Wednesday, August 6, 2008

ಪ್ರಪಥಮ ಚಾರಣದ ಅನುಭವ

೧೯೯೪ ರ ಒಂದು ದಿನ ಆಗಿನ್ನೂ ಈ ಉದ್ಯೋಗಕ್ಕೆ ಸೇರಿ ೧-೨ ವರ್ಷಗಳಾಗಿತ್ತು. ಕಾಫಿ ಮತ್ತು ಚಹಾ ಸಮಯದಲ್ಲಿ ಒಟ್ಟಿಗೆ ಸೇರುತ್ತಿದ್ದ ಸಹೋದ್ಯೋಗಿಗಳ ಮಾತಿನ ನಡುವೆ ಪ್ರವಾಸ ಕಾರ್ಯಕ್ರಮದ ಮಾತಿಗೆ ಸಹೋದ್ಯೋಗಿ ಸತೀಶ್ ಚಾರಣದ ಬಗ್ಗೆ ಪ್ರಸ್ಥಾಪಿಸಿದ. ಜೀವನದಲ್ಲಿ ಇದೇ ಮೊದಲ ಬಾರಿಗೆ ಚಾರಣದ ಬಗ್ಗೆ ಗಂಭೀರವಾಗಿ ಯೋಚಿಸಿದ್ದು. ವಿಧ್ಯಾಭ್ಯಾಸದ ಸಮಯದಲ್ಲಿ ಹಣಕಾಸಿನ ತೊಂದರೆ ಮತ್ತು ಸಮಯದ ಅಭಾವದಿಂದ ಚಾರಣ ಪ್ರವಾಸ ಅತ್ಯಂತ ಪ್ರಯಾಸ. ಕಾಡಿನಲ್ಲಿ ನಡೆಯುವುದಕ್ಕೆ ಹೋಗ್ತಿನಿ ಕಾಸು ಕೊಡು ಎಂದು ಕೇಳಿದ್ರೆ ಕಾಲಿದ್ರೆ ತಾನೆ ನೀನು ನಡೆಯೋದು? ದುಡ್ಡು ಕೇಳಿದ್ರೆ ಕಾಲೆ ಇಲ್ದಿದ್ದ ಹಾಗೆ ಮಾಡ್ತಿನಿ ನೋಡು ಅಂತಿದ್ರು ನಮ್ಮಪ್ಪ. ೧೯೮೯ರಲ್ಲಿ ಕೆಮ್ಮಣುಗುಂಡಿಗೆ ಕಾಲೇಜಿನಿಂದ ಪ್ರವಾಸ ಹೋಗಿದ್ದಾಗ ಅಧ್ಯಾಪಕರ ಎಚ್ಚರಿಕೆಯ ಮಾತನ್ನು ಲೆಕ್ಕಿಸದೆ ಕೆಮ್ಮಣ್ಣುಗುಂಡಿ ಶಿಖರಗಳಲ್ಲೆಲ್ಲಾ ಬೆಳೆದಿದ್ದ ಆಳೆತ್ತರದ ಹುಲ್ಲಿನಲ್ಲಿ ಓಡಾಡಿ ಒಂದು ಶಿಖರದಿಂದ ಮತ್ತೊಂದು ಶಿಖರಕ್ಕೆ ನಡೆದು ಹೋಗಿದ್ದ ನೆನಪು. ವಾಪಸ್ಸಾದ ಮೇಲೆ ಅರಣ್ಯ ಇಲಾಖೆಯವರು ಅಲ್ಲೆಲ್ಲ ತುಂಬಾ ಹಾವುಗಳಿವೆ ಮತ್ತು ಚಿರತೆಗಳು ಹುಲ್ಲಿನಲ್ಲಿ ಅಡಗಿ ಕುಳಿತಿರುತ್ತವೆ ಯಾಕೆ ಹೋಗಿದ್ರಿ ಎಂದು ಸಿಕ್ಕಾಪಟ್ಟೆ ಕೂಗಾಡಿದ್ದ ನೆನಪು ಇನ್ನೂ ಹಸಿಯಾಗಿದೆ. ಹಿಂತಿರುಗಿ ಬರುವಾಗ ರಾತ್ರಿ ನಮ್ಮ ಸಹಪಾಠಿಗಳಿದ್ದ ವಾಹನಕ್ಕೆ ಆಗ ತಾನೆ ಹಸುವೊಂದನ್ನು ರಸ್ತೆಯಲ್ಲೆ ಸಾಯಿಸಿ ತಿನ್ನಲು ಹವಣಿಸುತ್ತಿದ್ದ ಹುಲಿ ಅಡ್ಡ ನಿಂತಿತ್ತು. ಆ ವಾಹನದ ಚಾಲಕನಿಗೆ ಹೃದಯಾಘಾತವಾಗುವುದೊಂದು ಬಾಕಿಯಿತ್ತು. ವಾಹನದ ಬೆಳಕಿಗೆ ಅಂಜಿ ಪಕ್ಕಕ್ಕೆ ಸರಿದು ಹೋದ ಹುಲಿ ನಮ್ಮ ವಾಹನ ಬರುವಷ್ಟರಲ್ಲಿ ತನ್ನ ಭೇಟೆಯನ್ನು ಎತ್ತಿಕೊಂಡು ಹೋಗಿತ್ತು. ಓಹ್ ಕ್ಷಮಿಸಿ ಚಾರಣದ ಬಗ್ಗೆ ಬರೆಯಲು ಹೊರಟವನು ಕಾಲೇಜಿನ ದಿನಗಳ ನೆನಪಿಗೆ ಜಾರಿದ್ದೆ. ಅದೆ ನನ್ನ ಚಾರಣದ ಮೊದಲ ಅನುಭವ.
ಅದಾದ ಮೇಲೆ ಅಲ್ಲಿ ಇಲ್ಲಿ ಅಲೆದಾಡಿ ಸಾರ್ವಜನಿಕ ಉದ್ದಿಮೆಯಲ್ಲಿ ನನ್ನನ್ನು ನಾನೆ ಸ್ಥಾಪಿಸಿಕೊಂಡ ಮೇಲೆ ಚಾರಣದ ನನ್ನ ಕನಸುಗಳು ಮತ್ತೆ ಗರಿಗೆದರ ತೊಡಗಿದವು. ಅದಕ್ಕೆ ಪೂರಕವಾಗಿ ಸಿಕ್ಕ ಒಬ್ಬ ಸಹೋದ್ಯೋಗಿ ಸತೀಶ ಮತ್ತು ನಮ್ಮೊಡನೆ ಶಿಕ್ಷಣಾರ್ಥಿಗಳಾಗಿದ್ದ ೭-೮ ಜನರ ಗುಂಪು ಚಾರಣಕ್ಕೆ ಸಿದ್ದತೆ ನಡೆಸತೊಡಗಿತು.
ಬೆಟ್ಟ ಹತ್ತಕ್ಕೆಲ್ಲ ಆಗಲ್ಲ, ಬೇಕಾದ್ರೆ ಸಮತಟ್ಟಾದ ಪ್ರದೇಶದಲ್ಲಿ ನಡೆದುಕೊಂಡು ಹೋಗುವುದಾದ್ರೆ ಬರ್ತೀವಿ! ಎನ್ನುವ ಕೆಲವರ ಸಲಹೆಗೆ ಸರಿ ಎಂದು ತಿಳಿಸಿ ಸಕಲೇಶಪುರ ಸುಬ್ರಹ್ಮಣ್ಯ ನಡುವಿನ ರೈಲು ದಾರಿಯಲ್ಲಿ ಚಾರಣ ಹೋಗೋಣವೆಂದು ಸತೀಶ ಸೂಚಿಸಿದ.
ಚಾರಣ ಎಂದರೆ ಏನೂ ಗೊತ್ತಿಲ್ಲ ಯಾವುದೇ ಅನುಭವವಿಲ್ಲದ ಯಾವುದೆ ಸಿದ್ದತೆಗಳಿಲ್ಲದೆ ಅದರ ಬಗ್ಗೆಯೂ ಏನೂ ಯೋಜನೆಗಳಿಲ್ಲದೆ ನಾವೆಲ್ಲ ಸಾಮಾನ್ಯ ಪ್ರವಾಸ ಹೊರಡುವವರಂತೆ ಹೊರಡಲು ಅಣಿಯಾಗುತ್ತಿದ್ದೆವು. ಆ ದಾರಿಯ ಬಗ್ಗೆ ತಿಳಿಯಲು ಈಗಿನ ಹಾಗೆ ಅಂತರ್ಜಾಲ ಇನ್ನೂ ಆಗ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರಲಿಲ್ಲವೋ ಅಥವಾ ನಮಗೆ ಆದರ ಮಾಹಿತಿಯಿರಲಿಲ್ಲವೋ ಗೊತ್ತಿಲ್ಲ ಅಥವಾ ನಮ್ಮ ಕೈಗೆಟಕುವ ಸ್ಥಿತಿಯಲ್ಲಿರಲಿಲ್ಲ. ಸತೀಶನ ಕೆಲವು ಸ್ನೇಹಿತರು ಈ ಮುಂಚೆ ಅದೆ ಮಾರ್ಗದಲ್ಲಿ ಚಾರಣಕ್ಕೆ ಹೋಗಿ ಬಂದಿದ್ದವರಿಂದ ನಾವು ಎಲ್ಲಿ ಮತ್ತು ಹೇಗೆ ಹೋಗಬೇಕೆಂಬ ಮಾಹಿತಿ ಮಾತ್ರ ಸತೀಶ ಕಲೆ ಹಾಕಿದ್ದ. ಅದರಂತೆ ಶುಕ್ರವಾರ ಸಂಜೆ ಹೊರಡುವುದೆಂದು ನಮ್ಮ ತಂಡದ ನಾಯಕ ಸತೀಶ ತಿಳಿಸಿದ.
ಒಂದು ಶುಕ್ರವಾರ (ಯಾವ ತಿಂಗಳು ದಿನಾಂಕ ನೆನಪಿನಲ್ಲಿಲ್ಲ) ಸಂಜೆ ಮೆಜೆಸ್ಟಿಕ್ ವಾಹನ ನಿಲ್ದಾಣದಲ್ಲಿ ನಾವೆಲ್ಲಾ ಒಟ್ಟಿಗೆ ಸೇರಿ ಹಾಸನಕ್ಕೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಳಗಿನ ಜಾವ ದೋಣಿಗಲ್ ತಲುಪಿ ಚಾರಣ ಆರಂಭಿಸುವುದು ನಮ್ಮ ಯೋಜನೆ. ನಾಯಕ ಸತೀಶ ಮತ್ತು ನಾನು ಇಡೀ ಕಪಿ ಸೈನ್ಯವನ್ನು ನಿಯಂತ್ರಿಸಬೇಕಿತ್ತು. ಅಕ್ಕನನ್ನು ಪೀಡಿಸಿ ೫೦-೬೦ ಚಪಾತಿ ಅದಕ್ಕಾಗುವಷ್ಟು ಟೊಮಟೋ-ಈರುಳ್ಳಿ ಪಲ್ಯ ತುಂಬಿದ್ದ ಭಾರದ ಹೊರೆ ನನ್ನ ಬೆನ್ನ ಮೇಲಿತ್ತು. ನೆನಪಿನಲ್ಲಿರುವ ನಮ್ಮ ತಂಡದ ಕೆಲವರ ಹೆಸರನ್ನು ಇಲ್ಲಿ ಹೇಳಲು ಪ್ರಯತ್ನಿಸುತ್ತೇನೆ. ಸತೀಶ (ತಂಡದ ನಾಯಕ), ನಾನು, ಪ್ರಸನ್ನ(ಲಂಬೂ), ನಾಗರಾಜ, ರೇವಣಸಿದ್ದಪ್ಪ(ಸಿದ್ದು), ಪ್ರಸನ್ನದೇಶಪಾಂಡೆ, ದಯಾನಂದ್ (ಮತ್ತವನ ಸ್ನೇಹಿತ ಹೆಸರು ನೆನಪಿಲ್ಲ), ಜಗಧೀಶ (ಜಗ್ಗ, ಈತ ಬೆಂಗಳೂರಿನಲ್ಲಿ ನನಗೆ ಉದ್ಯೋಗ ಮಾಡುವ ಮನಸ್ಸಿಲ್ಲ, ನನ್ನ ಕುಲ ಕಸುಬಾದ ಶಿಲ್ಪಿಯಾಗುವುದಾಗಿ ಬೆಂಗಳೂರಿನಿಂದ ಹೋದವನ ಸಂಪರ್ಕ ಮತ್ತೆ ಸಾಧ್ಯವಾಗಿಲ್ಲ), ಮರೆತಿದ್ದೆ ಶ್ರೀನಿವಾಸರಾಜು (ತನ್ನ ಮುಗ್ಧ ಮಾತುಗಳಿಂದ ನಮಗೆಲ್ಲ ಹೆಚ್ಚು ಮಜಾ ಕೊಟ್ಟವ) ಇನ್ನೊಬ್ಬ ಕುಳ್ಳ, ಎಂದು ಕರೆಯುತ್ತಿದ್ದ ಅಡ್ಡ ಹೆಸರು ನೆನಪಿದೆಯಷ್ಟೆ . ಈಗಷ್ಟೆ ಇವನ ಹೆಸರನ್ನು ರವೀಂದ್ರ ಎಂದು ನೆನಪಿಸಿದ ನಾಗರಾಜ ಇವರೆಲ್ಲರ ಜೊತೆಗೆ ಸಹೋದ್ಯೋಗಿ ಸತೀಶ್ಚಂದ್ರ ಅವರ ತಂಗಿಯ ಮಗ ಜತಿನ್ ಆತನ ಸ್ನೇಹಿತ.
ಅದೇನು ಖುಷಿ ಅದೇನು ಉತ್ಸಾಹ ಅದೇನು ತವಕ ಓಹ್. ಹೊರಡುವ ದಿನ ಬರುವವರೆಗೂ ಎಲ್ಲರದ್ದು ಅದೆ ಮಾತು. ಕಾಲ ಕಳೆದದ್ದೆ ಗೊತ್ತಾಗುತ್ತಿರಲಿಲ್ಲ. ಕೊನೆಗೂ ನಾವೆಲ್ಲ ಕುತೂಹಲದಿಂದ ನೀರೀಕ್ಷಿಸುತ್ತಿದ್ದ ಆ ದಿನ ಬಂದೇ ಬಿಟ್ಟಿತು. ಒಬ್ಬೊಬ್ಬರೆ ನಿಧಾನವಾಗಿ ಬಂದಿಳಿದು ನಾವು ರಾಜ್ಯ ಸಾರಿಗೆ ಸಂಸ್ಥೆಯ ವಾಹನವೇರಿದಾಗ ಕತ್ತಲಾವರಿಸಿದ್ದ ನೆನಪು. ಹಾಸನದಲ್ಲಿಳಿದಾಗ ರಾತ್ರಿ ೧೧ ಗಂಟೆಯಿರಬೇಕು ಅರಸೀಕೆರೆಯಿಂದ ಬಂದ ರೈಲನ್ನು ಏರಿದೆವು. ೨ ಅಥವ ೩ ನಿಲ್ದಾಣಗಳ ನಂತರ ಯಾರೋ ಕಿರುಚಿದರು. ಇದೇ ದೋಣಿಗಲ್ ಎಂದು ನಾವೆಲ್ಲ ಹಿಂದೆ ಮುಂದೆ ನೋಡದೆ ರೈಲಿನಿಂದ ಧುಮುಕಿದೆವು. ಬಹುಶಃ ಆಗ ಸಮಯ ರಾತ್ರಿ ೧೧.೩೦. ನಮ್ಮ ಯೋಜನೆ ಈಗಾಗಲೆ ಕೈಕೊಟ್ಟಿತ್ತು. ಇಡೀ ರಾತ್ರಿ ೫-೬ ಜನ ಮಲಗಬಹುದಾದ ಸಣ್ಣ ನಿಲ್ದಾಣದಲ್ಲಿ ನಾವೆಲ್ಲ ಮಲಗಬೇಕಿತ್ತು ಅದೂ ಕೊರೆಯುವ ಚಳಿಯಲ್ಲಿ ಗಾರೆಯ ನೆಲದ ಮೇಲೆ. ನಿಲ್ದಾಣವೋ ಸ್ಮಶಾನ ಸದೃಶವಾಗಿ ಕಂಡು ಬರುತ್ತಿತ್ತು. ಹತ್ತಿರದಲ್ಲಿ ಯಾವ ಮನೆಗಳೂ ಕಾಣದ ಜನಗಳೂ ಇರದ ಕೊನೆಗೆ ದೀಪವೂ ಇರದ ನಿಲ್ಡಾಣ. ಏನೇ ಆದರೂ ನಮ್ಮ ರಾತ್ರಿಯನ್ನು ಇಲ್ಲಿ ಕಳೆಯಲೇಬೇಕಿತ್ತು. ಸರಿ ಒಬ್ಬೊರ ಮೇಲೊಬ್ಬರು ಬಿದ್ದು ಕೊಂಡಿದ್ದಾಯ್ತು. ನಿದ್ದೆ!! ಅದು ಯಾವಗಲೋ ಹಾರಿಹೋಗಿತ್ತು. ಸಿದ್ದು(ರೇವಣ ಸಿದ್ದಪ್ಪ)ವಿನ ಹಾಸ್ಯ ಚಟಾಕಿಗಳು ನಮ್ಮನ್ನು ನಿದ್ದೆ ಮಾಡಲು ಬಿಡಲಿಲ್ಲ. ಬಿಜಾಪುರದ ಶೈಲಿಯ ಮಾತಿನಲ್ಲಿ ತನ್ನ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ನಮ್ಮೆಲ್ಲರ ನಿದ್ದೆ ಕದ್ದ ಸಿದ್ದ. ಸತೀಶ ಮಾತ್ರ ತನ್ನ ಎಂದಿನ ಶೈಲಿಯಲ್ಲಿ ನಿದ್ದೆಗೆ ಜಾರಿದ್ದ. ಯಾವಾಗ ನಿದ್ದೆ ಹತ್ತಿತೊ ಗೊತ್ತಿಲ್ಲ. ಎಲ್ಲೋ ರೈಲೊಂದು ಶಿಳ್ಳೆ ಹಾಕಿದ ಶಬ್ಧ ಬಹುಶಃ ಕನಸಿರಬೇಕೆಂದು ಕೊಂಡವನಿಗೆ ಕೆಲವರು ಮಾತನಾಡುವ ಶಬ್ಧ ಕಿವಿಗೆ ಬಿತ್ತು. ಕಣ್ಣುಜ್ಜಿಕೊಂಡು ಎದ್ದು ಕುಳಿತವನ ಮುಂದೆ ರೈಲು ನಿಂತಿದೆ. ಅವರೂ ನಮ್ಮಂತೆಯೆ ಚಾರಣಕ್ಕೆ ಬಂದವರಿರಬೇಕು. ದಡದಡನೆ ನಾಲ್ಕೈದು ಜೋಡಿಗಳು ಮತ್ತು ಕೆಲವು ಹುಡುಗರ ತಂಡವೊಂದು ನಮ್ಮಂತೆಯೆ ಆತುರಾತುರವಾಗಿ ಧುಮುಕಿದರು. ಆದರೆ ಅವರೆಲ್ಲ ಹವ್ಯಾಸಿ ಚಾರಣಿಗರಿರಬೇಕೆಂದು ಅವರ ಬೆನ್ನ ಮೇಲಿನ ಹೊರೆಯನ್ನು ನೋಡಿ ಊಹಿಸಿದೆ. ನಿದ್ದೆ ಹೊಡೆಯುತ್ತಿದ್ದ ನಮ್ಮಲ್ಲಿ ಕೆಲವರನ್ನು ಎಚ್ಚರಿಸಿದೆ. ರೈಲು ಮುಂದೆ ಹೋದಂತೆ ಅದರ ಹಿಂದೆಯೆ ಆ ಚಾರಣಿಗರ ಗುಂಪು ಚಾರಕ್ಕೆ ಹೊರಟೇ ಬಿಟ್ಟಿತು ಅದು ಆ ಕಾರ್ಗತ್ತಲಿನಲ್ಲಿ ಹುಹ್. ನಿಲ್ದಾಣದಿಂದ ರಸ್ತೆಗೆ ಸಂಪರ್ಕವಿರಲೇಬೇಕೆಂದು ಊಹಿಸುತ್ತಾ ನಿಲ್ದಾಣದಿಂದ ಹೊರ ಬಂದು ನೋಡಿದವರಿಗೆ ಆ ಕತ್ತಲೆಯಲ್ಲು ಗೋಚರಿಸಿದ್ದು ಸಣ್ಣ ಕಾಲುದಾರಿ ೨-೩ ನಿಮಿಷಗಳ ಅದರಲ್ಲೆ ನಡೆದು ಬಂದವರಿಗೆ ಸಿಕ್ಕದ್ದು ರಾ.ಹೆ. ೪೮ ರ ದೋಣಿಗಲ್ ಚಹಾ ಅಂಗಡಿ. ಆಗ ಅನ್ನಿಸಿದ್ದು ಆರಾಮವಾಗಿ ತಡರಾತ್ರಿ ಹೊರಟ ಮಂಗಳೂರಿನ ಬಸ್ಸುಗಳಲ್ಲಿ ಬಂದು ನಿರ್ವಾಹಕನನ್ನು ವಿನಂತಿಸಿದ್ದರೆ ಇದೇ ಜಾಗದಲ್ಲಿ ಇಳಿಯಬಹುದಿತ್ತು. ರಾತ್ರಿ ರೈಲು ನಿಲ್ದಾಣದಲ್ಲಿ ನಿದ್ದೆಗೆಡುವ ಪ್ರಮೇಯವಿರುತ್ತಿರಲಿಲ್ಲ.
ಸರಿ ಅಲ್ಲೆ ಇದ್ದ ಚಹಾ ಅಂಗಡಿಯವನನ್ನು ಎಚ್ಚರಿಸಿ ಚಹಾ ಕುಡಿದು ಮತ್ತೆ ನಿಲ್ದಾಣಕ್ಕೆ ಬಂದು ಮಲಗಿದ್ದವರನ್ನು ಎಚ್ಚರಿಸಿ ಅವರೆಲ್ಲ ಸಿದ್ದರಾಗಿ ಹೊರಟಾಗ ಇನ್ನು ಬೆಳಕು ಹರಿದಿರಲಿಲ್ಲ. ಕತ್ತಲೆಯಲ್ಲಿಯೇ ಹಳಿಗಳ ಮೇಲೆ ಹೆಜ್ಜೆ ಹಾಕಲು ಪ್ರಾರಂಭಿಸಿದೆವು. ನನ್ನ ಜೀವನದ ಮೊತ್ತ ಮೊದಲ ಪೂರ್ಣ ಪ್ರಮಾಣದ ಚಾರಣ ಪ್ರಾರಂಭವಾಗಿತ್ತು. ಹೊತ್ತ ಹೊರೆ ಭಾರವೆನಿಸಿದರೂ ಮನಸ್ಸಿನಲ್ಲಿದ್ದ ಹುಮ್ಮಸ್ಸು ಭಾರದ ಕಡೆಗೆ ಗಮನ ಹರಿಸಲಿಲ್ಲ. ಕತ್ತಲಿನಲ್ಲಿಯೆ ಹಳಿಗಳ ಮೇಲೆ ಒಬ್ಬೊಬ್ಬರಾಗಿ ನಡೆಯುತ್ತಿದ್ದೆವು. ಯಾರೂ ತುಂಬ ಹಿಂದೆ ಉಳಿಯದಂತೆ ಎಚ್ಚರವಹಿಸುತ್ತಾ ನಡೆಯುತ್ತಿದ್ದರೆ ಕೆಲವರಿಗೆ ಯಾಕಾದ್ರು ಬಂದೆವೊ ಎಂಬ ಚಿಂತೆ ಕಾಡತೊಡಗಿತು. ಹೊರಡಬೇಕಾದರೆ ಇದ್ದ ಅತ್ಯುತ್ಸಾಹ ಅಲ್ಲಿ ಹಳಿಗಳ ಮಧ್ಯೆ ಜೋಡಿಸಿದ್ದ ಮರದ ದಿಮ್ಮಿಗಳ ಮೇಲೆ ಕಾಲಿಟ್ಟು ನಡೆಯಬೇಕಾದರೆ ಉಂಟಾಗುವ ನೋವು ಅವರಲ್ಲಿದ್ದ ಉತ್ಸಾಹವನ್ನು ನುಂಗಿ ಹಾಕಿತ್ತು. ಆದರೆ ಮುಂದುವರೆಯದೆ ಬೇರೆ ವಿಧಿಯಿರಲಿಲ್ಲ. ಸುಮಾರು ಒಂದು ಗಂಟೆಯ ನಡಿಗೆಯ ನಂತರ ಬೆಳಕು ಹರಿಯಲು ಪ್ರಾರಂಭಿಸಿದಾಗ ಕಂಡ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಸೂರ್ಯನ ಹೊನ್ನಿನ ಕಿರಣಗಳು ನಿಧಾನವಾಗಿ ಬೆಟ್ಟ ಗುಡ್ಡಗಳ ಕಣಿವೆಗಳನ್ನು ತೆರೆದಿಡುತ್ತಿತ್ತು. ರಮಣೀಯ. ನಮ್ಮ ಪ್ರಾತಃವಿಧಿಗಳಿಗೆ ಸೂಕ್ತವಾದ ಜಾಗ ಪಕ್ಕದಲ್ಲೆ ಹರಿಯುತ್ತಿದ್ದ ದೊಡ್ಡದೊಂದು ಹೊಳೆ. ಹೂಂ ನೇರವಾಗಿ ಹೊಳೆಯ ಕಡೆ ನಡೆದೆವು. ಕೊರೆಯುತ್ತಿರುವ ನೀರಿನಲ್ಲಿ ಬೆಳಗಿನ ಸ್ನಾನಾದಿ ಕಾರ್ಯಕ್ರಮಗಳು ಮುಗಿದು ಚಪಾತಿ ಬುತ್ತಿ ತೆಗೆದು ಕುಳಿತವರು ತಿಂಡಿ ಮುಗಿಸಿ ಎದ್ದಾಗ ಎಳೆ ಬಿಸಿಲು ಸ್ವಾಗತಿಸುತ್ತಿತ್ತು. ನೀರಿನಲ್ಲೆ ಇದ್ದು ಬಿಡುವ ಲೆಕ್ಕದಲ್ಲಿದ್ದ ಕೆಲವರನ್ನು ಗದರಿಸಿ ಹೊರಡಿಸಿದೆವು. ಈಗ ಮತ್ತೊಮ್ಮೆ ನಮ್ಮ ನಡಿಗೆ back on track.
ತಂದಿದ್ದ ಕ್ಯಾಮೆರಾಗಳೆಲ್ಲಾ ಇಲ್ಲಿ ಒಮ್ಮೆ ಕಣ್ಣು ಮಿಟುಕಿಸದವು. ೨ ದಿನಕ್ಕೆಂದು ತಂದಿದ್ದ ಚಪಾತಿಯಲ್ಲಿ ಅರ್ಧ ಖಾಲಿಯಾಗಿದ್ದು ನನ್ನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು. ಅಲ್ಲಲ್ಲಿ ಬೆಟ್ಟದ ಮೇಲಿನಿಂದ ಹಳಿಗಳ ಮೇಲೆ ಬೀಳುತ್ತಿದ್ದ ನೀರನ್ನು ಹೀರುತ್ತಾ ಸಮಯದ ಪರಿವೆ ಇಲ್ಲದೆ ನಿಧಾನವಾಗಿ ನಡೆದೆವು. ನಮ್ಮ ಗುರಿ ಏನು ಎಲ್ಲಿ ನಾವು ರಾತ್ರಿ ಕಳೆಯಬೇಕು ಮತ್ತು ಅದಕ್ಕೆಲ್ಲ ಯೋಜನೆಗಳನ್ನು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ನಡೆಯಬೇಕು ಎಂಬ ಅರಿವು ನಮಗೆಲ್ಲಿತ್ತು.
ಸ್ವಲ್ಪ ಸಮಯದ ನಡಿಗೆಯ ನಂತರ ನಮಗೆ ಮೊದಲ ಸೇತುವೆ ಎದುರಾಯಿತು. ಊಊಊಹ್ ಎದೆ ಝಿಲ್ಲೆನಿಸುವ ನೋಟ. ಕಣಿವೆಯನ್ನು ದಾಟಲು ಮತ್ತು ಬೆಟ್ಟವನ್ನು ಹಾಯ್ದು ಹೋಗಲು ಸುರಂಗಗಳಿವೆ ಅದರಲ್ಲಿಯೆ ನಮ್ಮ ಚಾರಣ ಎನ್ನುವುದರ ಅರಿವಿತ್ತು. ಆದರೆ ಅದರ ಅನುಭವವಿರಲಿಲ್ಲ ಊಹೆಯು ಇರಲಿಲ್ಲ. ಊಹ್ ಸಂಪೂರ್ಣವಾಗಿ ಭೂಮಿಯಿಂದ ಹೊರಗೆ ಚಾಚಿ ಹೋಗಿದ್ದ ಸೇತುವೆಗಳಿಗೆ ಪಕ್ಕದ ತಡೆಗೋಡೆಗಳಿರಲಿಲ್ಲ. ಗಾರೆಯಿಂದ ನಿರ್ಮಿಸಿದ ಕಂಭಗಳ ಮೇಲೆ ಕಭ್ಭಿಣದಿಂದ ಕಟ್ಟಲಪಟ್ಟ ಸೇತುವೆಗಳ ತಳಭಾಗ ಸಂಪೂರ್ಣವಾಗಿ ಗೋಚರಿಸುತ್ತದೆ. ನೀವೆನಾದರು ಕೆಳಗೆ ಇಣುಕಿ ನೋಡುವ ಸಾಹಸಕ್ಕೆ ಕೈ ಹಾಕಿದರೆ ಭಯ ಆವರಿಸಿ ನಡೆಯುವುದನ್ನೆ ನಿಲ್ಲಿಸಿ ಹಿಂತಿರುಗಿ ಓಡಿಹೋಗೋಣವೆನಿಸುತ್ತದೆ. ಸಂಪೂರ್ಣವಾಗಿ ನಾವು ಗಾಳಿಯಲ್ಲಿ ನಡೆಯುತ್ತಿದ್ದೇವೆಂದೆನಿಸುತ್ತದೆ. ಸಂಪೂರ್ಣವಾಗಿ ತೆರೆದ ಸೇತುವೆಗಳ ಮೇಲೆ ಹಳಿ ಹಾಯ್ದು ಹೋಗುತ್ತದೆ. ಅದರ ಮಧ್ಯೆ ಚಾರಣಿಗರಿಗಾಗಿ ತಗಡಿನ ದಾರಿ ಮಾಡಲಾಗಿತ್ತು. ಅದರ ಮೇಲೆ ನಡೆದು ಸೇತುವೆಯನ್ನು ದಾಟ ಬೇಕಿತ್ತು. ಎರಡು ಬೆಟ್ಟಗಳ ನಡುವಿನ ಕಣಿವೆಯನ್ನು ದಾಟಲು ನಿರ್ಮಿಸಿರುವ ಸೇತುವೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ಗಾಭರಿ ಆಶ್ಚರ್ಯ ಸಂತೋಷ ಒಬ್ಬರಿಗೊಂದೊಂದು ತರಹದ ಅನುಭವ. ಮೊದಲನೆ ಸೇತುವೆ ದಾಟಲು ಎಲ್ಲರೂ ಹೆದರಿಕೊಂಡು ಹಿಂದೆ ಸರಿಯಲು ನೋಡುತ್ತಿದ್ದರು. ಕೊನೆಗೆ ಯಾರು ಆ ಸಾಹಸಕ್ಕೆ ಕೈಹಾಕಿದರೊ ನೆನಪಿಲ್ಲ. ಅಂತು ಇಂತು ಭಯದಿಂದ ನಡುಗುತ್ತಾ ಒಬ್ಬರ ಕೈ ಇನ್ನೊಬ್ಬರು ಹಿಡಿದು ಕೊಂಡು ನಿಧಾನವಾಗಿ ದಾಟಿದೆವು. ಗಾಳಿ ಬೀಸಿದರಂತೂ ತೂರಾಡುವ ಅನುಭವ. ಸೇತುವೆ ದಾಟುವಾಗ ರೈಲು ಬಂದರೆ!!! ದೇವರೆ ಗತಿ!! ಮೊದಲನೆ ಸೇತುವೆ ದಾಟಿ ಸ್ವಲ್ಪ ಸಮಯದ ನಡಿಗೆಯ ನಂತರ ಸುರಂಗ ಎದುರಾಯಿತಾದರೂ ಅತ್ಯಂತ ಚಿಕ್ಕದಾದ್ದರಿಂದ ಎಲ್ಲರೂ ಓಡುತ್ತಾ ಅದರೊಳಗೆ ಸಾಗಿದೆವು. ಹೀಗೆ ಸೇತುವೆ ನಂತರ ಸುರಂಗ ಎದುರಾಗುತ್ತಲೆ ಹೋಯಿತು.
೨ ನೆ ಸೇತುವೆಯಲ್ಲಿ ದಾಟಿ ಇನ್ನೊಂದು ಬದಿಯಲ್ಲಿ ನಿಂತವರಿಗೆ ಕಂಡದ್ದು ಸೇತುವೆ ದಾಟದೆ ನಿಂತಿದ್ದ ಲಂಬೂ. ಅತ್ಯಂತ ಹೆದರಿ ಬಿಟ್ಟಿದ್ದ ಪ್ರಸನ್ನ(ಲಂಬೂ) ತಾನು ಬರುವುದಿಲ್ಲ ಎಂದು ಹಠ ಹಿಡಿದುಬಿಟ್ಟ. ಹಿಂದಿರುಗಿ ಹೋಗಿ ಅವನನ್ನು ಕೈಹಿಡಿದು ಮೆಲ್ಲನೆ ಸೇತುವೆ ದಾಟಿಸುವ ಸಾಹಸ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಸೇತುವೆ ನಂತರ ಸುರಂಗ ನಂತರ ಸೇತುವೆ ಒಂದಾದ ಮೇಲೊಂದರಂತೆ ಎದುರಾಗತೊಡಗಿದವು ಸೇತುವೆಯ ಬಳಿಯಂತೂ ಕಣಿವೆಯ ದೃಶ್ಯ ಅಬ್ಬ!! ಪ್ರಕೃತಿಯೆ ಏನು ನಿನ್ನ ಚೆಂದ ಅನ್ನುವಂತಿತ್ತು. ಮೊದಲ ಬಾರಿ ಇಂತಹ ಹಚ್ಚ ಹಸಿರಿನ ದಟ್ಟ ಕಾಡನ್ನು ನನ್ನ ಜೀವನದಲ್ಲಿ ನಾನು ನೋಡಿದ್ದು. ಅದೂ ಕಾಡಿನ ಪಕ್ಷಿನೋಟ ಎಲ್ಲ ಕಡೆಯು ಸಿಗುವುದಿಲ್ಲ. ಕಾಡಿನ ಮೇಲೆ ನಿಂತು ನೋಡುವುದು ಒಂದು ಹೊಸ ರೀತಿಯ ಅನುಭವ. ಎರಡು ಬೆಟ್ಟಗಳನ್ನು ಸಂಪರ್ಕಿಸುವಾಗ ಅವು ಅರ್ಧ ವೃತ್ತಾಕಾರದಲ್ಲಿರುವುದರಿಂದ ಬೆಟ್ಟದಿಂದ ಸಂಪೂರ್ಣವಾಗಿ ಹೊರ ಚಾಚಿಕೊಂಡಿರುತ್ತವೆ. ಅತ್ಯಂತ ಆಳದ ಕಣಿವೆಗಳ ಮೇಲೆ ನಿರ್ಮಿಸಿರುವ ಕೆಲವು ಸೇತುವೆಗಳು ಭೀಕರವಾಗಿ ಕಾಣಿಸುತ್ತವೆ. ನಾವು ಈ ಚಾರಣದಲ್ಲಿ ದಾಟಿದ ಒಂದು ಸೇತುವೆಯ ಉದ್ದ ೫೩೦ ಮೀಟರ್ ಎನ್ನುವ ನೆನಪು ಮಸುಕಾಗಿದೆ. ಇದಕ್ಕೆ ೫ ವಿಶ್ರಾಂತಿ ಜಾಗಗಳಿವೆ. ಹಾಗೆಯೇ ಸುರಂಗದ ಉದ್ದ ೭೩೫ ಮೀಟರ್ ಇರಬೇಕು. ಸಂಪೂರ್ಣ ಕತ್ತಲಾಗುವ ಸುರಂಗ ದಾಟಲು ಬೆಳಕಿನ ಅವಶ್ಯಕತೆಗಾಗಿ ವಿದ್ಯುತ್ ಪಂಜುಗಳೆ ನಮಗೆ ದಾರಿದೀಪ.
ಇವುಗಳ ಮದ್ಯೆ ಬಾವಲಿಗಳ ಕಾಟ ಬೇರೆ. ಒಮ್ಮೆಯಂತೂ ಕೆಲವರು ಸುರಂಗದಲ್ಲಿರಬೇಕಾದರೆ ರೈಲಿನ ಶಿಳ್ಳೆ ಕೇಳಿಸಿ ಬದುಕಿದರೆ ಸಾಕು ಎಂದು ಓಡಿ ಬಂದದ್ದು ಇದೆ. ಉದ್ದ ಸೇತುವೆಗಳಾದರೆ ೨-೩ ನಿಲ್ಲಲ್ಲು ಸ್ಥಳಗಳನ್ನು ಸೇತುವೆಯಲ್ಲಿ ನಿರ್ಮಿಸಿರುತ್ತಾರೆ. ೩ ನೆ ಸೇತುವೆ ದಾಟುವಷ್ಟರಲ್ಲಿ ಲಂಬೂ ತೆವಳಲು ಆರಂಭಿಸಿದ ಅವನ ಎತ್ತರವೆ ಅವನಿಗೆ ಶತ್ರುವಾಗಿ ಕಾಡಲಾರಂಭಿಸಿತು. ಅವನಿಗೆ ನಾವು ಧೈರ್ಯ ಹೇಳುವುದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಅಂಬೆಗಾಲಿಟ್ಟು ಸೇತುವೆ ದಾಟುವ ಅವನ ಪರಿಸ್ಥಿತಿ ಅಯ್ಯೋ ಎನ್ನುವಂತಿತ್ತು. ಆದರೆ ಇವೆಲ್ಲದರ ನಡುವೆ ಪ್ರಕೃತಿಯಂತೂ ತನ್ನ ಸೌಂದರ್ಯವನ್ನು ಇಲ್ಲೆ ಬಿಟ್ಟು ಹೋಗಿದೆಯೇನೋ ಎನ್ನುವಂತಿದೆ. ಬಹುಶಃ ಇದು ನಮ್ಮ ಮೊದಲ ಚಾರಣವಾದ್ದರಿಂದ ನಮಗೆ ಈ ಭಾವನೆಗಳಿರಬೇಕು.
ಹಳಿಗಳ ಮದ್ಯೆ ಇದ್ದ ದಿಮ್ಮಿಗಳ ಮೇಲಷ್ಟೆ ನಡೆಯಬೇಕಿತ್ತು. ಎರಡು ದಿಮ್ಮಿಗಳ ಮಧ್ಯೆ ಕಲ್ಲು ರಾಶಿಯಲ್ಲಿ ನಡೆಯುವುದು ಸಾಧ್ಯವಿರಲಿಲ್ಲ. ಕೆಲವು ಕಡೆ ಚಾರಣಿಗರಿಗಾಗಿಯೆ ತಗಡಿನ ದಾರಿಯನ್ನು ಹಳಿಗಳ ಮದ್ಯೆ ನಿರ್ಮಿಸಲಾಗಿತ್ತು. ದಿಮ್ಮಿಗಳ ಮೇಲೆ ನಡೆಯುವಾಗ ಬೇಗ ಬೇಗನೆ ನಡೆಯಲು ಜೋರಾಗಿ ದಿಮ್ಮಿಗಳ ಮೇಲೆ ಒಂದೆ ಸಮನೆ ಕಾಲಿಡುತ್ತಿದ್ದಾಗ ಮೊಣಕಾಲಿನ ಮೀನಖಂಡ ವಿಪರೀತ ನೋಯಲು ಪ್ರಾರಂಭಿಸಿತು.
ಅಲ್ಲಲ್ಲಿ ಸಿಗುವ ನೀರಿನ ಝರಿಗಳು ಬೆಟ್ಟದಿಂದ ಇಳಿದು ಓಡಿ ಹೋಗುತ್ತಿರುತ್ತವೆ. ಅದೆಷ್ಟು ಝರಿಗಳಿವೆಯೋ ಎಣಿಸಿದವರು ಯಾರು? ೧೦ ಗಂಟೆಯ ಸಮಯಕ್ಕೆ ಸಿಕ್ಕ ಒಂದು ಜಲಪಾತದ ಬಳಿ ಮತ್ತೊಮ್ಮೆ ನೀರಿಗಿಳಿದು ಸ್ನಾನ ಮಾಡಿದೆವು. ೨-೩ ಹಂತದಲ್ಲಿ ಬೀಳುತ್ತಿದ್ದ ಜಲಪಾತದಲ್ಲಿ ಕೆಲವರು ಮೊದಲ ಹಂತಕ್ಕೇರಿದರೆ ಇನ್ನು ಕೆಲವರು ಹಳಿಗಳಿಂದ ಸ್ವಲ್ಪವೇ ದೂರದಲ್ಲಿ ಸ್ನಾನ ಮಾಡಿ ಬಿಸಿಲಿನ ಝಳವನ್ನು ಕಳೆದರು. ದಯಾನಂದ್ ಇಳಿಯುವ ಭರದಲ್ಲಿ ಮೊದಲ ಹಂತದ ಜಲಪಾತದಲ್ಲಿ ಕಾಲು ಜಾರಿ ೧೦ ಅಡಿಗಳಷ್ಟು ಆಳಕ್ಕೆ ಬಿದ್ದು ಬಿಟ್ಟ ಅದೃಷ್ಠವಶಾತ್ ಸೊಂಟಕ್ಕೆ ಮಾತ್ರ ನೋವಾಯಿತಾದರೂ ನಡೆಯಲು ಆತನಿಗೆ ತುಂಬ ಕಷ್ಟವಾಯಿತು.
ರೈಲು ಬಂದಾಗ ಸೇತುವೆಯಲ್ಲಿ ಚಾರಣಿಗರಿಗಾಗಿಯೇ ನಿಲ್ಲಲ್ಲು ಮಾಡಿರುವ ಜಾಗದಲ್ಲಿರುವಾಗಲೆ ಒಮ್ಮೆ ರೈಲು ಬಂದಿದ್ದು ನಮಗೆ ಭಯಮಿಶ್ರಿತ ರೊಮಾಂಚನದ ಅನುಭವ ನೀಡಿತು. ಮತ್ತೊಮ್ಮೆ ರೈಲು ಸುರಂಗದಿಂದ ಹೊರಬರುವಾಗ ಸುರಂಗದ ಮುಂದೆ ನಿಂತು ಸಮಯಕ್ಕೆ ಸರಿಯಾಗಿ ಫೋಟೊ ತೆಗೆದದ್ದೂ ಇದೆ. ಬೆಳಿಗ್ಗೆ ಚಳಿಯಿಂದ ನಡುಗಿದ್ದ ನಮಗೆ ಮಧ್ಯಾಹ್ನದ ಸಮಯಕ್ಕೆ ಸೂರ್ಯ ನೆತ್ತಿ ಸುಡಲು ಪ್ರಾರಂಭಿಸಿದ್ದೂ ಆಯಿತು ಒಮ್ಮೆ ಮಳೆಯೂ ಸುರಿಯಿತು. ಆದರೆ ಬಿಸಿಲೆ ಹೆಚ್ಚು ಕಷ್ಟ ಕೊಟ್ಟದ್ದು. ೨ ಗಂಟೆಯ ಹೊತ್ತಿನಲ್ಲಿ ಮಧ್ಯಾಹ್ನದ ಊಟ ಮುಗಿಸಿದಾಗ ನನ್ನ ಹೊರೆ ಪೂರ್ಣವಾಗಿ ಖಾಲಿಯಾಗಿತ್ತು.
ಮತ್ತೊಮ್ಮೆ ನೀರು ಸಿಕ್ಕಾಗ ಸ್ನಾನ ಮಾಡಿ ನಡೆದೆ ನಡದೆವು ಆದರೂ ನಮಗೆ ಎಡಕುಮೇರಿ ಸಿಗಲಿಲ್ಲ. ಕೆಲವರಂತು ನಡೆಯಲು ಸಾಧ್ಯವಿಲ್ಲ ಎನ್ನುತ್ತಾ ಕುಳಿತು ಬಿಡುತ್ತಿದ್ದರು. ಅತ್ಯಂತ ಉದ್ದದ ಸುರಂಗವನ್ನು ಕಿರಿಚಾಡುತ್ತಾ ಅದರ ಪ್ರತಿದ್ವನಿಯನ್ನು ಚಿಕ್ಕ ಮಕ್ಕಳಂತೆ ಆಸ್ವಾದಿಸುತ್ತಾ ದಾಟಿದೆವು. ೫೩೦ ಮೀಟರ್ ಉದ್ದದ ಸೇತುವೆಯಂತೂ ಮರೆಯಲಾಗದ ಅನುಭವವಾದರೂ ಮರೆತು ಹೋಗುತ್ತಿರುವುದು ವಿಷಾದನೀಯ. ಕೊನೆಗೊಮ್ಮೆ ಬೆಟ್ಟವನ್ನು ತಿರುಗು ತೆಗೆದು ಕೊಳ್ಳುವಾಗ ರೈಲಿನ ಹಳಿಗಳು ಕವಲೊಡೆಯುವ ಲಕ್ಷಣಗಳು ನಮಗೆ ಮುಂದೆ ಇರುವ ನಿಲ್ದಾಣದ ಕುರುಹು ನೀಡಿದವು. ಅಬ್ಬ ಎಲ್ಲರೂ ಸುಸ್ತಾಗಿ ಎದುಸಿರು ಬಿಡುತ್ತಿದವರಿಗೆ ಏನೋ ಗೆದ್ದಷ್ಟು ಸಂಭ್ರಮ. ಹೌದು ನಾವು ಎಡಕುಮೇರಿಯ ಬಳಿ ಬಂದಿದ್ದೆವು. ನಮ್ಮ ಯೋಜನೆಯಿದ್ದದ್ದು ಶಿರವಾಗಿಲುವರೆಗೆ ನಡೆದು ಹೋಗುವುದು. ಆದರೆ ನಾವು ಕ್ರಮಿಸಿದ್ದು ಇಡೀ ದಿನ ಕೇವಲ ೧೬ ಕಿ.ಮೀ ದೂರವಿರುವ ಎಡಕುಮೇರಿಯನ್ನು.
ಹೊರ ಪ್ರಪಂಚಕ್ಕೆ ಬರೀ ರೈಲಿನಲ್ಲಷ್ಟೆ ಸಂಪರ್ಕವಿರುವ ಮತ್ತು ಇಲಾಖೆಯ ಸಿಬ್ಬಂದಿಗಳಷ್ಟೆ ಇರುವ ಸೌರವಿದ್ಯುತ್ ನಿಂದ ಬೆಳಗುವ ಚಿಕ್ಕ ನಿಲ್ದಾಣಕ್ಕಾಗಿರುವ ಊರು ಎಡಕುಮೇರಿ. ಇಲ್ಲಿಂದ ನೇರವಾಗಿ ಸುಬ್ರಹ್ಮಣ್ಯಕ್ಕೆ ತಲುಪುವ ಯಾವುದಾದರು ದಾರಿಯಿದೆಯೆಂದು ವಿಚಾರಿಸಲು ಪ್ರಯ್ತತ್ನಿಸಿದರಿಗೆ ಅದು ಸಾದ್ಯವಿಲ್ಲವೆಂಬ ಉತ್ತರ ಬಂತು. ದಾರಿಯಿದ್ದರೂ ತುಂಬಿ ಹರಿಯುತ್ತಿರುವ ಹೊಳೆ ದಾಟುವುದು ಸಾಧ್ಯವಿಲ್ಲವೆಂದು ಬಿಟ್ಟ. ಮತ್ತೆ ದಾರಿಯಲ್ಲಿ ಆನೆಗಳ ಕಾಟವೂ ಇದೆ ಎಂದು ನಮ್ಮನ್ನು ಹೆದರಿಸಿ ಬಿಟ್ಟರು. ನಮಗಿಂತ ಮುಂಚೆ ಹೊರಟಿದ್ದ ಹವ್ಯಾಸಿ ಚಾರಣಿಗರ ಗುಂಪೊಂದು ಅಲ್ಲೆ ಒಂದು ಸಣ್ಣ ಪಾಳು ಬಿದ್ದ ಮನೆಯಲ್ಲಿ ಬಿಡಾರ ಹೂಡಿರುವುದು ನಮ್ಮ ಗಮನಕ್ಕೆ ಬಂತು. ಕಾಕ ಹೋಟೆಲ್ ನವ ನಮ್ಮನ್ನೆಲ್ಲ ನೋಡಿ ರಾತ್ರಿ ಊಟಕ್ಕೆ ಏರ್ಪಾಡು ಮಾಡುವುದಾಗಿ ಹೇಳಿದ. ರಾತ್ರಿ ೧೦ ಗಂಟೆಗೆ ಬರುವ ರೈಲು ಹೋದನಂತರ ಹೋಟೆಲ್ ಮುಚ್ಚಿ ಹೋಗುವ ಈತ ನಮಗೆ ಅವನ ಹೋಟೆಲ್ ನಲ್ಲಿ ಮಲಗಲು ಹೇಳಿದ. ಊಟವಾದ ನಂತರ ಬಂದ ರೈಲಿನಲ್ಲಿ ತನ್ನ ಚಹಾದ ವ್ಯಾಪಾರವಾದ ನಂತರ ನಮಗೆಲ್ಲ ಟಾಟಾ ಹೇಳಿ ಹೋಗಿಯೇ ಬಿಟ್ಟ.
ನಾವು ರಾತ್ರಿ ಬೆಂಕಿ ಉರಿಸಿ ಚಳಿ ಓಡಿಸುವ ನಮ್ಮ ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನಕ್ಕೆ ಅಲ್ಲಿರುವ ಕೆಲವರು ತಡೆ ಒಡ್ಡಿ ಇಲ್ಲಿ ಬೆಂಕಿ ಹಾಕಬೇಡಿರೆಂದು ತಾಕೀತು ಮಾಡಿದರು. ಬೆಳಿಗ್ಗೆ ೪ ಗಂಟೆಗೆ ಬರುವ ರೈಲಿನಲ್ಲಿ ನಾವು ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪ ಬೇಕಿತ್ತು. ನಡೆದು ಬಂದಿದ್ದ ಆಯಾಸಕ್ಕೆ ನಿದ್ರೆ ತಡೆಯಲಾರದಷ್ಟು ಸೆಳೆಯಲಿಟ್ಟಿತು. ಸರಿ ಊಟವಾದ ಮೇಲೆ ೧ ಅಡಿ ಅಗಲದ ಮರದ ಹಲಗೆಯಿಂದ ತಯಾರಿಸಿದ ಊಟದ ಮೇಜನ್ನೆ ನಮ್ಮ ಪಲ್ಲಂಗವನ್ನಾಗಿ ಮಾಡಿಕೊಂಡು ಮಲಗಿದೆವು. ಬೆಳಿಗ್ಗೆ ಯಾರೊ ರೈಲು ಬಂತು ಎಂದು ಕೂಗಿದಾಗ ತಡಬಡಾಯಿಸಿ ಎದ್ದು ಕೈಗೆ ಸಿಕ್ಕ ನಮ್ಮ ಚೀಲವನ್ನು ಹೊತ್ತು ರೈಲನ್ನೇರಿ ಸುಬ್ರಹ್ಮಣ್ಯ ರೋಡಿಗೆ ಬಂದಿಳಿದೆವು. ಅಲ್ಲಿಂದ ಜೀಪಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ದೇವಸ್ಥಾನದ ವಸತಿಗೃಹವೊಂದನ್ನು ಪಡೆದು ನಮ್ಮ ಹೊರೆಗಳನ್ನೆಲ್ಲಾ ಇಳಿಸಿದೆವು. ಕುಮಾರಧಾರದಲ್ಲಿ ಮನದಣಿಯೇ ಈಜಿ ತಿರುಗಿ ಬಂದು ಸುಬ್ರಹ್ಮಣ್ಯನ ದರ್ಶನ ಮಾಡಿ ಕಾಮತ್ ಉಪಹಾರಗೃಹದಲ್ಲಿ ತಿಂಡಿ ತಿಂದವರಿಗೆ ಕುಮಾರ ಪರ್ವತ ಹತ್ತೋಣವೆಂದು ಸೂಚಿಸಿದೆ. ನೀನು ಬೇಕಂದ್ರೆ ಹೋಗು ಮಹರಾಯ ಎಂದವರೆ ಧರ್ಮಸ್ಥಳಕ್ಕೆ ಹೊರಟರು ನಾನೂ ಅವರನ್ನು ಹಿಂಬಾಲಿಸಬೇಕಾಯಿತು. ಮಂಜುನಾಥನ ದರ್ಶನದ ನಂತರ ಉಡುಪಿಯಲ್ಲಿ ಮಲ್ಪೆ ಸಮುದ್ರತೀರದಲ್ಲಿ ಕುಣಿದಾಡಿ, ಕಟೀಲನ್ನು ಸಂದರ್ಶಿಸಿ ಮಂಗಳೂರಿನಲ್ಲಿ ಮತ್ತೆ ಸಮುದ್ರ ತೀರದಲ್ಲಿ ಹೊರಳಾಡಿ ಬೆಂಗಳೂರಿನ ಬಸ್ ಹತ್ತಿದೆವು. ನಮ್ಮ ಮೊದಲ ಚಾರಣ ಯಶಸ್ವಿಯಾಗಿ ಮುಕ್ತಾಯವಾಯಿತು.
ಸ್ವಲ್ಪ ಜಾಸ್ತಿಯೆನ್ನುವಂತೆ ಬಣ್ಣಿಸಿದ್ದೇನೆ ವೈಭವೀಕರಿಸಿದ್ದೇನೆ ಎಂದು ನಿಮಗನ್ನಿಸಬಹುದು, ಆದರೆ ಹೊರ ಪ್ರಪಂಚದ ಸಂಪರ್ಕವೇ ಇರದಂತಿರುವ ಜಾಗಗಳು ಭೂಮಿಯಿಂದ ಹೊರಚಾಚಿ ನಿಂತಿರುವ ಸೇತುವೆ ಮೇಲೆ ನಡೆದು ಹೋಗುವುದು ಅತ್ಯಂತ ರೋಮಾಂಚಕ. ಕೆಳಗೆ ತಳವೇ ಕಾಣದಷ್ಟು ಆಳದ ಪ್ರಪಾತ. ಸ್ವಲ್ಪ ಜಾರಿದರೂ ಸೇತುವೆಯ ಕಭ್ಭಿಣದ ಕಂಬಿಗಳ ಮದ್ಯೆ ಸಿಕ್ಕಿಹಾಕಿಕೊಳ್ಳುವ ಭಯ, ಅನುಭವಿಸಿದರೆ ನಿಮಗೂ ನಾನು ಹೇಳಿದ್ದು ಸರಿಯೆನಿಸಬಹುದು.
;-) ಒಮ್ಮೆ ಪ್ರಯತ್ನ ಮಾಡಿ ನೋಡಿ. ನೀವು ಹೋಗ್ಬೇಕಾದ್ರೆ ನನಗೂ ಹೇಳಿ ನಿಮ್ಮ ಜೊತೆಗಾರನಾಗಿ ಬರ್ತೇನೆ.