Monday, June 9, 2008

ಆಗುಂಬೆ ಸುತ್ತ

ಬೇಸರ ಹುಟ್ಟಿಸುವ ಬೆಂಗಳೂರಿನ ಏಕತಾನತೆಯಿಂದ ದೂರ ಓಡಬೇಕೆನ್ನಿಸಿದರೂ, ರಜಾ ದಿನಗಳಲ್ಲಷ್ಟೆ ಅದು ಸಾಧ್ಯವಾಗುವುದೆಂಬ ಕಟುಸತ್ಯದ ಅರಿವು ನನಗಿದೆ. ಆದ್ದರಿಂದಲೆ ವಾರದ ರಜಾದಿನಗಳಿಗೆ ಬೇರೆ ಯಾವುದಾದರೂ ರಜೆ ಜೋಡಣೆಯಾಗುವುದನ್ನೆ ಕಾಯುತ್ತಿರುತ್ತೇನೆ. ನನ್ನ ಕೆಲವು ಸಹೋದ್ಯೋಗಿಗಳನ್ನು ಆಹ್ವಾನಿಸುವ ಮನಸ್ಸಾದರೂ ಅವರು ಬರುವುದಿಲ್ಲವೆಂದು ನನಗೆ ಗೊತ್ತು ಏಕೆಂದರೆ ಬಿ ಇ ಎಲ್ ಉದ್ಯೋಗಿಗಳಿಗೆ ಪ್ರವಾಸವೆಂದರೆ ಪ್ರಸವದಷ್ಟೆ ಸಂಕಟ. ಹಣ ಪೋಲು ಎನ್ನುವವರು ಕೆಲವರಾದರೆ, ವಯಕ್ತಿಕ ಕಾರಣ ಕೆಲವರಿಗೆ. ಮತ್ತೆ ಕೆಲವರಿಗೆ ಒಂದು ದಿನದ ಪ್ರವಾಸವಾದರೆ ಓ ಕೆ ಎಂಬ ಸಬೂಬು. ನಿಮಗೆ ಆಶ್ಚರ್ಯ ಆಗಬಹುದು ನಮ್ಮ ಕಾರ್ಖಾನೆಯ ಕೆಲವರಿಗೆ ಬಿ ಇ ಎಲ್ ಮತ್ತು ಅವರ ಮನೆ ಬಿಟ್ಟು ಬೇರೆ ಜಾಗ ಗೊತ್ತೇ ಇಲ್ಲ ಅನ್ನುವುದು ವ್ಯಂಗ್ಯವಲ್ಲ ಕಟು ಸತ್ಯ.
ಇದೆಲ್ಲದರ ಅರಿವಿದ್ದುದರಿಂದಲೆ ಯಾರನ್ನು ಆಹ್ವಾನಿಸುವ ಗೋಜಿಗೆ ಹೋಗಲಿಲ್ಲ. ೨೦೦೬ರ ಕ್ರೈಸ್ತ ವರ್ಷದ ಕೊನೆಯ ದಿನಗಳಲ್ಲಿ ಅಂದರೆ ಡಿಸೆಂಬರ್ ೩೦, ೩೧ ಮತ್ತು ಜನವರಿ ೧ ರಂದು ಸಂಸಾರ ಸಮೇತ ಪ್ರವಾಸ ಹೋಗುವುದೆಂದು ನಿಶ್ಚಯಿಸಿದೆ. ಪ್ರವಾಸದ ಸ್ಠಳ ಮಾತ್ರ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಹಸಿರು ತುಂಬಿದ ಪ್ರಕೃತಿ ತಾಣಗಳಷ್ಟೆ ನನ್ನ ಪ್ರವಾಸದ ಗುರಿ. ನನ್ನ ಮುಂದಿದ್ದ ಆಯ್ಕೆಗಳು ಜೋಗದ ಜಲಪಾತ, ಚಿಕ್ಕಮಗಳೂರಿನ ಸುತ್ತಮುತ್ತ, ಧರ್ಮಸ್ಥಳ ಸುಬ್ರಮಣ್ಯ ಕೊಡಗು ಶೃಂಗೇರಿ, ಹೊರನಾಡು, ಕುದುರೆಮುಖ ಮತ್ತು ಬಿಳಿಗಿರಿರಂಗನ ಬೆಟ್ಟ. ಉತ್ತರ ಕರ್ನಾಟಕ ಜಿಲ್ಲೆ ಹೆಚ್ಚು ದೂರ ೩ ದಿನಗಳು ಸಾಕಾಗುವುದಿಲ್ಲ. ಧರ್ಮಸ್ಥಳ, ಸುಬ್ರಮಣ್ಯ ಮತ್ತು ಬಿಸ್ಲೆಘಟ್ಟ ಪ್ರವಾಸವನ್ನು ಅಕ್ಟೋಬರ್ ತಿಂಗಳಿನಲ್ಲಿ ಮುಗಿಸಿದ್ದರಿಂದ ಯಾವುದೆ ನಿರ್ಧಾರ ತೆಗೆದುಕೊಳ್ಳದೆ ೩೦ರ ಬೆಳಗ್ಗೆ ೯.೦೦ ಗಂಟೆಗೆ ಕಾರು ಹೊರಟಾಗ ಎಲ್ಲಿ ಹೋಗುತ್ತಿದ್ದೇನೆಂದು ಗೊತ್ತಿರಲಿಲ್ಲ.
ನಾನು ನನ್ನ ಪತ್ನಿ, ಪುತ್ರ ನನ್ನ ಅಕ್ಕ ಭಾವ ಪ್ರಯಾಣಕ್ಕೆ ಹೊರಟವರು ಕೊನೆ ಕ್ಷಣದಲ್ಲಿ ಅಕ್ಕ ಬರಲಾಗಲಿಲ್ಲ ಉಳಿದವರು ಪ್ರಯಾಣ ಬೆಳೆಸಿದೆವು. ನೆಲಮಂಗಲ ಹತ್ತಿರವಾಗುತ್ತಿದ್ದಂತೆ ಎಲ್ಲಿಗೆ ಹೋಗುವುದು ಎಂಬುದನ್ನು ನಿರ್ಧರಿಸಬೇಕಿತ್ತು. ನೆಲಮಂಗಲಕ್ಕೆ ಹೋಗುವ ರಾಷ್ತ್ರೀಯ ಹೆದ್ದಾರಿಯಲ್ಲಿನ ವಾಹನದಟ್ಟಣೆಯ ಪರಿಣಾಮ ಯೋಚನೆ ಮಾಡುವುದಕ್ಕೆ ಸಹ ಆಗುವುದಿಲ್ಲ. ಮನಸ್ಸಿನಲ್ಲಿದ್ದದ್ದು ಕೊಲ್ಲೂರು , ಕೊಡಚಾದ್ರಿ ಅಥವ ದಿನಪತ್ರಿಕೆಯೊಂದರಲ್ಲಿ ಬಂದ ವರದಿಯ ಕುಂದಾದ್ರಿ. ಸಹೋದ್ಯೋಗಿ ಮತ್ತು ಸ್ನೇಹಿತ ಶೃಂಗೇರಿಯವರಾದ ವಸಂತರ ಬಳಿ ಶೃಂಗೇರಿಯಲ್ಲಿ ವಸತಿ ಸೌಕರ್ಯ ಸಿಗುತ್ತದೆಯೆಂದು ಖಾತರಿಪಡಿಸಿಕೊಂಡೆ. ಈಗ ನಮ್ಮ ಪ್ರಯಾಣ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ, ಗುರಿಯಿಟ್ಟ ಬಾಣದಂತೆ ಹಾಸನದ ಕಡೆಗೆ. speeಓಡೊ ಮೀಟರ್ ೧೦೦ ರ ಗಡಿ ದಾಟುತ್ತಿದ್ದರೂ ಪ್ರಯಾಣವೇ ಸಾಗುತ್ತಿಲ್ಲವೆನಿಸುತ್ತಿತ್ತು. ಸೋಲೂರು ಮತ್ತು ಕುಣಿಗಲ್ ಮದ್ಯೆ ಇರುವ ಕರಡಿಗುಚ್ಚಮ್ಮನ ದೇವಸ್ಠಾನದ ಆವರಣದಲ್ಲಿರುವ ತ್ರಿಮುಖ ಗಣಪನಿಗೊಂದು ಸಲ್ಯುಟ್ ಹೊಡೆದು (ಇದು ನನ್ನ ಪ್ರತಿ ಪಯಣದ ಅಭ್ಯಾಸ) ಕುಣಿಗಲ್, ಎಡೆಯೂರು, ಬೆಳ್ಳೂರು, ಹಿರಿಸಾವೆ ಚೆನ್ನರಾಯಪಟ್ಟಣದ ಮಾರ್ಗವಾಗಿ ಹಾಸನ ತಲುಪಿದಾಗ ಸಮಯ ೧೨.೧೫. ಹಾಸನದಿಂದ ಬೇಲೂರು ಮಾರ್ಗವಾಗಿ (ಈ ರಸ್ತೆಯನ್ನು ಈಗ ತುಂಬ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ) ಚಿಕ್ಕಮಗಳೂರು ತಲುಪಿದಾಗ ಗಡಿಯಾರ ೧.೦೦ ಗಂಟೆ ತೋರಿಸುತ್ತಿತ್ತು. ಪುಷ್ಕಳವಾಗಿ ಊಟ ಮುಗಿಸಿ ಹೊರಟರೆ ಪ್ರಯಾಣದ ಕಡಲೊಳು ಮೊಬೈಲ್ ರಿಂಗಣ. ಹೊರಡುವ ಮೊದಲೇ ಕಛೇರಿಯಿಂದಾದ ಒಪ್ಪಂದ. ಕಛೇರಿಯಲ್ಲಿನ ಕೆಲಸಕ್ಕೆ ತೊಂದರೆಗಳು ಕಾಣಿಸಿಕೊಂಡರೆ ದೂರವಾಣಿ ಮುಖೇನ ಸಂಪರ್ಕಿಸುವುದಾಗಿ ನಮ್ಮ ಹಿರಿಯ ವ್ಯವಸ್ಥಾಪಕರಿಂದ ಒಡಂಬಡಿಕೆ {ಬಡಬಡಿಕೆ;-) }. ಅದರಂತೆ ಅವರ ಎಲ್ಲ ಪ್ರಶ್ನೆಗಳಿಗೆ ನನ್ನಿಂದಾದ ಸಹಾಯ ಮಾಡುತ್ತ ಕೆಟ್ಟು ಹೋದ ಶೃಂಗೇರಿ ರಸ್ತೆಯಲ್ಲಿ ತೂಕಡಿಸುತ್ತ ಮದ್ಯೆ ಮದ್ಯೆ ಕಛೇರಿಯಿಂದ ಬರುವ ದೂರವಾಣಿ ಕರೆಗಳನ್ನು ಉತ್ತರಿಸುತ್ತ (ಕತ್ತರಿಸುತ್ತ) ಶೃಂಗೇರಿ ತಲುಪಿದಾಗ ದೇಹ ನಿದ್ದೆ ಬಯಸುತ್ತಿತ್ತು.
ವಸತಿ ಸಿಗುವುದಿಲ್ಲವೆನ್ನಿಸುವಂತಹ ಜನದಟ್ಟಣೆಯಲ್ಲೂ ಅರ್ಧ ಗಂಟೆಯ ನೀರೀಕ್ಷೆಯ ನಂತರ ಅದೃಷ್ಟವಶಾತ್ ಕೊಠಡಿ ಸಿಕ್ಕೇಬಿಟ್ಟಿತು. ತಣ್ಣನೆಯ ನೀರಿನ ಸ್ನಾನದಿಂದ ಪ್ರಯಾಣ ಮತ್ತು ಬಿಸಿಲಿನಿಂದಾದ ಆಯಾಸ ಮಾಯವಾಗಿತ್ತು. ವೀಣಾಪಾಣಿಯ ದರ್ಶನ ಮಾಡಿ ಭರ್ಜರಿ ಭೋಜನ ಮುಗಿಸಿ, ನಮ್ಮ ಕೊಠಡಿಯ ಹೊರಗೆ ಇರುವ ಆವರಣದಲ್ಲಿ ಬೀಡು ಬಿಟ್ಟ ಶಾಲಾ ಮಕ್ಕಳ ಗದ್ದಲದ ನಡುವೆಯು ಒಳ್ಳೆಯ ನಿದ್ದೆಗೆ ಶರಣು. ಮಾರನೆದಿನ ಬೆಳಗಿನ ಉಪಹಾರದ ನಂತರ ಆಗುಂಬೆಯತ್ತ ಪಯಣ. ದಿವಂಗತ ಶಂಕರ್ ನಾಗ್ ತಮ್ಮ ಮಾಲ್ಗುಡಿ ಡೇಸ್ ಚಿತ್ರೀಕರಿಸಿದ್ದ ಸುಂದರವಾದ ಪುಟ್ಟ ಊರು. ಇಲ್ಲಿಂದ ಉತ್ತಮವಾದ ರಸ್ತೆ ಶೃಂಗೇರಿಯನ್ನು ತೀರ್ಥಹಳ್ಳಿಗೆ ಮತ್ತು ಸೋಮೇಶ್ವರಕ್ಕೆ ಜೋಡಿಸುತ್ತದೆ. ಇಲ್ಲಿ ನೋಡಲೇಬೇಕಾದ ಸ್ಥಳಗಳ ಬಗ್ಗೆ ರಾಜೇಶ್ ನಾಯಕ್ ರಿಂದ ಮಾಹಿತಿ. ಬರ್ಕಣ, ಜೋಗಿಗುಂಡಿ, ಒಣಕಬ್ಬೆ ಜಲಪಾತ, ಆಗುಂಬೆಯ ಸೂರ್ಯಾಸ್ತಮಾನ ಕುಂದಾದ್ರಿ ಮತ್ತು ಹೆಬ್ರಿ ಇಲ್ಲಿ ನೋಡಲೇಬೇಕಾದ ಸ್ಥಳಗಳು. ಹತ್ತಿರದಲ್ಲೆ ಇದ್ದ ಆರಕ್ಷಕ ಠಾಣೆಯಲ್ಲಿ ನಮ್ಮ ವಿಳಾಸ ಬರೆದು (ನಕ್ಸಲೈಟ್ ಗಳ ಹಾವಳಿಯಿಂದ ಇದು ಕಡ್ಡಾಯ) ಬರ್ಕಣದ ಕಡೆ ಅಲ್ಲೆ ಇದ್ದ ಕೆಲ ಚಿಕ್ಕ ಹುಡುಗರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಹೊರಟೆವು.
ಆಗುಂಬೆಯಿಂದ ಬರ್ಕಣ ಸುಮಾರು ೪ ಕಿ.ಮೀ ದೂರ ಇದೆ. ೧ ಕಿ.ಮೀ ನಂತರ ವಾಹನ ಕ್ರಮಿಸಲು ಯೋಗ್ಯವಲ್ಲದ ದಾರಿಯಲ್ಲಿ ವಾಹನ ಅಲ್ಲೆ ಬಿಟ್ಟು ಬರ್ಕಣಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿದೆವು. ದಟ್ಟ ಕಾನನದ ಮಧ್ಯೆ ಸ್ಪಷ್ಟವಾಗಿರುವ ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಬರ್ಕಣಕ್ಕೆ ತಲುಪಿದೆವು. ಇಲ್ಲಿ ನನಗೆ ನಿರಾಶೆ ಕಾದಿತ್ತು. ನಾನು ನೀರೀಕ್ಷಿಸಿದ್ದು ಜಲಪಾತವನ್ನು, ಜಲಪಾತವೇನೊ ಇದೆ, ಆದರೆ ಅದು ಅಲ್ಲಿಂದ ತುಂಬಾ ದೂರದಲ್ಲಿ ಸಣ್ಣದಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರ ಹೋಗಲು ೧ ದಿನದ ನಡಿಗೆ ಎಂದು ತಿಳಿದು ಅಲ್ಲೆ ಕಾಣುವ ಕಣಿವೆಯ ದೃಶ್ಯವನ್ನು ಬೆಳಕಿನ ಬೋನಿನಲ್ಲಿ ಸೆರೆ ಹಿಡಿದು ಹಿಂತಿರುಗಿ ಬರುವ ದಾರಿಯಲ್ಲಿ ಮತ್ತೊಮ್ಮೆ ವಾಹನವನ್ನು ರಸ್ತೆಬದಿಗೆ ನಿಲ್ಲಿಸಿ ಜೋಗಿ ಗುಂಡಿಯನ್ನು ತಲುಪಿದೆವು. ಜೋಗಿಗುಂಡಿಗೆ ತಲುಪುವ ಹಾದಿಯಲ್ಲು ಅಮೂಲ್ಯ ಗಿಡಮೂಲಿಕೆಗಳು ಲಭ್ಯವಿದೆಯೆಂದು ನಮ್ಮ ಮಾರ್ಗದರ್ಶಕನ ಮಾಹಿತಿ. ಇಲ್ಲೂ ಸಹ ಮತ್ತೊಮ್ಮೆ ನನಗೆ ನಿರಾಸೆಯೆ. ಸಣ್ಣದೊಂದು ಝರಿ ಹರಿದು ಚಿಕ್ಕದಾದ ಬಂಡೆಯ ಪಕ್ಕದಲ್ಲಿ ಧುಮುಕಿ ಒಂದು ಹಳ್ಳವನ್ನು ಸೃಷ್ಟಿಸಿದೆ. ಅದೇ ಜೋಗಿಗುಂಡಿ!! ಮಳೆಗಾಲದಲ್ಲಿ ತುಂಬಿ ಹರಿಯುವ ಜಲಧಾರೆ ಕಣ್ಣಿಗೆ ಹಬ್ಬ ಎಂದು ನಮ್ಮ ಮಾರ್ಗದರ್ಶಕನ ಅಂಬೋಣ. ಅದು ಎಷ್ಟು ನಿಜವೋ ಅವನಿಗೆ ಮಾತ್ರ ಗೊತ್ತು. ಜನ ವಸತಿ ಪ್ರದೇಶದಿಂದ ಸ್ವಲ್ಪವೇ ದೂರದಲ್ಲಿ ಅಲ್ಪ ಸ್ವಲ್ಪ ಕಾಡು ಇಲ್ಲಿ ಉಳಿದಿರುವುದೆ ಸಮಾಧಾನಕರ ವಿಷಯ.
ಜೋಗಿಗುಂಡಿಯಿಂದ ನಮ್ಮ ಪ್ರಯಾಣ ಒಣಕಬ್ಬೆಯ ಕಡೆಗೆ ಆಗುಂಬೆಯಿಂದ ಸೋಮೇಶ್ವರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಬಲಭಾಗಕ್ಕೆ ಸಿಗುವ ಅರಣ್ಯ ಇಲಾಖೆಯ ಪ್ರವಾಸಿ ಗೃಹದ ಹತ್ತಿರದಲ್ಲಿರುವ ದಾರಿಗೆ ಅಡ್ಡಲಾಗಿರುವ ತುಕ್ಕು ಹಿಡಿದ ಕಬ್ಬಿಣದ ಬಾಗಿಲಿನ ಮೂಲಕ ನಮ್ಮ ನಡಿಗೆ ಆರಂಭ. ಸುಮಾರು ೨ ಕಿಮೀ ನಡೆಯ ನಂತರವೇ ನಾವು ಸಂಪೂರ್ಣ ದಟ್ಟ ಕಾಡಿನೊಳಗೆ ಹೆಜ್ಜೆ ಹಾಕುತ್ತಿರುವ ಅನುಭವವಾಗಿದ್ದು. ಇಲ್ಲಿ ನಕ್ಸಲೈಟರ ಹಾವಳಿ ಹೆಚ್ಚು ಎಂದು ನಂತರ ಸ್ಥಳೀಯರಿಂದ ತಿಳಿದು ಬಂತು. ಸ್ವಲ್ಪ ದೂರದಲ್ಲಿ ಮರವೊಂದು ದಾರಿಗೆ ಅಡ್ಡಲಾಗಿ ಬಿದ್ದು ಮುಂದಿನ ರಸ್ತೆ ಮುಚ್ಚಿ ಹೋದಂತೆ ಭಾಸವಾಗುತ್ತಿತ್ತು. ಕಾಡಿನಲ್ಲಿ ಬೆಳೆಯುವ ಮರಗಳ ಬೃಹಧಾಕಾರದ ಬಗ್ಗೆ ಬಿದ್ದಿದ್ದ ಮರ ಒಂದು ಸಣ್ಣ ಪರಿಚಯದಂತೆ ಇತ್ತು. ಮರದ ಬೇರುಗಳು ಸಂಪೂರ್ಣವಾಗಿ ಹೊರಬಂದು ಸುಮಾರು ೩೦ ಅಡಿಗಳಷ್ತು ಅಗಲವಾದ ೧೦ ಅಡಿ ಆಳವಾದ ಹಳ್ಳ ತೋಡಿದಂತಿತ್ತು. ಅಡ್ಡಲಾಗಿ ಬಿದ್ದಿದ್ದ ಮರವನ್ನು ದಾಟಿ ಹೋಗುವುದು ಕಷ್ಟವೆನಿಸತೊಡಗಿತು. ಬಳಸಿಕೊಂಡು ಕೊಂಡು ಹೋಗಲು ಮರ ತುಂಬ ದೊಡ್ಡದಿತ್ತು. ಮರದ ಮುಂಭಾಗದಿಂದ ದಾಟಲು ಕಾಡಿನೊಳಗೆ ೧೦೦ ಅಡಿಗಳಷ್ಟು ದೂರ ಬಳಸಿ ಮತ್ತೆ ದಾರಿಗೆ ಬರುವಷ್ಟರಲ್ಲಿ ಮೈ ಕೈ ತರಚಿ ಬಟ್ಟೆಗಳು ಅಲ್ಲಲ್ಲಿ ಹರಿದು ಹೋಗಿದ್ದವು. ಇದೆ ತೆರನಾದ ಅಡ್ಡ ಬಿದ್ದ ೪ ಮರಗಳನ್ನು ದಾಟಿ ೧ ಕಿ.ಮೀ ನಡಿಗೆಯ ನಂತರ ಜಲಪಾತದಲ್ಲಿ ನೀರು ಧುಮುಕುವ ಶಬ್ದ. ಇಲ್ಲಿಂದ ಮುಂದೆ ಕಲ್ಲು ಮತ್ತು ಸಿಮೆಂಟ್ ಬಳಸಿ ಮೆಟ್ಟಿಲುಗಳನ್ನು ಕಟ್ಟಲಾಗಿದ್ದರೂ ಮರಗಳ ಎಲೆಗಳು ಎಲ್ಲವನ್ನು ಮುಚ್ಚಿಬಿಟ್ಟಿದ್ದವು. ಮೆಟ್ಟಿಲುಗಳನ್ನಿಳಿದ ತಕ್ಷಣವೆ ಒಂದು ಚಿಕ್ಕ ನೀರಿನ ಹಳ್ಳ ಎದುರಾಯಿತು. ಜಲಪಾತವಿರುವ ಸುಳಿವಿಲ್ಲ ಮುಂದೆ ಹೋಗಲು ದಾರಿಯಿಲ್ಲ ನೀರು ಬೀಳುವ ಶಬ್ದ ಮಾತ್ರ ಅತ್ಯಂತ ಸಮೀಪದಲ್ಲಿ ಕೇಳಿಸುತ್ತಿದೆ. ಸಲ್ಪ ಸಮಯ ನಿಂತು ಅವಲೋಕಿಸಿದಾಗ ಕಾಣಿಸಿದ್ದು ಜಲಪಾತ. ಹೌದು!!! ನಾವು ಜಲಪಾತದ ಮೇಲ್ಭಾಗಕ್ಕೆ ಬಂದು ನಿಂತಿದ್ದೆವು. ಇಲ್ಲಿಂದ ಕೆಳಗೆ ನೋಡಿದರೆ ನೀರು ಧುಮುಕುವ ದೃಶ್ಯ ರುದ್ರ ರಮಣೀಯ ಆದರೆ ಎದೆ ನಡುಗಿಸುವುದು ಶತಃಸಿದ್ದ. ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಜಲಪಾತವನ್ನು ಬಗ್ಗಿ ನೋಡುವ ದುಃಸಾಹಸಕ್ಕೆ ಎಲ್ಲರಿಂದ ವಿರೋಧ ವ್ಯಕ್ತವಾದರೂ ಬಿಡದೆ ಬೆಳಕಿನ ಬೋನಿನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಹೆಚ್ಚು ಸಮಯ ಕಳೆಯದಎ ಹೊರಟು ಬಂದೆವು.
ಆಗುಂಬೆಗೆ ಹಿಂತಿರುಗಿ ಅಲ್ಲೆ ಇದ್ದ ಸಣ್ಣ ಉಪಹಾರ ಗೃಹದಲ್ಲಿ ಊಟ ಮುಗಿಸಿ ಕುಂದಾದ್ರಿಗೆ ಹೋಗುವ ದಾರಿ ತಪ್ಪಿ ಆಗುಂಬೆ ಘಟ್ಟ ಇಳಿದು ಸೋಮೇಶ್ವರ ತಲುಪಿದ್ದೆ. ಸೋಮೆಶ್ವರಕ್ಕೆ ಹೋಗಬೇಕಾದರೆ ಕಡಿದಾದ ಘಟ್ಟವನ್ನು ಇಳಿಯಬೇಕಾಗುತ್ತದೆ, ಎಂತಹ ಚಾಲಕನಿಗೂ ಅರೆ ಕ್ಷಣ ಎಚ್ಚರ ತಪ್ಪಿದರೆ ಅಪಘಾತ ಶತಃಸಿದ್ದ. ಮತ್ತೆ ಘಟ್ಟವನ್ನು ಹತ್ತುವಾಗ ಕೆಟ್ಟು ನಿಂತಿದ್ದ ಟೆಂಪೋ ಟ್ರಾಕ್ಸ್ ಮೇಲಿದ್ದ ಫಲಕ ನನ್ನ ಗಮನ ಸೆಳೆಯಿತು ಕಾರಣ ಅದರ ಮೇಲಿದ್ದ ಶಾಲೆಯ ವಿಳಾಸ, ನಾನು ಓದಿದ್ದ ಪ್ರಾಥಮಿಕ ಶಾಲೆಯ ಮಕ್ಕಳು ಪ್ರವಾಸ ಹೊರಟಿದ್ದ ವಾಹನ ಕೆಟ್ಟು ನಿಂತಿತ್ತು. ಅವರೊಂದಿಗೆ ಸ್ವಲ್ಪ ಸಮಯ ಕಳೆದು ಕುಂದಾದ್ರಿಗೆ ನನ್ನ ಪ್ರಯಾಣ. ಆಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ೭-೮ ಕಿ.ಮೀ ಗಳನಂತರ ಬಲಗಡೆಗೆ ತಿರುಗಿ ಸುಮಾರು ೫ ಕಿ,ಮೀಗಳ ನಂತರ ಬೆಟ್ಟದ ದಾರಿ ಪ್ರಾರಂಭ ೨ ಕಿ.ಮೀ ನಂತರ ಸಿಗುವುದೇ ಕುಂದಾದ್ರಿ. ನಮ್ಮ ನಂದಿ ಬೆಟ್ಟವನ್ನು ಹೋಲುವ ಜನ ಸಂದಣಿಯಿಲ್ಲದ ಜಾಗ. ಆಶ್ಚರ್ಯ ಅಂದರೆ ಮಲೆನಾಡಿನ ಮದ್ಯೆ ಬಯಲು ಸೀಮೆಯಲ್ಲಿರುವ ಸಣ್ಣ ಬೆಟ್ಟ ಕುಂದಾದ್ರಿ. ಜಿನ ದೇವಸ್ತಾನ ಅದಕ್ಕೆ ಅಂಟಿಕೊಂದು ಇರುವ ಹಸಿರು ನೀರಿನ ಕೊಳ ಅಷ್ಟೇನೂ ಆಕರ್ಷಣಿಯವಲ್ಲ. ಬೆಂಗಳೂರಿಗೆ ಸಮೀಪವಿದ್ದಿದ್ದರೆ ಬಹುಷಃ ಅತ್ಯಂತ ಜನಪ್ರಿಯ ತಾಣವಾಗಿರುತ್ತಿತ್ತೇನೊ!!!
೩-೪ ಬಾರಿ ಆಗುಂಬೆಯ ಸೂರ್ಯಾಸ್ತವನ್ನು ವೀಕ್ಷಿಸಿದ್ದರೂ ಮತ್ತೊಮ್ಮೆ ನೋಡಬೇಕೆಂದು ಆಗುಂಬೆ ಸೇರುವ ಹೊತ್ತಿಗೆ ಸೂರ್ಯ ಆಗಲೆ ತನ್ನ ಕೆಲಸ ಮುಗಿಸಿ ಮನೆ ಸೇರುವ ತವಕದಲ್ಲಿ ಪಡುವಣ ದಿಕ್ಕಿಗೆ ಓಡುತ್ತಿದ್ದ. ಆಗುಂಬೆಯ ಸೂರ್ಯಾಸ್ತ ವೀಕ್ಷಿಸಲು ಆಗಲೆ ಜನಜಂಗುಳಿ ನೆರೆದಿತ್ತು. ಸೂರ್ಯಾಸ್ತಮಾನದ ದೃಶ್ಯಗಳನ್ನು ಕಣ್ಣು, ಕ್ಯಾಮೆರಗಳಲ್ಲಿ ಸೆರೆ ಹಿಡಿದು. ಸುಂದರ ದೃಶ್ಯ ಕಾವ್ಯ ಬರೆದ ದಿನಕರನಿಗೊಂದು ನಮಸ್ಕಾರ ಹೊಡೆದು ನಮ್ಮ ಪಯಣ ಈಗ ರಾಜೇಶ್ ನಾಯಕ್ ರ ಸೂಚನೆಯಂತೆ ಹೆಬ್ರಿ ಕಡೆಗೆ ಗವ್ವೆನ್ನುವ ಮಲೆನಾಡಿನ ಕಾರ್ಗತ್ತಲಿನಲ್ಲಿ ವಾಹನ ಚಲಾಯಿಸುವುದೆ ಒಂದು ಅಪೂರ್ವ ಅನುಭವ. ಎದುರಿಗೆ ಬರುತ್ತಿರುವ ದೊಡ್ಡ ವಾಹನವೊಂದಕ್ಕೆ ದಾರಿಬಿಡುವ ಭರದಲ್ಲಿ ರಸ್ತೆಯಿಂದ ಕೆಳಗಿಳಿದ ನನ್ನ ಮಾರುತಿ ಓಮ್ನಿಯ ಹಿಂಬದಿಯ ಎಡಗಡೆಯ ಚಕ್ರ ನಿಂತಲ್ಲೆ ತಿರುಗತೊಡಗಿತು. ಅತ್ಯಂತ ಕಡಿಮೆ ವೇಗದಲ್ಲಿದ್ದುದರಿಂದ ಯಾರಿಗೂ ಯಾವುದೆ ತೊಂದರೆಯಾಗಲಿಲ್ಲ. ಹೊರಗೆ ಏನೂ ಕಾಣದಂತಹ ಕಾರ್ಗತ್ತಲು. ಕಾಡು ಪ್ರಾಣಿಗಳ ಭಯ ಬೇರೆ. ಕಾರಿನಿಂದ ಕೆಳಗಿಳಿಯಲೂ ಭಯ. ಬೇರೆ ವಿಧಿಯಿಲ್ಲದೆ ನಾನು ಮತ್ತು ಭಾವ ವಾಹನದ ಚಕ್ರ ಎತ್ತಿ ಇಡಲು ಪ್ರಯತ್ನಿಸಿದ್ದು ವ್ಯರ್ಥ. ಕತ್ತಲಿನಲ್ಲೊಂದು ಆಶಾಕಿರಣವೆಂಬಂತೆ ದೂರದಲ್ಲೊಂದು ವಾಹನದ ಮಿಣುಕು. ಎಷ್ಟೆ ಆಗಲಿ ಮಲೆನಾಡಿನ ಜನತೆ ಆಟೋದಲ್ಲಿದ್ದ ೮ ಜನ ಅನಾಮತ್ತಾಗಿ ಎತ್ತಿ ನನ್ನ ವಾಹನವನ್ನು ರಸ್ತೆಗಿಟ್ಟರು ಅಬ್ಬ !!! ಹೆಬ್ರಿ ತಲುಪಿದಾಗ ರಾತ್ರಿ ೮.೩೦
ಮರುದಿನ ಚುಮುಚುಮು ಚಳಿಯಲ್ಲಿ ಬಿಸಿಬಿಸಿ ಕೊಟ್ಟೆ ಕಡುಬು, ನೀರ್ ದೋಸೆ ತಿಂದು ಜೋಮ್ಲುತೀರ್ಥ ತಲುಪಿದಾಗ ೯ ಗಂಟೆ. ಬಂಡೆ ಕಲ್ಲುಗಳ ಮಧ್ಯೆ ರಭಸವಾಗಿ ಹರಿಯುವ ಸೀತೆ ಮನಮೋಹಕ ಚಿತ್ರ ಬಿಡಿಸಿಟ್ಟಿದ್ದಾಳೆ. ಹಲವು ಕವಲುಗಳಾಗಿ, ಕೆಲವು ಕಡೆ ಧುಮ್ಮಿಕ್ಕುವ, ತಕ್ಷಣವೆ ಮಂದಗಮನೆಯಾಗುವ ಸೀತೆ ಸೃಷ್ಠಿಸಿರುವ ಜೋಮ್ಲುತೀರ್ಥ ಬೆಂಗಳೂರಿಗರಿಗೆ ಹೇಳಿಮಾಡಿಸಿದಂತ ಪಿಕ್ನಿಕ್ ತಾಣವಾಗಬಲ್ಲುದು. ಆದರೆ ಸ್ಥಳೀಯ ಆಡಳಿತ ಅಳವಡಿಸಿರುವ ಸೂಚನಾ ಫಲಕದಲ್ಲಿರುವ ಮೃತಪಟ್ಟವರ ಪಟ್ಟಿ ಭೀತಿ ಹುಟ್ಟಿಸುವುದು ನಿಶ್ಚಿತ.
ಈಗಾಗಲೆ ಸೂರ್ಯ ತನ್ನ ಚುರುಕುತನವನ್ನು ಹರಿತಗೊಳಿಸಿದ್ದ. ಇನ್ನು ಉಳಿದದ್ದು ಪ್ರವಾಸದಲ್ಲಿನ ಕಟ್ಟ ಕಡೆಯ ತಾಣ ಕೋಡ್ಲುತೀರ್ಥ. ಹೆಬ್ರಿಯಲ್ಲಿ ಯಾರಿಂದಲೂ ಇದರ ಬಗ್ಗೆ ಮಾಹಿತಿ ಸಿಗಲಿಲ್ಲ. ಕೊನೆಗೆ ಕೆಲವು ಆಟೋ ಚಾಲಕರು ದೂರದಲ್ಲಿ ನಿಂತಿದ್ದ ವ್ಯಕ್ತಿಯಬ್ಬರನ್ನು ತೋರಿಸಿ ಅವರನ್ನ್ನು ಕಾಣಲು ಹೇಳಿದರು. ಆ ವ್ಯಕ್ತಿಯ (ಗೌಡ ಎಂದಷ್ಟೆ ತಿಳಿದು ಬಂದದ್ದು) ಹೆಸರು ತಿಳಿಯದೆ ತಪ್ಪು ಮಾಡಿದೆನೆಂದು ಈಗ ನನ್ನ ಅನಿಸಿಕೆ. ಗೌಡರು ಕೋಡ್ಲು ತೀರ್ಥದ ಸಮೀಪದ ಹಳ್ಳಿಯೊಂದರಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುವಾತ. ನಮ್ಮೊಡನೆ ಬರಲು ಒಪ್ಪಿದ ಗೌಡರೊಂದಿಗೆ ನಮ್ಮ ಪ್ರಯಾಣ ಕೋಡ್ಲುತೀರ್ಥದ ಕಡೆಗೆ. ಹೆಚ್ಚು ಮಾತನಾಡಲು ಬಯಸದ ಆ ವ್ಯಕ್ತಿಯಿಂದ ವಿವರ ತಿಳಿಯಲು ಪ್ರಯತ್ನಿಸಿದ ನನ್ನ ಶ್ರಮ ವ್ಯರ್ಥ! ಸುಮಾರು ೧೫ ಕಿ.ಮೀ ಪಯಣದ ನಂತರ ತನ್ನ ಮನೆ ಬಂದಾಕ್ಷಣ ಮುಂದೆ ಹೋಗುವ ದಾರಿ ನಮಗೆ ತೋರಿಸಿ ವಾಹನದಿಂದ ಇಳಿದು ಹೋಗೆ ಬಿಟ್ಟ ಆ ವ್ಯಕ್ತಿ. ನರಪಿಳ್ಳೆಯೂ ಕಾಣ ಸಿಗದ ಕಾಡಿನಲ್ಲಿ ಉತ್ತಮವಾದ ಡಾಂಬರು ರಸ್ತೆ ನಮ್ಮನ್ನು ೨ ಮನೆಗಳಿರುವ ಜಾಗಕ್ಕೆ ತಂದು ನಿಲ್ಲಿಸಿತ್ತು. ಅಲ್ಲಿಂದ ಸಣ್ಣದೊಂದು ಹೊಳೆ ದಾಟಲು ವಾಹನಕ್ಕೆ ಯೋಗ್ಯವಲ್ಲದ ಸೇತುವೆಯನ್ನು ದಾಟಿ ನಮ್ಮ ಚಾರಣ ಆರಂಭ. ಸುಮಾರು ೩ ಕಿ.ಮೀಗಳ ನಡಿಗೆಯ ನಂತರ ಕಾಡು ದಾರಿಯ ಮದ್ಯೆ ಸಿಗುವ ದನಗಾಹಿಗಳಿಂದ ಅಥವ ದಾರಿಹೋಕರಿಂದ ನಾವು ಹೋಗುತ್ತಿರುವ ದಾರಿ ಸರಿಯಿದೆಯೆಂದು ಖಾತರಿಪಡಿಸಿಕೊಂಡು ಬೆಟ್ಟ ಹತ್ತಲು ಆರಂಭಿಸಿದೆವು. ನಮ್ಮೆಲ್ಲರನ್ನು ನಿತ್ರಾಣಗೊಳಿಸುವ ಬೆಟ್ಟವನ್ನು ಹತ್ತಲಾಗದೆ ಹತ್ತಿ, ಇಲ್ಲದ ದಾರಿಯಲ್ಲಿ ಜಲಪಾತದ ಶಬ್ದವನ್ನೆ ಹಿಡಿದು ಜಲಪಾತದ ಸಮೀಪ ಬಂದಾಗ ಹೃದಯ ಬಾಯಿಗೆ ಬಂದಂತ ಅನುಭವ. ಓಹ್! ಎಂತಹ ನಿರ್ಜನ ಜಾಗ. ಮನಮೋಹಕ ಜಲಪಾತ. ಕವಲುಗಳಿರದೆ ನೇರವಾಗಿ ಒಮ್ಮೆಲೆ ಕೆಳಗೆ ಧುಮುಕುವ ಜಲಲ ಜಲಧಾರೆ!!!! ೧೨ ಗಂಟೆಯ ಉರಿಬಿಸಿಲಿನ ಸಮಯಲ್ಲು ಕೊರೆಯುವ ಚಳಿ ಹುಟ್ಟಿಸುವ ತಣ್ಣನೆಯ ವಾತಾವರಣ. ಮೈಮನದಣಿಯುವಷ್ಟು ನೀರಿನಲ್ಲಿ ಈಜಿದ್ದು ಹಿತಕರ ಅನುಭವ. ಒಂದು ಗಂಟೆಯ ನಂತರ ಕಾರಿಗೆ ಹಿಂತಿರುಗಿ ಅಲ್ಲಿಂದ ನೇರವಾಗಿ ಆಗುಂಬೆ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮುಖಾಂತರ ಬೆಂಗಳೂರು ತಲುಪಿದಾಗ ರಾತ್ರಿ ೧೨.
ಒಂದು ಉತ್ತಮವಾದ ಪ್ರವಾಸವನ್ನು ಪೂರ್ಣಗೊಳಿಸಿದ ಸಂತೃಪ್ತ ಭಾವ.

2 comments:

ರಾಜೇಶ್ ನಾಯ್ಕ said...

ಹೆಚ್ಚು ಮಾತನಾಡದ ವ್ಯಕ್ತಿಯ ಬಗ್ಗೆ ತಮಾಷೆಯೆನಿಸಿತು. ಕೂಡ್ಲು ಸುಂದರ ಸ್ಥಳವೇನೋ ಸರಿ ಆದರೆ ಅಪಾಯದ ಸ್ಥಳವೂ ಹೌದು. ಅಲ್ಲಿರುವಷ್ಟು ಗಾಜಿನ ಚೂರುಗಳು ಬೇರೆಲ್ಲೂ ಇರಲಿಕ್ಕಿಲ್ಲ.

prasca said...

ಹೌದು ನನಗೂ ಆಶ್ಚರ್ಯವಾಯಿತು. ಏಕೆಂದರೆ ನನಗೆ ತಿಳಿದಂತೆ ಮಲೆನಾಡಿಗರು ಅತ್ಯಂತ ಸ್ನೇಹ ಜೀವಿಗಳು. ಅದು ನನ್ನ ಅನುಭವ ಕೂಡ. ನಿಮ್ಮ ಮಾತು ನಿಜ ಅಲ್ಲಿ ತುಂಬ ಗಾಜಿನ ಚೂರುಗಳಿವೆ ಅದು ನನ್ನ ಕಾಲಿಗೂ ಚುಚ್ಚಿ ಹಿಂದಿರುಗಬೇಕಾದರೆ ತಲೆನೋವಾಯಿತು.