Monday, October 27, 2008

ಸೀತಾನದಿ

ಪ್ರವಾಸ, ಹವ್ಯಾಸವಾದ ಮೇಲೆ ರಜ ಸಿಕ್ಕಾಗಲೆಲ್ಲ ಕಾರಿಗೆ ಪೆಟ್ರೋಲ್ ತುಂಬಿಸಿ ಹೊರಡುವುದೇ ಕಾಯಕವಾಗಿ ಬಿಟ್ಟಿದೆ. ಮಗನ ಶಾಲೆಯ ರಜಾದಿನಗಳಿಗೆ ಸರಿಯಾಗಿ ನಮಗೂ ಅಕ್ಟೋಬರ್ ನಲ್ಲಿ ರಜೆಯ ಸಾಲು ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಯಲ್ಲಾಪುರದ ಸುತ್ತಮುತ್ತ್ತ ಪ್ರವಾಸ ಹೋಗೋಣವೆಂದು ವರಾತ ಹಚ್ಚಿದ ಸ್ನೇಹಿತರಿಗೆ ತಾರಮ್ಮಯ್ಯ ಆಡಿಸಿ, ಚಾರ್ಮಾಡಿ ಘಟ್ಟದಲ್ಲಿರುವ ಮಲಯಮಾರುತ ಅತಿಥಿ ಗೃಹದಿಂದ ನನ್ನ ಪ್ರವಾಸವನ್ನು ಆರಂಭಿಸುವ ಇರಾದೆಯಿಂದ ಚಿಕ್ಕಮಗಳೂರಿನ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದವನಿಗೆ ೧ ತಿಂಗಳಾದ ಮೇಲೆ ಕರೆ ಮಾಡಿ ಎನ್ನುವ ಸಿದ್ದ ಉತ್ತರ ಎದುರಾಯ್ತು. ಸರಿ ಸೆಪ್ಟೆಂಬರ್ ತಿಂಗಳ ಮೊದಲವಾರವೇ ಮತ್ತೆ ಪ್ರಯತ್ನಿಸಿದವನಿಗೆ ಮಲಯಮಾರುತ ಅತಿಥಿ ಗೃಹ
ದುರಸ್ಥಿಯಲ್ಲಿರುವುದರಿಂದ ಇನ್ನು ಯಾರಿಗೂ ಕೊಡುವುದಕ್ಕಾಗುವುದಿಲ್ಲ ಎಂಬ ಮಾರುತ್ತರ. ಅಕ್ಟೋಬರ್ ೧ ರಿಂದ ೯ ರವರೆಗೆ ಸುಧೀರ್ಘ ಪ್ರವಾಸದ ಯೋಜನೆಯಲ್ಲಿದ್ದವನಿಗೆ ಇದೇಕೋ ಕಸಿವಿಸಿ. ಈ ಮಧ್ಯೆ ನಿನ್ನೊಡನೆ ನನಗೂ ಪ್ರವಾಸ ಬರುವ ಇಚ್ಚೆ ಇದೆ ಆದರೆ ಮಕ್ಕಳ ಶಾಲೆಗೆ ರಜೆ ೮ ರಿಂದ ಪ್ರಾರಂಭವಾಗುತ್ತದೆ ನಂತರ ಹೋಗೋಣವೆಂದ ಸ್ನೇಹಿತ ಶ್ರೀಕಾಂತನಿಗೆ ಸ್ಪಂದಿಸಿ ಅದರಂತೆ ಅಕ್ಟೋಬರ್ ೮ ರಂದು ಪ್ರವಾಸ ಹೊರಡುವುದೆಂದು ನಿರ್ಧರಿಸಿದೆವು. ಸ್ಥಳಗಳು ಮತ್ತು ಅಲ್ಲಿನ ವಸತಿಗಳಿಗಾಗಿ ಹುಡುಕಾಟ ತಡಕಾಟ ಆರಂಭವಾಯಿತು. ಕೊನೆಗೆ ಸೀತಾನದಿ ಪ್ರಕೃತಿಶಿಬಿರ ಮತ್ತು ಕುದುರೆಮುಖದ ಭಗವತಿ ಪ್ರಕೃತಿ ಶಿಬಿರದಲ್ಲಿ ತಂಗೋಣವೆಂದು ಶ್ರೀಕಾಂತನಿಗೆ ತಿಳಿಸಿ ಅದರಂತೆ ೯ ಮತ್ತು ೧೦ ರ ರಾತ್ರಿ ಸೀತಾನದಿ ಪ್ರಕೃತಿ ಶಿಬಿರದಲ್ಲೂ ೧೧ ಮತ್ತು ೧೨ ರ ರಾತ್ರಿ ಭಗವತಿಯಲ್ಲೂ ಕಾರ್ಕಳ ಅರಣ್ಯ ಇಲಾಖೆಯಲ್ಲಿನ ಜಯನಾರಾಯಣರನ್ನು ಸಂಪರ್ಕಿಸಿ ಸ್ಥಳಗಳನ್ನು ಕಾದಿರಿಸಿದೆ. ಈ ಮಧ್ಯೆ ಪಾಂಡಿಚೆರಿಗೆ ಹೊರಡುವುದಾಗಿ ತಿಳಿಸಿದ್ದ ಶ್ರೀಧರ ತನಗೂ ನಾವು ಹೋಗುವ ಜಾಗಗಳಲ್ಲಿ ವಸತಿ ಬಗ್ಗೆ ವಿಚಾರಿಸಿದವನಿಗೆ ಜಯನಾರಾಯಣ ಸಂಪರ್ಕ ಸಂಖ್ಯೆಯನ್ನಿತ್ತೆ.
ಆಯುಧ ಪೂಜೆ ಮುಗಿಸಿ ೮ ರಂದು ಬೆಳಿಗ್ಗೆ ೮ ಗಂಟೆಗೆ ನಮ್ಮ ವಾಹನ ನೆಲಮಂಗಲದ ದಾರಿಯಲ್ಲಿತ್ತು. ವಾಹನದಟ್ಟಣೆಯೂ ಹೆಚ್ಚಿರಲಿಲ್ಲ. ಕುಣಿಗಲ್ ದಾರಿಯಲ್ಲಿ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಅದೇ ಆವರಣದಲ್ಲಿ ತಿಂಡಿ ಮೆಲ್ಲುತ್ತಿದ್ದ ಶ್ರೀಧರನಿಗೊಂದು ನಗೆಬೀರಿ ನಮ್ಮ
ಪ್ರಯಾಣ ಮುಂದುವರೆಯಿತು. ಹಾಸನದಲೊಮ್ಮೆ ಚಹಾ ವಿರಾಮ ಚಿಕ್ಕಮಗಳೂರಿನಲ್ಲಿ ಊಟದ ನಂತರ ನಾವು ನೇರವಾಗಿ ಶೃಂಗೇರಿಯ ಬಳಿಯಿರುವ ಹರಿಹರಪುರ ತಲುಪಿದೆವು.ತುಂಗೆಯ ದಂಡೆಯ ಮೇಲಿರುವ ಸುಂದರ ಪುಟ್ಟ ಊರು ಹರಿಹರಪುರ. ಶಂಕರಮಠದ ಆವರಣದಲ್ಲಿರುವ ಶಾರಾದಾಂಬೆಯ ದರ್ಶನ ನಂತರ ಸ್ವಾಮೀಜಿಗಳ ಸಂದರ್ಶನ ಮುಗಿಸಿ, ಹೊಸದಾಗಿ ನಿರ್ಮಿಸಿರುವ ದೇವಸ್ಥಾನಗಳ ದರ್ಶನಕ್ಕಾಗಿ ಶಕಟಪುರದತ್ತ. ಭವ್ಯವಾಗಿ ನಿರ್ಮಿಸಿರುವ ನಿರ್ಜನ ದೇವಸ್ಥಾನದಲ್ಲೊಂದು ಸುತ್ತು ಹಾಕಿ ಅಲ್ಲಿಂದ ನೇರವಾಗಿ ಶೃಂಗೇರಿ ತಲುಪಿದಾಗ ಅರಿವಿಗೆ ಬಂದಿದ್ದು ಇಡೀ ಕರ್ನಾಟಕವೇ ಅಲ್ಲಿದೆಯೇನೋ ಎಂಬಂತ ಜನಜಂಗುಳಿ. ವಸತಿ ಸಿಗುವುದಂತೂ ಕನಸಿನ ಮಾತು. ಈಗಾಗಲೇ ನಿರ್ಧರಿಸಿದಂತೆ ಸ್ನೇಹಿತ ಸಹೋದ್ಯೋಗಿ ಶೃಂಗೇರಿಯವರೇ ಆದ ವಸಂತರ ಮಗಳ ಮನೆಯಲ್ಲಿ ನಮ್ಮ ವಸತಿ. ಮಠದಲ್ಲಿ ಊಟ ಮುಗಿಸಿ ಮೆಣಸೆಯ ಬಳಿಯಿರುವ ಸುಚೇಂದ್ರರ ಮನೆಗೆ ಬಂದು ಮಲಗಿದಾಗ ರಾತ್ರಿ ೧೦ ಗಂಟೆ. ಸುಚೇಂದ್ರ ಮತ್ತು ಅವರ ಮನೆಯವರ ಆತ್ಮೀಯತೆ ಸ್ಮರಣೀಯ. ಬೆಳಿಗ್ಗೆ ಎದ್ದು ನೇರವಾಗಿ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ೧೫ ಕಿ.ಮಿ ದೂರದಲ್ಲಿರುವ ಉತ್ತಮವಾಗಿದ್ದರೂ ಕಡಿದಾದ ರಸ್ತೆಯಲ್ಲಿ ಸಿರಿಮನೆ ಜಲಪಾತಕ್ಕೆ ಬಂದಿಳಿದೆವು. ೫-೬ ವರ್ಷಗಳ ಹಿಂದೆ ಆಕಸ್ಮಿಕವಾಗಿ ಈ ಜಲಪಾತಕ್ಕೆ ಬಂದಾಗ ಇದ್ದದ್ದಕ್ಕೂ ಈಗಲೂ ತುಂಬವೇ ವ್ಯತ್ಯಾಸ ಕಂಡು ಬಂತು. ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳು ನಾಗರೀಕತೆಯ ಕುರುಹಾದ ಪ್ಲಾಸ್ಟಿಕ್ ಗುಟ್ಕಾ ಮದ್ಯದ ಪಳೆಯುಳಿಕೆಗಳು ಚಹಾ ಅಂಗಡಿ ಕೂಡಾ ಆಶ್ಚರ್ಯ ತರಿಸಿತು. ಹಿಂದೊಮ್ಮೆ ಜಲಪಾತಕ್ಕೆ ಬಂದಾಗ ಶೃಂಗೇರಿಯಲ್ಲಿ ಕಾರಿನ ಕೆಳಗೆ ಚಪ್ಪಲಿ ಬಿಟ್ಟು ಜಲಪಾತದ ಹತ್ತಿರ ಕಾರು ನಿಂತಾಗ ಕಾರಿನ ಕೆಳಗೆ ಇಣುಕಿ ಚಪ್ಪಲಿ ಹುಡುಕುತ್ತಿದ್ದ ಸುರೇಶನ ಮುಖ ನೆನಪಾಗಿ ಸಣ್ಣ ನಗೆಯೊಂದು ಹಾಯ್ದು ಹೋಯ್ತು.
ಅರಣ್ಯ ಇಲಾಖೆ ಪ್ರವೇಶ ಶುಲ್ಕ ಭರಿಸುವಶ್ಟರಲ್ಲಿ ಜಲಪಾತದ ಬಳಿ ಇದ್ದವರ ಉಲ್ಲಾಸದ ಕೇಕೆಗಳು ಮೊದಲ ಬಾರಿ ಬಂದಿದ್ದಾಗ ಇದ್ದ ನೀರವತೆಯ ಮೌನವನ್ನು ಅಣಕಿಸುತ್ತಿತ್ತು. ಅದರೂ ಶೃಂಗೇರಿಯ ಜನಜಂಗುಳಿಯೆಲ್ಲ ಇಲ್ಲೆ ಇದೆಯೆಂದು ಭಾವಿಸಿದ್ದವನಿಗೆ ಅದು ಸುಳ್ಳೆಂದು ತಕ್ಷಣವೆ ಅರಿವಾಯಿತು. ನಿರಾಯಾಸವಾಗಿ ನೀರಿಗಿಳಿದು ಜಲಪಾತದ ಕೆಳಗೆ ಕುಳಿತೆವು. ಮಕ್ಕಳಂತೂ ಅತ್ಯಂತ ಆನಂದದಿಂದ ನೀರಿನಲ್ಲಿ ಕಳೆದು ಹೋಗಿದ್ದರು.
ದಬದಬನೆ ಸುರಿಯುವ ನೀರಿಗೆ ಬೆನ್ನೊಡ್ಡಿದರೆ ಪುಗಸಟ್ಟೆ ಮಸಾಜ್. ಜಡ ಹಿಡಿದ ಬೆಂಗಳೂರಿನ ಮೈ ಮನಸ್ಸಿಗೆ ಆಹ್ಲಾದಕರ ಅನುಭವ ಇದಕ್ಕಾಗಿಯೆ ಪ್ರವಾಸಗಳೆಂದರೆ ನನಗೆ ಅಚ್ಚುಮೆಚ್ಚು. ೧ ಗಂಟೆಗೂ ಹೆಚ್ಚು ನೀರಿನಲ್ಲೆ ಕೆಳೆದು ಹಿಂತಿರುಗಿ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ಶೃಂಗೇರಿಯ ಮಠದಲ್ಲಿ ಊಟ ಮುಗಿಸಿ ನಮ್ಮ ಪ್ರಯಾಣ ಸೀತಾನದಿ ಪ್ರಕೃತಿ ಶಿಬಿರದೆಡೆಗೆ. ಆಗುಂಬೆಯ ಘಟ್ಟ ಇಳಿದ ತಕ್ಷಣವೆ ಸಿಗುವ ಊರು ಸೋಮೇಶ್ವರದಲ್ಲಿ ಚಹಾ ಸೇವಿಸಿ ಹೆಬ್ರಿ ಕಡೆಗೆ ನಮ್ಮ ಪ್ರಯಾಣ. ಒಂದೇ ವಾಹನ ಚಲಿಸುವಷ್ಟು ಚಿಕ್ಕ ರಸ್ತೆಯಲ್ಲಿ ಎಚ್ಚರಿಕೆಯಿಂದ ಚಲಿಸುತ್ತಾ ಎದುರಿಗೆ ಬರುತ್ತಿರುವ ವಾಹನಗಳಿಗೆ ದಾರಿ ಬಿಡುತ್ತಾ (ಇದೇ ಸ್ಥಳಕ್ಕೆ ಕಳೆದ ಬಾರಿ ಬಂದಾಗ ಆದ ಕೆಟ್ಟ ಅನುಭವ ಕಲಿಸಿದ ಪಾಠ) ಸೀತಾನದಿ ಪ್ರಕೃತಿಶಿಬಿರ ತಲುಪಿದಾಗ ಕುಡಿದು ಕಿರುಚಾಡುತ್ತಿದ್ದ ಗುಂಪಿನ ಕೇಕೆಗಳು ನಮ್ಮನ್ನು ಸ್ವಾಗತಿಸಿದವು. ಮದ್ಯಪಾನ ಧೂಮಪಾನ ನಿಷೇಧಿಸಲಾಗಿದೆ ಎಂಬ ಫಲಕ ನಮ್ಮನ್ನು ಅಣಕಿಸುತ್ತಿತ್ತು.
ದಟ್ಟ ಕಾಡಿನ ಮಧ್ಯೆ ಆನೆಝರಿ ಪ್ರಕೃತಿ ಶಿಬಿರವನ್ನು ಹೋಲುವ ಸೀತಾನದಿಯ ದಡದಲ್ಲಿ ನಿರ್ಮಿಸಿರುವ ಢೇರೆಗಳು, ಅಡುಗೆಮನೆ, ಕುಠೀರ ನಿರ್ವಹಣೆಯಲ್ಲಿ ಹಿಂದೆ ಬಿದ್ದಿವೆ. ಅಲ್ಲಿನ ನೌಕರ ಪ್ರಕಾಶನನ್ನು ಸಂಪರ್ಕಿಸಿ
ಸ್ವಲ್ಪ ಹೆಚ್ಚೆನಿಸುವಷ್ಟೆ ಹಣವನ್ನು ನಮ್ಮಿಂದ ಪೀಕಿದ ನಂತರವೆ ಆತ ನಮಗೆ ಢೇರೆಗಳನ್ನು ಅನುವು ಮಾಡಿಕೊಟ್ಟದ್ದು. ನಮ್ಮ ಹೊರೆಗಳನ್ನೆಲ್ಲಾ ಅಲ್ಲಿಗೆ ವರ್ಗಾಯಿಸಿ ನದಿ ದಡಕ್ಕೆ ಹೋಗೋಣವೆಂದವನಿಗೆ ನೀರಿಗಿಳಿಯ ಬೇಡಿ ಅಪಾಯವಿದೆ ಎಂದ ಪ್ರಕಾಶ. ಸಸ್ಯಾಹಾರವಾದರೆ ಹೆಬ್ರಿಗೆ ಹೋಗಿ ಬಿಡಿ ಸಾರ್ ಎಂದು ಅಲವತ್ತು ಕೊಂಡವನಿಗೆ ಚಹಾವನ್ನಾದರೂ ಕಳುಹಿಸು ಮಹರಾಯ ಎಂದು ಹೇಳಿ ನದಿ ಕಡೆ ನಡೆದೆವು. ದಂಡೆಯಲ್ಲೆಲ್ಲಾ ಮರಳು ಆವರಿಸಿ ನೀರಿಗಿಳಿಯುವುದು ಪ್ರಕಾಶ ಹೇಳಿದಂತೆ ಅಪಾಯವೇ ಸರಿಯೆನಿಸಿತು. ವೀಕ್ಷಣ ಸ್ಥಳವಿದೆ ಹೋಗಿ ಬನ್ನಿ ಎಂದವನ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನದಿಯ ದಂಡೆಯಲ್ಲೆ ಅಲ್ಲಿನ ಪ್ರಶಾಂತತೆ (ಕುಡುಕರ ಗುಂಪು ತಮ್ಮ ಆಟಾಟೋಪವನ್ನು ನಿಲ್ಲಿಸಿದ್ದರಿಂದ) ಆಸ್ವಾದಿಸುತ್ತ ನಿಂತೆವು. ಮಳೆಗಾಲದಲ್ಲಿ ನಡೆಯುವ ರಾಪ್ಟಿಂಗ್ ಗೆ ಇಲ್ಲಿ ಸುಗ್ಗಿ. ಆದರೂ ನೀರಿಗಿಳಿಯಲು ಆಗದಿದ್ದುದು ಬೇಸರ ತರಿಸಿತ್ತು ಮಕ್ಕಳಿಗಂತೂ ಮೃಷ್ಟಾನ್ನ ಭೋಜನ ಮುಂದಿಟ್ಟು ಕೈಕಟ್ಟಿ ಕೂರಲು ಹೇಳಿದಂತೆ ಭಾಸವಾಗಿದ್ದಿರಬೇಕು. ಅವರ ಆಸೆಗಳನ್ನು ಹತ್ತಿಕ್ಕುತ್ತಾ ನಾಳೆ ನೀರಿಗಿಳಿಯುವಂತಹ ಸ್ಥಳಗಳಿಗೆ ಕರೆದು ಕೊಂಡು ಹೋಗುವುದಾಗಿ ಹೇಳಿ ಬಲವಂತವಾಗಿ ಅವರನ್ನು ದಂಡೆಯಿಂದ ಕರೆತಂದಿದ್ದಾಯ್ತು. ಆಗಾಗ ಸುರಿದ ಮಳೆಯಿಂದಾಗಿ ಜಿಗಣೆಗಳು ಈಗಾಗಲೆ ಸುಪ್ರಿಯಳ ರಕ್ತದ ರುಚಿ ನೋಡಿದ್ದವು. ಢೇರೆಯಿಂದ ನಾಲ್ಕೈದು ಹೆಜ್ಜೆ ಮುಂದಿಟ್ಟರೆ ಜಿಗಣೆಗಳು ಧಾಂಗುಡಿಯಿಡುತ್ತಿದ್ದವು. ಒಂದು ಜಿಗಣೆ ಹಿಡಿದು ಅದರ ಮೇಲೆ ಪುಡಿ ಉಪ್ಪನ್ನು ಉದುರಿಸಿ ಅದರಿಂದಾಗುವ ಪರಿಣಾಮವನ್ನು ಅಳೆಯಲು ಕುಳಿತೆವು. ನಿಜಕ್ಕೂ ಉಪ್ಪು ಜಿಗಣೆಗಳಿಗೆ ಪರಿಣಾಮಕಾರಿ ತಗುಲಿದ ತಕ್ಷಣವೆ ಅಲ್ಲಿಂದ ಉದುರಿ ಹೋಗಿ ಮುರುಟಿಕೊಳ್ಳುವ ಪರಿ ಮಾತ್ರ ಪ್ರಾಣಿ ಹಿಂಸೆಯೇನೊ ಎಂಬ ಭಾವನೆ.
ಪ್ರಕಾಶ ಕೊಟ್ಟ ಚಹಾ ಹೀರಿ ಹೆಬ್ರಿ ಕಡೆಗೆ ಹೊರೆಟೆವು. ಪುಟ್ಟ ಊರಾದರೂ ಶುಭ್ರವಾಗಿರುವ ಸ್ಥಳ ಹೆಬ್ರಿ. ರಾತ್ರಿ ವಿದ್ಯುತ್ ಇಲ್ಲದ ಪರಿಸ್ಥಿತಿಗೆ ಮೇಣದ ಬತ್ತಿಗಳನ್ನು ಖರೀದಿಸಿ. ಬಡ್ಕಿಲ್ಲಾಯ (ಭೋಜನಾಲಯ) ದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಹಿಂದಿರುಗಿದಾಗ ಸ್ನೇಹಿತ, ಸಹೋದ್ಯೋಗಿ ಶ್ರೀಧರ ಪ್ರತ್ಯಕ್ಷನಾಗಿದ್ದ. ಅಬ್ಬ!! ವಿದ್ಯುತ್ ದೀಪಗಳು ಬೆಳಗಲು ಆರಂಭಿಸಿದ್ದವು. ಮೊಬೈಲ್ಗಳನ್ನು ಛಾರ್ಜ್ ಮಾಡಲು ಹಚ್ಚಿ ಮಲಗೋಣವೆಂದು ಹೇಳಿದ ಸ್ವಲ್ಪ ಸಮಯಕ್ಕೆ ಮಳೆ ಧೋ ಎಂದು ಸುರಿಯಲು ಆರಂಭಿಸಿತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಬೇಸಿಗೆಯಂತಿದ್ದ ಶೆಕೆ ಮಾತ್ರ ತಣ್ಣಗಾಗಿರಲಿಲ್ಲ. ಅದ್ಯಾವಾಗ ನಿದ್ರಾದೇವಿ ಆವರಿಸಿದಳೊ ಗೊತ್ತಿಲ್ಲ.
ಬೆಂಗಳೂರಿಂತೆ ಯಾವುದೆ ಆತುರವಿಲ್ಲದ್ದರಿಂದ ೭.೩೦ ಗೆ ಹಾಸಿಗೆಯಿಂದೆದ್ದು ಬೆಳಗಿನ ಮೌನವನ್ನು ಅಸ್ವಾದಿಸುತ್ತ ನದಿಯ ದಂಡೆಯಲ್ಲೊಮ್ಮೆ ನಿಂತು ಢೇರೆಯ ಪಕ್ಕದಲ್ಲೆ ಇದ್ದ ಕಾಡಿನ ದಾರಿಯಲ್ಲಿ ಸ್ವಲ್ಪ ದೂರ ನಡೆದು ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಮಕ್ಕಳಾಗಲೆ ತಮ್ಮ ಆಟಕ್ಕೆ ಶುರುವಿಟ್ಟುಕೊಂಡಿದ್ದರು. ಶ್ರೀಕಾಂತ ಮನವಿಯಂತೆ ಪ್ರಕಾಶ ಕಳಿಸಿದ ಚಹಾ ಸೇವನೆಯ ನಂತರ ಸ್ನಾನಾದಿಗಳನ್ನು ಮುಗಿಸಿ ಹೆಬ್ರಿಯಲ್ಲಿ ಮಲೆನಾಡು ಮತ್ತೆ ಕರಾವಳಿಯ ತಿನಿಸುಗಳಾದ ಕೊಟ್ಟೆ ಕಡುಬು, ಬನ್ಸ್, ಶ್ಯಾವಿಗೆ ಎಲ್ಲವುದರಗಳ ರುಚಿ ನೋಡಿ, ಬೇರೆ ಯಾವುದೇ ಕಾರ್ಯಕ್ರಮವಿಲ್ಲದ್ದರಿಂದ ಯಾವುದಾದರೂ ನೀರಿಗಿಳಿಯುವ ಸ್ಥಳ ಸಿಗಬಹುದೆಂಬ ನೀರೀಕ್ಷೆಯಲ್ಲಿ ವಾಹನವನ್ನು ನಿಧಾನವಾಗಿ ಓಡಿಸತೊಡಗಿದ ಶ್ರೀಕಾಂತ. ಹಿಂದಿನ ದಿನವೆ ಕ್ರಮಿಸಿದ್ದ ದಾರಿಯಾದ್ದರಿಂದ ನಿನ್ನೆ ಗಮನಿಸಿದ್ದ ಕೆಲವು ಜಾಗಗಳು ೪-೫ ಕಿ.ಮೀ ನಂತರ ಸಿಕ್ಕವು ದೇವಸ್ಥಾನದ ಪಕ್ಕದಲ್ಲಿದ್ದ ಸ್ಥಳ ಪ್ರಶಸ್ಥವಾಗಿದ್ದರೂ ಈಗಾಗಲೆ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಇನ್ನು ಸ್ವಲ್ಪ ಮುಂದೆ ಸಿಕ್ಕ ಚಿಕ್ಕ ಊರಿನಲ್ಲಿ ನಮ್ಮ ನೀರೀಕ್ಷಣೆ ಮತ್ತು ಅಪೇಕ್ಷೆಗೆ ತಕ್ಕುದಾದ ಒಂದು ಸ್ಥಳ ದೊರಕಿದ ತಕ್ಷಣ ಅದೇ ಹಳ್ಳಿಯ ಜನಗಳಿಂದ ಅಪಾಯವಿಲ್ಲವೆಂದು ಖಾತರಿಪಡಿಸಿಕೊಂಡು ಸ್ವಚ್ಚವಾಗಿ ಸ್ವಚ್ಚಂದವಾಗಿ ಹರಿಯುತ್ತಿದ್ದ ನೀರಿಗೆ ಮಕ್ಕಳು ದಡದಡನೆ ಇಳಿದೇ ಬಿಟ್ಟರು.
ಮನದಣಿಯೆ ಈಜಿ, ಪರಸ್ಪರ ನೀರೆರೆಚಿಕೊಳ್ಳುತ್ತಾ, ದಣಿವಾರಿಸಿಕೊಳ್ಳುತ್ತಾ ನೀರನ್ನು ಮೊದಲಬಾರಿಗೆ ನೋಡಿದವರಂತೆ ನಾವೆಲ್ಲಾ ಆಡಿಯೇ ಆಡಿದೆವು. ಮೇಲೆ ಸೂರ್ಯ ತನ್ನ ಪ್ರತಾಪವನ್ನು ತೋರಿಸುತ್ತಿದ್ದರೂ ತಣ್ಣಗಿನ ನೀರಿನಲ್ಲಿ ನಮಗದು ಅರಿವಿಗೆ ಬರುತ್ತಿರಲಿಲ್ಲ. ನೀರಿನಿಂದ ಹೊರ ಬಂದ ತಕ್ಷಣ ಬಟ್ಟೆಯಿಲ್ಲದ ಮೈ ಚುರುಗುಟ್ಟಿದಾಗ ಮತ್ತೆ ನೀರಿಗೆ ಜಿಗಿಯುವುದೆ ಮಜಾ.
ನಮಗೂ ಸ್ವಲ್ಪ ಜಾಗ ಬಿಡಿ ಎಂಬಂತೆ ಬಂದ ಬಹುಶಃ ನಮ್ಮಂತೆ ಪ್ರವಾಸಿಗರ ೫-೬ ಹುಡುಗರ ಗುಂಪೊಂದು ನಮ್ಮನ್ನು ನೋಡಿ ದೂರದಲ್ಲೆ ಕುಳಿತಿತು. ಬಹುಶಃ ಸಭ್ಯತೆಗಾಗಿ ದೂರದಲ್ಲೆ ಕುಳಿತು ನಾವು ಜಾಗ ಖಾಲಿ ಮಾಡುವವರೆಗೆ ಕಾಯುತ್ತಿದ್ದದ್ದು ನಮ್ಮ ಅರಿವಿಗೆ ಬಂದಾಗ ಸಮಯ ಮಧ್ಯಾನ್ಹ ೧ ಗಂಟೆಯಿರಬೇಕು.
ಮನದಣಿಯೆ ನೀರಾಟದಿಂದ ದಣಿದಿದ್ದ ಮನಗಳಿಗೆ ರಸ್ತೆಯ ಪಕ್ಕದಲ್ಲಿ ಸಿಕ್ಕ ಚಹಾ ಅತ್ಯಂತ ರುಚಿಕರವೆನಿಸಿದ್ದು ಸಹಜವೆ. ನೇರವಾಗಿ ಹೆಬ್ರಿಗೆ ಬಂದು ಊಟಮುಗಿಸಿ ಸುಡುತ್ತಿದ್ದ ಬಿಸಿಲಿನಲ್ಲಿ ಬಂದು ಢೇರೆಯೊಳಗೆ ಬಿದ್ದೆವು. ಸಣ್ಣದೊಂದು ನಿದ್ದೆ ತೆಗೆದು ಕಾರು ಹತ್ತಿ ಕೋಡ್ಲುತೀರ್ಥಕ್ಕೆ ಹೋಗುವ ದಾರಿಯಲ್ಲಿ ಸಿಗುವ ನದಿಯಲ್ಲಿ ಇಳಿಯುವ ಮನಸ್ಸಿನಿಂದ ಆ ದಾರಿಯಲ್ಲಿ ಹೊರಟೆ, ಹೆಬ್ರಿಯಿಂದ ಸೋಮೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಬಲಭಾಗದಲ್ಲಿ ಸಿಗುವ ಕಮಾನಿನಲ್ಲಿ ಬಲಗಡೆಗೆ ತಿರುಗಿ ಅಲ್ಲಿಂದ ಮುಂದೆ ಸುಮಾರು ೨೦ ನಿಮಿಷ ಕ್ರಮಿಸಿದ ನಂತರ ಸೇತುವೆಯೊಂದನ್ನು ದಾಟುವಾಗ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯೊಂದು ನನ್ನ ಗಮನ ಸೆಳೆಯಿತು. ಅಲ್ಲೆ ವಾಹನವನ್ನು ನಿಲ್ಲಿಸಿ ೨ ಹೊಳೆಗಳು
ಸೇರುವ ಜಾಗ ನೀರಿಗಿಳಿಯುವಂತೆ ನನ್ನ ಪ್ರೆರೇಪಿಸಿದರೂ ಆಗುಂಬೆಯ ಸೂರ್ಯಾಸ್ತಮಾನ ವೀಕ್ಷಿಸಲು ಹೋಗಲು ಸಮಯದ ಅಭಾವವಿದ್ದುದರಿಂದ ಆ ಯೋಜನೆಯನ್ನು ಅಲ್ಲೆ ಕೈಬಿಟ್ಟು ಕೋಡ್ಲು ತೀರ್ಥದ ಕಡೆ ವಾಹನ ಚಲಾಯಿಸಿದೆ. ಕೋಡ್ಲುತೀರ್ಥ ನನ್ನ ಗುರಿಯಲ್ಲವಾದರೂ ದಾರಿಯಲ್ಲಿ ಸಿಗುವ ಹೊಳೆ ನಾಳಿನ ಯೋಜನೆಗೆ ನನ್ನ ಗಮನದಲ್ಲಿತ್ತು. ಈ ರಸ್ತೆ ಮಳೆಯಿಂದ ಹಾಳಾಗಿತ್ತು. ಸುಮಾರು ಅರ್ಧಗಂಟೆಯ ನಂತರ ಸಿಕ್ಕ ನದಿ ಎಲ್ಲರಿಗೂ ಇಷ್ಟವಾಯಿತು.
ಅಲ್ಲಿಂದ ನೇರವಾಗಿ ಆಗುಂಬೆ ಕಡೆ ಹೊರೆಟೆವು. ಕರಾವಳಿ ಮುಗಿದು ಘಟ್ಟ ಪ್ರದೇಶ ಆರಂಭವಾಗುವ ಕುರುಹಾಗಿರುವ ಆಗುಂಬೆ ಘಟ್ಟ ಅತ್ಯಂತ ಕಡಿದಾದ ಬೆಟ್ಟಗಳ ತಿರು ತಿರುವಿನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸಾಹಸ. ಸೂರ್ಯಾಸ್ತಮಾನ ವೀಕ್ಷಿಸಿ ಮತ್ತೆ ಘಟ್ಟವನ್ನಿಳಿದು ಹೆಬ್ರಿಯ ಬಡ್ಕಿಲ್ಲಾಯದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಬಂದು ಮಲಗಿದೆವು.
ಬೆಳಿಗ್ಗೆ ಬೇಗನೆದ್ದು ಬಡ್ಕಿಲ್ಲಾಯದಲ್ಲಿ ಉಪಹಾರ ಮುಗಿಸಿ ನಿನ್ನೆ ಸಿಕ್ಕಿದ್ದ ಸಂಗಮದಲ್ಲಿ ಬಂದಿಳಿದೆವು ಒಂದು ಕಡೆಯಿಂದ ಬೆಟ್ಟದಿಂದ ಇಳಿದು ರಭಸವಾಗಿ ಹರಿಯುವ ಹೊಳೆ ಇನ್ನೊಂದು ಕಡೆಯಿಂದ ಪ್ರಶಾಂತವಾಗಿ ನಿಂತ ನೀರಿನಂತೆ ಭಾಸವಾಗುವ ಹೊಳೆಗಳ ಸಂಗಮ ಮನಸ್ಸಿಗೆ ಮುದ ನೀಡುವುದು ಖಚಿತ ಇದೆಲ್ಲಕ್ಕೆ ಹೆಚ್ಚಾಗಿ ಅಲ್ಲಿನ ನಿರ್ಜನತೆ, ನೀರವ ಮೌನ, ಹಕ್ಕಿಗಳ ಕಲರವ ಬಂಡೆ ಮತ್ತು ಕಲ್ಲುಗಳ ಮೇಲೆ ಹರಿದು ಬರುವ ಶುಭ್ರವಾದ ನೀರಿನ ಜುಳು ಜುಳು ಶಬ್ಧ ಬಿಟ್ಟರೆ ಬೇರೇನೂ ಕೇಳಿಸುವುದಿಲ್ಲ. ರಸ್ತೆಯಿಂದ ೨೫ ಅಡಿಗಳ ಅಂತರದಲ್ಲಿ ಇರುವ ಈ ಜಾಗ ತಲುಪುವಷ್ತರಲ್ಲಿ ೩-೪ ಜಿಗಣೆಗಳು ಕಾಲಿಗಂಟಿದ್ದವು. ಉಪ್ಪಿನ ಸಹಾಯದಿಂದ ಜಿಗಣೆಗಳನ್ನು ಬಿಡಿಸಿ ನೀರಿಗಿಳಿಯಲು ಸಿದ್ದ. ಯಾವುದೇ ಅಪಾಯದ ಜಾಗವಲ್ಲವೆಂದು ಎಲ್ಲೂ ಹೆಚ್ಚು ಆಳವಾಗಲಿ ನೀರಿನ ಸೆಳೆತವಾಗಲಿ ಇಲ್ಲವೆಂದು ಖಾತರಿಪಡಿಸಿಕೊಂಡು ನೀರಿಗಿಳಿದೆವು. ಮತ್ತದೆ ಕಾರ್ಯಕ್ರಮ ನೀರಿನ ಬರ ಮುಗಿದುಹೋಗುವಂತೆ ದೇಶಕಾಲಗಳನ್ನು ಮರೆತು ಹೋಗುವಂತೆ ಆಡುತ್ತಿದ್ದವರನ್ನು ಎಚ್ಚರಿಸಿದ್ದು ೩ ಲಲನೆಯೊರಡನೆ ದಡದಡನೆ ಇಳಿದು ಬಂದ ಯುವಕ. ನಮ್ಮಿರುವನ್ನು ಗಮನಿಸದೆ ನಾವಿದ್ದ ಜಾಗದ ಪಕ್ಕದಲ್ಲಿ ಕಾಡಿನೊಳಗೆ ನಡೆದು ಹೋದ ಆ ಗುಂಪು ನಮ್ಮನ್ನು ಎಚ್ಚರಿಸಿ ಸಮಯ ಓಡುತ್ತಿರುವುದನ್ನು ಗಮನಿಸುವಂತೆ ಮಾಡಿತು. ಅದೇ ಗುಂಪಿನ ಕೆಲವರು ಅವರನ್ನು ಹುಡುಕುತ್ತ ಬರುವುದೊರಳಗೆ ನಾವು ವಾಹನವನ್ನೇರಲು ಅನುವಾಗುತ್ತಿದ್ದೆವು.
ನೇರವಾಗಿ ಮುದ್ರಾಡಿಯ ಮುಖೇನ ಕಾರ್ಕಳ ತಲುಪಬೇಕಿತ್ತು. ಮುದ್ರಾಡಿಯಲ್ಲಿ ಚಹಾ ಸೇವಿಸಿ ಕಾರ್ಕಳದಲ್ಲಿ ಜಯನಾರಾಯಣರ ಸಲಹೆಯಂತೆ ಸಾಗರ್ ನಲ್ಲಿ ಊಟ ಮುಗಿಸಿ ಬಿಸಿಲಿನ ಝಳವನ್ನು ಶಪಿಸುತ್ತಾ ಕುದುರೆಮುಖದ ಕಡೆ ಹೊರೆಟೆವು. ದಾರಿಯುದ್ದಕ್ಕೂ ಸಿಗುವ ವಾಹನಗಳಿಗೆ ದಾರಿಬಿಡುತ್ತಾ ಘಟ್ಟವನ್ನು ಹತ್ತುತ್ತಾ ಯಾವುದಾದರೂ ಪ್ರಾಣಿಗಳು ಕಾಣಸಿಗಬಹುದೆಂಬ ಕುತೂಹಲದಿಂದ ಇಣುಕಿನೋಡುತ್ತಾ ಮಾಲಿನ್ಯರಹಿತ ಗಾಳಿಯನ್ನು ಸೇವಿಸುತ್ತಾ ದಾರಿ ಕಳೆದೆವು. ಪ್ಲಾಸ್ತಿಕ್ ವಸ್ತುಗಳನ್ನು ಎಸೆಯಬೇಡಿ ಎಂಬ ಅರಣ್ಯ ಇಲಾಖೆಯವರ ಮನವಿ ಫಲಕಗಳು ಯಾರ ಮೇಲೂ ಪರಿಣಾಮ ಬೀರಿದಂತೆ ಗೋಚರಿಸಲಿಲ್ಲ. ದಾರಿಯಲ್ಲಿ ಸಿಗುವ ಕಣಿವೆ ಪ್ರದೇಶಗಳಲ್ಲಿ ನಿಂತು ಛಾಯಾಚಿತ್ರ ತೆಗೆಯುತ್ತಾ ಸೂತನಬ್ಬಿ ಜಲಪಾತಕ್ಕೆ ಬಂದಿಳಿದೆವು. ಸುಸಜ್ಜಿತ ಮೆಟ್ಟಿಲುಗಳಿರುವ ಜಲಪಾತ ಹತ್ತುವಾಗ ಕಷ್ಟವೆನಿಸಿದರೂ ಸರಿ ಶೃಂಗೇರಿಯಿಂದ ಹೊರನಾಡಿಗೆ ಬರುವ ಎಲ್ಲ ಯಾತ್ರಿಗಳು ನೋಡದೆ ಹೋಗಲಾರರು. ಅಲ್ಲಿ ನಮ್ಮ ಕ್ಯಾಮೆರ ಕಣ್ಣು ಹೊಡೆಸಿ ನೇರವಾಗಿ ಭಗವತಿಗೆ ಬಂದಿಳಿದೆವು. ಬಾಗಿಲಲ್ಲೆ ಚಿನ್ನಯ್ಯ ತನ್ನ ಎಂದಿನ ನಗುಮೊಗದೊಂದಿಗೆ ಭೇಟಿಯಾದ. ಬೆಳಕಿಲ್ಲದ ಢೇರೆಗಳನ್ನು ನಮಗೆ ಕೊಡ ಮಾಡಿದ ರಾಜಣ್ಣನನ್ನು ಶಪಿಸಿಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ ಸ್ಪಟಿಕದಷ್ಟು ತಿಳಿಯಾದ ಶುಭ್ರವಾದ ಭದ್ರಾ ಹೊಳೆಯತ್ತ ಓಡಿದ ಅಮಿತ್ ನನ್ನು ಸುಶ್ಮಿತ ಮತ್ತು ಸುಪ್ರಿಯ ಹಿಂಬಾಲಿಸಿದರು. ಶ್ರೀಕಾಂತನಿಗಂತೂ ಅತ್ಯಂತ ತಿಳಿಯಾದ ನೀರು ಸಂತಸ ತಂದಿರುವುದು ಅವನ ಮುಖದ ಚಹರೆಯೆ ಹೇಳುತ್ತಿತ್ತು. ಆದರೂ ಸೌರ ದೀಪಗಳನ್ನು ನಿರ್ವಹಣೆಯಿಲ್ಲದೆ ಹಾಳುಗೆಡವಿದ್ದು ನಮ್ಮ ವ್ಯವಸ್ಥೆಯ ಅವಸ್ಥೆಗೆ ಧ್ಯೋತಕ. ನಮ್ಮ ಹೊರೆಗಳನ್ನೆಲ್ಲಾ ಢೇರೆಗಳಿಗೆ ಒಗೆದು ಭದ್ರಾ ಹೊಳೆಯಲ್ಲಿ ಇಳಿದೆವು ಕಾರ್ಕಳದ ಬಿಸಿಲಿಗೆ ಬೆವರಿದ್ದ ಮೈಮನ ತಣ್ಣಗಿನ ಹೊಳೆಯ ನೀರಿಗೆ ಮೈಜುಮ್ಮೆನಿಸುವಂತಿತ್ತು.
ಈ ಬಾರಿ ಕುದುರೆಮುಖದ ಪೀಕ್ ಚಾರಣ ಹೋಗಬೇಕೆಂದಿದ್ದ ನನ್ನ ಉತ್ಸಾಹಕ್ಕೆ ರಾಜಣ್ಣ ಮತ್ತು ಚಿನ್ನಯ್ಯ ತಡೆಹಿಡಿದರು. ರಾಜಣ್ಣನೊಡಗೂಡಿ ಮಲ್ಲೇಶ್ವರದಲ್ಲಿ ಅಡುಗೆ ಪದಾರ್ಥಗಳನ್ನು ಖರೀದಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿತ್ತು. ಯಾವುದಾದರೂ ಕಾಡುಪ್ರಾಣಿಗಳು ಕಾಣ ಸಿಗಬಹುದೇನೊ ಎಂಬ ಆಸೆಯೊಡನೆ ಮುಖ್ಯ ರಸ್ತೆಯವರೆಗೂ ಕತ್ತಲಿನಲ್ಲಿಯೇ ನಡೆದು ಬಂದವರಿಗೆ ಏನೂ ಸಿಗದಿದ್ದು ನಿರಾಸೆ ತಂದಿತು. ರಾತ್ರಿ ಕತ್ತಲಿನಲ್ಲಿಯೆ ಊಟದಮನೆಯಲ್ಲಿ ಮೇಣದದೀಪದ ಬೆಳಕಿನಲ್ಲಿ ಊಟ ಮುಗಿಸಿ ಅಗ್ನಿದೇವನ ಮುಂದೆ ಕೂತವರಿಗೆ ಜಿಗಣೆಗಳು ದರ್ಶನವಿತ್ತವು. ೧೦.೩೦ ಯ ಸಮಯಕ್ಕೆ ನಿದ್ರಾದೇವಿ ಕೈಹಿಡಿದು ಎಳೆಯತೊಡಗಿದಳು.
೬ ಗಂಟೆಗೆ ಎದ್ದು ಶ್ರೀಕಾಂತನೊಡನೆ ಶಿಬಿರವನ್ನೆಲ್ಲಾ ಕಾಡು ಪ್ರಾಣಿ ಹುಡುಕಲು ಒಂದು ಸುತ್ತು ಹಾಕಿ ನಿರಾಶರಾಗಿ ಹಿಂತಿರುಗಿ ಬಂದು ಮತ್ತೊಂದು ಸುತ್ತು ನಿದ್ದೆ ತೆಗೆದು, ೮ ಗಂಟೆಗೆಲ್ಲ ತಿಂಡಿ ತಿಂದು ಮತ್ತೊಂದು ಸುತ್ತು ಮುಖ್ಯರಸ್ತೆಯವರೆಗೂ ನಡೆದು ಹೋದೆವು ಈ ಬಾರಿ ಸಂಸಾರ ಸಮೇತ. ಶುದ್ದ ಸ್ಪಟಿಕದಂತ ಭದ್ರಾ ಹೊಳೆಯಲ್ಲಿ ಮತ್ತೊಮ್ಮೆ ಮನದಣಿಯೆ ಈಜಿದೆವು. ಇಲ್ಲಿನ ನೀರು ಅದೆಷ್ಟು ತಿಳಿಯಾಗಿದೆಯೆಂದರೆ ೫-೬ ಅಡಿ ತಳದಲ್ಲಿರುವ ಕಲ್ಲುಗಳು ಕಾಣಿಸುತ್ತಿರುತ್ತವೆ ನೀವೆನಾದರೂ ಆಳವನ್ನು ತಿಳಿಯದೆ ನೀರಿಗಿಳಿದರೆ ಹುಂಬರಾಗುವುದು ಖಚಿತ.
ಮಧ್ಯಾನ್ಹ ರಾಜಣ್ಣ ಕೊಟ್ಟ ಊಟಮಾಡಿ ಗಂಗಡಿಕಲ್ಲು ಶಿಖರದ ಕಡೆ ಚಾರಣ ಹೊರೆಟೆವು ಈಗಾಗಲೆ ಮಳೆ ಸುರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು. ೨-೩ ಕಿ.ಮೀ ಕಾರಿನಲ್ಲಿ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಕಬ್ಬಿಣದ ಗೇಟ್ ದಾಟಿ ಶೋಲಾ ಕಾಡನ್ನು ದಾಟುತ್ತಿದ್ದಾಗ ಜಿಗಣೆಗಳ ದಂಡು ದಾಳಿಯಿಡುತ್ತಿದ್ದದ್ದು ನನ್ನ ಗಮನಕ್ಕೆ ಬಂದರೂ ಮಕ್ಕಳು ಗಾಭರಿಯಾಗುತ್ತಾರೆಂದು ತಿಳಿಸದೆ ಮುಂದೆ ನಡೆದೆ. ಶ್ರೀಕಾಂತ ಮತ್ತು ಶ್ರೀಮತಿಯವರು ಹಿಂದೆಯೇ ಉಳಿದರು. ಸುಮಾರು ೧ ಕಿ.ಮೀ ನಡೆದ ನಂತರ ಮಳೆ ಬರುವ ಲಕ್ಷಣಗಳು ದಟ್ಟವಾಗತೊಡಗಿದವು ಅದಕ್ಕೆ ಪೂರಕವಾಗಿ ಜಿಗಣೆಗಳು ಎಲ್ಲರ ಕಾಲಿಗೂ ಮೆತ್ತಿಕೊಳ್ಳತೊಡಗಿದವು. ಮತ್ತೊಮ್ಮೆ ಉಪ್ಪಿನ ಸಹಾಯದಿಂದ ಎಲ್ಲವನ್ನು ತೊಡೆದುಕೊಂಡು ಎದುರಿಗೆ ಕಾಣುತ್ತಿದ್ದ ಕಣಿವೆಯ ದೃಶ್ಯಗಳನ್ನೆ ಕಣ್ಣು ಕ್ಯಾಮೆರದಲ್ಲಿ ತುಂಬಿಕೊಂದು ಹಿಂತಿರುಗಿ ಮಲ್ಲೇಶ್ವರಕ್ಕೆ ಬರುವ ದಾರಿಯಲ್ಲಿ ಲಕ್ಯಾ ಅಣೆಕಟ್ಟಿಗೆ ಭೇಟಿ ಕೊಟ್ಟು ಮಲ್ಲೇಶ್ವರಕ್ಕೆ ಬಂದು ಮಾರುಕಟ್ಟೆಯಲ್ಲಿ ರಾತ್ರಿ ಊಟಕ್ಕೆ ಬೇಕಾದ ಕೆಲವು ಪದಾರ್ಥಗಳನ್ನು ಖರೀದಿಸಿ ಶಿಬಿರಕ್ಕೆ ಹಿಂತಿರುಗಿದೆವು. ನಾಳೆ ಅಂದರೆ ೧೩ ರಂದು ನಾವು ಬೆಂಗಳೂರಿಗೆ ಹಿಂತಿರುಗಬೇಕಿತ್ತು. ೪-೫ ದಿನಗಳು ಹೇಗೆ ಕಳೆದವೆಂಬುದು ತಿಳಿಯುವ ಮುನ್ನವೆ ೧೩ ಓಡಿ ಬಂದಿತ್ತು. ಈ ಬಾರಿ ಕೋಡ್ಲು ತೀರ್ಥದ ಹಾದಿಯಲ್ಲಿ ಸಿಕ್ಕ ೨ ನವಿಲು ಮತ್ತು ಮುಂಗುಸಿ ಬಿಟ್ಟರೆ ಯಾವುದೇ ಪ್ರಾಣಿಗಳು ಕಾಣಸಿಗಲಿಲ್ಲ. ಊಟಕ್ಕೆ ಕುಳಿತವರಿಗೆ ರಾಜಣ್ಣ ಕಾಡೆಮ್ಮೆಗಳ ಬಗ್ಗೆ ಭಾಷಣ ಬಿಗಿದ. ಕಾಡುಕೋಣ ಮತ್ತು ಎಮ್ಮೆಗಳು ಶಿಬಿರದೊಳಗೆ ಸಂಜೆ ೬ ಗಂಟೆಗೆಲ್ಲ ಬಂದು ಬಿಡತ್ವೆ ಸಾರ್ ಜನ ಜಾಸ್ತಿ ಇದ್ರೆ ಬರಲ್ಲ ಸಾರ್ ಎಂದವನಿಗೆ, ಏನ್ ರಾಜಣ್ಣ ನನಗಂತು ಒಂದು ಕಾಣಿಸಲಿಲ್ವಲ್ಲ ಎಂದವನ್ನು ನೋಡಿ ಪೆಕರನಂತೆ ನಗುತ್ತಾ ಹೋದ. ಕಳೆದ ಬಾರಿ ಕೆಲವು ಕಡವೆ ಜಿಂಕೆಗಳಾದರೂ ಗೋಚರಿಸಿದ್ದವು. ಸಾರ್ ಬೆಳಗ್ಗೆನೆ ಮುಖ್ಯರಸ್ತೆಯ ಬದಿಯ ಗೇಟ್ ಹತ್ತಿರ ಹೋಗಿ ಖಂಡಿತ ಸಿಗುತ್ತೆ ಎಂದವನ ಮಾತು ಕೇಳಿ ರಾತ್ರಿ ಮತ್ತು ಬೆಳಿಗ್ಗೆ ಹೋದವನಿಗೆ ಯಾವುದೆ ಪ್ರಾಣಿ ಗೋಚರಿಸಲಿಲ್ಲ.
ಸರಿಯಪ್ಪ ಊಟ ಕೊಡು ಮಹರಾಯ ಎಂದು ಕೇಳಿ ಹರಟೆ ಹೊಡೆಯುತ್ತ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ರೆ ಆವರಿಸತೊಡಗಿತು. ಕಾಡಿನ ಪ್ರಾಣಿಯೊಂದು ಓಡಿಸಿಕೊಂಡು ಬರುತ್ತಿದ್ದ ಕನಸಿಗೆ ತಟನೆ ಎಚ್ಚರವಾಗಿ ಅಬ್ಬ! ಎನ್ನುವ ನಿಟ್ಟುಸಿರು ಸಧ್ಯ ಕನಸು ಎಂಬ ನಿರಾಳ ಭಾವ ಎಂತ ಸುಖ ಎಂದು ಕೊಳ್ಳುತ್ತಿದ್ದವನಿಗೆ ಜೋರಾಗಿ ಉಸಿರಾಡುವ ಶಬ್ಧ ಅಸ್ಪಷ್ಟವಾಗಿ ಕೇಳಿಸತೊಡಗಿತು. ಹಿಂದಿನ ರಾತ್ರಿ ಪಕ್ಕದ ಢೇರೆಯಲ್ಲಿದ್ದ ಮಹಾನುಭಾವನ ಗೊರಕೆ ಶಬ್ಧವು ಹೀಗೆ ಕೇಳಿಸುತ್ತಿತ್ತು ಆದರೆ ಇದು ಗೊರಕೆ ಶಬ್ಧದ ರೀತಿಯಿರಲಿಲ್ಲ. ಆ ಶಬ್ಧ ಬರುತ್ತಾ ಬರುತ್ತಾ ಹತ್ತಿರದಲ್ಲೆ ಕೇಳಿಸತೊಡಗಿತು. ಈ ಶಬ್ಧದ ಪರಿಚಯ ನನಗಿದೆ. ಆದರೆ ನೆನಪಾಗುತ್ತಿಲ್ಲ. ಹೊರಗೆ ಹೋಗೋಣವೆಂದರೆ ದೀಪವಿಲ್ಲದೆ ಏನೂ ಕಾಣಿಸದಂತ ಕಾರ್ಗತ್ತಲು. ಮನಸ್ಸಿನಲ್ಲಿ ಭಯ ಕುತೂಹಲ. ಗಡಿಯಾರ ಸಮಯ ೩.೩೦ ತೋರಿಸುತ್ತಿತ್ತು. ಸುಮಾರು ಅರ್ಧ ಗಂಟೆ ಆ ಶಬ್ಧವನ್ನೆ ಆಲಿಸುತ್ತಾ ಹಾಗೆ ಮಲಗಿದ್ದವನಿಗೆ ಆ ಜೋರಾಗಿ ಉಸಿರಾಡುವ ಶಬ್ಧ ನಿಚ್ಚಳವಾಗಿ ಅತೀ ಹತ್ತಿರದಲ್ಲೆ ಕೇಳಿಸಲಾರಂಭಿಸಿತು. ಈಗ ನನಗೆ ಆ ಶಬ್ಧ ಸ್ಪಷ್ಟವಾಗಿ ನೆನಪಾಗತೊಡಗಿತು. ಹಳ್ಳಿಯಲ್ಲಿ ನಮ್ಮ ಮನೆಯ ಎಮ್ಮೆ ಕಾಯುತ್ತಿದ್ದ ಶಾಮ್ಲಿಯೊಡನೆ ಹೋದಾಗ ಎಮ್ಮೆಗಳು ಮತ್ತು ಹಸುಗಳು ಹುಲ್ಲು ಮೇಯುವಾಗ ಮೂಸುತ್ತಿದ್ದ ಶಬ್ಧವದು. ತಕ್ಶಣವೆ ಮೈ ರೊಮಾಂಚನ ಗೊಂಡು ಸ್ವಲ್ಪ ಭಯವೂ ಆಯಿತು. ಏಕೆಂದರೆ ಆ ಶಬ್ಧ ಈಗ ಸ್ಪಷ್ಟವಾಗಿ ನಾವಿದ್ದ ಢೇರೆಯ ಪಕ್ಕದಲ್ಲೆ ಅತ್ಯಂತ ಸನಿಹದಲ್ಲೆ ಕೇಳಿಸುತ್ತಿತ್ತು. ಈಗ ನನಗೆ ಸ್ಪಷ್ಟವಾಗಿ ತಿಳಿದು ಹೋಯಿತು ಒಂದೋ ಕಡವೆ ಅಥವಾ ಕಾಡೆಮ್ಮೆ ನಮ್ಮ ಢೇರೆಯ ಪಕ್ಕದಲ್ಲಿದೆ ಆದರೆ ನೋಡುವುದು ಹೇಗೆ? ಕತ್ತಲೆಯಲ್ಲಿಯೆ ಎದ್ದು ನೋಡೇಬಿಡೋಣವೆಂದು ತೀರ್ಮಾನಿಸಿದೆ. ಆದರೆ ರೆಪ್ಪೆ ಪಟ ಪಟ ಬಡಿದರೂ ಏನೂ ಕಾಣದಂತ ಕಾರ್ಗತ್ತಲು ಸಮಯ ಈಗಾಗಲೆ ೪ ದಾಟಿದ್ದಿರಬೇಕು. ಢೇರೆಯ ಝಿಪ್ ತೆರೆದರೆ ಆ ಶಬ್ಧಕೆ ಅದು ಓಡಿಹೋಗುವುದು ಖಚಿತ. ಈ ಸಮಯಕ್ಕೆ ನಾವಿದ್ದ ಢೇರೆಯನ್ನು ನಿಲ್ಲಿಸಲು ನೆಟ್ಟಿದ್ದ ಕಬ್ಬಿಣದ ಕಂಭಕ್ಕೆ ಒಮ್ಮೆ ಆ ಪ್ರಾಣಿಯ ಬಾಲ ತಗುಲಿ ಠಣ್ ಎಂಬ ಶಬ್ಧವಾಯಿತು ಇದರಿಂದ ಆ ಪ್ರಾಣಿ ಎಲ್ಲಿದೆಯೆಂಬ ಸರಿಯಾಗಿ ಊಹೆ ಮಾಡಲು ನೆರವಾಯಿತು. ಸರಿ ಬಾಗಿಲಿನ ತೆರದಲ್ಲಿರುವ ಝಿಪ್ ಕೆಳಭಾಗದಲ್ಲಿ ಹರಿದುಹೋಗಿದ್ದ ಢೇರೆ ನೆನಪಾಯಿತು. ಸ್ವಲ್ಪವೂ ಶಬ್ಧ ಮಾಡದೆ ಮಂಚದಿಂದ ಕೆಳಗಿಳಿದು ತೆವಳಿಕೊಂಡೆ ತಲೆಯನ್ನು ಹೊರಹಾಕಿದವನಿಗೆ ಕಂಡದ್ದು ಬರೀ ಕಾರ್ಗತ್ತಲು ಆದರೆ ಅದೆ ಶಬ್ಧ ಸುಮಾರು ೨-೩
ಅಡಿಗಳ ದೂರದಲ್ಲಿ ಕೇಳಿಸುತ್ತಿದೆ. ಪಕ್ಕಕ್ಕೆ ತಿರುಗಿದವನಿಗೆ ಕಂಡದ್ದು ಶ್ರೀಕಾಂತನ ಢೇರೆಯ ದೀಪ. ಹತ್ತಾರು ಕ್ಷಣಗಳ ನಂತರ ನನ್ನ ಕಣ್ಣು ಆ ಬೆಳಕಿಗೆ ಹೊಂದಿ ಕೊಂಡ ಮೇಲೆ ಪಕ್ಕದಲ್ಲೆ ನಿಂತಿದ್ದ ಕಾಡೆಮ್ಮೆ ನಿರಾತಂಕವಾಗಿ ಮೇಯುತ್ತಿದೆ. ತಕ್ಷಣವೆ ಹೊಳೆದದ್ದು ಫೋಟೊ ತೆಗೆಯಬೇಕೆಂದು. ಮೆಲ್ಲನೆ ತೆವಳಿಕೊಂಡು ಹಿಂತಿರುಗಿ ತಡಕಾಡಿ ಕ್ಯಾಮೆರ ಮತ್ತು ಟಾರ್ಚನ್ನು ಹಿಡಿದು ಸ್ವಲ್ಪವೂ ಶಬ್ಧವಾಗದಂತೆ ಢೇರೆಯಿಂದ ಆಚೆ ತಲೆ ಹಾಕಿ ಕ್ಯಾಮೆರ ಸಜ್ಜುಗೊಳಿಸಿದವನಿಗೆ ಕ್ಯಾಮೆರದ ಬೆಳಕಿನಿಂದ ಕತ್ತಲು ಕವಿದಂತಾಗಿ ಏನೂ ಕಾಣಿಸದಂತಾಯ್ತು. ನನಗೂ ಮತ್ತು ಪ್ರಾಣಿಗೂ ಮಧ್ಯೆ ಒಣಗಿ ಹಾಕಿದ್ದ ನಮ್ಮ ಬಟ್ಟೆಗಳು ಅಡ್ಡ ಇದ್ದವು. ಎದ್ದು ನಿಂತು ಆ ಬಟ್ಟೆಗಳನ್ನು ಪಕ್ಕಕ್ಕೆ ಸರಿಸಲು ಭಯ ಮತ್ತು ಆ ಶಬ್ಧಕ್ಕೆ ಓಡಿ ಹೋದರೆ ಅಥವ ನನ್ನನ್ನು ಆಕ್ರಮಿಸಿದರೆ ಎಂಬ ಆತಂಕ. ಮತ್ತೊಮ್ಮೆ ಸಾವರಿಸಿಕೊಂಡು ಬಾಲ ಅಳ್ಳಾಡಿಸಿಕೊಂಡು ಮೇಯುತಿದ್ದ ಪ್ರಾಣಿಯ ಫೋಟೊ ಹೊಡೆದೇ ಬಿಟ್ಟೆ. ನನ್ನ ಚರ್ಯೆಯನ್ನು ಅದು ಗಮನಿಸದಂತೆ ಕಾಣಿಸಲಿಲ್ಲ. ವಿಡಿಯೊ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಾಹಸಕ್ಕೆ ಬೆಳಕು ಸಹಕರಿಸಲಿಲ್ಲ. ಈಗ ಪ್ರಪಂಚದ ಪರಿವೆಯೇ ಇಲ್ಲದೆ ಬೆಂಗಳೂರಿನ ಜಂಜಾಟಗಳಿಂದ ಮುಕ್ತಿ ಪಡೆದಂತೆ ನಿದ್ದೆ ಮಾಡುತ್ತಿದ್ದ ಹೆಂಡತಿಯನ್ನು ಮೆಲ್ಲನೆ ಎಚ್ಚರಗೊಳಿಸಿ ಕಾಡೆಮ್ಮೆಯ ಬಗ್ಗೆ ತಿಳಿಸಿ, ಆಕೆಯೂ ನನ್ನಂತೆ ತೆವಳಿಕೊಂಡು ಹೊರಗೆ ತಲೆ ಚಾಚಿ ನೋಡುವಂತೆ ಹೇಳಿದೆ. ಈ ಹೊತ್ತಿಗಾಗಲೆ ಅದು ೫-೬ ಅಡಿಗಳಷ್ಟು ದೂರ ಹೋಗಿತ್ತು. ಹೆಂಡತಿಗಂತೂ ಖುಷಿಯೋ ಖುಷಿ. ಎಲ್ಲೆಲ್ಲೋ ಹುಡುಕಿದ್ವಿ ಪಕ್ಕದಲ್ಲೆ ಬಂದು ನಿಂತಿದ್ಯಲ್ಲ? ಎನ್ನುತ್ತಾ ಮತ್ತೆ ನಿದ್ದೆಗೆ ಜಾರಿದಳು. ಈಗ ಹ್ಯಾಂಡಿಕ್ಯಾಂ ಸಜ್ಜುಗೊಳಿಸಿ ಅದರ ದೀಪವನ್ನು ಹಾಕಿಕೊಂಡು ಹೊರಬಂದವನಿಗೆ ಕಾಡೆಮ್ಮೆ ನಮ್ಮ ಢೇರೆಯ ಬಳಿಯಲ್ಲಿ ಕಾಣಿಸಲಿಲ್ಲ ಅದೇ ದೀಪದ ಬೆಳಕಿನಲ್ಲಿ ಹುಡುಕುತ್ತಿದ್ದವನಿಗೆ ಹೊಳೆಯುವ ಎರಡು ಬೆಳಕಿನುಂಡೆಗಳು ಕಂಡದ್ದು ಢೇರೆ ಮುಂಭಾಗದಲ್ಲಿ ಸುಮಾರು ೧೫-೨೦ ಅಡಿಗಳ ದೂರದಲ್ಲಿ. ಆದರೆ ಅದನ್ನು ದೃಶ್ಯೀಕರಿಸುವ ನನ್ನ ಪ್ರಯತ್ನ ಈಗಲೂ ಕೈಗೂಡಲಿಲ್ಲ. ಈಗ ಶ್ರೀಕಾಂತನನ್ನು ಎಚ್ಚರಿಸಲು ೨-೩ ಬಾರಿ ಕರೆದರೂ ಅವನಿಂದ ಯಾವ ಪ್ರತಿಕ್ರಿಯೆ ಬಾರದಿದ್ದಾಗ ಸುಮ್ಮನಾದೆ. ಬಹುಶಃ ನಾನು ಶ್ರೀಕಾಂತನನ್ನು ಕರೆದ ಸದ್ದಿಗೆ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಸಮ್ಯ ಬೆಳಗಿನ ೪.೩೦ ತೋರಿಸುತ್ತಿತ್ತು.
೫ ಗಂಟೆ ಸುಮಾರಿಗೆ ಶ್ರೀಕಾಂತನನ್ನು ಎಚ್ಚರಗೊಳಿಸಿ ಶಿಬಿರವನ್ನು ಸುತ್ತು ಹಾಕಿದರೂ ಕಾಡೆಮ್ಮೆ ಕಾಣಿಸಲಿಲ್ಲ. ಮತ್ತೊಮ್ಮೆ ಮುಖ್ಯರಸ್ತೆಯ ಬಳಿಗೆ ನಡೆದು ಹೊರಟವನಿಗೂ ಮತ್ತದೆ ನಿರಾಶೆ. ಕಾಡೆಮ್ಮೆಯ ಹೆಜ್ಜೆ ಗುರುತುಗಳು ಮತ್ತು ಅದು ನಡೆದು ಬಂದ ದಾರಿಯಲ್ಲಿ ಹುಲ್ಲು ಅಸ್ತವ್ಯಸ್ತವಾಗಿದ್ದ ಜಾಗಗಳು ನಾವಿದ್ದ ಢೇರೆಗೆ ಅದೆಷ್ಟು ಸಮೀಪವಿತ್ತೆಂದು ಗೊತ್ತಾದಾಗ ಭಯಮಿಶ್ರಿತ ಸಂತೋಷ.
೮ ಗಂಟೆಗೆ ಸರಿಯಾಗಿ ಅಡುಗೆ ಮನೆಗೆ ಬಂದು ರಾಜಣ್ಣ ಕೊಟ್ಟ ಪೂರಿ ಪಲ್ಯ ಮೆದ್ದು ೯ ಗಂಟೆಗೆ ಅಲ್ಲಿಂದ ಹೊರಟು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನಂಗೈದು ನೇರವಾಗಿ ಹೊಂಡಗಳಿಂದಲೇ ಆವೃತವಾದ ಘಟ್ಟದ ರಸ್ತೆಯಲ್ಲಿ ಮೆಲ್ಲನೆ ವಾಹನ ಚಲಾಯಿಸುತ್ತಾ ಕೊಟ್ಟಿಗೆಹಾರದಲ್ಲಿ ಎಳನೀರು ಕುಡಿದು ಬಾಣಾವರದಲ್ಲಿ ಶ್ರೀಕಾಂತನ ಸಂಬಂಧಿಕರ ಮನೆಯಲ್ಲಿ ಊಟಮಾಡಿ ಅರಸೀಕೆರೆ, ತಿಪಟೂರು, ನಿಟ್ಟೂರು ಗುಬ್ಬಿ ತುಮಕೂರು ಮಾರ್ಗವಾಗಿ ಬೆಂಗಳೂರನ್ನು ತಲುಪಿದೆವು.

4 comments:

ರಾಜೇಶ್ ನಾಯ್ಕ said...

ಸೂಪರ್. ಕಾಡೆಮ್ಮೆ ಸರಿಯಾಗಿ ನೋಡಲು ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು.

Aravind GJ said...

ನಿಮ್ಮ ಪ್ರವಾಸ ಕಥನಗಳನ್ನು ಓದಲು ತುಂಬ ಖುಷಿಯಾಗುತ್ತದೆ. ಹೀಗೆ ಹೋಗುತ್ತಾ ಇರಿ.

prasca said...
This comment has been removed by the author.
prasca said...

ರಾಜೇಶ್ ಸಾರ್ ನಮಸ್ಕಾರ,
ಅರವಿಂದ್
ಮಲೆನಾಡಿನಲ್ಲೆ ಹೋಗಿ ನೆಲೆಸುವ ಇರಾದೆ ಇದೆ. ಆದೆ ಏನ್ ಮಾಡೋದು ಹೊಟ್ಟೆಪಾಡು.
ಪ್ರಸನ್ನ