ತೊಟ್ಟಿರುವ ಬಟ್ಟೆಯ ಬಗ್ಗೆ ಮತ್ತು ನಾವು ಅವರನ್ನು ಗುರುತಿಸುವ ಬಗ್ಗೆ ತಿಳಿಸಿದರು. ಜಮ್ಮುಕಾಶ್ಮೀರ ರಾಜ್ಯದ ವ್ಯಾಪ್ತಿಯಲ್ಲಿ ಯಾವುದೇ ಪ್ರೀಪೇಡ್ ದೂರವಾಣಿಗಳು ಕೆಲಸ ಮಾಡುವುದಿಲ್ಲ.

ನಿಗದಿತ ಸಮಯಕ್ಕಿಂತ ೧ ಗಂಟೆ ತದವಾಗಿ ರೈಲು ಜಮ್ಮು ತಲುಪಿತು. ಕುಲ್ದೀಪ್ ಪಡಿಯಚ್ಚಿನಂತಿದ್ದ ದಿಲೀಪ್ ಗುರುತಿಸಲು ಹೆಚ್ಚು ಕಷ್ಟವಾಗಲಿಲ್ಲ. ಪರಿಚಯದ ನಂತರ ನಮ್ಮ ಕಾರ್ಯಕ್ರಮ ಮತ್ತು ನಾವು ಅಗತ್ಯವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿ ನಾವು ತೆಗೆದುಕೊಳ್ಳಬಹುದಾದ ಎಚ್ಚರದ ಬಗ್ಗೆ ನಮಗೆ ಮಾಹಿತಿಯಿತ್ತರು. ಅದರಂತೆ ಇಂದು ನಾವು ನಮ್ಮ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ವೈಷ್ಣೋದೇವಿಗೆ ಹೋಗುವ ಬದಲು ನೇರವಾಗಿ ಕಾಶ್ಮೀರಕ್ಕೆ ಹೋಗಬೇಕಾಗಿ ಬಂತು ಕಾರಣ ವೈಷ್ಣೋದೇವಿಯಲ್ಲಿದ್ದ ಜನಜಂಗುಳಿ. ರಲ್ವೇ ನಿಲ್ದಾಣದ ಸಮೀಪಕ್ಕೆ ಹೊರಗಿನ ವಾಹನಗಳನ್ನು ಬಿಡುವುದಿಲ್ಲವಾದ್ದರಿಂದ ಸ್ವಲ್ಪದೂರದಲ್ಲಿ ನಮಗಾಗಿ ಕಾದಿರಿಸಿದ್ದ ವಾಹನವೇರಲು ದಿಲೀಪ್ ಅವರ ಮಾರುತಿ ಓಮ್ನಿಯಲ್ಲಿ ನಮ್ಮ ೧೩ ದೊಡ್ಡ ದೊಡ್ಡ ಬ್ಯಾಗ್ ಗಳನ್ನು ತುಂಬಿಕೊಂಡು ನಾವು ೯ ಮತ್ತು ದಿಲೀಪ್ ನಮ್ಮ ವಾಹನದ ಬಳಿ ಬಂದೆವು. ನಮ್ಮ ವಾಹನಕ್ಕೆ ಇನ್ನೇನು ನಮ್ಮ ಹೊರೆಗಳನ್ನು ತುಂಬಬೇಕೆನ್ನುವಷ್ಟರಲ್ಲಿ ಪ್ರತ್ಯಕ್ಷನಾದ ಅನಾಮಿಕನೊಬ್ಬ ನಮ್ಮ ಚಾಲಕ ಮತ್ತು ದಿಲೀಪ್ ಜೊತೆ ಮಾತುಕತೆಯಾಡಲು ಪ್ರಾರಂಭಿಸಿ ಜಗಳವಾಡಲು ಶುರುವಿಟ್ಟುಕೊಂಡ. ನಮಗೆ ಏನೆಂದು ಅರ್ಥವಾಗಲಿಲ್ಲ. ಸ್ಥಳೀಯ ವಾಹನಗಳನ್ನು ಬಿಟ್ಟು ಬೇರೆ ವಾಹನಗಳನ್ನು ನಾವು ತೆಗೆದುಕೊಳ್ಳುವಂತಿಲ್ಲ ಅದು ಅಲ್ಲಿನ ಅಲಿಖಿತ ನಿಯಮ. ದಿಲೀಪ್ ಆ ವ್ಯಕ್ತಿಗೆ ಹೇಳಿ ಇಂದು ಇವರು ಪಯಣಿಸುವುದಿಲ್ಲವೆಂದೂ ನಾಳೆ ಕಳುಹಿಸುತ್ತೇನೆಂದು ತಿಳಿಸಿ ಮತ್ತೊಮ್ಮೆ ನಮ್ಮೆಲ್ಲರನ್ನೂ ನಮ್ಮ ಹೊರೆಗಳನ್ನೂ ಅವರ ಓಮ್ನಿಗೆ ತುಂಬಿ ಗಾಡಿ ಓಡಿಸಿದರು. ಮುಂದಿನ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಕಾಯುತ್ತಿರುವಂತೆ ನಮ್ಮ ವಾಹನದ ಚಾಲಕನಿಗೆ ತಿಳಿಸಿದರು ಇನ್ನೇನು ಆ ಸ್ಥಳ ಬರುವಷ್ಟರಲ್ಲಿ ನಾವಿದ್ದ ದಿಲೀಪ್ ವಾಹನ ಬಹುಶಃ ನಮ್ಮಲ್ಲೆರ ಭಾರ ಹೊರಲಾರದೆ ಮುಂದಿನ ಎಡಚಕ್ರ ಠುಸ್ಸೆಂದು ಶಬ್ದ ಮಾಡುತ್ತ ಅಲುಗಾಡುತ್ತ ನಿಂತು ಹೋಯಿತು. ಇಳಿದು ಚಕ್ರ ಬದಲಾಯಿಸಿದೆವು. ಅಲ್ಲೆ ಇದ್ದ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ನಮ್ಮ ವಾಹನವನ್ನೇರಿ ದಿಲೀಪ್ಗೊಂದು ಧನ್ಯವಾದ ತಿಳಿಸಿ ಅಲ್ಲಿಂದ ಹೊರಟೆವು.

ನಮ್ಮ ಚಾಲಕ ಕೆಂಪು ಮಿಶ್ರಿತ ಬಿಳಿ ಬಣ್ಣದ, ನಗುಮೊಗದ ರಾಕೇಶ್ ಮಿತಭಾಷಿ. ಎಚ್ಚರಿಕೆಯಿಂದ ಕಣಿವೆರಸ್ತೆಯಲ್ಲಿ ಅಗತ್ಯವಿದ್ದಷ್ಟೆ ಮಾತನಾಡುತ್ತ ನಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಾಹನ ಚಲಾಯಿಸುತ್ತಿದ್ದ ರಾಕೇಶ್ ಸಧ್ಯಕ್ಕೆ ನಮ್ಮ ಆಧಾರ. ಆತನ ಹಿಂದಿ ನಮಗೆ ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತು. ೧೦.೩೦ ಕ್ಕೆ ಹಸಿವಿನಿಂದ ಬಳಲಿ ಹೋದಮೇಲೆ ತಿಂಡಿಗೆ ನಿಲ್ಲಿಸಿದ ಅವನ ಮೇಲೆ ನನಗಂತೂ ಕೋಪ ತಡೆಯಲಾರದಷ್ಟು ಬರುತ್ತಿತ್ತು. ಕೊನೆಗೊಮ್ಮೆ ಹಿಂದೂ ವೈಷ್ಣೋ ಪಂಜಾಬಿ ಡಾಭಾವೊಂದರಲ್ಲಿ ವಾಹನ ನಿಲ್ಲಿಸಿದ ರಾಕೇಶ್. ಆ ಡಾಭಾ ಮಾಲೀಕ ತಿಂಡಿ ಕೊಡಲು ಮತ್ತೊಂದು ಗಂಟೆ ತೆಗೆದುಕೊಂಡ. ಇಶ್ಟರಲ್ಲಾಗಲೆ ಒಂದು ಸುತ್ತು ಮಳೆ ಬಂದು ನಿಂತಿತು. ಇಲ್ಲಿಂದ ನಮ್ಮ ಆಹಾರದ ಬವಣೆ ಪ್ರಾರಂಭವಾಯಿತು ಉಪ್ಪಿಲ್ಲದೆ ಮಾಡಿದ ರೋಟಿ, ಪಲ್ಯವೆಂದು ಕೊಡುವ ಆಲೂ ನಮ್ಮ ನಿತ್ಯ ಆಹಾರವಾಗಿ ಒಗ್ಗಿಸಿ ಕೊಳ್ಳಬೇಕಿತ್ತು. ಜಮ್ಮುಕಾಶ್ಮೀರದಲ್ಲಿ ಅನ್ನ ಸಿಗುತ್ತದೆ ಆದರೆ ಅದರ ಜೊತೆಗೆ ಬರೀ ಸಾಸಿವೆ ಎಣ್ಣೆಯಲ್ಲಿ ಮಾಡಿದ ಆಲೂಗಡ್ಡೆ ಪಲ್ಯಗಳೆ ನಮಗೆ ಗತಿ.
ಬೇಸಿಗೆಯಾದ್ದರಿಂದ ಕಣಿವೆಯಲ್ಲಿನ ಹಸಿರು ಮಾಯವಾಗಿತ್ತು ಎಲ್ಲಿಯೂ ದಟ್ಟಕಾಡು ಕಂಡು ಬರಲೇ ಇಲ್ಲ. ತಾವಿ ನದಿ ನಮ್ಮ ದಾರಿಯುದ್ದಕ್ಕೂ ನಾವು ಹೋಗುತ್ತಿರುವ ವಿರುದ್ದ ದಿಕ್ಕಿನಲ್ಲಿ ರಭಸವಾಗಿ ಹರಿದು ಬರುತ್ತ ಮೋಹಕವಾಗಿ ಕಾಣಿಸುತ್ತಿತ್ತು. ಅಲ್ಲಲ್ಲಿ ಕಣಿವೆಯ ರಾಷ್ಟ್ರೀಯ ಹೆದ್ದಾರಿ ಭೂಕುಸಿತವಾಗಿದ್ದ ಕುರುಹುಗಳು ಭಯ ಹುಟ್ಟಿಸುತ್ತಿತ್ತು. ದಾರಿಯುದ್ದಕ್ಕೂ ೫-೧೦ ಕಿ.ಮೀ ಗಳಿಗೊಮ್ಮೆ ಭಾರತೀಯ ಅರೆಮಿಲಿಟರಿ ಪಡೆಯ ಯೋಧರು ಪಹರೆ ಕಾಯುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ೨ ಗಂಟೆ ಸುಮಾರಿಗೆ ಮತ್ತೊಂದು ವೈಷ್ಣೋ ಪಂಜಾಬಿ ಡಾಭಾದಲ್ಲಿ ಊಟಕ್ಕೆ ನಿಂತಾಗ ಮತ್ತದೆ ಬೇಸರ. ೪ ಗಂಟೆಯ ಸುಮಾರಿಗೆ ಕಣಿವೆಗಳು ಮರೆಯಾಗಿ ಬಯಲು ಪ್ರದೇಶ ತೆರೆದುಕೊಳ್ಳುವ ಜಾಗದಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ೨೭೦೦ ಮೀಟರ್ ಉದ್ದವಿರುವ ಸುರಂಗದ ಮುಖಾಂತರ ಹಾದು ಅಲ್ಲಲ್ಲಿ ಕಾಶ್ಮೀರ ಫೋಲೀಸರಿಗೆ ಲಂಚ ತಿನ್ನಿಸುತ್ತಾ ಶ್ರೀನಗರ ಸಮೀಪಿಸಿದವರಿಗೆ ನಿಜಕ್ಕೂ ಅಲ್ಲಿನ ಸೌಂದರ್ಯ ಅಚ್ಚರಿ ತಂದಿತು. ರಸ್ತೆಯುದ್ದಕ್ಕೂ ಚಿಗುರೆಲೆಗಳಿಂದ ಕೂಡಿದ ಸಾಲಾಗಿ ನಿಂತ ಹಸಿರು ಮರಗಳು ಹಿಂಭಾಗದಲ್ಲಿ ಸೂರ್ಯ ಮರೆಯಾಗುತ್ತಿರುವ ಕೇಸರಿ ಬಣ್ಣ ಇಡೀ ವಾತಾವರಣಕ್ಕೆ ಮೆರಗು ತಂದು ನಾವು ಆನಂದಿಸುತ್ತಿದ್ದರೆ ನಮ್ಮ ಚಾಲಕನಿಗೆ ಕತ್ತಲಾಗುವುದರೊಳಗೆ ಶ್ರೀನಗರದ ಗೂಡು ಸೇರಿಕೊಳ್ಳುವ ತವಕ. ಏಕೆಂದರೆ ಉಗ್ರಗಾಮಿಗಳ ಹಾವಳಿಯ ಭಯ. ಕೊನೆಗೊಮ್ಮೆ ಶ್ರೀನಗರ ಸಿಕ್ಕಾಗ ನಮ್ಮೆಲ್ಲರಲ್ಲೂ ನಿಟ್ಟುಸಿರು. ಇಲ್ಲಂತೂ ಅರ್ಧ ಮೈಲಿ ದೂರಕ್ಕಿಬ್ಬರು ಯೋಧರು ಪಹರೆ ಕಾಯುತ್ತಿರುವುದು ಅಲ್ಲಿನ ಪರಿಸ್ಥಿತಿಯ ಅರಿವು ನಮ್ಮಲ್ಲಿ ಮೂಡಿಸಿತು. ಬಂದು ತಪ್ಪು ಮಾಡಿದೇವೆನೋ ಎಂಬ ಭಾವನೆ ನನ್ನ ಮನದಲ್ಲೂ ಸುಳಿದದ್ದಿದೆ. ದಾರಿಯಲ್ಲಿ ಜೇಷ್ಠಾದೇವಿ ಮಂದಿರದ ದಾರಿ ವಿಚಾರಿಸಲು ರಾಕೇಶ್ ಅತ್ಯಂತ ಹೆಚ್ಚು ಕಾಳಜಿಯಿಂದ ಅತ್ಯಂತ ಸುರಕ್ಷಿತ ಜಾಗಗಳಲ್ಲೆ ತನ್ನ ವಾಹನ ನಿಲ್ಲಿಸುತ್ತಿದ್ದದ್ದು ನನ್ನ ಗಮನಕ್ಕೆ ಬಾರದೇ ಹೋಗಲಿಲ್ಲ. ಅರ್ಧ ಗಂಟೆಯ ಹುಡುಕಾಟದ ನಂತರ ದಾಲ್ ಸರೋವರವನ್ನು ಬಳಸಿ ನಿಷಾದ್ ಉದ್ಯಾವನದ ದಾರಿಯಲ್ಲಿ ಸಾಗಿ ರಾಜಭವನದ ಸಮೀಪ ಬಲ ತಿರುವು ತೆಗೆದುಕೊಳ್ಳುವಂತೆ ಯೋಧನೊಬ್ಬ ತಿಳಿಸಿದ್ದು ಸರಿಯಿತ್ತು. ಜೇಷ್ಠಾದೇವಿ ಮಂದಿರಕ್ಕೆ ಬಂದಿಳಿದಾಗ ಸೂರ್ಯ ತನ್ನ ಕೆಲಸ ಮುಗಿಸಿ ಮರೆಯಾಗುತ್ತಿದ್ದ.

ವಾವ್!! ಅದೆಷ್ಟು ಪ್ರಶಾಂತ ಮತ್ತು ಸುಂದರ ಸ್ಥಳವೆಂದರೆ ಪದಗಳಿಗೆ ನಿಲುಕದ್ದು. ಬರೀ ಹಸಿರು ಗಿಡಮರಗಳಿಂದ ಆವೃತವಾಗಿದ್ದ ಬೆಟ್ಟದ ಹಿನ್ನೆಲೆಯಲ್ಲಿರುವ ಪ್ರದೇಶ. ಎದುರಿಗೆ ಕಾಣುವ ದಾಲ್ ಸರೋವರ. ಜೇಷ್ಠಾದೇವಿ ಮಂದಿರದಲ್ಲೆ ನೀವು ೧ ದಿನ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಕಳೆಯಬಹುದೆಂದು ಕುಲ್ದೀಪ್ ಹೇಳಿದ್ದು ಸುಳ್ಳಲ್ಲ. ಸುತ್ತಲೂ ಬೆಟ್ಟಗುಡ್ಡ ಎದುರಿಗೆ ಮಾತ್ರ ದಾಲ್ ಸರೋವರ, ಎಲ್ಲೋ ಕಾಡಿನೊಳಗೆ ಇದ್ದ ಅನುಭವ. ಬರೀ ಹಕ್ಕಿ ಪಕ್ಷಿಗಳ ಕಲರವ ಬಿಟ್ಟರೆ ಬೇರೇನೂ ಕೇಳಿಸದ ಆದರೆ ಅಷ್ಟೆ ಸುರಕ್ಷಿತವಾದ ಜಾಗದಲ್ಲಿದ್ದದ್ದು ಊಹ್! ನೆಮ್ಮದಿಯ ನಿಟ್ಟುಸಿರು ಬಿಡುವಷ್ಟು ನಿರಾಳತೆ ತಂದಿದ್ದು ಸುಳ್ಳಲ್ಲ. ೩ ಕೊಠಡಿಗಳನ್ನು ನಮಗೆ ಕೊಟ್ಟು ಜೇಷ್ಠಾದೇವಿ ಧರ್ಮಸ್ಥ ಮಂಡಳಿಯ ಮೇಲ್ವಿಚಾರಕರೂ, ವ್ಯವಸ್ಥಾಪಕರೂ ಚೌಧರಿಯವರು ಅಡುಗೆಗೆ ಬೇಕಾಗುವ ಎಲ್ಲ ಪದಾರ್ಥಗಳು ಲಭ್ಯವಿದೆ ಎಂದು ತಿಳಿಸಿದರು. ಅನ್ನ ಮತ್ತು ತಿಳಿಸಾರು ಮಾಡಿ ಊಟಮಾಡಿ ಮಲಗಿದೆವು.

ಬೆಳಿಗ್ಗೆ ಕೃಷ್ಣ ವೈಷ್ಣೋ ಪಂಜಾಬಿ ಡಾಬಾದಲ್ಲಿ ತಿಂಡಿ ಮುಗಿಸಿ ನಮ್ಮ ಪ್ರಯಾಣ ಗುಲ್ಮಾರ್ಗ್ ಕಡೆ. ದಾರಿಯುದ್ದಕ್ಕೂ ಹೂಬಿಟ್ಟಿರುವ ಸೇಬಿನ ಮರಗಳು, ಬಂದೂಕು ಹಿಡಿದಿರುವ ಭಾರತೀಯ ಯೋಧರು ಮತ್ತ್ತು ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಗುಂಪುಗುಂಪಾಗಿ ಮಾತನಾಡುತ್ತಾ ನಿಂತಿರುವ ಜನಗಳು ನನಗಂತೂ ಇಲ್ಲಿನ ಜನರು ಅತ್ಯಂತ ಸೋಮಾರಿಗಳಿರಬಹುದೆಂದು ಅನಿಸಿತು. ೮೫ ಕಿ.ಮೀ ದೂರದ ಗುಲ್ಮಾರ್ಗ್ ತಲುಪಲು ನಮ್ಮ ಚಾಲಕ ತೆಗೆದುಕೊಂಡ ಸಮಯ ಬರೊಬ್ಬರಿ ೩ ಗಂಟೆಗಳು. ದೂರದಿಂದಲೆ ಮಂಜು ಆವರಿಸಿರುವ ಬೆಟ್ಟಗಳ ದೃಶ್ಯ ಮನಸೆಳೆಯುತ್ತದೆ. ಪ್ರಾರಂಭದಲ್ಲಿ ಅಲ್ಲಲ್ಲಿ ಬೆಳ್ಳಗಿನ ಹತ್ತಿ ಬಿದ್ದಂತೆ ಗೋಚರಿಸುವ ಬೆಟ್ಟಗಳು ಮುಂದೆ ಬಂದಂತೆ ಇಡೀ ಪರ್ವತಗಳೆ ಮಂಜಿನ ಆವೃತವಾಗಿರುವುದು ಗಮನಕ್ಕೆ ಬರುತ್ತದೆ. ದಾರಿಯುದ್ದಕ್ಕೂ ಇದ್ದ ಯೋಧರೊಡನೆ ಫೋಟೊ ತೆಗೆಸಿಕೊಳ್ಳಬೇಕೆಂಬ ಹಂಬಲದೊಡನೆ ಕಣಿವೆಯ ಒಂದು ಕಡೆ ನಮ್ಮ ವಾಹನ ನಿಂತ ಕ್ಷಣಾರ್ಧದಲ್ಲಿ ಅಲ್ಲಿದ್ದ ಸೈನಿಕರ ಗುಂಪು ತಮ್ಮ ಕೈಲಿದ್ದ ಅತ್ಯಾಧುನಿಕ ಬಂದೂಕಗಳನ್ನು ತೆಗೆದು ಸಜ್ಜಾಗಿದ್ದು ನಮ್ಮೆಲ್ಲರನ್ನು ದಿಗ್ಮೂಡರನ್ನಾಗಿಸಿತು. ಅವರೊಡನೆ ಮಾತನಾಡಿ ಅವರ ಅನುಮತಿಯನ್ನು ಕೋರಿ ಅವರನ್ನು ಒಪ್ಪಿಸಿ ಒಂದೆರಡು ಫೋಟೋ ಕ್ಲಿಕಿಸಿದೆವು. ದಾರಿಯುದ್ದಕ್ಕೂ ಇಂತಹ ಚಿತ್ರಗಳನ್ನು ತೆಗೆಯಲೆಂದೆ ನಿರ್ಮಿಸದ ಸ್ಥಳಗಳಲ್ಲಿ ನಿಂತು ಚಿತ್ರ ತೆಗೆಯುತ್ತಾ ಶ್ರೀಮತಿ ಗೀತಾ ಅವರಂತೂ ಶೀನಗರಕ್ಕೆ ಬರುವ ದಾರಿಯಲ್ಲಿ ಕಾಣ ಸಿಗುವ ಮಂಜಿನ ಬೆಟ್ಟಕ್ಕೆ ಹೋಗಲು ತಯಾರಿದ್ದರೂ ಅನಿವಾರ್ಯವಾಗಿ ಇಲ್ಲಿಯವರೆಗೆ ಕಾಯಬೇಕಾಗಿ ಬಂತು. ಗುಲ್ಮಾರ್ಗ್ ಬಂದಿಳಿದ ತಕ್ಷಣವೆ ಅಲ್ಲಿನ ಕುದುರೆ ಮಾಲೀಕರಿಂದ ಕಿರಿಕಿರಿ ಪ್ರಾರಂಭವಾಗುತ್ತದೆ. ನಮ್ಮನ್ನು ವಾಹನದಿಂದ ಇಳಿಯಲು ಬಿಡುವುದೇ ಇಲ್ಲ. ಬೆಟ್ಟದ ದಾರಿಯಲ್ಲಿ ನನಗೆ ತಲೆತಿರುಗುವಿಕೆ ಬಂದು ವಾಂತಿಯ ಅನುಭವವಾಗುವುದರಿಂದ ಅವೋಮಿನ್ ಮಾತ್ರೆ ತಿಂದು ತೂಕಡಿಸುತ್ತಾ ಅಲ್ಲಲ್ಲಿ ಏಳುತ್ತಾ ಇದ್ದವನನ್ನು ೧ ಬಾಡಿಗೆ ಕುದುರೆ ೮೦೦ ಹೇಳ್ತಾ ಇದನೆ ಏನ್ಮಾಡೋಣ ಎಂದು ಕರೆದ ಶ್ರೀಕಾಂತನ ಧ್ವನಿ ಎಚ್ಚರಿಸಿರಬೇಕು. ನಡೆದು ಹೋಗೋಣ ಎಂದವನಿಗೆ ಶ್ರೀಕಾಂತ ಸಾಧ್ಯವಿಲ್ಲ ನನ್ನ ಮಕ್ಕಳು ನಡೆಯುವುದಿಲ್ಲ ಎಂದು ಘೋಷಿಸಿಬಿಟ್ಟ. ಅನಿವಾರ್ಯವಾಗಿ ಒಂದು ಕುದುರೆಗೆ ೭೦೦ ರೂಗಳಂತೆ( ಸರಿಯಾಗಿ ಮೋಸ ಹೋಗಿದ್ದು ನಂತರ ಅರಿವಿಗೆ ಬಂತು) ಮಾತನಾಡಿದೆವು. ಅದೂ ಅವರು ಹೇಳುವ ೭ ಕಿ.ಮೀಗಳೆಂದು ತಿಳಿದು.( ಆದರೆ ಅದು ಕೇವಲ ೨ ಕಿ.ಮೀ ಗಳಿಗಿಂತಲೂ ಕಡಿಮೆ ದೂರಕ್ಕೆ) ೭ ಸ್ಥಳಗಳನ್ನು ವೀಕ್ಷಿಸಬಹುದು ಎನ್ನುವ ಅವರ ಮಾತು ಹಸೀ ಸುಳ್ಳು. ಸುತ್ತಿ ಬಳಸಿ ೧.೫ ಕಿ.ಮೀ ದೂರದಲ್ಲಿರುವ ನೇರವಾಗಿ ನಡೆದು ಬಂದರೆ ಕೇವಲ ೧.ಕೀಮೀ ಇರುವ ಖಿಲಾನ್ ಮಾರ್ಗ್ ಗೆ ಬಂದೆವು. ಇದೊಂದೆ ಗುಲ್ಮಾರ್ಗದಲ್ಲಿರುವ ಸುಂದರ ಸ್ಥಳ. ಮತ್ತು ಇದರ ಜೊತೆಗೆ ರೋಪ್ ವೇ ಮಾತ್ರ. ಕುದುರೆಗಳ ಹೆಜ್ಜೆಯಿಂದಾದ ಕೊಚ್ಚೆಯ ಮೇಲಿಳಿದು ಮಂಜಿನ ಬೆಟ್ಟವೇರಲು ಪ್ರಾರಂಭಿಸಿದೆವು. ಒಂದು ಜರ್ಕಿನ್ ಮತ್ತು ಒಂದು ಜೊತೆ ರಬ್ಬರ್ ಬೂಟಿಗೆ (ಛಳಿ ತಡೆಯಲು) ೧೫೦ ರೂಗಳನ್ನು ತೆತ್ತಿದ್ದೆವು.

ಸುಮಾರು ಒಂದೂವರೆ ಗಂಟೆಗಳ ಕಾಲ ಮಂಜಿನ ಆಟವಾಡಿದೆವು ಸುಮಾರು ೧ ಕಿ.ಮೀ ದೂರ ದೇವದಾರು ವೃಕ್ಷಗಳಿಂದಾವೃತವಾಗಿರುವ ಬೆಟ್ಟ ಹತ್ತಿ ಮೇಲೆ ಸಿಕ್ಕ ಮನೆಯಂತಹ ಜಾಗದಲ್ಲಿ ಮಂಜಿನಲ್ಲಿ ಜಾರುತ್ತಾ ಬೀಳುತ್ತಾ ಅಲ್ಲಲ್ಲಿ ಫೋಟೋಗಳನ್ನು ತೆಗೆಯುತ್ತಾ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಇಳಿದು ಕುದುರೆ ಹತ್ತಿ ದಾರಿಯಲ್ಲಿ ಸಿಗುವ ಕೆಲವು ಸ್ಥಳಗಳನ್ನು ದೂರದಿಂದಲೆ ತೋರಿಸುತ್ತಾ ಎ ಏಕ್ ಪಾಯಿಂಟ್ ಹೈ ಸಾಬ್ ಎನ್ನುತ್ತಾ ನಮಗೆ ಹೊಟ್ಟೆ ಉರಿಸುತ್ತಾ ಇದ್ದ ಕುದುರೆಯ ಮಾಲೀಕನನ್ನು ಒದ್ದು ಬಿಡಬೇಕೆನ್ನುವಷ್ಟು ಕೋಪ ಉಕ್ಕಿಬರುತ್ತಿತ್ತು. ಅವರು ಪ್ರವಾಸಿಗರಿಗೆ ಮಾಡುವ ಮೋಸಕ್ಕೆ. ಹಿಂತಿರುಗಿ ನಮ್ಮ ವಾಹನವಿರುವ ಸ್ಥಳಕ್ಕೆ ಬಂದಾಗ ೨ ಗಂಟೆಯಿರಬೇಕು. ತೊಟ್ಟಿದ್ದ ಬಾಡಿಗೆ ಬಟ್ಟೆಗಳನ್ನು ಹಿಂತಿರುಗಿಸಿ ಟೀ ಕುಡಿಯುವಷ್ಟರಲ್ಲಿ ಅಲ್ಲಿನ ವ್ಯಾಪಾರಿಗಳು ಇಲ್ಲಿಂದ ಓಡಿ ಹೋಗಬೇಕೆನಿವಷ್ಟು ಬೇಸರ ತರಿಸುತ್ತಾರೆ. ತಕ್ಷಣವೆ ಮಳೆ ಸುರಿಯಲು ಪ್ರಾರಂಭಿಸಿತು ೫ ನಿಮಿಶ ಸುರಿದ ನಂತರ ಮಳೆ ನಿಂತಿತು ನಂತರ ೫ ನಿಮಿಶದಲ್ಲಿ ಮಂಜು ಬೀಳಲಾರಂಬಿಸಿತು. ಕಡಲೆಕಾಳು ಗಾತ್ರದ ಹತ್ತಿ ಬೀಳುತ್ತಿದೆಯೇನೋ ಎಂಬಂತೆ ಸಣ್ಣಗೆ ಪ್ರಾರಂಭವಾದ ಇದು ನಮಗಂತೂ ಪ್ರಥಮ ಅನುಭವ. ಕೈಲಿ ಹಿಡಿದರೆ ಹತ್ತಿ ಮುಟ್ಟಿದಷ್ಟೆ ಮೃದು. ಮಂಜಿನ ಮಳೆ ೨-೩ ನಿಮಿಷಗಳ ನಂತರ ನಿಂತು ಹೋಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಸಿಕ್ಕ ಡಾಬಾವೊಂದರಲ್ಲಿ ರುಚಿಯಾದ ಫ್ರೈಡ್ ರೈಸ್ ಮತ್ತು ಪಲಾವ್ ಊಟಮಾಡಿ ಶ್ರೀನಗರ ತಲುಪಿದೆವು. ದಾರಿಯಲ್ಲಿ ಸಂತೆ ನಡೆಯುತ್ತಿದ್ದ ಪ್ರದೇಶವೊಂದರಲ್ಲಿ ಕಲ್ಲಂಗಡಿ ಹಣ್ಣು ತೆಗೆದುಕೊಳ್ಳಬೇಕೆಂಬ ನನ್ನ ಮಾತಿಗೆ ರಾಕೇಶ್ ಬೆಲೆ ಕೊಡದೆ ವಾಹನ ನಿಲ್ಲಿಸು ಎಂದು ಕೇಳಿದರೂ ಏನೂ ಮಾತನಾಡದೆ ಬಂದು ಸ್ವಲ್ಪ ದೂರ ಬಂದ ನಂತರ ಆತ ಹೇಳಿದ ಮಾತು ನಮ್ಮೆಲ್ಲರನ್ನೂ ಅಧೀರರನ್ನಾಗಿಸಿತು. ಅದು ಶ್ರೀನಗರದ ಲಾಲ್ ಚೌಕ್ ಭಯೋತ್ಪಾದಕ ಚಟುವಟಿಕೆಗಳಿಗೆ ಅತ್ಯಂತ ಕುಖ್ಯಾತಿ ಪಡೆದ ಪ್ರದೇಶ ಅಲ್ಲಿ ಯಾವ ಪ್ರಾವಾಸಿಗಳು ನಿಲ್ಲುವುದಿಲ್ಲ ನಿಂತರೆ ಅದೂ ಜಮ್ಮುವಿನ ವಾಹನವೆಂದು ತಿಳಿದ ಮರುಕ್ಷಣವೇ ಗ್ರೆನೇಡ್ ಬಂದು ಬೀಳುವುದರಲ್ಲಿ ಸಂಶವೇ ಇಲ್ಲವೆಂದು ಆತ ತಿಳಿಸಿದಾಗ ನಾವೆಲ್ಲಾ ಸಣ್ಣಗೆ ಆ ಛಳಿಯಲ್ಲೂ ಬೆವರಿದ್ದೆವೆ??
ಇಡೀ ಶ್ರೀನಗರ ಭಾರತೀಯ ಯೋಧರಿಂದ ತುಂಬಿ ಹೋಗಿದೆಯೆಂದೆ ಹೇಳಬೇಕು ಇಲ್ಲದಿದ್ದರೆ ಅಲ್ಲಿ ದಿನಕ್ಕೊಂದು ರಕ್ತಪಾತ ಕಟ್ಟಿಟ್ಟ ಬುತ್ತಿ. ಕಾಶ್ಮೀರದ ಬಗ್ಗೆ ಕೇಳಿದ್ದೆವು ಆದರೆ ಹತ್ತಿರದಿಂದ ನೋಡಿ ನಿಜಕ್ಕೂ ಭಯ ನನ್ನನ್ನು ಕಾಡಿತು. ಯಾವಾಗಲೂ ಬೆಂಕಿಯ ಮೇಲೆ ಕುಳಿತಂತೆ ಭಾಸವಾಗುತ್ತಿರುತ್ತದೆ. ಭಯೋತ್ಪಾದಕರು ಪ್ರವಾಸಿಗರ ತಂಟೆಗೆ ಇತ್ತೀಚೆಗೆ ಬರುತ್ತಿಲ್ಲವಾದರೂ ಇತ್ತೀಚೆಗೆ ನುಸುಳಿದ ತಾಲಿಬಾನಿಗಳಿಗೆ ಅವೆಲ್ಲ ಲೆಕ್ಕವಿಲ್ಲ ಎಂಬ ಮಾತುಗಳು ನಮ್ಮ ಮನದಲ್ಲಿ ರಿಂಗಣಿಸುತ್ತವೆ. ಯೋಧರು ಮತ್ತು ಭಯೋತ್ಪಾದಕರ ನಡುವೆ ನಡೆಯುವ ಗುಂಡಿನ ಚಕಮಕಿಗೆ ಆಗಾಗ ಪ್ರವಾಸಿಗಳು ಬಲಿಯಾಗುವುದಿದೆ. ಇಷ್ಟಾದರೂ ಇಲ್ಲಿನ ಸ್ಥಳೀಯ ಸರ್ಕಾರ ಯೋಧರ ನಿಯೋಜನೆಯನ್ನು ವಿರೋಧಿಸುತ್ತದೆ.

ಸೋದರರಂತೆ ಬದುಕುತ್ತಿದ್ದ ಅಮಾಯಕ ಹಿಂದೂ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಭಯೋತ್ಪಾದಕರೊಡಗೂಡಿ ಅವರ ಆಸ್ತಿ ಪಾಸ್ತಿಗಳನ್ನು ಕಬಳಿಸಿ ಹೆಣ್ಣು ಮಕ್ಕಳನ್ನು ಬಲಾತ್ಕರಿಸಿ, ಮತಾಂತರಿಸಿ ಕದ್ದೊಯ್ದು ಅಲ್ಲಿಂದ ಒದ್ದೋಡಿಸಿ ಇಂದು ಭಾರತೀಯ ಪ್ರವಾಸಿಗಳ ಪೈಸೆಯನ್ನೆ ನೆಚ್ಚಿಕೊಂಡು ಕೂತಿರುವುದು ವಿಪರ್ಯಾಸವೇ ಸೈ. ಸ್ವರ್ಗ ಸದೃಶವಾಗಿರಬೇಕಾದ ಪ್ರಶಾಂತತೆಯಿಂದಿರಬೇಕಾದ ಸುಂದರ ನಾಡೊಂದನ್ನು ರಕ್ತಮಯವನ್ನಾಗಿಸಲು ದಾರಿಮಾಡಿಕೊಟ್ಟ ಎಲ್ಲ ನಾಯಕಮಣಿಗಳು ಇಂದು ಪೂಜನೀಯರಾಗಿರುವುದು ನಮ್ಮ ದೇಶದ ದುರಾದೃಷ್ಟವೇ ಸೈ IT HAPPENS ONLY IN INDIA.

ಕಾಶ್ಮೀರದ ಬಗ್ಗೆ ಬೆಂಗಳೂರಿನ ಹವಾನಿಯಂತ್ರಿತ ಕೊಣೆಗಳಲ್ಲಿ ಕುಳಿತು ಮಾರುದ್ದ ಲೇಖನ ಬರೆಯುವ ಡೋಂಗಿ ಜಾತ್ಯಾತೀತವಾದದ ಸ’ಮಜಾ’ವಾದಿ ಬುದ್ದಿಜೀವಿಗಳು ಒಮ್ಮೆ ಇಲ್ಲಿ ಬಂದು ಪರಿಸ್ಥಿತಿಯನ್ನು ಅವಲೋಕಿಸಿದರೆ!!! ಅದಕ್ಕೆಲ್ಲ ಅವರಿಗೆ ಸಮಯ ಮತ್ತು ಸಂಯಮವೆಲ್ಲಿದೆ ಬಿಡಿ ಅವರ ತೆವಲಿನೇದ್ದರೂ ಲೇಖನ ಗೀಚಿ ಬಿಸಾಡಿ ರಾಡಿ ಎರಚಿ ಓಡಿ ಹೋಗುವುದಷ್ಟೆ ಕಾಯಕ. ಈಗೀಗ ಮತಾಂಧತೆಯನ್ನು ಅಪ್ಪಿಕೊಂಡ ಇಲ್ಲಿನ ಸ್ಥಳೀಯರಿಗೂ ತಾವು ಮಾಡಿರುವ ತಪ್ಪಿನ ಅರಿವಾಗಿರುವುದು ಅವರ ಮಾತಿನಿಂದಲೆ ಕೇಳಿ ತಿಳಿದವನಿಗೆ ಎಲ್ಲೊ ಒಂದು ಸಣ್ಣ ಆಶಾಕಿರಣ ಕಂಡಿದ್ದು ಸುಳ್ಳೇನಲ್ಲ. ಇಡೀ ಕಾಶ್ಮೀರ ಕಣಿವೆಯನ್ನು ಭಾರತೀಯ ಸೇನೆ ತನ್ನ ಹತೋಟಿಯಲ್ಲಿಟ್ಟುಕೊಂಡಿರುವುದು ಸ್ಥಳೀಯ ಆಡಳಿತಕ್ಕೆ ಕಣ್ಣು ಕೆಂಪಾಗಾಗಿಸಿರುವುದು ಸಹಜವೇ. ಇಂದು ನಾವೇನಾದರೂ ಯಾವುದೇ ಅಹಿತಕರ ಘಟನೆಯಿಲ್ಲದೆ ಹಿಂತಿರುಗಿ ಬಂದಿದ್ದೇವೆಂದರೆ ಅಲ್ಲಿ ಹಗಲಿರುಳೆನ್ನದೆ, ಮಳೆ, ಅಲ್ಲಿನ ಮೂಳೆ ಕೊರೆಯುವ ಛಳಿಯನ್ನು ಲೆಕ್ಕಿಸದೆ ದಾರಿಯುದ್ದಕ್ಕೂ ಕಣ್ಣಿಗೆ ಎಣ್ಣೆಬಿಟ್ಟು ಕೊಂಡು ಕಾಯುತ್ತಿರುವ ಯೋಧರು ಕಾರಣ. ಭಾರತೀಯ ಯೋಧರೆ ನಿಮಗಿದೋ ನನ್ನ ಕೃತಜ್ಙತಾಪೂರ್ವಕ ನಮನ. ನೀವು ನಮ್ಮ ದೇಶದ ಹೆಮ್ಮೆ ಮತ್ತು ಗರ್ವ.

ರಾತ್ರಿ ಹಿಂತಿರುಗಿ ಬಂದವರಿಗೆ ಶ್ರೀಮತಿ ಗೀತಾ ಪದ್ಮ ಮತ್ತು ಚಿತ್ರಾರವರು ಅಡುಗೆ ಮಾಡಲು ಕೆಲ ಸಾಮಗ್ರಿಗಳ ಪಟ್ಟಿ ನೀಡಿ ತರುವಂತೆ ಆಜ್ಙಾಪಿಸಿದರು. ರಾಕೇಶ್ ಒಲ್ಲದ ಮನಸ್ಸಿನಿಂದಲೆ ನಮ್ಮೊಡನೆ ಬರಲು ಒಪ್ಪಿದ ಆದರೆ ಆತನ ಎಚ್ಚರಿಕೆಯ ಮಾತುಗಳು ನಮ್ಮನ್ನು ಬಿಡದೇ ಕಾಡಿದ್ದುಂಟು. ರಾತ್ರ್ರಿ ೭.೩೦ರ ನಂತರ ಇರುವ ಜಾಗದಿಂದ ಹೊರಬರಬೇಡಿರೆಂದು ದಿಲೀಪ್ ಸಹ ಜಮ್ಮುವಿನಲ್ಲಿ ನಮಗೆ ಎಚ್ಚರಿಕೆ ನೀಡಿದ್ದರೂ ಜೇಷ್ಠಾದೇವಿ ಮಂದಿರದಲ್ಲಿನ ಅಂಗಡಿಯಲ್ಲಿ ಬಹುತೇಕ ಅಡುಗೆ ಪದಾರ್ಥಗಳು ಲಭ್ಯವಿದ್ದರೂ ಕೆಲವು ಅತ್ಯಗತ್ಯ ಪದಾರ್ಥಗಳು ಅಲ್ಲಿ ಸಿಗದ ಕಾರಣ ನಾವು ಶ್ರೀನಗರ ಮಾರುಕಟ್ಟೆಗೆ ಹೋಗಬೇಕಾಗಿ ಬಂತು ಅಂತೂ ಧೈರ್ಯಮಾಡಿ ರಾಕೇಶ್ ನಮ್ಮೊಡನೆ ಬರಲು ಒಪ್ಪಿದ. ನಾಣು ಮತ್ತೆ ಪ್ರಸಾದ್ ತರಕಾರಿ ತರಲು ಇಳಿದರೆ ಹಣ್ಣುಗಳನ್ನು ಇನ್ನೂ ಸ್ವಲ್ಪ ಮುಂದೆ ಹೋಗಿ ಬಂದ ಶ್ರೀಕಾಂತನನ್ನು ಕರೆದುಕೊಂಡ ಹೋದ ರಾಕೇಶ್ ಅಲ್ಲಿನ ಜನಜಂಗುಳಿ ನೋಡಿ ಗಾಭರಿಯಿಂದ ಅವನು ಕೇಳಿದಷ್ಟು ಹಣ ಪಾವತಿಸಿ ಹಣ್ಣೆತ್ತಿಕೊಂಡು ವಾಹನ ಸೇರಿದ್ದು ನಡೆಯಿತು. ಇಂದಂತೂ ಶ್ರೀನಗರದಲ್ಲಿ ವಿಪರೀತ ಛಳಿಯಿತ್ತು. ಬೆಚ್ಚಗಿನ ಬಟ್ಟೆಯಿಲ್ಲದೆ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಚಪ್ಪಲಿಯಿಲ್ಲದೆ ನೆಲದ ಮೇಲಿಟ್ಟ ಕಾಲು ಅಲ್ಲೆ ಮರಗಟ್ಟುವಂತೆ ಭಾಸವಾಗುತ್ತಿತ್ತು. ವೀಪರೀತ ಛಳಿಯಿಂದ ಇಂದು ಬೇಗನೆ ಮಲಗಿದೆವು.

ಬೆಳಿಗ್ಗೆ ೭ ಗಂಟೆಗೆ ಹೊರಡಬೇಕಿದ್ದವರು ಜೇಷ್ಠಾದೇವಿ ಮಂದಿರದಿಂದ ಹೊರಟಾಗ ೮.೩೦. ನೇರವಾಗಿ ಆದಿ ಶಂಕರರಿಂದ ಪೂಜಿಸಲ್ಪಟ್ಟ ಶಿವ ದೇವಸ್ಥಾನದ ಕಡೆಗೆ ನಮ್ಮ ಪ್ರಯಾಣ. ಶ್ರೀನಗರದ ಸಂಪೂರ್ಣ ಪಕ್ಷಿನೋಟ ಇಲ್ಲಿಂದ ಲಭ್ಯ. ೩ ಕಡೆಯಿಂದಲೂ ಬೆಟ್ಟಗಳಿಂದ ಸುತ್ತುವರೆದ ಮಧ್ಯೆ ಸರೋವರನ್ನೊಳಗೊಂಡ ಅತ್ಯಂತ ಸುಂದರ ನಗರ ಶ್ರೀನಗರ. ಪ್ರಸಾದಿಯಂತೂ ಕಸಗುಡಿಸುವ ಹೆಣ್ಣನ್ನೂ ಸಹ ಅವಳಿರುವ ಬಣ್ಣಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದ. ಚಿವುಟಿದರೆ ರಕ್ತ ಚಿಮ್ಮುವ ವರ್ಣದ ಕಾಶ್ಮೀರ ಹೆಣ್ಣುಗಳು ಮನಮೋಹಕರೆಂಬುದರಲ್ಲಿ ಸಂಶವೇ ಇಲ್ಲ. ದಾರಿಯುದ್ದಕ್ಕೂ ಸಾಲಾಗಿ ಬರುತ್ತಿದ್ದ ಪುಟ್ಟ ಶಾಲಾ ಮಕ್ಕಳ ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಸಾದಿ ಮತ್ತು ನಾನು ನಿರತರಾಗಿದ್ದೆವು.

ಒಂದು ಕಿಮೀಗಳಿಗಿಂತ ಮುನ್ನವೆ ನಮ್ಮ ಕ್ಯಾಮೆರಾಗಳನ್ನೆಲ್ಲ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಕಿತ್ತುಕೊಂಡು ಬಿಡುತ್ತಾರೆ. ಕೊನೆಯ ಅರ್ಧ ಮೈಲಿಯನ್ನು ಕಾಲ್ನಡಿಗೆಯಲ್ಲಿ ಹತ್ತುವುದು ತುಸು ತ್ರಾಸದಾಯಕವಾದರೂ ಅಲ್ಲಿಂದ ಕಾಣಸಿಗುವ ಶ್ರೀನಗರದ ರಮ್ಯನೋಟ ದೇಹಶ್ರಮದ ಕಡೆ ಗಮನ ಹರಿಸಲು ಅವಕಾಶ ಕೊಡುವುದಿಲ್ಲ. ವಸಂತ ಋತುವಿನ ಮಹಿಮೆಯಿಂದ ಶಂಕರಾಚಾರ್ಯ ಮಂದಿರದ ಬೆಟ್ಟದಲ್ಲಿ ಹೂಗಳು ಅರಳಿ ನಿಂತ ಬೆಟ್ಟದ ಸೌಂದರ್ಯವನ್ನು ಹೆಚ್ಚಿಸಿದ್ದವು.

೩೨ ವರ್ಷಕ್ಕೆ ದೇಹತ್ಯಾಗ ಮಾಡಿದ ಆ ಮಹಾನುಭಾವ ಅದು ಹೇಗೆ ದಕ್ಷಿಣ ಭಾರತದಿಂದ ಇಲ್ಲಿಗೆ ನಡೆದು ಬಂದರೆಂಬುದೆ ವಿಸ್ಮಯ. ಅದು ಆ ಕಾಲದಲ್ಲಿ ರಸ್ತೆಗಳೇ ಇರದ ಘನ ಘೋರ ಕಾಡು ಮೇಡುಗಳಲ್ಲಿ ಆ ಪುಣ್ಯಾತ್ಮ ಅದು ಹೇಗೆ ಭಾರತದ ಉದ್ದಗಲಕ್ಕೂ ಸಂಚರಿಸಿ ನಶಿಸಿಹೋಗುತ್ತಿದ್ದ ಸನಾತನ ಧರ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಿದರೋ ಆ ದೇವರೆ(ಇದ್ದರೆ?) ಬಲ್ಲ. ದಕ್ಷಿಣದ ಕಾಲಾಡಿಯಲ್ಲಿ ಹುಟ್ಟಿ ಉತ್ತರದ ತುತ್ತತುದಿಯವರೆಗೂ ಸಂಚರಿಸಿ ಹಿಮಾಲಯಗಳಲ್ಲಿ ಆಲೆದು ನಾಲ್ಕೂ ದಿಕ್ಕಿನಲ್ಲಿ ಪೀಠಗಳನ್ನು ಸ್ಥಾಪಿಸಿ ಧರ್ಮ ಮರುಸ್ಥಾಪನೆ ಮಾಡಿದ ಆದಿ ಗುರು ಶ್ರೀಶಂಕರ ಭಗವತ್ಪಾದರು ಇಲ್ಲಿಯ ಶಂಕರಾಚಾರ್ಯ ಬೆಟ್ಟದಲ್ಲಿ ತಪಸ್ಸುಗೈದ ಗುಹೆ ಈಗಲೂ ದರ್ಶನಕ್ಕೆ ಲಭ್ಯವಿದೆ, ಇನ್ನೆಷ್ಟು ದಿನ ಇರುತ್ತೆ ಗೊತ್ತಿಲ್ಲ? ಏಕೆಂದರೆ ಇದನ್ನು ಕಾಶ್ಮೀರ ಸರ್ಕಾರ ಶಂಕರಾಚಾರ್ಯ ದೇವಸ್ತಾನದ ಬೆಟ್ಟವನ್ನು ಮೊದಲ ಹೆಜ್ಜೆಯಾಗಿ ತಕೌತ್-ಎ-ಸುಲೇಮಾನ್ ಎಂದು ಹೆಸರು ಬದಲಿಸಿದೆ.

ಇಲ್ಲಿ ನಮಗೆ ಬೆಳಗಾವಿಯಿಂದ ಬಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಕನ್ನಡಿಗರೊಡನೆ ಉಭಯಕುಶಲೋಪರಿ ವಿನಿಮಯ ಕೂಡ ನಡೆಯಿತು. ಕರ್ನಾಟಕದಿಂದ ದೂರವಿದ್ದಾಗ ಕನ್ನಡಿಗರು ಸಿಕ್ಕು ಮಾತನಾಡಿಸಿದರೆ ಅದು ಅತ್ಯಂತ ಸಂತೋಷದಾಯಕ. ಅದರಲ್ಲಿ ಕಾಶ್ಮೀರದಿಂದ ವಲಸೆ ಹೋಗಿ ಬೆಳಗಾವಿಯಲ್ಲಿ ನೆಲೆಸಿರುವ ಕಾಶ್ಮೀರ ಪಂಡಿತರ ಕುಟುಂಬವೊಂದು ಅಪ್ಪಟ ಕನ್ನಡಿಗರಾಗಿರುವುದು ಅಚ್ಚರಿ ತರಿಸಿತು. ನಮ್ಮ ಕುಲ್ದೀಪ್ ಪಂಡಿತ್ ಹೇಳುವ ಮಾತು ಇಲ್ಲಿ ನೆನಪು ಮಾಡಿಕೊಳ್ಳಲೇ ಬೇಕು. ನಾನು ಕಾಶ್ಮೀರಿ ಆದರೆ ನನ್ನ ಎರಡೆನೆ ಮಾತೃ ಭಾಷೆ ಕನ್ನಡ ೨ನೆ ತವರು ಕನ್ನಡನಾಡು ಎನ್ನುವ ಕುಲ್ದೀಪ್ ಸಾಧ್ಯವಿದ್ದಷ್ಟು ಕನ್ನಡದಲ್ಲೆ ಮಾತನಾಡುತ್ತಾರೆ ಮತ್ತು ತಮ್ಮ ವ್ಯವಹಾರದಲ್ಲಿ ಕೆಲಸ ಕೊಟ್ಟಿರುವ ಎಲ್ಲರೂ ಕನ್ನಡಿಗರು ಎನ್ನುವುದು ಅವರ ಹೆಮ್ಮೆ. ಕನ್ನಡಿಗರನ್ನೂ ಆಂಗ್ಲಭಾಷೆಯಲ್ಲೆ ಮಾತನಾಡಿಸುವ ಒಂದು ವರ್ಗದ ಕನ್ನಡಿಗರು ಇಲ್ಲಿ ಮಾತ್ರ ಕನ್ನಡದಲ್ಲೆ ಮಾತನಾಡಿಸುತ್ತಿದ್ದದ್ದು ಸಂತಸದ ವಿಚಾರ.

ಸುಮಾರು ೧ ಗಂಟೆಯ ನಂತರ ನಿಧಾನವಾಗಿಳಿದು ಬಂದು ವಾಹನ ಸೇರಿಕೊಂಡೆವು. ಇಲ್ಲಿಂದ ನೇರವಾಗಿ ನಾವು ಭೇಟಿ ಕೊಟ್ಟದ್ದು ಉದ್ಯಾನವನಗಳಿಗೆ ಶ್ರೀನಗರದಲ್ಲಿ ಸುಮಾರು ೬ ಉದ್ಯಾನವನಗಳಿವೆ ಒಂದಕ್ಕಿಂತ ಒಂದು ಸುಂದರ ಹೂದೋಟಗಳು. ನಿಷಾತ್, ಚೆಷ್ಮಶಾಹಿ, ಪರಿ ಮಹಲ್ ನಾವು ಈ ೩ ಉದ್ಯಾನವನಗಳನ್ನು ನೋಡಲು ಸಾಧ್ಯವಾಯಿತು. ೪ ಗಂಟೆಯ ಸಮಯಕ್ಕೆ ದಾಲ್ ಸರೋವರಕ್ಕೆ ಭೇಟಿಯಿತ್ತೆವು. ಚೆಷ್ಮಶಾಹಿಯಲ್ಲಿನ ನೀರು ಅತ್ಯಂತ ಪ್ರಸಿದ್ದ ಮತ್ತು ಅತ್ಯಂತ ಶುದ್ದ ಮತ್ತು ರುಚಿಗೆ ಹೆಸರುವಾಸಿ. ಪ್ರಥಮ ಪ್ರಧಾನಮಂತ್ರಿ ಕಾಶ್ಮೀರಿಯೇ ಆದ ನೆಹರೂಗೆ ಕುಡಿಯುವ ನೀರು ದಿನಂಪ್ರತಿ ಇಲ್ಲಿಂದಲೆ ವಿಮಾನದಲ್ಲಿ ತೆಗೆದುಕೊಂಡುಕೊಂಡು ಹೋಗಲಾಗುತ್ತಿತ್ತೆಂದು ಅಲ್ಲಿನ ಕೆಲವರ ವರದಿ. ಪುಟ್ಟ ಶಾಲಾ ಮಕ್ಕಳನ್ನು ಇಲ್ಲಿನ ಅದ್ಯಾನವನದಲ್ಲಿ ಆಡುತ್ತಿದ್ದದ್ದು ಆ ಉದ್ಯಾನವನಕ್ಕೆ ಚಿಟ್ಟೆಗಳ ದಂಡು ಲಗ್ಗೆ ಇಟ್ಟಿದಿಯೆಂಬ ಭಾವನೆ ತರಿಸಿದ್ದು ಸಹಜವೆ. ಹಾಲು ಬಿಳಿಯ ಚರ್ಮದ ಕದಪುಗಳಿಗೆ ಗುಲಾಭಿ ರಂಗು ಬಳಿದಂತಿರುವ ಪುಟ್ಟ ಮಕ್ಕಳು ಗಾಢ ಕೆಂಪು ಹಳದಿ ಹಸಿರು ಬಣ್ಣದ ಬಟ್ಟೆ ತೊಟ್ಟು ನೂರಾರು ಮಕ್ಕಳು ನಲಿದಾಡುತ್ತಿದ್ದರೆ ಅದು ಕಣ್ಣಿಗೆ ಹಬ್ಬ. ಫೋಟೊಗಳಿಗೆ ಒಲ್ಲೆಯೆನ್ನುವವರನ್ನು ಬಲವಂತವಾಗಿ ಫೋಟೊ ತೆಗೆಸಿದೆವು. ಇಲ್ಲಿನ ಉದ್ಯಾನವನಗಳಲ್ಲಿ ಕಾಣ ಸಿಗುವ ಕಡು ಬಣ್ಣದ ಹೂಗಳು ಇಲ್ಲಿನ ವಾತಾವರಣಕ್ಕೆ ಬಣ್ಣ ಹಚ್ಚುತ್ತದೆ. ಒಂದೊಂದು ಹೂಗಳು ಒಂದೊಂದು ವಿಶೇಷ ರೀತಿಯಲ್ಲಿ ಬಣ್ಣದಲ್ಲಿ ತನ್ನದೇ ಆದ ಸೌಂದರ್ಯವನ್ನು ತಂದಿದೆ. ಟುಲಿಪ್ ಕೂಡ ಇಲ್ಲಿ ಲಭ್ಯ.

ಛಳಿಗಾಲದಲ್ಲಿ ಸಂಪೂರ್ಣವಾಗಿ ನೀರಿನ ಮೇಲ್ಪದರ ಹಿಮವಾಗುವ ಈ ಸರೋವರ ಪ್ರಪಂಚದಲ್ಲೆ ಅತ್ಯಂತ ಸುಂದರ ಸರೋವರವೆಂದು ಅಲ್ಲಿಯವರ ಅಂಬೋಣ. ಇಲ್ಲಿನ ದೋಣಿಮನೆಗಳು ಪ್ರಸಿದ್ದ. ಒಂದು ದಿನಕ್ಕೆ ಸುಮಾರು ೧೫೦೦ ದಿಂದ ೬೦೦೦ ರೂ ವರೆಗಿನ ಬೋಟ್ ಹೌಸ್ ಗಳು ಲಭ್ಯ. ಸರೋವರದ ಮಧ್ಯೆಯೆ ಮಾರುಕಟ್ಟೆಯಿರುವುದು ಮತ್ತೆ ಸರೋವರದ ಮಧ್ಯೆಯೆ ಜನ ಜೀವಿಸುವುದು ಅಲ್ಲಿಯೆ ಒಂದು ಅಂಚೆ ಕಛೇರಿ, ಸರ್ಕಾರಿ ಕಛೇರಿ ಇರುವುದು ಇಲ್ಲಿನ ವಿಶೇಷತೆ ಒಬ್ಬೊಬ್ಬರೆ ಹೆಣ್ಣುಗಳು ಇಲ್ಲಿನ ದೋಣಿ ಹುಟ್ಟು ಹಾಕುತ್ತಾ ಹೋಗುವುದು ನಡೆದಾಡಿದಷ್ಟೆ ಸಲೀಸು. ನಮ್ಮ ಚಾಲಕ ಮುನ್ನೆಚ್ಚರಿಕೆಯ ಮಾತುಗಳು ನಮ್ಮನ್ನು ಅಲ್ಲಿನ ಮಾರುಕಟ್ಟೆಯಲ್ಲಿ ಏನನ್ನು ಖರೀದಿಸಲು ಬಿಡಲಿಲ್ಲ. ಸರೋವರವೆನೋ ಸುಂದರ ಆದರೆ ದೋಣಿವಿಹಾರಕ್ಕೆ ಹೊರಟಾಕ್ಷಣ ದೋಣಿಯಲ್ಲೆ ಹಿಂಬಾಲಿಸುವ ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ತಿನ್ನುತಾರೆ. ಕಾಶ್ಮೀರದ ಮುತ್ತುಗಳ ಬಳೆ ಓಲೆ ಸರ ಮುಂತಾದ ಆಭರಣಗಳನ್ನು ದೋಣಿಯಲ್ಲೆ ಕುಳಿತು ಮಾರುತ್ತಾರೆ. ಕೇಸರಿ ಮತ್ತು ಒಣಹಣ್ಣುಗಳನ್ನೂ ಸಹ, ಅದೂ ಅತಿಯೆನಿಸುವಷ್ಟು ಪ್ರವಾಸಿಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಿದ್ದಹಸ್ತರು. ಶ್ರೀಮತಿ ಗೀತಾಪ್ರಸಾದ್ ಅವರ ಬಳೇ ಓಲೆ ಮುಂತಾದ ಆಭರಣಗಳ ಖರೀದಿ ನಡೆದೇ ಇತ್ತು. ೩೫೦ ರೂ ಪ್ರತಿ ಗ್ರಾಂ ಗೆ ಇರುವ ಕೇಸರಿಯನ್ನು ೪೦ ರೂಗೆ ಕೊಟ್ಟು ಹೋಗುತ್ತಾನೆಂದರೆ ಅದೆಂತ ಗುಣಮಟ್ಟದ್ದಿರಬೇಕು ಯೋಚಿಸಿ. ಈ ಮಾರಾಟಗಾರರ ಜಾಲ ಎಷ್ಟು ಬಲವಾಗಿದೆಯೆಂದರೆ ನಾವು ದೋಣಿಯಿಂದ ಇಳಿದು ಆ ಮಾರುಕಟ್ಟೆಯಲ್ಲಿ ಅವನ ನಿಷ್ಠರಾದ ಒಂದು ಅಂಗಡಿಗೆ ಭೇಟಿಕೊಡುವಂತೆ ಬೆದರಿಕೆ ಕೂಡಾ ಹಾಕುತ್ತಾನೆ. ನಾನಂತೂ ಇಂತದಕ್ಕೆಲ್ಲಾ ಜಗ್ಗುವವನೆ ಅಲ್ಲ. ನನ್ನ ಮೊಂಡಾಟ ಅವನಿಗೆ ಕಿರಿಕಿರಿ ಉಂಟಾಗಿ ನಮ್ಮನ್ನು ವಿಧಿಯಿಲ್ಲದೆ ಹಿಂತಿರುಗಿ ಕರೆದುಕೊಂಡು ಹೊರಟ. ಆ ಬಟ್ಟೆ ಅಂಗಡಿಗೆ ಹೋಗದಿದ್ದರೆ ವಾಪಸ್ ಕರೆದುಕೊಂಡು ಹೋಗುವುದಿಲ್ಲ ಎಂದು ಬೆದರಿಸಿದ ಪ್ರಸಂಗಗಳಿವೆಯೆಂದು ನನ್ನ ಸಹೋದ್ಯೋಗಿ ನಿರ್ಮಲ ಈ ಲೇಖನ ಬರೆಯುವ ಸಂದರ್ಭದಲ್ಲಿ ತಿಳಿಸಿದರು.

ನೇರವಾಗಿ ಮಂದಿರಕ್ಕೆ ಹಿಂತಿರುಗಿದೆವು.

ಮರುದಿನ ನಮ್ಮ ಪ್ರಯಾಣ ನೇರವಾಗಿ ಪಹಲ್ಗಾಂ ಕಡೆಗಿರಬೇಕಿತ್ತು ಆದರೆ ಪಹಲ್ಗಾಂ ನೋಡದಿದ್ದರೂ ಪರವಾಗಿಲ್ಲ ಸಾರ್ ಪಟ್ನಿಟಾಪ್ ಅದೇ ರೀತಿಯಿದೆ ಅಲ್ಲೆ ಇಂದು ಉಳಿದು ನಾಳೆ ಹೋಗೋಣ ಎಂದ ನಮ್ಮ ಚಾಲಕ ಬಹುಶಃ ಅಲ್ಲಿನ ವಸತಿ ಗೃಹಗಳಲ್ಲಿ ಸಿಗುವ ಕಮೀಶನ್ ಹಣದ ಆಸೆಗಿರಬೇಕು ಆಯ್ತು ಹಾಗೇ ಮಾಡೋಣ ಎಂದು ತಿಳಿಸಿ ಪಟ್ನಿಟಾಫ್ ಅಂದರೆ ಜಮ್ಮುವಿನ ಕಡೆಗೆ ಹೊರಟೆವು. ೮.೩೦ ಕ್ಕೆ ಮುನ್ನ ಸುರಂಗದ ಬಾಗಿಲು ತೆಗೆಯುವುದಿಲ್ಲವಾದ್ದರಿಂದ ಶ್ರೀನಗರದಿಂದ ಒಂದು ಗಂಟೆಯ ಪ್ರಯಾಣದ ನಂತರ ಪಂಜಾಬಿ ಡಾಬಾವೊಂದರಲ್ಲಿ ದೋಸೆಯೆನ್ನುವ ಹುಳಿಮಡುಗಟ್ಟಿದ್ದ ದೋಸೆಯನ್ನು ತಿಂದು ಹೊರಟೆವು. ಕ್ರಿಕೆಟ್ ಬ್ಯಾಟ್ಗಳು ಅತೀ ಅಗ್ಗದ ದರದಲ್ಲಿ ಸಿಗುತ್ತವೆ. ಬ್ಯಾಟ್ ತಯಾರಿಸಲು ಬಳಸುವ ಮರ ಇಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಅಕ್ರೂಟನ್ನು ನಾವು ಶ್ರೀನಗರದಲ್ಲಿ ಖರೀದಿಸಿ ಮೋಸ ಹೋಗಿದ್ದೇವೆಂದು ಇಲ್ಲಿ ತಿಳಿಯಿತು.

೧ ಗಂಟೆಯ ಪ್ರಯಾಣ ನಮ್ಮನ್ನು ಸುರಂಗ ಮಾರ್ಗಕ್ಕೆ ತಂದು ನಿಲ್ಲಿಸಿತು. ಇಲ್ಲಿ ನಮ್ಮ ಚಾಲಕ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟ. ಏಕೆಂದು ವಿಚಾರಿಸಿದವನಿಗೆ ಇಲ್ಲಿಂದ ಮುಂದೆ ಉಗ್ರಗಾಮಿಗಳ ಯಾವುದೇ ಉಪಟಳದ ಭಯವಿಲ್ಲ ಎಂದ. ಹೌದು ಅವನು ಹೇಳಿದ್ದು ನಿಜ ನಾವೆಂತ ಭೀತಿ ತುಂಬಿದ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವೆಂದರೆ, ಹಿಂದಿನ ದಿನ ನಾವು ಗುಲ್ಮಾರ್ಗ್ ಗೆ ಹೋಗುವ ದಾರಿಯಲ್ಲಿ ಒಂದು ಹಳ್ಳಿಯಲ್ಲಿ ಉಗ್ರಗಾಮಿಗಳ ಅಡಗುತಾಣದ ಬಳಿ ಸೈನಿಕರು ನಡೆಸಿದ ದಾಳಿಗೆ ೫ ಜನ ಬಲಿಯಾಗಿದ್ದನ್ನು ಚೌಧರಿ ನನಗೆ ತಿಳಿಸಿದ್ದರು ನಾನು ದಯಮಾಡಿ ನಮ್ಮ ಗುಂಪಿನ ಯಾರಿಗೂ ಇದನ್ನು ತಿಳಿಸಬೇಡಿರೆಂದು ಮನವಿಮಾಡಿದೆ. ನಾನೀ ವಿಷಯ ಬಹಿರಂಗಗೊಳಿಸಿದ್ದು ಧರ್ಮಶಾಲದಲ್ಲಿ. ನಾವು ಕಾಶ್ಮೀರದಲ್ಲಿದ್ದ ೩ ದಿನದಲ್ಲಿ ಉಗ್ರಗಾಮಿಗಳು ಮತ್ತು ಸೈನಿಕರ ನಡುವಿನ ಚಕಮಕಿಯ ಘಟನೆಗಳು ನಡೆದದ್ದು ೪ ಸತ್ತದ್ದು ೭ ಜನ. ಚುನಾವಣೆ ವಿಫಲಗೊಳಿಸುವುದು ಅವರ ಗುರಿ. ಅದಕ್ಕೆ ಕೆಲವು ಸ್ಥಳೀಯರ ಕುಮ್ಮಕ್ಕೂ ಕೂಡಾ ಇದೆ ಸಹಜ ಅಲ್ವೆ? ಪಾಕೀಸ್ತಾನ ಮಾಡಿದ್ದೆಲ್ಲ ಸರಿಯೆನ್ನುವ ಭಾರತೀಯ ಬುದ್ದಿಜೀವಿಗಳಿರಬೇಕಾದರೆ ಇದೇನು ಅಂಥಹ ಅಪರಾಧವಲ್ಲ ಬಿಡಿ.
ಪಟ್ನಿ ಟಾಪ್ ನಮ್ಮ ಕೆಮ್ಮಣ್ಣುಗುಂಡಿಯಶ್ಟೆ ಸುಂದರ ೧ ಗಂಟೆಯ ಕಾಲ ಇಲ್ಲಿದ್ದು ಚಾಲಕನಿಗೆ ನೇರವಾಗಿ ಕಾಟ್ರಕ್ಕೆ ತೆರಳುವುಂತೆ ಹೇಳಿದೆವು ಒಲ್ಲದ ಮನಸ್ಸಿನಿಂದ ಆತ ಗಾಡಿ ಚಲಾಯಿಸಿದ. ಕಾಟ್ರಾದಲ್ಲಿಳಿದಾಗ ಸಂಜೆ ೫ ಗಂಟೆ. ಇಲ್ಲಿಂದ ೧೪ ಕಿ.ಮೀ ದೂರದಲ್ಲಿರುವ ಗುಹಾ ದೇವಾಲಯ ವೈಷ್ಣೋದೇವಿಗೆ ನಡದೆ ಹೋಗಬೇಕು ಇಲ್ಲವೆ ಕಚ್ಚರ್ ಎನ್ನುವ ಕುದುರೆ ಮತ್ತು ಕತ್ತೆಯ ಸಂಗಮದ ಪ್ರಾಣಿಯ ಮೇಲೆ ಸವಾರಿ ಮತ್ತು ೩ನೆ ಯ ಆಯ್ಕೆ ಡೋಲಿ. ನಡೆದೆ ಹತ್ತುವ ತೀರ್ಮಾನ ತೆಗೆದು ಕೊಂಡು ನಡೆಯಲು ಆರಂಭಿಸಿದೆವು. ದಾರಿಯುದ್ದಕ್ಕೂ ದೀಪಗಳು ಮತ್ತು ೨೪ ಗಂಟೆ ಕಾರ್ಯ ನಿರ್ವಹಿಸುವ ಅಂಗಡಿಗಳು ನಮ್ಮ ನಡಿಗೆಯನ್ನು ಸ್ವಲ್ಪ ಆರಾಮಗೊಳಿಸುತ್ತವೆ. ಅಬ್ಬ ಇಲ್ಲಿನ ಜನರ ಈ ದೇವಿಯ ಮೇಲಿನ ಭಕ್ತಿಗೆ ಮೇರೆಯೇ ಇಲ್ಲ. ಕುಂಟರು ಕುರುಡರು ವಯಸ್ಸಾದವರು ಎಲ್ಲ ರೀತಿಯ ಜನ ಅಷ್ಟೂ ದೂರ ಬರೀ ಕಾಲ್ನಡಿಗೆಯಲ್ಲೆ ಕ್ರಮಿಸುತ್ತಾರೆ. ಒಬ್ಬನಂತೂ ನನ್ನ ಗಮನಕ್ಕೆ ಬಂದ ಪೋಲಿಯೋ ಪೀಡಿತ ಯುವಕ. ರಭಸವಾಗಿ ಆತ ಹತ್ತಿ ಹೋಗುತ್ತಿದ್ದದ್ದು ನನಗೆ ಅತ್ಯಾಶ್ಚರ್ಯ ಉಂಟು ಮಾಡಿತ್ತು. ಇನ್ನೊಬ್ಬ ಯುವಕ ಹೆಜ್ಜೆ ನಮಸ್ಕಾರ ಹಾಕುತ್ತಿದ್ದದ್ದು ಅದಕ್ಕಿಂತ ಆಶ್ಚರ್ಯ. ಆತ ದೇವಸ್ತಾನ ತಲುಪಲು ಕನಿಷ್ಠ ೩ ದಿನಗಳಾದರೂ ಬೇಕು. ೫ ಗಂಟೆಗಳಲ್ಲಿ ಸುಮಾರು ೧೨.೩೦ನಿಮಿಷಕ್ಕೆ ದೇವಸ್ತಾನ ತಲುಪಿದೆವು. ಭೈರವ ಬಾಬಾನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಗುಹೆಯನ್ನು ಹೊಕ್ಕ ಪಾರ್ವತಿಯ ಮಂದಿರ ವೈಷ್ನೋದೇವಿ ಎಂದು ಇಲ್ಲಿನ ಜನರ ನಂಬಿಕೆ. ಇಲ್ಲಿಂದ ಮೇಲೆ ಅದೇ ಭೈರೂ ಬಾಬಾನ ಮಂದಿರವಿದೆ ಅಲ್ಲಿಗೆ ಹೋಗಲು ನಮಗ್ಯಾರಿಗೂ ಮನಸ್ಸಿರಲಿಲ್ಲ ನಮ್ಮಲ್ಲಿ ತ್ರಾಣವೂ ಉಳಿದಿರಲಿಲ್ಲ. ದೇವಿಯ ದರ್ಶನದ ನಂತರ ಕಾಲ್ನಡಿಗೆಯಲ್ಲಿ ಇಳಿಯಲು ಸಾಧ್ಯವಿಲ್ಲವೆಂದು ತಿಳಿಸಿ ಶ್ರಿಕಾಂತ ಮತ್ತು ಪ್ರಸಾದ್ ಕಚ್ಚರ್ ಹತ್ತಿದರು ವಿಧಿಯಿಲ್ಲದೆ ನಾನೂ ಕೂಡ ಅವರನ್ನೆ ಹಿಂಬಾಲಿಸಬೇಕಾಯಿತು. ಬೆಳಗಿನ ಜಾವ ೨.೩೦ಕ್ಕೆ ಹೊರಟು ೭ ಗಂಟೆ ಸುಮಾರಿಗೆ ಕಾಟ್ರ ತಲುಪಿ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದವರಿಗೆ ಎಚ್ಚರವಾದದ್ದು ೧೧ ಗಂಟೆಗೆ. ಅಲ್ಲಿಂದ ಹೊರಟು ಮಧ್ಯಾನ್ಹ ೧ ಗಂಟೆ ಸುಮಾರಿಗೆ ಜಮ್ಮು ತಲುಪಿದೆವು. ಕೋಣೆಗಳನ್ನು ತೆಗೆದುಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ, ದೇವಸ್ತಾನಗಳ ನಗರ ಜಮ್ಮು ವೀಕ್ಷಣೆಗೆ ಹೊರಟೆವು. ಮೊದಲಿಗೆ ಜಾಮ್ನು ಗುಫಾ, ಬಹುಕೋಟೆ ಕಾಳಿ ಮಂದಿರಕ್ಕೆ ಭೇಟಿಯಿತ್ತೆವು. ನಂತರ ನಮ್ಮ ಚಾಲಕ ನಮ್ಮಿಂದ ಬೀಳ್ಕೊಂಡ. ಅವನಿಗೆ ಸಲ್ಲಬೇಕಾದಷ್ಟು ಹಣ ಪಾವತಿಸಿ ಅವನಿಗೆ ಟಾಟಾ ಮಾಡಿದೆವು. ಸಂಜೆ ೭ ರ ಸುಮಾರಿಗೆ ಹೊರಬಂದು ನಾನು ಮತ್ತು ಶ್ರೀಕಾಂತ ಧರ್ಮಶಾಲಕ್ಕೆ ಇರುವ ಬಸ್ ವಿಚಾರಿಸಿ ಮುಂಗಡ ಟಿಕೆಟ್ ಸಾಧ್ಯವಿಲ್ಲದ್ದರಿಂದ ಅದು ಬರುವ ಸಮಯ ಮತ್ತು ಸ್ಥಳ ವಿಚಾರಿಸಿದೆವು. ಅಶ್ಟರಲ್ಲಿ ಸಜ್ಜಾಗಿದ್ದ ಉಳಿದವರೊಡನೆ ರಘುನಾಥ ಮಂದಿರಕ್ಕೆ ಭೇಟಿಯಿತ್ತೆವು. ಎರಡು ಬಾರಿ ಉಗ್ರರ ದಾಳಿಗೆ ಸಿಕ್ಕು ಬದುಕುಳಿದಿರುವ ರಘುನಾಥ ಮಂದಿರದ ಪ್ರಶಾಂತತೆ ನನಗಿಷ್ಟವಾಯಿತು. ನಾವು ಅಲ್ಲಿಗೆ ಬರುವ ಸಮಯಕ್ಕೆ ಸರಿಯಾಗಿ ಮಂಗಳಾರತಿ ನಡೆಯುತ್ತಿತ್ತು. ಇಲ್ಲಿರುವ ಸ್ಫಟಿಕದ ಶಿವಲಿಂಗ ಅತ್ಯಂತ ಆಕರ್ಷಣೀಯ. ದೇವಸ್ತಾನದಿಂದ ಹೊರಬಂದು ಲಘು ಉಪಹಾರ ಬಾಳೆಹಣ್ಣು ಮತ್ತು ಲಸ್ಸಿ (ಎಲ್ಲವೂ ಸೇರಿ ಊಟದಂತೆ) ಸೇವಿಸಿ ಮಲಗಿದೆವು. ಇಲ್ಲಿಗೆ ನಮ್ಮ ಜಮ್ಮುಕಾಶ್ಮೀರ ಪ್ರವಾಸ ಮುಗಿದಿತ್ತು. ಪ್ರವಾಸಕ್ಕೆ ನೆರವಾದ ಕುಲ್ದೀಪ್ ಪಂಡಿತ್ ಮತ್ತು ದಿಲೀಪ್ ಪಂಡಿತ್ ಮತ್ತು ಅವರ ಕುಟುಂಬ ವರ್ಗಕ್ಕೆ ನಾವೆಲ್ಲರೂ ಚಿರಋಣಿಗಳು. ನಾವು ಕಾಶ್ಮೀರಕ್ಕೆ ಹೋಗ್ತಿವಿ ಎಂದು ತಿಳಿದ ಎಲ್ಲ ಸ್ನೇಹಿತರು ಅಲ್ಲಿನ ಅಪಾಯದ ಬಗ್ಗೆ ಎಚ್ಚರಿಸಿದರೂ ನನ್ನ ಭಂಡ ಧೈರ್ಯ ಇಲ್ಲಿಗೆ ಎಳೆದು ತಂದಿತ್ತು.

ಯಾವುದೆ ಅಹಿತಕರ ಘಟನೆಯಿರದೆ ಸುರಕ್ಷಿತವಾಗಿ ಇಲ್ಲಿಂದ ಹೊರಬಂದದ್ದು ನನಗಂತೂ ಅತೀವ ಸಂತಸಕ್ಕೆ ಕಾರಣವಾಯಿತು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. ನನಗಿಂತ ಧೈರ್ಯ ಮಾಡಿ ಇಲ್ಲಿಗೆ ದಾವಣಗೆರೆಯಿಂದ ತಮ್ಮ ಸ್ವಂತ ಮಾರುತಿ ಕಾರಿನಲ್ಲಿ ಇಲ್ಲಿಗೆ ಬಂದು ಹೋದ ಆ ಕುಟುಂಬ ಅತ್ಯಂತ ಧೈರ್ಯಶಾಲಿ, ಅದರ ಬಗ್ಗೆ ಮುಂದೆ ಬರೆಯಲಿದ್ದೇನೆ.

Tuesday, March 3, 2009

ದೇವರಿಗೆ ಹಿಪ್ನಾಟಿಸಂ, ಹೀಗೊಂದು ನನ್ನ ಅನುಭವ.


ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.
ಒಂದು ಬೆಳಿಗ್ಗೆ ನಮ್ಮ ಗುಂಪಿನ ಹುಡುಗರಾದ (ಇದ್ದದ್ದೇ ೩ ಮತ್ತೊಂದು ಜನ ಅದರಲ್ಲಿ ಗುಂಪೇನು ಇರಲಿಲ್ಲ ಆದರೂ ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಗುಂಪುಗಳಿದ್ದದ್ದು ನಿಜ) ಮುರಳಿ,ಮಂಜು, ಸಂಜೀವ್ ಬದಾಮಿ, ಎಲ್ಲರೂ ನಿನ್ನೆ ನಡೆದ ಹಿಪ್ನಾಟಿಸಂ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದೂರಿನ ಬಸ್ಸಿಳಿದು ಅವರ ಜೊತೆ ಸೇರಿದ ನನಗೆ ಇದು ಹೆಚ್ಚು ಕುತೂಹಲ ಮೂಡಿಸಿತು. ನಮ್ಮ ಪ್ರಾಧ್ಯಾಪಕರ ಸಂಬಂಧಿ ಮತ್ತು ಸ್ನೇಹಿತರಾದ ವೈದ್ಯರೊಬ್ಬರು ( ಇವರ ಮನೆಯಲ್ಲಿದ್ದ ಸುಂದರ ಹುಡುಗಿಯಿಂದ ಇವರು ನಮಗೆಲ್ಲ ಚಿರಪರಿತರು) ನಡೆಸಿದ ಅಥವ ಪ್ರಯೋಗಿಸಿದ ಹಿಪ್ನಾಟಿಸಂಗೆ ಒಳಗಾದ ಮುರಳಿ ತನ್ನ ಅನುಭವವನ್ನು ಬಿಡಿ ಬಿಡಿಯಾಗಿ ಅರುಹಿದ. ನನಗಂತೂ ಕುತೂಹಲ ನೂರ್ಮಡಿಸಿತು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ’ಅಘೋರಿಗಳ ನಡುವೆ’ ಕಾದಂಬರಿಯನ್ನು ಪ್ರತಿವಾರ ಕಾಯುತ್ತ ಓದಿದ್ದು ನೆನಪಿನಲ್ಲಿತ್ತು ಮತು ಅದೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಲೈಬ್ರರಿಯಿಂದ ತಂದು ೨-೩ ಬಾರಿ ಓದಿದ್ದೆ. ಅಘೋರಿಗಳು ಗಳಿಸಿರುವ ಅಗಾಧ ಮಾನಸಿಕ ಶಕ್ತಿ ಮತ್ತು ಅವರಿಗಿರುವ ಏಕಾಗ್ರತೆಯನ್ನು ಮತ್ತು ಇಡೀ ಕಾದಂಬರಿಯ ಹೂರಣವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟ ಆ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿತ್ತು.
ಮುರಳಿಯ ಕೈಯನ್ನು ಕಭ್ಭಿಣದಂತೆ ಗಟ್ಟಿಯೆಂದು ಆದೇಶವಿತ್ತು. ನಂತರ ಸೂಜಿಯಿಂದ ಆಳಕ್ಕೆ ಚುಚ್ಚಿದ್ದರೂ ಆತನಿಗೆ ನೋವಾಗದಿದ್ದದ್ದು ನನಗೆ ಕುತೂಹಲದ ವಿಷಯ ಆದರೆ ಇದನ್ನೆಲ್ಲಾ ಹೇಳುವಾಗ ಅದರ ನೋವನ್ನುಣ್ಣುತ್ತಿದ್ದ. ಹಿಪ್ನಾಟಿಸಂ ಮುಖಾಂತರ ಕೆಲವು ಮಾನಸಿಕ ಜನ್ಯ ಖಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯ ಬಗ್ಗೆ ಆಗತಾನೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೇರುವ ಪ್ರಯತ್ನದಲ್ಲಿದ್ದ ಆ ವೈದ್ಯರ ಮಾತುಗಳು ನನ್ನನ್ನು ಆ ಕಡೆಗೆ ಬಲವಾಗಿ ಸೆಳೆಯಿತು. ಅಂತೂ ಒಂದು ಶನಿವಾರ ಮತ್ತೊಮ್ಮೆ ಪ್ರಯೋಗ ಮಾಡಿ ತೋರಿಸಲು ಆ ವೈದ್ಯರನ್ನು ಒಪ್ಪಿಸಿ ನಾವೆಲ್ಲ ಆ ಶನಿವಾರಕ್ಕಾಗಿ ಕಾಯುತ್ತಾ ಕುಳಿತೆವು.
ರಾತ್ರಿ ಹತ್ತೂವರೆಯ ಸುಮಾರಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅವರ ಕ್ಲೀನಿಕ್ ಸೇರಿ ಮುಂದಿನ ಶಟರ್ ಮುಚ್ಚಿದೆವು.. ವೈದ್ಯರು ನಮ್ಮನ್ನೆಲ್ಲ ಮಾತನಾಡಿಸಿ ೧೦-೧೫ ನಿಮಿಷ ಹಿಪ್ನಾಟಿಸಂ ಬಗ್ಗೆ ಸಣ್ಣ ವಿವರಣೆಯೊಂದಿಗೆ ಪ್ರಾರಂಭಿಸಿದರು. ಹಿಪ್ನಾಟಿಸಂ ಗೆ ಒಳಗಾಗುವ ಇಚ್ಚೆಯಿದ್ದವರನ್ನು ಒಂದೆಡೆ ಸಾಲಾಗಿ ನಿಲ್ಲಿಸಿ, ಅವರಿಗೆ ಮಾನಸಿಕ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಬರೆದುಕೊಂಡರು. ಚಂಚಲತೆ ಮನಸಿನವರು ಮತ್ತು ಹೆಚ್ಚು ಮಾನಸಿಕ ಏಕಾಗ್ರತೆಯಿರುವವರು ಈ ಹಿಪ್ನಾಟಿಸಂಗೆ ಒಳಗಾಗುವುದಿಲ್ಲ ಎಂದು ತಿಳಿಸಿ ಅಂತಹವರನ್ನು ಗುರುತಿಸಿ ತಾನೆ ಹಿಂದಕ್ಕೆ ಕರೆಯುತ್ತೇನೆಂದರು. ಸಾಧಾರಣ ಹಿಪ್ನಾಟಿಸಂ (ವೈದ್ಯ ಭಾಷೆಯಲ್ಲಿ ಏನೋ ಹೇಳಿದ ನೆನಪು ಈಗ ಉಳಿದಿಲ್ಲ) ಪ್ರಯೋಗಕ್ಕೆ ಸಣ್ಣದೊಂದು ಪ್ರಕಾಶಮಾನವಾದ ಕೆಂಪು ದೀಪವನ್ನುರಿಸಿ ಮಿಕ್ಕೆಲ್ಲ ದೀಪಗಳನ್ನು ಆರಿಸಿ ಸಂಪೂರ್ಣ ಕತ್ತಲನ್ನು ಮಾಡಿ ಎಲ್ಲರನ್ನು ಬಲಗೈಯನ್ನು ಭೂಮಿಗೆ ಸಮಾನಾಂತರವಾಗಿ ನೇರವಾಗಿ ಮೇಲೆತ್ತಿ ಹಿಡಿದು ದೀಪವನ್ನೆ ನೋಡುವಂತೆ ಸೂಚಿಸಿದರು. ತದೇಕ ಚಿತ್ತದಿಂದ ಏಕಾಗ್ರತೆಯಿಂದ ಆ ದೀಪವನ್ನೆ ನೋಡುತ್ತಿದ್ದರೆ ಆ ದೀಪವೇ ದೊಡ್ಡದಾಗಿ ಮೇಲೆದ್ದು ಬಂದಂತೆ ನನಗೆ ಭಾಸವಾಗತೊಡಗಿತು. ವೈದ್ಯರ ಧ್ವನಿಯೊಂದನ್ನು ಬಿಟ್ಟು ಬೇರೇನೂ ನನಗೆ ಕೇಳಿಸುತ್ತಿರಲಿಲ್ಲ. ವೈದ್ಯರು ಈಗ ನಾನು ೧ ರಿಂದ ೧೦೦ ರವರೆಗೆ ಅಂಕಿಗಳನ್ನು ಎಣಿಸುತ್ತಾ ಹೋಗುತ್ತೇನೆ ನಾನು ಎಣಿಸುತ್ತಾ ಹೋದಂತೆಲ್ಲ ಕೈಭಾರವಾದಂತೆ ಭಾಸವಾಗುತ್ತಾ ಹೋಗುತ್ತದೆ ಮತ್ತು ನಿದ್ರೆ ಆವರಿಸುತ್ತಾ ಹೋಗುತ್ತದೆ ಆರಾಮವಾಗಿ ನಿದ್ರಿಸಿ ಎಂದು ಆದೇಶವಿತ್ತರು. ಹೌದು ನನಗೂ ೨೫ರವರೆಗೆ ಎಣಿಸುವಷ್ಟರಲ್ಲಿ ಕೈ ಭಾರವಾದಂತೆನೆಸಿ ಕಣ್ಣುಗಳು ಭಾರವಾಗಿ ನಿದ್ರೆ ಬಂದಂತೆ ಭಾಸವಾಗತೊಡಗಿತು (ಬಹುಶಃ ೧೦ ಘಂಟೆಯನಂತರ ಎಚ್ಚರವಿದ್ದು ಅಭ್ಯಾಸವಲ್ಲದಿದ್ದರಿಂದ ಇರಬೇಕೆಂದು ನನ್ನ ಅನಿಸಿಕೆ). ಏಕೋ ನನ್ನ ಮನಸ್ಸು ಇದ್ದಕ್ಕಿದ್ದಂತೆ ಜಾಗೃತವಾಗಿ ನನ್ನನ್ನು ಹತೋಟಿಗೆ ತೆಗೆದುಕೊಂಡಿತು. ಮುಂದೇನು ಎಂಬ ಕುತೂಹಲ ನನ್ನನ್ನು ಆವರಿಸುವಷ್ಟರಲ್ಲಿ ನಮ್ಮ ಪ್ರಾಧ್ಯಾಪಕರು ಬಂದು ನನ್ನು ಮುಟ್ಟಿ ನೀನು ಇತ್ತ ಬಾ ಎನ್ನುವಂತೆ ಸಂಜ್ಙೆ ಮಾಡಿದರು. ನನ್ನಂತೆಯೆ ಮಂಜು ಸತೀಶ ಕೂಡ ಸಾಲಿನಿಂದ ಹೊರಬಂದರು.
ಪ್ರಯೋಗದಲ್ಲಿ ಉಳಿದವರು ೩ ಜನ, ಸಿದ್ದಲಿಂಗದೇವರು, ನಟರಾಜ ಮತ್ತು ಸಂಜೀವ್ ಬದಾಮಿ. ಕ್ಷಣಗಣನೆ ನಿಲ್ಲುವಷ್ಟರಲ್ಲಿ ಈ ಮೂವರು ಗಾಢ ನಿದ್ರೆಯಲ್ಲಿದ್ದರು ನನಗಂತೂ ಯಾವುದೋ ಚಮತ್ಕಾರವನ್ನು ನೋಡಿದಂತೆ ಭಾಸವಾಗುತ್ತಿತ್ತು ಅವರು ನಿದ್ರಿಸುತ್ತಿದ್ದ ಪರಿ.ವೈದ್ಯರು ಆ ೩ ಜನರಲ್ಲಿ ಸಂಜೀವ ಬದಾಮಿ ಮತ್ತು ನಟರಾಜನನ್ನು ಕೋಣೆಗೆ ಕರೆದೊಯ್ದು ನಾನು ಮುಟ್ಟಿ ನಿಮ್ಮನ್ನು ಮಾತನಾಡಿಸುವವರೆಗೂ ನಿದ್ರಿಸುತ್ತಿರಬೇಕೆಂದು ಆದೇಶವಿತ್ತು ಪ್ರಯೋಗ ಕೋಣೆಗೆ ಬಂದರು. ಈಗ ಸಿದ್ದಲಿಂಗ ದೇವರು ನಮ್ಮ ಪ್ರಯೋಗದ ಸಧ್ಯದ ಬಲಿಪಶು. ಅವನನ್ನು ಮಾತನಾಡಿಸಲು ವೈದ್ಯರು ಆರಂಭಿಸಿದರು ಅವನ ಹೆಸರು ತಂದೆ ತಾಯಿ ಊರು ಮನೆಗಳ ಬಗ್ಗೆ ಕೇಳಿ ಖಚಿತಪಡಿಸಿಕೊಂಡರು. ಪ್ರಾದ್ಯಪಕರನ್ನು ಅವನೊಡನೆ ಮಾತನಾಡಲು ಬಿಟ್ಟರು. ನಮ್ಮ ಪ್ರಾಧ್ಯಾಪಕರು ಅವನನ್ನು ಕಾಲೇಜಿನ ಬಗ್ಗೆ ಅಲ್ಲಿ ಅವನಿಗಿರುವ ಸಮಸ್ಯೆಗಳ ಬಗ್ಗೆ ಮತ್ತು ಆತನಿಗೆ ಹೆಚ್ಚು ಆಸಕ್ತಿಕರ ವಿಷಯಗಳು ಮತ್ತು ತೊಡಕಿರುವ ವಿಷಯಗಳನ್ನು ತೊಂದರೆ ಕೊಡುವ ಸಹಪಾಠಿಗಳ ಬಗ್ಗೆ (ಸದ್ಯ ಆತ ನನ್ನ ಹೆಸರು ಹೇಳಲಿಲ್ಲ ಅದೇ ಸಮಾಧಾನ) ಕೇಳಿ ತಿಳಿದುಕೊಂಡರು.
ವೈದ್ಯರು ಈಗ ಆತನನ್ನು ತಮ್ಮ ಕೆಲವು ಪ್ರಯೋಗಕ್ಕೆ ಒಳಪಡಿಸಲು ಮುಂದಾದರು. ಆತನನ್ನು ಸುಮಾರು ೫ ಅಡಿಗಳಷ್ಟು ಮದ್ಯೆ ಜಾಗವಿರುವ ಎರಡು ಮರದ ಖುರ್ಚಿಗಳ ಮೇಲೆ ಮಲಗುವಂತೆ ಹೇಳಿದರು. ಮತ್ತೆ ಆತನಿಗೆ ಆದೇಶ ಕೊಡುತ್ತಾ ಸಾಗಿದರು. ಈಗ ನೀನು ಕಬ್ಬಿಣದ ತೊಲೆ. ನಿನ್ನ ದೇಹದ ಮೇಲೆ ಭಾರ ಹೇರಲಾಗುತ್ತೆ ಎಂದು ತಿಳಿಸಿದರು. ತಕ್ಷಣವೇ ಆತ ಜೋರಾಗಿ ಉಸಿರೆಳೆದು ಕೊಳ್ಳುತ್ತಾ ತನ್ನ ದೇಹವನ್ನು ಸೆಟೆಸಿಕೊಂಡ, ನಮ್ಮಲ್ಲಿ ೩ ಜನರನ್ನು ಆತನ ಮೇಲೆ ಹೇರಿಕೊಂಡೆವು ಆತ ಏನೂ ಆಗದವನಂತಿದ್ದ. ಮತ್ತೂ ಸ್ವಲ್ಪ ಜನ ಒಬ್ಬ ಸಾಮಾನ್ಯ ಮನುಷ್ಯ ತಡೆದು ಕೊಳ್ಳಲಾಗದಷ್ಟು ಭಾರ ಆತನ ಮೇಲೆ ಹೇರಿದೆವು ಆಗಲೂ ಆತ ಜಗ್ಗಲಿಲ್ಲ. ಇನ್ನೂ ಸ್ವಲ್ಪ ಜನ ಕೂರುವ ಅನಿಸಿಕೆಗೆ ವೈದ್ಯರು ತಡೆ ಹಿಡಿದರು. ಅದಕ್ಕೆ ಕಾರಣ ಮಾನಸಿಕ ಶಕ್ತಿ ದೈಹ ಬಲದ ಸಂಪೂರ್ಣ ಪ್ರಯೋಜನ ಪಡೆದರೂ, ದೈಹಿಕ ಶಕ್ತಿಯನ್ನು ಮೀರಿದರೆ ಮಾನಸಿಕ ಬಲ ಆತನಿಗೆ ನೋವು ತರದಿದ್ದರೂ ದೇಹ ತಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ಉದಾಹರಣೆಗೆ ವಶೀಕರಣಕ್ಕೊಳಪಟ್ಟ ವ್ಯಕ್ತಿಯನ್ನು ನೀನೊಂದು ಕಲ್ಲುಬಂಡೆ ಎಂದು ಜಡಗೊಳಿಸಿ ರಸ್ತೆ ಮದ್ಯೆ ಮಲಗಿಸಿ ಭಾರವಾದ ವಾಹನವೊಂದನ್ನು ಆತನ ಮೇಲೆ ಹರಿಸಿದರೆ ಆತನಿಗೆ ನೋವು ಗೊತ್ತಾಗದಿರಬಹುದು ಆದರೆ ದೇಹ ಅಪ್ಪಚ್ಚಿಯಾಗಿ ಆತ ಸತ್ತು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಸರಿ ನಮ್ಮ ಮುಂದಿನ ಪ್ರಯೋಗ ನಾಯಿ ಪರೀಕ್ಷೆ! ಗಾಭರಿಯಾಗಬೇಡಿ. (ಸಿದ್ದಲಿಂಗ) ದೇವರನ್ನು ಈಗ ವೈದ್ಯರು ನೀನೀಗ ನಾಯಿ ಹಾಗಾಗಿ ಇಲ್ಲೊಂದು ಕೈಗಡಿಯಾರ ಕಾಣೆಯಾಗಿದೆ ಅದರ ವಾಸನೆ ಹಿಡಿದು ಕೈಗಡಿಯಾರವನ್ನು ಪತ್ತೆ ಹಚ್ಚ ಬೇಕೆಂದರು. ನಮ್ಮ ಪ್ರಾಧ್ಯಾಪಕರು ತಮ್ಮ ಕೈಗಡಿಯಾರವನ್ನು ಬಿಚ್ಚಿ ನನಗೆ ಕೊಟ್ಟು ಮುಚ್ಚಿಡುವಂತೆ ತಿಳಿಸಿದರು. ನಾನು ಅದನ್ನು ಸ್ವಲ್ಪ ಸಮಯ ನನ್ನ ಕೈಗೆ ಕಟ್ಟಿಕೊಂಡೆ ನಂತರ ಅದನ್ನು ಅಲ್ಲೆ ಇದ್ದ ಮೇಜಿನ ಒಳಗೆ ಮುಚ್ಚಿರಿಸಿದೆ. ದೇವರು ಈಗ ನಿಜವಾದ ನಾಯಿಯಂತೆ ಮುಸ ಮುಸ ಮೂಸಿರಿಯಲು ಪ್ರಾರಂಭಿಸಿದ. ನಮ್ಮ ಪ್ರಾಧ್ಯಾಪಕರ ಕೈಯಿನ ವಾಸನೆಯನ್ನು ಅವನಿಗೆ ತೋರಿಸಲಾಯಿತು. ನಿಜದ ನಾಯಿಯಂತೆ ಅವರ ವಾಸನೆಯನ್ನು ಧೀರ್ಘವಾಗಿ ಎಳೆದು ಕೊಂಡ ನಂತರ ಅಲ್ಲೆಲ್ಲ ಹುಡುಕತೊಡಗಿದ (ಸದ್ಯ ಬೊಗಳಲಿಲ್ಲ). ೨ ನಿಮಿಷದ ನಂತರ ನಾನು ಗಡಿಯಾರ ಕಟ್ಟಿದ್ದ ನನ್ನ ಕರವನ್ನೂ ಹುಡುಕಿಕೊಂಡು ಬಂದ ಸ್ವಲ್ಪ ಸಮಯ ನನ್ನ ಕರವನ್ನೆ ಮೂಸಿರಿದು ಬಿಟ್ಟು ಬಿಟ್ಟ. ೪-೫ ನಿಮಿಷದ ನಂತರ ಮೇಜಿನ ಬಳಿ ಬಂದು ನಿಂತ ವೈದ್ಯರನ್ನು ಒಮ್ಮೆ ನೋಡಿದ. ತನ್ನ ಕೈಯನ್ನು ನಾಯಿಯ ಮುಂಭಾಗದ ಕಾಲಿನಂತೆ ಎತ್ತಿ ಆ ಮೇಜಿನ ಖಾನೆಯನ್ನು ಪರಪರನೆ ಕೆರೆದು ನಿಂತ. ನನಗಂತೂ ಇದು ನಾಟಕೀಯವಾಗಿ ತೋರುತ್ತಿತ್ತು ಆದರೂ ನಂಬಲೇ ಬೇಕಾಯಿತು.
ನಮ್ಮ ಮುಂದಿನ ಪ್ರಯೋಗಕ್ಕೆ ಆತನನ್ನು ಕುಳಿತುಕೊಳ್ಳಲು ಹೇಳಿ ಮನಸ್ಸನ್ನು ಮಾತ್ರ ಹೊರಗೆ ಕಳುಹಿಸಿ ನೋಡುವ ಎಂದು ವೈದ್ಯರು ಸಲಹೆಯಿತ್ತರು. ಪ್ರಾರಂಭವಾಯಿತು ಪ್ರಯೋಗ. ಆತನಿಗೆ ಸಲಹೆ ಸೂಚನೆಗಳಿತ್ತ ವೈದ್ಯರು ಆತನನ್ನು ಖುರ್ಚಿಯ ಮೇಲೆ ಕುಳ್ಳಿರಿಸಿದರು. ಈಗ ನಿನ್ನ ಮನಸ್ಸು ನಮ್ಮ ಕೋಣೆಯನ್ನು ದಾಟಿ ಹೊರ ಹೋಗಲಿ ಎಂದರು. ಆತ ತಲೆಯಲ್ಲಾಡಿಸಿದ. ಹೊರಗೆ ಇರುವ ಪಕ್ಕದ ಅಂಗಡಿಯ ಹೆಸರು ಕೇಳಿದರು ಆತ ನಿಖರವಾಗಿ ಅಲ್ಲಿದ್ದ ಅಂಗಡಿಯ ಹೆಸರು ಹೇಳಿದ. ಹಾಗೆಯೆ ಮುಂದೆ ಹೋಗಲು ಸೂಚನೆಯಿತ್ತರು. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೇಳಿದಾಗ ಆತ ಅಲ್ಲಿ ನಾಲ್ಕೈದು ಜನ ನಿಂತಿರುವುದಾಗಿ ತಿಳಿಸಿದ. ತಕ್ಷಣ ನಾನು ವೈದ್ಯರಿಗೆ ತಿಳಿಸಿ ಇನ್ನೂ ಮುಂದೆ ಹೋಗಿ ವಾಹನ ನಿಲ್ದಾಣದ ಬಳಿಯಿರುವ ಆಟೋಗಳ ಮಾಹಿತಿ ತಿಳಿಸುವಂತೆ ಕೇಳಿದೆ. ೪ ಆಟೋಗಳು ನಿಂತಿರುವುದಾಗಿ ತಿಳಿಸಿದ. ಆದರೂ ಪರೀಕ್ಷಿಸಬೇಕಿತ್ತು. ಸರಿ ಸತೀಶ್ ಮತ್ತು ಅಶೋಕ್ ಕುಲಕರ್ಣಿ (ನಮ್ಮ ಮತ್ತೊಬ್ಬ ಪ್ರಾಧ್ಯಾಪಕರು) ಶಟರ್ ಜೋರಾಗಿ ಎಳೆದು ತೆಗೆದು ಹೊರಗೆ ಓಡಿದರು ಅವರಿಗೆ ಅಲ್ಲಿನ ಆಟೋಗಳ ನೊಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವಂತೆ ತಿಳಿಸಿದೆವು. ಇಲ್ಲಿ ವೈದ್ಯರು ಅಲ್ಲಿನ ಆಟೋಗಳ ಸಂಖ್ಯೆಗಳನ್ನು ಕೇಳುತ್ತಿದ್ದರು. ಅದನ್ನು ನಾವು ಒಂದು ಕಡೆ ಬರೆದಿಟ್ಟುಕೊಂಡೆವು. ಈಗ ದೇವರನ್ನು ಸತೀಶ್ ಮತ್ತು ಅಶೋಕ್ ಯಾವ ಭಾಗದಲ್ಲಿ ಬರುತ್ತಿದ್ದಾರೆಂದು ಕೇಳಿದಾಗ ಶಿಲ್ಪ ಬಾರ್ ಮುಂಭಾಗದಲ್ಲಿ ನಡೆದು ಬರುತ್ತಿದ್ದಾರೆಂದು ತಿಳಿಸಿದ. ಈ ಸಮಯದಲ್ಲಿ ಯಾವುದಾದರೂ ಆಟೋ ಆ ಸ್ಥಳದಿಂದ ಹೊರಟರೆ ಅದರ ಸಂಖ್ಯೆಯನ್ನು ತಿಳಿಸು ಎಂದಾಗ ೨-೩ ನಿಮಿಷಗಳ ನಂತರ ಒಂದು ಆಟೋ ಸಂಖ್ಯೆಯನ್ನು ಹೇಳಿ ಅದರಲ್ಲಿ ಇಬ್ಬರು ಪ್ರಯಾಣಿಕರಿದ್ದಾರೆಂದು ತಿಳಿಸಿದ. ಆತನನ್ನು ಕೆಲವು ವಯಕ್ತಿಕ ಪ್ರಶ್ನೆಗಳನ್ನು ಕೇಳಲು ಮುಂದಾದ ನನ್ನ ಸ್ನೇಹಿತರಿಗೆ ಡಾಕ್ಟರ್ ಆಸ್ಪದವೀಯಲಿಲ್ಲ.
ಹಿಂತಿರುಗಿ ಬರುವಂತೆ ಅವನಿಗೆ ಆದೇಶಿಸಿದ ವೈದ್ಯರು ಅವನನ್ನು ಒಳಗಿನ ಕೋಣೆಗೆ ಕರೆದು ಕೊಂಡು ಹೋದರು. ಹೊರಗೆ ಹೋಗಿದ್ದ ಸತೀಶ್ ಮತ್ತು ಅಶೋಕ್ ತಂದ ಆಟೋ ಸಂಖ್ಯೆಗಳನ್ನು ಕಂಡು ನಾವು ನಿಬ್ಬೆರಗಾಗಿದ್ದೆವು. ಇದ್ದ ನಾಲ್ಕು ಆಟೋ ಸಂಖ್ಯೆಗಳು ನಿಖರವಾಗಿ ಈತ ಹೇಳಿದ್ದ ಸಂಖ್ಯೆಗಳೇ. ಮತ್ತು ಅಲ್ಲಿಂದ ಹೊರಟಿತೆಂದು ಆತ ಹೇಳಿದ ಸಂಖ್ಯೆಯೂ ಸರಿಯಾಗಿತ್ತು ಮತ್ತು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕೂಡ. ನಾನಂತೂ ಮಾನವನ ಮಾನಸಿಕ ಶಕ್ತಿಗೆ ಬೆರಗಾಗಿ ಹೋಗಿದ್ದೆ.
ಅವನನ್ನು ಒಳಗಿನ ಕೋಣೆಗೆ ಕರೆದುಕೊಂಡ ಹೋದ ವೈದ್ಯರು ಆತನಿಗೆ ಇದ್ದ ಒಂದು ಮಾನಸಿಕ ಸಮಸ್ಯೆಗೆ ಪರಿಹಾರ ಸೂಚಿಸಿದರು. ಪ್ರತಿರಾತ್ರಿ ಅವನಿಗೆ ನಿದ್ದೆಯಲ್ಲಿ ಒಬ್ಬ ವ್ಯಕ್ತಿ ದೇವರಂತೆ ಕಾಣಿಸಿಕೊಂಡು ಏನೋ ಹೇಳಿದಂತೆ ಭಾಸವಾಗುತ್ತಿತ್ತು. ಆ ಕ್ಷಣದಲ್ಲಿ ಆತ ತಾನು ಮಲಗಿದ್ದ ಕೋಣೆಯಲ್ಲೆಲ್ಲ ಒದ್ದಾಡಿ ವಸ್ತುಗಳನ್ನೆಲ್ಲ ಕಾಲಲ್ಲಿ ಒದೆದು ಬಿಡುತ್ತಿದ್ದ ಇದರ ಬಗ್ಗೆ ಆತನ ರೂಮಿನಲ್ಲಿದ್ದವರು ನಮಗೆ ತಿಳಿಸಿದ್ದರು. ಅದನ್ನು ವೈದ್ಯರು ಇನ್ನು ನಿನಗೆ ಆ ವ್ಯಕ್ತಿ ಇಂದಿನಿಂದ ಕಾಣಿಸಿಕೊಳ್ಳುವುದಿಲ್ಲ ಎಂದು ಆಣತಿಯಿತ್ತರು. ಸಖೇದಾಶ್ಚರ್ಯವೆಂದರೆ ಇದುವರೆಗೂ ಆ ಸಮಸ್ಯೆ ಅವನಿಗೆ ಮರುಕಳಿಸಿಲ್ಲ.
ಈ ಮಧ್ಯೆ ಸತೀಶ ಮತ್ತು ಅಶೋಕ್ ಹೊರ ಹೋಗಲು ಎಳೆದ ಶಟರ್‍ನ ಜೋರಾದ ಶಬ್ದ ವಶೀಕರಣಕ್ಕೊಳಗಾಗಿದ್ದ ಸಂಜೀವನನ್ನು ಎಚ್ಚರಿಸಿತು ಆತ ಹುಚ್ಚು ಹಿಡಿದವನಂತೆ ನಡೆದುಕೊಳ್ಳತೊಡಗಿದ. ವೈದ್ಯರು ಈಗ ನಿಜಕ್ಕೂ ಗಾಭರಿಯಾಗಿದ್ದರು. ಅವರ ಹಣೆಯಲ್ಲಿ ಬೆವರಿನ ಹನಿಗಳು ಕಾಣಿಸಿಕೊಳ್ಳತೊಡಗಿತು. ಅವನನ್ನು ಮತ್ತೆ ಮರು ಹಿಪ್ನಾಟಿಸಂಗೆ ಒಳಪಡಿಸಿ ನಂತರ ಹಿಪ್ನಾಟಿಸಂ ಸ್ಥಿತಿಯಿಂದ ಹೊರತಂದರು. ನಂತರ ಮಲಗಿದ್ದ ನಟರಾಜನನ್ನು ಹೊರತರಲು ಪ್ರಾರಂಭಿಸಿದರು. ಇಲ್ಲೊಂದು ಸಮಸ್ಯೆ ಶುರುವಾಯಿತು. ಎಷ್ಟೆ ಪ್ರಯತ್ನಿಸಿದರೂ ನಟರಾಜ ತನ್ನ ಮೊದಲ ಸ್ಥಿತಿಗೆ ಬರುತ್ತಿರಲಿಲ್ಲ. ಈಗಂತೂ ಡಾಕ್ಟರ್ ದೇಹದಿಂದ ಬೆವರಿ ಹೆದರಿದ್ದದ್ದು ಸ್ಪಷ್ಟವಾಗಿ ಎಲ್ಲರಿಗೂ ಗೋಚರವಾಗುತ್ತಿತ್ತು. ಸುಮಾರು ಅರ್ಧ ಗಂಟೆಯ ಪ್ರಯತ್ನದ ನಂತರ ಅವನನ್ನು ಯಶಸ್ವಿಯಾಗಿ ಹಿಂತಿರುಗಿ ಸಾಮಾನ್ಯ ಸ್ಥಿತಿಗೆ ಕರೆತಂದು ನಾವೆಲ್ಲರೂ ಮನೆಗೆ ನಡೆದಾಗ ರಾತ್ರಿ ಸುಮಾರು ೨ ಗಂಟೆಯಿರಬಹುದು.
ಇನೊಬ್ಬ ಸ್ನೇಹಿತ ಮುರಳಿ ನಿದ್ದೆಯಲ್ಲಿ ನಡೆದಾಡುತ್ತಿದ್ದ. ಅಕ್ಕನ ಮನೆಯಲ್ಲಿದ್ದವನಿಗೆ ಈ ಸಮಸ್ಯೆಯಿಂದ ಸರಿರಾತ್ರಿಯಲ್ಲಿ ಬೀಗ ತೆಗೆದು ಹೊರಗೆ ಹೋಗುತ್ತಿದ್ದದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಮನೆಯವರು ಅದನ್ನು ತಪ್ಪಿಸಲು ಬಕೆಟ್ ಒಂದರಲ್ಲಿ ನೀರು ತುಂಬಿ ಅದರಲ್ಲಿ ಬೀಗದ ಕೈಗಳನ್ನು ಮುಳುಗಿಸಿಡುತ್ತಿದ್ದರು. ನೀರು ತಾಗಿ ಅವನಿಗೆ ಎಚ್ಚರವಾಗುತ್ತಿತ್ತು ಮತ್ತೆ ಹೋಗಿ ಮಲಗುತ್ತಿದ್ದ. ಈ ಹಿಪ್ನಾಟಿಸಂ ಪ್ರಯೋಗದ ನಂತರ ಮುರಳಿ ನಿದ್ದೆಯಲ್ಲಿ ನಡೆದಾಡುವುದನ್ನು ನಿಲ್ಲಿಸಿದ್ದ. ಹಿಪ್ನಾಟಿಸಂ ವಿಷಯ ಗೊತ್ತಿರದ ಆತನ ಅಕ್ಕ ನಮಗೆಲ್ಲ, ನಮ್ಮ ಮುರಳಿ ಈಗ ನಿದ್ದೆಯಲ್ಲಿ ಎದ್ದು ಓಡಾಡುತ್ತಿಲ್ಲ ಎಂದರೆ ನಾವೆಲ್ಲ ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿ ಮುಸಿ ನಗುತ್ತಿದ್ದೆವು.ಪ್ರತಿಯೊಂದು ಸಣ್ಣ ವಿಷಯಕ್ಕೂ ಗಾಭರಿಯಾಗುತ್ತಿದ್ದ ತನ್ನ ಸಮಸ್ಯೆ ಪರಿಹರಿಸಿಕೊಳ್ಳಲು ನಟರಾಜನಿಗೆ ಅವಕಾಶ ಸಿಗಲೇ ಇಲ್ಲ.

Thursday, January 22, 2009

'ಮತಾಂತರ ಸತ್ಯದ ಮೇಲೆ ಹಲ್ಲೆ' ಭೈರಪ್ಪ ಮತ್ತು ಗಣೇಶ್

ಮತಾಂತರ ಸತ್ಯದ ಮೇಲೆ ಹಲ್ಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಎಲ್ ಭೈರಪ್ಪನವರ ಮಾತಿನ ಧ್ವನಿ ಮುದ್ರಿಕೆಗಾಗಿ http://www.sendspace.com/file/m2127l
ಮತ್ತು
ಶತಾವಧಾನಿ ಗಣೇಶ್ ಅವರ ಮಾತಿಗಾಗಿ
http://www.sendspace.com/file/ketknr

ಹೀಗೊಂದು ಅನುಭವ

ಎಂದಿನಂತೆ ಕಛೇರಿಯಿಂದ ಬಂದವನೆ ಮುಖ ತೊಳೆದು, ಆಡಲು ಹೊರಡುವ ಮುನ್ನ ಮಗನಿಗೆ ಆಟದಿಂದ ಬೇಗ ಬರುವಂತೆ ಸೂಚಿಸಿ ಅಮ್ಮ ಕೊಟ್ಟ ತಿಂಡಿಯನ್ನು ಮುಗಿಸಿ ಬೈಕೇರಿ ಹೊರಟೆ. ಇಂದೇಕೊ ಹೊಸ ಹುಮ್ಮಸ್ಸು ಕಾರಣ ನಿನ್ನೆ ಒಂದೂ ಆಟವನ್ನು ಗೆದ್ದಿರಲಿಲ್ಲ ನನ್ನೊಡನೆ ಜೊತೆಯಾಗಲು ಯಾರೂ ಇಷ್ಟಪಡುತ್ತಿರದಿದ್ದುದು ಕಾರಣವಿರಬಹುದು. ಸ್ವಲ್ಪ ವೇಗವಾಗಿಯೇ ಗಾಡಿ ಓಡಿಸುತ್ತಿದ್ದೆನೆನೋ? ಆಗ ಕಣ್ಣಿಗೆ ಬಿದ್ದದ್ದು ಕಾರ್ಖಾನೆಯ ಆಟದ ಮೈದಾನಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡ ಪ್ರದೇಶದಲ್ಲಿರುವ ಏಕಾಂಗಿ ಮರದ ಬಳಿ ಸುಮಾರು ೪-೫ ಜನ ಏನೋ ಚಟುವಟಿಕೆ ನಡೆಸುತ್ತಿದ್ದರು ಕುತೂಹಲದಿಂದ ಹತ್ತಿರ ಹೋದವನಿಗೆ ಕಂಡದ್ದು ಅವರು ಯಾವುದೋ ಹಕ್ಕಿ ಹಿಡಿಯಲು ಅಥವ ಅಳಿಲಿಗೆ ಬಹುಶಃ ಬಲೆ ಒಡ್ಡುತ್ತಿರಬಹುದೆಂದು ಊಹಿಸಿದ್ದೆ.
ಕೆಲವು ತಿಂಗಳ ಹಿಂದಷ್ಟೆ ವೃತ್ತ ಪತ್ರಿಕೆಗಳಲ್ಲಿ ಅಳಿಲು ಹಿಡಿಯುವವರ ಬಗ್ಗೆ ಎಚ್ಚರಿಸಿವ ಲೇಖನಗಳು ಪ್ರಕಟಗೊಂಡಿದ್ದವು. ನನ್ನೊಳಗಿನ ಪ್ರಾಣಿಪ್ರಿಯ (ಮಾಂಸಾಹಾರವಲ್ಲ) ಎಚ್ಚರಗೊಂಡು ನನ್ನ ಕೈಲಾದ ಅಳಿಲು ಸೇವೆ ಮಾಡಲು ಹಾತೊರೆದಿದ್ದ. ಅವರನ್ನು ಕರೆದು ಏನ್ಮಾಡ್ತ ಇದೀರ ಎಂದು ಪ್ರಶ್ನಿಸಿದ ನನ್ನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಕೆಲವರು ಸುಮ್ಮನೆ ನಿಂತರು ಇನ್ನು ಕೆಲವರು ನನ್ನನ್ನು ಗಮನಿಸದವರಂತೆ ಮರದ ಕೊಂಬೆಗಳ ಮೇಲೆನಿಂದ ಪ್ಲಾಸ್ಟಿಕ್ನ ಸಣ್ಣ ದಾರಗಳನ್ನಿ ಇಳಿಬಿಟ್ಟು ಬಲೆಯಂತೆ ಹರಡಲು ಅಣಿಯಾಗುತ್ತಿದ್ದರು. ನಾನು ಅವರನ್ನು ಎಚ್ಚರಿಸಿದೆ ಸ್ವಲ್ಪ ಸಣ್ಣ ದನಿಯಲ್ಲೆ ಅವರಲ್ಲೊಬ್ಬ ಬಂದವನು ಏನಿಲ್ಲ ಸಾರ್ ನೀವು ಹೋಗಿ ಅಂದ. ಇಲ್ಲಪ್ಪ ಏನ್ ಮಾಡ್ತ ಇದೀರ ಹೇಳೀ ನಿಮ್ಮನ್ನು ನೋಡಿದ್ರೆ ಯಾವ್ದೋ ಅಳಿಲಿಗೋ ಮೊಲಕ್ಕೊ ಅಥವ ಹಕ್ಕಿಗೋ ಬಲೆ ಬಿಡ್ತಾ ಇದೀರ ಎಂದು ದಬಾಯಿಸಿದೆ. ಅದರಲ್ಲೊಬ್ಬ ನಿಮ್ಗ್ಯಾಕ್ರಿ ನಿಮ್ ಕೆಲ್ಸ ನೋಡ್ಕೋ ಹೋಗಿ ಎಂದ. ನಾನು ಅದನ್ನೆ ಮಾಡ್ತಾ ಇರೋದು ಎಂದು ಎಚ್ಚರಿಸಿ ನನ್ನ ಮೊಬೈಲಿಂದ ಕಾರ್ಖಾನೆಯ ಸೆಕ್ಯುರಿಟಿಯವರಿಗೆ ಮತ್ತು ಪೋಲೀಸ್ನವರಿಗೆ ಫೋನಾಯಿಸುತ್ತೆನೆಂದು ಹೆದರಿಸಿದೆ. ಈ ಸಮಯಕ್ಕೆ ಅವರು ಹರಡುತ್ತಿದ್ದ ಬಲೆಯನ್ನು ಬಿಚ್ಚಿದರು. ಅಷ್ಟರಲ್ಲಿ ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಬಂದು ನಾವು ಇದೆ ಏರಿಯಾದವ್ರು ನಮ್ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ ಎಂದ. ಸರಿ ಕುಡುಕನ ಬಡಬಡಿಕೆಗೆ ನಾನೇಕೆ ಬೆಲೆ ಕೊಡಬೇಕೆಂದು ತೀರ್ಮಾನಿಸಿದೆ. ನಡೆದು ಹೋಗುತ್ತಿದ್ದ ಕೆಲವರು ಸ್ವಲ್ಪ ಹೊತ್ತು ನಿಂತು ತಮ್ಮ ಪಾಡಿಗೆ ಹೋಗುತ್ತಿದ್ದರು. ಅಷ್ಟರಲ್ಲಿ ಒಬ್ಬ ಸಣಕಲ ಸ್ವಲ್ಪ ವಯಸ್ಸಾದ ವ್ಯಕ್ತಿ ತೊಡರುತ್ತ ತನ್ನ ಕಾಲುಗಳನ್ನು ಎಳೆದು ಹಾಕುತ್ತಾ ಬಂದ. ಅವನನ್ನು ನೋಡಿದರೆ ಲಕ್ವ ಹೊಡೆದ ವ್ಯಕ್ತಿಯೆಂದು ನನಗೆ ಗೊತ್ತಾಯಿತು. ಬಂದವನೆ ಏಯ್ ನಿಂಗೇನೊ ಮುಚ್ಕೊಂದು ಹೋಗು ನಾನ್ಯಾರು ಅಂತ ನಿಂಗೆ ಗೊತ್ತಿಲ್ಲ ಎಂದು ಉಸಿರು ಬಿಡಲಾಗದಿದ್ದರೂ ಅಬ್ಬರಿಸುವವನಂತೆ ನಟಿಸಿದ. ನಾನೂ ಕೂಡ ಅವನೊಡನೆ ವಾಗ್ವಾದಕ್ಕಿಳಿದೆ. ಈ ಸಮಯಕ್ಕೆ ಸರಿಯಾಗಿ ಕುಡಿದು ತೂರಾಡುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೋಡು ನಮ್ಮ ತಂಟೆಗೆ ಬಂದ್ರೆ ನಿಂಗೆ ಒಳ್ಳೆದಾಗಲ್ಲ ನೋಡು, ಆಮೇಲೆ ಸುಮ್ನೆ ನಮ್ಮನ್ನ ಬಯ್ದ ಅಂಥ ಪೋಲೀಸ್ಗೆ ದೂರು ಕೊಡ್ತಿವಿ ಅಂತ ಜೇಬಿನಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದ, ಏನಪ್ಪ ಅದು ಅಂದ್ರೆ ನೋಡು ನಾವು ಇದರವ್ರು ಆಮೇಲೆ ನಿಂಗೆ ಅಶ್ಟೆ ಎಂಬ ಎಚ್ಚರಿಕೆ ಮತ್ತೊಮ್ಮೆ ಬಂತು ಏನೆಂದು ಕಾರ್ಡ್ ತೆಗೆದು ನೋಡಿದರೆ ಅಂಬೇಡ್ಕರ್ ಫೋಟೊ ಇರುವ ದಲಿತ ಸಂಘರ್ಷ ಸಮಿತಿಯ ಪ್ರಾದೇಶಿಕ ಸಮಿತಿಯ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್. ನನಗೆ ಏನು ಮಾಡ್ಬೇಕೆಂದು ಒಮ್ಮೆಗೆ ಹೊಳೆಯಲಿಲ್ಲ. ನಮ್ಮನ್ನ ಸುಮ್ಸುಮ್ನೆ ಬಯ್ದ ಹೊಡೆದ ಅಂತ ನಾವೇ ಹೇಳ್ತಿವಿ ಎಂದು ಮೆಲ್ಲಗೆ ಉಸುರಿದ. ಅದರಲ್ಲೊಬ್ಬ ಸಾರ್ ನಾವು ಇಲ್ಲಿ ಬಾವಲಿ ಹಿಡಿತಾ ಇದಿವಿ ರಾತ್ರಿ ಊಟಕ್ಕೆ ಎಂದ.
ನನಗೆ ಈಗಾಗಲೆ ಇಂತಹ ಪ್ರಸಂಗಗಳಲ್ಲಿ ಕಾನೂನು ನನ್ನ ನೆರವಿಗೆ ಬರುವುದಿಲ್ಲವೆಂಬ ಅರಿವಿತ್ತು. ಎನಾದರಾಗಲಿ ಎಂದು, ಸರಿ ನಡಿಯಪ್ಪ ಅವರಿಗೆ ಫೋನ್ ಮಾಡೋಣ ನಾನು ಅದರ ಸದಸ್ಯನೆ ಎಂದು ಭಂಡ ಧೈರ್ಯದಿಂದ ಸ್ವಲ್ಪ ಏರಿದ ದನಿಯಲ್ಲೆ ಹೇಳಿದೆ. ಎಲ್ಲರೂ ತಮ್ಮ ತಮ್ಮ ಮುಖಗಳನ್ನು ನೋಡಿ ಕೊಂಡು ಅಲ್ಲಿಂದ ಹೋಗಿ ಬಿಟ್ಟರು. ಸರಿ ಇಷ್ಟಕ್ಕೆ ಮುಗೀತಲ್ಲ ಎಂದು ಕೊಳ್ಳುತ್ತಾ ಆಟದ ಮೈದಾನದ ಕಡೆ ಹೊರಟೆ. ಇಂದು ಭರ್ಜರಿಯಾಗಿ ಆಡುತ್ತಾ ೩ ಆಟಗಳನ್ನು ಗೆದ್ದಿದ್ದೆ.
೪ನೇ ಆಟಕ್ಕೆ ಸುಸ್ತಾಗಿ ಬೇರೆಯವನಿಗೆ ಆಡಲು ಬಿಟ್ಟು ಅಲ್ಲೆ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ತುಂಬಾ ಹೊತ್ತಿನಿಂದ ಅಲ್ಲಿ ಆಟೋವೊಂದು ನಿಂತಿತ್ತು. ಅದರಿಂದ ಇಳಿದ ಚಾಲಕ ನೋಡುವುದಕ್ಕೆ ಒರಟನಂತಿದ್ದವನು ನನ್ನ ಬಳಿ ಬಂದು ನಿಮ್ಮನ್ನ ರಾಜಣ್ಣ ಕರೀತಾ ಇದನೆ ಎಂದ ನನಗೆ ಅಲ್ಲವೆಂದು ನಾನು ಸುಮ್ಮನೆ ಕುಳಿತಿದ್ದೆ. ಏಕೆಂದರೆ ನಾನಾಗಲೆ ಆಟದ ಹುಮ್ಮಸ್ಸಿನಲ್ಲಿ ಈ ಘಟನೆಯನ್ನು ಮರೆತಿದ್ದೆ. ಮತ್ತೊಮ್ಮೆ ಆತ ನನ್ನನ್ನು ಕುರಿತು ನಿಮ್ಗೆ ಸಾರ್ ಬನ್ನಿ ಎಂದ ನನಗೆ ಅರ್ಥವಾಗಲಿಲ್ಲ ಯಾವ ರಾಜಣ್ಣನಪ್ಪ ನಾನ್ಯಾಕೆ ಎಲ್ಲಿಗೆ ಬರ್ಬೇಕು ಎಂದೆ. ಅದೇ ಸಾರ್ ಡಿ ಎಸ್ ಎಸ್ ಅಧ್ಯಕ್ಷರ ಭಾಮೈದ ರಾಜಣ್ಣ ಅಂದ ನಾನ್ಯಾಕಪ್ಪ ಬರ್ಬೇಕು ಎಂದು ಕೇಳುತ್ತಿದ್ದವನಿಗೆ ಕಾಣಿಸಿದ್ದು. ಬಡಕಲಾದ ಲಕ್ವ ಪೀಡಿತ ವ್ಯಕ್ತಿ ಆಕ್ರೋಶದಿಂದ ಇಳಿದು ತನ್ನೆಲ್ಲ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ನನ್ನೆಡೆಗೆ ಬಂದ ಅವನ ಅವತಾರ ನನಗೆ ನಗು ತರಿಸುತ್ತಿತ್ತು ಸರಿಯಾಗಿ ಮಾತನಾಡಲೂ ಆಗದವ ನನನ್ನು ಕೊಂದು ಬಿಡುವವನಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ. ಅವನ ಆರೋಪವಿಷ್ಟೆ, ನೀನು ನನಗೆ ಬಲೆ ಹರಡಲು ತಡೆದೆ, ನನಗೆ ಎದುರು ಮಾತನಾಡಿದೆ, ನನ್ನನ್ನು ಬಯ್ದೆ ನಾನು ದ ಸಂ ಸ ಯ ಅಧ್ಯಕ್ಷನ ಭಾಮೈದ ಎಂದು ಕಷ್ಟಪಟ್ಟು ಕಿರುಚಿದ. ಜಾಗ ನಿಂದಲ್ಲ ಕಾರ್ಖಾನೆದು ನಾವು ಸ್ಥಳೀಯರು ಏನ್ಬೇಕಾದ್ರು ಮಾಡ್ಕೋತಿವಿ ಎಂದು ಒಂದೆ ಸಮನೆ ಒದರಲಾರಂಭಿಸಿದ. ನಾನು ಆತನಿಗೆ ಯಾವುದೇ ಅವಾಚ್ಯ ಶಬ್ದ ಬಳಸದಿದ್ದನ್ನು ಅವನಿಗೂ ಅವನ ಸ್ನೇಹಿತರಿಗೂ ತಿಳಿಸಿ ಅವನ ಜೊತೆಯಿದ್ದ ಇನ್ನೂ ಕೆಲವರು ಅಲ್ಲಿ ನಡೆದ ಘಟನೆಗೆ ಸಾಕ್ಷಿಯಿದ್ದ ಅವನ ಜೊತೆಯವರಿಗೆ ತಿಳಿ ಹೇಳಿದಾಗ ಆತನಿಗೆ ಸುಮ್ಮನಾಗದೆ ಬೇರೆ ದಾರಿಯಿರಲಿಲ್ಲ. ಅಷ್ಟರಲ್ಲಿ ನನ್ನ ಜೊತೆ ಆಡುತ್ತಿದ್ದ ನನ್ನ ಸ್ನೇಹಿತರೆಲ್ಲ ಸಂದರ್ಭದ ಗಂಭೀರತೆ ಅರಿತು ಅವನಿಗೆ ಬಯ್ದು ನೀವೂ ಅಲ್ಲಿ ಹಕ್ಕಿ ಪ್ರಾಣಿ ಏನೂ ಹಿಡಿಯುವಂತಿಲ್ಲ ಎಂದು ದಬಾಯಿಸಿ ಕಳಿಸಿದರು. ನನ್ನೊಡನೆ ಆಡುತ್ತಿದ್ದವರಲ್ಲಿ ಆ ಊರಿನ ಭಾರಿ ಕುಳಗಳಿದ್ದುದರಿಂದಲೋ ಎನೋ ಆತ ಗೊಣಗುತ್ತಾ ಆಟೋ ಕಡೆಗೆ ನಡೆದು ಹೋದ. ಆಟೋದಲ್ಲಿ ಕೂರುವ ಮುನ್ನ ಇದೇ ದಾರಿಯಲ್ಲಿ ಬರ್ತಿಯ ನೋಡ್ಕೋತಿನಿ ಎಂದು ಬಡಬಡಿಸುತ್ತಾ ಹೋದ.

Monday, December 29, 2008

ನಿಮ್ಮದು ಸ್ನೇಹವೋ? ಸಂಭಂದವೊ?

ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಆತ್ಮೀಯತೆಯ ಬಳ್ಳಿಯೊಂದು ಟಿಸಿಲೊಡೆದು ಇಬ್ಬರ ನಡುವೆ ಹಬ್ಬಲು ಪ್ರಾರಂಭಿಸುತ್ತದೆ.
ಆರಂಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಸ್ನೇಹ ಕ್ರಮೇಣ ಮನದ ಭಾವನೆಗಳನ್ನು ಕೇಳುವ ಸಂಗಾತಿಯೊಬ್ಬನಿಗಾಗಿ ಅಥವಾ ಒಲುಮೆಯನ್ನು ಹಂಚಿಕೊಳ್ಳುವ ಆಪ್ತ ಮನಸ್ಸಿಗಾಗಿ ಚಡಪಡಿಸತೊಡಗಿತ್ತದೆ. ಅದೆಲ್ಲಿಂದಲೋ ಭಾವನೆಗಳು ಉಕ್ಕಿ ಉಕ್ಕಿ ಬರಲು ಪ್ರಾರಂಭಿಸಿ ಅವನ್ನೆಲ್ಲಾ ಹೇಳಿಕೊಳ್ಳುತ್ತಾ ತನ್ನೊಡಲ ಸಂತಸ ದುಗುಡ-ದುಮ್ಮಾನಗಳನ್ನು ಬರಿದು ಮಾಡಿಕೊಳ್ಳುತ್ತಾನೆ. ಎದುರಿನ ವ್ಯಕ್ತಿಗೂ ಸ್ಪಂದಿಸುವ ಮನಸ್ಥಿತಿ ಇದ್ದರೆ ಸ್ನೇಹದ ಬಳ್ಳಿಗೆ ಆಗ ವಸಂತಕಾಲ.
ನಾವು ಸಾಕಷ್ಟು ಕಾಲ ಇನ್ನೊಬ್ಬ ವ್ಯಕ್ತಿಯೆಡೆಗೆ ಆಕರ್ಷಿತರಾಗುತ್ತೇವೆ. ಪರಸ್ಪರರು ಭಾವನೆಗಳನ್ನು ಹಂಚಿಕೊಳ್ಳುವುದು. ಒಟ್ಟಿಗೆ ಅಡ್ಡಾಡುವುದು, ಕೆಲ ಸಮಯ ಕಾಣದಿದ್ದರೆ ಜೀವ ಚಡಪಡಿಕೆಯಿಂದ ತಲ್ಲಣಿಸಿ ಹೋಗುವುದು. ಇಬ್ಬರ ಉಡುಗೊರೆ ವಿನಿಮಯ ಇವೆಲ್ಲಾ ನಡೆಯುತ್ತ ಸ್ನೇಹದ ಬಳ್ಳಿಯಲ್ಲಿ ಆತ್ಮೀಯತೆ, ಪ್ರೀತಿಯ ಕಾಯಿ ಬಿಟ್ಟು ತನ್ನಷ್ಟಕ್ಕೆ ಬಲಿಯತೊಡಗುತ್ತದೆ.
ಸ್ನೇಹವೆನ್ನುವುದು ಸಮಾನ ಮನಸ್ಕರ ನಡುವೆ ಕುಡಿಯೊಡೆಯುವ ಸಂದರ್ಭದಲ್ಲಿಯೇ ಅಲ್ಲಿ ಲಿಂಗಭೇದ ಮೆಲ್ಲನೆ ತಲೆ ಹಾಕುತ್ತದೆ. ಈ ಸ್ನೇಹ ವಿಶ್ವಾಸಗಳು ಗಂಡು ಹೆಣ್ಣಿನ ನಡುವೆ ಮುಂದುವರಿಯುತ್ತಿದ್ದಂತೆ ಅದೆಲ್ಲಿಂದಲೋ ಸ್ನೇಹದ ನಡುವೆ ಧುತ್ತನೆ ಆಗಮನವಾಗಿ ಬಿಡುವ ಒಂದು "ಭಾವನೆ"ಯಿದೆಯಲ್ಲ ಅದು ಸ್ನೇಹವನ್ನು ಉಳಿಸಲೂ ಬಹುದು ಇಲ್ಲವೆ ಇಬ್ಬರ ನಡುವೆ ದುರಭಿಪ್ರಾಯಗಳು ಬಂದಂತಾಗಿ ಸ್ನೇಹದ ಬಳ್ಳಿ ಸೊರಗಲೂ ಬಹುದು. ಕೆಲವು ಸಂದರ್ಭಗಳಲ್ಲಿ ಗಂಡು ಹೆಣ್ಣಿನ ಆತ್ಮೀಯತೆ ನಡುವೆ ಕಾಣಿಸಿಕೊಳ್ಳುವ ಈ ಒಂದು ಮನಸ್ಥಿತಿಗೆ ಗೆಳೆತನ ಸಿಲುಕಿಕೊಂಡಾಗ ಆ ಸ್ನೇಹ ಮುರಿದು ಬಿಡುವುದುಂಟು.
ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸುಮತಿಯ ಪ್ರಕಾರ, "ಗಂಡು ಹೆಣ್ಣಿನ ನಡುವೆ ಬರೀ ಸ್ನೇಹ ನಿರಂತರವಾಗಿರಲು ಸಾಧ್ಯವೇ ಇಲ್ಲ. ಅಲ್ಲಿ ಕಾಲಕ್ರಮದಲ್ಲಿ 'ಸಂಬಂಧ' ಮೈದಳೆಯಲೇ ಬೇಕು." ಇದು ಸುಮತಿಯೊಬ್ಬಳ ಅನಿಸಿಕೆಯಲ್ಲ. ಹಲವರ ಅಭಿಪ್ರಾಯವೂ ಇದೇ ಆಗಿದೆ. ಯಾಕೆಂದರೆ ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ ನಿನ್ನೆ ಮೊನ್ನೆಯದಲ್ಲ. ಈ ಭೂಮಿಯ ಮೇಲೆ ಜೀವ ಸಂಕುಲ ಆರಂಭವಾದಂದಿನಿಂದಲೇ ಅದರ ವಾಸನೆಯಿದೆ.
ಒಂದು ಒಳ್ಳೆಯ ಪರಿಚಯದಿಂದ ಚಿಗುರುವ ಸ್ನೇಹ, ಪ್ರೇಮ ತದನಂತರದಲ್ಲಿ ದೈಹಿಕ ಸಂಪರ್ಕವನ್ನು ಬಯಸುವ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚು. "ಅದರಲ್ಲಿ ಮುಜುಗರ ಪಡುವಂಥದ್ದೇನಿಲ್ಲ" ಎನ್ನುವುದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ದಿನೇಶ್ ಅಭಿಪ್ರಾಯ. ಸ್ನೇಹದ ನಡುವೆ ಪ್ರೀತಿಯು ಮೊಳಕೆಯೊಡೆದು ಅದು ಪ್ರೀತಿಯಾಗಿ-ಕಾಮವಾಗಿ ಪರಿವರ್ತನೆಯಾಗುವುದು ಸೃಷ್ಟಿಯ ಸಹಜ ಕ್ರಿಯೆ ಎನ್ನುತ್ತಾರೆ ಅವರು.
"ಪ್ರೀತಿಯ ನಡುವೆ ಸ್ನೇಹವಿರಲೇ ಬೇಕು, ಆದರೆ ಸ್ನೇಹದ ನಡುವೆ ಪ್ರೀತಿ ಇದ್ದೇ ಇರುತ್ತದೆನ್ನುವ ಸಂಭವ ತೀರಾ ಕಡಿಮೆ" ಎಂಬುದು ಹಲವರ ಅನಿಸಿಕೆ. ಸಹಜವಾಗಿ ಸಹೋದ್ಯೋಗಿಗಳ ನಡುವೆ ಪರಿಚಯ, ಸ್ನೇಹ ಉಂಟಾಗುತ್ತದೆ. ಸ್ನೇಹ ಸಲುಗೆಯತ್ತ ವಾಲುತ್ತದೆ. ಇಬ್ಬರ ಮನಸ್ಥಿತಿ ಒಂದೆ ಹದ ದಲ್ಲಿದ್ದರೆ (ಅಥವಾ ಆ ಹಂತಕ್ಕೆ ಬರುತ್ತದೆ) ಅಲ್ಲಿ ಪ್ರೀತಿ ಬರಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.
ಮನಃಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅನಘಾ ಹೇಳುವ ಪ್ರಕಾರ, "ನನಗೆ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದಕ್ಕಿಂತ ಪುರುಷರೊಂದಿಗೆ ಗೆಳೆತನ ಮಾಡುವುದು ಅತ್ಯಂತ ಸಹಜವಾಗಿ ಖುಷಿ ಅನ್ನಿಸುತ್ತದೆ. ಯಾಕೆಂದರೆ ಪುರುಷ ಹೆಚ್ಚು ವಾದ ಮಾಡದೇ ನಾವು ಹೇಗಿರುತ್ತೇವೆಯೋ ಹಾಗೇ ಒಪ್ಪಿಕೊಳ್ಳುತ್ತಾನೆ ಎನ್ನುವುದು ನನ್ನ ಅನುಭವ." ಅನ್ನುತ್ತಾರೆ.
ನಿತೀಶ್ ಹೇಳುವುದು ಹೀಗೆ: "ಪುರುಷ ಮತ್ತು ಸ್ತ್ರೀ ಕೇವಲ 'ಬೇಸಿಕ್ ಇನ್ಸ್ಟಿಂಕ್ಟ್'ಗೋಸ್ಕರವೇ ಸ್ನೇಹಿತರಾಗುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಹಾಗಂತ ನನಗೆ ಮಹಿಳೆಯರೇ ಪುರುಷ ಸ್ನೇಹಿತರಿಗಿಂತ ಹೆಚ್ಚು ಕ್ಲೋಸ್ ಆಗಿರೋದು. ಪುರುಷನೊಬ್ಬ ತನ್ನ ಸ್ನೇಹಿತನೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ತನ್ನ ಗೆಳತಿಯೊಂದಿಗೆ ಇನ್ನೂ ಚೆನ್ನಾಗಿ ಹಂಚಿಕೊಳ್ಳಬಲ್ಲ."
ದೆಹಲಿ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಪ್ರೊಪೆಸರೊಬ್ಬರ ಪ್ರಕಾರ, "ಗಂಡು ಹೆಣ್ಣಿನ ನಡುವಿನ ಸ್ನೇಹ ಸಹಜವಾದದ್ದು. ನೀವು ಒಬ್ಬರನ್ನು ಇಷ್ಟಪಡುತ್ತೀರಿ. ಅದರಿಂದಾಗಿ ಅವರೊಂದಿಗೆ ನಿಮ್ಮ ಮನದ ಭಾವನೆಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತೀರಿ. ಇದು ಕೊನೆಗೆ ಇಬರ ನಡುವೆ ಮದುವೆ ಹಂತಕ್ಕೆ ಬಂದರೆ ಸರಿ. ಆದರೆ ಪರಸ್ಪರರ ಉತ್ತಮ ಸ್ನೇಹದ ನಡುವೆ ಹುಟ್ಟಿಕೊಳ್ಳುವ 'ಪ್ರೀತಿ'-'ಸಂಬಂಧವಾಗಿ ಮಾರ್ಪಟ್ಟರೆ ಸಮಾಜದಲ್ಲಿ ಒಂದು ಸಮಸ್ಯೆಯನ್ನೆ ತಂದಿಡಬಲ್ಲುದು. ಆಗ ಇಬ್ಬರೂ ಸಾಕಷ್ಟು ದ್ವಂದ್ವದಲ್ಲಿ ಸಿಲುಕಿ ಗೊಂದಲಕ್ಕೆ ಬೀಳುತ್ತಾರೆ. ಆಗ ಸ್ನೇಹ ಮುರಿದು ಬೀಳುತ್ತದೆ. ಜೀವನದ ಉದ್ದೇಶಗಳೇ ವ್ಯರ್ಥವಾಗುತ್ತವೆ" ಎನ್ನುತ್ತಾರೆ.
ಸ್ನೇಹ ಎನ್ನುವುದು ಇಬ್ಬರ ನಡುವಿನ ಹೇಳಲಾಗದ ಒಂದು ಕೆಮಿಸ್ಟ್ರಿಯೇ ಸೈ!
ಇದು ದಿನಕಳೆದಂತೆ ಮೊದಲಿನ ಚಾರ್ಮ್ ಕಳೆದುಕೊಳ್ಳುತ್ತ ಅಥವಾ ಸ್ನೇಹ ಹಳಸಲಾಗುತ್ತ ಸಾಗುವುದೂ ಸಾಕಷ್ಟು ಸಲ. ಹಾಗೇ ಸ್ನೇಹ 'ಸಂಬಂಧ'ದ ರೂಪು ಪಡೆದು 'ಕಾಮನಬಿಲ್ಲಾಗುವ' ಸಾಧ್ಯತೆಯೂ ಇದೆ. ಇದಕ್ಕೆ ವ್ಯಕ್ತಿಗಳು ಸಾಕಷ್ಟು ಪಕ್ವ ಹಾಗೂ ಜವಾಬ್ದಾರಿಯುತವಾದರೆ, ಸ್ನೇಹವೊಂದು 'ಸಂಬಂಧ'ವಾಗ ಬೇಕೆ ಅಥವಾ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ನಡುವೆ ಒಂದು ಗೆರೆ ಎಳೆದುಕೊಳ್ಳಬೇಕೆ ಎಂಬುದನ್ನು ಅವರವರೇ ನಿರ್ಧರಿಸಬಹುದು.
ಲೇಖಕ: ರಾಮಕೃಷ್ಣ.
ಕನ್ನಡದ ಮಾಸಿಕ ಅಕ್ಟೋಬರ್ ಮಯೂರದಲ್ಲಿ ಪ್ರಕಟಗೊಂಡ ಲೇಖನವಿದು.

Monday, November 17, 2008

ಕಾಡುವ ಆಕೆಯ ಕಂಗಳ ನೆನಪು

ನನಗಿನ್ನೂ ಚೆನ್ನಾಗಿ ನೆನೆಪಿದೆ ಆ ದಿನ. ಬಹುಶಃ ಆ ಮುಖ ನಾನು ಮರೆತಿರಬಹುದು. ಆದರೆ ಘಟನೆಯನ್ನಲ್ಲ. ಆಗಿನ್ನೂ  ತರಭೇತಿ ಮುಗಿಸಿ ಅಲ್ಲಿಯೇ ಕೆಲಸಕ್ಕೆ ಸೇರಿ ಸ್ವಲ್ಪ ದಿನಗಳಾಗಿತ್ತು. ಜೊತೆಯಲ್ಲಿದ್ದ ಅಕ್ಕನ ಮದುವೆಯಿಂದ ಉಂಟಾದ ಶೂನ್ಯದ ಖಿನ್ನತೆ ಇನ್ನೂ ಕಾಡುತ್ತಿತ್ತು. ಅದರಿಂದ ಹೊರ ಬರಲು ಅರ್ಧ ದಿನ ರಜೆ ಹಾಕಿ ವೃತ್ತದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದೆ. ಆಗಿನ್ನೂ ವರ್ತುಲ ರಸ್ತೆಯಾಗಿರಲಿಲ್ಲ. ಹಾಗಾಗಿ ಎರಡೂ ಕಡೆಯ ಬಸ್ ಗಳನ್ನು ನಿರೀಕ್ಷಿಸುತ್ತ ನನ್ನಂತೆ ಇನ್ನೂ ೮-೧೦ ಜನರಿದ್ದರು. ೧ ಘಂಟೆಯ ಸಮಯವಿರ ಬೇಕು ಏಕೆಂದರೆ ಈಗಿನ್ನೂ ಊಟ ಮುಗಿಸಿ ಹೊರ ಬಂದಿದ್ದೆ. ಹಳ್ಳಿಯ ಕಡೆಯಿಂದ ಬಂದ ಬಸ್ಸೊಂದರಿಂದ ಒಬ್ಬ ಯುವತಿಯನ್ನು ಒಬ್ಬ ಹೆಂಗಸು ಕೆಳಗೆಳೆದು ತಂದರು. ಸ್ವಲ್ಪ ದೂರದಲ್ಲಿದ್ದರಿಂದ ಅವರ ಸಂವಾದಗಳು ಅಲ್ಲಿದ್ದವರಿಗೆ ಕೇಳಿಸುತ್ತಿರಲಿಲ್ಲ, ಆದರೂ ಅದು ಅಸಹಜವಾಗಿದ್ದದ್ದು ಎಲ್ಲರಿಗೂ ತಿಳಿಯುವಂತಿತ್ತು. ಅವರಿಬ್ಬರನ್ನು ಆಟೋದಲ್ಲಿ ಬಂದ ಮಧ್ಯ ವಯಸ್ಕನೊಬ್ಬ ಕೂಡಿಕೊಂಡಾಗ ಆ ಯುವತಿ ಜೋರಾಗಿ ಕಿರಿಚಾಡಲು ಪ್ರಾರಂಭಿಸಿದಳು. ಅವರ ಸಂಭಾಷಣೆ ಈಗ ಎಲ್ಲರಿಗೂ ಕೇಳಿಸುತ್ತಿತ್ತು. ಮಧ್ಯಾನ್ಹವಾದ್ದರಿಂದ ಹೆಚ್ಚೇನು ಜನರಿರಲಿಲ್ಲ. ಆಕೆಯ ಮಾತುಗಳಿಂದ ನಮಗನ್ನಿಸಿದ್ದು ಆ ಯುವತಿ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ ಆಕೆಯ ತಾಯಿ ಅವಳನ್ನು ಕರೆದೊಯ್ಯುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂಬುದು.
ಸ್ವಲ್ಪ ಸಮಯ ವಾಗ್ವಾದವನ್ನು ನಾವೆಲ್ಲ (ಅಲ್ಲಿದ್ದ ಜನರು) ಗಮನಿಸುತ್ತಿದ್ದೇವೆಂದು ಆಕೆಯ ತಾಯಿ (ನಮ್ಮ ಊಹೆ) ನೋಡಮ್ಮ ನಾನು ನಿನ್ನ ತಾಯಿ ಹಾಗೆಲ್ಲ ಹಠ ಮಾಡ್ಬಾರ್ದು ಅಂತ ಹೇಳಿದಾಕ್ಷಣ ಆ ಯುವತಿ ನೀನ್ಯಾವ ಸೀಮೆ ತಾಯಿನೆ? ಎಂದು ಅಬ್ಬರಿಸಿದಳು. ಮೆಲ್ಲಗೆ ಜನರ ಗುಂಪು ಅವರ ಸುತ್ತ ನೆರೆಯಿತು. ಒಬ್ಬೊಬರೂ ಒಂದೊಂದು ವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಯಾಕೊ ಆ ಯುವತಿ ಕಂಗಾಲಾಗಿದ್ದಾಳೆಂದು ನನಗನಿಸುತ್ತಿತ್ತು. ಆಕೆಯ ಕಣ್ಣಿನಲ್ಲಿದ್ದ ಭಯ ಆತಂಕ ನನಗಿನ್ನೂ ನೆನಪಿದೆ. ಈಗ ಸುತ್ತಲಿದ್ದ ಜನ ಸಂಧಾನಕ್ಕಿಳಿದರು ಯಾಕಮ್ಮಾ ಹೀಗ್ಮಾಡ್ತಿಯ? ಹೋಗು ಮನೆಗೆ ಎಂದು ಬುದ್ದಿವಾದ ಹೇಳಿದವರಿಗೆ ನನ್ ಮನೆಗೆ ಹೋಗ್ತಿನಿ ಬಿಡಿ ಅಂತ ಹೇಳಿ ಎಂದು ಆಕೆ ದಬಾಯಿಸಿದಳು. ಅದಕ್ಕೆ ಆಕೆಯ ತಾಯಿ ಎಂದು ಕರೆದು ಕೊಂಡ ಹೆಂಗಸು ನೋಡೀ ಸಾರ್ ಬಿಟ್ರೆ ಮನೆ ಬಿಟ್ಟು ಓಡಿ ಹೋಗ್ತಳೆ ಮದುವೆ ನಿಶ್ಚಯ ಆಗಿದೆ ಎಂದು ಗೋಗರೆದಳು. ಅಲ್ಲಿ ನೆರೆದವರಿಗೆಲ್ಲಾ ಪೀಕಲಾಟ ಯಾರು ಸರಿ ಯಾರು ತಪ್ಪು ಎಂಬ ಜಿಜ್ಞಾಸೆ. ಆಕೆ ಕೊನೆಗೊಮ್ಮೆ ನೀವು ನನ್ನ ಏನ್ಮಾಡ್ತೀರ ಅಂತ ಗೊತ್ತು ನನ್ನ ಬಿಡಿ ನಾನು ಮನೆಗೆ ಹೋಗ್ತಿನಿ ಎಂದು ಕೊಸರಿಕೊಂಡು ಆಟೋದ ಬಳಿಗೆ ಓಡಿದವಳನ್ನು ಆಕೆಯ ಜೊತೆಯಲ್ಲಿದ್ದವನ ಜೊತೆ ಇನ್ನಿಬ್ಬರು ದಾರಿ ಹೋಕರು ಮತ್ತೆ ಹಿಡಿದಿಟ್ಟುಕೊಂಡರು. ನನಗೆ ಫೋನ್ ಮಾಡಕ್ಕಾದ್ರು ಅವಕಾಶ ಕೊಡೀ ಅಂತ ಆಕೆ ಗೋಗರೆದಳು.
ನನ್ನ ಪೋಲೀಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಎಂದಾಗ ತಾಯಿಯೆಂದು ಹೇಳಿಕೊಳ್ಳುತ್ತಿದ್ದವಳ ಮುಖ ಕಪ್ಪಿಟ್ಟಿತು. ಸಾರ್ ಪೋಲಿಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಸಾರ್ ಎಂದು ನಾನು ಮತ್ತು ಇನ್ನಿಬ್ಬರು ಹೇಳೀದಾಗ ಸುಮ್ನೆ ಕೂತ್ಕೊಳ್ರೀ ನೀವಿನ್ನು ಪಡ್ಡೆ ಹುಡುಗರು ನಿಮ್ಗೇನ್ ಗೊತ್ತು ಪ್ರಪಂಚ ಎಂದು ದಬಾಯಿಸಿದರು ನಾವೂ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟೆವು. ಕೊನೆಗೊಮ್ಮೆ ಅಲ್ಲಿದ್ದ ಜನಗಳಲ್ಲ ಸೇರಿ ಚಾಲಕನ ಜೊತೆಯಲ್ಲಿ ಆಕೆಯನ್ನು ಒಂದು ಆಟೋದಲ್ಲಿ ಕೂರಿಸಿಕೊಂಡರು ಆಗ ಆಕೆ ಅಯ್ಯೊ ಬಿಡ್ರೀ ನನ್ನ ಇವ್ರೆಲ್ಲ ಸೇರ್ಕೊಂದು ನನ್ನ ಮಾರಿ ಬಿಡ್ತರೆ ಸೂ..... ಮಾಡ್ತಾರೆ ಎಂದು ಜೋರಾಗಿ ಅಳುತ್ತಲೆ ಆಟೋದೊಳಗೆ ಬಲವಂತವಾಗಿ ಕುಳಿತಳು. ಅಲ್ಲಿದ್ದವರೆಲ್ಲ ನಿಸ್ಸಹಾಯಕಾರಾಗಿ ಆ ದೃಶ್ಯವನ್ನೆ ನೋಡುತ್ತಿದ್ದರು. ಆಟೋ ಮುಂದೋಡಿದಂತೆ ಆಕೆಯ ಅಳು ಜೋರಾಗಿ ಮತ್ತೆ ಆಟೋ ಶಬ್ಧದಲ್ಲಿ ಕರಗಿಹೋಯಿತು.
ಈ ಘಟನೆ ನಡೆದು ಸುಮಾರು ೧೫ ವರ್ಷಗಳಾದರೂ ನಾನು ಪ್ರತಿ ಬಾರಿ ಆ ಜಾಗಕ್ಕೆ ಬಂದಾಗಲೆಲ್ಲ ಭಯ ಮಿಶ್ರಿತ ಕಂಗಾಲಾಗಿದ್ದ ಆಕೆಯ ಮುಖ ಕಣ್ಣೆದುರಿಗೆ ಬರುತ್ತದೆ. ಆಕೆ ನಿಜಕ್ಕೂ ವೇಶ್ಯಾವಾಟಿಕೆ ಸೇರಿದಳೆ ಅಥವ ತಂದೆ ತಾಯಿಯ ಮನೆ ಸೇರಿದಳೆ ಗೊತ್ತಿಲ್ಲ. ಒಂದು ಹೆಣ್ಣಿಗಾಗುತ್ತಿದ್ದ ಅನ್ಯಾಯವನ್ನು ಸ್ವಲ್ಪ ಸಮಯಪ್ರಜ್ಙೆ ಮೆರೆದಿದ್ದರೆ ತಪ್ಪಿಸ ಬಹುದಿತ್ತಲ್ಲ ಆದರೂ ನಾವು ಅಸಹಾಯಕರಾಗಿ ನಿಂತೆವಲ್ಲ ಎನ್ನುವ ನೋವು ಇನ್ನೂ ಕಾಡುತ್ತದೆ. ಈ ಘಟನೆ ನೆನಪಾದಗಲೆಲ್ಲ ಖಿನ್ನತೆ ಆವರಿಸಿ ಬಿಡುತ್ತದೆ.