Monday, October 27, 2008

ದುರಾದೃಷ್ಠದ ಪ್ರವಾಸ


ಆಗಸ್ಟ್ ೧೫-೧೭ ರವರೆಗೆ ಸಿಗುವ ರಜವನ್ನು ಉಪಯೋಗಿಸಿಕೊಂಡು ಪ್ರವಾಸ ಕಾರ್ಯಕ್ರಮ ಹೋಗುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುತ್ತೋಡಿಯಲ್ಲಿ ಸ್ಥಳ ಕಾದಿರಿಸಲು ಜೂನ್ ೧೫ರಂದು ದೂರವಾಣಿ ಕರೆಮಾಡಿದವನಿಗೆ ೧ ತಿಂಗಳ ನಂತರ ಕರೆ ಮಾಡಿ ಎನ್ನುವ ಉತ್ತರ. ಜುಲೈ ೧೪ರಂದು ಮತ್ತೆ ಕರೆ ಮಾಡಿದವನಿಗೆ ಈ ಬಾರಿ ಧನಾತ್ಮಕ ಉತ್ತರ ಸಿಕ್ಕಿತು. ಕಳೆದ ೩ ವರ್ಷದಿಂದ ಪ್ರಯತ್ನಿಸುತ್ತಿದ್ದವನಿಗೆ ಕೊನೆಗೂ ಯಶಸ್ಸು ಸಿಕ್ಕಿತ್ತು. ಈ ಪ್ರವಾಸದಲ್ಲಿ ಚಾರಣ ಕಾರ್ಯಕ್ರಮವಿರುವುದಿಲ್ಲ ಎಂದು ನಾನೇ ನಿರ್ಧರಿಸಿದ್ದೆ.
ಈಗಾಗಲೆ ನನ್ನ ಪ್ರವಾಸ ಕಾರ್ಯಕ್ರಮಗಳಿಗೆ ಜೊತೆಯಾಗುವ ಹವ್ಯಾಸ ಬೆಳೆಸಿಕೊಂಡ ಸಹೋದ್ಯೋಗಿ ಶ್ರೀಧರ ತಾನೂ ಬರುವುದಾಗಿ ತಿಳಿಸಿದ. ಆದರೆ ಆತ ತಡಮಾಡಿದ್ದು ಕೇವಲ ಘಂಟೆಯ ಕಾಲ ಅದರಿಂದಾಗಿ ಅಲ್ಲಿನ ಕುಟೀರವನ್ನು ಕಾದಿರಿಸುವುದು ಸಾಧ್ಯವಾಗಲಿಲ್ಲ. ಈ ಪ್ರವಾಸದ ಅನುಭವ ಶ್ರೀಧರ ಬರದಿದ್ದುದ್ದು ಒಳ್ಳೆಯದಾಯಿತೆಂದೆ ಭಾವಿಸಬೇಕು. ಹೌದು ಇದೊಂದು ದುರದೃಷ್ಟಕರ ಪ್ರವಾಸ. ಮನೆಯಲ್ಲಿ ಹೇಳದೆ ಕೇಳದೆ ಸ್ಥಳ ಕಾದಿರಿಸಿದ್ದು ತಪ್ಪಾಯಿತೆನೋ ಎಂದು ಕೊನೆ ಕೊನೆಗೆ ನನಗೇ ಸಂಶಯ ಹುಟ್ಟತೊಡಗಿತು. ನಾವು ಹೊರಡಬೇಕಾದ ದಿನವೇ ವರಮಹಾಲಕ್ಷ್ಮಿ ಹಬ್ಬ. ಮಾರನೇ ದಿನ ಉಪಾಕರ್ಮ. ಇದೆಲ್ಲದರ ಮಧ್ಯೆ ಅಂದೇ ರಾತ್ರಿ ಚಂದ್ರಗ್ರಹಣ. ಹೀಗಿದ್ದೂ ಹಬ್ಬಕ್ಕಾದ್ರು ಮನೆಲಿರ್ಬಾರ್ದ? ಎಂದು ಅಮ್ಮ ಗೊಣಗಬಹುದು ಎಂದು ಊಹಿಸಿದ್ದವನಿಗೆ ಅಂತದ್ದೇನು ನಡೆಯದಿದ್ದದ್ದು ಸಮಾಧಾನ ತಂದಿತು. ೧೨ರ ಮಂಗಳವಾರ ಅತ್ತೆ ಸೊಸೆಯ ಬಳಿ ಹೇಳುತ್ತಿದ್ದದ್ದು ಕಿವಿಗೆ ಬಿತ್ತು ಶನಿವಾರ ಗ್ರಹಣ ನನ್ನ ಮಗ ಅಮಿತ್ ರಾಶಿಗೆ ಹಿಡಿಯುತ್ತೆ ತುಂಬಾ ಕ್ರೂರವಾಗಿ ಬೇರೆ ಇದೆಯಂತೆ ತುಂಬಾ ಹುಶಾರಾಗಿ ನೋಡ್ಕೊಳಿ ಮಗೂನ ಎನ್ನುವ ಕಟ್ಟೆಚ್ಛರದ ಮಾತುಗಳು ನನ್ನ ಕಿವಿಗೆ ಬಿದ್ದವು. ಏನೋ ಮನಸ್ಸಿಗೊಂತರ ಕಸಿವಿಸಿ. ಕೊನೆ ಕ್ಷಣದಲ್ಲಿ ಹೋಗುವುದು ಬೇಡ ಎಂದು ಬಿಡೋಣವೆನಿಸುತ್ತಿತ್ತು. ಆದರೂ ಮುತ್ತೋಡಿಗೆ ಹೋಗುವ ಅವಕಾಶಕ್ಕಾಗಿ ೩-೪ ವರ್ಷದಿಂದ ಕಾದಿದ್ದು ನೆನಪಾಗಿ ಏನಾದರಾಗಲಿ ಹೋಗೇ ಬಿಡುವ ಎಂದು ತೀರ್ಮಾನಿಸಿ ಹೊರಟೆ ಬಿಟ್ಟೆ. ಹಿಂದಿನ ದಿನವೆ ಅಮ್ಮ ಗ್ರಹಣ ದೋಷ ಪರಿಹಾರಕ್ಕಾಗಿ ಪಠಿಸುವ ಸ್ತೋತ್ರಗಳನ್ನೆಲ್ಲ ಬರೆದು ಕೊಂಡು ಹೋಗುವಂತೆ ತಾಕೀತು ಮಾಡಿದ್ದರು. ೧೫ರಂದು ಮಗನನ್ನು ೧೦ ಘಂಟೆಗೆ ಶಾಲೆಯಿಂದ ಕರೆತಂದು ಮನೆಯಿಂದ ಹೊರಟಾಗ ಬೆಳಿಗ್ಗೆ ೧೦.೩೦
ನನ್ನ ನೀರೀಕ್ಷೆ ಸುಳ್ಳಾಗಿಸುವಂತೆ ನೆಲಮಂಗಲ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿರಲಿಲ್ಲ. ಸರಾಗವಾಗಿ ವಾಹನ ಓಡಿಸಿಕೊಂಡು ಪ್ರತಿ ಪ್ರವಾಸದ ಹವ್ಯಾಸದಂತೆ ಕರಡಿಗುಚ್ಚಮ್ಮ ದೇವಸ್ಥಾನದ ಆವರಣದ ತ್ರಿಮುಖ ಗಣಪನಿಗೊಂದು ಸಾಷ್ಟಾಂಗ ನಮಸ್ಕಾರ ಹಾಕಿ, ಇನ್ನೇನು ಹಾಸನ ತಲುಪಲು ೧೫ ಕಿ.ಮೀ ದೂರವಿರಬೇಕಾದರೆ ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬಸ್ ಹತ್ತಿರ ಬಂದೇ ಬಿಟ್ಟಿತು. ವಾಹನವನ್ನು ನಿಧಾನಗೊಳಿಸಿ ಹಿಂದೆ ಉಳಿಯಲು ಈಗಾಗಲೆ ತುಂಬಾ ಮುಂದೆ ಬಂದು ಬಿಟ್ಟಿದ್ದೆ. ಎಡಗಡೆ ಬಸ್ಸಿದೆ. ಎದುರಿಗೆ ಮೃತ್ಯುವಿನಂತೆ ನುಗ್ಗಿ ಬರುತ್ತಿರುವ ಬಸ್. ಆತ ತನ್ನ ವೇಗವನ್ನು ಕಡಿಮೆ ಮಾಡುತ್ತಾನೆಂದು ನಿರೀಕ್ಷಿಸಿದವನಿಗೆ ಅದರ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಪಕ್ಕದಲ್ಲಿದ್ದ ಪತ್ನಿಗೆ ನಾವಿರುವ ಪರಿಸ್ಥಿತಿ ಅರ್ಥವಾಗಿ ಗಾಭರಿಗೊಂಡದ್ದು ಗೋಚರವಾಗುತ್ತಿತ್ತು, ನಮ್ಮೆಲ್ಲರ ಕಥೆ ಮುಗಿಯಿತು ಇವತ್ತಿಗೆ ಎನಿಸಿತು. ಎದುರಿಗೆ ಬಸ್ ಯಮನಂತೆ ನುಗ್ಗಿ ಬರುತ್ತಿತ್ತು . ಸರಿ ಏನಾದರಾಗಲಿ ಎಂದು ಬಲಗಡೆಗೆ ಗಮನಿಸಿದೆ, ತಕ್ಷಣವೇ ನನ್ನ ಕಾರನ್ನು ಬಲಭಾಗಕ್ಕೆ ಎಳೆದೆ, ಅಷ್ಟೆ ರಸ್ತೆ ಪಕ್ಕಕ್ಕೆ ಕಾರು ಧಡಾರನೆ ಇಳಿಯಿತು. ಎದುರಿಗೆ ಬರುತ್ತಿದ್ದ ಬಸ್ ನನ್ನ ಕಾರಿನ ಹಿಂದೆ ರೊಯ್ಯನೆ ನುಗ್ಗಿ ಹೋಯಿತು. ಇಷ್ಟೆಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಹೋಯಿತು.
ಏನಾಗುತ್ತಿದೆಯೆಂದು ಅರಿವಿಗೆ ಬರುವಷ್ಟರಲ್ಲಿ ಇಡೀ ಘಟನೆ ನಡೆದು ಹೋಗಿತ್ತು. ಹಳ್ಳಕ್ಕೆ ಇಳಿದ ತಕ್ಷಣ ಕಾರು ನಿಯಂತ್ರಣಕ್ಕೆ ಬರಲಿಲ್ಲ. ಹುಲ್ಲಿನ ಮೇಲೆ ಮಳೆ ನೀರು ನಿಂತಿದ್ದರಿಂದ ಸ್ವಲ್ಪ ಹೆಣಗಾಡಿ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡೆ. ನಗುತ್ತ ಸ್ಟಿಯರಿಂಗ್ ಚಕ್ರವನ್ನು ಹಿಡಿದು ಕೂತಿದ್ದವನಿಗೆ ಕಂಡದ್ದು ಭಯದಿಂದ ಹಣ್ಣಾಗಿದ್ದ ಪತ್ನಿ ಮತ್ತು ಪುತ್ರ. ಯಾರ ಪ್ರಾರ್ಥನೆ ನಮ್ಮನ್ನು ಕಾಪಾಡಿತ್ತೋ? ಗೊತ್ತಿಲ್ಲ. ನಗುತ್ತಿದ್ದವನನ್ನು ಗದರಿದಾಗಲೇ ನನಗೂ ಪರಿಸ್ಥಿತಿಯ ಗಂಭೀರತೆಯ ಅರಿವಾದದ್ದು. ರಸ್ತೆಯಿಂದ ೫-೬ ಅಡಿ ಕೆಳಗೆ ನಿಂತಿತ್ತು ನನ್ನ ವಾಹನ. ವಾಹನಕ್ಕಾಗಲೀ ನಮಗಾಗಲೀ ಯಾವುದೆ ಅಪಾಯವಿರಲಿ ಸಣ್ಣದೊಂದು ತರಚು ಗಾಯವೂ ಆಗಿರಲಿಲ್ಲ. ಆ ಹಳ್ಳಕ್ಕೆ ಇಳಿಯುವಾಗ ಮಾತ್ರ ಕಾರು ನಿಯಂತ್ರಣಕ್ಕೆ ಸಿಗದೆ ಸ್ವಲ್ಪ ಗಾಭರಿಯಾಗಿತ್ತು. ಓಹ್ ಅದನ್ನು ಈಗ ನೆನೆಸಿಕೊಂಡರೆ ಭಯವಾಗುತ್ತದೆ. ಮೃತ್ಯುವನ್ನು ಇಷ್ಟು ಹತ್ತಿರದಿಂದ ನೋಡಿದ ಅನುಭವ ಮೈ ಜುಂ ಎನಿಸುತ್ತದೆ. ಮುಖಾಮುಖಿ ಡಿಕ್ಕಿ ಸ್ವಲ್ಪದರಲ್ಲೆ ತಪ್ಪಿ ಹೋಯಿತು. ಪಕ್ಕದಲ್ಲೆ ಇದ್ದ ಡಾಬಾದಲ್ಲಿನ ಮಂದಿ ಆ ಘಟನೆಯನ್ನೆ ಎವೆಯಿಕ್ಕದೆ ನೋಡುತ್ತಿದ್ದದ್ದು ನನ್ನ ಗಮನಕ್ಕೂ ಬಂತು ಕೆಲವರು ಈ ಕಡೆಗೆ ನಡೆದು ಬರುವಷ್ಟರಲ್ಲಿ ನಾನು ಕಾರನ್ನು ಮತ್ತೆ ರಸ್ತೆಗೆ ತಂದು ಹೊರಟೇ ಬಿಟ್ಟೆ. ಈ ಪ್ರವಾಸದ ಕೆಟ್ಟ ಅನುಭವಗಳು ಇಲ್ಲಿಗೆ ನಿಲ್ಲಲಿಲ್ಲ. ಆ ಕ್ಷಣದಲ್ಲಿ ನನಗೆ ಭಯವಾಗದಿದ್ದರೂ ಈಗ ನೆನಪಿಸ್ಕೊಂಡಾಗ ಎದೆ ನಡುಗುತ್ತದೆ. ಛೇ ಅಲ್ಲಿ ನಿಂತಿದ್ದ ಕಾರಿನ ಫೋಟೋವೊಂದನ್ನು ತೆಗೆಯಬೇಕಿತ್ತು.
ಹಾಸನದಲ್ಲಿ ಊಟ ಮುಗಿಸಿ ಬೇಲೂರು ರಸ್ತೆಯಲ್ಲಿ ಚಿಕ್ಕಮಗಳೂರಿಗೆ ಹೋಗುವಾಗ ಹಳ್ಳಿಯೊಂದರ ಬಳಿ ಜನಗಳನ್ನು ಇಳಿಸಲು ನಿಂತಿದ್ದ ಎದುರಿನಿಂದ ಬಂದ ವಾಹನದಿಂದ ಇಳಿದು ಬಂದ ಹರೆಯದ ಹಳದಿ ಸೀರೆಯುಟ್ಟ ಹೆಣ್ಣೊಬ್ಬಳು ಕತ್ತು ಬಗ್ಗಿಸಿ ಅದ್ಯಾವುದೋ ಕನಸು ಕಾಣುತ್ತಾ ನನ್ನ ವಾಹನದ ಹಾರ್ನ್ ಶಬ್ಧವನ್ನು ಗಮನಿಸದೆ ನಿಂತಿದ್ದ ವಾಹನದ ಹಿಂಭಾಗದಿಂದ ನಡೆದು ಬರುತ್ತಿರಬೇಕಾದರೆ ಇನ್ನೇನು ಕಾರಿಗೆ ಡಿಕ್ಕಿ ಹೊಡೆಯಬೇಕೆನ್ನುವ ಕೊನೆಯ ಕ್ಷಣದಲ್ಲಿ ಏಯ್ ಎನ್ನುವ ನನ್ನ ಉದ್ಗಾರಕ್ಕೆ ಮತ್ತು ಆಕೆಯ ಪಕ್ಕದಲ್ಲಿದ್ದ್ದ ಮತ್ತೊಂದು ಹೆಂಗಸಿನ ಅಯ್ಯೊ ಎನ್ನುವ ಉದ್ಗಾರಕ್ಕೆ ಬೆಚ್ಚಿದ ಆಕೆ ಇಹಲೋಕಕ್ಕೆ ಹಿಂತಿರುಗಿದಾಗ ನನ್ನ ಕಾರು ಸ್ವಲ್ಪದರಲ್ಲಿ ಮುಂದೆ ಹೋಗಿತ್ತು. ಕೊನೆಕ್ಷಣದಲ್ಲಿ ಆಗುತ್ತಿದ್ದ ಅಪಘಾತದಿಂದ ಆಕೆ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಳು. ಆದರೆ ಇದನ್ನು ನಿರೀಕ್ಷಿಸಿದ್ದ ನನಗೆ ಅಷ್ಟೇನೂ ಗಾಭರಿಯಾಗಲಿಲ್ಲ. ಸ್ವಲ್ಪ ದೂರ ಪಯಣಿಸುವಷ್ಟರಲ್ಲಿ ಛಕ್ಕನೆ ಹಾರಿ ಬಂದ ಗುಬ್ಬಚ್ಚಿಯಂತಹ ಪುಟ್ಟಹಕ್ಕಿಯೊಂದು ಕಾರಿಗೆ ಬಡಿಯುವಂತೆ ಹಾರಿ ಬಂತು. ಹಕ್ಕಿಗಳು ಸಾಮಾನ್ಯವಾಗಿ ಕಾರಿಗೆ ಬಡಿಯುವ ಅವಕಾಶವಿರುವುದಿಲ್ಲವೆಂದು ಮುಂದೆ ಬಂದೆವು. ಯಗಚಿ ಜಲಾಶಯಕ್ಕೊಂದು ಭೇಟಿ ನೀಡೋಣವೆಂದು ವಾಹನ ನಿಲ್ಲಿಸಿ ಜಲಾಶಯದ ಬಳಿ ಒಂದೆರಡು ಛಾಯಾಚಿತ್ರ ಕ್ಲಿಕ್ಕಿಸಿದೆವು. ಅದೇಕೊ ಈ ಪ್ರವಾಸದ ತುಂಬಾ ಅಪಶಕುನಗಳು ಗೊಚರಿಸಿದ್ದವು. ವಯಕ್ತಿಕವಾಗಿ ಶಕುನಗಳಲ್ಲಿ ನಂಬಿಕೆಯಿರದ ನನಗೂ ಈ ಘಟನೆಗಳು ಧೃತಿಗೆಡುವಂತೆ ಮಾಡಿದ್ದವು. ಕಾರು ಹತ್ತುವ ಮುನ್ನ ಅದೇಕೊ ಮನಸ್ಸು ತಡೆಯದೆ ಹಳ್ಳಕ್ಕಿಳಿದಾಗ ಕಾರಿನ ಮುಂಭಾಗಕ್ಕೇನಾದರೂ ಹಾನಿಯಾಗಿದೆಯೆಂದು ಪರೀಕ್ಷಿಸಲು ನೋಡಿದವನಿಗೆ ಸಿಕ್ಕದ್ದು ಸತ್ತು ಕಾರಿಗೆ ಸಿಕ್ಕಿ ಹಾಕಿಕೊಂಡಿದ್ದ ಆ ಪುಟ್ಟ ಪಕ್ಷಿ. ಸಾಮಾನ್ಯವಾಗಿ ಹಾರುತ್ತಿರುವ ಯಾವ ಹಕ್ಕಿಗಳೂ ವಾಹನಕ್ಕೆ ಸಿಲುಕುವುದಿಲ್ಲ. ಮನ್ನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಯಾವ ಪುಟ್ಟ ಮರಿಗಳ ತಾಯಿಯೋ? ನನ್ನ ಕಾರಿಗೆ ಸಿಕ್ಕಿ ಜೀವ ಕಳೆದುಕೊಂಡಿತ್ತು. ಆ ಪುಟ್ಟ ಮರಿಗಳು ತಾಯಿಯ ಆಗಮನಕ್ಕಾಗಿ ಎದುರು ನೋಡುತ್ತಿರುವ ದೃಶ್ಯ ನನ್ನ ಕಣ್ಣೆದುರಿಗೆ ಒಮ್ಮೆ ಸುಳಿದು ಹೋಯಿತು. ನನ್ನ ಮನಸ್ಸು ಘಾಸಿ ಗೊಂಡಿತ್ತು. ಸತ್ತು ಹೋಗಿದ್ದ ಪಕ್ಷಿಯನ್ನು ತೆಗೆದು ಬಿಸುಡಿ ಮುಂದೆ ಹೊರಟೆ. ಮನೆಗೆ ಹಿಂತಿರುಗಿ ಹೋಗುವ ಮನಸ್ಸಾದರೂ ಅದೇಕೊ ಪ್ರಯಾಣ ಮುಂದುವರೆಸಿದೆ. ಸಂಜೆ ೬ ಘಂಟೆಯ ಸಮಯಕ್ಕೆ ಮುತ್ತೋಡಿ ತಲುಪಿದ್ದೆ.
ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ವಲ್ಪದರಲ್ಲೆ ಬರುವುದಾಗಿ ಅಲ್ಲಿನವರೆಗೂ ಕಾಯುವಂತೆ ತಿಳಿಸಿದರು ಅಲ್ಲಿದ್ದ ಕೆಲವು ಅರಣ್ಯ ಇಲಾಖಾ ನೌಕರರು. ನಿಮ್ಮ ಯಾವುದೆ ವಿನಂತಿ ಪತ್ರ ನಮಗೆ ತಲುಪಿಲ್ಲ ಎಂದು ಆತ ನನಗೆ ಮತ್ತೊಂದು ಆಘಾತ ಕೊಡಲು ಪ್ರಯತ್ನಿಸಿದ. ೧೦ ನಿಮಿಷ ತಡಕಾಡಿದ ನಂತರ ಪರ್ವಾಗಿಲ್ಲ ಬಿಡಿ ಎಂದು ನಮಗೆ ಕುಟೀರದ ದಾರಿ ತೋರಿಸಿದರು. ರಭಸದಿಂದ ಹರಿಯುತ್ತಿರುವ ಸೋಮವಾಹಿನಿಯ ದಡದಲ್ಲಿ ನಿರ್ಮಿಸಿರುವ ಸ್ವಚ್ಚತೆಯಿಲ್ಲದ ಕುಟೀರಗಳು. ಪರಿಸರ ಸುಂದರ, ಕುಟೀರಗಳು ಮಾತ್ರ ಸ್ವಚ್ಚತೆ ಕಾಣದೆ ಸೊರಗಿವೆ. ಇತ್ತೀಚೆಗೆ ಬೆಳಕಿನ ಹೆಂಚನ್ನು ಜೋಡಿಸಿದ್ದರಿಂದ ಮಳೆಯಲ್ಲಿ ನೀರು ಸೋರಿದ್ದ ಕುರುಹಾಗಿ ಅಲ್ಲಲ್ಲಿ ನೀರು ನಿಂತಿತ್ತು.
ಯಾವುದೆ ತೆರನಾದ ವಿದ್ಯುತ್ ದೀಪಗಳಿಲ್ಲದ ಕುಟೀರಗಳು. ಇಡೀ ಪ್ರದೇಶಕ್ಕೆ ಸೌರ ವಿದ್ಯುತಾಗಲಿ, ಸಾಮಾನ್ಯ ವಿದ್ಯುತಾಗಲಿ ಅಳವಡಿಸದಂತೆ ನ್ಯಾಯಾಲಯ ಸೂಚಿಸಿದೆಯೆಂದು ಅಲ್ಲಿನ ಅಧಿಕಾರಿ ರಾಘವೇಂದ್ರ ಮಾಹಿತಿಯಿತ್ತರು. ಸೀಮೆಯೆಣ್ಣೆಯಿಂದ ಉರಿಯುವ ಲಾಟೀನು ಅಥವ ನಾವು ತೆಗೆದುಕೊಂಡು ಹೋಗಿದ್ದ ಮೇಣದಬತ್ತಿಗಳೆ ನಮಗೆ ಬೆಳಕಿನ ಆಧಾರ. ದಟ್ಟ ಕಾಡಿನ ಆರಂಭದಲ್ಲಿ ನಿರ್ಮಿಸಿರುವ ಪ್ರದೇಶ. ಅರಣ್ಯ ಇಲಾಖಾ ಕಛೇರಿಗಳು ನೌಕರರ ವಸತಿ ಗೃಹಗಳು, ೨ ಕುಟೀರ, ಅಡುಗೆ ಭಟ್ಟರ ಮನೆಯಷ್ಟೆ ಇಲ್ಲಿರುವ ವ್ಯವಸ್ಥೆ. ಹಿಂದೆ ಇದ್ದ ಢೇರೆಗಳನ್ನು ಕಿತ್ತು ಹಾಕಲಾಗಿದೆ. ಮುತ್ತೋಡಿ ಹುಲಿ ಅಭಯಾರಣ್ಯ ಇದರ ಹೆಸರು. ಸುಮಾರು ೩೦ ಹುಲಿಗಳು ವಾಸವಾಗಿದೆಯೆಂದು ಉಲ್ಲಾಸ್ ಕಾರಂತ ಹುಲಿಗಣತಿ ವರದಿಯ ಆಧಾರಿತ ಎನ್ನುವುದು ಅವರ ಅಂಬೋಣ. ಹುಲಿ, ಚಿರತೆ, ಆನೆ, ಜಿಂಕೆ ಕಡೆವೆ ಕಾಡೆಮ್ಮೆ ಇಲ್ಲಿ ಕಾಣಸಿಗುವ ಮುಖ್ಯ ಪ್ರಾಣಿಗಳು (ಅದೃಷ್ಠವಿದ್ದರೆ ಮಾತ್ರ, ನಮಗಂತೂ ಕೆಂದಳಿಲು ಬಿಟ್ಟರೆ ಬೇರೆ ಯಾವ ಪ್ರಾಣಿಗಳೂ ಕಾಣಿಸಿಕೊಳ್ಳಲಿಲ್ಲ) ಏಷ್ಯಾದಲ್ಲೆ ಏಕೈಕ ಜನವಸತಿಯಿರದ ಸುಮಾರು ೪ ಲಕ್ಷ ಹೆಕ್ಟೇರ್ ವಿಸ್ತೀರ್ಣದ ಅತ್ಯಂತ ದಟ್ಟ ಕಾಡಿದು. ಅದಕ್ಕಾಗಿ ಸುಮಾರು ೧೬ ಹಳ್ಳಿಗಳನ್ನು ಈ ವನ್ಯ ಪ್ರದೇಶದಿಂದ ಸ್ಥಳಾಂತರಿಸಿದ್ದಾರೆ ಎನ್ನುವುದು ಅವರು ಕೊಟ್ಟ ಮತ್ತೊಂದು ಮಾಹಿತಿ. ಇಲ್ಲಿಂದ ಮೇಲೆ ೩ ಕಿ.ಮೀ ದೂರದಲ್ಲಿ ಅರಣ್ಯ ಇಲಾಖೆಯ ಶೀಗೆಕಾನ್ ಅತಿಥಿಗೃಹವಿದೆ. ಅದರಲ್ಲಿ ತಂಗಲು ಮಣಿಪಾಲದಿಂದ ಬಂದಿದ್ದ ಸಂಸಾರವೊಂದು ರಾಘವೇಂದ್ರರಿಗೆ ಮಾಹಿತಿಯಿತ್ತು ಅತಿಥಿಗೃಹದ ಕಡೆ
ವಾಹನ ತಿರುಗಿಸಿತು. ಈಗಾಗಲೆ ಅಲ್ಲಿಗೆ ತನ್ನ ಮಾರುತಿ ವಿಟಾರದಲ್ಲಿ ತೆರಳಿದ್ದ ಆ ಸಂಸಾರದ ನಾವಿಕನನ್ನು ಅಲ್ಲಿನ್ ಅಬಗ್ಗೆ ವಿಚಾರಿಸಿದೆ. ನಿಮ್ಮ ವಾಹನ ಅಲ್ಲಿಯವರೆಗೆ ಬರುವುದು ಅನುಮಾನ ಎಂಬ ಶಂಕೆ ವ್ಯಕ್ತಪಡಿಸಿದರು. ಶುದ್ದ ಬೆಂಗಳೂರು ಕನ್ನಡಿಗರ ಸ್ವಭಾವದಂತೆ ಮೊದಲು ಆಂಗ್ಲ ಭಾಷೆಯಲ್ಲಿ ಸಂಭಾಷಿಸಲು ಅವರು ಪ್ರಾರಂಭಿಸುತ್ತಿದ್ದಂತೆ ನಾನು ಕನ್ನಡದಲ್ಲೆ ಮಾತನಾಡಲು ಆರಂಭಿಸಿದೆ. ಅಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದರೂ ಆಂಗ್ಲ ಭಾಷೆಯೇ ಹೆಮ್ಮೆಯ ಸಂಗತಿ ಅಥವ ತಮ್ಮ ಆಂಗ್ಲ ಭಾಷೆಯೆ ಜ್ಙಾನದ ಸಂಕೇತ ಎಂದು ಕನ್ನಡಿಗರು ಅದೇಕೆ ಭಾವಿಸಿದ್ದಾರೆಯೋ ನಾನರಿಯೆ? ಅಲ್ಲಿಗೆ ಹೋಗಲು ನಡೆದೇ ಹೋಗಬೇಕು ಇಲ್ಲವೆ ಜೀಪ್ ನಂತಹ ಸ್ವಲ್ಪ ಎತ್ತರವಿರುವ ವಾಹನವಾದರೂ ಆಗಲೇ ಬೇಕೆಂಬುದು ಅವರ ಅಭಿಮತ. ನಡೆದು ಹೋಗಲು ಆನೆಗಳ ಹಾವಳಿ!! ಏನಿದ್ರು ನಾಳೆಯ ಕಾರ್ಯಕ್ರಮಕ್ಕೆ ಈಗಲೇ ತಲೆಕೆಡಿಸಿಕೊಳ್ಳುವುದು ಬೇಡವೆಂದು ತೀರ್ಮಾನಿಸಿದೆ.
ನಮ್ಮ ವಿನಂತಿಯಂತೆ ಬೆಳ್ಳುಳ್ಳಿ ಇರದ ಮಾಡಿದ ಅಡುಗೆ ಹಸಿದಿದ್ದ ಹೊಟ್ಟೆಗೆ ರುಚಿಯೆನಿಸಿತು. ರಾತ್ರಿ ೮.೩೦ಕ್ಕೆಲ್ಲಾ ಪ್ರಯಾಣದ ದಣಿವು ನಮ್ಮನ್ನು ಮಲಗುವಂತೆ ಪ್ರೇರೆಪಿಸಿತ್ತು. ದೀಪದ ವ್ಯವಸ್ಥೆಯಿಲ್ಲದ್ದು ಇದಕ್ಕೆ ಪೂರಕ. ಬೆಳಗ್ಗೆ ೬ ಘಂಟೆಗೆ ಸಫಾರಿಗೆ ಹೋಗಲು ಸಿದ್ದರಾಗಿ ಬರ್ತೇವೆ ಎಂದವರಿಗೆ, ಕ್ಷಮಿಸಿ ಮೊನ್ನೆ ಬಿದ್ದ ಮಳೆಗೆ ಸೇತುವೆ ಮುರಿದು ಹೋಗಿ ಸಫಾರಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಅಲ್ಲಿಗೆ ನಮ್ಮ ಈ ಪ್ರವಾಸ ಪೂರ್ತಿ ವ್ಯರ್ಥವಾಯಿತೆಂದೆ ಭಾವಿಸಿ, ಕುಟೀರದ ಕಡೆ ಲಾಟೀನು ಹಿಡಿದು ಹೊರಟೆವು. ಗವ್ವೆನ್ನುವ ಕತ್ತಲೆಯನ್ನು ಓಡಿಸಲು ಕೈಲ್ಲಿ ಹಿಡಿದಿದ್ದ ಲಾಟೀನಿಗೆ ಸಾಧ್ಯವಾಗುತ್ತಿರಲಿಲ್ಲ. ನಿಧಾನವಾಗಿ ನಡೆದು ಕುಟೀರ ಸೇರಿಕೊಂಡು ನಿದ್ದೆಗೆ ಜಾರಿದೆವು.
ಬೆಳಿಗ್ಗೆ ೭ ಘಂಟೆಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ, ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟನ್ನು ಒಲ್ಲದ ಮನಸ್ಸಿನಿಂದ ಮುಕ್ಕಿ, ರಾಘವೇಂದ್ರರನ್ನು ನಮ್ಮನ್ನು ಶೀಗೇಕಾನ್ ಅತಿಥಿಗೃಹದ ಬಳಿ (ಅರಣ್ಯ ಇಲಾಖೆಯ ವಾಹನದಲ್ಲಿ) ಕರೆದು ಕೊಂಡು ಹೋಗುವಂತೆ ವಿನಂತಿಸಿದೆ. ಆತ ಅದರಿಂದ ತಪ್ಪಿಸಿಕೊಳ್ಳಲು, ನಾವು ಮುರಿದು ಬಿದ್ದಿರುವ ಸೇತುವೆಯ ಬಳಿ ಹೋಗಬೇಕಿದೆ ಎಂದು ಹೇಳಿ ತಪ್ಪಿಸಿಕೊಳ್ಳಲು ನೋಡಿದರು. ಇಂತದೊಂದು ಉತ್ತರವನ್ನು ಮೊದಲೇ ನಿರೀಕ್ಷಿಸಿದ್ದ ನಾನು ತಕ್ಷಣವೆ ನಮ್ಮನ್ನೂ ಅಲ್ಲಿಯವರೆಗೆ ಕರೆದು ಕೊಂಡು ಹೋಗಿ ಎಂದು ದುಂಬಾಲು ಬಿದ್ದೆ. ಈಗ ಆತ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿಬಿದ್ದರು. ಆಯ್ತು ಜೀಪ್ ಚಾಲಕ ಬರುವುದು ಅರ್ಧ ಘಂಟೆ ಆಗುತ್ತೆ ಅಲ್ಲಿಯವರೆಗೆ ಕಾಯುವುದಕ್ಕೆ ತಿಳಿಸಿ ಒಳಗೆ ಸೇರಿಬಿಟ್ಟರು. ಅರ್ಧ ಘಂಟೆಯ ನಂತರ ಜೀಪ್ ದುರಸ್ತಿಗಾಗಿ ಮಲ್ಲಂದೂರಿಗೆ ಹೋಗಬೇಕಿದೆ ಎಂದು ಮತ್ತೆ ತಪ್ಪಿಸಿಕೊಂಡರು. ಅವರ ನಿರ್ದೇಶನದಂತೆ ನನ್ನ ವಾಹನದಲ್ಲೆ ಶೀಗೆಕಾನ್ ಕಡೆ ಹೊರಟೆ. ಮುತ್ತೋಡಿಯಿಂದ ಚಿಕ್ಕಮಗಳೂರಿನ ದಾರಿಯಲ್ಲಿ ೧ ಕಿಮೀ ನಂತರ ಇರುವ ಫಲಕದ ಮಾಹಿತಿಯನ್ನು ಆಧರಿಸಿ ಕಚ್ಚಾರಸ್ತೆಯಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿ ಅತಿಥಿಗೃಹ ತಲುಪಿದೆ, ದಾರಿಯುದ್ದಕ್ಕೂ ಆನೆಗಳ ಲದ್ದಿ ಅಲ್ಲಲ್ಲಿ ಕಾಣಿಸುತ್ತಿತ್ತು.
ಅತಿಥಿಗೃಹದ ಪಕ್ಕದಲ್ಲಿ ಕಾಲುದಾರಿಯೊಂದು ಕಾಣಿಸಿತು. ಕುತೂಹಲ ತಡೆಯಲಾರದೆ ಅಲ್ಲಿದ್ದ ನೌಕರರನ್ನು ಅದೇನೆಂದು ಕೇಳಿದೆ ಬೆಟ್ಟದ ಮೇಲ್ಗಡೆದೆ ಹೋಗುವ ದಾರಿ ಸಾರ್ ಎಂದ. ಹೋಗ್ಬಹುದಾ? ಎಂದು ನನ್ನ ಮುಂದಿನ ಪ್ರಶ್ನೆ. ಹೋಗಿ ಆದ್ರೆ ಆನೆಗಳ ಕಾಟ ಎನ್ನುವುದು ಅವನ ಎಚ್ಚರಿಕೆ. ನೀವು ಬನ್ನಿ ನಮ್ಮ ಜೊತೆಗೆ ಎಂದವನಿಗೆ ಮೇಲೆ ನೀರಿನ ಕೊಳವೆ ಒಡೆದು ಹೋಗಿದೆ ಅದನ್ನು ದುರಸ್ಥಿ ಮಾಡಲಿಕ್ಕೆ ಹೋಗುವುದಿದೆ. ಕೆಳಗಿಂದ ನಮ್ಮ ಜೊತೆಯವರು ಬರುತ್ತಾರೆ ಅವರು ಬಂದ ಮೇಲೆ ಹೋಗುವ ಎಂದ ಆತ. ಸರಿ ಅಷ್ಟು ಸಮಯ ಅತಿಥಿಗೃಹದ ಮೇಲ್ಭಾಗದಲ್ಲಿ ಕಳೆಯೋಣವೆಂದು ಅಲ್ಲಿಗೆ ನಡೆದೆವು. ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಇಲ್ಲಿಂದ ಅದ್ಭುತವಾಗಿ ಗೋಚರಿಸುತ್ತದೆ ಮತ್ತು ಹೆಬ್ಬೆ ಜಲಪಾತ ಸಣ್ಣದೊಂದು ಗೆರೆಯಂತೆ ಕಾಣುತ್ತದೆ ಅದೂ ಮಂಜಿಲ್ಲದ ಸಮಯದಲ್ಲಿ ಮಾತ್ರ. ಆಗಾಗ ಮುಸುಕುತ್ತಿದ್ದ ಮಂಜು, ಸುರಿಯುತ್ತಿದ್ದ ಮಳೆ ಚುಮುಚುಮು ಚಳಿ, ಹಚ್ಚ ಹಸಿರಿನ ದಟ್ಟ ಕಾಡು. ಇವೆಲ್ಲದರ ಮಧ್ಯೆ ಉತ್ತಮ ಸೌಲಭ್ಯಗಳನ್ನು ಹೊಂದಿದ ಅತಿಥಿಗೃಹ. ನಿಜಕ್ಕೂ ಸುಂದರ ಪರಿಸರ. ಛೇ! ಶೀಗೇಕಾನ್ ಅತಿಥಿಗೃಹ ಖಾಲಿಯಿದೆ ಕಾದಿರಿಸಲೇ? ಎಂದು ಕೇಳಿದವರಿಗೆ ಬೇಡವೆಂದು ಹೇಳಿ ತಪ್ಪು ಮಾಡಿದೆನೆಂದು ಈಗ ತಿಳಿಯಿತು. ಹುಡುಕಿದರೆ ಎಂತೆಂಥ ಜಾಗಗಳಿವೆ ಕರ್ನಾಟಕದಲ್ಲಿ ಎಂದು ಅರಿವಿಗೆ ಬರುತ್ತದೆ. ಮತ್ತೊಮ್ಮೆ ಇಲ್ಲಿಗೆ ಬಂದೇ ಬರುತ್ತೇನೆಂದು ಮನಸ್ಸಿನಲ್ಲೆ ತೀರ್ಮಾನಿಸಿದೆ.
ಮಾತಿನಂತೆ ಅರ್ಧ ಘಂಟೆಯ ನಂತರ ಆತ ಬಂದು ಹೋಗೋಣವೆಂದು ತಿಳಿಸಿದ. ಮೇಲೇನಿದೆ ಎಂದು ಕೇಳಿದವನಿಗೆ ಸಿಕ್ಕ ಉತ್ತರ ಏನಿಲ್ಲ ಇಲ್ಲಿಗೆ ನೀರು ಸರಬಾರಜು ಮಾಡುವ ಜಾಗವಷ್ತೆ. ಎಂದು ಅರ್ಧ ದಾರಿಗೆ ಬಂದ ಮೇಲೆ ಆತ ಈ ಉತ್ತರವನ್ನಿತ್ತ. ಈ ಹೊತ್ತಿಗಾಗಲೆ ನಮ್ಮ ಕಾಲುಗಳಿಗೆ ಅಂಟಿದ್ದ ಜಿಗಣೆ/ಇಂಬಳ/ಉಂಬಳ ಗಾಭರಿ ಬರಿಸುವಷ್ಟು ಸಂಖ್ಯೆಯಲ್ಲಿದ್ದವು. ಆದರೂ ನಡೆದೇ ನಡೆದೆವು. ಒಂದು ಅಡಿಗೂ ಕಡಿಮೆ ಅಗಲವಿರುವ ದಾರಿಯಲ್ಲಿ ಹೊಸ ಕೊಳವೆ ಅಳವಡಿಸಲು ಹಳ್ಳ ತೋಡಿದ್ದರಿಂದ ಅರ್ಧ ಆಡಿಯಷ್ಟೆ ಜಾಗದಲ್ಲಷ್ಟೆ ನಡೆಯಬೇಕಿತ್ತು. ಅಲ್ಲಲ್ಲಿ ಜಾರಿ ಬಿದ್ದು ಮೈಕೈಯೆಲ್ಲ ಕೆಸರು. ಬಟ್ಟೆಯೆಲ್ಲ ಕೆಸರುಮಯವಾಗಿತ್ತು. ಹಿಂದಿನ ದಿನ ರಾತ್ರಿ ಮತ್ತು ಈಗಲೂ
ಬೀಳುತ್ತಿದ್ದ ಮಳೆ ಮಣ್ಣನ್ನು ಸಡಿಲಗೊಳಿಸಿತ್ತು. ಕಾಲಿಟ್ಟರೆ ಅಡಿಗಳಷ್ಟು ಕೆಳಗೆ ಹೋಗುತ್ತಿತ್ತು. ನಾವು ೩ ಜನ ನಡೆಯಲು ಒದ್ದಾಡುತ್ತಿದ್ದರೆ ಅವರೀರ್ವರೂ ಚಕಚಕನೆ ಹತ್ತಿ ಹೋಗುತ್ತಿದ್ದರು. ಬಿದಿರಿನ ಕಾಡು ಪ್ರಾರಂಭವಾದೊಡನೆ ಅವರಲ್ಲೊಬ ನಮ್ಮನ್ನು ಅಲ್ಲೇ ನಿಲ್ಲಲು ಹೇಳಿ ಆನೆ ಎಲ್ಲಾದರು ಇದೆಯೆ ಎಂದು ಪರೀಕ್ಷಿಸಿ ಮುಂದೆ ಹೋಗುತ್ತಿದ್ದ. ಕಾಲುಗಳಿಗಂತು ಜಿಗಣೆಯೆಂಬ ರಕ್ತಬೀಜಾಸುರರು ದಾಳಿ ನಡೆಸುತ್ತಲೆ ಇದ್ದರು. ಈ ಮಧ್ಯೆ ಮತ್ತೆ ಮಳೆ ಬೀಳಲು ಪ್ರಾರಂಭಿಸಿ ನಮ್ಮ ಪರಿಸ್ಥಿತಿ ಗಂಭೀರವಾಗುತ್ತ ಹೋಯಿತು. ಕಾಲಿಟ್ಟೆಡೆಯೆಲ್ಲ ಜಿಗಣೆಗಳು. ಮಗನಂತು ಅಳಲು ಪ್ರಾರಂಭಿಸಿದ. ನಿಂತಲ್ಲೆ ಕುಣಿದಾಡಲು ಪ್ರಾರಂಭಿಸಿದ. ಅವನ ಕಾಲಿಗೆ ಹತ್ತಿದ್ದ ಜಿಗಣೆಗಳು ಕಿರಿಬೆರಳಿನ ಗಾತ್ರಕ್ಕೆ ಉಬ್ಬಿಕೊಂಡಿದ್ದವು. ಕಿತ್ತ್ತಾಕ್ಷಣ ರಕ್ತ ಸುರಿದು ಅವನ ಚಪ್ಪಲಿಯೆಲ್ಲ ಕೆಂಪು ಬಣ್ಣಕ್ಕೆ ತಿರುಗಿತು. ಇದಕ್ಕೆಲ್ಲಾ ಕಾರಣ ನಾವು ಚಾರಣ ಹೋಗಲು ಸಿದ್ದರಾಗದೆ ಬಂದಿದ್ದೆವು. ನನ್ನ ಚಪ್ಪಲಿ ದಾರಿಯಲ್ಲೆ ಕಿತ್ತು ಹೋಯಿತು. ಜಿಗಣೆಗಳಮ್ಟು ನಮ್ಮ ರಕ್ತ ಸಂಭಂಧಿಯಾಗಿ ಬಿಟ್ಟವು. ನನ್ನ ಪತ್ನಿ ೧ ಕಿ.ಮೀ ಮುಂಚೆಯೆ ಚಪ್ಪಲಿಯನ್ನು ದಾರಿಯಲ್ಲಿ ಬಿಟ್ಟು ಬರಿಗಾಲಿನಲ್ಲಿ ನಡೆಯುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ಸಣ್ಣ ಕಲ್ಲುಗಳು ಕಾಲಿಗೆ ಚುಚ್ಚಿ ಹಿಂಸೆಯಾಗುತ್ತಿತ್ತು. ಆದರೂ ನಡೆಯದೆ ವಿಧಿಯಿರಲಿಲ್ಲ. ಈ ಸಮಯಕ್ಕೆ ನಮ್ಮೊಡನೆ ಬಂದ ಅವರಿಬ್ಬರು ಬಹುದೂರ ಹೋಗಿದ್ದರು. ಮಳೆ ಬಿರುಸಾಗತೊಡಗಿತು ಜಿಗಣೆಗಳು ತಡೆಯಲಾರದಷ್ಟು ವಿಪರೀತವಾಗ ತೊಡಗಿದಾದ ಇನ್ನು ಮುಂದೆ ಹೋಗುವುದು ಸರಿಯಲ್ಲವೆಂದು ಹಿಂತಿರುಗ ತೊಡಗಿದೆವು. ಜಿಗಣೆಗಳು ಅವುಗಳಿಗೆ ಬೇಕಾದಷ್ಟು ರಕ್ತ ಹೀರಿ ಹಣ್ಣಾಗಿ ಅವಾಗಿಯೇ ಬಿದ್ದು ಹೋಗುತ್ತಿದ್ದವು. ಕಾಲಿನಲ್ಲಿ ರಕ್ತ ಜಿನುಗುತ್ತಿದ್ದದ್ದು ಮಾತ್ರ ಕಾಣುತ್ತಿತ್ತು. ಅಕ್ಕ ಪಕ್ಕದ ಮರಗಳ ಮೇಲಿದ್ದ ಜಿಗಣೆಗಳು ಮೈಮೇಲೆ ಅಂಟಿಕೊಳ್ಳುತ್ತಿದ್ದವು. ಈ ಪರಿಯ ಜಿಗಣೆಗಳ ಕಾಟ ಅನುಭವಿಸಿದ್ದು ಇದೇ ಮೊದಲು. ವೇಗವಾಗಿ ಇಳಿಯಲು ದಾರಿ ಸರಿಯಿರಲಿಲ್ಲ. ಜಿಗಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಇಳಿದೇ ಇಳಿದೆವು. ಅರ್ಧ ದಾರಿಗೆ ಬರುವಷ್ಟರಲ್ಲಿ ನೀರಿನ ಕೊಳವೆಯನ್ನು ಸರಿಪಡಿಸಿದ ಹುಡುಗರಿಬ್ಬರು ಹಿಂತಿರುಗಿ ನಮ್ಮನ್ನು ದಾಟಿಕೊಂಡು ಮುನ್ನಡೆಯತೊಡಗಿದರು. ನೀರು ಕೊಳವೆಯಲ್ಲಿ ಹರಿಯುವಾಗ ಉದ್ಭವಿಸುತ್ತಿದ್ದ ಶಬ್ಧ ಯಾವುದೋ ಪ್ರಾಣಿಯ ಅಥವಾ ಸರೀಸೃಪವೋ ಹರಿದಾಡಿದ ಸದ್ದನ್ಥೋ ಹೋಲುತಿದ್ದದ್ದು ನಮಗೆ ಗಾಭರಿ ತರಿಸುತ್ತಿತ್ತು. ಕೊನೆಗೊಮ್ಮೆ ನಮ್ಮ ಗುರಿ ಅತಿಥಿಗೃಹ ಕಾಣಿಸಿ ನಿಟ್ಟುಸಿರು ಬಿಟ್ಟು ಕಾಲಿಗೆ ಅಂಟಿದ್ದ ಜಿಗಣೆಗಳನ್ನೆಲ್ಲ ಕಿತ್ತು ಹಾಕಿ, ಅಡುಗೆ ಮನೆಯ ಹಿಂಭಾಗದ ನಳದಲ್ಲಿ ಕಾಲಿಗೆ ಮೆತ್ತಿದ್ದ ಕೆಸರನ್ನೆಲ್ಲ ತೊಳೆದು ಅವರು ಕೊಟ್ಟ ಕಪ್ಪು ಚಹಾವನ್ನು ಚಪ್ಪರಿಸಿದೆವು.
ಕಾರನ್ನು ಹತ್ತಿ ೩೦ ಮೀಟರ್ ಸಹಾ ಮುಂದೆ ಹೋಗುವ ಮುನ್ನವೆ ಸರಿಯಾಗಿ ಅತಿಥಿಗೃಹದ ಎದುರಿಗೆ ಹಳ್ಳವನ್ನು ತಪ್ಪಿಸುವ ಭರದಲ್ಲಿ ನೀರು ಹರಿಯಲು ಮಾಡಿದ್ದ ಕಾಲುವೆಗೆ ಕಾರಿನ ಮುಂಭಾಗದ ಚಕ್ರ ಇಳಿದು ಸಿಕ್ಕಿ ಹಾಕಿಕೊಂಡಿತು. ಅತಿಥಿಗೃಹದ ಗೋಡೆಗೂ ನನ್ನ ಕಾರಿಗೂ ಕೇವಲ ೩ ಇಂಚಿನ ವ್ಯತ್ಯಾಸವಿತ್ತು. ೨-೩ ಪ್ರಯತ್ನಗಳ ನಂತರ ನಿಧಾನವಾಗಿ ಕಾರನ್ನು ಹಿಂದಕ್ಕೆ ತೆಗೆದು ಕೊಂಡೆ. ಈಗ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸುತ್ತಿದ್ದೆ. ಅಲ್ಲಲ್ಲಿ ಬಿದ್ದಿದ್ದ ಹೊಂಡಗಳಲ್ಲಿ ವಾಹನ ಇಳಿದಾಗ ಕಾರಿನ ತಳಭಾಗಕ್ಕೆ ಕೆಲವೊಮ್ಮೆ ತಗಲುವ ಶಬ್ದ ನನಗೆ ಕಸಿವಿಸಿ ಉಂಟು ಮಾಡುತ್ತಿತ್ತು. ಹಳ್ಳವೊಂದನ್ನು ತಪ್ಪಿಸುವ ಭರದಲ್ಲಿ ಮತ್ತೊಮ್ಮೆ ಕಾರು ಪಕ್ಕಕ್ಕೆ ಸರಿದಾಗ ಉಸುಕಿನಲ್ಲಿ ಸಿಕ್ಕಿಹಾಕಿ ಕೊಂಡಿತ್ತು. ಈ ಬಾರಿ ಪರಿಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿತ್ತು. ಕಾರಿನ ಚಕ್ರ ಕೆಸರಿನಲ್ಲಿ ಸಂಪೂರ್ಣ ಹೂತುಹೋಗಿತ್ತು. ಪ್ರಯತ್ನ ಪಟ್ಟಷ್ಟು ಕಾರಿನ ಚಕ್ರ ಒಳಗಿಳಿಯುತ್ತಿತ್ತು. ಮುತ್ತೋಡಿಯ ನೌಕರರ ಸಾರ್ ಅಲ್ಲಿ ಆನೆಗಳ ಕಾಟ ಹುಷಾರು ಎಂಬ ಎಚ್ಚರಿಕೆಯ ಮಾತು ಕಿವಿಯೊಳಗೆ ರಿಂಗಣಿಸುತ್ತಿತ್ತು. ಕಾರಿನಿಂದಿಳಿದು ಮೇಲೆತ್ತಲು ಪ್ರಯತ್ನಿಸಿದರೆ ಉಹೂಂ ಕಾರು ಅಲ್ಲಾಡಿಸಲೂ ಆಗುತ್ತಿಲ್ಲ ಸುಮಾರು ೧೦ ಅಡಿಗಳಷ್ಟು ದೂರ ಇದೇ ರೀತಿಯ ಉಸುಕಿನಿಂದ ತುಂಬಿದ ಕೆಸರಿತ್ತು. ಮುತ್ತೋಡಿಯಿಂದ ಅರಣ್ಯ ಇಲಾಖೆಯ ಜೀಪ್ ತಂದು ಎಳೆಸುವ ಪ್ರಯತ್ನ ಮಾಡೋಣವೆಂದು ಹೆಂಡತಿ ಮಗನನ್ನು ಪ್ರಯತ್ನಿಸಿ ಎಂದು ಅವರನ್ನು ಕಳುಹಿಸಿದೆ. ಆದರೆ ಅವರನ್ನು ಯಾವುದಾದರು ಕಾಡುಪ್ರಾಣಿಗಳು ಆಕ್ರಮಿಸಿದರೆ ಎನ್ನುವ ಭಯ ಪ್ರಾರಂಭವಾಯಿತು. ಮತ್ತೊಮ್ಮೆ ಪ್ರಯತ್ನ ಮಾಡುವ ಎಂದು ತೀರ್ಮಾನಿಸಿ ಕಾರು ಹತ್ತಿ ಕುಳಿತ್ತು ಸ್ಟಿಯರಿಂಗನ್ನು ಎರಡೂ ಬದಿಗೂ ಬಲವಂತದಿಮ್ದ ತಿರುಗಿಸಿ ಜಾಗ ಮಾಡಿಕೊಂಡೆ ಹಿಂದಕ್ಕೂ ಮುಂದಕ್ಕೂ ಚಕ್ರವನ್ನು ಗುಂಜಿಸಿ ಕಾರನ್ನು ಓಡಿಸುವ ನನ್ನ ಪ್ರಯತ್ನಕ್ಕೆ ೪-೫ ಸಲ ಪ್ರಯತ್ನಿಸಿದ ನಂತರ ಯಶ ಸಿಕ್ಕಿತು. ಬದುಕಿದೆಯಾ ಬಡಜೀವವೆ ಎಂದು ಕೊಳ್ಳುತ್ತಾ ಜೋರಾಗಿ ಹಾರ್ನ್ ಮಾಡಿ ಹೆಂಡತಿ ಮಗನಿಗೆ ಸುದ್ದಿ ಮುಟ್ಟಿಸಿದೆ. ಅವರು ಖುಷಿಯಿಂದ ನನ್ನ ಬರುವಿಕೆಯನ್ನು ಕಾಯುತ್ತಿದ್ದರು. ನೇರವಾಗಿ ಶಿಬಿರಕ್ಕೆ ಹಿಂತಿರುಗಿ ಮುಳ್ಳಯನಗಿರಿ ರಸ್ತೆಯಲ್ಲಿ ಒಂದಷ್ಟು ದೂರ ಕಾರಿನಲ್ಲಿ ಹೋಗಿ ಅಲ್ಲಿನ ಕಾಡನ್ನೆ ಆಸ್ವಾದಿಸುತ್ತ ಓಡಾಡಿದೆವು. ಕತ್ತಲಾಗುತ್ತಿದ್ದಂತೆ ಹಿಂತಿರುಗಿದೆವು. ಸಫಾರಿಗೆ ಹೋಗಬೇಕೆನ್ನುವ ಆಸೆ ಹಾಗೆಯೇ ಉಳಿಯಿತು. ರಾತ್ರಿ ಊಟ ಮಾಡಿ ಚಂದ್ರಗ್ರಹಣದ ರಾತ್ರಿ ಮುಗಿಸಿ ಬೆಳಿಗ್ಗೆ ಮಗನಿಗಾಗಿ ಬಿಸಿನೀರನ್ನು ತಂದು ಸ್ನಾನ ಮಾಡಿಸಿ ಚಿಕ್ಕಮಗಳೂರಿಗೆ ಬಂದು ಬೋಳ ರಾಮೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಹೋಟೆಲ್ ಒಂದರಲ್ಲಿ ಉಪಹಾರ ಮುಗಿಸಿ ಕಳಸಾಪುರದ ನಮ್ಮ ತಂದೆಯ ಸೋದರತ್ತೆಯ ಮನೆಯಲ್ಲಿ ಊಟ ಮಾಡಿ ಹಾಸನಕ್ಕೆ ಬಂದಾಗ ೨.೦೦ ಘಂಟೆ. ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಮನೆಗೆ ತಲುಪಿದಾಗ ಸಮಯ ೫.೧೦. ಈ ಪ್ರವಾಸದ ತುಂಬ
ದುರಾದೃಷ್ಠ ನನ್ನ ಬೆನ್ನು ಹತ್ತಿತ್ತೇನೊ ಎನ್ನುವ ಭಾವನೆ ಈಗಲೂ ನನ್ನನ್ನು ಕಾಡುತ್ತಿದೆ.

No comments: