Friday, April 26, 2013

ನಾನು ಮೊದಲ ಬಾರಿ ನೂರು ರೂ ನೋಟು ನೋಡಿದ ಪ್ರಸಂಗ.



ನನ್ನದು ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಸಹಪಾಠಿ ದಯಾನಂದ ನಮ್ಮೂರ ಪಟೇಲರ ಮೊಮ್ಮಗ. ಆಗ ಕಾಂಗ್ರೆಸ್ ಮತ್ತು  ಜನತಾ ಪಕ್ಷ ಎರಡೇ ಪಕ್ಷಗಳಿದ್ದಂತೆ ತೋರುತ್ತದೆ. ಯಾವ ಚುನಾವಣೆ ಎಂಬುದು ನೆನಪಿಲ್ಲ. ಕಾಂಗ್ರೆಸ್ಸಿನ ಚಿಹ್ನೆ ಹಸು ಮತ್ತು ಕರುವಿನದ್ದು. ತಗಡಿನ ಬಿಲ್ಲೆಯ ಮೇಲೆ ಮುದ್ರಿತಗೊಂಡಿದ್ದ ಆ ಬಿಲ್ಲೆ ನಮಗೆ ಅಚ್ಚುಮೆಚ್ಚು, ಕಾರಣ ಎರಡು ತೂತ ಹಾಕಿ ದಾರ ಕಟ್ಟಿ ಜುಯ್ ಎಂದೆಳೆಯುವ ಮೋಜಿನ ಬಿಲ್ಲೆಗೆ ಅದು ಅತ್ಯಂತ ಸೂಕ್ತವಾಗಿತ್ತು. ಆಗ ಜನತಾ ಪಕ್ಷದವರು ಸಂಘರ್ಷ ಚಿತ್ರದ "ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೆ ಸೋಲು ನಿನಗೆ" ಹಾಡಿನ ರೀಮಿಕ್ಸ್ ಮಾಡಿ, ಓ ಇಂದಿರಾ ಸೋಲು ನಿನಗೆ ಎಂಬ ಹಾಡನ್ನು ಎಲ್ಲೆಡೆ ಬಿತ್ತರಿಸುತ್ತಿದ್ದ ನೆನಪು ಇದೇ ಚುನಾವಣೆಯ ಅಥವ ನಂತರದ್ದ ನೆನಪಿಲ್ಲ.

ಒಂದು ದಿನ ದಯಾನಂದ ಮಧ್ಯಾಹ್ನ ಊಟದ ನಂತರ ಬಂದು ನೂರು ರೂಪಾಯಿ ನೋಡಿದ್ಯ? ಅಂತ ಕೇಳ್ದ, ಇಲ್ಲಾ ಅಂತ ತಲೆ ಆಡಿಸಿದೆ. ನೋಡ್ತಿಯ? ಅಂದವನಿಗೆ ಗೋಣು ಹಾಕಿ ಇಚ್ಚೆ ವ್ಯಕ್ತ ಪಡಿಸಿದೆ. ಸರಿ ಬಾ ತೋರಿಸ್ತಿನಿ. ಭಯದಿಂದ ಕೇಳಿದೆ ನಿನ್ ಹತ್ರ ಹೇಗ್ ಬಂತು. ನನ್ ಹತ್ರ ಇಲ್ಲ. ನಮ್ಮನೆಲಿದೆ ತೋರಿಸ್ತಿನಿ ಬಾ.

ಪಟೇಲರು ವಂಶಪಾರಂಪರ್ಯವಾಗಿ ಕಾಂಗ್ರೆಸ್ಸಿನ ಸದಸ್ಯರು. ಅವರ ವಂಶದ ಯಾರೋ ಒಬ್ಬರು ನೆಹರುರೊಡನೆ ಇದ್ದ ಫೋಟೊವೊಂದು ಅವರ ಮನೆಯ ನಡುಮನೆಯ ಮುಂಬಾಗಿಲಿನ ಎದುರು ನೇತಾಡುತ್ತಿತ್ತು.

ಅವ್ವ ಒಳ್ಗೆ ಕೆಲ್ಸ ಮಾಡ್ತವ್ಳೆ ಎಂದ, ಮೆಲ್ಲಗೆ ನಡುಮನೆ ದಾಟಿ ಹಿಂದೆ ಕೋಣೆಯೊಂದಕ್ಕೆ ನನ್ನನ್ನು ಎಳೆದುಕೊಂಡು ಹೋದ. ಕೊಟೆಯೊಳಗೆ ನುಸುಳಿದಂತ ಅನುಭವ ದೊಡ್ಡಮನೆ, ದವಸ ಧಾನ್ಯಗಳ ತುಂಬಿತುಳುಕುತ್ತಿದ್ದ ಕೋಣೆಯ ಮೂಲೆಯೊಂದರಲ್ಲಿ ನಾಲ್ಕಾರು ತೆಳ್ಳನೆ ಗೋಣಿ ಚೀಲದ ಮೂಟೆಯ ಬಳಿಗೆ ಕರೆದೊಯ್ದು ಬೆರಳಿನಿಂದ ಚೀಲದ ದಾರಗಳನ್ನು ಬಿಡಿಸಿ ತೂತಿನಿಂದ ನೋಡು ಎಂದ ಉಹುಂ ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಮೆಲ್ಲಗೆ ಸ್ವಿಚ್ ಹಾಕಿದಾಗ ಮಂದ ಬೆಳಕು ಹರಿಯಿತು. ಯಾರ್ಲಾ ಅದು  ಕೋಣ್ಯಾಗೆ? ಎಂಬ ವಯಸ್ಸಾದ ಹೆಣ್ಣಿನ ಧ್ವನಿ ತೂರಿ ಬಂತು. ನಾನು ನಡುಗಿ ಹೋಗಿದ್ದೆ. ಏ ನಾನೆ ಕಣಜ್ಜಿ ದಯಾ ಎಂದು ರೇಗಿದ. ಅಲ್ಲೇನ್ಲಾ ಕ್ಯಾಮೆ ನಿಂಗೆ ಇಸ್ಕೂಲ್ಗೆ ಓಗಿಲ್ವೆನ್ಲಾ? ಏಯ್ ಓಗಿದಿನಿ, ಪುಸ್ಕ ಮರ್ತೋಗಿದ್ದೆ ತಗೊಂಡೋಯ್ತಿನಿ.

 ಬಾ ನೋಡು ಎಂದವನ ಹಿಂದೆ ಮೆಲ್ಲಗೆ ನಡೆದೆ. ವಾಹ್ ಕಡು ನೀಲಿ ಬಣ್ಣದ ಗರಿಗರಿ ನೋಟಿನ ಕಟ್ಟುಗಳು. ಕಾಣಿಸಿದ್ದು ಮೇಲಿನದ್ದು ಮಾತ್ರ. ಕೊನೆಯಲ್ಲಿ ಬಿಳಿ ಪಟ್ಟಿಯಂತಿದ್ದ ನೂರರ ನೋಟಿನ ಕಂತೆಗಳು. "ಈ ಮೂಟೆಯೆಲ್ಲ ಅದೆ" ಎಂದು ಹೆಮ್ಮೆಯಿಂದ ಬೀಗಿದ.

ಆಶ್ಚರ್ಯ ಮತ್ತು ಭಯ ಮಿಶ್ರಿತನಾಗಿ ಇದೆಲ್ಲ ನಿಮ್ದೇನಾ ಎಂಬ ನನ್ನ ಪ್ರಶ್ಬೆಗೆ, ಇಲ್ಲ ಎಲೆಕ್ಸನ್ ಬಂದಯ್ತಲ್ಲ, ಅದಕ್ಕೆ ಹಟ್ಟಿಯೋರ್ಗೆ ಕುಡಿಯಕ್ಕೆ ಮನೆಗಿಷ್ಟು ಅಂತ ಕೊಡಕ್ಕೇಂತ ತಂದು ಮಡಗವ್ರೆ. ಮೆಲ್ಲನೆ ಹೊರ ಬಂದು ಅಂಗಳ ದಾಟುತ್ತಿದ್ದವರಿಗೆ ದಯಾನಂದನ ತಾಯಿಯ ಇಸ್ಕೂಲಿಗೋದ್ ಬುಟ್ಟು ಇಲ್ಲೇನ್ಲ ಮಾಡ್ತಿದಿಯ ಎಂದು ಹಿಡಿದು ಕೊಂಡರು. ಯವ್ವ ಎಕ್ಸೈಸ್ ಮರ್ತೋಗಿದ್ದೆ ತಗಂಡೋಗವಾಂತ ಬಂದೆ, ನೋಡು ಇವ್ನು ಬಂದಿಲ್ವ? ಎಂದು ನನ್ನ ಕಡೆ ತೋರಿಸಿದ. ಸುಳ್ಳು ಹೇಳಿ ತಪ್ಪ್ಸಿಕೊಂಡು ಬಂದು ಶಾಲೆ ಸೇರಿದೆವು.

ಪ್ರತಿ ಬಾರಿಯೂ ಖಾನ್ಗ್ರೆಸ್ಸಿಗರು ಚುನಾವಣೆ ಅಕ್ರಮಗಳ ಬಗ್ಗೆ ಮಾತನಾಡಿದಾಗ ಈ ಪ್ರಸಂಗ ನನ್ನ ನೆನಪಿಗೆ ಬಂದು ಖಾನ್ಗ್ರೆಸ್ಸಿಗರ ನೈತಿಕತೆಯ ಬಗ್ಗೆ ಸಣ್ಣನೆಯ ನಗುವೊಂದು ನನ್ನ ಮುಖದಲ್ಲಿ ಹಾಯ್ದು ಹೋಗುತ್ತದೆ.

Monday, August 27, 2012

ಕೊಡಗಿನ ಐಸಿರಿ

http://photobucket.com/keerti

ಕೊಡಗಿನ ಸುಂದರ ಜಲಪಾತಗಳು,

Monday, November 7, 2011

ನಿಡ್ಯಮಲೆ

ಒಂದರ ಹಿಂದೊಂದರಂತೆ ಪ್ರವಾಸ, ಆದರೂ ಬೇಸರವಿಲ್ಲದೆ ಹೊರಟೆ. ಅತ್ಯುತ್ಸಾಹದಿಂದ ಹೊರಡಿಸಿದ ಅಕ್ಕಭಾವಂದಿರು ಎಷ್ಟು ಹೇಳಿದರೂ ಕೇಳದೆ ಚಾರಣ ನಿಗಧಿ ಪಡಿಸಿ ಅಲ್ಲಿ ದಾರಿ ತಪ್ಪಿ ಹತ್ತಲಾಗದೆ ಕೊನೆಗೆ ಗುರಿಯಿಂದ ಕೇವಲ ಹತ್ತು ನಿಮಷಕ್ಕೆ ಮುನ್ನ ಹಿಂತಿರುಗಿದ ಚಾರಣ.

ನಿಡ್ಯಮಲೆಯ ಚಿತ್ರಗಳು ಅಂತರ್ಜಾಲದಲ್ಲಿ ಬಹುಶಃ ಇದು ಮೊದಲನೆಯದಿರಬೇಕು.

ನಿಡ್ಯಮಲೆಯ ಜಲಪಾತಕ್ಕೆ ಕರೆದು ಕೊಂಡು ಹೊರಟ ಮಾರ್ಗದರ್ಶಿಗಳು ದಾರಿ ತಪ್ಪಿ ಕಾಡಿನಲ್ಲಿ ಕಡಿದಾದ ಗುಡ್ಡವನ್ನು ಹತ್ತಿಸಿ, ಪ್ರಥಮ ಚಾರಣಿಗರನ್ನು ಭಯ ಬೀಳಿಸಿದವರು ಕೊನೆಗೊಮ್ಮೆ ಜಲಪಾತಕ್ಕೆ ಯಶಸ್ವಿಯಾಗಿ ತಲುಪಿಸಿದರು.

ಅಲ್ಲಿಂದ ಮುಂದೆ ಕೋಳಿಕ್ಯಮಲೆಗೆ ಹೊರಟೆವು. ನಡೆದು ಸುಸ್ತಾದ ಎಲ್ಲರೂ ತುದಿಯನ್ನು ಮುಟ್ಟಲು ಬರಲೇ ಇಲ್ಲ. ಕೊನೆಗೆ ನಾನು ೩ ಜನ ಮಾರ್ಗದರ್ಶಿಗಳೊಡನೆ ಕೋವಿ ಹಿಡಿದು ನಡೆಯಬೇಕಾಯಿತು.

ಮಂಜು ಮುಸಕದಿದ್ದರೆ ಒಂದು ಅತ್ಯತ್ತಮ ತುತ್ತ ತುದಿ ತಲುಪಿದ ಸಂತೋಷ ನನ್ನದಾಗುತ್ತಿತ್ತು. ಮಂಜು ಮುಸುಕಿದರೂ ತುದಿ ತಲುಪಿದ ಸಂತಸ ನನ್ನದು.

ಚಿತ್ರಗಳಿಗಾಗಿ ಇಲ್ಲಿ ಚಿಟುಕಿಸಿ


ಅಥವ ಇಲ್ಲಿ ನೋಡಿ, http://photobucket.com/nidyamale

Sunday, October 30, 2011

ಧಾರೇಶ್ವರ ಸಮುದ್ರತೀರ, ಮೇದಿನಿ, ಬೆಣ್ಣೆಹೊಳೆ, ಮತ್ತಿಘಟ್ಟ, ವಿಭೂತಿ ಮತ್ತು ಬುರುಡೆ ಜಲಪಾತ

http://photobucket.com/uk05091011

೫ ದಿನ ರಜದಿನಗಳಲ್ಲಿ ಸುತ್ತಾಡಿದ ಚಿತ್ರಗಳು ಮೇಲಿನ ಕೊಂಡಿಯಲ್ಲಿವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪ್ರಾರಂಭವಾದ ನಮ್ಮ ಪ್ರವಾಸ ಬುರುಡೆಜೋಗದಲ್ಲಿ ಕೊನೆಗೊಂಡಿತು. ಆತಿಥ್ಯ ನೀಡಿ ಮನೆಯವರಂತೆ ಕಂಡ (ಯಾಣದ ಸಮೀಪ) ಮತ್ತಿಘಟ್ಟದ ಗೋಪಾಲಕೃಷ್ಣ ಕುಟುಂಬದವರ ಸಹಾಯ ಅತ್ಯಂತ ಸ್ಮರಣೀಯ.
ಮುಕ್ತಿಹೊಳೆ ನೋಡಲು ಅಸಾಧ್ಯವಾಗಿದ್ದು ಸ್ವಲ್ಪ ಬೇಜಾರಿನ ವಿಷಯ, ಆದರೂ ಮೇದಿನಿ ದರ್ಶನ ಮಾಡಿಸಿದ ಜನಾರ್ಧನ ಅವರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆ ಆತ್ಮೀಯವಾಗಿ ಕಂಡ ರಾಘವೇಂದ್ರಶರ್ಮರಿಗೆ ಧನ್ಯವಾದಗಳು.
ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Saturday, September 3, 2011

ನಾ ಕಂಡ ಕರ್ನಾಟಕದ ಜಲಪಾತಗಳು

೧. ಹೆಬ್ಬೆ ಜಲಪಾತ (ಕೆಮ್ಮಣ್ಣುಗುಂಡಿ)
೨. ಗಗನಚುಕ್ಕಿ, ಭರಚುಕ್ಕಿ (ಮಂಡ್ಯ)
೩. ಜೋಗ
೪. ಉಂಚಳ್ಳಿ (ಲೂಷಿಂಗ್ಟನ್)
೫. ಸಾತೊಡ್ಡಿ (ಯಲ್ಲಾಪುರ)
೬. ಮಾಗೋಡು (ಯಲ್ಲಾಪುರ)
೭. ಶಿವಗಂಗೆ (ಸಿದ್ದಾಪುರ)
೮. ದೇವ್ಕಾರ್ (ಕದ್ರಾ ದ್ವೀಪ)
೯. ಮಲ್ಲಳ್ಳಿ (ಪುಷ್ಪಗಿರಿ)
೧೦. ಅಬ್ಬೆ (ಮಡಿಕೇರಿ)
೧೧. ಇರ್ಪು (ಶ್ರೀಮಂಗಲ, ಕೊಡಗು)
೧೨. ಚೇಲಾವರ (ವಿರಾಜ ಪೇಟೆ)
೧೩. ಮಾದಂಡಬ್ಬಿ (ಕೊಡಗು)
೧೪. ದೇವರಕೊಲ್ಲಿ (ಸಂಪಾಜೆ)
೧೫. ಕಲ್ಯಾಳ (ಕೊಯ್ನಾಡು)
೧೬. ದೇವರಗುಂಡಿ (ತೋಡಿಕಾನ)
೧೭. ಉರುಂಬಿ (ಸುಬ್ರಹ್ಮಣ್ಯ)
೧೮.ಬಾಳೆಬರೆ (ಹುಲಿಕಲ್ ಘಾಟಿ)
೧೯. ಅರಿಶಿನಗುಂಡಿ (ಕೊಡಚಾದ್ರಿ)
೨೦. ಹಿಡ್ಲುಮನೆ (ಕೊಡಚಾದ್ರಿ)
೨೧. ಗೋವಿಂದ ತೀರ್ಥ (ಜಡಕಲ್ಲು)
೨೨. ದಬ್ಬೆ ಜಲಪಾತ (ಹೊಸಗದ್ದೆ)
೨೩. ಕೋಡ್ಲು ತೀರ್ಥ, ಜೋಮ್ಲು ತೀರ್ಥ (ಹೆಬ್ರಿ)
೨೪. ಒಣಕಬ್ಬೆ (ಆಗುಂಬೆ)
೨೫. ಜೋಗಿಗುಂಡಿ (ಆಗುಂಬೆ)
೨೬. ಬರ್ಕಣ (ಆಗುಂಬೆ)
೨೭. ನಾಪೊಂಡಪೊಳೆ (ಸುರ್ಲಭಿ, ಕೊಡಗು)
೨೮. ದಬ್ಬಡ್ಕ ( ಕಲ್ಲುಗುಂಡಿ)
೨೯. ಕಾಂತಬೈಲು (ಕಲ್ಲುಗುಂಡಿ)
೩೦. ಉಂಬಳೆ
೩೧. ಪಾದೆಕಲ್ಲು (ಕಲ್ಲುಗುಂಡಿ)
೩೨. ಲೈನ್ಕಜೆ (ಕಲ್ಲುಗುಂಡಿ)
೩೩. ಬೊಳ್ಳೆ ( ಬೆಳ್ತಂಗಡಿ)
೩೪. ಆನಡ್ಕ, ಕಡಮೆಗುಂಡಿ (ದಿಡುಪೆ)
೩೫. ಬಂಡಜೆ
೩೭. ಆಲೇಖಾನ್ (ಚಾರ್ಮಾಡಿ)
೩೮. ಮಾಣಿಕ್ಯ ಧಾರ (ಚಂದ್ರದ್ರೋಣ)
೩೯. ಮಗೇಬೈಲು (ಶೃಂಗೇರಿ)
೪೦. ಸಿರಿಮನೆ (ಶೃಂಗೇರಿ)
೪೧. ಹನುಮಾನ್ ಗುಂಡಿ (ಕುದುರೆಮುಖ)
೪೨. ಚನ್ನೆಕಲ್ (ಭೀಮೇಶ್ವರ)
೪೩. ಚಂಡೆಮನೆ ( ಭೀಮೇಶ್ವರ)
೪೪. ತೀರ್ಥಕರೆ (ಬಸ್ರಿಕಟ್ಟೆ)
೪೫. ಕೋಟೆ ಬೆಟ್ಟದ ಜಲಪಾತ (ಕೊಡಗು)
೪೭. ಕಲ್ಲತ್ತಗಿರಿ (ಕೆಮ್ಮಣ್ಣುಗುಂಡಿ)
೪೮. ಶಾಂತಿ (ಕೆಮ್ಮಣ್ಣುಗುಂಡಿ)
೪೯. ಹೊನ್ನಮ್ಮನ ಹಳ್ಳ (ಚಂದ್ರದ್ರೋಣ)
೫೦. ಕಡಾಂಬಿ (ಕುದುರೆಮುಖ)
೫೧. ಕಳಸದ ಬಳಿಯ ಜಲಪಾತ+

ಕರಿಕೆಯ ದಾರಿಯಲ್ಲಿ ಕಂಡ ಜಲಪಾತಗಳು ಸೌಂದರ್ಯದಲ್ಲಿ ಕಡಿಮೆ ಇಲ್ಲ. ಆದರೆ ಅವುಗಳ ಹೆಸರು ನನಗೆ ತಿಳಿದಿಲ್ಲ. ಕೆಲವು ಜಲಪಾತವೆಂದು ಕರೆದುಕೊಳ್ಳುವಂತಿಲ್ಲ, ಆದರೂ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಸಲುವಾಗಿ ಸೇರಿಸಿಕೊಂಡಿದ್ದೇನೆ.

ಆಗಸ್ಟ್ ೧೫ ರ ಪ್ರವಾಸದಲ್ಲಿ ಪತ್ರಕರ್ತೆ ಸಹನಾ ಅವರು ಕೇಳಿದ ಕೆಲವು ಪ್ರಶ್ನೆಗಳು ಈ ಪಟ್ಟಿ ತಯಾರಿಸಲು ಮುಖ್ಯ ಕಾರಣ. ಇದರ ಜೊತೆಗೆ ಕನ್ನಡಪ್ರಭ ಬಳಗದ "ಸಖಿ" ಯಲ್ಲಿ ೬೦ ಜಲಪಾತಗಳ ಪಟ್ಟಿ ಕೂಡ ಪ್ರೇರೇಪಣೆ.

ಬೆಂಗಳೂರಿಗೆ ಬಂದ ಹೊಸದರಲ್ಲಿ ನನ್ನ ಮೊದಲ ಪ್ರವಾಸ ಕಾರ್ಯಕ್ರಮ ಬಲಮುರಿ ಫಾಲ್ಸಿಗೆ. ಅಲ್ಲಿಗೆ ಹೋದಾಗ ನನಗೆ ಅತ್ಯಂತ ಆಶ್ಚರ್ಯ. ಕೆರೆಯ ಕೋಡಿ ಹರಿಯುವುದನ್ನು ಫಾಲ್ಸ್ ಎಂದು ಕರೆಯುವುದಾ ಎಂದು ಆಯೋಜಕರನ್ನು ಕೇಳಿದ್ದೆ.

ನಾ ನೋಡಬೇಕಿರುವ ಕರ್ನಾಟಕದ ಜಲಪಾತಗಳ ಪಟ್ಟಿ ಸಿದ್ದ ಪಡಿಸುತ್ತಿದ್ದೇನೆ. ನಿಮ್ಮಲ್ಲಿರುವ ಮಾಹಿತಿ ನೀಡಿ ಸಹಾಯ ಮಾಡಿ

Tuesday, August 16, 2011

ಪ್ರವಾಸ, ಪತ್ರಕರ್ತರ ಮನೆಯಲ್ಲಿ ವಾಸ ಮತ್ತು ಅನಿರೀಕ್ಷಿತ ಜಲಪಾತಗಳ ಸಹವಾಸ

ಶನಿವಾರದ ಉಪಾಕರ್ಮ ಆಚರಣೆ ಮುಗಿಸಿ ಪ್ರವಾಸಕ್ಕೆ ಹೊರಡುವ ನನ್ನ ಉತ್ಸಾಹಕ್ಕೆ ತಣ್ಣೀರೆರೆಚಿದ್ದು ಅಕ್ಕನ ಮಗ ಜಯಂತ. ನಾನೂ ಬರ್ತಿನಿ ಶನಿವಾರ ಸಂಜೆ ಹೊರಡೋಣವೆಂದು ವರಾತ ಹಚ್ಚಿದವನ್ನು ಮನದಲ್ಲೆ ಹಳಿಯುತ್ತ ಜಾಗಗಳನ್ನು ಹುಡುಕಲು ಪ್ರಯತ್ನಿಸಿದೆ.

ಉಹೂಂ ಯಾವ ಜಾಗಗಳು ಸರಿ ಹೊಂದಲಿಲ್ಲ. ನನ್ನ ಚಾರಣದ ಗುರುಗಳಾದ ರಾಜೇಶ್ ಕೂಡ ಸೂಚಿಸಿದ ಜಾಗಗಳು ಮಳೆಗಾಲದಲ್ಲಿ ಭೇಟಿಕೊಡಲು ಪ್ರಶಸ್ತ ತಾಣಗಳಲ್ಲವೆಂದು ಅವರೇ ತಿಳಿಸಿದಾಗ ನನಗೆ ಈ ಪ್ರವಾಸದ ಕತೆ ಅಷ್ಟೆ ಅನಿಸಿತ್ತು.

ಶರಾವತಿ ಟ್ರೆಕ್ಸ್ ನ ಸಂಪತ್ ನೀವು ಭಾನುವಾರ ಬೆಳಿಗ್ಗೆಯೆ ಇಲ್ಲಿ ತಲುಪಿದರೆ ಚಾರಣಕ್ಕೆ ಕರೆದೊಯ್ಯುವುದಾಗಿ ತಿಳಿಸಿದರು. ಆದರೆ ರಾತ್ರಿಯಲ್ಲಿ ವಾಹನ ಚಾಲನೆ ನನಗಾಗದ ವಿಷಯ ಅಪಾಯ ಕೂಡ. ವಿಧಿಯಿಲ್ಲದೆ ಕಳೆದ ಪ್ರವಾಸದಲ್ಲಿ ನೋಡಲಾಗದೆ ಬಿಟ್ಟಿದ್ದ ಒಂದು ಜಲಪಾತಕ್ಕೆ ಹೋಗಿ ಹಿಂತಿರುಗಲು ಯೋಚಿಸಿ ಬೆಳಿಗ್ಗೆ ಬೇಗನೆ ಸಿದ್ದವಾಗಲು ಸೂಚಿಸಿದೆ.

ಭಾನುವಾರ ಬೆಳಿಗ್ಗೆ ೫.೩೦ಕ್ಕೆ ಬೆಂಗಳೂರಿನಿಂದ ಹೊರಟು ನೋಡದೇ ಬಿಟ್ಟಿದ್ದ ಜಲಪಾತದ ಸಮೀಪದ ಊರಿನಲ್ಲಿರುವ ಏಕೈಕ ಸಸ್ಯಾಹಾರಿ ಹೋಟೆಲ್ಲಿನಲ್ಲಿ ಊಟಕ್ಕೆ ಕುಳಿತದ್ದು ನನ್ನ ಇಡೀ ಪ್ರವಾಸಕ್ಕೆ ಹೊಸ ತಿರುವು ಕೊಟ್ಟಿತು.



ನನ್ನ ಈ ಬಾರಿಯ ಪ್ರವಾಸಕ್ಕೆ ಅಚ್ಚರಿಯ ತಿರುವು ಕೊಟ್ಟ ಹೋಟೆಲ್ ಇದು. ಇದರ ಮಾಲಿಕ ಮನೋಹರ್ ಕೊಟ್ಟ ಮಾಹಿತಿ, ಒಂದೇ ಒಂದು ಜಲಪಾತ ನೋಡಲು ಬಂದ ನಮಗೆ ಮತ್ತೆ ೪ ಜಲಪಾತಗಳ ಅದರಲ್ಲೂ ಜನರಿಗೆ ಅತ್ಯಂತ ಕಡಿಮೆ ಪರಿಚಯವಿರುವ ಜಲಪಾತಗಳ ದರ್ಶನಕ್ಕೆ ಕಾರಣವಾಯ್ತು. ಅಂತರ್ಜಾಲದಲ್ಲೂ ಕೂಡ ಈ ಜಲಪಾತಗಳ ಬಗ್ಗೆ ಮಾಹಿತಿಯಿಲ್ಲ ಒಂದು ಜಲಪಾತದ ಬಗ್ಗೆ ಮಾತ್ರ ಒಂದೇ ಒಂದು ಮಾಹಿತಿಯಿದೆ. ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ಉದಯವಾಣಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದರೂ ಜನ ಸಂಪರ್ಕದಿಂದ ದೂರವೇ ಇರುವ ಜಲಪಾತಗಳ ದರ್ಶನ ತಂದ ಸಂತೋಷ ಅವರ್ಣನೀಯ. ಉಳಿಯಲು ಜಾಗ ಕೊಟ್ಟು ತಿಂಡಿ ಊಟ ಕೊಟ್ಟು ಸಲಹಿದ ಮಹೇಶ್ವರ ಭಟ್ಟರಿಗೂ ಅವರ ಪತ್ನಿ ಸಹನಾ ಅವರಿಗೂ ಧನ್ಯವಾದಗಳು. ಅವರ ಸಹಾಯ ಸ್ಮರಣೀಯ. ಪ್ರವಾಸ ಹೊರಟಾಗ ಸುಂದರ ಪ್ರವಾಸ ಇದಾಗುತ್ತದೆ ಎಂಬ ನಂಬಿಕೆಯಿರಲಿಲ್ಲ. ಮನೋಹರ ಆದರೆ ಅನಿರೀಕ್ಷಿತವಾಗಿ ಸಿಕ್ಕ ಈ ಜಲಪಾತಗಳ ಮಾಹಿತಿ, ಇಡೀ ಪ್ರವಾಸ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.



ಇದು ಜೀಪಿನಲ್ಲಿ ನಮ್ಮನ್ನು ಕರೆದೊಯ್ದ ಮೋಹನನ ಮನೆಯ ಬಳಿಯಿರುವ ಪುಟ್ಟ ಆದರೆ ಮನಮೋಹಕ ಜಲಪಾತ.
ಇಲ್ಲಿನ ಪ್ರತಿ ಮನೆಯಲ್ಲೂ ತಾವೆ ತಯಾರಿಸಿದ ವಿದ್ಯುತ್ ಬಳಸುವುದು ವಿಶೇಷ




ಕಣ್ಮನ ಸೋಲುವಷ್ಟು ಹಸಿರು, ನದಿ ಕಾಡು ಜಲಪಾತ ಈ ಪ್ರವಾಸದ ವಿಶೇಷ




ದಾರಿಯುದ್ದಕ್ಕೂ ಈ ನದಿ ಕಲ್ಲು ಬಂಡೆಗಳ ಮಧ್ಯೆ ಹರಿಯುತ್ತ ಇಂತಹ ಮನೋಹರ ದೃಶ್ಯಗಳ ಸರಣಿಯನ್ನೆ ಸೃಷ್ಟಿಸಿದೆ.




ದೂರದಿಂದ ಜಲಪಾತದ ಮೊದಲ ನೋಟ




ನಮ್ಮ ಆತಿಥೇಯರ ತೋಟದಲ್ಲಿರುವ ಸುಂದರ ಬೆಡಗಿ, ಚಿಕ್ಕದಾದರೂ ಸುಂದರ ಜಲಪಾತ.
ದಾರಿಯುದ್ದಕ್ಕೂ ಆನೆಲದ್ದಿಯ ದರ್ಶನ ವಿಶೇಷ. ಜಯಂತನಂತೂ ಓಡಲು ಸಿದ್ದವಾಗಿಯೇ ನಡೆಯುತ್ತಿದ್ದ.



ಜಲಪಾತದೆಡೆಗೆ ನಡೆಯುವಾಗ ಎದುರಾದ ಇಂತಹ ಹಲವಾರು ಸ್ಥಳಗಳು ಎದುರಾದವು




ನಮ್ಮ ಈ ಪ್ರವಾಸದಲ್ಲಿ ಸಿಕ್ಕ ಅತ್ಯಂತ ಸುಂದರ ಜಲಪಾತವಿದು. ಪ್ರವಾಸ ಹೊರಟು ಈ ಸ್ಥಳದ ಸಮೀಪವಿರುವ ಪ್ರಮುಖ ಊರಿಗೆ ಬಂದಾಗಲೂ ಇಂತದ್ದೊಂದು ಜಲಪಾತವಿದೆಯೆಂದು ನನಗೆ ತಿಳಿದಿರಲಿಲ್ಲ. ಗೂಗಲ್ ನಲ್ಲೂ ಕೂಡ ಕನ್ನಡ ಲಿಪಿಯೊಂದಿಗೆ ಹುಡುಕಿದಾಗ ಈ ಜಲಪಾತದ ಒಂದೇ ಒಂದು ಕೊಂಡಿ ಸಿಗುತ್ತದೆ. ಅದೂ ಕೂಡ ನಮ್ಮ ಆತಿಥೇಯರೇ ಬರೆದ ಲಖನ



ನಮ್ಮ ಪ್ರವಾಸಕ್ಕೆ ನೆರವಾದ ಮಹೇಶ್ವರ ಭಟ್ಟರೊಂದಿಗೆ



ಭಟ್ಟರ ಮನೆಯಲ್ಲಿ ಕೊಕೊ ಹಣ್ಣುಗಳ ರಾಶಿ




ಮಹೇಶ್ವರ ಭಟ್ಟರೊಂದಿಗೆ ಹೊಳೆದಾಟಲು ಕಾಲುಸಂಕದ ಮೇಲೆ





ಅನಿರೀಕ್ಷಿತವಾಗಿ ಸಿಕ್ಕ ಜಲಪಾತದಲ್ಲಿ ಅಮಿತ್, ಚಿತ್ರ ಮತ್ತು ಜಯಂತ್. ಈ ಜಲಪಾತದ ಬಗ್ಗೆ ಹೋಟೆಲ್ಲಿನ ಮನೋಹರ ಕೂಡ ಹೇಳಿರಲಿಲ್ಲ. ಸಹನಾ ಅವರ ಉದಯವಾಣಿಯಲ್ಲಿನ ಬರಹ ನನ್ನು ಸೆಳೆಯಿತು. ಹೌದಲ್ಲ ಇದನ್ನೂ ನೋಡಿ. ಈಗ ತುಂಬಾ ನೀರುಂಟು ಎಂದಿದ್ದು ಮಹೇಶ್ವರ ಭಟ್ಟರು. ಅವರ ಮನೆಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಜಲಪಾತವಿದು.




ಜಲಪಾತದೆಡೆಗೆ ಪುಟ್ಟ ಚಾರಣ




ಇದು ಈ ಜಲಪಾತದ ೨ನೇ ಹಂತವಂತೆ. ಈ ಜಲಪಾತಕ್ಕೆ ಬರುವವರನ್ನು ಅಲ್ಲಿರುವ ಪ್ರಭಾಕರಭಟ್ಟರ ಮನೆಯವರು ಪ್ರೋತ್ಸಾಹಿಸುವುದಿಲ್ಲ. ಅದಕ್ಕೆ ಅವರು ಕೊಡುವ ಕಾರಣ ಸಕಾರಣವೇ. ನಮಗೂ ಅವರು ಪೂರ್ವಾನುಮತಿಯಿತ್ತದ್ದು ಪ್ರಕಾಶ್ ಹೋಟೆಲ್ನ ಮನೋಹರನ ಮತ್ತು ಪತ್ರಕರ್ತೆ ಸಹನಾ ಅವರ ವಿನಂತಿಯ ಮೇರೆಗೆ.




ನೀರಿನಲ್ಲಿ ಮೋಜು




೧೫ ದಿನದ ಹಿಂದೆಯಷ್ಟೆ ಇಲ್ಲಿಗೆ ಭೇಟಿಯಿತ್ತಿದ್ದೆವು. ಇದರ ಪೂರ್ಣ ದೃಶ್ಯದ ದರ್ಶನವಾಗುವುದು ರಾಜ್ಯ ಹೆದ್ದಾರಿಯಲ್ಲಿಯೆ.